ಮನೆಯಲ್ಲಿ ಉಳಿದವರ ಆಲೋಚನೆ ಬೇರೆಯ ರೀತಿ. ಕನಸುಗಳನ್ನೇ ನೇಯುವ ಅವರಿಗೆ ಮನೆಯ ಪುಟಾಣಿಯೂ ಕನಸು ಕಾಣುತ್ತಿರುವುದು ವಿಶೇಷವೆನಿಸುತ್ತದೆ. ಜೊತೆಗೆ ತಮ್ಮ ಕನಸಿನ ಜಂಜಾಟದಿಂದ ಕೊಂಚ ತಪ್ಪಿಸಿಕೊಳ್ಳಲು ಹೊರದಾರಿಯೊಂದು ಸಿಕ್ಕಿತೇನೋ ಎನ್ನುವ ಕಾರಣದಿಂದ ಅವಳ ಕನಸನ್ನು ಬೆಂಬಲಿಸುತ್ತಾರೆ. ಮುಖ್ಯವಾಗಿ ಅವಳ ತಂದೆ ರಿಚರ್ಡ್. ಅಪ್ಪನಿಂದ ಮಿಸ್ ಲಿಟಲ್ ಸನ್ ಶೈನ್ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಒಪ್ಪಿಗೆ ಸಿಕ್ಕಿದ್ದರಿಂದಲೇ ನೆಲದಿಂದ ನೆಗೆದು ಹಾರಾಡುವಂತಾಗುತ್ತದೆ ಆಲಿವ್‌ಗೆ.
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಟಾಕೀಸ್ʼ ನಲ್ಲಿ ಅಮೆರಿಕದ ʻಲಿಟಲ್ ಮಿಸ್ ಸನ್‌ಶೈನ್ʼ ಚಿತ್ರದ ಬಗ್ಗೆ ವಿಶ್ಲೇಷಣೆ
ಅದೊಂದು ಅಮೆರಿಕದ ಪಟ್ಟಣ ಆಲ್ಬುಕರ್ಕ್. ಅಲ್ಲಿರುವ ಕುಟುಂಬವೊಂದರ ವ್ಯಕ್ತಿಗಳೆಲ್ಲರೂ ಒಂದಿಲ್ಲೊಂದು ಕನಸು ಪೋಷಿಸುತ್ತ ಅದನ್ನು ಪಡೆಯುವುದಕ್ಕಾಗಿ ಹಂಬಲಿಸುತ್ತಿರುವವರು. ಕನಸನ್ನು ನನಸು ಮಾಡಿಕೊಳ್ಳಲು ಆತ್ಮಸ್ಥೈರ್ಯವಿಲ್ಲದೆ ಕಂಗೆಟ್ಟು ಕಂಗಾಲಾಗಿರುವವರು. ಇನ್ನೊಂದು ರೀತಿಯಲ್ಲಿ ತಮ್ಮ ಶ್ರೇಯಸ್ಸಿಗೆ ಸರಿಯಾದ ನೆಲೆಯನ್ನು ಕಂಡುಕೊಳ್ಳಲು ಪ್ರಯತ್ನ ಪಡದೆ ದಿಕ್ಕೆಟ್ಟಿರುವವರು.
2006ರ ಜೊನಾಥನ್ ಡೇಟಂ ಮತ್ತು ವೆಲರಿ ಫಾರಿಸ್ ನಿರ್ದೇಶನದ ಲಿಟಲ್ ಮಿಸ್ ಸನ್ ಶೈನ್ ಈ ವಿಷಯದ ಮೂಲವನ್ನು ಶೋಧಿಸಲು ಪ್ರಯತ್ನಿಸುತ್ತದೆ. ಕುಟುಂಬದ ಸದಸ್ಯರು ತಮ್ಮ ಕನಸುಗಳಿಗೆ ವಿವಿಧ ಬಗೆಗಳನ್ನು ಪೋಷಿಸುತ್ತ ಅಪೇಕ್ಷೆಗಳನ್ನು ಪೂರೈಸಿಕೊಳ್ಳುವುದು ಮುಖ್ಯವೋ ಅಥವಾ ತಮ್ಮನ್ನು ತಾವು ಶೋಧಿಸಿಕೊಂಡು ಅದರ ಮೂಲಕ ತಮ್ಮ ನಿಜ ಶಕ್ತಿಯನ್ನು ಅರಿಯುವುದು ಯುಕ್ತವೋ ಎನ್ನುವುದನ್ನು ಪರೀಕ್ಷಿಸುತ್ತದೆ. ಇದು ಚಿತ್ರದ ಕಥಾವಸ್ತು.
