Advertisement
‘ನಾನು ಮೆಚ್ಚಿದ ನನ್ನ ಕಥೆ’: ಅಜಯ್‌ ವರ್ಮಾ ಅಲ್ಲುರಿ ಬರೆದ ಕಥೆ

‘ನಾನು ಮೆಚ್ಚಿದ ನನ್ನ ಕಥೆ’: ಅಜಯ್‌ ವರ್ಮಾ ಅಲ್ಲುರಿ ಬರೆದ ಕಥೆ

ಪೌಲ್ ಆ ಕಿಟಕಿಯನ್ನೇ ನೋಡುತ್ತಾ ಹೊರಬಂದ. ಅಡುಗೆ ಮನೆಯ ಗೋಡೆಗೆ ಅಂಟಿಕೊಂಡೇ ದೇವರಕೋಣೆಯಿತ್ತು. ಅವನೇ ಬಾಗಿಲು ತಗೆದು ಒಳಗೆ ನಡೆದ ಅದು ಅಡುಗೆ ಮನೆಗಿಂತಲೂ ಚಿಕ್ಕದಾದ ಕೋಣೆ ತುಂಬಾ ಧೂಳು ಹಿಡಿದಿತ್ತು. ಕೋಣೆಯ ನಟ್ಟನಡುವೆ ಏಸುವಿನ ಶಿಲುಬೆಯಿತ್ತು. ಸುತ್ತಲೂ ಗೋಡೆಯ ಮೇಲೆ ಹಿಂದೂ ದೇವರುಗಳ ಪಟಗಳಿದ್ದವು. ಶಿಲುಬೆಯ ಒಂದು ಕೈಗೆ ಜೇಡರ ಬಲೆ ನೇಯ್ದುಕೊಂಡಿತ್ತು. ದೇವರ ಪಟಗಳ ಮೇಲಿನ ಕುಂಕುಮ ಬೊಟ್ಟುಗಳು ಕಪ್ಪು ಬಣ್ಣಕ್ಕೆ ತಿರುಗಿದವು.
‘ನಾನು ಮೆಚ್ಚಿದ ನನ್ನ ಕಥೆ’ ಕಥಾಸರಣಿಯಲ್ಲಿ ಅಜಯ್‌ ವರ್ಮಾ ಅಲ್ಲುರಿ ಬರೆದ ಕಥೆ ‘ಕುಲುಮೆ’

 

ನಿದ್ರೆಯ ಮಂಪರಿನಲ್ಲಿ ಯಾವುದೋ ಅಸ್ಪಷ್ಟ ಸದ್ದು. ನೆನ್ನೆ ತಡರಾತ್ರಿಯಲ್ಲಿ ಓದುತ್ತಿದ್ದ ಇಂಗ್ಲಿಷ್ ಕಾದಂಬರಿಯ ಪುಟಗಳು ಫ್ಯಾನ್ ಗಾಳಿಗೆ ಟೇಬಲ್ಲಿನ ಮೇಲೆ ಪಟಪಟಿಸುತ್ತಿರಬೇಕು. ಅದೇ ಸದ್ದು ಎಂದುಕೊಂಡು ಹಾಯಾಗಿ ಮಲಗಿದ್ದ ನನ್ನನ್ನು ಮತ್ತೊಂದು ಸದ್ದು ಥಟ್ಟನೆ ಎಚ್ಚರಿಸಿತು.

ಅದಾವ ಸದ್ದು?

ಬಿಡುವಿರದೆ ಝಣಗುಡುತ್ತಿರುವ ಕಾಲಿಂಗ್ ಬೆಲ್ಲಿನ ಸದ್ದು. ಹೌದು! ಇನ್ನೂ ಝಣಗುಡುತ್ತಲಿದೆ. ಬೇಸರದಿಂದ ಮುಸುಕು ಸರಿಸಿ ಎದ್ದು ಕುಳಿತಾಗ ಗಡಿಯಾರದ ಚಿಕ್ಕ ಮುಳ್ಳು ನೋಡುತ್ತಿತ್ತು. ದೊಡ್ಡ ಮುಳ್ಳಿನ ಕಡೆಗೆ ಗಮನ ಕೊಡದೆ ಲಗುಬಗೆಯಿಂದ ಮೇನ್ ಡೋರಿನತ್ತ ನಡೆದೆ. ಅಗಣಿ ಸರಿಸಿ ಬಾಗಿಲು ತೆರೆದೆ.

ಯಾರೂ ಕಾಣಲಿಲ್ಲ ಕಾಂಪೌಂಡಿನೊಳಗಡೆ ಯಾರೋ ಬಂದ್ದಿದ್ದಾರೆಂಬ ಸುಳಿವೂ ಇರಲಿಲ್ಲ. ಮೇನ್ ಡೋರಿನ ಬುಡಕ್ಕೆ ಅಂಟಿಕೊಂಡಿರುವ ಎರಡು ಮೆಟ್ಟಿಲುಗಳು ನಿದ್ರೆಯಲ್ಲಿ ಜೋಗುತ್ತಿದ್ದವು. ನನ್ನ ಕಂಗಳಲ್ಲಿಯ ಮಸುಕು ಅವುಗಳ ಮೇಲೂ ಆವರಿಸಿರಬೇಕು. ಮೃದುವಾಗಿ ಆ ಮೆಟ್ಟಿಲುಗಳ ಮೇಲೆ ಕಾಲೂರಿ ಅವುಗಳ ಎಚ್ಚರಿಸಿ ಹೊರಬಂದೆ. ಎಡಬದಿಯ ಕೈದೋಟ ಅನಾಥವಾಗಿಯೇ ಇತ್ತು. ಎಂದಿನಂತೆಯೇ ಸ್ತಬ್ದ ವಾತಾವರಣ. ಈ ಬದಿಗೆ ತಿರುಗಿ ನೋಡಲು ಪರಮಾಶ್ಚರ್ಯ ಕಾದಿತ್ತು. ಹೌದು! ನಿಜಕ್ಕೂ ಪರಮಾಶ್ಚರ್ಯ.

ಬಲ ಬದಿಯ ಸ್ಟೇರ್‍ಕೇಸಿನ ಬಳಿ ಅವನು ನಿಂತ್ತಿದ್ದ. ಹೌದು! ಇವನು ಅವನೇ. ಯಾವುದೇ ಸಂಶಯವಿಲ್ಲ. ಹದಿನೈದು ವರ್ಷಗಳ ಹಿಂದೆ ಆ ಮನೆ ಬಿಟ್ಟು ಹೋಗಿ ಮತ್ತೆ ಯಾವ ಗಾಳಿಗೋ ಇತ್ತ ತೇಲಿ ಬಂದಿದ್ದಾನೆ. ಅವೇ ಗುಂಗುರು ಕೂದಲು ಮಿಂಚಿನಂತಹ ಕಣ್ಣುಗಳು, ಪ್ರಸನ್ನವಾದ ಮುಖಛಾಯೆ ನೋ ಡೌಟ್. ಇವನು ಜಾನ್ ಪೌಲ್. ನನ್ನ ಹೆಂಡತಿ ಲೋರಾಳ ತಮ್ಮ. ಲೋರಾಳ ಆಲ್ಬಮ್ಮಿನಲ್ಲಿ ಇವನ ಅನೇಕ ಫೋಟೋಗಳಿವೆ. ಈಗ ಪೌಲ್ ನೋಡಲು ತುಂಬಾ ಸಭ್ಯಸ್ತನಂತೆ ಕಾಣುತ್ತಿದ್ದಾನೆ. ಅವನ ಕಂಗಳಲ್ಲಿ ಕಾತರವಿದೆ, ದುಃಖವಿದೆ, ನೋವಿನ ವಕ್ರರೇಖೆಗಳನ್ನೆಲ್ಲಾ ಸರಳ ರೇಖೆಗಳನ್ನಾಗಿಸಿಕೊಂಡು ಅವನು ಇಲ್ಲಿಗೆ ಬಂದಂತೆ ತೋರುತ್ತಿದೆ. ನಾನು ಪ್ರೀತಿಯಿಂದ ಅವನನ್ನು ಉಪಚರಿಸುವುದರೊಳಗೆ ಅವನೇ ಮಾತಿಗಿಳಿದ.

“ತಾವು ವಸಂತ್ ಕುಲಕರ್ಣಿ ಆಗದಿದ್ದಲ್ಲಿ ನನ್ನ ಕ್ಷಮಿಸಬೇಕು” ಎಂದು ಹೇಳಿ ಹೆಪ್ಪುಗಟ್ಟಿದ ಮೌನವನ್ನು ಕರಗಿಸಿದ “ಹೌದು! ನಾನು ವಸಂತ್, ಒಳಗೆ ಬಾ ಪೌಲ್” ಎಂದೆ. ತನ್ನ ಹೆಸರು ನನಗದೇಗೆ ತಿಳಿಯಿತು ಎಂದು ಅವನಿಗೆ ಆಶ್ಚರ್ಯ “ನೀನು ಯಾರೆಂದೂ ಸಹ ನನಗೆ ಗೊತ್ತು, ಒಳಗೆ ಬಾ ಪೌಲ್” ಎಂದು ಹೇಳಿ ಅವನ ಕೈ ಹಿಡಿದು ಒಳಗೆ ಕರೆದೋಯ್ದೆ. ನಡುಮನೆಯ ನಟ್ಟನಡುವಿನ ಸೋಫಾ ಮೇಲೆ ಕೂಡಿಸಿದೆ. ಇಷ್ಟು ದಿನ ಈ ಏಕಾಂಗಿಯೊಬ್ಬನನ್ನೇ ನೋಡುತ್ತಿದ್ದ ಈ ಮಾಸಿದ ಗೋಡೆಗಳು ಈಗ ಪೌಲ್‍ ನನ್ನು ತದೇಕ ಚಿತ್ತದಿಂದ ನೋಡ ತೊಡಗಿದವು.

