Advertisement
ಹೇಗೆ ಮಾತಾಡಲಿ ನಿನ್ನೊಂದಿಗೆ?: ಮಹಾಲಕ್ಷ್ಮೀ ಕೆ. ಎನ್. ಬರಹ

ಹೇಗೆ ಮಾತಾಡಲಿ ನಿನ್ನೊಂದಿಗೆ?: ಮಹಾಲಕ್ಷ್ಮೀ ಕೆ. ಎನ್. ಬರಹ

ಮತ್ತೊಂದು ದಿನ ಕಾಲೇಜಿನ ಎದುರಿಗಿರುವ ಜೆರಾಕ್ಸ್ ಅಂಗಡಿ ಮುಂದೆ ಹೋಗ್ತಿದ್ದ. ಅರೇ,… ಅವನೇ ಅಲ್ವಾ… ಹೀಗೆ ಒಂದೆರಡು ಸಲ ಕಾಲೇಜಿನಲ್ಲಿ ನೋಡಿದ್ದೆ. ಒಂದು ಶನಿವಾರ ಕಾಲೇಜಿನಲ್ಲಿ ರೆಫರೆನ್ಸ್ ರೂಂ ಗೆ ಹೋಗಿ ಕೂತೆ. ನಾನು ಯಾರನ್ನೂ ಗಮನಿಸಿರಲಿಲ್ಲ, ಅಲ್ಲಿ ಯಾರೂ ಇರಲಿಲ್ಲ ಕೂಡ, ಸುಮ್ಮನೆ ಪಕ್ಕಕ್ಕೆ ತಿರುಗಿದೆ. ಅರೇ… ಮತ್ತೆ ಅವನೇ ಅಲ್ವಾ… ಇದ್ದವರಿಬ್ಬರಲ್ಲಿ ನಾನು ಮತ್ತೆ ಆ ಕಡೆ ತುದಿಯಲ್ಲಿ ಅವನು. ನ್ಯೂಸ್ ಪೇಪರ್, ವಿದ್ಯಾರ್ಥಿ ಮಿತ್ರ ಓದ್ತಿದ್ದಿರಬಹುದು. ಅವನನ್ನ ಮಾತನಾಡಿಸುವ ಮನಸ್ಸಿದೆ. ಆದರೆ ಹೇಗೆ ಮಾತು ಪ್ರಾರಂಭಿಸಲಿ? ಗೊತ್ತಾಗ್ತಿಲ್ಲ.
ಮಹಾಲಕ್ಷ್ಮೀ ಕೆ. ಎನ್. ಬರಹ ನಿಮ್ಮ ಓದಿಗೆ

ಪದವಿ ಓದುತ್ತಿದ್ದೆ. ನಾನಾಯ್ತು ನನ್ನ ಓದಾಯ್ತು, ಬರೀ ಇಷ್ಟೇ ಇತ್ತು. ನನ್ನ ಪಾಡಿಗೆ ನಾನಿದ್ದೆ. ಆಗ ರವಿ ಬೆಳಗೆರೆ ಅವರದೊಂದು ಪುಸ್ತಕ ಓದಿ ಅದರ ಗುಂಗಿನಲ್ಲಿದ್ದೆ. ಸಕ್ರಿಯವಾಗಿ ತರಗತಿಯಲ್ಲಿ ಕುಳಿತು ಪಾಠ ಕೇಳ್ತಾ ರನ್ನಿಂಗ್ ನೋಟ್ಸ್ ಬರೀತಾ… ಬರೀತಾ… ಅದರ ಜೊತೆಗೇನೇ ತದ್ವತ್ತಾಗಿ ಆ ಲೆಕ್ಚರರ್ ರೂಪವನ್ನೂ ಬರೀತಿದ್ದೆ. ವ್ಯಂಗ್ಯ ಚಿತ್ರವೇನಲ್ಲ ಚೇಷ್ಟೆಯ ಹವ್ಯಾಸವಾದರೂ ಸಭ್ಯವಾಗಿಯೇ ಇರ್ತಿತ್ತು. ಡಿಗ್ರಿಗೆ ಬಂದ್ಮೇಲೆ ತರಗತಿಯಷ್ಟೇ ಸಮಯವನ್ನ ಒಮ್ಮೊಮ್ಮೆ ಇನ್ನೂ ಹೆಚ್ಚಿನ ಸಮಯವನ್ನು ಲೈಬ್ರರಿಯಲ್ಲಿ ಕಳೆದಿದ್ದು ಇದೆ.