ಚಿತ್ರದ ಕಥನ ಸ್ವರೂಪ ವಿಶೇಷವಾಗಿದೆ. ಅದು ಚಿತ್ರದ ಶೀರ್ಷಿಕೆಯಿಂದಲೇ ಪ್ರಾರಂಭವಾಗುತ್ತದೆ. ಕುಟುಂಬದ ಪ್ರತಿಯೊಬ್ಬ ಸದಸ್ಯರ ಬಾಳಿನಲ್ಲಿ ನೆಮ್ಮದಿಯ ಅಭಾವ. ಕಾಣಲಿಕ್ಕಷ್ಟೆ ಪ್ರತ್ಯೇಕ ಆಕಾರಗಳು. ಅವರಿಗೆ ಇದುವರೆಗೂ ಕಾಣದ ತಮ್ಮ ಅಂತಃಶಕ್ತಿಯ ನಿಜವಾದ ಸ್ಥಾನ ಏನು ಎನ್ನುವುದನ್ನು ಅರಿತುಕೊಳ್ಳಲು ಅವರ ಒಳಗನ್ನು ಹೊಕ್ಕು ತಮ್ಮನ್ನು ತಾವೇ ಅರಿತುಕೊಳ್ಳುವುದಕ್ಕೆ ಪ್ರೇರೇಪಿಸುವ ಸೂರ್ಯಕಿರಣಗಳನ್ನು ಸೂಚಿಸುತ್ತದೆ ಚಿತ್ರದ ಶೀರ್ಷಿಕೆ. ಇದರ ಮುಂದಿನ ಹೆಜ್ಜೆಯಾಗಿ ಪಾತ್ರಗಳಲ್ಲಿ ಅತ್ಯಂತ ಕಿರಿ ವಯಸ್ಸಿನ ಹುಡುಗಿಯನ್ನು ಈ ಕ್ರಿಯೆಯನ್ನು ನೆರವೇರಿಸುವ ಅಂಗವಾಗಿ ಪರಿಕಲ್ಪಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ ಈ ಸಂಗತಿಯನ್ನು ನೆರವೇರಿಸುವುದು ಅತ್ಯಂತ ಸಾಮಾನ್ಯಳೆಂದು ತೋರುವ ಹುಡುಗಿಯ ಪಾತ್ರದ ಬೆಳವಣಿಗೆಯಿಂದ. ಈ ಅಂಶಗಳನ್ನು ಅವರು ಪಾತ್ರಗಳಲ್ಲಿ ಹಂಚಿರುವ ರೀತಿಯೇ ತಿಳಿಸುತ್ತದೆ. ಇದು ಕಥನ ಪಾತ್ರಗಳ ಭೂಮಿಕೆ. ಅವುಗಳ ನಿಜಸ್ವರೂಪ ಹೀಗಿದೆ:
ಕುಟುಂಬದವರಲ್ಲಿ ಪ್ರತಿಯೊಬ್ಬರದೂ ಬೇರೆಬೇರೆ ರೀತಿಯ ಜೀವನವಿಧಾನ. ತನ್ನಲ್ಲಿ ಇರುವ ಗಳಿಕೆಯ ಶಕ್ತಿಯನ್ನು ಕಳೆದುಕೊಂಡು ಯಶಸ್ಸಿನ ದಾರಿಯಿರಲಿ ಮುಂದಿನ ದಾರಿಯನ್ನೇ ಕಾಣದೆ ದೂಳಿಪಟಯಾಗುವ ಸ್ಥಿತಿಯಲ್ಲಿರುತ್ತಾನೆ ಸಂಸಾರ ನಿರ್ವಹಣೆಗೆ ದುಡಿಯುವ ಮನೆಯಾತ ನಡು ವಯಸ್ಸಿನ ರಿಚರ್ಡ್ ಹೊವರ್. ಅವನು ಮಾಡುವ ಕೆಲಸವೊಂದು ವಿಪರ್ಯಾಸ. ಅದು ಟಿವಿ ಕಾರ್ಯಕ್ರಮದಲ್ಲಿ ಬದುಕಿನಲ್ಲಿ ಪ್ರಗತಿಯ ಆಶಾಗೋಪುರಗಳನ್ನು ಕಟ್ಟಿಕೊಂಡವರಿಗೆ ಅವರು ಅನುಸರಿಸಬೇಕಾದ ಹಂತಗಳ ಬಗ್ಗೆ ತಿಳಿಸಿಕೊಡುವುದು! ಅವನ ಹೆಂಡತಿ ಶೇರಿನ್ ಇಡೀ ಕುಟುಂಬವನ್ನು ಒಟ್ಟಾಗಿಡಲು ಶ್ರಮಿಸುವ ಮನೆಯಾಕೆ. ಗಂಡನಿಗೆ ಲಭ್ಯವಾಗುವ ವರಮಾನದಷ್ಟೇ ಸೋದರ ಫ್ರಾಂಕ್ ಬಗ್ಗೆ ಅವಳ ಚಿಂತೆ. ಅವನು ಸಲಿಂಗಿ. ಆದರೆ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಇರುವವನು. ಮಾರ್ಸೆಲ್ ಪ್ರೋಸ್ಟನ ಬಗ್ಗೆ ಮೆಚ್ಚುಗೆಯುಳ್ಳವನು. ಆದರೆ ತನ್ನ ಪ್ರೇಮ ಪ್ರಸಂಗದಲ್ಲಿ ಪ್ರೇಮಿಯಿಂದ ತಿರಸ್ಕರಿಸಲ್ಪಟ್ಟವನು. ಅದರಿಂದ ಅವನಿಗೆ ಉಂಟಾದ ನಿರೀಕ್ಷೆಯ ತೀವ್ರತೆಯೆಂದರೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಪಡುವಷ್ಟು! ಫ್ರಾಂಕ್‌ನ ರಕ್ಷಣೆಗೆ ಹೂವರ್ ಎಂದು ಕರೆಯುವ ಅವರ ಕುಟುಂಬದ ಸದಸ್ಯರೆಲ್ಲ ಧಾವಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ಶಿರೀನ್. ಅರವತ್ತು ದಾಟಿರುವ ರಿಚರ್ಡ್ ನ ತಂದೆಗೆ ಯಾವುದೇ ಕೆಲಸವಿಲ್ಲ. ಈ ಮೊದಲು ಮಾಡುತ್ತಿದ್ದ ಉದ್ಯೋಗದಿಂದ ವಜಾ ಮಾಡಲ್ಪಟ್ಟ ವ್ಯಕ್ತಿ. ಅದನ್ನು ಮನಸ್ಸಿನಿಂದ ಹೊರದೂಡುವ ಪ್ರಯತ್ನವೋ ಅಥವ ರೂಢಿಸಿಕೊಂಡ ಅಭ್ಯಾಸವೋ ಎನ್ನುವಂತೆ ಮನೆಯಲ್ಲಿ ಗುಟ್ಟಾಗಿ ಹೆರಾಯಿನ್ ಸೇವಿಸುವಾತ.
ರಿಚರ್ಡ್ ಮತ್ತು ಶಿರೀನ್ ದಂಪತಿಯ ಮಗ ಯುವ ಡಾನ್ ಗೆ ಪೈಲೆಟ್ ಆಗುವ ಕನಸು. ಕಣ್ಣುಗಳು ಸ್ಪಷ್ಟವಾಗಿ ಕಾಣದಿರುವಷ್ಟು ಸದಾ ಕೂದಲನ್ನು ಹಣೆಯಿಂದ ಕೆಳಗಿಳಿಸಿಕೊಂಡಿರುವ ಅವನು ತನ್ನ ಧ್ಯೇಯವನ್ನು ಸಾಧಿಸುವ ತನಕ ಮಾತನಾಡುವುದಿಲ್ಲವೆಂದು ಮೌನವ್ರತ ಹಿಡಿದಿರುತ್ತಾನೆ. ಅಷ್ಟೇ ಅಲ್ಲ, ಅವನು ಇತರರರೊಂದಿಗೆ ಮಾತನಾಡಲೇಬೇಕಾದಾಗ ನೋಟ್ ಬುಕ್ಕಿನಲ್ಲಿ ದಪ್ಪ ಅಕ್ಷರಗಳಲ್ಲಿ ಬರೆದು ತೋರಿಸುತ್ತಾನೆ. ಚಿತ್ರದಲ್ಲಿ ಅವನ ಈ ಮೌನವ್ರತ ತಿಳಿಯುವ ಮುಂಚೆ ನಾವು ಅವನೊಬ್ಬ ಮೂಕನೆಂದೇ ಭಾವಿಸಿರುತ್ತೇವೆ! ಇವರೆಲ್ಲರ ಮುದ್ದಿನ ವ್ಯಕ್ತಿ ಏಳೆಂಟು ವರ್ಷದ ಹುಡುಗಿ ಆಲಿವ್.