“ಪೌಲ್, ಕುಡಿಯಲು ನೀರು ತರಲೇ?” ಕೇಳಿದೆ. ಆದರೆ ಅವನ ಬಾಯಿಂದ ಮಾತು ಹೊರಡಲೇ ಇಲ್ಲ. ಬೇಡವೆಂದು ಮುಖಸನ್ನೆ ಮಾಡಿದ. ಏನೋ ಯೋಚಿಸುತಲಿದ್ದ. ಅವನ ಕಂಗಳು ನಾಲ್ಕೂ ಗೋಡೆಗಳತ್ತ ಹೊರಳಾಡುತ್ತಿದ್ದವು. ಏನನ್ನೋ ಹುಡುಕುತ್ತಿದ್ದವು.

“ಏನಾಯಿತು ಪೌಲ್? ಏನು ಹುಡುಕುತ್ತಿರುವಿ?” ಅವನನ್ನು ಪ್ರಶ್ನಿಸಿದೆ. “ನನ್ನಕ್ಕ ಲೋರಾಳ ಫೋಟೋಗಳಿಗಾಗಿ” ಎಂದು ಸಣ್ಣದನಿಯಲ್ಲಿ ಹೇಳಿದ.

ಅವನ ಈ ಉತ್ತರಕ್ಕೆ ನಾನು ಏನೂ ಮಾತನಾಡಲಿಲ್ಲ ಇಬ್ಬರ ನಡುವೆಯೂ ಮೌನದ ಪರದೆ ಜಾರಿತ್ತು. ಪೌಲ್‍ ನೇ ಆ ಪರದೆಯನ್ನು ಸರಿಸಿದ.
“ಲೋರಾ ತೀರಿಹೋದ ವಿಷಯ ನಿನ್ನೆಯಷ್ಟೇ ಸೇಂಟ್ ಪೀಟರ್ ಅವರ ಮೂಲಕ ನನಗೆ ತಿಳಿಯಿತು.” ಎಂದ.

“ಇಲ್ಲ ಪೌಲ್! ಅವಳು ಸಾಯಲಿಲ್ಲ. ನನ್ನೆದೆಯ ಮಸಣದೊಳಗೆ ಜೀವಂತವಾಗಿದ್ದಾಳೆ” ಎಂದು ತಗ್ಗಿದ ದನಿಯಲ್ಲಿ ಹೇಳಿದೆ.

ಮತ್ತೆ ಮೌನ ಆವರಿಸಿತು. ಲೋರಾಳ ಫೋಟೋಗಳಿಗಾಗಿ ತಡಕಾಡುತ್ತಿದ್ದ. ಪೌಲ್‍ ನ ಕಂಗಳು ಈಗ ನಿಶ್ಚಲ ನೆಲವನ್ನು ನೋಡತೊಡಗಿದವು. ಲೋರಾ ಮರಣಿಸಿದ್ದಾಳೆ. ಇದು ನಿನ್ನೆ ಮೊನ್ನೆಯ ಸುದ್ದಿಯಲ್ಲ. ಅವಳು ಗತಿಸಿ ಹತ್ತು ವರ್ಷಗಳು ಉರುಳಿದವು. ಈಗ ಲೋರಾ ಬರೀ ನೆನಪು.

ನೆಲಕ್ಕಂಟಿದ ಪೌಲ್‍ ನ ದೃಷ್ಟಿ ಮತ್ತೆ ನನ್ನತ್ತ ಹೊರಳಿತು.

“ನನ್ನ ತಂದೆ-ತಾಯಿಯೂ ಸಹ ತೀರಿಹೋಗಿದ್ದಾರೆಂದು ಪೀಟರ್‍ರವರು ಹೇಳಿದ್ದಾರೆ. ಈ ವಿಷಯವಂತೂ ನನ್ನನ್ನು ತುಂಬಾ ಬಾಧಿಸುತ್ತಿದೆ” ಪೌಲ್ ಹನಿಗಣ್ಣನಾದ.

“ಹೌದು! ನೀನು ಮನೆ ಬಿಟ್ಟು ಹೋದ ಮೇಲೆ ನಿಮ್ಮ ತಾಯಿಗೆ ವಿಪರೀತ ಕಾಯಿಲೆಯಾಗಿತ್ತು. ಹಾಸಿಗೆ ಹಿಡಿದಿದ್ದರು. ಪದೇ ಪದೇ ನಿನ್ನ ಹೆಸರನ್ನೇ ನೆನಸುತ್ತಿದ್ದರು. ಮುಂಬೈನ ಆಸ್ಪತ್ರೆಯಲ್ಲಿ ನಿಮ್ಮ ತಾಯಿಯನ್ನು ಸೇರಿಸಲಾಯಿತು. ಅವರ ಕಾಯಿಲೆಯ ಎದುರು ವೈದ್ಯರೆಲ್ಲಾ ಸೋತರು. ಸ್ಪೆಶಲಿಸ್ಟ್‌ ಗಳೂ ಸಹ ತಲೆಗೆ ಕೈ ಹೊತ್ತು ಕೂರಬೇಕಾದ ಪರಿಸ್ಥಿತಿ ಉಂಟಾಯಿತು. ವೈದ್ಯರಿಗೆಲ್ಲಾ ನಿಮ್ಮ ತಾಯಿಯ ಕಾಯಿಲೆ ಒಂದು ಸ್ಪೆಶಲ್ ಕೇಸ್ ಆಯಿತು. ದಿನ ದಿನಕ್ಕೂ ನಿಮ್ಮ ತಾಯಿಯ ಬಾಡಿ ಫಂಕ್ಷನಿಂಗ್ ಮೆಕಾನಿಜಮ್ ಹಾಳಾಗುತ್ತಿತ್ತು. ಈ ಸ್ಥಿತಿಯಲ್ಲಿ ಪೇಷೆಂಟಿನ ಜೀವ ಉಳಿಸುವುದು ಕಷ್ಟ ಎಂದು ವೈದ್ಯರು ಕೈ ಬಿಟ್ಟರು. ಅಂತಹ ಸ್ಥಿತಿಯಲ್ಲಿ ನಿಮ್ಮ ತಾಯಿಯ ತುಟಿಗಳ ಮೇಲೆ ನಿನ್ನ ಹೆಸರೇ ಅನುರಣಿಸುತ್ತಿತ್ತು. ನಿನ್ನನ್ನು ಕರೆತಂದಾಗಲಾದರೂ ಯಾವುದಾದರೂ ಸುಧಾರಣೆಯಾಗಬಹುದೆಂದುಕೊಂಡು ನಿಮ್ಮ ತಂದೆ ಮತ್ತು ಇನ್ನಿತರ ಬಂಧುಗಳ ಸೇರಿ ನಿನ್ನನ್ನು ಬಹಳಷ್ಟು ಹುಡುಕಿದರು. ನೀನು ಮನೆ ಬಿಟ್ಟು ಹೋದಾಗ ಹುಡುಕಿದಕ್ಕಿಂತ್ತಲೂ ಹೆಚ್ಚಾಗಿ, ಆದರೆ ನೀನು ಸಿಗಲೇಯಿಲ್ಲ; ನಿಮ್ಮ ತಾಯಿಯ ಪ್ರಾಣವು ಉಳಿಯಲಿಲ್ಲ” ಪೌಲನ ಮಿಂಚುಗಣ್ಣುಗಳಿಂದ ಕಣ್ಣೀರ ಹನಿಗಳು ಒಂದೊಂದಾಗಿಯೇ ಸುರಿಯತೊಡಗಿದವು. ನಾನು ನನ್ನ ಮಾತಿಗೆ ವಿರಾಮ ಕೊಡಬೇಕೆಂದುಕೊಂಡರೂ ನನ್ನ ಪರಿವೆಯೇ ಇಲ್ಲದಂತೆ ಅದು ಮುಂದುವರೆಯಿತು.

