ಮನೆಯಿಂದ ಹೊರಟಾಗ ಚಿರಾಪುಂಜಿ ಎಂದರೆ ಪ್ರೈಮರಿ ಶಾಲೆಯಲ್ಲಿ ಹೇಳಿಕೊಟ್ಟಿದ್ದಂತೆ ಭಾರತದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಎನ್ನುವುದು ಮಾತ್ರ ತಲೆಯಲ್ಲಿ ಇತ್ತು. ಶಿಲ್ಲಾಂಗ್‌ನಿಂದ ಒಂದುವರೆ ಗಂಟೆಯ ಪ್ರಯಾಣ ಮಾತ್ರ ಎಂದಾಗ ಖುಷಿಯೋ ಖುಷಿ. ಹೋಗ್ತಾನೇ ಇದ್ದರೂ ಎಲ್ಲೂ ಚಿರಾಪುಂಜಿ ಅಂತ ಬೋರ್ಡ್ ಕಾಣದೆ ಚಾಲಕ ಬುರಿತ್ ಧೊತ್‍ದಾಂಗ್‍ನನ್ನು ಕೇಳಿದೆ. “ನೀವೀಗ ಚಿರಾಪುಂಜಿಯಲ್ಲಿಯೇ ಇದ್ದೀರ” ಎಂದ. ಹೌದು, ಚಿರಾಪುಂಜಿಯ ಮೂಲ ಹೆಸರು ಸೋಹ್ರಾ. ನಾಲಿಗೆ ಹೊರಳದ ಬ್ರಿಟೀಷರು ಚಿರಾಪುಂಜಿ ಎಂದಿದ್ದಾರೆ. ಇಂದಿಗೂ ಇಲ್ಲಿನ ಜನ ಸೋಹ್ರಾ ಎಂತಲೇ ಕರೆಯುವುದು.
ಅಂಜಲಿ ರಾಮಣ್ಣ ಬರೆಯುವ ‘ಕಂಡಷ್ಟೂ ಪ್ರಪಂಚ’ ಪ್ರವಾಸ ಅಂಕಣದಲ್ಲಿ ಮೇಘಾಲಯದಲ್ಲಿ ಸುತ್ತಾಡಿದ ಅನುಭವಗಳ ಕುರಿತ ಬರಹ
ಅದೊಂದು ದಟ್ಟ ಅರಣ್ಯ. ಅರಣ್ಯ ಎಂದಮೇಲೆ ನೂರೆಂಟು ರಹಸ್ಯವೂ ಜೊತೆಯಾಗಿತ್ತು. ಎಂಟು ಎಕರೆಗಳ ಜಾಗದಲ್ಲಿ ಪರ್ವತದಿಂದ ಇಳಿದು ಪ್ರಪಾತದಲ್ಲಿ ಪ್ರಕೃತಿ ಗುಹೆಯಾಗಿ ಮೈಚಾಚಿದ್ದಳು. ಗುಹೆ ಎಂದರೆ ಬರಿಯ ಗುಹೆಯಲ್ಲವೋ ಜಾಣ ಎನ್ನುತ್ತಾ ಒಳಗೆ ಹನ್ನೊಂದು ಜಲಪಾತಗಳಲ್ಲಿ ಹರಿಯುತ್ತಿದ್ದಳು. ಎಪ್ಪತ್ತೆರಡು ಬೆಟ್ಟೇಣುಗಳಲ್ಲಿ ಗುಟ್ಟಾಗಿದ್ದಳು. ಹತ್ತಾರು ತಾಮ್ರ ಬಣ್ಣದ ಮೂಲವೇ ಕಾಣದಂತೆ ನೇತಾಡುವ ಕಲ್ಪದರುಗಳ ಜೋಕಾಲಿಯಾಗಿದ್ದಳು. ಪಕ್ಕದಲ್ಲಿ ಹಸಿರಾಗಿ ಹಬ್ಬಿದ್ದಳು. ಹಕ್ಕಿಯ ಕಲರವಕ್ಕೆ ತಾವು ನೀಡುತ್ತಾ ನಡುನಡುವೆ ಬೆಳಕಿನ ಕಿಂಡಿಯಾಗಿ ದೂರದ ಆಕಾಶ ತೋರುತ್ತಿದ್ದಳು. ನುಣುಪು ಚಿಕ್ಕಬಂಡೆಯಲ್ಲಿ ತೂಕಡಿಸುತ್ತಾ ಹಾಸಿಗೆಯಾಗಿದ್ದಳು. ಅದಕ್ಕೆ ಸಪೂಟಾದ ಕಲ್ಲನ್ನೇ ದಿಂಬಿನ ಆಕಾರದಲ್ಲಿ ಅರಳಿಸಿದ್ದಳು. ದುಂಬಿಗಾಗಿ ಹೂವಾಗಿದ್ದಳು. ಹೃದಯಾಕಾರದ ಹಾಸುಕಲ್ಲಿನಲ್ಲಿ ನೀರು ನಿಲ್ಲಿಸಿ ಕನ್ನಡಿಯಾಗಿದ್ದಳು. ಹೀಗೆಲ್ಲಾ ಇದ್ದ ಪ್ರಕೃತಿ ಸಿಕ್ಕಿದ್ದು ಖಸಿ ಪರ್ವತಶ್ರೇಣಿಯ ನಟ್ಟ ನಡುವಿನಲ್ಲಿ. ಚಿರಾಪುಂಜಿಯಿಂದ ಹತ್ತು ಕಿಲೋಮೀಟರ್‌ಗಳ ಅಂತರದಲ್ಲಿ. ಮೇಘಾಲಯದಲ್ಲಿ.
