ಇಲ್ಲಿಯ ತನಕ ಅವನ ನಿರ್ದೇಶನದ ಹದಿನೆಂಟು ಚಿತ್ರಗಳಲ್ಲಿ ಸಮಾನವಾಗಿರುವ ಅಂಶವೆಂದರೆ ಆಯ್ದ ವಸ್ತುವಿಗೆ ತಕ್ಕ ಹಾಗೆ ಪಾತ್ರಗಳ ಬದುಕಿನ ವಿವರ ಮತ್ತು ಅದಕ್ಕೆ ಪೂರಕವಾಗುವ ವಾತಾವರಣಸೃಷ್ಟಿ. ಸ್ಥಳೀಯರ ಬದುಕಿನ ವಿವರಗಳನ್ನು ಅತ್ಯಂತ ಹತ್ತಿರವಾದ ರೀತಿಯಲ್ಲಿ ನಿರ್ಭಾವದಿಂದ ವಿಸ್ತೃತವಾಗಿ ನಿರೂಪಿಸುವ ವಿಧಾನ ಅವನದು. ಹೀಗೆ ಅವನು ಮಾಡುವುದು ಕಿಂಚಿತ್ ಅಬ್ಬರ, ಆರ್ಭಟ, ಅದ್ಧೂರಿ ಇಲ್ಲದೆ ಕೊಂಚ ಹೆಚ್ಚು ಎನಿಸುವ ನಿಧಾನ ಗತಿಯಲ್ಲಿ. ನಿರೂಪಣೆಯಲ್ಲಿ ಪಾತ್ರಗಳ ವರ್ತನೆ ಸಹಜತೆಯಿಂದ ಕೂಡಿರುತ್ತದೆ ಮತ್ತು ಪರಸ್ಪರ ಸಂಭಾಷಣೆಯಲ್ಲಿ ಮೌನಕ್ಕೆ ಮಹತ್ವ ಹೆಚ್ಚು.
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಸರಣಿʼಯಲ್ಲಿ ಫಿನ್‌ಲ್ಯಾಂಡ್‌ನ ʻದ ಮ್ಯಾಚ್ ಫ್ಯಾಕ್ಟರಿ ಗರ್ಲ್ʼ ಸಿನೆಮಾದ ವಿಶ್ಲೇಷಣೆ
ಅದೊಂದು ಫ್ಯಾಕ್ಟರಿ. ಒಂದಷ್ಟು ಮೇಲೆ ಉರಿಯುವ ಬಲ್ಬ್. ಅದರ ಹತ್ತಿರ ಮೆಷಿನ್‌ಗೆ ಅಳವಡಿಸಿ ಜೋಡಿಸಿರುವ ಕೊಯ್ದ ಮರದ ಕಾಂಡಗಳು. ಅನಂತರ ಮೆಷಿನ್‌ಗಳ ಕರ್ಕಶ ಶಬ್ದದೊಂದಿಗೆ ಕಾಂಡಗಳು ಮೊದಲು ಹಾಳೆಗಳಾಗಿ, ತುಂಡಾಗಿ, ಬೆಂಕಿಕಡ್ಡಿಗಳಾಗಿ, ಪೊಟ್ಟಣಗಳಲ್ಲಿ ಸೇರಿ, ಹಲವು ಪೊಟ್ಟಣಗಳ ಪಾಕೆಟ್ಟುಗಳು ಚಲಿಸುವಾಗ ಕೈಯೊಂದು ಚೀಟಿ ಸರಿ ಇರದ ಪೊಟ್ಟಣವನ್ನು ತೆಗೆದುಕೊಳ್ಳುವುದನ್ನು ಕಾಣುತ್ತೇವೆ. ಮರುಕ್ಷಣ ಹಾಗೆ ಮಾಡಿದ ಗಂಭೀರ ಮುಖಭಾವದ ಕೆಲಸಗಾರ್ತಿಯನ್ನು ಕ್ಲೋಸ್‌ನಲ್ಲಿ ನೋಡುತ್ತೇವೆ. ಸುಮಾರು ಎರಡೂವರೆ ನಿಮಿಷದಷ್ಟು ದೀರ್ಘ ಅವಧಿಯ ಚಿತ್ರದ ಪ್ರವೇಶಿಕೆ ಮುಖ್ಯವಾಗಿ ಎರಡು ಅಂಶಗಳನ್ನು ತೆರೆದಿಡುತ್ತದೆ. ಅಷ್ಟು ಸಮಯದ ಕರ್ಕಶ ಶಬ್ದ ಚಿತ್ರದ ಮೂಲ ಭೂಮಿಕೆ ನವಿರಾದ, ಮಾಧುರ್ಯದ ಭಾವನೆಲೆಯನ್ನು ಹೊಂದಿರುವಂಥದಲ್ಲವೆಂದು ಮತ್ತು ಕಾಣಿಸುತ್ತಿರುವವಳು ಅಸಹಜ ಮನಸ್ಥಿತಿಯಲ್ಲಿರುವುದನ್ನು ತೋರಿಸುತ್ತದೆ.
ಇದು ಫಿನ್‌ಲ್ಯಾಂಡ್‌ನ ಅಕಿ ಕೌರಿಸ್ಮಕಿಯ ʻ1990ರʼ `ದ ಮ್ಯಾಚ್ ಫ್ಯಾಕ್ಟರಿ ಗರ್ಲ್’ ಚಿತ್ರದ ಮೊದಲ ದೃಶ್ಯ. ಹೆಲ್‌ಸಿಂಕಿ ಟ್ರಯಾಲಜಿಯಲ್ಲಿ ಕೊನೆಯದಾದ ಈ ಚಿತ್ರದಲ್ಲಿ ಟ್ರಿಯಾಲಜಿಯ ಮೊದಲೆರಡು ಚಿತ್ರಗಳಿಗಿಂತ ದುರಂತವೊಂದರ ಅತ್ಯಂತ ತೀಕ್ಷ್ಣವಾದ ನಿರೂಪಣೆಯಿದೆ. ಚಿತ್ರದಲ್ಲಿ ನಿರ್ಭಾವುಕತೆಯದೇ ರಾಜ್ಯಭಾರ. ಅದರ ಒತ್ತಡ ಉಸಿರುಕಟ್ಟಿಸುವಂಥಾದ್ದು. ನಿರೂಪಣೆ, ದೃಶ್ಯ ಸಂಯೋಜನೆ ಅವನ ಬಹುತೇಕ ಚಿತ್ರಗಳಿಗಿಂತ ಸರಳ ಮತ್ತು ನೇರ. ಮ್ಯಾಚ್ ಬಾಕ್ಸ್‌ಗಳನ್ನು ತಯಾರಿಸುವ ಫ್ಯಾಕ್ಟರಿಯೊಂದರಲ್ಲಿ ಯಾಂತ್ರಿಕವಾಗಿ ಕೆಲಸ ಮಾಡುವ ಐರಿಸ್ ಮನೆಯಲ್ಲಿ ತಂದೆ-ತಾಯಿಯರ ಮಮತೆಯಿಂದ ವಂಚಿತಳಾದವಳು. ಏಕತಾನತೆಯ ಜರ್ಜರ ಬದುಕಿಗೆ ಬೇಸತ್ತವಳು.