“ನಿನ್ನ ತಾಯಿ ತೀರಿಕೊಂಡ ಮೇಲೆ ತಂದೆಗೆ ಮಂಕು ಹಿಡಿದಂತಾಯಿತು. ಪ್ರತಿಷ್ಠಿತ ಮಹಾವಿದ್ಯಾಲಯ ಒಂದರಲ್ಲಿ ಪ್ರೊಫೆಸರ್ ಆಗಿದ್ದ ಅವರು ತಮ್ಮ ವೃತ್ತಿಯನ್ನು ಬಿಟ್ಟು ಮನೆಯಲ್ಲೇ ಉಳಿದುಕೊಂಡರು. ಕುಡಿತಕ್ಕೆ ಶರಣಾದರು. ಎಷ್ಟು ಕುಡಿಯುತ್ತಿದ್ದರೆಂದರೆ ತಮ್ಮ ಹಸಿವು ಮತ್ತು ದಾಹವನ್ನು ಮಧ್ಯಪಾನದಿಂದಲೇ ಈಡೇರಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಅವರ ಲಿವರ್ ಸಂಪೂರ್ಣ ಹದಗೆಟ್ಟಿತ್ತು. ಲೋರಾ ಎಷ್ಟು ಬೇಡಿಕೊಂಡರೂ ಅವರು ಕುಡಿತವನ್ನು ಬಿಡಲೇ ಇಲ್ಲ. ಕೊನೆಗೆ ಆ ಕುಡಿತವೇ ಅವರ ಪ್ರಾಣವನ್ನು ತಗೆಯಿತು. ನಿಮ್ಮ ತಾಯಿ ತೀರಿಕೊಂಡು ವರ್ಷ ಉರುಳುವುದರೊಳಗೆ ನಿಮ್ಮ ತಂದೆಯೂ ತೀರಿಕೊಂಡರು” ಎಂದು ನಾನೂ ನೋವಿನಿಂದಲೇ ಎಲ್ಲಾ ವಿವರಿಸಿದೆ. ಇದೆಲ್ಲಾ ಕೇಳಿದ ಮೇಲೆ ಪೌಲ್‍ ನ ದುಃಖಕ್ಕೆ ಪಾರವೇ ಇರಲಿಲ್ಲ; ಇಷ್ಟು ದಿನ ತಂದೆ-ತಾಯಿಗಳ ಪ್ರೀತಿಗೆ ದೂರವಿದ್ದು ಅನುಭವಿಸಿದ ದುಃಖ ಒಂದು ಕಡೆಯಾದರೆ ಈಗ ಈ ಊರಿಗೆ ಬಂದರೂ ತನ್ನ ತಂದೆ ತಾಯಿ ಶಾಶ್ವತವಾಗಿ ದೂರವಾದರೆಂಬ ದುಃಖ ಮತ್ತೊಂದು ಕಡೆ ಇದಕ್ಕೆಲ್ಲಾ ತಾನೇ ಕಾರಣವೆಂಬಂತೆ ತನ್ನನ್ನು ತಾನು ಶಪಿಸಿಕೊಂಡ ಆದರೆ ದುಃಖ ತಪ್ಪೀತೆ? ಇಲ್ಲ ಕಂಬನಿ ದುಂಬಿದ ಕಂಗಳಿಂದ ಮತ್ತೆ ನನ್ನತ್ತ ನೋಡಿದ.

“ತಂದೆ-ತಾಯಿ ತೀರಿಕೊಂಡ ಮೇಲೆ ಲೋರಾಳ ಗತಿ ಏನಾಯಿತು? ಕೇಳಿದ. “ಇಲ್ಲ ನನಗೂ ಇದರ ಬಗ್ಗೆ ಅಷ್ಟು ಗೊತ್ತಿಲ್ಲ. ಆದರೆ ಲೋರಾಳನ್ನು ಸೇಂಟ್ ಪೀಟರ್ ಅವರು ಸಲಹಿದ್ದಾರೆ. ಮುಂದೆ ಉನ್ನತ ವ್ಯಾಸಾಂಗಕ್ಕಾಗಿ ಬೇಕಾದ ಸಹಾಯವನ್ನೆಲ್ಲಾ ಮಾಡಿದ್ದಾರೆ. ನಿಮ್ಮ ತಂದೆ-ತಾಯಿಗಳನ್ನು ನಾನು ಜೀವಂತವಾಗಿ ನೋಡಿಯೂ ಇರಲಿಲ್ಲ. ನಮ್ಮ ಮದುವೆಯ ಮುಂಚೆಯೇ ಅವರು ತೀರಿಕೊಂಡದ್ದರು. ಲೋರಾ ತನ್ನ ಗತವನ್ನೆಲ್ಲಾ ನನಗೆ ಹೇಳಿದ್ದಾಳೆ. ಅದನ್ನೇ ನಿನಗೀಗ ಹೇಳಿದೆನಷ್ಟೇ” ಎಂದು ಹೇಳಿ ನಾನೂ ಪಕ್ಕದ ಸೋಫಾ ಮೇಲೆ ಕುಳಿತೆ.

“ಲೋರಾ ನಿಮಗೆ ಹೇಗೆ ಪರಿಚಯವಾದಳು” ಎಂದು ಕಾತರದಿಂದ ಕೇಳಿದ. “ಲೋರಾಳನ್ನು ನಾನು ಮೊದಲು ಬಾರಿ ನೋಡಿದ್ದು ಮುಂಬೈ ಯೂನಿವರ್ಸಿಟಿಯ ಕ್ಯಾಂಪಸ್ಸಿನಲ್ಲಿ. ನಾವಿಬ್ಬರು ಅಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಎಂ.ಎಸ್ಸಿ ಕಲಿಯುತ್ತಿದ್ದೆವು. ಅವಳು ತುಂಬಾ ಚೆನ್ನಾಗಿ ಓದುತ್ತಿದ್ದಳು. ಅವಳು ನನ್ನ ಕಾಂಪೀಟರ್ ಎಂದು ನಾನು ತಿಳಿದುಕೊಂಡಿದ್ದೆ. ಇಬ್ಬರ ನಡುವೆ ಕಾಂಪಿಟೇಶನ್ ಇರುತ್ತಿತ್ತು” ಎಂದು ಉತ್ತರಿಸಿದೆ.

ಈ ಗತವನ್ನೆಲ್ಲಾ ನೆನದು ಪೌಲನಿಗೆ ವಿವರಿಸುವಾಗ ನನ್ನ ಕಣ್ಣಗಳು ತೇವಗೊಂಡವು. ಲೋರಾಳ ಪ್ರತಿಬಿಂಬವು ನನ್ನ ಕಂಗಳಲ್ಲಿ ಗೂಡುಕಟ್ಟ ತೂಡಗಿತು. ಕಣ್ಣೀರನ್ನು ಹೊರಗೆ ಸುರಿಯಲು ಬಿಡದೆ ಕಣ್ಣು ಮುಚ್ಚಿಕೊಂಡೆ ಅವಳ ಪ್ರತಿಬಿಂಬ ಮತ್ತಷ್ಟು ದಟ್ಟವಾಯಿತು ಲೋರಾ! ಎಂದು ನನ್ನ ಮನ ಮೆಲ್ಲದನಿಯಲ್ಲಿ ಹಾಡತೊಡಗಿತು. ಆ ಹಳೆಯ ದಿನಗಳೆಲ್ಲಾ ನನ್ನ ಕಂಗಳಲ್ಲಿ ಕಾಣತೊಡಗಿದವು. ರಿಯಾನಾ ಲೋರಾ ಅವಳ ಹೆಸರು ಎಂಥಾ ಚೆಲುವೆಯಾಗಿದ್ದಳವಳು. ದಟ್ಟವಾದ ಕಪ್ಪು ಕೇಶಗಳು ಬಂಗಾರದ ಹೊಳಪಿನ ದೇಹಕಾಂತಿ ಅವಳ ಗುಲಾಬಿ ತುಟಿಗಳ ಮೇಲೆ ಸದಾ ಜಿಗುದಾಡುತ್ತಿದ್ದ ಹೂನಗು. ಹೆಸರಿಗೆ ಮಾತ್ರ ಕ್ರಿಶ್ಚಿಯನ್ ಹುಡುಗಿ. ಆದರೆ ಅವಳು ನೋಡಲು ಒಬ್ಬ ಹಿಂದೂ ಹುಡುಗಿಯಂತೆಯೇ ಕಾಣುತ್ತಿದ್ದಳು. ಅಷ್ಟು ಲಕ್ಷಣವಾಗಿದ್ದಳವಳು ಅದೆಷ್ಟೋ ಬಾರಿ ನಾನು ಅವಳನ್ನು ಮಾತನಾಡಿಸಲು ಹಾತೊರೆದೆ. ಆದರೆ ನನಗೆ ಸಾಧ್ಯವಾಗುತ್ತಿರಲಿಲ್ಲ. ಕೊನೆಗೊಂದು ದಿನ ಧೈರ್ಯ ತುಂಬಿಕೊಂಡು ಮೊದಲ ಬಾರಿಗೆ ಮಾತನಾಡಿಸಿದೆ.