ಒಂದಿನ ಮಧ್ಯಾಹ್ನದ ಮೇಲೆ ಲೈಬ್ರರಿಯಲ್ಲಿ ಓದ್ತಿದ್ದೆ. ಒಬ್ಬ ಹುಡುಗ ಬಂದ. ಲೈಬ್ರರಿಯನ್ ಸರ್ ಅವನನ್ನ “ಪ್ರೈಸ್ ಬಂದಿದೆ ಕಣೋ ನಿನ್ಗೆ” ಅಂದರು. ಶೇಕ್ ಹ್ಯಾಂಡ್ ಮಾಡಿದ್ರು ಅನ್ನಿಸುತ್ತೆ. ಅವತ್ತಿನ ನಾಳೆಗೆ ಲೈಬ್ರರಿ ಬುಕ್ ರೆಫರೆನ್ಸ್ ಕಾಂಪಿಟೇಷನ್ ಇತ್ತು. ಪಾರ್ಟಿಸಿಪೇಟ್ ಮಾಡ್ತೀಯಾ ಅಂತ ಕೇಳಿದ್ದಿರಬಹುದು. ಅವನು ಒಂದು ಸಂವಿಧಾನ ಪುಸ್ತಕ ತಗೊಂಡು ಎದುರಿಗೆ ಬಂದು ಕುಳಿತ, ಹಾಳೆಯಲ್ಲಿ ಕಂಟೆಂಟ್ಸ್ ಬರೀತಿದ್ದ. ಹ್ಯಾಂಡ್ ರೈಟಿಂಗ್ ಮೇಲೆ ಕಣ್ಬಿತ್ತು…… ವಾಹ್….. ! ಕನ್ನಡ ಬರವಣಿಗೆ ಮುತ್ತು ಪೋಣಿಸಿದ್ಹಾಗಿತ್ತು. ಫಸ್ಟ್ ಟೈಂ ಐ ವಾಸ್ ಇಂಪ್ರೆಸ್ಡ್ ಬೈ ದಟ್ ಹ್ಯಾಂಡ್ ರೈಟಿಂಗ್…..! ಎದುರಿಗಿದ್ದಿದ್ದರಿಂದ ಒಂದೆರಡು ಸಲ ನೋಡಿದ. ಅವನದು ನಗು ಮುಖ. ನಿಮ್ ಹ್ಯಾಂಡ್ ರೈಟಿಂಗ್ ಚೆನ್ನಾಗಿದೆ ಅಂತ ಹೇಳೋಣ ಅಂದುಕೊಂಡೆ. ಒಮ್ಮೆ ಸ್ನೇಹವ್ಯಾಕೆ ಆಗಬಾರದು ಅಂತ ಅವತ್ತು ಅನ್ನಿಸಿತ್ತು.

ಅವತ್ತಿನ ನಾಳೆ ಶನಿವಾರ. ನಾನು ಕೂಡ ಪಾರ್ಟಿಸಿಪೇಟ್ ಮಾಡಿದ್ದೆ. ಅವನು ಯಾವಾಗ ಬಂದನೋ ಗೊತ್ತಿಲ್ಲ. ನಾನು ಹೇಳುವಾಗ ಗಮನಿಸಿದೆ ಎದುರಲ್ಲಿ ಕೈಕಟ್ಟಿ ಕುಳಿತಿದ್ದ. ಮತ್ತದೇ ನಗು ಮುಖ. ಚೆನ್ನಾಗಿ ಆಲಿಸುತ್ತಿದ್ದ. ಸೆಕೆಂಡ್ ಟೈಂ ಐ ವಾಸ್ ಇಂಪ್ರೆಸ್ಡ್ ಬೈ ದಟ್ ಸ್ಮೈಲಿಂಗ್ ಫೇಸ್……!

ಬಸವಣ್ಣ ಅವರ ಬಗ್ಗೆ ಹೇಳಿದ್ದ, ವಚನಗಳು… ನಾನು ಶಾಲಾ ದಿನಗಳಲ್ಲಿ ಓದಿದ್ದ ವಚನಗಳು ಅವತ್ತು ಅವನ ಬಾಯಲ್ಲಿ….. ಪ್ರೈಸ್ ತಗೊಂಡಿದ್ದರಿಂದ ಸೆಕೆಂಡ್ ಇಯರ್ ಅಂತ ಗೊತ್ತಾಯ್ತು ಹೆಸರು ಕೂಡ ಗೊತ್ತಾಯ್ತು.

ಅವತ್ತಿನಿಂದ ಆತನ ಮುಖ ಸ್ವಲ್ಪ ಮಟ್ಟಿಗೆ ನೆನಪಿನಲ್ಲಿ ಉಳಿದಿತ್ತು.

