Advertisement
ಅಂಗೈ ಗೆರೆಗಳಾಗುವುದಿಲ್ಲ ಭವಿಷ್ಯದ ಹೆದ್ದಾರಿಗಳು

ಅಂಗೈ ಗೆರೆಗಳಾಗುವುದಿಲ್ಲ ಭವಿಷ್ಯದ ಹೆದ್ದಾರಿಗಳು

ನನಗೆ ನನ್ನ ಭವಿಷ್ಯದ ಬಗ್ಗೆ ತಿಳಿಯುವ ಕುತೂಹಲವುಂಟಾಗಿ ನನ್ನ ಅಂಗೈಯನ್ನು ಅವನ ಮುಂದೆ ಮಾಡಿದೆ. ಆ ಭವಿಷ್ಯಗಾರ ಇಡಿ ನನ್ನ ಅಂಗೈ ಜಾಲಾಡಿ ‘ನಿನ್ನ ವಿದ್ಯಾಭ್ಯಾಸ ಇಲ್ಲಿಗೆ ಕೊನೆ ಆಗತೈತಿ. ಇನ್ ಮುಂದಾ ಓದಾಕ ಹೋಗಬ್ಯಾಡ. ಓದಿದ್ರೂ ತಲಿಗೆ ಹತ್ತಾಂಗಿಲ್ಲ. ಈ ಲಾರಿನ ನಿನಗ ಗತಿ ಆಗ್ತೇತಿ’ ಅಂತ ಹೇಳಿ ಇಳಿದು ಹೋಗಿಬಿಟ್ಟ. ಅಂಗೈ ಮೇಲಿನ ಭವಿಷ್ಯ ನಿಜಾನೋ ಸುಳ್ಳೋ ಒಂದು ತಿಳಿಯದ ವಯಸ್ಸದು. ಯಾರಾದ್ರೂ ಏನಾದ್ರೂ ಹೇಳಿಬಿಟ್ಟರೆ ನಂಬಿಬಿಡುವ ಮುಗ್ಧತೆಯೋ ದಡ್ಡತನವೋ ಆಗ ನನ್ನಲ್ಲಿತ್ತು. ಮೊದಲೇ ಓದಿನಲ್ಲಿ ಅಷ್ಟಕಷ್ಟೆ ಇದ್ದ ನನಗೆ ಅವನ ಮಾತು ಆ ಕ್ಷಣಕ್ಕೆ ನಿಜ ಅನಿಸಾಕತ್ತಿತು.
ಇಸ್ಮಾಯಿಲ್‌ ತಳಕಲ್‌ ಬರೆಯುವ ತಳಕಲ್‌ ಡೈರಿ

ನನ್ನ ಅಬ್ಬಾ ಬಹಳ ಕಷ್ಟಪಟ್ಟು ದುಡಿದು ಒಂದು ಲಾರಿ ತೆಗೆದುಕೊಂಡಿದ್ದರು. ಮೊದಲು ಹಮಾಲಿಯಾಗಿ ದುಡಿದಿದ್ದ ಅವರು ನಂತರ ಲಾರಿ ಕ್ಲೀನರ್ ಆಗಿ, ಡ್ರೈವರ್ ಆಗಿ ಒಂದೊಂದೆ ಮೆಟ್ಟಿಲನ್ನು ಏರಿ ಸ್ವಂತದ್ದು ಅಂತ ತೆಗೆದುಕೊಂಡಿದ್ದು ಮೊದಲಿಗೆ ಲಾರಿಯನ್ನೆ. ಆ ಲಾರಿ ಮೂಲಕ ಹುಬ್ಬಳ್ಳಿ, ಧಾರವಾಡ, ಕುಷ್ಟಗಿ, ಗಂಗಾವತಿ ಬೇರೆ ಬೇರೆ ದೂರದೂರುಗಳಿಗೂ ಲೋಡುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಒಮ್ಮೆ ಹೋದರೆ ಮನೆಗೆ ಮರಳಿ ಬರುತ್ತಿದ್ದದ್ದು ಮೂರ‍್ನಾಲ್ಕು ದಿನಗಳ ನಂತರವೇ. ಬರುವಾಗ ಅವರು ಒಂದು ಚೀಲದಷ್ಟು ತಂಡಿ ತಿನಿಸುಗಳನ್ನು ಹೊತ್ತು ತರುತ್ತಿದ್ದರಿಂದ ನಮಗೆಲ್ಲ ಖುಷಿಯೋ ಖುಷಿ. ನಮ್ಮ ಕೈಗೆ ಸಿಕ್ಕ ಆ ಚೀಲ ಒಂದೇ ದಿನದಲ್ಲಿ ಖಾಲಿ. ಮತ್ತೆ ಅಬ್ಬಾ ಲೋಡು ತೆಗೆದುಕೊಂಡು ಹೋಗಿ ಬರುವಾಗ ಅವರ ಕೈಯಲ್ಲಿರುವ ಚೀಲವನ್ನೆ ಗಮನಿಸಿ ತಿನಿಸುಗಳು ಎಷ್ಟಿರಬಹುದೆಂದು ಲೆಕ್ಕಕ್ಕೆ ಕೂಡುತ್ತಿದ್ದೆವು.

ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಭಾನುವಾರ ಅಥವಾ ಇತರ ರಜಾ ದಿನಗಳಲ್ಲಿ ಹೊಲಕ್ಕೆ ದುಡಿಯಲು ಗೆಳೆಯರೊಂದಿಗೆ ಹೋಗುತ್ತಿದ್ದೆನಲ್ಲಾ, ಪ್ರೌಢಶಾಲಾ ಹಂತಕ್ಕೆ ಬಂದಾಗಲೂ ಅದು ಮುಂದುವರೆದಿತ್ತು. ಆದರೆ ಈ ಬಾರಿ ಹೊಲಕ್ಕಲ್ಲ, ಬದಲಾಗಿ ಅಬ್ಬಾನ ಜೊತೆ ಲಾರಿಗೆ ಹೋಗುತ್ತಿದ್ದೆ. ಶಾಲೆಯ ಸೂಟಿ ದಿನಗಳಲ್ಲಿ ಅಬ್ಬಾ ಲಾರಿಯಲ್ಲಿ ಲೋಡು ಮಾಡಿಸಿಕೊಂಡು ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಿದ್ದರು. ಆಗ ಭತ್ತದ ಹೊಟ್ಟನ್ನು ಹುಬ್ಬಳ್ಳಿಗೆ ತೆಗೆದುಕೊಂಡು ಹೋಗಿ ಅನ್‌ಲೋಡ್ ಮಾಡಿಬರುತ್ತಿದ್ದದ್ದು ಹೆಚ್ಚಿತ್ತು. ಹಮಾಲಿಗಳು ಹಗಲೆಲ್ಲಾ ಲೋಡ್ ಮಾಡಿದರೆ ಸಂಜೆ ಹೊತ್ತಿಗೆ ಕೊಪ್ಪಳದಿಂದ ನಾನೂ ಅಬ್ಬಾನೂ ಲಾರಿ ತೆಗೆದುಕೊಂಡು ಹೊರಟರೆ ಮಧ್ಯರಾತ್ರಿಯ ಹೊತ್ತಿಗೆ ಹುಬ್ಬಳ್ಳಿ ತಲುಪಿರುತ್ತಿದ್ದೆವು. ಆಗ ಕೊಪ್ಪಳದಿಂದ ಹುಬ್ಬಳ್ಳಿಗೆ ಒನ್‌ವೇ ಇದ್ದದ್ದೂ, ಭತ್ತದ ಹೊಟ್ಟಿನ ಲೋಡನ್ನು ತುಂಬಾ ಎತ್ತರಕ್ಕೆ ಒಟ್ಟುತ್ತಿದ್ದರಿಂದ ಲಾರಿಯನ್ನು ನಿಧಾನಕ್ಕೆ ಚಲಾಯಿಸಬೇಕಾಗಿದ್ದರಿಂದ ಹುಬ್ಬಳ್ಳಿ ತಲುಪುವುದು ತಡವಾಗುತ್ತಿತ್ತು. ಅದಕ್ಕೆ ದಾರಿ ಮಧ್ಯದಲ್ಲಿ ಬರುತ್ತಿದ್ದ ಲಕ್ಕುಂಡಿಯ ಢಾಬಾದಲ್ಲಿ ನಮ್ಮ ರಾತ್ರಿಯ ಊಟ. ನನಗೆ ಢಾಬಾದಲ್ಲಿಯ ಊಟವೆಂದರೆ ಎಲ್ಲಿಲ್ಲದ ಪ್ರೀತಿ. ಅಲ್ಲಿಯ ದಾಲ್ ಫ್ರೈ ಪರೋಟಾ, ಅಂಡಾರ‍್ರಿ ಚಪಾತಿಯ ರುಚಿ ಸವಿದವರಿಗೆ ಮಾತ್ರ ಗೊತ್ತು. ಪ್ರತಿ ಬಾರಿ ಹುಬ್ಬಳ್ಳಿಗೆ ಲೋಡು ತೆಗೆದುಕೊಂಡು ಹೋದಾಗಲೂ ಲಕ್ಕುಂಡಿಯ ಢಾಬಾದಲ್ಲಿಯೇ ಇದನ್ನು ಸವಿಯದೆ ಮುಂದೆ ಹೋಗುತ್ತಿರಲಿಲ್ಲ. ನಾನು ಅಬ್ಬಾನ ಜೊತೆಗೆ ಖುಷಿಯಿಂದ ಲಾರಿಗೆ ಹೋಗಲು ಲಕ್ಕುಂಡಿ ಢಾಬಾದ ಅಂಡಾರ‍್ರಿಯೂ ಒಂದು ಕಾರಣಗಿತ್ತು.