“ಹಾಯ್ ಲೋರಾ!” ಎಂದು ಹಿಂದೆಯೇ ನಡೆಯುತ್ತಾ ಹೇಳಿದೆ. ಅವಳು ಭಯದಿಂದ ಹಿಂದಕ್ಕೆ ತಿರುಗಿ ನೋಡಿದಳು “ಹಲೋ…” ಎಂದು ಮೆಲ್ಲನೆಯ ದನಿಯಲ್ಲಿ ಹೇಳಿದಳು. ಹೌದು ಆ ಸಂದರ್ಭ ಎಷ್ಟು ಚೆನ್ನಾಗಿತ್ತು! ಗುಲ್ ಮೊಹರ್ ಮರಗಳ ಸಾಲುದಾರಿಯಲ್ಲಿ ಅವಳ ಜೊತೆಗೆ ನಡೆಯುತ್ತಾ ಹೋದೆ. ನಮ್ಮ ಸ್ನೇಹ ಬೆಳೆಯತೊಡಗಿತು. ನಾವಿಬ್ಬರೂ ಪರೀಕ್ಷೆಯ ವೇಳೆಯಲ್ಲಿ ಕಂಬೈಂಡ್ ಸ್ಟಡೀ ಮಾಡುತ್ತಿದ್ದೆವು. ಲೋರಾಳೊಡಗಿನ ಆ ಕ್ಯಾಂಪಸ್ಸಿನ ದಿನಗಳು ಎಷ್ಟು ಹಾಯಾಗಿ ಇರುತ್ತಿದ್ದವು. ಆಗ ನನ್ನ ಬಾಳು ನಿತ್ಯ ವಸಂತಕಾಲದಂತಿತ್ತು.

ನನ್ನ ಕಂಗಳೂ ಇನ್ನೂ ತೆರೆದುಕೊಳ್ಳಲಿಲ್ಲ. ಒಳಗಡೆ ಬಂಧನವಾದ ಲೋರಾಳ ರೂಪವನ್ನೇ ನೋಡುತ್ತಿದ್ದವು. ಇಷ್ಟರೊಳಗೆ ಪೌಲ್‍ ನ ಮಾತು ಕೇಳಿ ಬಂದು ಹೂವರಳಿದಂತೆ ಅವು ಬಿಚ್ಚಿಕೊಂಡವು.

“ಲೋರಾ ತಾನು ಅನಾಥಳೆಂದು ನಿಮಗೆ ಆಗ ಹೇಳಲಿಲ್ಲವೇ?” ಎಂದು ಕೇಳಿದ.

“ಲೋರಾ ನನಗೆಲ್ಲಾ ಹೇಳಿದ್ದಳು. ನೀನು ಚಿಕ್ಕಂದಿನಲ್ಲಿ ಮನೆ ಬಿಟ್ಟು ಹೋದದ್ದು, ಅವಳ ತಂದೆ-ತಾಯಿಗಳು ತೀರಿಕೊಂಡದ್ದು. ತಾನು ಮ್ಯಾಥಿವ್ ಮಿಷನರಿ ಹಾಸ್ಟಲಿನಲ್ಲಿ ಇರುವುದಾಗಿಯೂ ಹೇಳಿದಳು. ಅವಳಿಗೆ ಸೇಂಟ್ ಪೀಟರ್ ಅವರು ದಾರಿದೀಪವಾಗಿದ್ದರು. ಸೇಂಟ್ ಪೀಟರ್ ಅವರ ಮೇಲೆ ಲೋರಾಳಿಗೆ ತುಂಬಾ ಗೌರವವಿತ್ತು” ನಾನು ವಿವರಿಸಿದೆ.

“ಹೌದು ಸೇಂಟ್ ಪೀಟರ್‍ರವರು ಕರುಣಾಶೀಲರು” ಎಂದ.

“ಹೌದು ಪೌಲ್ ನೀನು ಹೇಳಿದ್ದು ನಿಜ” ಎಂದು ನಾನೂ ಸಮ್ಮತಿಸಿದೆ.

ಚಿಕ್ಕಂದಿನಲ್ಲಿ ಲೋರಾ ಏನೋ ಕಥೆ, ಕವಿತೆ ಬರೆಯುತ್ತಿದ್ದಳೆಂದು ಪೌಲ್ ನನಗೆ ಹೇಳಿದ. ಹೌದು! ಇದು ನಿಜ. ಅವಳ ಅನೇಕ ಕವಿತೆಗಳು ಯೂನಿವರ್ಸಿಟಿ ಮ್ಯಾಗಜೀನಿನಲ್ಲಿ ಪ್ರಕಟಗೊಳ್ಳುತ್ತಿದ್ದವು. ತೀವ್ರ ಸಂವೇದನೆಯುಳ್ಳ ಕವಿತೆಗಳವು. ಅವುಗಳನ್ನು ಓದಿ ನನ್ನೆದೆ ನೀರಾಗುತ್ತಿತ್ತು. ತಂದೆ-ತಾಯಿಗಳಿಗೆ ದೂರವಾದ ಹೆಣ್ಣು ಮಗಳೊಬ್ಬಳ ಜೀವನ ಹೇಗೆ ಇರುತ್ತದೆ ಎಂದು ತಾನು ಆ ಕವಿತೆಗಳಲ್ಲಿ ಚಿತ್ರಿಸಿದ್ದಾಳೆ. ಬಾಲ್ಯದಲ್ಲಿ ತನ್ನ ತಮ್ಮನ ಜೊತೆಗಿನ ನೆನಪುಗಳನ್ನೂ ಸಹ ಬರೆದಿದ್ದಾಳೆ. ಆದರೆ ನನಗಂತೂ ಬಹಳ ಆಶ್ಚರ್ಯ. ಮನದಲ್ಲಿ ಇಷ್ಟು ದುಃಖವನ್ನಿಟ್ಟುಕೊಂಡು ಅದೇಗೆ ತಾನು ನಗುನಗುತ್ತಾ ಎಲ್ಲರೊಡನೆಯೂ ತುಂಬಾ ಕುಕ್ಕಲಾತಿಯಿಂದ ಮಾತನಾಡುತ್ತಾಳೆಂದು, ಬರುಬರುತ್ತಾ ನನಗೆ ಅವಳ ಮೇಲೆ ವಿಶೇಷ ಆಸಕ್ತಿ ಮೂಡತೊಡಗಿತು. ಅವಳ ದುಃಖವನ್ನೆಲ್ಲಾ ಹಂಚಿಕೊಳ್ಳಬೇಕೆನಿಸಿತು. ಇದಕ್ಕಿಂತಲೂ ಮಿಗಿಲಾಗಿ ಅವಳನ್ನು ಮದುವೆಯಾಗುವ ಮನಸಾಯಿತು.

“ಪೌಲ್ ನಾನು ಲೋರಾಳನ್ನು ಮದುವೆಯಾಗ ಬೇಕೆಂದುಕೊಂಡೆ. ಈ ವಿಷಯವನ್ನು ಅವಳಿಗೆ ತಿಳಿಸಿದಾಗ, ಅವಳು ಏಕೋ ಸಂಕೋಚಗೊಂಡಳು. ಸೇಂಟ್ ಪೀಟರ್ ಅವರ ನೆರಳಿನಲ್ಲಿ ಇದ್ದು ಹೀಗೆ ಮಾಡುವುದು ಸರಿಯಲ್ಲ ಎಂಬುವುದು ಅವಳ ಕಲ್ಪನೆಯಾಗಿರಬೇಕು ನಾನು ಪೀಟರ್ ಅವರನ್ನೇ ಸ್ವತಃ ಬೆಟ್ಟಿಯಾದೆ. ನಾನೊಬ್ಬ ಬ್ರಾಹ್ಮಣ ಹುಡುಗನಾಗಿಯೂ ಲೋರಾಳನ್ನು ಮದುವೆಯಾಗಬೇಕೆಂಬ ಆಸೆ ಇದೆ ಎಂದು ಅವರ ಬಳಿ ಹೇಳಿದೆ”.

“ಸೇಂಟ್ ಪೀಟರ್ ಅವರು ಇದಕ್ಕೆ ನಿರಾಕರಿಸಲಿಲ್ಲ ಅನಿಸುತ್ತದೆ” ಎಂದು ಪೌಲ್ ನಂಬಿಕೆಯಿಂದ ಹೇಳಿದ.

“ಹೌದು ಪೌಲ್! ಪೀಟರ್ ಅವರಿಂದ ಯಾವುದೇ ನಿರಾಕರಣೆ ಇರಲಿಲ್ಲ. ಆದರೆ ನಮ್ಮ ತಂದೆ-ತಾಯಿಗಳು ಇದಕ್ಕೆ ನಿರಾಕರಿಸಿದರು. ಈ ವಿಷಯವನ್ನು ನಾನು ಅವರಿಗೆ ತಿಳಿಸಿದಾಗ ಅವರು ನನಗೆ ಮದುವೆ ಮಾಡಬೇಕೆಂದು ಬೇರೆ ಬ್ರಾಹ್ಮಣ ಹುಡುಗಿಯನ್ನು ಹುಡುಕುತ್ತಿದ್ದರು. ನನಗದು ಇಷ್ಟವಿರಲಿಲ್ಲ. ಆಗ ಪೀಟರ್ ಅವರು ನಮಗೆ ಬೆನ್ನೆಲುಬಾಗಿ ನಿಂತಿದ್ದರು. ಅವರೇ ಹತ್ತಿರವಿದ್ದು ನಮ್ಮ ಮದುವೆಯನ್ನು ಮಾಡಿಸಿದರು” ಎಂದು ಹೇಳಿದೆ.