ಕುಟುಂಬದ ವ್ಯಕ್ತಿಗಳ ಭಾವ ನೆಲೆ ಚಿತ್ರದ ನಿರೂಪಣೆಯಲ್ಲಿ ತ್ವರಿತ ಗತಿಯಲ್ಲಿ ನಮಗೆ ಕ್ರಮೇಣ ತಿಳಿಯುವುದಾದರೂ ಮೊದಲಿಗೆ ನಮಗೆ ಎದುರಾಗುವುದು ಇಡೀ ಚಿತ್ರದ ಶಕ್ತಿಯಾಗಿರುವ ಹುಡುಗಿ ಆಲಿವ್. ಚಿತ್ರ ತೆರೆದುಕೊಳ್ಳುತ್ತದ್ದಂತೆಯೇ ಕ್ಲೋಸ್‌ಅಪ್ ಚಿತ್ರಿಕೆಯಲ್ಲಿ ಕಾಣಿಸುತ್ತಾಳೆ.
ದುಂಡುಮುಖದ, ಕಣ್ಣಿಗೆ ದೊಡ್ಡದು ಎನಿಸುವ ಕನ್ನಡಕ ಹಾಕಿಕೊಂಡು ನಮ್ಮನ್ನೇ ನೋಡುವಂತಿರುತ್ತದೆ. ಆದರೆ ಅವಳು ಟೀವಿ ಹಾಕಿಕೊಂಡು ರಿಚರ್ಡ್ ಟೀವಿ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುತ್ತಾಳೆ. ಅದರ ಜೊತೆಯಲ್ಲಿಯೇ ಸದ್ಯದಲ್ಲೇ ಜರುಗಲಿರುವ ಮಿಸ್ ಲಿಟಲ್ ಸನ್ ಶೈನ್ ಮತ್ತು ಮಿಸ್ ಅಮೆರಿಕ ಸ್ಪರ್ಧೆಯ ಕಾರ್ಯಕ್ರಮಗಳ ಜಾಹಿರಾತನ್ನು ಕೂಡ ನೋಡುತ್ತಾಳೆ. ಆ ಕ್ಷಣದಲ್ಲಿಯೇ ಮಿಸ್ ಲಿಟಲ್ ಸನ್ ಶೈನ್ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಕನಸು ಅವಳಲ್ಲಿ ನೆಲೆಯೂರುತ್ತದೆ. ಅವಳ ತುಂಬುಗಲ್ಲದ ಮೇಲೆ ಬೆಳಕಿನ ಕಿರಣಗಳು ನೆಲೆಯೂರಿ ಹೊಳಪು ಹರಿದಾಡುತ್ತದೆ. ಪರಿಣಾಮವಾಗಿ ಅವಳ ದೊಡ್ಡ ಕಣ್ಣುಗಳಲ್ಲಿ ಎಳೆ ಮಿಂಚು ಮಿನುಗುತ್ತದೆ. ತಾನೂ ಅದರಲ್ಲಿ ಭಾಗವಹಿಸಿ ಸ್ಪರ್ಧಿಸುತ್ತೇನೆ ಎನ್ನುತ್ತಾಳೆ.
ಮನೆಯವರಿಗೆಲ್ಲ, ಅದರಲ್ಲೂ ಶಿರೀನಳಿಗೆ ಮಗಳ ಈ ಅಪೇಕ್ಷೆಯೇ ಅಸಂಗತವೆನಿಸುತ್ತದೆ. ಇಂಥದೊಂದು ಅಭಿಲಾಷೆ ಯುಕ್ತವೇ ಎನ್ನುವ ಹಾಗೆ. ಆದರೆ ಮನೆಯಲ್ಲಿ ಉಳಿದವರ ಆಲೋಚನೆ ಬೇರೆಯ ರೀತಿ. ಕನಸುಗಳನ್ನೇ ನೇಯುವ ಅವರಿಗೆ ಮನೆಯ ಪುಟಾಣಿಯೂ ಕನಸು ಕಾಣುತ್ತಿರುವುದು ವಿಶೇಷವೆನಿಸುತ್ತದೆ. ಜೊತೆಗೆ ತಮ್ಮ ಕನಸಿನ ಜಂಜಾಟದಿಂದ ಕೊಂಚ ತಪ್ಪಿಸಿಕೊಳ್ಳಲು ಹೊರದಾರಿಯೊಂದು ಸಿಕ್ಕಿತೇನೋ ಎನ್ನುವ ಕಾರಣದಿಂದ ಅವಳ ಕನಸನ್ನು ಬೆಂಬಲಿಸುತ್ತಾರೆ. ಮುಖ್ಯವಾಗಿ ಅವಳ ತಂದೆ ರಿಚರ್ಡ್. ಅಪ್ಪನಿಂದ ಮಿಸ್ ಲಿಟಲ್ ಸನ್ ಶೈನ್ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಒಪ್ಪಿಗೆ ಸಿಕ್ಕಿದ್ದರಿಂದಲೇ ನೆಲದಿಂದ ನೆಗೆದು ಹಾರಾಡುವಂತಾಗುತ್ತದೆ ಆಲಿವ್ ಗೆ.
