ಪ್ರಯಾಣದ ಕನಸಿನಿಂದ ಥಟ್ಟನೆ ವಾಸ್ತವಕ್ಕಿಳಿದ ನೀಲಿ ನೀರಿನಾಳದಲ್ಲಿ ಹೊಳೆಯುತ್ತಿರುವ ನಾಣ್ಯಗಳನ್ನು ನೋಡುತ್ತಾ ನಡುಹೊಳೆಯಲ್ಲಿ ನಿಂತುಬಿಟ್ಟಳು. ಅವಳಿಗೀಗ ಇರುವುದು ಎರಡೇ ಅವಕಾಶಗಳು. ಒಂದೋ ದುಡ್ಡನ್ನು ಹೊಳೆಯಲ್ಲಿಯೇ ಬಿಟ್ಟು ಶಾಲೆಗೆ ಹೋಗುವುದು, ಇಲ್ಲವೆಂದರೆ ಅಂಗಿ ಒದ್ದೆಯಾಗುವ ಪರಿವೆಯಿಲ್ಲದೇ ಹೊಳೆಯೊಳಗೆ ಒಮ್ಮೆ ಮುಳುಗಿ ದುಡ್ಡನ್ನು ಹೆಕ್ಕಿಕೊಳ್ಳುವುದು. ಒದ್ದೆಯಾದ ಅಂಗಿಯನ್ನು ಬದಲಿಸಿ ಬರಲು ಮನೆಗೆ ಹೋಗುವಷ್ಟು ಸಮಯವಿಲ್ಲ. ಅಷ್ಟಕ್ಕೂ ಹಣ ಹೆಕ್ಕಲು ಹೊಳೆಯಲ್ಲಿ ಮುಳುಗಿದೆನೆಂದು ಅಮ್ಮನಿಗೆ ತಿಳಿದರೆ ಬೈಗಳಂತೂ ತಪ್ಪಿದ್ದಲ್ಲ. ಆಗಿದ್ದಾಗಲಿ, ಎಂದವಳೇ ಗುಳುಂ ಎಂದು ಹೊಳೆಯಲ್ಲಿ ನಾಲ್ಕಾರು ಬಾರಿ ಮುಳುಗಿ ಹಣವನ್ನೆಲ್ಲ ಹೆಕ್ಕಿಕೊಂಡಳು.
ಸುಧಾ ಆಡುಕಳ ಹೊಸ ಅಂಕಣ “ಹೊಳೆಸಾಲು” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

ಹೊಳೆಸಾಲ ಹುಡುಗಿಯರು ಚಂದವೋ ಚಂದ

“ಹೊಳೆಸಾಲ ಹುಡುಗಿಯರು ಚಂದವೋ ಚಂದ” ಹೀಗೊಂದು ಮಾತು ಕೇಳಿದೊಡನೆಯೇ ನೆರೆಯೂರಿನಲ್ಲಿ ನಿನ್ನೆಯಷ್ಟೇ ಮದುವೆಯಾದ ಹುಡುಗಿಯ ಚಂದದ ಬಗ್ಗೆ ಚರ್ಚಿಸಲು ಗುಟ್ಟಾಗಿ ಹೊಳೆದಂಡೆಯಲ್ಲಿ ಸಭೆ ಸೇರಿದ್ದ ಹುಡುಗಿಯರ ಮೊಗದಲ್ಲೊಂದು ಬೆಳಕಿನ ಸೆಳಕು ಚಕ್ಕನೆ ಮಿಂಚುವುದು. ಹೀಗೆ ಮೊಗದಿಂದ ಹೊರಟ ಬೆಳಕಿನ ಬಿಸುಪು ಹರಿಯುವ ಹೊಳೆಯೊಳಗೆ ಇಳಿದು, ಹೊಳೆಯೊಳಗಿನ ಮೀನೊಂದು ಫಳಕ್ಕೆಂದು ನೀರಿನ ಮೇಲೆ ಜಿಗಿದು ತನ್ನಿರವನ್ನು ತೋರುವುದು. ಇದ್ಯಾವುದರ ಪರಿವೆಯಿಲ್ಲದ ಹುಡುಗಿಯರು ತಾವು ನೋಡಿದ ಮದುವಣಗಿತ್ತಿಯ ಸೌಂದರ್ಯವನ್ನು ಇತರರಿಗೆ ಹೇಳುತ್ತ ನಗುವರು. “ಏನೇ ಹೇಳು, ಹೊಳೆಸಾಲ ಹುಡುಗಿಯರ ಲಕ್ಷಣ ಯಾರಿಗೂ ಬಾರದು. ಬಿಳಿಯಿದ್ದರೂ, ತೆಳುವಿದ್ದರೂ ನಮ್ಮೂರ ಹೆಣ್ಣುಗಳೆದುರು ಯಾರಾದರೂ ಸಪ್ಪೆಯೆ.” ಅವರ ತೀರ್ಮಾನಕ್ಕೆ ಹೊಳೆಯೂ ಹೌದೆನ್ನುವುದು. ತಮ್ಮೂರ ಹುಡುಗಿಯರ ಚಂದಕ್ಕೆ ಇನ್ನಷ್ಟು ಮೆರಗು ನೀಡಲೋ ಎಂಬಂತೆ ತನ್ನ ದಂಡೆಯುದ್ದಕ್ಕೂ ಯಾರಿಂದಲೂ ಕೊಯ್ಯಲಾಗದಷ್ಟು ಎತ್ತರೆತ್ತರಕ್ಕೆ ಹೊಳೆದಾಸವಾಳವೆಂಬ ಹೂವರಳಿಸಿ ತೋರಣವ ಕಟ್ಟುವುದು. ತೋಟದ ತುಂಬೆಲ್ಲ ಅರಳಿರುವ ಕನಕಾಂಬರ ಮತ್ತು ಮುತ್ತುಮಲ್ಲಿಗೆಯ ತೊಟ್ಟನ್ನೂ ಬಿಡದಂತೆ ಕಟ್ಟಿ ಮುಡಿಯುವ ಹುಡುಗಿಯರ ಹುಕಿ ಹೊಳೆಗೆ ಗೊತ್ತು. ಹೆಸರಿಗೆ ದಾಸವಾಳ ಎಂದಿದ್ದರೂ ಹೊಳೆಯ ದಡದುದ್ದಕ್ಕೂ ಹರಡಿರುವುದು ಅಷ್ಟೆತ್ತರದ ಮರಗಳ ಸಾಲು, ಸಾಲು.