ನೂರಕ್ಕೂ ಮಿಗಿಲಾದ ಗುಹೆಗಳನ್ನು ತನ್ನೊಳಗೆ ಇರಿಸಿಕೊಂಡಿರುವ ರಾಜ್ಯ ಮೇಘಾಲಯ. ಏಕಶಿಲಾ ಗುಹೆ ಅಂತ ಒಂದು ಜಾಗವನ್ನು ತೋರಿಸಿದ್ದ ಚಾಲಕ ಬುರಿತ್. ಯಾಕೋ ಪ್ರವಾಸಿಗರನ್ನು ಉತ್ಪ್ರೇಕ್ಷೆಯಲ್ಲಿಯೇ ಕರೆಯುತ್ತಿದೆ ಎನ್ನಿಸಿತು ಆ ಜಾಗ. “ಏನು ಬುರಿತ್ ಅಷ್ಟು ದೂರದಿಂದ ಬಂದವಳನ್ನು ಈ ಗುಹೆ ತೋರಿಸಿ ನಿರಾಸೆ ಮಾಡಿಬಿಟ್ಟೆಯಲ್ಲ” ಎಂದು ಅಲವತ್ತುಕೊಂಡೆ. “ಈಗ ನನಗೆ ನಿಮ್ಮ ಅಭಿರುಚಿ ಗೊತ್ತಾಗಿದೆ. ಬನ್ನಿ ಒಂದು ಸೀಕ್ರೇಟ್ ಜಾಗಕ್ಕೆ ಕರೆದುಕೊಂಡು ಹೋಗುತ್ತೇನೆ. ಅಲ್ಲಿಗೆ ಹೆಚ್ಚಿನ ಪ್ರವಾಸಿಗರು ಬರಲ್ಲ. ಅದಕ್ಕಿಂತ ಸುಂದರ ಜಾಗ ಈ ಭೂಮಿ ಮೇಲೆ ಇರಲು ಸಾಧ್ಯವೇ ಇಲ್ಲ” ಎನ್ನುತ್ತಾ ತೆಳುನಗುವಿನ ಮುಖದಲ್ಲಿ ಡ್ರೈವ್ ಮಾಡುತ್ತಾ ಕಾರು ತಂದು ನಿಲ್ಲಿಸಿದ ’ಗಾರ್ಡನ್ ಆಫ್ ಕೇವ್ಸ್’ ಎನ್ನುವ ಬೋರ್ಡಿನ ಮುಂದೆ. ನೂರು ರೂಪಾಯಿಯ ಪ್ರವೇಶ ಶುಲ್ಕ ಕೊಟ್ಟು ಒಳ ಹೊಕ್ಕಾಗ ಕಲ್ಲಿನ ಗುಡಿಸಿಲಿನಂತಹ ಕಚೇರಿಯ ಬಾಗಿಲಲ್ಲಿ ನಿಂತು ಸ್ವಾಗತಿಸಿದವಳು ರಿತ್ ರಾಣಿ. ಅಲ್ಲಿನ ಮ್ಯಾನೇಜರ್ ಎಂದು ಗುರುತಿಸಿಕೊಂಡ ಯುವತಿ ವಿಪರೀತ ಸುಂದರಿ. ಖಸಿ ಬುಡಕಟ್ಟಿನ ಹೆಂಗಸರು ಹಾಕಿಕೊಳ್ಳುವಂತೆ ದುಪ್ಪಟ್ಟಾದಂತಹ ಎರಡು ಬಟ್ಟೆಗಳನ್ನು ಮುಖಾಮುಖಿಯಾಗಿ ಸುತ್ತಿ ಎರಡು ಭುಜಗಳ ಮೇಲೆ ಗಂಟು ಹಾಕಿಕೊಳ್ಳುವ ’ಜಿಂಫಾಂಗ್’ ಧರಿಸಿದ್ದಳು.
ಆ ಸ್ಥಳದಲ್ಲಿ ಏನೇನಿದೆ ಅವುಗಳನ್ನು ನೋಡಲು ಹೇಗೆ ಹೋಗಬೇಕು ಎಷ್ಟು ಸಮಯ ಬೇಕಾಗುತ್ತದೆ ಎನ್ನುವ ವಿವರ ಒಟ್ಟು ಹನ್ನೊಂದು ಜಾಗಗಳ ಕ್ಲುಪ್ತ ಪರಿಚಯ ಮಾಡಿಸಿ ಪ್ರತೀ ಕಡೆಯಲ್ಲಿಯೂ ಸಹಾಯಕರು ಇರುತ್ತಾರೆ ಎನ್ನುವುದನ್ನೂ ಹೇಳಿ ಬೀಳ್ಕೊಟ್ಟಳು. ಆಕೆಯಿಂದ ಎಡಕ್ಕೆ ಹೊರಳಿ ಹತ್ತು ಹೆಜ್ಜೆ ಹೋದಾಗ ಸಿಕ್ಕಿದ್ದು ಬಂಡೆಯೊಳಗಿನ ಕೋಣೆಯಂತಹ ಜಾಗ. ಅಲ್ಲೊಂದು ಜಲಪಾತ; ಅದರ ಎಡ ನೇರಕ್ಕೆ ಎದುರಾಗಿ ಮಂಚ ದಿಂಬಿನಂಥ ಬಂಡೆ. ಈ ಜಾಗದ ಸೌಂದರ್ಯದ ಬಗ್ಗೆ ಬುರಿತ್ ಹೇಳಿದ ಮಾತು ನಿಜವಾಗಲಿದೆ ಎನ್ನುವ ಸಾಕ್ಷಿ ಅಲ್ಲಿ ಆರಂಭವಾಯಿತು. ನಂತರ ಕಂಡ ಅಷ್ಟೂ ಜಾಗಗಳು ’ಈ ಹಸಿರು ಸಿರಿಯಲಿ ಮನಸು ಮೆರೆಯಲಿ’ ಎಂದು ರಾಗವಾಗಿ ನನ್ನನ್ನು ಕುಣಿಸುತ್ತಿತ್ತು.