ಇದು ನಡೆದದ್ದು 2003ರಲ್ಲಿ. ಆ ವರ್ಷ ಅಕಿ ಕೌರಿಸ್ಮಕಿಯ ʻದ ಮ್ಯಾನ್ ವಿತೌಟ್ ಎ ಪಾಸ್ಟ್ʼ ಚಿತ್ರಕ್ಕೆ ಅತ್ಯುತ್ತಮ ವಿದೇಶಿ ಭಾಷೆಯ ಚಿತ್ರವೆಂದು ಆಸ್ಕರ್ ಪ್ರಶಸ್ತಿ ಘೋಷಣೆಯಾಯಿತು. ಅಮೆರಿಕದ ಈ ಪ್ರಶಸ್ತಿ ತೀರ ಪ್ರತಿಷ್ಠಿತವಾದದ್ದು ಎಂದು ಚಿತ್ರಾಸಕ್ತರಿಗೆಲ್ಲ ತಿಳಿದಿರುವಂಥಾದ್ದೆ. ಆದರೆ ಅಮೆರಿಕ ಇರಾಕ್ ಬಗ್ಗೆ ತಳೆದ ಧೋರಣೆಯನ್ನು ಪ್ರತಿಭಟಿಸಿ ಪ್ರಶಸ್ತಿ ಸ್ವೀಕರಿಸುವುದಕ್ಕೆ ತಾನು ಬರುವುದಿಲ್ಲವೆಂದು ಸಂಬಂಧಪಟ್ಟವರಿಗೆ ಬರೆದು ತಿಳಿಸಿದ ಆ ಚಿತ್ರದ ನಿರ್ದೇಶಕ. ಇದಲ್ಲದೆ 2002ನಲ್ಲಿ ನ್ಯೂಯಾರ್ಕ್ ಚಿತ್ರೋತ್ಸವದಲ್ಲಿ ಅವನದೇ ಇನ್ನೊಂದು ಚಿತ್ರ ʻಲೈಟ್ಸ್ ಇನ್ ದ ಡಸ್ಕ್ʼ ಚಿತ್ರಕ್ಕೆ ಪ್ರಶಸ್ತಿ ಲಭಿಸಿತ್ತು. ಆಗಲೂ ಇರಾನಿನ ಖ್ಯಾತ ನಿರ್ದೇಶಕ ಅಬ್ಬಾಸ್ ಕಿಯರೋತ್ಸಮಿಗೆ ಅಮೆರಿಕ ವೀಸಾ ನಿರಾಕರಿಸಿದಕ್ಕೆ ಪ್ರಶಸ್ತಿ ಸ್ವೀಕರಿಸುವುದಕ್ಕೆ ಹೋಗದೆ ಪ್ರತಿಭಟಿಸಿದ್ದ. ಈ ಘಟನೆಗಳಿಂದ ಅವನ ಚಿತ್ರಗಳು ಮತ್ತು ಧೋರಣೆ ಚಿತ್ರಾಸಕ್ತರ ವಲಯದಲ್ಲಿ ಇನ್ನಷ್ಟು ಖ್ಯಾತಿ ಮತ್ತು ಮಾನ್ಯತೆ ಪಡೆದವು. ಇದಕ್ಕೆ ಪಾತ್ರನಾದ ನಿರ್ದೇಶಕ ಫಿನ್‌ಲ್ಯಾಂಡ್‌ನ ಅಕಿ ಕೌರಿಸ್ಮಕಿ.
ಫಿನ್‌ಲ್ಯಾಂಡ್ ಅನೇಕ ಸಂಗತಿಗಳಿಗಾಗಿ ವಿಶಿಷ್ಟವಾದ ದೇಶ. ಕಮ್ಯುನಿಸಂ ಮತ್ತು ಕ್ಯಾಪಿಟಲಿಸ್ಟ್ ಧೋರಣೆಗಳೆರಡೂ ಅಲ್ಲಿನ ಜನಸಮುದಾಯದಲ್ಲಿ ಹರಿದಾಡುತ್ತವೆ. ಇವುಗಳ ಚೌಕಟ್ಟಿಗೆ ಸಿಲುಕಿ ಬದುಕು ನಡೆಸಲು ಹೆಣಗುತ್ತಿರುವ ಆ ದೇಶದ ಜನಸಂಖ್ಯೆ ಸುಮಾರು ಅರ್ಧ ಕೋಟಿ ಮಾತ್ರ. ಇದು ದೇಶದ ಒಟ್ಟಾರೆ ವಿಸ್ತೀರ್ಣಕ್ಕೆ ಹೋಲಿಸಿದರೆ ತೀರ ಕಡಿಮೆ.
ವರ್ಷದಲ್ಲಿ ಮೂರು ತಿಂಗಳು ಒಂದಷ್ಟು ಕೊಂಚ ಮೈ ಬೆಚ್ಚಗಾಗಿಸುವ ಹವಾಮಾನವಿದ್ದರೆ ಉಳಿದ ಭಾಗದಲ್ಲಿ ಅತೀವ ಕೊರೆತ. ಇದರಿಂದಾಗಿ ದೈನಂದಿನ ಚಟುವಟಿಕೆಗಳು ಪ್ರಾರಂಭವಾಗುವುದೇ ತಡವಲ್ಲದೆ ಮಧ್ಯಾಹ್ನ ಕಳೆಯುತ್ತಿದ್ದಂತೆಯೇ ಸರಿಸುಮಾರು ಎಲ್ಲವೂ ಸಾಮಾನ್ಯವಾಗಿ ಸ್ಥಗಿತಗೊಳ್ಳುತ್ತವೆಂದು ಅವನು ತಿಳಿಸುತ್ತಾನೆ. ಇದು ಒಂದು ರೀತಿಯಲ್ಲಿ ಸೋಮಾರಿತನವನ್ನು ಬೆಂಬಲಿಸುವುದರ ಜೊತೆಗೆ ಕುಡಿತಕ್ಕೂ ಕುಮ್ಮಕ್ಕು ಕೊಟ್ಟಿದೆ ಎನ್ನುತ್ತಾನೆ.
ಕಳೆದ ಮೂರು ದಶಕಗಳಲ್ಲಿ ತನ್ನ ದೇಶದ ರಾಜಕೀಯ ಹಾಗೂ ಸಾಂಸ್ಕೃತಿಕ ಸಂಗತಿಗಳನ್ನು ಚಿತ್ರಗಳಿಗೆ ಧಾರೆ ಎರೆದ ನಿರ್ದೇಶಕ ಅಕಿ ಕೌರಿಸ್ಮಕಿ. ಚಿಕ್ಕಂದಿನಿಂದಲೂ ಅವನ ಅಂತರಂಗದಲ್ಲಿ ಬೇರೂರಿದ್ದ ಜಗತ್ತಿನ ಚಲನಚಿತ್ರ ಕ್ಷೇತ್ರದ ವ್ಯಕ್ತಿ ಎಂದರೆ ಫ್ರಾನ್ಸ್‌ನ ಜೀನ್ ಲಕ್ ಗೊಡಾರ್ಡ್. 1980ರಲ್ಲಿ ʻದ ಲಯರ್ʼ ಚಿತ್ರದಿಂದ ಶುರುವಾದ ಅವನ ಚಿತ್ರಪಯಣ ಯಾವಾಗಲೂ ದಾಪುಗಾಲು. ಚಿತ್ರಗಳಲ್ಲಿ ಹಾಸ್ಯ ಲೇಪಿತ ವಿಷಾದ, ಅನಿಶ್ಚಿತ ಭವಿಷ್ಯ, ಅಸಹಾಯಕತೆ, ಮನುಷ್ಯ ಸಂಬಂಧಗಳಲ್ಲಿನ ಅಸಾಂಗತ್ಯ, ಜೀವನೋತ್ಸಾಹಕ್ಕೆ ಎದುರಾಗುವ ಅದೆಷ್ಟೋ ರೀತಿಯ ಅಡೆತಡೆ, ವೃತ್ತಿನಿರತ ಅಥವ ವೈಯಕ್ತಿಕ ಸಂಬಂಧಗಳಲ್ಲಿ ಸದಾ ಮುಂದಾಗುವ ಸ್ವಾರ್ಥಪರತೆ, ಸಂಬಂಧಗಳಲ್ಲಿ ವಿವಿಧ ಜೀವನ ಘಟ್ಟಗಳಲ್ಲಿ ಮಡುಗಟ್ಟಿದ ಪರಿತಾಪ ಮುಂತಾದವು ಅಕಿ ಕೌರಿಸ್ಮಕಿಯ ಚಿತ್ರಗಳ ಅಡಿಪಾಯ. `ಎಲ್ಲ ನಿರೀಕ್ಷೆಗಳು ಸತ್ತ ಮೇಲೆ ಹತಾಶೆಗೆ ಅರ್ಥವಿಲ್ಲ’ ಎಂದು ಅವನ ಚಿತ್ರಗಳ ಪಾತ್ರಗಳನ್ನು ಕುರಿತು ಇಂಟರ್‌ವ್ಯೂ ಒಂದರಲ್ಲಿ ಹೇಳಿದ್ದಾನೆ. ಇಲ್ಲಿಯ ತನಕ ಅವನ ನಿರ್ದೇಶನದ ಹದಿನೆಂಟು ಚಿತ್ರಗಳಲ್ಲಿ ಸಮಾನವಾಗಿರುವ ಅಂಶವೆಂದರೆ ಆಯ್ದ ವಸ್ತುವಿಗೆ ತಕ್ಕ ಹಾಗೆ ಪಾತ್ರಗಳ ಬದುಕಿನ ವಿವರ ಮತ್ತು ಅದಕ್ಕೆ ಪೂರಕವಾಗುವ ವಾತಾವರಣಸೃಷ್ಟಿ.