ಹುಬ್ಬಳ್ಳಿಯಲ್ಲಿ ಭತ್ತದ ಹೊಟ್ಟನ್ನು ಅನ್‌ಲೋಡ್ ಮಾಡಿದ ನಂತರ ಸಾಯಂಕಾಲ ಹುಬ್ಬಳ್ಳಿಯಿಂದ ಹೊರಡಬೇಕಾಗಿತ್ತು. ಒಂದು ವೇಳೆ ಅಲ್ಲಿಂದ ಕೊಪ್ಪಳಕ್ಕೆ ಬೇರೆ ಲೋಡ್ ಇದ್ದರೆ ತರುತ್ತಿದ್ದೆವು, ಇಲ್ಲದಿದ್ದರೆ ಖಾಲಿ ಲಾರಿ ಮರಳಿ ಬರುತ್ತಿತ್ತು. ಹಾಗೆ ಖಾಲಿ ಬರುವಾಗ ಗದಗವರೆಗೆ ಕೊಪ್ಪಳದವರೆಗೆ ಪ್ರಾಯಣಿಕರು ಹತ್ತುತ್ತಿದ್ದರು. ಆಗಿನ ಕಾಲಕ್ಕೆ ಬಸ್ಸುಗಳು ಅಷ್ಟೊಂದು ಇರುತ್ತಿರಲಿಲ್ಲವಾದ್ದರಿಂದ ಪ್ರಯಾಣಿಕರು ಲಾರಿಯನ್ನು ಅವಲಂಬಿಸುತ್ತಿದ್ದರು. ನಮ್ಮ ಲಾರಿಯಲ್ಲಿ ಹತ್ತಿದ ಪ್ರಯಾಣಿಕರ ಪ್ರಯಾಣ ದರವನ್ನು ನಾನೇ ಸಂಗ್ರಹಿಸುತ್ತಿದ್ದೆ.