ಇದರ ಮೂಲ ಹೆಸರು ’ಕ ಬ್ರಿ ಕಿ ಸ್ಯ್ಂಗ್ರಂಗ್’. ನೂರಾರು ವರ್ಷಗಳ ಹಿಂದೆ ಮಾಫೌ ಮತ್ತು ಲೈತ್ನಿಯಂ ಬಡಕಟ್ಟುಗಳ ನಡುವೆ ಕಾಡಿನ ಮೇಲಿನ ಅಧಿಕಾರಕ್ಕಾಗಿ ಸೆಣೆಸಾಟ ನಡೆದಾಗ ಲೈತ್ನಿಯಂ ಬುಡಕಟ್ಟಿನ ಜನರನ್ನು ಆ ಜನರ ರಾಜ ಭುಸಿಂಗ್ ಸಿಯೇಮ್‍ನು ಸುತ್ತಲಿನ ಮೂವತ್ತೊಂದು ಹಳ್ಳಿಗಳ ಜನರನ್ನು ಕರೆತಂದು ಈ ಗುಹೆಯಲ್ಲಿ ರಕ್ಷಿಸಿದ್ದನಂತೆ. ಗೆಲುವಿನ ನಂತರ ಈ ಗುಹೆ ಆತನ ರಾಜಾಸ್ಥಾನವಾಗಿತ್ತಂತೆ.
ಸ್ನಾನಕ್ಕೊಂದು ಗುಹೆ, ಶೌಚಕ್ಕೊಂದು, ಅಡುಗೆಗೊಂದು, ಸಚಿವಾಲಯವಾಗೊಂದು, ಶೃಂಗಾರಕ್ಕೆ ಮತ್ತೊಂದು… ಹೀಗೆ ಬಂಡಗಳಲ್ಲಿ ಸಹಜ ಗುಹೆಗಳು ಅದಕ್ಕೆ ತಕ್ಕಂತೆ ಝರಿ ಜಲಪಾತಗಳು, ಎಲ್ಲೆಲ್ಲಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಬೆಳಕಿನ ವ್ಯವಸ್ಥೆ. ಎಲ್ಲವನ್ನೂ ಯಾವ ಆರ್ಕಿಟೆಕ್ಟ್ ಕೂಡ ಊಹಿಸಲಾರದಷ್ಟು ಅಚ್ಚುಕಟ್ಟಾಗಿ ಪ್ರಕೃತಿ ಕಟ್ಟಿ ಕೊಟ್ಟಿದೆ ’ಗಾರ್ಡನ್ ಆಫ್ ಕೇವ್ಸ್’ ಅನ್ನು. ಮಾತು ’ಇದು ನಿನಗಾಗಿ’ ಎಂದು ಮೌನಕ್ಕೆ ಈ ಗುಹೆಯನ್ನು ಪ್ರೀತಿಯಿಂದ ಉಡುಗೊರೆ ಕೊಟ್ಟಂತೆ ಆಹ್ಲಾದದ ಮನೋಗಾಥೆ ಅಲ್ಲಿತ್ತು.
ಹೀಗಿದ್ದ ಸೌಂದರ್ಯ ಮಳೆಯಿಂದಾದ ಕೊಚ್ಚೆ, ಮರಳುಗಲ್ಲುಗಳ ರಾಶಿಯಲ್ಲಿ ಗುಹಾಂತರವಾಗಿಬಿಟ್ಟಿತ್ತು. ಮನುಷ್ಯ ಮಾತು ಬೆಳೆಸುತ್ತಾ ಹೋದಂತೆ ಮೌನಗುಹೆ ಭ್ರಮನಿರಸನಗೊಂಡು ಯಾರಿಗೂ ಸುಳಿವು ಬಿಡದೆ ಮಾಯವಾಗಿಬಿಟ್ಟಿತ್ತು. 2019ರಲ್ಲಿ ಮೇಘಾಲಯದಲ್ಲಿ ಬಿರುಸಿನಿಂದ ಎಡೆಬಿಡದೆ ಸುರಿದ ವರುಣ ಈ ಸುಂದರಿಯ ಒಂದು ಚುಂಗನ್ನು ಭೂಮಿಯಿಂದ ಮೇಲೆತ್ತಿಯೇ ಬಿಟ್ಟ. ಮೇಘಾಲಯದ ಪಾರ್ಕ್ ಮತ್ತು ಗುಹೆಗಳ ಸಮಿತಿಯವರು ಉತ್ಖನನ ಮಾಡಿ 24 ಏಪ್ರಿಲ್ 2019ರಂದು ಇದರ ಪರಿಚಯವನ್ನು ಮತ್ತೊಮ್ಮೆ ಮಾಡಿಸಿದ್ದಾರೆ. ಕಲ್ಪನೆಗೆ ಮಿತಿಯಿದೆ ಆದರೆ ಅಲ್ಲಿನ ಸುಂದರತೆಗೆ ಅಲ್ಲ. ಪುನರ್ಯೌವನ ಗಳಿಸಲು ರೆಸಾರ್ಟ್‍ಗೆ ಹೋಗುವ ಜನಕ್ಕೆ ಅಪರಿಮಿತ ಸೌಂದರ್ಯ ಆಸ್ವಾದಿಸಲು ಇತಿಹಾಸ ತಿಳಿಯಲು ನೀರಿನೊಡನೆ ಸಂವಾದ ಮಾಡಲು, ನೀರವತೆಯೊಡನೆ ನೆಮ್ಮದಿಯಾಗಲು ಪ್ರಕೃತಿ ಕೊಟ್ಟ ದೊಡ್ಡ ಅವಕಾಶ ಗಾರ್ಡನ್ ಆಫ್ ಕೇವ್ಸ್. ’ಇಲ್ಲಿಗೆ ಹೆಚ್ಚು ಜನರು ಬರುವುದಿಲ್ಲ’ ಎಂದ ಚಾಲಕನ ಮಾತು ನೆನಪಾಗುತ್ತಿತ್ತು. ಬಹುಶಃ ಒಳಗೇ ಮನಸ್ಸು ಖುಷಿಯಾಗುತ್ತಿತ್ತು.