ಸ್ಥಳೀಯರ ಬದುಕಿನ ವಿವರಗಳನ್ನು ಅತ್ಯಂತ ಹತ್ತಿರವಾದ ರೀತಿಯಲ್ಲಿ ನಿರ್ಭಾವದಿಂದ ವಿಸ್ತೃತವಾಗಿ ನಿರೂಪಿಸುವ ವಿಧಾನ ಅವನದು. ಹೀಗೆ ಅವನು ಮಾಡುವುದು ಕಿಂಚಿತ್ ಅಬ್ಬರ, ಆರ್ಭಟ, ಅದ್ಧೂರಿ ಇಲ್ಲದೆ ಕೊಂಚ ಹೆಚ್ಚು ಎನಿಸುವ ನಿಧಾನ ಗತಿಯಲ್ಲಿ. ನಿರೂಪಣೆಯಲ್ಲಿ ಪಾತ್ರಗಳ ವರ್ತನೆ ಸಹಜತೆಯಿಂದ ಕೂಡಿರುತ್ತದೆ ಮತ್ತು ಪರಸ್ಪರ ಸಂಭಾಷಣೆಯಲ್ಲಿ ಮೌನಕ್ಕೆ ಮಹತ್ವ ಹೆಚ್ಚು. ಹೆಚ್ಚಿನ ಪಾತ್ರಗಳು ಭಾವಸಿಂಚನವಿಲ್ಲದೆ ನಿರ್ಭಾವದಿಂದ ಮಾತನಾಡುತ್ತಾರೆ.
ಅವನ ಈ ವಿಧಾನಕ್ಕೆ ಜಪಾನ್‌ನ ಖ್ಯಾತ ನಿರ್ದೇಶಕ ಯಸುಜಿರು ಓಜುವಿನ ಪ್ರಭಾವ ಸ್ಪಷ್ಟವಾಗಿ ಕಾಣಿಸುತ್ತದೆ. ಅತಿ ತೀವ್ರವಾದ ಭಾವಗಳನ್ನು ಪ್ರಕಟಿಸುವ ಸಂದರ್ಭಗಳನ್ನು ಹೊರತುಪಡಿಸಿದರೆ ನಿರೂಪಣೆಯಲ್ಲಿ ಹೆಚ್ಚಾಗಿ ನಿಧಾನ ಗತಿಯ ಮಾತು, ಚಲನೆ ಪ್ರಧಾನವಾಗಿರುತ್ತದೆ. ಪಾತ್ರಗಳು ಸಂಬಂಧಿತ ವಸ್ತು-ಪರಿಕರಗಳನ್ನು ಸಂದರ್ಭಕ್ಕೆ ತಕ್ಕಹಾಗೆ ಭಾವನೆಯನ್ನು ಪ್ರಕಟಿಸುವುದಕ್ಕೆ ಬೆಂಬಲವಾಗುವ ರೀತಿಯಲ್ಲಿ ಉಪಯೋಗಿಸುತ್ತವೆ. ಗಮನಸೆಳೆಯುವ ಅಂಶವೆಂದರೆ ಅವನು ಚಿತ್ರೀಕಿರಣದಲ್ಲಿ ಹೆಚ್ಚಾಗಿ ಬಳಸುವುದು ದೂರ ಚಿತ್ರಿಕೆ(ಲಾಂಗ್ ಶಾಟ್)ಯನ್ನು. ಕೌರಿಸ್ಮಕಿಯ ಈ ಬಗೆಯ ಚಿತ್ರೀಕರಣವನ್ನು ಅನೇಕ ಖ್ಯಾತರಲ್ಲಿಯೂ ಗುರುತಿಸಬಹುದು. ಉದಾಹರಣೆಗೆ ʻ4 ಮಂತ್ಸ್, 3 ವೀಕ್ಸ್, 2 ಡೇಸ್ʼ ನ ಕ್ರಿಸ್ತಿನ್ ಮುಂಗು, ʻಅನ್ನೀ ಹಾಲ್ʼನ ಉಡಿ ಅಲೆನ್,ʻ ಚಿಲ್ಡ್ರೆನ್ ಆಫ್ ಮೆನ್ʼನ ಆಲ್ಫಾನ್ಸೋ ಕುರಾನ್ ಮುಂತಾದವರು.
ಬಹುತೇಕ ಕೌರಿಸ್ಮಕಿಯ ಚಿತ್ರಗಳ ಕೇಂದ್ರ ಫಿನ್‌ಲ್ಯಾಂಡಿನ ರಾಜಧಾನಿ ಹೆಲ್‌ಸಿಂಕಿ. ಅವನು ಎರಡು ಟ್ರಿಯಾಲಜಿಗಳನ್ನು ನಿರ್ಮಿಸಿದ್ದಾನೆ. ಹೆಲ್‌ಸಿಂಕಿ ಟ್ರಿಯಾಲಜಿ ಎನ್ನುವ ʻಎ ಶಾಡೋಸ್ ಇನ್ ಪ್ಯಾರಾಡೈಸ್ʼ, ʻಏರಿಯಲ್ʼ ಹಾಗೂ ʻದ ಮ್ಯಾಚ್ ಫ್ಯಾಕ್ಟರಿ ಗರ್ಲ್ʼ ಮತ್ತು ಫಿನ್‌ಲ್ಯಾಂಡ್ ಟ್ರಿಯಾಲಜಿ ಎನ್ನಲಾದ ʻಡ್ರಿಫ್ಟಿಂಗ್ ಕ್ಲೌಡ್ಸ್ʼ, ʻದ ಮ್ಯಾನ್ ವಿತೌಟ್ ಎ ಪಾಸ್ಟ್ʼ ಹಾಗೂ ʻಲೈಟ್ಸ್ ಇನ್ ದ ಡಸ್ಕ್ʼ. ಹೆಲ್‌ಸಿಂಕಿ ಟ್ರಿಯಲಜಿಯ ಪ್ರಮುಖ ಪಾತ್ರಗಳು ಒಬ್ಬಂಟಿಗಳು. ಸದಾ ಪ್ರೇಮಕ್ಕಾಗಿ ಹಾತೊರೆಯುವಂಥವು. ಇನ್ನೊಂದು ಟ್ರಿಯಾಲಜಿಯ ಪ್ರಮುಖ ಪಾತ್ರಗಳಿಗೆ ನೆಮ್ಮದಿಯ ಬಾಳಿಗಾಗಿ ಆದಷ್ಟು ಬೇಗ ಅಲ್ಲಿಂದ ಹೊರದೇಶಕ್ಕೆ ಹೋಗುವ ತವಕ, ಹಂಬಲ. ಇದರಿಂದ ಸುಧಾರಿತ ಜೀವನ ಸಾಗಿಸುವುದಕ್ಕೆ, ಉದ್ದೇಶಿತ ಅಭಿಲಾಷೆಗಳನ್ನು ಪೂರೈಸಿಕೊಳ್ಳುವುದಕ್ಕೆ ಸಾಧ್ಯ ಎನ್ನುವ ನಿರೀಕ್ಷೆ. ಕೆಲವರು ಮೆಕ್ಸಿಕೋಗೆ ಹೋದರೆ ಇನ್ನು ಕೆಲವರು ಎಸ್ಟೋನಿಯಾಗೆ ಹೋಗುತ್ತಾರೆ. ಈ ಟ್ರಿಯಾಲಜಿಗಳಿಂದ ಮುಖ್ಯವಾಗಿ ಮಧ್ಯಮ ಮತ್ತು ಕಾರ್ಮಿಕ ವರ್ಗದವರಲ್ಲಿನ ಅತೃಪ್ತ ಧೋರಣೆಯನ್ನು ಪ್ರಕಟಿಸುತ್ತಾನೆ ಕೌರಿಸ್ಮಕಿ. ತನ್ನ ದೇಶದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ನೆಲಗಟ್ಟಿನ ಬಗ್ಗೆ ಇರುವ ಅಭಿಪ್ರಾಯ ಅವನ ಈ ದೃಷ್ಟಿಕೋನಕ್ಕೆ ಪ್ರೇರಣೆ ಎನ್ನಬಹುದೇನೋ. ಕೌರಿಸ್ಮಕಿಗೆ ಹೆಲ್‌ಸಿಂಕಿಯ ಬಗ್ಗೆ ಕಹಿ ಬೆರೆತ ದೃಷ್ಟಿಕೋನವಿದೆ. ಅಲ್ಲಿ ಬದುಕುವ ಮುಖ್ಯಪಾತ್ರಗಳಿಗೆ ಸದಾ ತಲ್ಲಣ, ಸಂಕಷ್ಟ, ಭವಿಷ್ಯದ ಬಗ್ಗೆ ಇನ್ನಿಲ್ಲದಷ್ಟು ಕಾಳಜಿ.