ನನ್ನ ಹತ್ತನೆ ತರಗತಿಯ ಪರೀಕ್ಷೆಗಳು ಮುಗಿದ ಮೇಲೆ ಬೇಸಿಗೆ ರಜೆಯಲ್ಲಿ ಅಬ್ಬಾನೊಂದಿಗೆ ಲಾರಿಗೆ ಹೋಗಿದ್ದೆ. ಹುಬ್ಬಳ್ಳಿಯಿಂದ ಮರಳಿ ಬರುತ್ತಿದ್ದಾಗ ಹಣವನ್ನು ಸಂಗ್ರಹಿಸುತ್ತಿದ್ದಾಗ ಒಬ್ಬ ಪ್ರಯಾಣಿಕ ಮಾತಿಗೆ ಸಿಕ್ಕ. ಅದೂ ಇದು ಮಾತನಾಡಿದ ಮೇಲೆ ಅವನು ಅಂಗೈ ಮೇಲಿನ ಗೆರೆಗಳನ್ನು ನೋಡಿ ಮುಂದಿನ ಭವಿಷ್ಯ ನುಡಿಯುವುದಾಗಿ ಹೇಳಿದ. ನನಗೆ ನನ್ನ ಭವಿಷ್ಯದ ಬಗ್ಗೆ ತಿಳಿಯುವ ಕುತೂಹಲವುಂಟಾಗಿ ನನ್ನ ಅಂಗೈಯನ್ನು ಅವನ ಮುಂದೆ ಮಾಡಿದೆ. ಆ ಭವಿಷ್ಯಗಾರ ಇಡಿ ನನ್ನ ಅಂಗೈ ಜಾಲಾಡಿ ‘ನಿನ್ನ ವಿದ್ಯಾಭ್ಯಾಸ ಇಲ್ಲಿಗೆ ಕೊನೆ ಆಗತೈತಿ. ಇನ್ ಮುಂದಾ ಓದಾಕ ಹೋಗಬ್ಯಾಡ. ಓದಿದ್ರೂ ತಲಿಗೆ ಹತ್ತಾಂಗಿಲ್ಲ. ಈ ಲಾರಿನ ನಿನಗ ಗತಿ ಆಗ್ತೇತಿ’ ಅಂತ ಹೇಳಿ ಇಳಿದು ಹೋಗಿಬಿಟ್ಟ. ಅಂಗೈ ಮೇಲಿನ ಭವಿಷ್ಯ ನಿಜಾನೋ ಸುಳ್ಳೋ ಒಂದು ತಿಳಿಯದ ವಯಸ್ಸದು. ಯಾರಾದ್ರೂ ಏನಾದ್ರೂ ಹೇಳಿಬಿಟ್ಟರೆ ನಂಬಿಬಿಡುವ ಮುಗ್ಧತೆಯೋ ದಡ್ಡತನವೋ ಆಗ ನನ್ನಲ್ಲಿತ್ತು. ಮೊದಲೇ ಓದಿನಲ್ಲಿ ಅಷ್ಟಕಷ್ಟೆ ಇದ್ದ ನನಗೆ ಅವನ ಮಾತು ಆ ಕ್ಷಣಕ್ಕೆ ನಿಜ ಅನಿಸಾಕತ್ತಿತು. ಆಗ ತಾನೆ ಬರೆದಿದ್ದ ಹತ್ತನೇ ತರಗತಿಯ ಪರೀಕ್ಷೆಯ ಫಲಿತಾಂಶ ನನ್ನ ಪರವಾಗಿ ಬರುವ ಯಾವ ಭರವಸೆಯೂ ಆ ಅಂಗೈ ಭವಿಷ್ಯಗಾರನಿಂದ ಇಲ್ಲದಂತಾಯ್ತು. ನನ್ನ ಅಬ್ಬಾನೂ ಆಗಾಗ ನನಗೆ ಹೇಳುತ್ತಿದ್ದರು, “ಜಾಸ್ತಿ ಓದಿ ಏನ್ ಮಾಡೋದೈತಿ? ನನ್ನ ಜೊತೆ ಲಾರಿಯಲ್ಲೇ ಮುಂದುವರಿ, ನಾವು ಇನ್ನೂ ಎತ್ತರಕ್ಕ ಬೆಳಿಬಹುದು” ಅಂತ. ಆ ಭವಿಷ್ಯಗಾರ ಅಪರಾತ್ರಿಯಲ್ಲಿ ಹೇಳಿದ್ದ ಭವಿಷ್ಯ, ಅಬ್ಬಾನ ಆ ಮಾತು ನಾನು ಮುಂದೆ ಓದುವ ಯಾವ ಭರವಸೆಯನ್ನೂ ಹುಟ್ಟಿಸಲಿಲ್ಲ. ಲಾರಿಯಲ್ಲಿ ಹೀಗೆ ಪ್ರಯಾಣಿಕರ ಹಣವನ್ನು ಇಸಿದುಕೊಳ್ಳುತ್ತಾ, ಲಾರಿಯನ್ನು ಕ್ಲೀನ್ ಮಾಡುತ್ತಾ, ಆಗೊಮ್ಮೆ ಈಗೊಮ್ಮೆ ಲಾರಿ ಚಾಲನೆ ಮಾಡುವುದನ್ನು ಮಾಡುತ್ತಾ ಈ ಲಾರಿಯೆನ್ನುವ ಆರು ಚಕ್ರದ ಗಾಡಿ ನನ್ನ ಬದುಕನ್ನು ದೂಡುವುದು ಖಾತ್ರಿಯಾಗತೊಡಗಿತ್ತು. ನಾನು ಲಾರಿ ಡ್ರೈವರ್ ಆಗಿ ಒಂದು ದಿನ ನಾಲ್ಕೈದು ಲಾರಿಗಳ ಮಾಲಿಕನಾದಂತೆ ಪ್ರತಿದಿನವೂ ಕನಸು ಕಾಣುತ್ತಾ ಹೋದೆ. ಕಾಲೇಜು ಮೆಟ್ಟಿಲು ಹತ್ತುವ ಆಸೆಯೂ ಭರವಸೆಯೂ ಇಲ್ಲದಂತಾಗಿತ್ತು.