ಬುಡಕಟ್ಟು ಜನರ ಆಚಾರ, ಜೀವನ ಶೈಲಿಯ ಬಗ್ಗೆ ಪುಸ್ತಕಗಳಲ್ಲಿ ಒಮ್ಮೊಮ್ಮೆ ರಸವತ್ತಾಗಿಯೋ ಬಹುಪಾಲು ನೀರಸವಾಗಿಯೋ ಪರಿಚಯ ಇರುವವರಿಗೆ ಸಿನೆಮಾಗಳಲ್ಲಿ ಅವರುಗಳನ್ನು ವಿಕಾರವಾಗಿ, ದಡ್ಡರಂತೆ ಚಿತ್ರಿಸಿರುವ ನೆನಪೇ ಆಗುವುದು. ಆದರೆ ಇಂತಹ ಸ್ಥಳಗಳಿಗೆ ಭೇಟಿ ಇತ್ತಾಗ ಅವರುಗಳ ಜ್ಞಾನವೂ ಅವರ ಸಂಸ್ಕೃತಿಯಷ್ಟೇ ಉತ್ಕೃಷ್ಟ ಮತ್ತು ಮನೋರಂಜಿತ ಎನ್ನುವುದು ವೇದ್ಯವಾಗುತ್ತದೆ. ಅಂದಹಾಗೆ ಹೇಳಲೇ ಬೇಕಾದ ಮತ್ತೊಂದು ವಿಷಯವೆಂದರೆ ಅಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮ್ಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅಲ್ಲಿನ ಸರ್ಕಾರ ಎಂಭತ್ತೆರಡು ಜನರಿಗೆ ಕೆಲಸ ಕೊಟ್ಟಿದೆ. ಇಂತಹ ಅನುಪಮ ಜಾಗ ತೋರಿಸಿದ್ದಕ್ಕೆ ಥ್ಯಾಂಕ್ಸ್ ಹೇಳಬೇಕು ಬುರಿತ್‍ಗೆ ಎಂದುಕೊಂಡು ಹೊರಬಂದಾಗ ವಾತಾವರಣದಲ್ಲಿ ತಣಿವು ಏರುತ್ತಿತ್ತು, ಸೂರ್ಯ ಬೆಂಗಳೂರಿನಲ್ಲಿ ಸಿಗುತ್ತೇನೆ ಎನ್ನುವ ಷರಾ ಬರೆದು ಹೋಗಿ ನಾಲ್ಕು ದಿನವೇ ಆಗಿತ್ತು.
*****
ಮನೆಯಿಂದ ಹೊರಟಾಗ ಚಿರಾಪುಂಜಿ ಎಂದರೆ ಪ್ರೈಮರಿ ಶಾಲೆಯಲ್ಲಿ ಹೇಳಿಕೊಟ್ಟಿದ್ದಂತೆ ಭಾರತದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಎನ್ನುವುದು ಮಾತ್ರ ತಲೆಯಲ್ಲಿ ಇತ್ತು. ಶಿಲ್ಲಾಂಗ್‌ನಿಂದ ಒಂದುವರೆ ಗಂಟೆಯ ಪ್ರಯಾಣ ಮಾತ್ರ ಎಂದಾಗ ಖುಷಿಯೋ ಖುಷಿ. ಹೋಗ್ತಾನೇ ಇದ್ದರೂ ಎಲ್ಲೂ ಚಿರಾಪುಂಜಿ ಅಂತ ಬೋರ್ಡ್ ಕಾಣದೆ ಚಾಲಕ ಬುರಿತ್ ಧೊತ್‍ದಾಂಗ್‍ನನ್ನು ಕೇಳಿದೆ. “ನೀವೀಗ ಚಿರಾಪುಂಜಿಯಲ್ಲಿಯೇ ಇದ್ದೀರ” ಎಂದ. ಹೌದು, ಚಿರಾಪುಂಜಿಯ ಮೂಲ ಹೆಸರು ಸೋಹ್ರಾ. ನಾಲಿಗೆ ಹೊರಳದ ಬ್ರಿಟೀಷರು ಚಿರಾಪುಂಜಿ ಎಂದಿದ್ದಾರೆ. ಇಂದಿಗೂ ಇಲ್ಲಿನ ಜನ ಸೋಹ್ರಾ ಎಂತಲೇ ಕರೆಯುವುದು. ಇಲ್ಲಿ ಈಗ ಪುಸ್ತಕಗಳಲ್ಲಿ ಓದಿದ ಹಾಗೆ ಮಳೆ ಬರುವುದಿಲ್ಲ. ಖಸಿ ಬೆಟ್ಟಗಳ ಸಾಲಿನ ನಟ್ಟನಡುವೆ ಹಸಿರಾಡುತ್ತಾ ಇರುವ ಈ ಊರಿಗೆ ಬೇಸಿಗೆಯ ಧಾಳಿ ಆಗಿದೆ. ಹೆಚ್ಚಿದ ಗಣಿಗಾರಿಕೆಗೆ ಮಳೆ ಬೆಚ್ಚಿಬಿದ್ದಿದೆ. ಫ್ಯಾನ್ ಇಲ್ಲದೆ ಇರಲು ಕಷ್ಟ ಎನ್ನುವಷ್ಟೇ ಬಿಸಿ ಏರಿಬಿಟ್ಟಿದೆ.