ಮತ್ತೊಂದು ದಿನ ಕಾಲೇಜಿನ ಎದುರಿಗಿರುವ ಜೆರಾಕ್ಸ್ ಅಂಗಡಿ ಮುಂದೆ ಹೋಗ್ತಿದ್ದ. ಅರೇ,… ಅವನೇ ಅಲ್ವಾ… ಹೀಗೆ ಒಂದೆರಡು ಸಲ ಕಾಲೇಜಿನಲ್ಲಿ ನೋಡಿದ್ದೆ. ಒಂದು ಶನಿವಾರ ಕಾಲೇಜಿನಲ್ಲಿ ರೆಫರೆನ್ಸ್ ರೂಂ ಗೆ ಹೋಗಿ ಕೂತೆ. ನಾನು ಯಾರನ್ನೂ ಗಮನಿಸಿರಲಿಲ್ಲ, ಅಲ್ಲಿ ಯಾರೂ ಇರಲಿಲ್ಲ ಕೂಡ, ಸುಮ್ಮನೆ ಪಕ್ಕಕ್ಕೆ ತಿರುಗಿದೆ. ಅರೇ… ಮತ್ತೆ ಅವನೇ ಅಲ್ವಾ… ಇದ್ದವರಿಬ್ಬರಲ್ಲಿ ನಾನು ಮತ್ತೆ ಆ ಕಡೆ ತುದಿಯಲ್ಲಿ ಅವನು. ನ್ಯೂಸ್ ಪೇಪರ್, ವಿದ್ಯಾರ್ಥಿ ಮಿತ್ರ ಓದ್ತಿದ್ದಿರಬಹುದು. ಅವನನ್ನ ಮಾತನಾಡಿಸುವ ಮನಸ್ಸಿದೆ. ಆದರೆ ಹೇಗೆ ಮಾತು ಪ್ರಾರಂಭಿಸಲಿ? ಗೊತ್ತಾಗ್ತಿಲ್ಲ.

ಗುರುವಾರ ಹನ್ನೊಂದು ಗಂಟೆಯವರೆಗೆ ಕ್ಲಾಸ್ ಇತ್ತು, ಹೋಗ್ತಿದ್ದೆ. ನನ್ನೆದುರಲ್ಲೇ ಬರ್ತಿದ್ದ. ನೋಡ್ತಿದ್ದೆ ನಾನು, ಒಮ್ಮೆಲೇ ಅವನೂ ನೋಡಿದ. ನಕ್ಕುಬಿಟ್ಟ…. ನಾನೂ ಕೂಡ. ಮತ್ತೆ ತಿರುಗಿ ನಗ್ತಾ ನೋಡಿದೆ ಅವನೂ ಕೂಡಾ ನಗ್ತಾ ನೋಡಿದ. ಕಣ್ಣು ಕೋರೈಸುವ ನಗುವಿತ್ತು ಅಲ್ಲಿ!
ಇಷ್ಟು ದಿನ ಮಾತಾಡಿಸ್ಬೇಕು ಅನ್ನಿಸಿತ್ತು. ಎದುರಿಗೆ ಸಿಕ್ಕು ನಕ್ಕಮೇಲೂ ಯಾಕೆ ಮಾತನಾಡಿಸಲಿಲ್ಲ ನಾನು? ಬಹುಶಃ ಹೇಗೆ ಮಾತು ಪ್ರಾರಂಭಿಸಲಿ ಎನ್ನುವುದು ಆಗಲೂ ಗೊತ್ತಾಗಲಿಲ್ಲ. ಅವತ್ತೆಲ್ಲಾ ಅದೇನೋ ಗೊತ್ತಿಲ್ಲ, ಬರೀ ಅದೇ ನೆನಪು, ಒಬ್ಬೊಬ್ಬಳೇ ನಗ್ತಿದ್ದೆ.

ಕಾಲೇಜಿನ ಮ್ಯಾಗಝೀನ್‌ಗೆ ಎರಡು ಕವನಗಳನ್ನ ಕೊಟ್ಟಿದ್ದೆ. ಯಾರೋ ಫ್ರೆಂಡ್ ಮೊದಲೇ ನೋಡಿ ನಿನ್ನ ಕವನ ಬಂದಿದೆ, ಚೆನ್ನಾಗಿದೆ ಅಂತ ಹೇಳಿದ್ದರು. ಹೌದಾ ಅಂತ ಖುಷಿಯಲ್ಲಿ ನೋಡಿದ್ದೆ. ಇವನ ಫೋಟೋ ಹಾಳೆ ಮುಚ್ಚುವಾಗ ಥಟ್ಟನೆ ಕಾಣಿತು ಅಲ್ಲೊಂದು ದೇಶಾಭಿಮಾನದ ಕವನ. ಆಗಲೇ ಗೊತ್ತಾಗಿದ್ದು ಅವನು ಯಾವ ಕಾಂಬಿನೇಷನ್ ಅಂತ.

ಇನ್ನೊಂದು ಬಾರಿ ಸಿಕ್ಕರೆ ಮಾತಾಡಿಸಿಯೇ ಬಿಡೋಣ ಅಂದುಕೊಂಡೆ. ಸ್ನೇಹವಾಗಿಸುವ ತವಕ ಹೆಚ್ಚಾಯ್ತು… ನನ್ನದು ಎರಡನೇ ಸೆಮಿಸ್ಟರ್ ಮುಗೀತು. ನಂತರ ರಜೆ. ಅವನು ಫೈನಲ್ ಇಯರ್ ಹಾಗಾಗಿ ಇದೊಂದು ವರ್ಷ ಸಿಗುತ್ತೆ ಅಷ್ಟೇ… ಈ ವರ್ಷ ಮಾತಾಡಿಸಲೇಬೇಕು ಅಂದುಕೊಂಡೆ.

ಒಂದಿನ ಒಬ್ಬರು ಎಂ. ಎಲ್. ಎ ಎಲೆಕ್ಷನ್‌ಗೆ ಮತ ಪ್ರಚಾರಕ್ಕೆ ಬಂದಿದ್ರು. ವಿದ್ಯಾರ್ಥಿಗಳಿಗೆ ಆ ಕ್ಷೇತ್ರದ ತೊಂದರೆಗಳು, ಕಾಲೇಜಿನ ಅವಶ್ಯಕತೆಗಳು, ಸಾಮಾಜಿಕ ಬೇಡಿಕೆಗಳು ಹಾಗೂ ಸಲಹೆಗಳನ್ನು ನೀಡುವ ಅವಕಾಶವನ್ನ ಕೊಟ್ಟಿದ್ದರು. ಒಬ್ಬೊಬ್ಬರಾಗಿ ಮಾತಾಡಿದ್ರು. ಇವನೂ ಬಂದಿದ್ದಿರಬಹುದು ಇಲ್ಲಿಗೆ ಅಂದುಕೊಂಡಿದ್ದೆ. ಅಂದುಕೊಂಡಿದ್ದು ಒಂದು ಕ್ಷಣಕ್ಕೆ ನಿಜವೇ ಆಯ್ತು….!

ಮುಂದೆ ಕುಳಿತಿದ್ದವನು ಎದ್ದ, ಮೈಕ್ ಹಿಡ್ಕೊಂಡ…. ಏನೋ ಹೇಳ್ತಾನೆ, ಚೆನ್ನಾಗಿ ಹೇಳ್ತಾನೆ, ಸರಿಯಾಗಿಯೇ ಹೇಳ್ತಾನೆ, ಐ ವಾಸ್ ಕಾಂನ್ಫಿಡೆಂಟ್ ಆನ್ ಹಿಮ್. ನಿಂತ ತಕ್ಷಣ ಮೊಬೈಲ್ ತೆಗೆದು ಆಡಿಯೋ ರೆಕಾರ್ಡ್ ಮಾಡಿದ್ದೆ. “ರೈತರು ತಾಲ್ಲೂಕು ಕಚೇರಿಗಳಲ್ಲಿ ಖಾತೆ ಮಾಡಿಸುವುದಕ್ಕೆ ವಾರ, ಹದಿನೈದು ದಿನ, ತಿಂಗಳುಗಳು ತಿರುಗೋ ಹಾಗೆ ಮಾಡ್ತಾರೆ, ಲಂಚ ಕೇಳ್ತಾರೆ. ಒಮ್ಮೆ ವಿಧಾನಸಭೆಯಲ್ಲಿ ಇದರ ಬಗ್ಗೆ ಮಾತನಾಡಿ” ಅಂತ ಹೇಳಿದ್ದ. ಅವತ್ತು ಹೋಗುವಾಗ ನೋಡಿದೆ, “ಹಾಯ್…. ಚೆನ್ನಾಗಿ ಮಾತಾಡಿದ್ರಿ” ಅಂತ ಹೇಳ್ಬೋದಿತ್ತು ನಾನು. ಊಹೂಂ… ಆಗಲೇ ಇಲ್ಲ.

ಎದುರಿಗೆ ಹೋಗುವಾಗೆಲ್ಲಾ, ಹೂಂ.. ಈ ಬಾರಿ ಮಾತಾಡಿಸೋಣ ಅನ್ಕೋತೀನಿ ….. ಆಗ್ತಿಲ್ಲಾ…. ಯಾಕಾಗ್ತಿಲ್ಲ? ಅದೂ ಗೊತ್ತಿಲ್ಲ. ನನ್ನ ಲೆಕ್ಚರರ್ಸ್ ಹತ್ತಿರ ಆತ್ಮೀಯವಾಗಿ ಮಾತನಾಡ್ತೀನಿ ಆದರೆ ಇವನ ಹತ್ತಿರ ಅದ್ಯಾಕೆ ಆಗ್ತಿಲ್ಲ.!