ಮೇಲಿನ ವಿಷಯಗಳಲ್ಲಿ ಹಲವನ್ನು ಒಳಗೊಂಡ 69 ನಿಮಿಷಗಳ ʻದ ಮ್ಯಾಚ್ ಫ್ಯಾಕ್ಟರಿ ಗರ್ಲ್ʼ ಪರಿಕಲ್ಪಿಸಿದ್ದಾನೆ ಕೌರಿಸ್ಮಕಿ. ಜೊತೆಗೆ ತಾನು ಮೈಗೂಡಿಸಿಕೊಂಡ ಶೈಲಿಯಲ್ಲಿ ಚಿತ್ರದ ಮೊದಲ ದೃಶ್ಯವನ್ನು ನಿರೂಪಿಸಿದ್ದಾನೆ.
ಫಿನ್‌ಲ್ಯಾಂಡ್ ಅನೇಕ ಸಂಗತಿಗಳಿಗಾಗಿ ವಿಶಿಷ್ಟವಾದ ದೇಶ. ಕಮ್ಯುನಿಸಂ ಮತ್ತು ಕ್ಯಾಪಿಟಲಿಸ್ಟ್ ಧೋರಣೆಗಳೆರಡೂ ಅಲ್ಲಿನ ಜನಸಮುದಾಯದಲ್ಲಿ ಹರಿದಾಡುತ್ತವೆ. ಇವುಗಳ ಚೌಕಟ್ಟಿಗೆ ಸಿಲುಕಿ ಬದುಕು ನಡೆಸಲು ಹೆಣಗುತ್ತಿರುವ ಆ ದೇಶದ ಜನಸಂಖ್ಯೆ ಸುಮಾರು ಅರ್ಧ ಕೋಟಿ ಮಾತ್ರ. ಇದು ದೇಶದ ಒಟ್ಟಾರೆ ವಿಸ್ತೀರ್ಣಕ್ಕೆ ಹೋಲಿಸಿದರೆ ತೀರ ಕಡಿಮೆ.
ಐರಿಸ್‌ಳ ಮನೆಯಲ್ಲಿ ತಂದೆ, ತಾಯಿಯರ ಮತ್ತು ಅವಳ ನಡುವೆ ಮಾತು, ಪರಸ್ಪರ ಸಂಬಂಧದಲ್ಲಿ ಮಾರ್ದವತೆ, ಮುದವೆನಿಸುವ ವಾತಾವರಣ ಇಲ್ಲವೇ ಇಲ್ಲ ಎನ್ನುವಂತಿರುತ್ತದೆ. ಅವರ ಮಾತಿಲ್ಲದ ನೋಟ ವರ್ತನೆಗಳಿಂದ ಇದು ವ್ಯಕ್ತವಾಗುತ್ತದೆ. ಅವರು ಒಟ್ಟಿಗೆ ಮಾಡುವುದೆಂದರೆ ಟೀವಿ ನೋಡುವುದಷ್ಟೇ. ಟೀವಿಯಲ್ಲಿನ ದೃಶ್ಯಗಳು ಕೂಡ ಕೊಲೆ, ಹಿಂಸೆ, ಯುದ್ಧ ಮುಂತಾದವುಗಳಿದ್ದು ಚಿತ್ರದ ಭಾವನೆಲೆಗೆ ಪುಷ್ಟಿ ಒದಗಿಸುತ್ತದೆ.
ಅವಳಿಗೆ ಒಂಟಿತನ ಆವರಿಸಿರುತ್ತದೆ. ಅವಳು ಹೋಗುವ ಕ್ಲಬ್‌ನಲ್ಲಿ ಇತರ ವಾದ್ಯಗಳ ಜೊತೆ ಅವಳ ಒಬ್ಬಂಟಿ ಮನಸ್ಥಿತಿಯನ್ನು ಪ್ರತಿಫಲಿಸುವ ಹಾಗೆ ʻಅಲ್ಲಿ ಸಾಗರದಾಚೆ ನಾಡೊಂದಿದೆ. ಯಾವ ದುಃಖ, ದುಮ್ಮಾನ ಬೇಸರವಿಲ್ಲ ಅಲ್ಲಿ.. ಆದರೆ ಬಂದಿ ನಾನಿಲ್ಲಿ.. ಅಲ್ಲಿಗೆ ಹೋಗುವುದು ಕನಸಿನಲ್ಲಿ’ ಎಂದು ಹಾಡುವವನ ಲಯಕ್ಕೆ ಅನುಗುಣವಾಗಿ ಜೋಡಿ ಗಂಡು-ಹೆಣ್ಣುಗಳು ಡ್ಯಾನ್ಸ್ ಮಾಡುತ್ತಿರುತ್ತಾರೆ. ನಾಲ್ಕೈದು ಹುಡುಗಿಯರು ಅವಳ ಜೊತೆ ಕುಳಿತಿರುವಂತೆ ಒಬ್ಬೊಬ್ಬರನ್ನಾಗಿ ಅವರ ಸ್ನೇಹಿತರು ಅಥವ ಪ್ರೇಮಿಗಳು ಡ್ಯಾನ್ಸ್ ಮಾಡುವುದಕ್ಕಾಗಿ ಕರೆದುಕೊಂಡು ಹೋಗುತ್ತಾರೆ. ಹಾಡು ಮುಂದುವರಿದಿರುತ್ತದೆ. ಅವಳಿಗೆ ಕುಡಿಯುತ್ತಿದ್ದ ಜ್ಯೂಸ್ ಬಾಟಲಿಯೊಂದೇ ಸಂಗಾತಿ. ಅವಳು ಅದನ್ನು ಕುಡಿದು ಮುಗಿಸುವ ವೇಳೆಗೆ ಬೇಸರ ಮುತ್ತಿ ಬಾಟಲಿ ಕೆಳಗಿಟ್ಟು ಸಪ್ಪೆ ಮುಖದಿಂದ ಹೊರಡುತ್ತಾಳೆ.
ಅವಳ ಏಕತಾನತೆಯ ದೈನಂದಿನ ಬದುಕನ್ನು ಇತರ ದೃಶ್ಯರೂಪದಲ್ಲಿಯೂ ಕೌರಿಸ್ಮಕಿ ಮನದಟ್ಟು ಮಾಡುತ್ತಾನೆ. ಅವಳು ಅಷ್ಟುದ್ದದ ರಸ್ತೆಯಲ್ಲಿ ಒಬ್ಬಳೇ ಫುಟ್ ಪಾತ್‌ನಲ್ಲಿ ನಡೆಯುತ್ತಾಳೆ. ವಾಹನಗಳು ಕೂಡ ಚಲಿಸುತ್ತಿರುವುದಿಲ್ಲ. ಮನೆಗೆ ಹೋದರೆ ಅಡುಗೆ ಕೆಲಸಗಳನ್ನು ಮಾತಿಲ್ಲದೆ ಪೂರೈಸಿದ ನಂತರ ಯಾವ ರೀತಿಯಲ್ಲಿಯೂ ಪ್ರತಿಕ್ರಿಯಿಸದ ತಂದೆ-ತಾಯಿ ಟೇಬಲ್ಲಿಗೆ ಬಂದು ಊಟ ಮಾಡುತ್ತಾರಷ್ಟೆ. ಬಿಗಿದ ಮುಖಭಾವದ ಅವಳು ತನ್ನಲ್ಲಿಯೇ ಮುಳುಗಿ ಮಲಗುತ್ತಾಳೆ.
ಬದುಕಿನಲ್ಲಿ ಯಾವ ಬದಲಾವಣೆಯ ಸುಳಿವೂ ಇಲ್ಲದೆ ಪರಿತಪಿಸುತ್ತಿದ್ದ ಅವಳ ಬಗ್ಗೆ ಆ ರಾತ್ರಿ ಬಾರೊಂದರಲ್ಲಿ ಅವಳಿಗಿಂತ ಸಾಕಷ್ಟು ವರ್ಷ ವಯಸ್ಸಾದ ರನಿ ಆಸಕ್ತಿ ವ್ಯಕ್ತಪಡಿಸುತ್ತಾನೆ. ತನ್ನಿಂದ ಆಕರ್ಷಿತರಾಗುವವರು ಗಮನಿಸುವವರು ಇದ್ದಾರೆಂದು ಅವಳಲ್ಲಿ ಉತ್ಸಾಹ ಚಿಗುರುತ್ತದೆ. ಅವನ ಸೂಚನೆಗೆ ನಸು ನಕ್ಕು ಪ್ರತಿಕ್ರಿಯಿಸುತ್ತಾಳೆ. ಅವನನ್ನು ರೆಪ್ಪೆ ಮಿಟುಕಿದೆ ನೋಡುವುದಷ್ಟರಲ್ಲೆಯೇ ಸೀಮಿತವಾಗಿ ವ್ಯಕ್ತವಾಗುತ್ತದೆ. ನೀಳ ಕಾಯದ, ಉದ್ದ ಮುಖದ, ತುಂಬ ದೊಡ್ಡದಲ್ಲದ ಕಣ್ಣುಗಳನ್ನು ಕೊಂಚ ಅಗಲಿಸಿದ ಅಭಿನಯದಿಂದ ಇದು ವ್ಯಕ್ತವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಅವಳಲ್ಲಿ ಅನುರಾಗ ಹೊಂದಿದ ರನಿಯಲ್ಲಿ ಇಷ್ಟರ ಮಟ್ಟಿನ ಭಾವಾಭಿವ್ಯಕ್ತಿಯೂ ಕಾಣುವುದಿಲ್ಲ. ಅವನು ತಕ್ಷಣವೇ ತಲೆ ತಗ್ಗಿಸಿ ಸಂತೋಷಗೊಂಡವಳ ಬಳಿಗೆ ಬಂದು ಕುಳಿತು ಮುಂಗೈ ಸ್ಪರ್ಷಿಸಿ ಅವಳನ್ನು ಡ್ಯಾನ್ಸ್ ಮಾಡಲು ಕರೆದೊಯ್ಯುತ್ತಾನೆ. ಡ್ಯಾನ್ಸ್ ಮಾಡುವಾಗಲೂ ಅವನು ನಿರ್ಭಾವ ಪ್ರಕಟಿಸಿದರೆ ದಿಢೀರನೆ ತನ್ನ ಬಾಳು ನಂದನವನವಾಯಿತು ಎಂದು ಅವಳು ಪರಿಭಾವಿಸಿದಂತೆ ಕಾಣುತ್ತಾಳೆ. ತನ್ನಲ್ಲೇ ಐಕ್ಯಳಾದವಳಂತೆ ನಸು ನಗುತ್ತ ಸುಖಿಸುತ್ತಾಳೆ. ಇಡೀ ಚಿತ್ರದಲ್ಲಿ ನಾವು ಅವಳನ್ನು ಆ ರೀತಿ ಕಾಣುವುದು ಅದೇ ಮೊದಲು ಮತ್ತು ಅದೇ ಕೊನೆ.
ಅನಂತರ ಅವರು ಅವನ ಮನೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅವಳಿಗಿಂತ ಮುಂಚೆ ಎದ್ದು ಹೊರಡಲು ಸಿದ್ಧವಾದ ಅವನು ಇನ್ನು ಮಲಗಿದ್ದ ಅವಳ ತಲೆಯ ಬಳಿ ನೋಟೊಂದನ್ನು ಇಟ್ಟು ಹೋಗುತ್ತಾನೆ. ಮೊದಲ ಸಲ ನೋಟ್‌ಗೆ ಜೂ಼ಮ್ ಆಗಿ ಅದರ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಅನಂತರ ಎಚ್ಚರಗೊಳ್ಳುವ ಅವಳ ಮುಖದಲ್ಲಿ ಸಂತೃಪ್ತ ಭಾವ ವ್ಯಕ್ತವಾಗುವುದು ಅವರ ನಡುವಿನ ದೈಹಿಕ ಸಂಪರ್ಕದ ಪರಿಣಾಮವನ್ನು ತೋರಿಸುತ್ತದೆ. ಇದು ಆ ದಿನಕ್ಕಷ್ಟೇ ನಿಲ್ಲದೆ ಮುಂದುವರೆಯುತ್ತದೆ. ಅವನ ಜೊತೆಗಿನ ಸಂಬಂಧದಿಂದ ಅವಳಲ್ಲಿ ಗೆಲುವು, ಉತ್ಸಾಹ, ಚುರುಕುತನ ಉಂಟುಮಾಡುತ್ತದೆ. ಅವನು ತನ್ನನ್ನು ಪ್ರೇಮಿಸುತ್ತಾನೆ ಎಂದು ತಿಳಿಯುತ್ತಾಳೆ. ಬದುಕನ್ನು ಸಂಭ್ರಮಿಸುವುದಕ್ಕೆ ಪ್ರಾರಂಭಿಸುತ್ತಾಳೆ. ಆದರೆ ಅವನಿಂದ ಪ್ರತಿಕ್ರಿಯೆ ಇರುವುದಿಲ್ಲ.. ಹಾಗಾಗಿ ಅವನಿಗಾಗಿ ಕಾಯುತ್ತ ದಿನಗಳನ್ನು ಕಳೆಯುತ್ತಾಳೆ. ಅವಳು ಹೋದ ಹೋಟೆಲೊಂದರಲ್ಲಿ `ನಿನ್ನ ಸಂಗವೇ ನನಗೆ ಪ್ರಪಂಚ ಗೆಳತಿ.. ಅತಿ ಸುಂದರಿ ಅಲ್ಲದಿರಬಹುದು ನೀನು.. ನಿಗೂಢ ನೀನು. ನಿನ್ನ ನಗೆಗಿಲ್ಲ ಸಮಾನ. ನಿನ್ನ ಕಣ್ಣ ಹೊಳಪು ವಸಂತ.ʼ ಎಂಬ ಹಾಡನ್ನು ಒಬ್ಬಳೇ ಕೇಳಿಸಿಕೊಳ್ಳುತ್ತಾಳಷ್ಟೆ.