*****
ಇನ್ನೂ ಅರ್ಧ ದಿನ ಸಮಯ ಇತ್ತು ಕತ್ತಲಾಗಲು. ಸ್ಥಳೀಯರು ಹೋಗುವ ಮಾರುಕಟ್ಟೆಗೆ ಹೋಗುವುದು ನನಗೆ ಬಲು ಅಚ್ಚುಮೆಚ್ಚು. ಹೊರಟಾಗ “ಇವತ್ತು ಮಾರುಕಟ್ಟೆ ಇಲ್ಲ, ನಾಳೆ ಇದೆ” ಎಂದ ಸೆರಿನಿಟಿ ಟ್ರ್ಯಾವೆಲೆರ್ಸ್ ಇನ್ನ್ ತಂಗುದಾಣದ ಮಾಲೀಕ ಮಿಚೇಲ್. “ಅರೆ, ಅದೇನು ಸಂತೆಯೇ ನಿಗಧಿತ ದಿನದಲ್ಲಿ ಇರಲು” ಎನ್ನುವ ಪ್ರಶ್ನೆಗೆ ಅಲ್ಲಿದ್ದವರೆಲ್ಲಾ ಕೊಟ್ಟ ವಿವರ ಆಸಕ್ತಿದಾಯಕವಾಗಿತ್ತು. ಬೆಳಿಗ್ಗೆ ಹತ್ತು ಗಂಟೆಗೆ ನಿಂತಿದ್ದೆ ಐವ್ ಸೋಹ್ರಾ ಮಾರುಕಟ್ಟೆಯ ಬಾಗಿಲಿನಲ್ಲಿ.
ಹೀಗೆ ಬಂಡಗಳಲ್ಲಿ ಸಹಜ ಗುಹೆಗಳು ಅದಕ್ಕೆ ತಕ್ಕಂತೆ ಝರಿ ಜಲಪಾತಗಳು, ಎಲ್ಲೆಲ್ಲಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಬೆಳಕಿನ ವ್ಯವಸ್ಥೆ. ಎಲ್ಲವನ್ನೂ ಯಾವ ಆರ್ಕಿಟೆಕ್ಟ್ ಕೂಡ ಊಹಿಸಲಾರದಷ್ಟು ಅಚ್ಚುಕಟ್ಟಾಗಿ ಪ್ರಕೃತಿ ಕಟ್ಟಿ ಕೊಟ್ಟಿದೆ ’ಗಾರ್ಡನ್ ಆಫ್ ಕೇವ್ಸ್’ ಅನ್ನು. ಮಾತು ’ಇದು ನಿನಗಾಗಿ’ ಎಂದು ಮೌನಕ್ಕೆ ಈ ಗುಹೆಯನ್ನು ಪ್ರೀತಿಯಿಂದ ಉಡುಗೊರೆ ಕೊಟ್ಟಂತೆ ಆಹ್ಲಾದದ ಮನೋಗಾಥೆ ಅಲ್ಲಿತ್ತು.
ಇದೊಂದು ಮಾಂತ್ರಿಕವಾದ ಜಾಗ, ಬರೀ ಮಾರುಕಟ್ಟೆಯಲ್ಲ ಪುರಾತನ ಜೀವವೊಂದು ತನ್ನ ಎಂದೂ ಮುಗಿಯದ ಯೌವ್ವನದದಿಂದ ಮನುಕುಲದ ಕಥೆ ಹೇಳುವಂತಿದೆ ಈ ಜಾಗ. ಇದೊಂದು ತಾಣವಲ್ಲ ಅನುಭವ. ಇಲ್ಲಿ ನಡೆಯುವ ವಿನಿಮಯವೆಲ್ಲಾ ಒಂದು ಸಾಮುದಾಯಿಕ ಸಂಭ್ರಮ.