ಚಿತ್ರದಲ್ಲಿ ಅವನ ಈ ಮೌನವ್ರತ ತಿಳಿಯುವ ಮುಂಚೆ ನಾವು ಅವನೊಬ್ಬ ಮೂಕನೆಂದೇ ಭಾವಿಸಿರುತ್ತೇವೆ! ಇವರೆಲ್ಲರ ಮುದ್ದಿನ ವ್ಯಕ್ತಿ ಏಳೆಂಟು ವರ್ಷದ ಹುಡುಗಿ ಆಲಿವ್.
ಫ್ರಾಂಕ್ ಮತ್ತು ಡಾನ್ ಪ್ರಾರಂಭದಲ್ಲಿ ಅಷ್ಟಾಗಿ ಉತ್ಸಾಹ ತೋರಿಸದಿದ್ದರೂ ಸದಸ್ಯರೆಲ್ಲರೂ ಆಲಿವ್‌ಳ ಅಪೇಕ್ಷೆಯಂತೆ ಕಾರ್ಯಕ್ರಮದಲ್ಲಿ ಅದು ಜರುಗುವ ಸ್ಥಳಕ್ಕೆ ಹೋಗಲು ನಿರ್ಧರಿಸುತ್ತಾರೆ. ಆದರೆ ಆಲಿವ್‌ಳ ಈ ಅಪೇಕ್ಷೆ ಶಿರೀನಳಿಗೆ ತಲೆನೋವಾಗುತ್ತದೆ. ಅಳತೆಗೆ ಮೀರಿ ಹುಮ್ಮಸ್ಸಿನಿಂದ ವರ್ತಿಸುವ ರಿಚರ್ಡನಿಗೆ ಅವಳು ತಮ್ಮ ಆರ್ಥಿಕ ಪರಿಸ್ಥಿಯ ಬಗ್ಗೆ ಇನ್ನಷ್ಟು ಚರ್ಚಿಸಿ, ತಾವು ಇಂಥ ವಿಪರೀತವೆನ್ನಿಸುವ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ಳಬೇಕೇ ಎನ್ನುತ್ತಾಳೆ. ಆದರೆ ರಿಚರ್ಡ್ ಅವಳ ಮಾತನ್ನು ಕೇಳಿಸಿಕೊಳ್ಳುವುದೇ ಇಲ್ಲ.
ಅವರಿಗೆ ಮಿಸ್ ಸನ್‌ಶೈನ್ ಸ್ಪರ್ಧೆಯಲ್ಲಿ ಆಲಿವ್ ಪಾಲ್ಗೊಳ್ಳುವ ಪ್ರಯುಕ್ತ ನಿಗದಿತ ವೇಳೆಗೆ ಅದು ಜರುಗುವ ಸ್ಥಳವನ್ನು ತಲುಪಲು ಹೆಚ್ಚಿನ ಕಾಲಾವಕಾಶ ಇರುವುದಿಲ್ಲ. ಇದನ್ನು ಅರಿತೇ ಗಡಿಬಿಡಿಯಲ್ಲಿ ಅವರ ಬಳಿ ಇದ್ದ ಹಳೆಯ ವೋಕ್ಸ್ ವ್ಯಾಗನ್ ವಾಹನದಲ್ಲಿ ಅವಸರವಸರವಾಗಿ ಮನೆಯವರೆಲ್ಲರೂ ಹೊರಡುತ್ತಾರೆ. ಒಂದಿಲ್ಲೊಂದು ಬಗೆಯಲ್ಲಿ ಶಿಥಿಲ ಶಕ್ತಿಯವರಾದ ಅವರ ಸ್ಥಿತಿಗೆ ರೂಪುಗೆಟ್ಟ ವಾಹನ ರೂಪಕವಾಗುತ್ತದೆ. ಇಷ್ಟಲ್ಲದೆ ಅದು ಸ್ಟಾರ್ಟ್ ಆಗುವಂತಿರುವುದಿಲ್ಲ. ಒಂದಿಬ್ಬರು ಒಟ್ಟಾಗಿ ದೂಡಿದಾಗಲೇ ಅದು ಮುಂದೆ ಹೋಗಲು ಸಾಧ್ಯ. ಅವಶ್ಯವೆನಿಸುವ ಈ ಕ್ರಿಯೆಯೂ ಕೂಡ ಆಲಿವ್‌ಳ ಅಭಿಲಾಷೆಯನ್ನು ಪೂರೈಸಲು ಮನೆಯವರೆಲ್ಲ ಶ್ರಮಿಸಬೇಕಾದ ಅಗತ್ಯವನ್ನು ಬಿಂಬಿಸುತ್ತದೆ. ಜೊತೆಗೆ ತಮ್ಮಷ್ಟಕ್ಕೆ ತಾವು ದ್ವೀಪ ರಚಿಸಿಕೊಂಡು ಕನಸುಗಳ ಬೆನ್ನು ಹತ್ತಿ ಇದ್ದಲ್ಲೆ ವೃತ್ತ ತಿರುಗುತ್ತ ಇನ್ನಷ್ಟು ಮತ್ತಷ್ಟು ಠೊಳ್ಳಾಗುವುದನ್ನು ಅನಿವಾರ್ಯವಾಗಿ ಅನುಭವಿಸುತ್ತ, ಕೊರಗಿ ಹಣ್ಣಾಗುವುದರಿಂದ ಕೊಂಚ ವಿರಾಮ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳುವ ಮನಸ್ಸಿನವರಂತೆಯೂ ತೋರುತ್ತಾರೆ.
ಚಿತ್ರದ ಈ ಹಂತ ಮುಗಿದ ನಂತರ ದಾರಿಯಲ್ಲಿ ಜರುಗುವ ಸಣ್ಣ ಸಣ್ಣ ಘಟನೆಗಳ ಮೂಲಕ ಒಂದೊಂದು ಪಾತ್ರದ ಅಂತರಂಗವನ್ನು ತೆರೆದು ತೋರ್ಪಡಿಸುವ ಚಿತ್ರದ ನಿರೂಪಣೆಯನ್ನು ಕಾಣುತ್ತೇವೆ. ಇನ್ನುಳಿದವರಿಂದ ತಮ್ಮನ್ನು ತಾವು ಅರಿತುಕೊಳ್ಳುವ ಬಗೆಯನ್ನು ನಿರ್ದೇಶಕರು ಪ್ರಸ್ತುತಪಡಿಸುತ್ತಾರೆ.
ಮನೆಯಿಂದ ಹೊರಟಾಗ ಒಂಟಿಯೆನಿಸುವಂತಿರುವ ಹಿರಿಯವನಾದ ತಾತ ಕ್ರಮೇಣ ಹಗುರಾಗಿ ಮಾತಿಗಿಳಿಯುತ್ತಾನೆ. ಅದರಲ್ಲಿಯೂ ಆಲಿವ್ ಜೊತೆ. ಇಂಥದೇ ಅನುಭವಕ್ಕೆ ಫ್ರಾಂಕ್ ಕೂಡ ಒಳಗಾಗುತ್ತಾನೆ. ತನಗಿಂತ ಭಿನ್ನವಾಗಿ ಬದುಕಿನಲ್ಲಿ ನಿಯೋಜಿತವಾಗಿ ಧೈರ್ಯದಿಂದ ಮುಂದುವರಿದ ರೀತಿಯನ್ನು ಮೆಚ್ಚಿಕೊಂಡದ್ದನ್ನು ಕಣ್ಣು ಮಿನುಗಿಸಿ ತಾತ ರಿಚರ್ಡ್‌ನಿಗೆ ತಿಳಿಸುತ್ತಾನೆ.