ಅವನು ಒಂದು ಸಂವಿಧಾನ ಪುಸ್ತಕ ತಗೊಂಡು ಎದುರಿಗೆ ಬಂದು ಕುಳಿತ, ಹಾಳೆಯಲ್ಲಿ ಕಂಟೆಂಟ್ಸ್ ಬರೀತಿದ್ದ. ಹ್ಯಾಂಡ್ ರೈಟಿಂಗ್ ಮೇಲೆ ಕಣ್ಬಿತ್ತು…… ವಾಹ್….. ! ಕನ್ನಡ ಬರವಣಿಗೆ ಮುತ್ತು ಪೋಣಿಸಿದ್ಹಾಗಿತ್ತು. ಫಸ್ಟ್ ಟೈಂ ಐ ವಾಸ್ ಇಂಪ್ರೆಸ್ಡ್ ಬೈ ದಟ್ ಹ್ಯಾಂಡ್ ರೈಟಿಂಗ್…..! ಎದುರಿಗಿದ್ದಿದ್ದರಿಂದ ಒಂದೆರಡು ಸಲ ನೋಡಿದ. ಅವನದು ನಗು ಮುಖ. ನಿಮ್ ಹ್ಯಾಂಡ್ ರೈಟಿಂಗ್ ಚೆನ್ನಾಗಿದೆ ಅಂತ ಹೇಳೋಣ ಅಂದುಕೊಂಡೆ.

ನಮಗೆ ಲ್ಯಾಬ್ ಎಕ್ಸಾಂ, ಅವರಿಗೆ ತರಗತಿಗಳು ಶುರುವಾಗಿತ್ತು. ಕೆಮಿಸ್ಟ್ರೀ ಲ್ಯಾಬ್ ಎಕ್ಸಾಂ ದಿನ ಬೆಳ್-ಬೆಳಗ್ಗೆನೇ ನೋಡಿದೆ. ಯಾವಾಗಲೂ ನಗ್ತಿರ್ತಾನೆ… ಎಕ್ಸಾಂ ಮುಗಿಸಿ ಬರ್ತಿದ್ದೆ. ಇವರಿಗೆ ಕ್ಲಾಸ್ ಮುಗಿದಿತ್ತು. ಮುಂದೆ ಹೋಗ್ತಿದ್ದ ಮಾತಾಡಿಸೋಣ ಅಂತಾನೇ ಹೋದೆ. ಕಾಲೇಜ್ ಗೇಟ್‌ವರೆಗೂ ಹೋದೆ… ತಿರುಗಿ ನೋಡಿದ. ಅದೇ ಸ್ಮೈಯ್ಲಿಂಗ್ ಫೇಸ್! ನಾನು ಬೇರೆ ಕಡೆ ತಿರುಗಿ ಬಿಟ್ಟೆ. ಯಾಕಿಷ್ಟು ಭಯವಾಗುತ್ತೆ…? ಒಂದು ಹಾಯ್ ಅನ್ನೋಕೂ ಆಗ್ತಿಲ್ಲಾ… ಒಮ್ಮೆ ಮಾತಾಡಿಸಿದ್ದರೆ ಮುಂದಿನ ಮಾತುಗಳು ಸರಾಗವಾಗ್ತಿತ್ತು. ಅವನನ್ನು ಮಾತನಾಡಿಸುವ ತವಕ. ಆದರೆ, ಏನು ಅಂತ ಮಾತನಾಡಿಸೋಣ? ಅದೂ ಗೊತ್ತಾಗ್ತಿಲ್ಲ. ಆ ಕ್ಷಣ ಕೈ ಕಾಲೆಲ್ಲ ನಡುಗುತ್ತೆ. ಆಗ್ಲಿಲ್ಲ. ಯಾವತ್ತೂ ಹೀಗಾಗಿಲ್ಲ ಇವನೆದುರಿಗೆ ಯಾಕೆ ಹೀಗೆ? ಅಷ್ಟಕ್ಕೂ ಹ್ಯಾಂಡ್ ರೈಟಿಂಗ್ ಇಂಪ್ರೆಶನ್ ಅಲ್ವಾ. ನನ್ನದು ಇದೆಂಥಾ ಕತೆ …. ಸಿಟಿ ಬಸ್ ಬಂದೇ ಬಿಟ್ಟಿತು ಹತ್ಕೊಂಡು ಹೋದೆ.