ಇಲ್ಲಿ ಎರಡು ರೀತಿಯ ಮಾರುಕಟ್ಟೆಗಳಿವೆ. ‘Iewbah’ ದೊಡ್ಡ ಮಾರುಕಟ್ಟೆ. ‘Iewrit’ ಸಣ್ಣ ಮಾರುಕಟ್ಟೆ. ದೊಡ್ಡ ಮಾರುಕಟ್ಟೆಯನ್ನು ಪ್ರತೀ ಎಂಟು ದಿನಗಳಿಗೊಮ್ಮೆ ನಡೆಸಲಾಗುತ್ತದೆ. ಇಂದಿನ ಮಾರುಕಟ್ಟೆಯ ದಿನ ಸೋಮವಾರವಿದ್ದರೆ ಮುಂದಿನದ್ದು ಮಂಗಳವಾರ ಇರುತ್ತದೆ. ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳು ಹೆಚ್ಚಿದಂತೆ ಮಾರುಕಟ್ಟೆಯು ಭಾನುವಾರದಂದು ಬಂದರೆ ಅದರ ಹಿಂದಿನ ದಿನ ಶನಿವಾರವೇ ಅದನ್ನು ನಡೆಸಲಾಗುತ್ತದೆ. ಆಧುನಿಕತೆಗೆ ತೆರೆದುಕೊಂಡಿರುವ ಕೆಲವರು ವಾರದ ಏಳು ದಿನಗಳೂ ವ್ಯಾಪಾರ ಮಾಡುತ್ತಾರೆ. ಸಣ್ಣ ಮಾರುಕಟ್ಟೆ ‘Iewrit’ ಅನ್ನು ದೊಡ್ಡ Iewbah ನಡೆದ ನಾಲ್ಕನೆಯ ದಿನ ತೆರೆಯಲಾಗುತ್ತದೆ. ಮಾರುಕಟ್ಟೆಯ ದಿನಗಳು ಮೊದಲೇ ನಿಗದಿಯಾಗಿ ಕ್ಯಾಲೆಂಡರ್‌ನಲ್ಲಿ ಅಚ್ಚಾಗಿರುತ್ತದೆ.
ಮಾರುಕಟ್ಟೆಯ ದಿನಗಳಂದು ಊರೂರಿಂದ ಬೂದು ಬಣ್ಣದ ’ಬಜಾರ್ ಬಸ್ಸುಗಳು’ ಎಡೆಬಿಡದೆ ಸಾಮಾನುಗಳನ್ನು, ವ್ಯಾಪಾರಿಗಳನ್ನು, ಗ್ರಾಹಕರನ್ನು ಹೊತ್ತುತರುತ್ತಿರುತ್ತವೆ. ಹೆಸರೂ ತಿಳಿಯದ ತರಕಾರಿಗಳು, ಸಾಂಬಾರ ಪದಾರ್ಥಗಳು, ಬಟ್ಟೆಗಳು, ಹೂವು ತರಕಾರಿಗಳ ಬೀಜ, ಸಸಿಗಳು, ಉಪ್ಪಿನಕಾಯಿಗಳು ಮೊರಬ್ಬಾಗಳು, ಸ್ಥಳೀಯ ಸಾರಾಯಿಗಳು, ವಿದೇಶಿ ಮದ್ಯಗಳು, ಅಲ್ಲಿಯೇ ಕತ್ತರಿಸಿಕೊಡುವ ವಿವಿಧ ಮಾಂಸಗಳು, ಸ್ಟೀಲ್ ಪಾತ್ರೆಗಳು, ತೋಟಗಾರಿಕೆ ಕೃಷಿಗೆ ಬೇಕಾದ ಸಾಮಾನುಗಳು, ಮನೆಕಟ್ಟಲು ಅವಶ್ಯವಿರುವ ಸಾಮಗ್ರಿಗಳು, ಅಲಂಕಾರಿಕ ಐಟಮ್‍ಗಳು, ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ ಸಾಮಾನುಗಳು, ಪೀಠೋಪಕರಣಗಳು ಹೀಗೆ ಏನುಂಟು ಏನಿಲ್ಲ!
ಸೋಹ್ರಾ ಜಿಲ್ಲೆಯ ಮುಖ್ಯಸ್ಥ ’ಸೈಯಮ್’ ಮಾರುಕಟ್ಟೆ ಸ್ಥಳದ ನಿರ್ವಹಣೆಗಾಗಿ ಪ್ರತಿ ಮಾರಾಟಗಾರರಿಂದ ತೆರಿಗೆ ಪಡೆಯುತ್ತಾನೆ. ಸುಮಾರು 10 ವರ್ಷಗಳ ಹಿಂದೆ, ‘ರಾಯಭಾರಿ’ ಟ್ಯಾಕ್ಸಿಗಳು ಎಂತಲೇ ಓಡಿಸಲಾಗುತ್ತಿತ್ತಂತೆ. ಆದರೆ ಈಗ ಎಲ್ಲೆಡೆ ಇರುವಂತೆ ಸಾಮಾನ್ಯ ಟ್ಯಾಕ್ಸಿಗಳಿವೆ. ಅವುಗಳ ಬಾಗಿಲುಗಳು ತೆರೆಯುವುದು ಮಾತ್ರ ಕಾಣುತ್ತವೆ, ರೆಪ್ಪೆಯಾಡಿದ ವೇಗದಲ್ಲಿ ಮುಚ್ಚಿಕೊಂಡು ಮುಂದೆ ಹೋಗಿಬಿಡುತ್ತವೆ.