ಹೊಳೆಸಾಲೆಂದರೆ ಒಂದು ಊರಿನ ಹೆಸರಲ್ಲ, ಹೊಳೆ ಹರಿಯುವ ದಾರಿಗುಂಟ ಹಬ್ಬಿಕೊಂಡಿರುವ ಎಲ್ಲ ಊರುಗಳು ಸೇರಿದರೆ ಹೊಳೆಸಾಲು. ಹೇಳಿಕೇಳಿ ಹೊಳೆದಂಡೆಯ ಮೇಲೆ ಊರಾಗುವಷ್ಟು ತಾವಾದರೂ ಎಲ್ಲಿರುವುದು? ಹೊಳೆಯ ಆಚೀಚೆಗೆ ಹಬ್ಬಿರುವ ಭತ್ತದ ಗದ್ದೆಗಳು, ಅದರಾಚೆಗೊಂದಿಷ್ಟು ತೆಂಗು, ಕಂಗಿನ ತೋಟಗಳು, ತೋಟದ ನಡುವಿನಲ್ಲೊಂದು ಮನೆ, ಮನೆಯ ಹಿಂದೆ ತೆರೆದುಕೊಳ್ಳುವ ಗುಡ್ಡ, ಗುಡ್ಡದ ತುಂಬೆಲ್ಲಾ ಕಾಡು. ಅಷ್ಟು ಕಿರಿದಾದ ಜಾಗದಲ್ಲಿ ಊರೊಂದು ಹುಟ್ಟಿಕೊಳ್ಳಲು ಹೊಳೆಯ ತನಿಸಲ್ಲದೇ ಬೇರಾವ ಕಾರಣಗಳೂ ಇಲ್ಲ. ಅಲ್ಲಿ ಬೆಳಗು, ಬೈಗು, ಬದುಕು, ಬವಣೆ ಎಲ್ಲವೂ ಹೊಳೆಯಿಂದಲೇ. ವಿಶಾಲವಾಗಿ ಹರಡಿಕೊಂಡ ಅದೆಷ್ಟೋ ನೆರೆಯ ಊರುಗಳಲ್ಲಿ ಜಾತಿಗೊಂದು ಕೇರಿ, ಕೇರಿಗೊಂದು ದೇವರು ಅಂತೆಲ್ಲ ಇದ್ದರೆ ಹೊಳೆಸಾಲಿನಲ್ಲಿ ಎಲ್ಲ ಜಾತಿಯ ಮನೆಗಳು ಹೊಳೆದಂಡೆಯ ಮೇಲೆ ಸಾಲಾಗಿ ಮೋತಿಮಲ್ಲಿಗೆ, ಕನಕಾಂಬರ, ಹಸಿರು ಚಿಗುರು ಸೇರಿಸಿ ಕಟ್ಟಿದ ಮಾಲೆಯಂತೆಯೇ ಚಂದಕ್ಕೆ ಬೆಸೆದುಕೊಂಡಿದ್ದವು. ಅವರ ಒಯ್ಯಾರ, ಇವರ ಶೃಂಗಾರ, ಇನ್ನೊಬ್ಬರ ನಡಿಗೆಯ ಲಯ, ಮತ್ತೊಬ್ಬರ ಹಾಡಿನ ಗೇಯ ಎಲ್ಲವೂ ಬೆಳೆವ ಮಕ್ಕಳಲ್ಲಿ ಮುಪ್ಪುರಿಗೊಂಡು ಹೊಳೆಸಾಲ ಹುಡುಗಿಯರು ಕಪ್ಪಗಿದ್ದರೂ ಎಷ್ಟೊಂದು ಲಕ್ಷಣ!

ಈ ಮಾತನ್ನು ಕೇಳಿದ ನೆರೆಯೂರಿನವರು ಹೊಳೆಸಾಲಿನವರು ತಮ್ಮ ಕಪ್ಪನ್ನು ಮುಚ್ಚಿಟ್ಟುಕೊಳ್ಳಲು ಸೌಂದರ್ಯ ಮೀಮಾಂಸೆಗೆ ‘ಲಕ್ಷಣ’ವೆಂಬ ಹೊಸಪದವನ್ನು ಟಂಕಿಸಿರುವರೆಂದು ಟೀಕಿಸುವುದಿತ್ತು. ಆಗೆಲ್ಲ ಹೊಳೆಯು ಸಳಸಳನೆ ಹರಿದು ತನ್ನೂರಿನ ಹುಡುಗಿಯರ ಬಗೆಗಿನ ಟೀಕೆಯನ್ನು ಅಲ್ಲಗಳೆಯುತ್ತಿತ್ತು.