ಆದರೆ ಯಾವಾಗ ಹತ್ತನೇ ತರಗತಿಯ ಫಲಿತಾಂಶ ಬಂದು ನಾನು ಉತ್ತೀರ್ಣನಾದೆನೋ ಆ ಅಂಗೈ ಭವಿಷ್ಯಗಾರನ ಮಾತೂ ನನ್ನನ್ನು ಲಾರಿಯಲ್ಲಿಯೇ ಮುಂದುವರೆಸಬೇಕೆನ್ನುವ ನನ್ನ ಅಬ್ಬಾನ ಆಸೆಯೂ ಮರೆತು ಹೋದವು. ನನಗೆ ಅದೇನು ತಿಳಿಯಿತೊ, ಕಾಲೇಜು ಓದಬೇಕೆನ್ನುವ ಅಭಿಲಾಷೆ ಒತ್ತರಿಸಿಕೊಂಡು ಬಂತು. ನನ್ನೊಂದಿಗೆ ಉತ್ತೀರ್ಣನಾಗಿದ್ದ ನನ್ನ ಗೆಳೆಯ ಅದಾಗಲೇ ಪಿಯುಸಿಗೆ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿದ್ದ. ಅವನನ್ನು ನೋಡಿ ನಾನೂ ಕಾಲೇಜಿಗೆ ಹಚ್ಚಲು ಅಬ್ಬಾನನ್ನು ಪೀಡಿಸತೊಡಗಿದೆ. ಅವರೂ ಜಾಸ್ತಿ ವಿರೋಧಿಸದೆ ಓದಲು ಅನುಮತಿಕೊಟ್ಟರು. ಆಗಲೇ ನಾನೂ ಖುಷಿಯಿಂದ ಓಡಾಡಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದೆ.

ಈಗ ಅದನ್ನೆಲ್ಲಾ ಯೋಚಿಸುತ್ತಿದ್ದರೆ ನನಗೆ ನಗುವೂ ಆತಂಕವೂ ಆಗುತ್ತದೆ. ಒಂದು ವೇಳೆ ನಾನು ಆ ಭವಿಷ್ಯಕಾರನ ಮಾತು ನಂಬಿಬಿಟ್ಟಿದ್ದರೆ ನಾನು ಎಲ್ಲಿರುತ್ತಿದ್ದೆನೋ ಯಾವ ಸ್ಥಿತಿಯಲ್ಲಿರುತ್ತಿದ್ದೆನೋ. ನಾಲ್ಕೈದು ಲಾರಿಗಳ ಮಾಲಿಕನಾಗುತ್ತಿದ್ದೆನೋ ಇಲ್ಲವೆ ಹಮಾಲಿಯಾಗಿ ಚೀಲಗಳನ್ನು ಹೊರುತ್ತಿದ್ದೆನೋ. ಒಟ್ಟಿನಲ್ಲಿ ಅಂಗೈ ಭವಿಷ್ಯ ನಂಬದೆ ಇದ್ದದ್ದೆ ಒಳ್ಳೆಯದಾಗಿತ್ತು. ನನ್ನ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ನಾನು ಪ್ರತಿದಿನ ಹೇಳುತ್ತಿರುತ್ತೇನೆ, “ನೀವು ಒಂದು ಗುರಿ ಅಂತ ಇಟ್ಟುಕೊಂಡಾಗ ಬೇರೆ ಬೇರೆ ಅಡೆತಡೆಗಳು, ಮನಸ್ಸು ಚಂಚಲಗೊಳ್ಳುವ ಸಂಗತಿಗಳು ಬರುತ್ತಲೇ ಇರ್ತಾವು. ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ನೀವು ಹೊರಟಿರುವ ಒಳ್ಳೆಯ ದಾರಿಯಲ್ಲೆ ಅವೆಲ್ಲವುಗಳನ್ನೂ ಎದುರಿಸಿ ಮುನ್ನುಗ್ತಾ ಇರಿ” ಅಂತ. ನಮ್ಮ ನಮ್ಮ ಭವಿಷ್ಯ ಅಂಗೈ ಗೆರೆಗಳನ್ನೋ ಗಿಳಿ ಹೇಳುವ ವಾಣಿಗಳನ್ನೋ ಅವಲಂಬಿಸಿರುವುದಿಲ್ಲ. ನಮ್ಮ ಗುರಿ ಆ ಗುರಿಯೆಡೆಗೆ ನಾವು ಮಾಡುವ ಪ್ರಯತ್ನಗಳು ನಮ್ಮ ಭವಿಷ್ಯವನ್ನು ರೂಪಿಸಲು ಸಹಾಯಕಾರಿಗಳಾಗಿರುತ್ತವೆ.