ಈ ಮಾರುಕಟ್ಟೆಗಳಲ್ಲಿ ಬರೀ ವಸ್ತುಗಳ ವ್ಯಾಪಾರವಲ್ಲ, ಮದುವೆ ಮಾತುಕತೆಯಿಂದ ರಾಸು ವಿನಿಮಯದವರೆಗೂ ಆವಳಿಯಲ್ಲಿ ಘಟಿಸುತ್ತವೆ. ಸೆಂಗ್‍ಖಸಿ ಬುಡಕಟ್ಟಿನ, ಯಾವುದೇ ಅಂತಸ್ತಿನ ಜನರು, ಒಬ್ಬರಿಗೊಬ್ಬರು ಎದುರುಗೊಂಡಾಗ, ನಮಸ್ಕಾರದ ರೀತಿಯಲ್ಲಿ ಕುಮ್ನೋ ಎನ್ನುತ್ತಾರೆ ಮತ್ತು ತಪ್ಪದೆ ಕ್ವಾಯ್ (ಅಡಿಕೆ) ತಿಂಪ್ಯೂ (ವಿಳ್ಳೇದೆಲೆ) ಅದರೊಳಗೆ ಹಚ್ಚಿದ ಶುನ್ (ಸುಣ್ಣ) ಇದನ್ನು ಕಡ್ಡಾಯವಾಗಿ ವಿನಿಮಯ ಮಾಡಿಕೊಳ್ಳುತ್ತಾರೆ. ದೊಡ್ಡ ದೊಡ್ಡ ಕೆಲಸದಲ್ಲಿ ಇರುವವರು ಕೂಡ ಇದನ್ನು ತಮ್ಮ ಜೋಬಿನಲ್ಲಿ ಇಟ್ಟುಕೊಂಡಿರುವುದನ್ನು ನೋಡಿದೆ. ಇದು ಪುರುಷರಿಗೆ ಮಾತ್ರ. ಎಲ್ಲರೂ ಈ ತಾಂಬೂಲವನ್ನು ಜಗಿದರೂ ರಸ್ತೆಯಲ್ಲಿ ಉಗುಳುವುದಿಲ್ಲ. ಈಗೀಗ ಅದರೊಳಗೆ ತಂಬಾಕು ಜಗಿಯುತ್ತಾರೆ ಅದು ಸರ್ಕಾರಕ್ಕೂ ತಲೆನೋವಾಗಿದೆಯಂತೆ.
ದೊಡ್ಡ ಮಾರುಕಟ್ಟೆಯ ದಿನದಲ್ಲಿ ವೈದ್ಯರು ತಮ್ಮ ಕ್ಲಿನಿಕ್‍ಗಳನ್ನು ತೆರೆದಿಟ್ಟುಕೊಂಡಿರುತ್ತಾರೆ. ಬ್ಯೂಟಿ ಪಾರ್ಲರ್‌ಗಳು ತುಂಬಿರುತ್ತವೆ. ಫೋಟೊ ಸ್ಟುಡಿಯೋಗಳು ಕ್ಯಾಮೆರ ಹಿಡಿದು ಕಾಯುತ್ತಿರುತ್ತವೆ. ಸಣ್ಣಪುಟ್ಟ ರಿಪೇರಿ ಅಂಗಡಿಗಳಿಗೂ ಅಂದೇ ವ್ಯಾಪಾರ. ರಿಯಲ್ ಎಸ್ಟೇಟ್‍ಗಳೂ ಅಂದು ಕುದುರುತ್ತವೆ.
ವ್ಯಾಪಾರಿಗಳು ಶಂಕಾಕಾರದ ಬಿದಿರಿನ ದೊಡ್ಡದೊಡ್ಡ ಗುಡಾಣಗಳಲ್ಲಿ ತಮ್ಮ ಸಾಮಾನುಗಳನ್ನು ತರುತ್ತಾರೆ. ಹೆಂಗಸರು ಚೌಕುಳಿ ಪ್ರಿಂಟ್ ಇರುವ ಮೇಲ್ಬಟ್ಟೆಯನ್ನು ಹಾಕಿಕೊಂಡಿರುತ್ತಾರೆ. ಸ್ಕಾಟ್‍ಲ್ಯಾಂಡ್‍ನ ನೇಯ್ಗೆಯನ್ನು ಹೋಲುವ ಈ ಮೇಲ್ಬಟ್ಟೆಯನ್ನು ಖಸಿ ಬುಡಕಟ್ಟಿನವರಲ್ಲಿ ಜಿಂಪಾಂಗ್ ಎನ್ನಲಾಗುತ್ತದೆ. ಶಾಲಿನಂತಹ ಎರಡು ಬಟ್ಟೆಗಳನ್ನು ಮುಖಾಮುಖಿಯಾಗಿ ಸುತ್ತಿ ಎರಡೂ ಭುಜಗಳ ಮೇಲೆ ಗಂಟು ಹಾಕಿಕೊಳ್ಳುತ್ತಾರೆ. ಒಂದೇ ಬಟ್ಟೆಯನ್ನು ಸುತ್ತಿ ಗಂಟು ಹಾಕಿಕೊಂಡಿದ್ದರೆ ಅವರು ಜಂತಿಯಾ ಬುಡಕಟ್ಟಿನ ಹೆಂಗಸರು. ಅದನ್ನು ಕಿರ್ಶಾಹ್ ಎನ್ನಲಾಗುತ್ತದೆ.