‘ಊರಿಗೆ ಬಂದವರು ನೀರಿಗೆ ಬಾರದಿರುವರೆ?’ ಎಂಬ ಗಾದೆಯನ್ನು ಹೊಳೆಸಾಲಿನವರು ‘ಊರಿಗೆ ಬಂದವರು ಹೊಳೆದಂಡೆಗೆ ಬಾರದಿರುವರೆ?’ ಎಂದು ಹೊಸದಾಗಿ ಹೊಸೆದಿದ್ದರು. ಊರಿಗೆ ಬರುವ ಹೊಸಬರು ಹೊಳೆದಂಡೆಯ ಆಚೆಯಲ್ಲಿ ನಿಂತು ಹೊಳೆದಾಟುವ ಜಾಗವೆಲ್ಲಿ? ಎಂದು ಹುಡುಕುತ್ತಿರುವಾಗಲೇ ಊರಿನವರ ಕಣ್ಣಿಗೆ ಬಿದ್ದು, ಅವರ ಪ್ರವರಗಳನ್ನೆಲ್ಲ ವಿವರವಾಗಿ ಹೇಳಿದ ಮೇಲೆಯೇ ಯಾರ ಮನೆಗೆ ಹೋಗಲು ಯಾವ ಜಾಗದಲ್ಲಿ ಹೊಳೆದಾಟಬೇಕೆಂಬುದನ್ನು ಅವರಿಗೆ ಹೇಳಲಾಗುತ್ತಿತ್ತು. ಅಪರೂಪಕ್ಕೊಮ್ಮೆ ದೂರದೂರಿನ ಜನಜಂಗುಳಿಯಿಂದ ತಪ್ಪಿಸಿಕೊಂಡು ಬಂದ ಜೋಡಿಹಕ್ಕಿಗಳು ಹೊಳೆಗೆ ಅಡ್ಡಲಾಗಿ ಹಾಕಿದ ಅಡಿಕೆ ಮರದ ಸಂಕದ ಮೇಲೆ ಕುಳಿತು ಕಾಲಲ್ಲಾಡಿಸುತ್ತ ಲಲ್ಲೆ ಹೊಡೆಯುವುದಿತ್ತು. ಬೆಳಗು ಜಾವದಲ್ಲೆದ್ದು ಬಿಸಿಲೇರುವವರೆಗೂ ಹೊಲವನ್ನು ಉತ್ತು, ಎತ್ತಿಗೊಂದಿಷ್ಟು ನೀರು ಕುಡಿಸಿ, ಮೈತೊಳೆಯಲೆಂದು ಹೊಳೆಗಿಳಿಯುವ ಊರ ಗಂಡಸರ ಕಣ್ಣಿಗೆ ಇವರೇನಾದರೂ ಬಿದ್ದರೆ ಜನ್ಮ, ಜಾತಕ ಜಾಲಾಡಿಸುವ ಭಯದಲ್ಲಿ ಜೋಡಿಗಳು ಹಕ್ಕಿಯಂತೆ ಹಾರಿಹೋಗುತ್ತಿದ್ದರು. ಬಟ್ಟೆಯ ಗಂಟನ್ನು ಹೊತ್ತು ತರುವ ಹೆಂಗಳೆಯರು, ಪಾತ್ರೆ ಬೆಳಗಲು ಬರುವ ಅಕ್ಕತಂಗಿಯರು, ಈಜು ಕಲಿಯಲು ನೀರಿಗಿಳಿಯುವ ತುಂಟ ಮಕ್ಕಳು, ಬಾಳೆದಿಂಡಿನ ತೆಪ್ಪದಲ್ಲಿ ತೇಲುತ್ತ ಸಾಗುವ ತುಡುಗು ಹೈದರು, ದಡದಲ್ಲಿ ತರಕಾರಿ ನೆಟ್ಟು ನೀರೆರೆಯಲು ಬರುವ ಅಜ್ಜಿಯಂದಿರು, ಹೊಳೆಯೊಳಗಿನ ಮೀನು ಎಗರಿಸಲು ಹೊಂಚುಹಾಕುವ ಮಿಂಚುಳ್ಳಿಗಳು, ಹೊಳೆಯ ಕಲ್ಲಿನ ಸಂದಿಯಲ್ಲಿ ಬೆಳೆದಿರುವ ಶೆಟ್ಲಿಯನ್ನು ಶೇಖರಿಸಲು ಬರುವ ಹುಡುಗಿಯರು …… ಹೀಗೆ ಹೊಳೆಯೆಂಬುದು ಹೊಳೆಸಾಲಿನ ಅನುದಿನದ ಬೆಡಗು.