ನಾನು ಲೋರಾಳನ್ನು ಕರೆದುಕೊಂಡು ಮನೆಗೆ ಹೋಗುವಷ್ಟರಲ್ಲಿ ನಮ್ಮ ತಂದೆ-ತಾಯಿಗೆ ನಮ್ಮ ಅಂತರ್ ಧರ್ಮೀಯ ಮದುವೆಯ ಕುರಿತು ತಿಳಿಯಿತು. ಬಾಗಿಲಲ್ಲೇ ನಿಂತ ನಮ್ಮನ್ನು ನೋಡಿ ತಾಯಿ ಸಂತೋಷದಿಂದ ಆರತಿ ಬೆಳಗಿದರು. ನನ್ನ ತಂದೆಯವರು ಲೋರಾಳೊಡನೆ ಪ್ರೀತಿಯಿಂದ ಮಾತನಾಡತೊಡಗಿದರು. ಆದರೆ ನನ್ನ ಮದುವೆಯನ್ನು ನೋಡಲಾಗಲಿಲ್ಲ ಎಂಬ ಕೊರಗು ಅದರಲ್ಲಿತ್ತು. ಒಟ್ಟಿನಲ್ಲಿ ಈ ಅಂತರ್‌ ಧರ್ಮೀಯ ಮದುವೆಯಿಂದಾಗಿ ನಮ್ಮ ಕುಟುಂಬದೊಳಗೆ ಯಾವುದೇ ಬಿರುಕು ಬೀಳಲಿಲ್ಲ. ಮೂರು ನಾಲ್ಕು ತಿಂಗಳು ನಮ್ಮ ಊರಲ್ಲೇ ಉಳಿದುಕೊಂಡೆವು. ನಂತರ ಮುಂಬೈಗೆ ತೆರಳಿ ಅಲ್ಲೊಂದು ಚಿಕ್ಕ ರೀಸರ್ಚ್ ಸೆಂಟರ್ ತೆರೆದಿದ್ದಾಯಿತು. ಈ ಮನೆಯನ್ನೂ ಕಟ್ಟಿಸಿದೆವು. ಕೆಲವೇ ವರ್ಷಗಳಲ್ಲಿ ಈ ರಿಸಚ್ ಸೆಂಟರ್ ತುಂಬಾ ಹೆಸರು ಪಡೆದುಕೊಂಡಿತು.

ಮಧ್ಯಾಹ್ನವಾಯಿತು. ಊಟದ ಸಮಯ ಪೌಲ್ ಹಸಿದಿರಬೇಕು. ಬಂದಾಗಿನಿಂದ ಗುಟುಕು ನೀರನ್ನಾದರೂ ಅವನು ಮುಟ್ಟಲಿಲ್ಲ. ನಾನೂ ಈ ಹಳೆಯ ವಿಷಯಗಳನ್ನೆಲ್ಲಾ ತೋಡಿಕೊಂಡು ಅವನ ಸಂಗತಿಯೇ ಮರೆತು ಹೋದೆ. ನನಗೂ ಬಹಳ ಹಸಿವಾಗುತ್ತಿದೆ. ಊಟಕ್ಕೆ ಬರಲು ಪೌಲ್‍ ಗೆ ಹೇಳಿದಾಗ ತನಗೆ ಹಸಿವಾಗುತ್ತಿಲ್ಲವೆಂದ ರಕ್ತ ಸಂಬಂಧದ ಬಂಧನವು ತನ್ನ ಹಸಿವನ್ನು ದೂರಮಾಡಿರಬೇಕು. ಕೊನೆಗೆ ನನ್ನ ಮಾತಿಗೆ ಗೌರವ ಕೊಟ್ಟು ನನ್ನೊಡನೆ ಬಂದ.

ಈಗ ಪೌಲ್ ನೋಡಲು ತುಂಬಾ ಸಭ್ಯಸ್ತನಂತೆ ಕಾಣುತ್ತಿದ್ದಾನೆ. ಅವನ ಕಂಗಳಲ್ಲಿ ಕಾತರವಿದೆ, ದುಃಖವಿದೆ, ನೋವಿನ ವಕ್ರರೇಖೆಗಳನ್ನೆಲ್ಲಾ ಸರಳ ರೇಖೆಗಳನ್ನಾಗಿಸಿಕೊಂಡು ಅವನು ಇಲ್ಲಿಗೆ ಬಂದಂತೆ ತೋರುತ್ತಿದೆ.

ಚಿಕ್ಕದೊಂದು ಕ್ಯಾಟೀನಿಗೆ ಹೋದೆವು. ನಮ್ಮ ಸುತ್ತಲೂ ಕುಳಿತ ಜನರೆಲ್ಲರೂ ಅನೇಕಾನೇಕ ತಿನಿಸುಗಳನ್ನು ಆರ್ಡರ್ ಮಾಡಿ ಭುಜಿಸುತ್ತಿದ್ದರು. ಇದನ್ನು ಕಂಡ ಪೌಲ್‍ ನಿಗೆ ವಿಚಿತ್ರವೆನಿಸಿತ್ತು. ಇದು ಅವನ ತಪ್ಪಲ್ಲ, ಸುತ್ತಲೂ ಕುಳಿತಿರುವ ಆ ಅಪರಿಚಿತ ಜನರದ್ದೂ ಅಲ್ಲ. ನಮ್ಮೊಳಗೆ ದುಃಖದ ಕಡಲು ಭೋರ್ಗರೆಯುತ್ತಿರುವಾಗ ಹೀಗೆ ಅನಿಸುವುದು ಸರ್ವೇಸಾಮಾನ್ಯ. ಕೊನೆಗೆ ಎರಡು ಪ್ಲೇಟ್ ಮಿನಿ ಮೀಲ್ಸ್ ಆರ್ಡರ್ ಮಾಡಿದೆವು. ನಾನು ಬೇಗನೆ ತಿಂದು ಕೈ ತೊಳೆದುಕೊಂಡೆ. ಪೌಲ್‍ ನ ಊಟ ಇನ್ನೂ ಮುಗಿದಿರಲಿಲ್ಲ. ಅವನ ಕೈ ಬೆರಳುಗಳು ತಟ್ಟೆಯಲ್ಲಿ ಏನೋ ವಿನ್ಯಾಸ ಮಾಡುತ್ತಿದ್ದವು. ಐದು ಬೆರಳುಗಳು ತಟ್ಟೆಯಲ್ಲಿ ಏನೋ ವಿನ್ಯಾಸ ಮಾಡುತ್ತಿದ್ದವು. ಐದು ಬೆರಳುಗಳು ಸೇರಿಸಿ, ತುತ್ತುಮಾಡಿ ತನ್ನ ಬಾಯಿಗಿಡುವ ಮುನ್ನ ತನಗೆ ತನ್ನ ತಾಯಿ ನೆನಪಾಗಿರಬೇಕು. ಅವನ ಕಂಗಳಲ್ಲಿ ಕಂಬನಿದುಂಬಿವೆ. ಊಟ ಅರ್ಧಕ್ಕೆ ಬಿಟ್ಟು ಕೈ ತೊಳೆದುಕೊಂಡ ನಾನು ಬೇಡವೆಂದರೂ ಅವನೇ ಬಿಲ್ ಪೇ ಮಾಡಿದ. ಅಲ್ಲಿಂದ ಮರಳಿ ಬಂದೆವು.

ಪೌಲ್ ಶಾಂತನಾಗಿಯೇ ಇದ್ದ. ದುಃಖದ ಮಹದಲೆಗಳು ಅವನ ಮುಖತೀರದಲ್ಲಿ ಇನ್ನೂ ಬಡಿದುಕೊಳ್ಳುತ್ತಿದ್ದವು. ಮನೆಯೊಳಗೆ ಬಂದಾಗ ಅವನ ಮಿಂಚುಗಣ್ಣುಗಳು ಪುನಃ ನಾಲ್ಕೂ ಗೋಡೆಗಳತ್ತ ಹೊರಳಾಡುತ್ತಿದ್ದವು.

“ನಿಮ್ಮ ಮನೆಯನ್ನೆಲ್ಲಾ ನೋಡಬೇಕೆನಿಸುತ್ತಿದೆ, ತೋರಿಸುವಿರಾ?” ಎಂದು ಪೌಲ್ ಕೇಳಿದ.

“ಖಂಡಿತ ಏಕೆ ಬೇಡ ಅಂತೀರ!” ಎಂದೆ.

ನಡುಮನೆಯಲ್ಲಿ ತಿರುಗುತ್ತಿದ್ದ ಫ್ಯಾನ್ ಬಂದ್ ಮಾಡಿ ಕೋಣೆಗಳನ್ನೆಲ್ಲಾ ತೋರಿಸುತ್ತಾ ನಡೆದೆ. ಮೊದಲು ಅಡುಗೆ ಕೋಣೆಯುತ್ತಾ ನಡೆದೆವು.