ತಮ್ಮ ನಡುವಿನ ಸಂಬಂಧವನ್ನು ಒಂದು ನೆಲೆಗೆ ತರುವುದಕ್ಕೆ ಅವನನ್ನು ಮನೆಗೆ ಆಹ್ವಾನಿಸುತ್ತಾಳೆ. ಮನೆಗೆ ಬಂದ ಅವನ ಜೊತೆ ಅವಳಾಗಲೀ ಅವಳ ತಂದೆ-ತಾಯಿಯಾಗಲೀ ಏನೂ ಮಾತನಾಡುವುದಿಲ್ಲ. ಅವಳ ತಂದೆ ತಾಯಿ ಕೊಂಚ ಆತಂಕದಲ್ಲಿರುವಂತೆ ತೋರುತ್ತದೆ. ಅನಂತರ ಐರಿಸ್ ಮತ್ತು ಅವನು ಹೊರಟು ಹೊಟೆಲ್‌ನಲ್ಲಿ ಕುಳಿತಾಗಲೂ ಅವಳು ಹರ್ಷದಿಂದಿರುತ್ತಾಳೆ. ಅವನು ʻನನ್ನ ಜೊತೆಗಿನ ಸಂಬಂಧ ಮುಂದುವರಿಸುವ ಆಲೋಚನೆ ಬಿಟ್ಟು ಬಿಡುʼ ಎಂದ ಕೂಡಲೆ ಉಗುಳು ನುಂಗಿ ಮತ್ತೆ ಅಲ್ಲಿಂದ ನಿರಾಶಳಾಗಿ ದಿಢೀರನೆದ್ದು ಹೋಗುತ್ತಾಳೆ.
ಅನಂತರ ಅವಳಿಗೆ ತಾನು ಗರ್ಭಿಣಿಯಾದ ಸಂಗತಿ ತಿಳಿಯುತ್ತದೆ. ಈ ಅತಿ ಮುಖ್ಯ ವಿಷಯ ಅವಳಿಗೆ ಗೊತ್ತಾಗುವ ಬಗೆಯನ್ನು ಕೌರಿಸ್ಮಕಿ ಅತಿ ಶೀಘ್ರವಾಗಿ ನಿರೂಪಿದ್ದಾನೆ. ಅದಕ್ಕೆ ಪ್ರತಿಕ್ರಿಯೆಯಾಗಿ ಅವಳು ರೆಪ್ಪೆಯಾಡಿಸದೆ ನೇರ ನೋಡುತ್ತಾಳೆ. ಅವಳ ಮುಖಚಹರೆ ಅನಿರೀಕ್ಷಿತ ಒತ್ತಡಕ್ಕೆ ಒಳಗಾದದ್ದನ್ನು ಸೂಚಿಸುತ್ತದೆ. ತಕ್ಷಣವೇ ಅವಳು ಅವಸರದಲ್ಲಿ ಹೊರಡುತ್ತಾಳೆ.
ಅವಳು ಅವನನ್ನು ಖುದ್ದಾಗಿ ಭೇಟಿಯಾಗಿ ತನ್ನ ಸ್ಥಿತಿಯನ್ನು ತಿಳಿಸಲು ಅವನ ಮನೆಗೆ ಹೋಗುತ್ತಾಳೆ. ಬೆಲ್ ಮಾಡಿದಾಗ ಹುಡುಗಿಯೊಬ್ಬಳು ಕಾಣಿಸಿಕೊಂಡು ಮುಂದೆ ಹೋಗುತ್ತಾಳೆ. ಅವಳು ಅವನೊಂದಿಗಿದ್ದಳು ಎನ್ನುವುದರ ಜೊತೆ ಹುಡುಗಿಯರನ್ನು ಬಳಸಿಕೊಳ್ಳುವ ಅವನ ನಡತೆ ಅವಳಿಗೆ ತಿಳಿಯುತ್ತದೆ. ಖಿನ್ನಳಾಗಿ ಮಾತಿಲ್ಲದೆ ಹಿಂತಿರುಗುತ್ತಾಳೆ. ಆದರೂ ಅವಳು ಸಂಪೂರ್ಣ ನಿರಾಶಳಾಗುವುದಿಲ್ಲ.
ತನ್ನ ಸ್ಥಿತಿಗೆ ಕಾರಣನಾದ ರನಿ ತನ್ನ ಬಗ್ಗೆ ಕಾಳಜಿ ಇಲ್ಲದಿದ್ದರೂ ಮತ್ತು ಹುಟ್ಟುವ ಮಗುವಿನ ಬಗ್ಗೆ ಉತ್ಸುಕನಾಗುವನೆಂದು ಭಾವಿಸುತ್ತಾಳೆ. ಅವನಿಗೆ ತನ್ನ ಸ್ಥಿತಿಯನ್ನು ತಿಳಿಸುವುದಕ್ಕೆ ತವಕಿಸುತ್ತಾಳೆ. ಪುನಃ ಅವನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾಳೆ. ತಾನು ಗರ್ಭಿಣಿಯಾದದ್ದನ್ನು ತಿಳಿಸಿ ತನ್ನನ್ನು ಪ್ರೀತಿಸದಿದ್ದರೂ ಸರಿಯೆ ಹುಟ್ಟಲಿರುವ ಮಗು ಹೆಣ್ಣಾದರೂ ಸರಿಯೆ, ಗಂಡಾದರೂ ಸರಿಯೆ ತಮ್ಮಿಬ್ಬರಿಗೆ ತರುವ ಸಂತೋಷದ ಬಗ್ಗೆ ದೀರ್ಘವಾಗಿ ಬರೆಯುತ್ತಾಳೆ. ಅವಳು ಕಾಗದ ಬರೆಯುವುದನ್ನು ಹಲವು ಸೆಕೆಂಡ್‌ಗಳಷ್ಟು ದೀರ್ಘವಾಗಿ ಕ್ಲೋಸ್‌ನಲ್ಲಿ ಚಿತ್ರಿಸುತ್ತಾನೆ ಕೌರಿಸ್ಮಕಿ. ಅವನ ಆಫೀಸಿಗೆ ಹೋಗಿ ತವಕದಿಂದ ಕಾಯುತ್ತ ಕುಳಿತುಕೊಳ್ಳುತ್ತಾಳೆ. ಅನಂತರ ಕಾಣಿಸಿಕೊಂಡು ಏನೆಂದು ಮುಖಭಾವದಿಂದ ಪ್ರಶ್ನಿಸುವ ಅವನಿಗೆ ಪತ್ರವನ್ನು ಕೊಡುತ್ತಾಳೆ. ಕಾತರದಿಂದ ಉತ್ತರಕ್ಕೆ ಕಾಯುತ್ತಾಳೆ.
ಅವನಿಂದ ಉತ್ತರ ಬರುತ್ತದೆ. ಇದನ್ನು ನಿರೂಪಿಸುವ ದೃಶ್ಯದಲ್ಲಿ ಮೊದಲು ಕವರ್ ಬೀಳುತ್ತದೆ. ಐರಿಸ್ ಅದನ್ನು ತೆಗೆದುಕೊಂಡು ಅಂಚು ಹರಿಯುತ್ತಾಳೆ. ಅದರೊಳಗೆ ಕಾಗದ ಹಾಗೂ ಮತ್ತೊಂದಿರುತ್ತದೆ. ಅನಂತರ ಕ್ಲೋಸ್‌ನಲ್ಲಿ ಕಾಗದದ ಕಡೆ ಕಣ್ಣು ಹಾಯಿಸುತ್ತಾಳೆ. ಗಂಭೀರಳಾದ ಅವಳ ತುಟಿಗಳು ಕೆಲವು ಕ್ಷಣ ಕಂಪಿಸುತ್ತವೆ. ಕಾಗದದಲ್ಲಿ ಏನು ಬರೆದಿದೆ ಎಂದು ಗೊತ್ತಾಗುವುದು ಅವಳ ತಾಯಿ ಆ ಕಾಗದದಲ್ಲಿ ಬರೆದಿರುವುದನ್ನು ನೋಡುವಾಗ. ಅದರಲ್ಲಿ `ಆ ಅನಿಷ್ಠವನ್ನು ತೆಗೆಸಿಬಿಡು’ ಎಂಬ ಬರಹ ಮತ್ತು ದುಡ್ಡಿನ ಚೆಕ್ ಕೂಡ ಜೊತೆಗಿರುತ್ತದೆ. ಅವಳು ತಕ್ಷಣ ಹೊರಗೆದ್ದು ಹೋಗುತ್ತಾಳೆ. ಕತ್ತಲ ದಾರಿಯಲ್ಲಿ ಒಬ್ಬಂಟಿ ನಡೆಯುವಾಗ ಒಂದು ಕಡೆ ಅಲ್ಲಲ್ಲಿ ಪ್ಲಾಸ್ಟರಿಂಗ್ ಕಿತ್ತು ಹೋದ ಗೋಡೆ ಅವಳ ಛಿದ್ರವಾದ ಮನಸ್ಥಿತಿಗೆ ರೂಪಕವಾಗುತ್ತದೆ.