“ಹುಲಿ ಗರ‍್ಕಗಳು ಹೊಳೆ ದಾಟಿವೆ!” ಹೀಗೆಂದು ಹೊಳೆಸಾಲ ನಾಗಪ್ಪಜ್ಜ ಹೇಳಿದರೆ ಸಾಕು, ದನಕಾಯುವ ಹುಡುಗರೆಲ್ಲ ‘ಹೈ ಅಲರ್ಟ’ ಆಗಿಬಿಡುತ್ತಿದ್ದರು. ಹೊಳೆಯ ಇಕ್ಕೆಲಗಳಲ್ಲಿ ಕಾಡಿರುವುದರಿಂದ ಒಂದು ಗುಡ್ಡದಿಂದ ಇನ್ನೊಂದು ಗುಡ್ಡಕ್ಕೆ ಬೇಟೆಯನ್ನರಸಿ ಹುಲಿಗರ‍್ಕಗಳು ವರ್ಷದುದ್ದಕ್ಕೂ ಚಲಿಸುವುದು ಸಾಮಾನ್ಯವಾಗಿತ್ತು. ಪ್ರತಿದಿನವೂ ಊರವರ ಹೆಜ್ಜೆಗಳು ಹೊಳೆದಂಡೆಯಲ್ಲಿ ಮೂಡುವ ಮೊದಲೇ ಹೊಳೆಯಂಚಿಗೆ ಹೋಗುವ ನಾಗಪ್ಪಜ್ಜನ ಸೂಕ್ಷ್ಮ ಕಣ್ಣುಗಳಿಗೆ ಹುಲಿಯ ಹೆಜ್ಜೆಗಳನ್ನು ಗುರುತಿಸುವ ಸಾಮರ್ಥ್ಯವಿದೆಯೆಂದು ಊರಿನ ಹಿರಿಯರೆಲ್ಲರ ಅಭಿಮತವಾಗಿತ್ತು. ಆದರೆ ಊರಿನ ಕೆಲವು ತುಡುಗು ಹುಡುಗರು ಗರ‍್ಕ ಬಂದಿದೆಯೆಂಬ ಸುದ್ದಿಯೆಲ್ಲ ನಾಗಪ್ಪಜ್ಜನ ಹುಕ್ಕೆಯೆಂದು ಲೇವಡಿ ಮಾಡುತ್ತಿದ್ದರು. ಅದೇದಿನ ರಾತ್ರಿ ಎಲ್ಲರೂ ಸವಿನಿದ್ದೆಯಲ್ಲಿರುವಾಗ ಹುಲಿಯ ಕೂಗಿನ ಸದ್ದು ಇಡಿಯ ಊರನ್ನು ಎಚ್ಚರಗೊಳಿಸಿ ತುಡುಗು ಹುಡುಗರ ಬಾಯಿಗೆ ಬೀಗ ಬೀಳುತ್ತಿತ್ತು.

ಕಾಡಿನಂಚಿನಲ್ಲಿರುವ ಹುಲಿಗುರ್ತಿ ದೇವರಿಗೆ ನಾಗಪ್ಪಜ್ಜನದೇ ಪೂಜೆ. ಕೋಳಿ ತಿನ್ನುವವರು ಕೋಳಿಯನ್ನು, ತಿನ್ನದವರು ಆಳೆತ್ತರದ ಬಾಳೆಗೊನೆಯನ್ನು ಪ್ರತಿವರ್ಷವೂ ಅರ್ಪಿಸಿ, ಹುಲಿಗಳ ಬಾಯಿಂದ ತಮ್ಮ ದನಕರುಗಳನ್ನು ಕಾಪಾಡೆಂದು ಹರಕೆ ಹೊರಲೇಬೇಕು. ಪೂಜೆ, ಬಲಿಗಳ ನಂತರ ಹುಲಿಗುರ್ತಿಯ ಎದುರು ನಿಂತ ನಾಗಪ್ಪಜ್ಜ ಆರ್ತನಾಗಿ ಮಾಡುವ ಪ್ರಾರ್ಥನೆಗೆ ಊರಿನ ಜನರೆಲ್ಲರೂ ಭಕ್ತಿಪರವಶರಾಗಿ ತಲೆದೂಗುತ್ತಿದ್ದರು. ಹುಲಿಮೊಗದ ದೇವರು ಅಂದು ಇನ್ನಷ್ಟು ಉಗ್ರವಾಗಿ ಕಂಡು ಊರಿನವರೆಲ್ಲರಿಗೂ ಹುಲಿಯನ್ನು ಒದ್ದೋಡಿಸುವ ಅಭಿದಾನವನ್ನು ನೀಡುತ್ತಿತ್ತು. ಇಷ್ಟಾಗಿಯೂ ಊರಿನವರ ದನಕರುಗಳನ್ನು ಹುಲಿಯೇನಾದರೂ ಕೊಂದುತಿಂದಿತೋ, ಹುಲಿಗುರ್ತಿಯ ಗ್ರಹಚಾರ ಕೆಟ್ಟಿತೆಂದೇ ಅರ್ಥ. ಹುಲಿ ಅರೆತಿಂದು ಬಿಟ್ಟ ಕರುವಿನ ದೇಹ ಪತ್ತೆಯಾದ ದಿನ ನಾಗಪ್ಪಜ್ಜ ಕೆರಳಿಬಿಡುತ್ತಿದ್ದ. ಅರೆತಿಂದ ಕರುವಿನ ದೇಹವನ್ನು ಹುಲಿಗುರ್ತಿಯೆದುರು ಎಳೆದು ತಂದು ತನ್ನ ಬೈಗುಳದ ಸರಮಾಲೆಯನ್ನು ಪ್ರಾರಂಭಿಸುತ್ತಿದ್ದ. “ಅಯ್ಯಾ ಹುಲಿಗುರ್ತಿಯೇ, ನೀನೆಂಥ ದೈವವೆ? ಪ್ರತಿವರ್ಷ ನಾವೆಲ್ಲಾ ಕೊಡುವ ಬಲಿಯನ್ನು ಸರಿಯಾಗಿ ತಿಂದು ತೇಗುತ್ತಿ. ದನಕರುಗಳನ್ನು ಕಾಯಲು ಮಾತ್ರ ಈ ಪಾಟಿ ಆಲಸ್ಯ ನಿಂಗೆ. ವರ್ಷ ಕಳೆದ್ರೆ ಕರುಹಾಕಿ ಹಸುವಾಗ್ತಿದ್ದ ಹೆಂಗರುವನ್ನು ಹುಲಿಬಾಯಿಗಿಟ್ಟು ಕುಳಿತಿದ್ದಿಯಲ್ಲ, ನಿಂಗೇನಾದ್ರೂ ಮನುಷ್ಯತ್ವ ಅನ್ನೋದು ಇದೆಯಾ? ಹೋಗಿ, ಹೋಗಿ ನಿನ್ನನ್ನು ನಂಬಿಕೊಂಡು ದನಕರ ಸಾಕ್ತೀವಲ್ಲ, ನಮಗೆ ಬುದ್ದಿಯಿಲ್ಲ ಅಷ್ಟೆ…….” ಹೀಗೆ ಸಾಗುವ ಬೈಗಳದಿಂದ ಹುಲಿಗುರ್ತಿಯೆಂಬ ದೈವಕ್ಕೂ ತಾನು ಮನುಷ್ಯತ್ವ ಬೆಳೆಸಿಕೊಳ್ಳಬೇಕೋ, ದೈವತ್ವವನ್ನೋ? ಎಂಬ ಸಂಶಯ ಬಂದು ಮುಖವನ್ನೊಂದಿಷ್ಟು ಬಾಡಿಸಿಕೊಂಡು ಕೂಡುತ್ತಿತ್ತು. ಇತ್ತ ನಾಗಪ್ಪಜ್ಜನ ವರಾತ ನಡೆಯುತ್ತಿದ್ದರೆ ಅತ್ತ ಹೊಳೆಸಾಲಿನ ಜನರು ಕೋವಿ ಕಟ್ಟಿಯೋ, ವಿಷವಿಟ್ಟೋ ಅಥವಾ ನೇರ ಶಿಕಾರಿಯ ಮೂಲಕವೋ ಹುಲಿಯನ್ನು ಮುಗಿಸುವುದು ಹೇಗೆಂಬ ಯೋಜನೆಯನ್ನು ಹೊಸೆಯುವುದರಲ್ಲಿ ಮಗ್ನವಾಗುತ್ತಿದ್ದರು.

ಈ ಮಾತನ್ನು ಕೇಳಿದ ನೆರೆಯೂರಿನವರು ಹೊಳೆಸಾಲಿನವರು ತಮ್ಮ ಕಪ್ಪನ್ನು ಮುಚ್ಚಿಟ್ಟುಕೊಳ್ಳಲು ಸೌಂದರ್ಯ ಮೀಮಾಂಸೆಗೆ ‘ಲಕ್ಷಣ’ವೆಂಬ ಹೊಸಪದವನ್ನು ಟಂಕಿಸಿರುವರೆಂದು ಟೀಕಿಸುವುದಿತ್ತು. ಆಗೆಲ್ಲ ಹೊಳೆಯು ಸಳಸಳನೆ ಹರಿದು ತನ್ನೂರಿನ ಹುಡುಗಿಯರ ಬಗೆಗಿನ ಟೀಕೆಯನ್ನು ಅಲ್ಲಗಳೆಯುತ್ತಿತ್ತು.

ಹೊಳೆಯೀಚೆಯೂರಿನ ನೀಲಿಗೆ ಅಂದು ರಾತ್ರಿಯಿಡೀ ನಿದ್ದೆಯಿಲ್ಲ. ಪ್ರತಿದಿನ ಹೊಳೆದಾಟಿ ಆಚೆಯ ಬದಿಯಲ್ಲಿರುವ ಶಾಲೆಗೆ ಹೋಗುವ ಹೊಳೆಸಾಲಿನ ಏಕಮೇವ ಹುಡುಗಿ ಅವಳು. ಒಂದು ವಾರದಿಂದ ಶಾಲೆಯಲ್ಲಿ ಪ್ರವಾಸಕ್ಕೆ ಹೋಗುವ ಸಡಗರ. ಈ ಸಲದ ಪ್ರವಾಸ ಚಿತ್ರಾಪುರ ಮಠಕ್ಕೆ ಎಂದು ಗೌಡ ಮಾಸ್ರ‍್ರು ಹೇಳಿದ್ದೇ ತಡ ಮಕ್ಕಳೆಲ್ಲರಲ್ಲಿ ಉತ್ಸಾಹ ಉಕ್ಕೇರಿಬಿಟ್ಟಿತ್ತು. ಅಂದಿನಿಂದ ಮಾಸ್ತ್ರು ಏನು ಪಾಠ ಮಾಡಿದರೆಂದು ಯಾರಿಗೂ ತಲೆಗೆ ಹೋಗಿರಲಿಲ್ಲ. ಇಡೀ ಹೊತ್ತೂ ಬರಿಯ ಪ್ರವಾಸದ್ದೇ ಸುದ್ದಿ. ಚಿತ್ರಾಪುರದಲ್ಲಿ ಕುದುರೆಗಳಿವೆಯಂತೆ, ಆನೆಗಳಿವೆಯಂತೆ, ಹಳೆಯ ಕಾಲದಲ್ಲಿ ಯುದ್ಧಕ್ಕೆ ಬಳಸುತ್ತಿದ್ದ ಖಡ್ಗಗಳಿವೆಯಂತೆ, ಭೂಮಿಯಡಿಯಲ್ಲಿ ದುಡ್ಡು ತುಂಬಿಸಿ ಹುಗಿದಿಡುತ್ತಿದ್ದ ದೊಡ್ಡ, ದೊಡ್ಡ ಕೊಪ್ಪರಿಗೆಗಳಿವೆಯಂತೆ, ಸುತ್ತಲೂ ಚಂದದ ಉದ್ಯಾನವನವಿದೆಯಂತೆ…… ಹೀಗೆ ತಲೆಗೊಂದು ಮಾತನಾಡುತ್ತಾ ಚಿತ್ರಾಪುರದ ಕನಸಿನಲ್ಲಿ ತೇಲಿಹೋಗಿದ್ದರು. ಮಕ್ಕಳ ಸಂಭ್ರಮಕ್ಕೆ ಭಂಗ ತರದ ಗೌಡಮಾಸ್ತ್ರು ತಮ್ಮ ಪಾಠ ಪ್ರವಚನಗಳನ್ನೆಲ್ಲ ತಾತ್ಕಾಲಿಕವಾಗಿ ಬದಿಗಿಟ್ಟು ಎಲ್ಲ ಮಕ್ಕಳೂ ಪ್ರವಾಸದ ದಿನ ದಾರಿಯಲ್ಲಿ ಎಸೆಯಲು ಪ್ರವಾಸದ ಚೀಟಿ ತಯಾರಿಸುವಂತೆ ಮಕ್ಕಳನ್ನು ಹುರಿದುಂಬಿಸಿದ್ದರು. ಮಕ್ಕಳೆಲ್ಲರೂ ತಮ್ಮ ಕಚ್ಚಾ ಪಟ್ಟಿಯ ಹಾಳೆಯನ್ನು ಹರಿದು, ಸರಿಯಾಗಿ ಹನ್ನೆರಡು ಭಾಗಗಳನ್ನಾಗಿ ಮಾಡಿ ಅದರಲ್ಲಿ “ಹೊಳೆಸಾಲು ಶಾಲೆಯ ಮಕ್ಕಳ ಚಿತ್ರಾಪುರ ಪ್ರವಾಸಕ್ಕೆ ಜಯವಾಗಿಲಿ” ಎಂದು ಆರು ಚೀಟಿಗಳಲ್ಲಿ ಮತ್ತು “ಹೊಳೆಸಾಲು ಶಾಲೆಯ ಮಕ್ಕಳ ಚಿತ್ರಾಪುರ ಪ್ರವಾಸಕ್ಕೆ ಜಯವಾಯಿತು” ಎಂದು ಇನ್ನು ಉಳಿದ ಆರು ಚೀಟಿಗಳಲ್ಲಿ ಬರೆಯುತ್ತಿದ್ದರು. ಮೊದಲನೆಯ ಚೀಟಿಯನ್ನು ಪ್ರವಾಸಕ್ಕೆ ಹೋಗುವಾಗ ಎಸೆಯಲು, ಎರಡನೆಯದನ್ನು ಬರುವಾಗ ಎಸೆಯಲೆಂದು ಬೇರೆ, ಬೇರೆ ಕಟ್ಟು ಮಾಡಿ ಜೋಡಿಸುತ್ತಿದ್ದರು. ಚೀಟಿಯ ಸುತ್ತಲೂ ಡಿಸೈನ್ ಮಾಡುತ್ತಾ, ಚಿಕ್ಕ ಚಿಕ್ಕ ಚಿತ್ರ ಬಿಡಿಸುತ್ತಾ, ಬಣ್ಣ ಬಣ್ಣದ ಅಕ್ಷರಗಳಲ್ಲಿ ಬರೆಯುತ್ತಾ ತಮ್ಮ ಪ್ರವಾಸದ ಕನಸುಗಳಿಗೆ ಬಣ್ಣ ತುಂಬುತ್ತಿದ್ದರು. ಒಂದೆರಡು ದಿನ ಕಳೆಯುವುದರಲ್ಲಿ ಪ್ರವಾಸದ ದಿನವೇ ಬರುತ್ತಿಲ್ಲವಲ್ಲ ಎಂದು ಉದಾಸಗೊಂಡಿದ್ದರು.