ತುಂಬಾ ವಿಶಾಲವಾದ ಕೋಣೆ. ಡೈನಿಂಗ್ ಟೇಬಲ್ ಸಹ ಅದರೊಳಗೆ ಸೇರಿಕೊಂಡಿತ್ತು. ಕೆಂಪು ಟಮ್ಯಾಟೋ ಬಣ್ಣದ ರೆಫ್ರೆಜಿರೇಟರ್ ಯಾರ ಕೈ ಬೆರಳಿನ ಸ್ಪರ್ಶವೂ ಇಲ್ಲದೆ ವರ್ಷಗಳ ಕಾಲ ಅನಾಥವಾಗಿ ಉಳಿದಿದೆ. ಸ್ಟವ್ ಮತ್ತು ಗ್ಯಾಸ್ ಸಿಲೆಂಡರ್ ಗಳು ತಮ್ಮ ಮಿಂಚು ಮತ್ತು ಹೊಳಪನ್ನು ಕಳೆದುಕೊಂಡಿವೆ. ಯಾವ ಉಪಯೋಗವೂ ಇಲ್ಲದೆ ಈಗ ಪುಡಿ-ಮಸಾಲೆ ಡಬ್ಬಿಗಳೆಲ್ಲಾ ಹಾಳು ಬಿದ್ದಿವೆ.

“ಪೌಲ್! ಇಲ್ಲೆ ಲೋರಾ ರುಚಿಕರವಾದ ಅಡುಗೆ ಮಾಡಿ ಬಡಿಸುತ್ತಿದ್ದಳು. ನಾನು ಇಲ್ಲೇ ಕುಳಿತು ಅವಳ ಅಡುಗೆಯನ್ನು ಭುಜಿಸುತ್ತಿದ್ದೆ. ಈ ಕಿಟಕಿಯನೊಮ್ಮೆ ನೋಡು ಪೌಲ್ ದಿನಾ ಮಧ್ಯಾಹ್ನದಂದು ನಾವಿಬ್ಬರೂ ಕುಳಿತು ಊಟ ಮಾಡುತ್ತಿರುವಾಗ ಪಾರಿವಾಳವೊಂದು ಬಂದು ಈ ಕಿಟಕಿಯ ಬಳಿ ಕೂಡುತ್ತಿತ್ತು. ನಾವು ಊಟ ಮಾಡುವವರೆಗೂ ಅದು ಅಲ್ಲೇ ಇರುತ್ತಿತ್ತು. ಆದರೆ ಲೋರಾ ತೀರಿಕೊಂಡ ಮೇಲೆ ನಾನು ಮತ್ತೆ ಆ ಪಾರಿವಾಳವನ್ನು ನೋಡಲೇ ಇಲ್ಲ” ಎಂದೆ.

ಪೌಲ್ ಆ ಕಿಟಕಿಯನ್ನೇ ನೋಡುತ್ತಾ ಹೊರಬಂದ. ಅಡುಗೆ ಮನೆಯ ಗೋಡೆಗೆ ಅಂಟಿಕೊಂಡೇ ದೇವರಕೋಣೆಯಿತ್ತು. ಅವನೇ ಬಾಗಿಲು ತಗೆದು ಒಳಗೆ ನಡೆದ ಅದು ಅಡುಗೆ ಮನೆಗಿಂತಲೂ ಚಿಕ್ಕದಾದ ಕೋಣೆ ತುಂಬಾ ಧೂಳು ಹಿಡಿದಿತ್ತು. ಕೋಣೆಯ ನಟ್ಟನಡುವೆ ಏಸುವಿನ ಶಿಲುಬೆಯಿತ್ತು. ಸುತ್ತಲೂ ಗೋಡೆಯ ಮೇಲೆ ಹಿಂದೂ ದೇವರುಗಳ ಪಟಗಳಿದ್ದವು. ಶಿಲುಬೆಯ ಒಂದು ಕೈಗೆ ಜೇಡರ ಬಲೆ ನೇಯ್ದುಕೊಂಡಿತ್ತು. ದೇವರ ಪಟಗಳ ಮೇಲಿನ ಕುಂಕುಮ ಬೊಟ್ಟುಗಳು ಕಪ್ಪು ಬಣ್ಣಕ್ಕೆ ತಿರುಗಿದವು.

“ಪೌಲ್! ನೀನು ಮರಳಿ ಬರಬೇಕೆಂದು ಈ ಶಿಲುಬೆಗೆ ಲೋರಾ ನಿತ್ಯ ಪ್ರಾರ್ಥಿಸುತ್ತಿದ್ದಳು. ಈ ದೇವರ ಪಟಗಳಿಗೆ ನಿತ್ಯ ಪೂಜಿಸುತ್ತಿದ್ದಳು” ಎಂದು ಎರಡೂ ಮತದ ದೇವರಗಳನ್ನು ತೋರುತ್ತಾ ಹೇಳಿದೆ.

ಮರಳಿ ನಡುಮನೆಗೆ ಬಂದೆವು ಇನ್ನು ಉಳಿದದ್ದು ಲೋರಾಳ ಕೋಣೆ. ಪೌಲ್ ನೋಡಬೇಕಾದದೆಲ್ಲಾ ಅಲ್ಲೇ ಇದೆ. ಪೌಲನಿಗೂ ಆ ಕೋಣೆಯನ್ನು ನೋಡಬೇಕೆನ್ನುವ ಕಾತರವಿತ್ತು. ಉದ್ದವಾದ ಹೆಜ್ಜೆಗಳನ್ನು ಮೂಡಿಸುತ್ತಾ ಆ ಕೋಣೆಯೆಡೆಗೆ ನಡೆದವು.
ಅದು ತುಂಬಾ ಆಕರ್ಷಕವಾದ ಕೋಣೆ. ಕೋಣೆಯ ನಾಲ್ಕೂ ಗೋಡೆಗಳ ಮೇಲೂ ಲೋರಾ ಬಿಡಿಸಿದ ಅನೇಕ ಪೈಂಟಿಂಗ್‌ ಗಳನ್ನು ನೇತಾಕಲ್ಪಟ್ಟಿತ್ತು. ಬಹುತೇಕ ಪೈಂಟಿಂಗ್‍ ಗಳನ್ನು ನೇತುಹಾಕಿದ್ದ ಪೈಂಟಿಂಗ್ ತುಂಬಾ ವಿಶೇಷವಾಗಿತ್ತು. ಎಲ್ಲರನ್ನೂ ಎಲ್ಲವನ್ನೂ ಕಳೆದುಕೊಂಡ ನಿಸ್ಸಹಾಯ ಹೆಣ್ಣೊಬ್ಬಳು ನೆಲದ ಮೇಲೆ ಕುಳಿತು ಆಗಸದತ್ತ ನೋಡುತ್ತಿರುವ ದೃಶ್ಯ ಅದರಲ್ಲಿದ್ದಿದ್ದು ಲೋರಾಳೇ? ಗೊತ್ತಿಲ್ಲ ಕಿಟಕಿಯ ಬಾರ್ ಗಳಿಗೂ ಜೇಡರ ಹುಳುವೊಂದು ಬಿಗಿದುಕೊಳ್ಳುತ್ತಿತ್ತು. ಈ ಬಾಳ ಬಲೆಯಲ್ಲಿ ತನ್ನ ತಂದೆ-ತಾಯಿ ಅಕ್ಕನನ್ನು ಕಳೆದುಕೊಂಡು ಪೌಲ್ ಆ ಜೇಡರ ಹುಳುವನ್ನೇ ಪ್ರತಿನಿಧಿಸುತ್ತಿದ್ದ.

ಕೋಣೆಯ ಒಂದು ಮೂಲೆಯಲ್ಲಿ ಚಿಕ್ಕ ಟೇಬಲ್ಲು. ಅದರ ಮೇಲೆ ಲೋರಾಳ ಅನೇಕ ಕವಿತೆಗಳ ಬಿಡಿ ಹಾಳೆಗಳು. ತಾನು ಬಳಿಸುತ್ತಿದ್ದ ಅರ್ಧ ಡಜನಿನಷ್ಟು ಪೆನ್ನುಗಳು. ನ್ಯೂಟನ್ ಐನ್‍ಸ್ಟೀನರ ಜೀವನ ಚರಿತ್ರೆಯ ಪುಸ್ತಕಗಳು. ಪೌಲ್ ಆ ಟೇಬಲ್ಲಿನ ಮೇಲಿಂದ ಒಂದು ಪೆನ್ನನ್ನು ಕೈಗೆತ್ತಿಕೊಂಡು ಪುಳಕದಿಂದ ನೋಡಿ ಅಲ್ಲೇ ಇಟ್ಟ ನಾನು ಆ ಪೆನ್ನನ್ನು ತಗೆದುಕೊಂಡು ಅವನ ಜೇಬಿನಲ್ಲಿಟ್ಟೆ ಯಾವುದೇ ತೃಪ್ತಿಯ ಭಾವ ಅವನ ಕಂಗಳಲ್ಲಿ ಕಂಡಿತು. ಈ ಬದಿಯ ಅಲ್ಮಾರಾದಲ್ಲಿ ಬೃಹದಾಕಾರದ ಆಲ್ಬಮ್‍ ವೊಂದಿತ್ತು. ಅದನ್ನು ತಗೆದು ಪೌಲ್‍ ನ ಕೈಗೆ ಕೊಟ್ಟೆ.