ಅಲ್ಲೊಂದು ಕಡೆ ಎದುರಿಗೆ ಕಾಣುತ್ತಿರುವ ಬಣ್ಣವನ್ನು ಗುರುತಿಸುವುದು ಜರುಗುತ್ತದೆ. ಆ ಮಾತುಗಳಲ್ಲಿ ಡಾನ್ ಕಲರ್ ಬೈಂಡ್ ಆಗಿದ್ದಾನೆ ಎಂದು ತಿಳಿಯುತ್ತದೆ. ಆದ್ದರಿಂದ ತಾನು ಪೈಲಟ್ ಆಗುವ ಆಸೆ ಮುಳುಗಿತು ಎಂದು ತಿಳಿದ ಕೂಡಲೇ ಅಳತೆ ಮೀರಿದ ಭಾವೋತ್ಕರ್ಷಕ್ಕೆ ಒಳಗಾಗಿ ವಾಹನದಿಂದ ಕೆಳಗಿಳಿದು ಅಲ್ಲಿಂದ ಮುಂದೆ ಬರುವುದಿಲ್ಲ. ನನ್ನನ್ನು ಬಿಟ್ಟು ಬಿಡಿ ಎಂದು ಖಿನ್ನತೆಗೆ ಸಿಕ್ಕು ಹೇಳುತ್ತಾನೆ. ಆಗ ಉಳಿದವರ ಪ್ರಯತ್ನ ವಿಫಲವಾಗಿ ಅವನನ್ನು ಮಾತಿಲ್ಲದೆ ಸಂತೈಸುವುದಕ್ಕೆ ಆಲಿವ್ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅದಮ್ಯ ಪ್ರೀತಿ ಉಕ್ಕಿಸುವ ಅವಳ ಸ್ಪರ್ಶ ಮತ್ತು ತುಂಬು ವಿಶ್ವಾಸದ ಅವಳ ನೋಟ ಡಾನ್ ಮೇಲೆ ಪರಿಣಾಮ ಬೀರುತ್ತದೆ. ಈ ಪ್ರಕ್ರಿಯೆಯಲ್ಲಿಯೇ ಪ್ರೇಮದ ವಿಷಯದಲ್ಲಿ ಸೋತರೂ ಅದೇ ಕೊನೆಯಲ್ಲ ಬದುಕಲು ಬೇರೆ ನೆಲೆಗಳು ಇವೆ ಮತ್ತು ಪೈಲಟ್ ಆಗುವುದೇ ಅಂತಿಮವಲ್ಲ ಬದುಕಿನಲ್ಲಿ ಬೇರೆ ದಾರಿಗಳಿವೆ ಎನ್ನುವುದನ್ನು ಮಾತನಾಡದೆಯೇ ಸೂಚಿಸುವಂತೆ ತೋರುತ್ತದೆ. ಚಿತ್ರದಲ್ಲಿನ ಈ ಸನ್ನಿವೇಶದಲ್ಲಿ ಅವಳ ಪ್ರಬುದ್ಧವೆನಿಸುವ ಅಭಿನಯ ನಿಜಕ್ಕೂ ಮೆಚ್ಚುವಂಥದು.
ಇಡೀ ಸಂಸಾರದವರು ರಾತ್ರಿ ಅಲ್ಲೊಂದು ಹೊಟೇಲಿನಲ್ಲಿ ಉಳಿದುಕೊಂಡು ಬೆಳಿಗ್ಗೆ ಬೇಗ ಹೊರಡುವ ಏರ್ಪಾಡು ಮಾಡಿಕೊಂಡರೆ ಬೆಳಗಾಗುತ್ತಲೇ ತಾತ ತೀರಿ ಹೋಗಿರುವುದು ತಿಳಿಯುತ್ತದೆ. ಆಲಿವ್ ಸಮಯಕ್ಕೆ ಸರಿಯಾಗಿ ಸ್ಪರ್ಧೆಯ ಸ್ಥಳ ತಲುಪಬೇಕಾದ್ದರಿಂದ ಅವರಿಗೆ ಕೆಲವು ಕ್ಷಣ ಏನು ಮಾಡಬೇಕೆಂದು ತಿಳಿಯುವುದಿಲ್ಲ. ಆದರೆ ತಾತನಿಗೆ ಅಂತ್ಯಸಂಸ್ಕಾರವೆಂದು ಮುಂದೆ ಹೋಗುವುದನ್ನು ನಿಲ್ಲಿಸುವುದು ಸಾಧ್ಯವಿರದ ಸ್ಥಿತಿ ಅವರದು. ಇಷ್ಟವಿಲ್ಲದೆಯೂ ತೀರ್ಮಾನಿಸಿ ಮುಂದೆ ಹೊರಡುತ್ತಾರೆ. ಇಷ್ಟಾದರೂ ಅವರು ಅಲ್ಲಿಗೆ ತಲುಪಲು ಇನ್ನಷ್ಟು