ಪ್ರವಾಸಕ್ಕೆ ಹೊರಡುವ ಮೊದಲ ದಿನ ಗೌಡಮಾಸ್ತ್ರು ಎಲ್ಲ ಮಕ್ಕಳನ್ನೂ ಸೇರಿಸಿ, ನಾಳೆ ಶಾಲೆಗೆ ಬರಬೇಕಾದ ವೇಳೆಯನ್ನೂ, ತರಬೇಕಾದ ಸಂಗ್ರಹದ ವಿವರಗಳನ್ನೂ ಎಲ್ಲರಿಗೂ ನಾಲ್ಕಾರು ಬಾರಿ ಹೇಳಿದ್ದರು. ಬೆಳಿಗ್ಗೆ ಏಳಕ್ಕೆಲ್ಲ ಪ್ರವಾಸದ ಟೆಂಪೋ ಶಾಲೆಯ ಎದುರಿಗಿರುವುದೆಂದೂ, ಯಾರೇ ಬರದಿದ್ದರೂ ಒಂದು ನಿಮಿಷವೂ ಕಾಯುವುದಿಲ್ಲವೆಂದೂ, ಸರಿಯಾದ ಸಮಯಕ್ಕೆ ಹೊರಟರೆ ಮಾತ್ರವೇ ರಾತ್ರಿಯೊಳಗೆ ಮರಳಿಬರಲು ಸಾಧ್ಯವೆಂದು ಹತ್ತಾರು ಬಾರಿ ಎಚ್ಚರಿಸಿದ್ದರು. ಹೊಳೆಯಾಚೆಯಿಂದ ಬರುವ ನೀಲಿಗೆ “ಕೂಸೆ, ಮತ್ತೆ ಹೊಳಿ ದಾಟ್ಸೂಕೆ ಯಾರೂ ಇರಲಿಲ್ಲ, ನಮ್ಮನೆ ಕೋಳಿ ಸರಿಯಾದ ಟೈಮಿಗೆ ಕೂಗದೇ ಎಚ್ಚರವಾಗಲಿಲ್ಲ ಅಂತೆಲ್ಲ ಹೇಳೂಕಿಲ್ಲ. ಟೈಮ್ ಅಂದ್ರೆ ಟೈಮು. ಏಳು ಗಂಟೆಗೆ ಇಲ್ಲಿರಬೇಕು ತಿಳೀತಾ?” ಎಂದು ವಿಶೇಷ ಸೂಚನೆಯನ್ನು ನೀಡಿದ್ದರು. ಅವರ ಮಾತಿಗೆ ನೀಲಿ ಅಡ್ಡಡ್ಡ ತಲೆಯಾಡಿಸಿದ್ದಳು. ಮನೆಗೆ ಬಂದು ಮಾಸ್ತ್ರು ಹೇಳಿದ್ದನ್ನು ಇಪ್ಪತ್ತು ಬಾರಿ ಮನೆಯವರೆಲ್ಲರಿಗೂ ಹೇಳಿ, ಅವಳ ಮಾತನ್ನು ಕೇಳಿ, ಕೇಳಿ ರೇಜಿಗೆಯಾದ ಅವಳಣ್ಣ, “ಚಿತ್ರಾಪುರ ಏನು ಫಾರಿನ್ನಲ್ಲಿರೋದ? ಮಾಸ್ತ್ರು ಬಿಟ್ಟು ಹೋದ್ರೆ ಹೋಗ್ಲಿಬಿಡು. ನಿಂಗೆ ಚಿತ್ರಾಪುರ ಮಠವನ್ನು ನನ್ನ ಸೈಕಲ್ ಮೇಲೆ ಕರಕೊಂಡು ಹೋಗಿ ತೋರಿಸ್ತೆ.” ಎಂದು ಗದರಿದ್ದ. ಅದಕ್ಕವಳು ಅಮ್ಮನಲ್ಲಿ ದೂರಿ ದೊಡ್ಡ ರಾದ್ದಾಂತವನ್ನೇ ಮಾಡಿ ಮಲಗಿದ್ದಳು. ಕಣ್ಮುಚ್ಚಿದರೆಲ್ಲಿ ತಡವಾಗಿ ಎಚ್ಚರವಾಗುವುದೋ ಎಂದು ಕಣ್ತೆರೆದುಕೊಂಡೆ ಬೆಳಗು ಹಾಯಿಸಿದ್ದಳು.

ಅಮ್ಮ ಮಾಡಿಕೊಟ್ಟ ದೋಸೆಯನ್ನು ತಿಂದ ಶಾಸ್ತ್ರ ಮಾಡಿ, ಬುತ್ತಿಯಲ್ಲಿ ಇನ್ನೆರಡು ದೋಸೆಯನ್ನು ಕಟ್ಟಿಕೊಂಡು, ಎರಡು ಜಡೆ ಹಾಕಿಸಿ, ಜಡೆತುಂಬಾ ಕನಕಾಂಬರ ದಂಡೆಯನ್ನು ನೆತ್ತಿಯವರೆಗೂ ಮುಡಿದುಕೊಂಡು, ನಡೆದರೆ ನೆರಿಗೆ ಚಿಮ್ಮುವ ಹೊಸಜರಿಲಂಗವನ್ನು ಹಾಕಿಕೊಂಡು ಕುಣಿಯುತ್ತಲೇ ಹೊರಟ ನೀಲಿ ಅಂಗಳಕ್ಕೆ ಇಳಿಯುವಾಗ ಅಮ್ಮ ಒಂದಿಷ್ಟು ಚಿಲ್ಲರೆಯನ್ನು ತಂದು, “ಇಕಾ ಮಗ. ಅಲ್ಲೆಲ್ಲ ನಿನ್ನ ಗೆಳತಿಯರು ಐಸ್ ಕ್ಯಾಂಡಿ, ಪೆಪ್ಪರಮೆಂಟು ಎಂದು ತೆಕೊಳ್ಳುವಾಗ ಮುಖ ನೋಡ್ತ ನಿಲ್ಲೋದು ಬೇಡ. ತಗಂಡು ತಿನ್ನು.” ಎಂದು ಕೈಲಿಟ್ಟಳು. ದುಡ್ಡನ್ನು ಬ್ಯಾಗಿಗೆ ಹಾಕಿಕೋ ಎಂಬ ಅಮ್ಮನ ಮಾತನ್ನು ಕೇಳಿಯೂ ಕೇಳದಂತೆ ಹಾಗೆಯೇ ಮುಷ್ಟಿಯಲ್ಲಿ ಹಿಡಿದು ನೀಲಿ ಶಾಲೆಯ ಕಡೆಗೆ ಓಡತೊಡಗಿದಳು.