ಬಯೋಕೆಮಿಸ್ಟ್ರಿ ಡಿಪಾರ್ಟ್ಮೆಂಟಿನವರು ಎಕ್ಸಿಬಿಷನ್ ಮಾಡಿದ್ರು. ಬೆಳಿಗ್ಗೆ ಲ್ಯಾಬ್ ಮುಗುದ್ಮೇಲೆ ನೋಡೋಣ ಅಂದುಕೊಂಡೆ. ಮಧ್ಯಾಹ್ನ ಸೋಷಿಯಾಲಜಿ ಕ್ಲಾಸ್ ಮುಗಿಸಿಕೊಂಡು ಹೋಗಿದ್ದೆ. ಅಲ್ಲೇ ಇದ್ದ. ಮುಖ ನೋಡಿದೆ ಅವನು ತಾನಾಗಿಯೇ ಮುಗುಳುನಕ್ಕಿದ್ದ. ಮತ್ತೊಮ್ಮೆ ಅದೇ ನಗು. ನಾನು ಹಾಗೆ ನೋಡ್ತಿದ್ದಕ್ಕೆ ನಕ್ಕಿದ್ದಾ…? ಅಥವಾ ಹಾಗೆ ಸಾಮಾನ್ಯವಾಗಿ ನಕ್ಕಿದ್ದಾ…? ಮತ್ತೆ ಹಿಂತಿರುಗಿ ನೋಡಿದಾಗ ಅವನೂ ಕೂಡ ನೋಡಿದ್ದ.

ಎರಡು ವರುಷದ ತವಕ… ಮುಗಿದೇ ಹೋಯ್ತು…… ಅವನಿಗೆ ಕಾಲೇಜ್ ಡೇ ಕೊನೆಯ ಕಾರ್ಯಕ್ರಮ ಬಂದೇ ಬರ್ತಾನೆ ಅಂದುಕೊಂಡಿದ್ದೆ, ಅಂತೂ ಬಂದ. ನನಗೆ ಡಿಬೆಟ್‌ನಲ್ಲಿ ಪ್ರಥಮ ಬಹುಮಾನ ಬಂದಿತ್ತು. ಪ್ರೈಸ್ ತಗೊಂಡು ಕೆಳಗೆ ಬಂದಾಗ ಅವನು ಅಲ್ಲೇ ಪಕ್ಕದಲ್ಲೇ ನಿಂತಿದ್ದ. ಮಾತಾಡಿಸಲೇಬೇಕು ಅಂತಾನೇ ನಿಂತಿದ್ದೆ. ನೊಡಿದ್ಮೇಲೂ ಮಾತಾಡಿಸೋಕೆ ಯಾಕಾಗ್ತಿಲ್ಲ ನನಗೆ… ಒಂದು ಸಲ ಒಂದೇ ಒಂದು ಸಲ ಮಾತಾಡಿಸೋಕೆ ಅಂಜಿಕೆನಾ…. ಅದ್ಯಾಕೆ ಹೀಗೆ ಆಗುತ್ತೆ. ಪಕ್ಕದಲ್ಲೇ ಇದ್ದವನನ್ನ ಮಾತಾಡಿಸೋಕೆ ಎದೆ ಢವ ಢವ ಅನ್ನುತ್ತೆ.

ಕಾರ್ಯಕ್ರಮದಲ್ಲಿ ಅವತ್ತು ಹಾಡ್ತಾನೆ ಅಂದುಕೊಂಡಿದ್ದೆ. ಇನ್ನೇನು ಮುಗೀತೆನೋ ಹೊರಡ್ಬೇಕು. ಇನ್ನೇನು ಹೋಗ್ತಿದ್ದೆ ಅಷ್ಟರೊಳಗೆ ಸ್ಟೇಜ್ ಮೇಲೆ ನೋಡಿದೆ. ಮನಸ್ಸು ಹೇಳ್ತಿದ್ದು ನಿಜವೇ ಆಯ್ತು. ಕಾಲು ಮುಂದೆ ಹೋಗ್ಲೇಯಿಲ್ಲ. ಆ ದಿನ ಬರೀ ಮಳೆ… ಮಳೆ ಅನ್ನೋದು ಲೆಕ್ಕಕ್ಕೇ ಬರಲಿಲ್ಲ. ಸ್ಟೇಜ್‌ವರೆಗೂ ಹೋದೆ. “ಕಾವ್ಯಾ….ಕಾವ್ಯಾ……. ಅಮೃತವುಣಿಸು ಮಾನವನೆದೆಗೆ “. ಅವತ್ತು ಕೊನೇ ದಿನ ಮಾತಾಡಿಸಿದ್ದರೆ ಆಗುತ್ತಿತ್ತು.