ನನ್ನ ಕಾರ್ಯಸ್ಥಾನವಾದ ಗೋಕಾಕಿಗೆ ಹೋಗುವಾಗ ಅಲ್ಲಿಂದ ಬರುವಾಗೊಮ್ಮೆ ಲಕ್ಕುಂಡಿಯ ಮೂಲಕವೇ ಪ್ರಯಾಣಿಸಬೇಕಾಗಿರುತ್ತದೆ. ಲಕ್ಕುಂಡಿಯನ್ನು ನೋಡಿದಾಗಲೊಮ್ಮೆ ನನಗೆ ಅಂಡಾರ‍್ರಿನೆ ನೆನಪಾಗಿ ಅಲ್ಲಿಳಿದು ಢಾಬಾ ಹೊಕ್ಕಿ ಬರಬೇಕೆನಿಸುತ್ತದೆ.

About The Author

ಇಸ್ಮಾಯಿಲ್ ತಳಕಲ್

ಇಸ್ಮಾಯಿಲ್ ತಳಕಲ್ ಕೊಪ್ಪಳ ಜಿಲ್ಲೆಯ ಗೊಂಡಬಾಳ ಎಂಬ ಗ್ರಾಮದಲ್ಲಿ ಜನಿಸಿದರು. ಪ್ರಸ್ತುತ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಖನಗಾಂವ್ ಗ್ರಾಮದಲ್ಲಿ ಸರ್ಕಾರಿ ಆದರ್ಶವಿದ್ಯಾಲಯ(ಆರ್‍ಎಮ್‍ಎಸ್‍ಎ) ಶಾಲೆಯಲ್ಲಿ ಕನ್ನಡ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಜಾವಾಣಿಯ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ (2020) ಸೇರಿದಂತೆ ಇವರ ಕಥೆಗಳು ಹಲವೆಡೆ ಪ್ರಕಟವಾಗಿ, ಬಹುಮಾನ ಪಡೆದುಕೊಂಡಿವೆ. “ಬೆತ್ತಲೆ ಸಂತ” ಇವರ ಪ್ರಕಟಿತ ಮೊದಲ ಕಥಾ ಸಂಕಲನ. ಈ ಕಥಾ ಸಂಕಲನಕ್ಕೆ 2021ರ ಪ್ರತಿಷ್ಟಿತ “ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಬಹುಮಾನ” ಬಂದಿದೆ. ಸಂಗೀತ ಕೇಳುವುದು, ಅಡುಗೆ ಮಾಡುವುದು ಇವರ ಆಸಕ್ತಿಯ ವಿಷಯಗಳು.

1 Comment

  1. ಎಸ್. ಪಿ. ಗದಗ.

    ನೀವು ಸಾಗಿ ಬಂದ ದಾರಿ ಓದಿ ಖುಷಿ ಆಯಿತು. ನಿಮ್ಮ ಪಯಣ ನಿಮ್ಮ ಎಲ್ಲ ವಿದ್ಯಾರ್ಥಿಗಳಿಗೆ ಮಾದರಿ ಮತ್ತು ಪ್ರೇರಣೆ. ಇನ್ನಷ್ಟು ಶಾಲಾ ದಿನಗಳ ನೆನೆಪುಗಳು ಮೂಡಿ ಬರಲಿ.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