“ಪೌಲ್ ಈ ಆಲ್ಬಮ್ ಎಂದರೆ ಲೋರಾಳಿಗೆ ಪ್ರಾಣ ದಿನಕ್ಕೆ ಒಮ್ಮೆಯಾದರೂ ತಾನಿದನ್ನು ತಿರುವುತ್ತಿದ್ದಳು. ಪದೇ ಪದೇ ನನಗೆ ಈ ಫೋಟೋಗಳನ್ನು ತೋರಿಸಿ ಅವುಗಳ ಬಗ್ಗೆ ವಿವರಿಸುತ್ತಿದ್ದಳು. ನಾನು ನಿನ್ನನ್ನು ಈ ಆಲ್ಬಮ್ಮಿನ ಮೂಲಕವೇ ಗುರುತು ಹಿಡಿದಿದ್ದೆ” ಎಂದು ಹೇಳಿದೆ.

ಆ ಆಲ್ಬಮ್ಮನ್ನು ತನ್ನ ಕೈಗೆ ತೆಗೆದುಕೊಂಡ ಕೂಡಲೇ ಪೌಲ್ ರೋಮಾಂಚಿತನಾದ. ಆಲ್ಬಮ್ಮಿನ ಮೊದಲನೇ ಪುಟದಲ್ಲಿ ತಮ್ಮ ಕುಟುಂಬದ ನಾಲ್ವರೂ ಕೂಡಿದ್ದ ಫೋಟೋ ಇತ್ತು. ಅದು ಕ್ರಿಸ್‍ಮಸ್ ಸಂದಂರ್ಭದ ಫೋಟೋ ಎಂದು ಲೋರಾ ನನಗೆ ಹೇಳಿದ್ದುಂಟು. ಪೌಲನಿಗೂ ಆ ಸಂದರ್ಭ ನೆನಪಾಗಿರಬೇಕು. ಅದನ್ನು ನೋಡುತ್ತಲೇ ಮತ್ತೆ ಅವನ ಕಂಗಳಲ್ಲಿ ನೀರು ತಿರುಗಿದವು. ಪುಟಗಳನ್ನು ತಿರುವುತ್ತಾ ಹೋದ ಪ್ರತೀ ಫೋಟೋದಲ್ಲಿಯೂ ತನಗೆ ತನ್ನ ಬಾಲ್ಯ ಕಾಣುತ್ತಿತ್ತು. ಮಮತೆಯ ಕೊನರು ತನ್ನ ಮನವನ್ನು ಸ್ಪುರಿಸುತ್ತಿತ್ತು. ಈ ತಂದೆ ತಾಯಿಗಳು ತನ್ನಿಂದಾಗಿ ಎಷ್ಟೋ ನೊಂದಿರಬೇಕು, ಎಂದಿಗಾದರೂ ತಾನು ಬರುವನೆಂದು ಕಾತರದಿಂದ ಕಾದಿದ್ದ. ಲೋರಾ ಅವನ ನಿರಾಗಮನದಿಂದಾಗಿ ದುಃಖದಲ್ಲಿಯೇ ಬೆಂದಿರಬೇಕು. ತನ್ನಿಂದಾಗಿ ಅವರಿಗೆ ದುಃಖವು ಬಿಟ್ಟು ಸುಖದ ಒಂದು ಕಣವೂ ಇರಲಿಲ್ಲವೆಂದು ಪೌಲ್ ಒಳಗೊಳಗೆ ದುಃಖಿಸಿದ. ಆ ಆಲ್ಬಮನ್ನು ಒಮ್ಮೆ ತನ್ನ ಎದೆಗೊತ್ತಿಕೊಂಡು ಮತ್ತದೇ ಜಾಗದಲ್ಲಿಟ್ಟ. ಆಲ್ಬಮ್ಮಿನ ಬದಿಯಲ್ಲಿ ಕೊಳಲು ಅವಳ ಕಣ್ಣಿಗೆ ಬಿತ್ತು. ಬಹು ಕುತೂಹಲದಿಂದ ಅದನ್ನು ತಗೆದುಕೊಂಡು ತುಂಬಾ ಚಕಿತನಾಗಿ ನೋಡತೊಡಗಿದೆ.

“ವಸಂತ್ ಅವರೇ! ಇದು ಲೋರಾಳಿಗೆ ತನ್ನ ಹದಿನೈದನೆಯ ಹುಟ್ಟಿದ ಹಬ್ಬದಂದು ನಾನು ಕೊಟ್ಟಿದ್ದ ಉಡುಗರೆ” ಎಂದು ಪೌಲ್ ಉತ್ಸುಕದಿಂದ ಹೇಳಿದ. “ಹೌದು! ನನಗೆ ಗೊತ್ತು. ಲೋರಾ ಹೇಳಿದ್ದಾಳೆ ಈ ಕೊಳಲೆಂದರೆ ಅವಳಿಗೆ ತುಂಬಾ ಇಷ್ಟ. ಪ್ರತಿದಿನ ಮುಂಜಾವು ಬಾಲ್ಕನಿಯಲ್ಲಿ ಕುಳಿತು ತಾನಿದನ್ನು ಊದುತ್ತಿದ್ದಳು. ನಾನು ಅವಳ ಬಳಿಯಲ್ಲೇ ಕುಳಿತು ಪ್ರೀತಿಯಿಂದ ಆಲಿಸುತ್ತಿದ್ದೆ” ಎಂದೆ.

ಪೌಲ್ ಆ ಕಂದು ಬಣ್ಣದ ಕೊಳಲನ್ನು ತದೇಕ ಚಿತ್ತದಿಂದ ನೋಡುತ್ತಿದ್ದ. ಲೋರಾಳ ಕೈ ಬೆರಳಿನ ಗುರುತುಗಳು ಅದರ ಮೇಲೆ ಅಚ್ಚಳಿಯದಂತೆ ಪೌಲ್‍ ನಿಗೆ ಕಾಣುತ್ತಿರಬೇಕು.

(ಅಜಯ್‌ ವರ್ಮಾ ಅಲ್ಲುರಿ)

ಎಲ್ಲಾ ಕೋಣೆಗಳನ್ನು ನೋಡಿದ ಮೇಲೆ ಪುನಃ ನಡುಮನೆಗೆ ಬಂದೆವು ಪೌಲ್‍ ನ ಮುಖದಲ್ಲಿ ಇನ್ನೂ ಅನೇಕ ಪ್ರಶ್ನಾರ್ಥಗಳು ಗುದ್ದಾಡುತ್ತಿದ್ದವು. ಲೋರಾಳ ಸಾವಿನ ಕಾರಣವೇನೆಂಬುವುದೂ ಅದರಲ್ಲಿ ಒಂದಾಗಿತ್ತು. ಕೇಳಬೇಕೋ ಬೇಡವೋ ಎಂಬ ಗೊಂದಲದಲ್ಲಿ ಅವನಿದ್ದ. ಕೊನೆಗೂ ಕೇಳಿದ.

“ಲೋರಾ ನಿಮ್ಮಿಂದ ಹೇಗೆ ದೂರವಾದಳು?”

“ಕ್ಷಮಿಸು ಪೌಲ್! ನಾನೀಗ ಇದನ್ನು ಹೇಳಲಾರೆ. ಆ ದುರಂತವನ್ನು ಕೇಳಿ ಸಹಿಸುವ ಬಲ ನಿನಗಿರಬಹುದೇನೋ, ಆದರೆ ಆ ಹಳೆಯ ನೆನಪನ್ನು ತೋಡಿಕೊಂಡು ನಾನು ಮತ್ತೆ ನನ್ನೆದೆಯನ್ನು ಘಾಸಿಗೊಳಿಸಿಕೊಳ್ಳಲಾರೆ, ಆ ಕಾರಣವನ್ನು ಹೇಳಿಯಾದರೂ ಈಗ ಏನು ಪ್ರಯೋಜನ? ಸತ್ತು ಹೋದ ಲೋರಾ ಅಂತೂ ಮರಳಿ ಬರಲಾರಳು; ಸಾಕು! ಮತ್ತೆ ಆ ವಿಷಯವನ್ನು ಹೇಳಿ ನಿನ್ನನ್ನು ದುಃಖಗೊಳಿಸಲಾರೆ, ಅಷ್ಟಕ್ಕೂ ಅವಳು ಸತ್ತಿಲ್ಲವೆಂದು ನಿನಗೆ ಹೇಳಿದನಲ್ಲವೇ! ಅವಳ ನೆನಪಿನ ಹಕ್ಕಿಗಳು ನಮ್ಮ ಸುತ್ತ ನಿತ್ಯ ಸುಳಿದಾಡುತ್ತಿರುತ್ತವೆ” ಎಂದು ಹೇಳಿದೆ. ಕೊನೆಗೂ ಲೋರಾಳ ಸಾವು ಪೌಲನಿಗೆ ನಿಗೂಢವಾಗಿಯೇ ಉಳಿದಿತ್ತು.

ಜೀವನದಲ್ಲಿ ಕಷ್ಟಗಳು ಸಹಜ. ಒಮ್ಮೊಮ್ಮೆ ನಮ್ಮ ಬಾಳು ಕುಲುಮೆಯಂತಾಗುತ್ತದೆ. ಅದರೊಳಗೆ ನಮ್ಮ ಜೀವವು ಮೆಲ್ಲನೆ ಕಮರಿ ಹೋಗುತ್ತದೆ. ಆದರೆ ನಾವು ಬೂದಿಯಾಗಬಾರದು. ಕಮರಿದಷ್ಟು ಗಟ್ಟಿಗೊಳ್ಳಬೇಕು. ಕುಲುಮೆಯೊಳಗೆ ಮತ್ತೆ ಚೈತನ್ಯವಾಗಿ ಚಿಗುರಬೇಕು ನವೋತ್ಸಾಹದಿಂದ ಹೂವ್ವಾಗಿ ಅರಳಿ ನಿಲ್ಲಬೇಕು.