ಮತ್ತೆ ಕಾಲೇಜಿನ ಹತ್ತಿರ ಬರ್ತಾನಾ…? ಒಂದು ವೇಳೆ ಬಂದರೂ ನಾನು ಹೋಗಿ ಹಾಯ್ ಅನ್ನೋಕಾಗುತ್ತಾ? ಫ್ರೆಂಡ್ಸ್ ಜೊತೆ ಟೀಚರ್ಸ್ ಜೊತೆ ಲೆಕ್ಚರರ್ಸ್ ಜೊತೆ ಅವರಿವರ ಜೊತೆ ಮಾತಾಡಿಸಿದಷ್ಟು ನಿರರ್ಗಳವಾಗಿ ಮಾತನಾಡಬೇಕು ಅನ್ನಿಸುತ್ತದೆ. ಹೇಗೆ ಮಾತು ಪ್ರಾರಂಭಿಸಲಿ? ಅವನನ್ನು ಮಾತನಾಡಿಸುವ ತವಕ…
ಮೊದಲನೇಯದ್ದು ಹ್ಯಾಂಡ್ ರೈಟಿಂಗ್. ನಂತರದ್ದು ಆ ನಗು. ಆ ಹ್ಯಾಂಡ್ ರೈಟಿಂಗ್‌ಗೆ ಎಷ್ಟೊಂದು ಶಕ್ತಿಯಿದೆಯಲ್ವಾ..?! ನೆನಪಿಸಿಕೊಂಡರೆ ಕಣ್ಣು ಕೋರೈಸುತ್ತೆ ಆ ಹಸ್ತಾಕ್ಷರ.

ಎಷ್ಟೋ ಸಂದರ್ಭಗಳಲ್ಲಿ ಯಾರ್ಯಾರಿಗೋ ಇಂಥ ಎಷ್ಟೋ ಸನ್ನಿವೇಶಗಳು ಎದುರಾಗಿರಬಹುದಾ? ಎಲ್ಲರಿಗೂ ಹೀಗೆ ಮತ್ತ್ಯಾವುದೋ ರೀತಿಯಲ್ಲಿ ಮತ್ತ್ಯಾರೋ ಕಾಡಿದ್ದಿರಬಹುದಾ..? ಯಾರನ್ನೋ ಬಸ್ಸಿನಲ್ಲಿ ಮತ್ಯಾರೋ ನೋಡಿ ನಕ್ಕಿರ್ತಾರೆ. ಐದು-ಹತ್ತು ನಿಮಿಷದ ಪ್ರಯಾಣಗಳಲ್ಲಿ ಸ್ನೇಹ ಬೆಸೆದಿರೋದುಂಟು. ಗಂಟೆ ಪೂರ್ತಿ ಬಸ್ಸು ಇಳಿಯೋವರೆಗೂ ಸಾಕು ಅನ್ನೋವಷ್ಟು ಕೊರೆದಿರೋರುಂಟು, ಇಡೀ ಜಾತಕವನ್ನೇ ಹೇಳಿ ಹೋಗಿರೋರುಂಟು. ನೋಡ್-ನೋಡ್ತಾನೆ ಮುಂದ್-ಮುಂದೆ ಹೋಗ್ತಾ ಮಿಂಚಿ ಮಾಯವಾಗಿರ್ತಾರೆ. ದಾರಿಯಲ್ಲಿ ಯಾರೋ ಪರಿಚಯವಾಗ್ಬೋದು. ಮತ್ತೆ ಕ್ಲಾಸ್‌ನಲ್ಲಿ ಯಾವುದೋ ವಿದ್ಯಾರ್ಥಿಯನ್ನ ಯಂಗ್ ಲೆಕ್ಚರರ್ ಮಾತಾಡಿಸಿರಬಹುದು . ಅವಳು ಲೆಕ್ಚರರ್ ಆಗಿ ಮೊದಲ ದಿನ ಹೋದಾಗ ಒಬ್ಬ ಸ್ಫುರದ್ರೂಪಿ ಸಹೋದ್ಯೋಗಿ ಲೆಕ್ಚರರ್ ಆತ್ಮೀಯತೆ ತೋರಿದ ಸಮಯವಿರಬಹುದು. ಯಾವುದೋ ಅಭ್ಯಾಸದಲ್ಲಿದ್ದಾಗ, ತಾಲೀಮಿನಲ್ಲಿದ್ದಾಗ ಅಥವಾ ಗಾಬರಿ ಗಲಿಬಿಲಿಗಳಲ್ಲಿದ್ದಾಗ, ಮೊದಲ ಪ್ರಯತ್ನದ ಭಯಕಾಡಿದ್ದಾಗ ಏನೂ ತೋಚದೆಯೇ ಕುಳಿತಾಗ ಯಾರೋ ಬಂದು ಹುರುಪು ತುಂಬಿದ ಪರಿ. ಜೀವಿತಾವಧಿಯ ಚೈತ್ರದಲ್ಲಿ ಆದ ಅನುಭೂತಿ. ಇವೆಲ್ಲಾ ನೆನಪು ಬದುಕಲ್ಲಿ ವಸಂತವಾಗಿಯೇ ಉಳಿದುಬಿಡುವಂಥವುಗಳು.