ಅವಳು ಗರ್ಭಿಣಿಯಾಗಿರುವುದು ಅವಳ ತಂದೆ-ತಾಯಿಗೆ ಗೊತ್ತಾಗುತ್ತದೆ. ಅವಳ ತಂದೆ ಗಡಸು ಮುಖದಿಂದ ʻನಿನ್ನ ತಾಯಿಗೆ ನೀನು ತುಂಬ ತೊಂದರೆ ಕೊಟ್ಟಿದ್ದೀಯʼ ಎಂದು ಹೇಳಿ, ʻಬೇರೆ ಮನೆ ಮಾಡಿಕೋʼ ಎನ್ನುತ್ತಾನೆ. ಅವಳು ಅದನ್ನು ನಿರ್ಭಾವದಿಂದ ಸ್ವೀಕರಿಸುತ್ತಾಳೆ. ತಂದೆ ತಾಯಿಯ ಸಂಬಂಧ ಕಳಚಿ ಬಿತ್ತು ಎಂದು ಭಾವಿಸಿ ಅವರ ಕಡೆ ಒಂದು ಸಲವೂ ನೋಡದೆ ಬೇರೆ ಫ್ಲಾಟ್‌ಗೆ ಹೋಗುತ್ತಾಳೆ.
ಅವಳಿಗೆ ಅವನಿಂದ ವಂಚಿತಳಾಗಿರುವುದು ಸ್ಪಷ್ಟವಾಗುತ್ತದೆ. ತನ್ನ ಬದುಕು ನುಚ್ಚುನೂರಾಗಿ ಭವಿಷ್ಯ ಸೊನ್ನೆ ಮತ್ತು ನಿರರ್ಥಕ ಎನಿಸುತ್ತದೆ. ಇವೆಲ್ಲವೂ ಸೇರಿ ಅವಳು ತೆಗೆದುಕೊಳ್ಳುವುದು ಅತ್ಯಂತ ಕಠೋರ ಮತ್ತು ನೂರಕ್ಕೆ ನೂರು ನಿರಾಸೆಯಿಂದ ಪ್ರೇರಿತವಾದ ನಿರ್ಧಾರ. ತಂದೆ-ತಾಯಿಯ ಪ್ರೀತಿ, ತನ್ನವನೆನಿಸಿದವನ ಪ್ರೀತಿ ಇವು ಯಾವುದೂ ತನಗೆ ದಕ್ಕಲಿಲ್ಲವೆಂದು ಅವಳಿಗೆ ಮನದಟ್ಟಾಗುತ್ತದೆ. ಇದರಿಂದ ಅತ್ಯಂತ ರೋಷಗೊಂಡು ಇಡೀ ಜಗತ್ತಿನ ಮೇಲೆ ಸೇಡು ತೀರಿಸಿಕೊಳ್ಳಲು ಕಣ್ಣು ಮಿಟುಕಿಸದೆ ಎತ್ತಲೋ ನೋಡಿಯೂ ನೋಡದಂತೆ ಸುಮ್ಮನೆ ಕುಳಿತು ತಾನು ಮಾಡುವುದನ್ನು ಕುರಿತು ನಿರ್ಧರಿಸುತ್ತಾಳೆ. ಆ ಅವಧಿಯಲ್ಲಿ ಅವಳ ತುಟಿಗಳು ಸ್ವಲ್ಪ ಹೆಚ್ಚಿಗೆ ಕಂಪಿಸುತ್ತವೆ.
ಅನಂತರ ಗಂಭೀರವಾಗಿ ಎದ್ದು ಹೊರಟ ಅವಳು ನೇರವಾಗಿ ಅಂಗಡಿಗೆ ಹೋಗಿ ಇಲಿ ಪಾಷಾಣವನ್ನು ಖರೀದಿಸುತ್ತಾಳೆ. ಪಾಕೆಟ್ ಒಡೆದು ಸ್ವಲ್ಪ ಪುಡಿಯನ್ನು ನೀರಿರುವ ಬಾಟಲ್‌ಗೆ ಹಾಕಿ ಬೆರೆಸುತ್ತಾಳೆ. ಅದನ್ನು ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟುಕೊಂಡು ಅವನ ಮನೆಗೆ ಹೋಗುತ್ತಾಳೆ. ಅವಳನ್ನು ಕಂಡು ಅವನಿಗೆ ಆಶ್ಚರ್ಯವಾಗುವುದಿಲ್ಲ. ಅವನು ಇದೆಲ್ಲ ಸಹಜವೆನ್ನುವಂತೆ ಎಂದಿನಂತೆ ಮಾತಿಲ್ಲದೆ ಅವಳನ್ನು ಬರಮಾಡಿಕೊಳ್ಳುತ್ತಾನೆ. ಅವರು ಸೋಫಾದಲ್ಲಿ ಕುಳಿತುಕೊಳ್ಳುತ್ತಾರೆ. ಅವಳು ಅವನನ್ನು ಕಣ್ಣೆತ್ತಿಯೂ ನೋಡುವುದಿಲ್ಲ. `ಡ್ರಿಂಕ್ಸ್’ ಎಂದು ಹೇಳುತ್ತ ಎದ್ದು ಇಬ್ಬರಿಗೂ ಒಂದೊಂದು ಗ್ಲಾಸ್‌ನಲ್ಲಿ ತಂದಿಡುತ್ತಾನೆ. ಅವಳು `ಐಸ್’ ಎನ್ನುತ್ತಾಳೆ. ಅದನ್ನು ತರುವುದಕ್ಕೆ ಅವನು ಎದ್ದು ಹೋಗುತ್ತಾನೆ. ತಕ್ಷಣವೇ ಅವಳು ವ್ಯಾನಿಟಿ ಬ್ಯಾಗ್‌ನಿಂದ ಬಾಟಲಿ ತೆಗೆದು ಅವನ ಗ್ಲಾಸ್‌ಗೆ ಒಂದಷ್ಟು ಇಲಿ ಪಾಷಣ ಬೆರೆಸಿದ ನೀರನ್ನು ಹಾಕಿ ಅದನ್ನು ಒಳಗಿಟ್ಟುಕೊಳ್ಳುತ್ತಾಳೆ. ಅವನು ಐಸ್ ಕ್ಯೂಬ್‌ಗಳನ್ನು ತಂದು ಅವಳ ಗ್ಲಾಸ್‌ಗೆ ಹಾಕುತ್ತಾನೆ. ಅನಂತರ ಅವಳು ಸಮಯ ವ್ಯರ್ಥ ಮಾಡದೆ ಗುಡ್ ಬೈ ಹೇಳಿ ಹೊರಡುತ್ತಾಳೆ. ಅವನು ತನ್ನ ಗ್ಲಾಸ್ ಎತ್ತಿಕೊಳ್ಳುತ್ತಾನೆ. ಈ ದೃಶ್ಯದಲ್ಲಿ ಅವಳು ಇಲಿ ಪಾಷಾಣ ಬೆರೆಸುವುದು ಮಾತ್ರ ಕ್ಲೋಸ್‌ನಲ್ಲಿದ್ದು ಉಳಿದದ್ದೆಲ್ಲ ಮಿಡ್ ಶಾಟ್‌ನಲ್ಲಿವೆ. ಗಂಡಸಿನ ಬಗ್ಗೆಯೇ ಎಂಥ ದ್ವೇಷ, ಜಿಗುಪ್ಸೆಯ ನಿಲುವು ತಾಳುತ್ತಾಳೆಂದರೆ ನಂತರ ಸ್ವಲ್ಪ ಸಮಯದಲ್ಲಿಯೇ ಬಾರೊಂದರಲ್ಲಿ ದಿಢೀರನೆ ತನ್ನ ಬಗ್ಗೆ ಆಸಕ್ತಿ ತೋರಿಸಿ ಬಂದು ಕುಳಿತ ಮತ್ತೊಬ್ಬ ಗಂಡಸಿಗೂ ಹಾಗೆಯೇ ಮಾಡುತ್ತಾಳೆ. ತಕ್ಷಣ ಅಲ್ಲಿಂದ ಏಳುವ ಅವಳು ಯಾವ ಭಾವನೆಯನ್ನೂ ವ್ಯಕ್ತಪಡಿಸುವುದಿಲ್ಲ.