“ಪೌಲ್ ಒಂದು ವಿಷಯ ಮಾತ್ರ ನಾನು ನಿನಗೆ ಹೇಳಬಲ್ಲೆ. ಕೊನೆ ಕೊನೆಯಲ್ಲಿ ಸಾವು ಲೋರಾಳೊಡನೆ ಸಂಭಾಷಿಸಿರಬೇಕು. ತನ್ನ ಸಾವಿನ ಅರಿವು ಮುಂಚೆಯೇ ಅವಳಿಗೆ ತಿಳಿದಿರಬೇಕು; ಒಮ್ಮೆ ಈ ಕವಿತೆಯನ್ನು ಗಮನಿಸು:

“ನಾನು ಹೋದ ಮೇಲೆ
ಈ ಗೂಡು ನಿಶಬ್ದವಾಗುತ್ತದೆ
ಯಾವ ಗಂಧವನ್ನೂ ತರದಗಾಳಿ
ಮೆಲ್ಲನೆ ಸಾಗಿಹೋಗುತ್ತದೆ
ಹಕ್ಕಿಗಳು ಯಾವ ಸದ್ದೂ ಇರದೆ
ಪತರಗುಟ್ಟುತ್ತವೆ
ಟೊಂಗೆಗೆ ಟೊಂಗೆ ತಗುಲಲು
ಕೊನರಿದ ಮೌನವು
ನನ್ನ ಪಾದ ಮುದ್ರೆಗಳಲ್ಲಿ
ಅವಿತು ಕೊಳ್ಳುತ್ತದೆ
……………………….
………………………..”

ಇನ್ನೂ ಇಂತಹ ಅವಳ ಅನೇಕ ಕವಿತೆಗಳಿವೆ. ಅವುಗಳನ್ನೆಲ್ಲಾ ಸಂಕಲಿಸಿ ಒಂದು ಪುಸ್ತಕ ಮಾಡುತ್ತಿದ್ದೇನೆ. ಬಹುಶಃ ಈ ತಿಂಗಳ ಕೊನೆಯಲ್ಲಿ ಅದು ಬಿಡುಗಡೆಯಾಗಬಹುದು. ನೀನು ಖಂಡಿತ ಬರಬೇಕು” ಎಂದೆ. “ಖಂಡಿತ ಬರುತ್ತೇನೆ” ಒಪ್ಪಿಗೆ ಸೂಚಿಸಿದ “ಪುಸ್ತಕದ ಹೆಸರೇನು?” ಕೇಳಿದ “ಕುಲುಮೆ” ಎಂದು ಉತ್ತರಿಸಿದೆ.

ಸಾಯಂಕಾಲವಾಗತೊಡಗಿತ್ತು. ಮನೆಯಂಗಳಕ್ಕೆ ಬಂದೆವು. ಪೌಲ್ ಹೊರಡಲು ಸಿದ್ದವಾಗಿದ್ದ. ಹೋಗುವ ಮುನ್ನ ನನ್ನ ಕೈಯಲ್ಲಿ ಸ್ವಲ್ಪ ಹಣವನ್ನು ಇಟ್ಟ. ಆದರೆ ನಾನದನ್ನು ನಿರಾಕರಿಸಿದೆ. ನಿಮಗೆ ಸಹಾಯವಾಗಬಹುದು ಇಟ್ಟುಕೊಳ್ಳಿ ಎಂದು ಮತ್ತೊಮ್ಮೆ ಹೇಳಿದ. ನಾನದನ್ನು ಲೋರಾಳ ಹೆಸರಿನಲ್ಲಿ ಮ್ಯಾಥಿವ್ ಮಿಷೇನರಿ ಹಾಸ್ಟೆಲಿಗೆ ಕೊಡಲು ಹೇಳಿದೆ. ಅದಕ್ಕವನು ಒಪ್ಪಿಕೊಂಡ. ಅದೊಂದು ಒಳ್ಳೆಯ ಕೆಲಸವೆಂದು ಹೇಳಿದ.

ದುಃಖದ ಅಲೆಗಳ ಭೋರ್ಗರೆತದಿಂದ ಪೌಲನ ಮುಖ ಸಣ್ಣದಾಯಿತು. ಇಷ್ಟು ವರ್ಷಗಳು ಅವನು ಆ ಮನೆ ಬಿಟ್ಟು ದೂರವಿದ್ದಿದಕ್ಕೆ ಕಾರಣವನ್ನು ನಾನು ಕೇಳಬಹುದು. ಆದರೆ ನಾನು ಕೇಳಲಿಲ್ಲ. ಇಷ್ಟೆಲ್ಲಾ ನಡೆದ ಮೇಲೆ ಈಗ ಆ ವಿಚಾರವನ್ನು ಪ್ರಸ್ತಾಪಿಸುವುದು ನನಗೆ ಗೌಣವೆನಿಸಿತ್ತು.

“ಪೌಲ್! ನೀನೀಗ ಎಲ್ಲಿಗೆ ಹೋಗುವಿ?”

“ನಾನು ಸೇಂಟ್ ಪೀಟರ್ ಅವರ ಮನೆಯಲ್ಲಿ ಉಳಿದುಕೊಂಡಿದ್ದೇನೆ ಅಲ್ಲೇ ಇರುತ್ತೇನೆ”

“ಪೀಟರ್‍ರವರು ಹೇಗಿದ್ದಾರೆ?”

“ಅವರಿಗೆ ತುಂಬಾ ವಯಸ್ಸಾಗಿದೆ. ನೀವೊಮ್ಮೆ ಆ ಕಡೆ ಬಂದರೆ ಅವರನ್ನು ನೋಡಬಹುದು”

“ಖಂಡಿತ ಬರುತ್ತೇನೆ”

ಪೌಲ್ ಒಂದು ನೋಟದಲ್ಲಿ ಮನೆಯನ್ನೊಮ್ಮೆ ನೋಡಿದ. ಮನೆಯ ಮಾಳಿಗೆ ಮೇಲೆ ಲೋರಾ ನಿಂತು ಇವನಿಗೆ ಕೈ ಬೀಸಿದಂತೆ ಭಾಸವಾಗಿರಬೇಕು. ಯಾವುದೇ ಧನ್ಯತಾ ಭಾವ ಇವನೊಳಗೆ ಹೊಕ್ಕಿದೆ ಹೋಗಿ ಬರುವೆನು ಎಂದು ಹೇಳಿ ನನ್ನನ್ನೊಮ್ಮೆ ಅಪ್ಪಿಕೊಂಡ.

ಗೇಟ್ ತೆಗೆದು ಪೌಲ್ ಆಚೆಗೆ ಹೆಜ್ಜೆ ಮೂಡಿಸಿದ. ನಾನು ಅವನನ್ನೇ ನೋಡುತ್ತಿದ್ದೆ. “ಸೇಂಟ್ ಪೀಟರ್” ಎಂಬ ಜೀವವು ನಮ್ಮ ಬದುಕಿನಲ್ಲಿ ಬಾರದೇ ಇದ್ದೊಡೆ, ನಾನು ಯಾರೋ? ಲೋರಾ ಯಾರೋ? ಈ ಪೌಲ್ ಯಾರೋ?

ಪೌಲ್ ಇನ್ನೂ ಚಲಿಸುತಲಿದ್ದ ಉದ್ದ ರಸ್ತೆಯ ಕೊನೆಯ ತಿರುವಿನಲ್ಲಿ ಕಣ್ಮರೆಯಾದ.
ಗೇಟು ಮುಚ್ಚಿ ಒಳಗಡೆಗೆ ಬಂದೆ. ಮೇನ್ ಡೋರ್ ಕ್ಲೋಸ್ ಮಾಡಿ ನನ್ನ ಕೋಣೆಯೊಳಗೆ ನಡೆದ ‘ಕುಲುಮೆ’ ಪುಸ್ತಕವನ್ನು ಎಂದು ಪ್ರಕಟಗೊಳಿಸುವೆನೆಂದು ಮನ ತಹತಹಿಸುತಿತ್ತು.

ಗಡಿಯಾರದತ್ತ ನೋಡಿದರೆ ಎರಡೂ ಮುಳ್ಳುಗಳು ಸರಿಯಾಗಿ ಆರಕ್ಕೆ ನಿಂತಿದ್ದವು. ಫ್ಯಾನ್ ಸ್ವಿಚ್ ಆನ್ ಮಾಡಿದೆ. ಟೇಬಲ್ ಮೇಲೆನ ಇಂಗ್ಲಿಷ್ ಕಾದಂಬರಿಯ ಪುಟಗಳು ಫ್ಯಾನ್ ಗಾಳಿಗೆ ಮತ್ತೆ ಪಟಪಟಿಸುತ್ತಿದ್ದವು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