ಮಾರುಕಟ್ಟೆಯ ಮಾಂಸದ ವಿಭಾಗವನ್ನು ಗಂಡಸರು ನೋಡಿಕೊಂಡರೆ ಉಳಿದ ವ್ಯಾಪಾರಗಳನ್ನು ಪೂರ್ತೀ ಹೆಂಗಸರು ಮಾಡುತ್ತಾರೆ. ಸೋಹ್ರಾ ಕಾಡುಗಳು ಒಂದೊಮ್ಮೆ ಜಿಂಕೆಗಳಿಗೆ ಪ್ರಸಿದ್ಧಿ ಪಡೆದಿತ್ತಂತೆ. ಆದರೆ ಅವುಗಳ ಮಾಂಸ ಈಗ ನಿಷೇಧವಾಗಿರುವುದರಿಂದ ಸಿಗುವುದಿಲ್ಲವಂತೆ. ಮಳೆಗಾಲದಲ್ಲೂ ತೆರೆಯುವ ಈ ಮಾರುಕಟ್ಟೆಗಳಲ್ಲಿ ಎಲ್ಲರೂ ‘ಕುನುಪ್’ ಎನ್ನುವ ರಂಗುರಂಗಿನ ಛತ್ರಿಗಳನ್ನು ಬಳಸುತ್ತಾರೆ. ದೊಡ್ಡ ಮಾರುಕಟ್ಟೆಯ ಪಕ್ಕದ ಗೋಡೆಯಲ್ಲಿ ಸರ್ಕಾರವು ಸೊಹ್ರಾ ಷಾಪಿಂಗ್ ಸೆಂಟರ್ ನಡೆಸುತ್ತಿದೆ. ಅದರ ಪಕ್ಕದಲ್ಲಿಯೇ ‘ದಿ ಹೋಟೆಲ್ ಕ್ರೆಸೆಂಟ್’ ಬದಲಾದ ಕಾಲದ ಕುರುಹಾಗಿ ನಿಂತಿದೆ.
*****
ಸೊಹ್ರಾದಲ್ಲಿ ಮಾರುಕಟ್ಟೆ ನಡೆಯುವ ದಿನಗಳಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ವಿಸ್ತರಣಾ ಸಂಪೂರ್ಣ ಹಾಜರಾತಿಯನ್ನು ಹೊಂದಿರಬೇಕು ಎನ್ನುವ ನಿಯಮ ಮಾಡಲಾಗಿದೆ. ಸಂಜೆಯಾಗುತ್ತಿದ್ದಂತೆ ಮೊದಲು ‘ಡಾಂಗ್‌ಮುಸಾ’ ಎಂದು ಕರೆಯಲ್ಪಡುವ ಸೀಮೆಎಣ್ಣೆ ದೀಪಗಳಿಂದ ವ್ಯಾಪಾರ ಮುಂದುವರೆಯುತ್ತಿತ್ತು. ಆದರೀಗ ಸೌರಚ್ಶಕ್ತಿ ಚಾಲಿತ ದೀಪಗಳು ಬಂದಿವೆ. ಬೆಳಿಗ್ಗೆ ಹತ್ತರಿಂದ ರಾತ್ರಿ ಕೊನೆಯ ಗ್ರಾಹಕ ಇರುವವರೆಗೂ ಮಾರುಕಟ್ಟೆ ನಿರತವಾಗಿರುತ್ತದೆ. ಬಹುಪಾಲು ಸಾಯಂಕಾಲ ಏಳು ಗಂಟೆಗೆ ವ್ಯಾಪಾರ ಮುಗಿಯುತ್ತದೆ.
ಸಂಚಲನವೇ ಮೂರ್ತಿವೆತ್ತಂತೆ ಇರುವ ಇಲ್ಲಿ ಕೊಳ್ಳಲೇ ಬೇಕಾದ ವಸ್ತು ಎಂದರೆ ಅರಿಶಿನ ಮತ್ತು ಕೆಂಪುಮೆಣಸಿನ ಪುಡಿ. ಮಾರುಕಟ್ಟೆಯೆಲ್ಲಾ ಅವುಗಳದ್ದೇ ಘಮ. ಹಾಂ, ಇನ್ನೊಂದು ಚಂದದ ಅನುಭವ ಎಂದರೆ ನಾನಿದ್ದ ತಂಗುದಾಣದಲ್ಲಿ ಬಹುಶಃ ಸಮಯದ ಭೂರೇಖೆ ಹಾದು ಹೋಗುತ್ತಿತ್ತೇನೋ. ಮಲಗಿದ್ದ ಮಂಚದಲ್ಲೇ ಎಡಕ್ಕೆ ಹೊರಳಿದರೆ ಗಡಿಯಾರ ತಕ್ಷಣ ಬಾಂಗ್ಲಾದೇಶದ ಸಮಯವನ್ನು ಎಡಕ್ಕೆ ಹೊರಳಿದರೆ ಭಾರತ ಕಾಲಮಾನವನ್ನು ತೋರಿಸುತ್ತಿತ್ತು. ಪಕ್ಕದಲ್ಲಿದ್ದ ಮತ್ತೊಂದು ಮಂಚದಲ್ಲಿ ಮಲಗಿದ್ದ ಅಕ್ಕನಿಗೆ ಈ ಬಗೆಯ ಸೋಜಿಗ ಇರಲಿಲ್ಲ. ನಾನಂತೂ ರಾತ್ರಿಯೆಲ್ಲಾ ಮಗ್ಗುಲು ಬದಲಿಸುತ್ತಾ, ಟೈಮ್ ನೋಡುತ್ತಾ ಚಿರಾಪುಂಜಿಯನ್ನು ಚಪ್ಪರಿಸಿದೆ.
ಅಂಜಲಿ ರಾಮಣ್ಣ ಲೇಖಕಿ, ಕವಯಿತ್ರಿ, ಅಂಕಣಗಾರ್ತಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ. ‘ರಶೀತಿಗಳು – ಮನಸ್ಸು ಕೇಳಿ ಪಡೆದದ್ದು’, ‘ಜೀನ್ಸ್ ಟಾಕ್’ ಇವರ ಲಲಿತ ಪ್ರಬಂಧಗಳ ಸಂಕಲನ.