ಆಗಷ್ಟೇ ಎಚ್ಚೆತ್ತ ಹೊಳೆಯ ಮೈಯ್ಯೊಳಗೆ ನೀಲಿಯ ಪುಟ್ಟ ಪಾದಗಳು ಇಳಿದಾಗ ಹೊಳೆಯೊಳಗೂ ಹೇಳಲಾಗದ ಪುಳಕ! ಸಿಂಗಾರಗೊಂಡ ಈ ಪೋರಿಯನ್ನೊಮ್ಮೆ ತಬ್ಬಿ ಮುದ್ದಿಸಬೇಕೆಂದು ಹೊಳೆಗೂ ಅನಿಸಿತೋ ಏನೋ? ಒಂದು ಕೈಯ್ಯಲ್ಲಿ ನಾಣ್ಯಗಳನ್ನು ಹಿಡಿದು, ಇನ್ನೊಂದು ಕೈಯ್ಯಲ್ಲಿ ತನ್ನ ಜರಿಯಂಗಿ ಒದ್ದೆಯಾಗದಂತೆ ಮೇಲಕ್ಕೆತ್ತಿ ಹಿಡಿದು ಹೊಳೆದಾಟುತ್ತಿದ್ದ ನೀಲಿಯ ಅಂಗಿಯನ್ನು ಹೊಳೆ ಚೂರೇಚೂರು ಜಗ್ಗಿಬಿಟ್ಟಿತು. ಅಂಗಿ ಒದ್ದೆಯಾಗದಂತೆ ಹಿಡಿಯಲು ಕೈಬಿಚ್ಚಿದವಳ ಕೈಯ್ಯೊಳಗಿನ ನಾಣ್ಯಗಳೆಲ್ಲವೂ ಜಾರಿ ಹೊಳೆಯೊಳಗೆ ಮುಳುಗಿಬಿಟ್ಟವು. ಪ್ರಯಾಣದ ಕನಸಿನಿಂದ ಥಟ್ಟನೆ ವಾಸ್ತವಕ್ಕಿಳಿದ ನೀಲಿ ನೀರಿನಾಳದಲ್ಲಿ ಹೊಳೆಯುತ್ತಿರುವ ನಾಣ್ಯಗಳನ್ನು ನೋಡುತ್ತಾ ನಡುಹೊಳೆಯಲ್ಲಿ ನಿಂತುಬಿಟ್ಟಳು. ಅವಳಿಗೀಗ ಇರುವುದು ಎರಡೇ ಅವಕಾಶಗಳು. ಒಂದೋ ದುಡ್ಡನ್ನು ಹೊಳೆಯಲ್ಲಿಯೇ ಬಿಟ್ಟು ಶಾಲೆಗೆ ಹೋಗುವುದು, ಇಲ್ಲವೆಂದರೆ ಅಂಗಿ ಒದ್ದೆಯಾಗುವ ಪರಿವೆಯಿಲ್ಲದೇ ಹೊಳೆಯೊಳಗೆ ಒಮ್ಮೆ ಮುಳುಗಿ ದುಡ್ಡನ್ನು ಹೆಕ್ಕಿಕೊಳ್ಳುವುದು. ಒದ್ದೆಯಾದ ಅಂಗಿಯನ್ನು ಬದಲಿಸಿ ಬರಲು ಮನೆಗೆ ಹೋಗುವಷ್ಟು ಸಮಯವಿಲ್ಲ. ಅಷ್ಟಕ್ಕೂ ಹಣ ಹೆಕ್ಕಲು ಹೊಳೆಯಲ್ಲಿ ಮುಳುಗಿದೆನೆಂದು ಅಮ್ಮನಿಗೆ ತಿಳಿದರೆ ಬೈಗಳಂತೂ ತಪ್ಪಿದ್ದಲ್ಲ. ಆಗಿದ್ದಾಗಲಿ, ಎಂದವಳೇ ಗುಳುಂ ಎಂದು ಹೊಳೆಯಲ್ಲಿ ನಾಲ್ಕಾರು ಬಾರಿ ಮುಳುಗಿ ಹಣವನ್ನೆಲ್ಲ ಹೆಕ್ಕಿಕೊಂಡಳು. ಹೊಳೆದಾಟಿ ಈಚೆಗೆ ಬಂದು ನಿಂತು ಬೆಳಗಿನ ಚಳಿಗೆ ಗಡಗಡನೆ ನಡುಗತೊಡಗಿದಳು. ಮರುಕ್ಷಣವೇ ಪ್ರವಾಸದ ಟೆಂಪೋ ಬಿಟ್ಟುಹೋಗಬಹುದೆಂದು ಓಡೋಡುತ್ತ ಶಾಲೆಯ ಕಡೆಗೆ ನಡೆಯತೊಡಗಿದಳು. ನೀಲಿಯನ್ನು ನಾಲ್ಕಾರು ಬಾರಿ ತಬ್ಬಿದ ಹೊಳೆ ತನ್ನೊಳಗೆ ಆಗತಾನೇ ಇಳಿದ ಸೂರ್ಯನ ಕಿರಣಗಳೊಂದಿಗೆ ಖುಶಿಯ ನಗುವನ್ನು ಹೊರಸೂಸತೊಡಗಿತು.