ಈ ವೇಳೆಗೆ ತನಗೆ ಎದುರಾಗಲಿರುವ ಸಮಸ್ಯೆಯನ್ನು ಅರಿತು ಪೂರೈಸಬೇಕಾದ ಕೆಲಸಕ್ಕೆಂದು ತಂದೆ-ತಾಯಿ ಇರುವ ಮನೆಗೆ ಹೋಗುತ್ತಾಳೆ. ಅನಂತರ ಅವಳು ಕೈಗೊಳ್ಳುವ ಕ್ರಮ ಅತಿರೇಕ ಹಾಗೂ ಸಮಸ್ಥಿತಿ ಕಳೆದುಕೊಂಡ ವರ್ತನೆ ಎನ್ನಿಸುತ್ತದೆ. ಎಂದಿನಂತೆ ಊಟ ಸಿದ್ಧಪಡಿಸುವ ಅವಳು ಕುಡಿಯಲಿರುವ ನೀರಿನ ಬಾಟಲಿಯಲ್ಲಿ ತಾನು ತಂದಿದ್ದ ಇಲಿ ಪಾಷಣದ ನೀರು ಬೆರೆಸುತ್ತಾಳೆ. ಅದನ್ನು ಅರಿಯದ ಅವರು ಊಟ ಮಾಡಲು ಹೋಗುತ್ತಾರೆ.
ಇತರ ಚಿತ್ರಗಳಲ್ಲಿರುವಂತೆ ಈ ಚಿತ್ರದಲ್ಲಿಯೂ ಹಿನ್ನೆಲೆ ಸಂಗೀತ ಹಾಗೂ ಶಬ್ದಗಳ ಅಗತ್ಯವೇ ಇಲ್ಲವೆಂದು ಭಾವಿಸಿದ್ದಾನೆಂದು ತೋರುವಷ್ಟು ಅವುಗಳ ಬಳಕೆ ಕಡಿಮೆ. ಕೌರಿಸ್ಮಕಿಯ ಚಿತ್ರಗಳ ಯಶಸ್ಸಿಗೆ ಹೆಚ್ಚಿನ ಚಿತ್ರಗಳ ಫೋಟೋಗ್ರಾಫರ್ ಟಿನೋ ಸಾಲ್ಮಿನೆನ್‌ನ ಕೊಡುಗೆ ನಿಜಕ್ಕೂ ಅಪಾರ ಮತ್ತು ಬಹುತೇಕ ಚಿತ್ರಗಳ ನಾಯಕಿ ಕಟಿ ಓಟಿನೆನ್.
ಕೌರಸ್ಮಿಕಿಯನ್ನು ಒಳಗೊಂಡ ಇನ್ನೊಂದು ಸಂದರ್ಭವನ್ನು ತಿಳಿದರೆ ಅವನ ವಿಶೇಷತೆ ಹೆಚ್ಚು ಮನದಟ್ಟಾಗುತ್ತದೆ. ಅದಾದದ್ದು 2007ರಲ್ಲಿ. ಕಾನ್‌ನ ಅರವತ್ತನೇ ಚಿತ್ರೋತ್ಸವವದ ಸಂದಭದದಲ್ಲಿ. ಚಿತ್ರೋತ್ಸವದ ವ್ಯವಸ್ಥಾಪಕರು ಅವನಿಗೆ ಉತ್ಸವದ ಆಚರಣೆಗಾಗಿ ಕೆಲವು ಪ್ರಖ್ಯಾತ ನಿರ್ದೇಶಕರಿಗೆ ಸಿನಿಮಾ ಥಿಯೇಟರುಗಳನ್ನು ಕುರಿತು ಮೂರು ನಿಮಿಷದ ಸಿನಿಮಾ ಮಾಡುವುದಕ್ಕೆ ಕೇಳಿಕೊಂಡರು. ಅದಕ್ಕಾಗಿ ಕೌರಿಸ್ಮಕಿಯ `ಲಾ ಫಾಂಡೆರಿ’ ಬೆಗುಗೊಳಿಸುವಂತಿತ್ತು. ಶಿಫ್ಟ್ ಮುಗಿದ ಫೌಡರಿ ಫ್ಯಾಕ್ಟರಿಯ ಕಾರ್ಮಿಕರು, ಮಾತಿಲ್ಲದೆ ಬಟ್ಟೆ ಕಳಚಿ ಲಾಕರನಲ್ಲಿಟ್ಟು ಹೊರಗೆ ನಡೆದು ಥಿಯೇಟರೊಂದರಲ್ಲಿ ಸಿನಿಮಾ ನೋಡಲು ಕುಳಿತುಕೊಳ್ಳುತ್ತಾರೆ. ಪ್ರೊಜೆಕ್ಟರ್‌ನಿಂದ ಬೆಳಕು ಹೊಮ್ಮುತ್ತದೆ. ಪರದೆಯ ಮೇಲೆ ಲೂಮಿರಿ ಸೋದರರು 1895ರಲ್ಲಿ ನಿರ್ಮಿಸಿದ ಸಾರ್ವಜನಿಕರಿಗಾಗಿ ಮೊಟ್ಟಮೊದಲು ಪ್ರದರ್ಶನಗೊಂಡ ಒಂದೇ ಚಿತ್ರಿಕೆಯ(ಸಿಂಗಲ್ ಶಾಟ್) ಚಿತ್ರದಲ್ಲಿ ಕೆಲಸದ ನಂತರ ಕಾರ್ಮಿಕರ ಗುಂಪು ಲಗುಬಗೆಯಿಂದ ಫ್ಯಾಕ್ಟರಿಯ ಗೇಟ್‌ನಿಂದ ಹೊರಗೆ ಹೋಗುವ ಚಿತ್ರ ಕಾಣಿಸುತ್ತದೆ. ಈ ಚಿತ್ರ ನೋಡುತ್ತ ಕುಳಿತವರು ಖುಷಿಯಿಂದ ನಗುತ್ತಾರೆ. ಇದಾದ ನಂತರದ ದಶಕದಲ್ಲಿ ಸಾಕಷ್ಟು ಚಟುವಿಕೆಯಿಂದಿದ್ದ ಕೌರಿಸ್ಮಕಿ ʻಲಾ ಹಾವ್ರೆ, ʻದ ಅದರ್ ಸೈಡ್ ಆಫ್ ಹೋಪ್ʼ, ʻಬ್ಯಾಡ್ ಫ್ಯಾಮಿಲಿʼ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾನೆ ಆದರೆ 2017ರ ʻದ ಅದರ್ ಸೈಡ್ ಆಫ್ ಶಾಡೋʼ ನಂತರ ಇನ್ನು ಚಿತ್ರ ನಿರ್ದೇಶನ ಮಾಡುವುದಿಲ್ಲ ಎನ್ನುವ ಅವನ ಹೇಳಿಕೆಗೆ ಕಾರಣಗಳು ತಿಳಿದಿಲ್ಲ. ಇದೇನಿದ್ದರೂ ಸರಿಯೆ ಅವನಲ್ಲಿ ಅಂತರಂಗದ ಶಕ್ತಿ ಹಾಗಾಗುವುದಕ್ಕೆ ಬಿಡುತ್ತದೆಯೋ ಇಲ್ಲವೋ ಕಾದು ನೋಡಬೇಕು.
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.