ತೊಡಕುಗಳು. ಆದರೆ ಅವು ಹೆಚ್ಚಾದಷ್ಟೂ ಉಳಿದವರಿಗೆ ಹೆಚ್ಚು ಹೆಚ್ಚು ಪ್ರಚೋಚದನೆ ಕೊಡುವ ರಿಚರ್ಡ್ ತನ್ನ ಹಠ ಬಿಡುವುದಿಲ್ಲ. ಅವರೆಲ್ಲರ ಮೈಗೆ, ಮನಸ್ಸಿಗೆ ಘಾಸಿಯಾದ ರೀತಿಯಲ್ಲಿಯೇ ವಾಹನಕ್ಕೆ ಕೂಡ ಅಲ್ಲಲ್ಲಿ ಘಾಸಿಯಾಗುತ್ತದೆ. ಹೀಗಿದ್ದರೂ ಇನ್ನಷ್ಟು ಪ್ರಯತ್ನಿಸಿ ಮಿಸ್ ಲಿಟಲ್ ಸನ್ ಶೈನ್ ಸ್ಪರ್ಧೆ ನಡೆಯುವ ಸ್ಥಳ ತಲುಪುತ್ತಾರೆ. ಅಲ್ಲಿಯೂ ಅವರು ಪಟ್ಟ ಶ್ರಮ ಉಪಯೋಗಕ್ಕೆ ಬಾರದೆ ಹೋಗುವುದೇನೋ ಅನ್ನುವ ಭಾವ ತೀವ್ರತೆಯ ಕ್ಷಣಗಳು ಅವರನ್ನು ಚಿಂದಿ ಮಾಡುತ್ತವೆ. ಆದರೆ ಅವರೆಲ್ಲರ ಉತ್ಕಟ ಅಭಿಲಾಷೆಯಂತೆ ಆಳಿವ್ ಗೆ ಸ್ಪರ್ಧಿಸುವುದಕ್ಕೆ ಅವಕಾಶ ದೊರೆಯುತ್ತದೆ. ಮನೆಯಲ್ಲಿ ಕುಳಿತು ಸ್ಪರ್ಧೆಯ ಬಗ್ಗೆ ಉಂಟಾದ ಭಾವನೆ ಮತ್ತು ಅದಕ್ಕೆ ಪೂರಕವಾಗಿ, ಬೆಂಬಲಿಸಿ ಮನೆಯವರೆಲ್ಲ ಒಟ್ಟಾಗಿ ನಡೆದುಕೊಂಡ ರೀತಿ ಅವಳ ಅಂತರಂಗದಲ್ಲಿ ಮನೆಯವರಿಗೇ ಅಶ್ಚರ್ಯವೆನಿಸುವ ರೀತಿಯಲ್ಲಿ ಬದಲಾಗಿರುತ್ತದೆ.
ಚಿತ್ರದ ಅಲ್ಲಲ್ಲಿ ಹಾಸ್ಯದ ತುಣುಕುಗಳು ಬೆರೆತರೂ ನಿರ್ದೇಶಕರು ತಮ್ಮ ಆಶಯವನ್ನು ಪೂರೈಸಿದ್ದಾರೆ. ಅತ್ಯಂತ ಪರೋಕ್ಷ ರೀತಿಯಲ್ಲಿ ತಾತ್ವಿಕ ನಿಲುವೊಂದನ್ನು ಅಭಿವ್ಯಕ್ತಿಸಿರುವ ಅವರ ಸಾಮರ್ಥ್ಯವನ್ನು ಮೆಚ್ಚಲೇ ಬೇಕು. ಆಲಿವ್ (ಅಬಿಗೇಲ್ ಬ್ರೆಸ್ಲಿನ್) ಪಾತ್ರದ ಅಭಿನಯವನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಉಳಿದವರೆಲ್ಲ ಅಭಿನಯ ಅಗತ್ಯಕ್ಕೆ ಅನುಗುಣವಾಗಿದೆ. ಇವೆಲ್ಲ ವಿಶೇಷತೆಗಳಿಗಾಗಿಯೇ ಚಿತ್ರ ಎರಡು ಆಸ್ಕರ್ ಪ್ರಶಸ್ತಿ ಗಳಿಸಿರುವುದರಲ್ಲಿ ಯಾವ ಆಶ್ಚರ್ಯವಿಲ್ಲ. ಚಿತ್ರದ ನಿರ್ದೇಶಕರು ಎರಡು ಬಾರಿ ಗ್ರಾಮಿ ಪ್ರಶಸ್ತಿ ಗಳಿಸಿರುವುದು ವಿಶೇಷವೇ. ಅದಲ್ಲದೆ ಅವರು ಎಚ್ ಬಿ ಓ ಮತ್ತು ವಾರ್ನರ್ ಬ್ರದರ್ಸ್ ಗಾಗಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.
Nice narratin