ಆ ವ್ಯಕ್ತಿ ಯಾರೇ ಆಗಿರಲಿ ಆದರೆ ಅವರ ಒಂದು ಕಲೆ ವ್ಯಕ್ತಿತ್ವವೆನ್ನುವುದು ಒಬ್ಬೊಬ್ಬರನ್ನ ಒಂದೊಂದು ರೀತಿ ಸೆಳೆಯುತ್ತದೆ. ಒಂದೇ ಒಂದು ಬರವಣಿಗೆ ನನ್ನ ಮನಸ್ಸನ್ನ ಆಕ್ರಮಿಸಿಕೊಂಡ ಹಾಗೆ.

About The Author

ಮಹಾಲಕ್ಷ್ಮೀ ಕೆ. ಎನ್.

ಮಹಾಲಕ್ಷ್ಮೀ. ಕೆ. ಎನ್.  ತೃತೀಯ ಬಿ. ಎಸ್ಸಿ. ವಿದ್ಯಾರ್ಥಿನಿ.

4 Comments

  1. ಎಸ್. ಪಿ. ಗದಗ.

    ವಿದ್ಯಾರ್ಥಿ ಜೀವನದ ತಾರುಣ್ಯದ ತುಮುಲುಗಳು, ಕಾಲೇಜ್ ಕ್ಯಾಂಪಸ್ಸಿನ ಸಿಹಿ ನೆನಪುಗಳು ಚೆನ್ನಾಗಿ ಮೂಡಿ ಬಂದಿದೆ.ಕಾಲೇಜು ದಿನಗಳನ್ನು ನೆನಪಿಸಿದ ಲೇಖನಕ್ಕೆ ಅಭಿನಂದನೆಗಳು.

    Reply
    • ಮಹಾಲಕ್ಷ್ಮೀ

      ಥ್ಯಾಂಕ್ಯೂ… ☺

      Reply
  2. ನಿರ್ಮಲಶ್ರೀರಾಮಪ್ಪ

    ಮರೆತರು ಕಳೆದು ಹೋಗದ ನಗು ನಿನ್ನದು
    ಸಾವಿರ ಜನಗಳ ಸಂದಣಿಯಲ್ಲೂ ನಿನ್ನ
    ನಗುವನ್ನು ನಾನು ಹುಡುಕಬಲ್ಲೆ.
    ನಿನ್ನ ನಗುವಿನಲ್ಲಿ ಏನಾಂಥಹ ಆಕರ್ಷಣೆ
    ಗೊತ್ತಿಲ್ಲ………
    ಪದೇ ಪದೇ ನೆನಪಾಗಿ, ನೆನಪಾದಾಗ ನೀರಾಗಿ
    ನಾನೆ ನಾಚುವ ನಗು ನಿನ್ನದು.
    ಕಳೆದು ಹೋದೆ ನೀನು ನಿನ್ನ ನಗುವಿನೊಂದಿಗೆ
    ನಾ ನಿರಂತರವಾಗಿ ಹುಡುಕುತ್ತಲೆ ಇರುವ ಪೇಟೆಯ
    ಗಲ್ಲಿಗಳಲ್ಲಿ, ಬಸ್‌ ನಿಲ್ದಾಣದಲ್ಲಿ, ಸಂತೆಯ ಬೀದಿಯಲ್ಲಿ
    ರಾತ್ರಿಯ ಕತ್ತಲಿನ ಓಣಿಯಲ್ಲಿ ನಿನ್ನ ನಗು ಕಾಣಿಸಬಹುದೇ ಎಂದು………

    ನಿಮ್ಮ ಬರಹಕ್ಕೆ ನನ್ನ ಕವನ ಸೂಕ್ತವಾಗಬಹುದೇ. ನಿಮ್ಮ ಬರಹ ಓದಿದ ನಂತರ ನನಗೆ ನೆನಪಾಗಿದ್ದು.

    Reply
    • ಮಹಾಲಕ್ಷ್ಮೀ

      ಹೌದು. ಥ್ಯಾಂಕ್ಯೂ… ☺

      Reply

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