ಆಗಾಗ ಈ ಮೊಡವೆ ಹಿಸಿಕಿ ಹಿಸುಕಿ ಕೀವು ಇತ್ಯಾದಿ ಅದರೊಳಗಿಂದ ಆಚೆಗೆ ತೆಗೀತಿದ್ದೆ. ಮುಖದ ತುಂಬಾ ಹೀಗೆ ನಾನೇ ಮಾಡಿಕೊಂಡ ಮೊಡವೆ ನಿರ್ಮೂಲನ ಯೋಜನೆಯ ಗುರುತುಗಳು ಹೇರಳವಾಗಿ ಇದ್ದವು, ಇದ್ದವು ಏನು ಈಗಲೂ ಇವೆ. ರಾಣಾ ಪ್ರತಾಪ ಸಿಂಗ್ ಮುಖದ ಮತ್ತು ಮೈ ಮೇಲೆ ಕತ್ತಿ ಏಟಿನ ಗುರ್ತು ಇದ್ದ ಹಾಗೆ. ಅವನು ಒಂದೊಂದು ಗುರುತು ತೋರಿಸುತ್ತಾ ಯಾವ ಯುದ್ಧದಲ್ಲಿ ಆದ ಗುರುತು ಅಂತ ವಿವರಿಸುತ್ತಾ ಇದ್ದನಂತೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಇಪ್ಪತ್ತೈದನೆಯ ಕಂತು ನಿಮ್ಮ ಓದಿಗೆ

ಬೆಂಗಳೂರಿನಲ್ಲಿ ಹಿಂದೆ ನೀರು ಸರಬರಾಜು ಹೇಗಿತ್ತು ಅಂತ ನಮ್ಮ ಒಳಚರಂಡಿ ವ್ಯವಸ್ಥೆ ಬರೆದಾಗ ಒಂದು ನೋಟ್ ಹಾಕಿಕೊಂಡೆ. ಕೊಳಾಯಿ, ರಸ್ತೆ ನಲ್ಲಿಗಳು, ಒಂದು ರಸ್ತೆಗೆ ಎಷ್ಟು ನಲ್ಲಿ… ಹೀಗೆ ನೋಟ್ ಮುಂದುವರೆಯಿತು. ನೋಟನ್ನು ವಿಸ್ತರಿಸಿ ಅದನ್ನು ಕಂಪ್ಯೂಟರ್ ಒಡಲಿಗೆ ತುಂಬಲು ಶುರು ಮಾಡಿದಾಗ ಈಗಿನ ಎಪಿಸೋಡು ತಲೆ ಒಳಗೆ ನುಗ್ಗಿ ಬಂದಿತು. ಮೊದಲು ನಾನು ಮೊದಲು ನನ್ನದು ಬರೆದು ಮುಂದಕ್ಕೆ ಹೋಗುವಂತಹವನಾಗು ಎಂದು ಮಂತ್ರಿ ಪದವಿಗೆ ಪ್ರೆಶರ್ ಹಾಕುವವರ ಹಾಗೆ ಒತ್ತಡ ಹೇರೇ ಬಿಟ್ಟಿತು. ಒತ್ತಡಕ್ಕೆ ಮಣಿಯದೆ ಬೇರೆ ದಾರಿ ಕಾಣಿಸಲಿಲ್ಲ…..! ಹೀಗಾಗಿ ನೀರು ಸರಬರಾಜು ವ್ಯವಸ್ಥೆ ಮುಂದಿನ ಕಂತಿಗೆ ಮುಂದೂಡಿ ಈಗ ಬೆಂಗಳೂರಿನ ಆ ನೆನಪುಗಳು….
ಲೋಕಲ್ ಫಂಡ್ ಡಿಸ್ಪೆನ್ಸರಿ (Local fund Dispensary)

೧೯೬೭/೬೮ ರಲ್ಲಿ ರಾಜಾಜಿ ನಗರದ ನಾಲ್ಕನೇ ಬ್ಲಾಕಿನ ಜುಗನ ಹಳ್ಳಿ ರಸ್ತೆಯಲ್ಲಿ Local Fund ಡಿಸ್ಪೆನ್ಸರಿ ಶುರು ಆಯಿತು. ಸ್ಥಳೀಯ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಹೊರರೋಗಿ ವಿಭಾಗ ಇದು. ಅಂದರೆ ತುರ್ತು ಸಮಯದಲ್ಲಿ ಇಲ್ಲಿ ಚಿಕಿತ್ಸೆ ನೀಡಲು ಯಾವುದೇ ಸೌಲಭ್ಯ ಇಲ್ಲ. ಕೆಮ್ಮು ನೆಗಡಿ ಜ್ವರ.. ಈ ರೀತಿಯ ಅತಿ ಸಣ್ಣ ಪುಟ್ಟ ಖಾಯಿಲೆಗಳಿಗೆ ಇಲ್ಲಿ ಔಷಧ, ಅಂದರೆ ಕೇರ್ ಮಾಡದೇ ಅದರ ಪಾಡಿಗೆ ಅದನ್ನು ಬಿಡಬಹುದು ಅನಿಸುವ ರೋಗಗಳಿಗೆ ಔಷಧ ನೀಡುವ ಆಸ್ಪತ್ರೆ. ಬಹುಶಃ ಅಂದಿನ ಸರ್ಕಾರದ ನೂತನ ಯೋಜನೆ ಅದು. ಒಬ್ಬರು ವೈದ್ಯರು, ಒಬ್ಬರು ಕಾಂಪೌಂಡರು, ಒಬ್ಬರು ನರ್ಸು ಇಲ್ಲಿನ ಸಿಬ್ಬಂದಿ. ಯಾವಾಗಲೋ ಮನಸು ಬಂದಾಗ ಬಾಗಿಲು ತೆಗೆಯೋರು. ದೊಡ್ಡ ಬಾಟಲಿಗಳಲ್ಲಿ ತುಂಬಿ ಇರಿಸಿದ ಬಣ್ಣ ಬಣ್ಣದ ಕೆಲವು ಔಷಧಿ ಇದ್ದವು. ಕೆಲವು ಸಲ ಇಂಜೆಕ್ಷನ್ ಅಲ್ಲೇ ಇದ್ದರೆ ಬಹು ಸಮಯ ಹೊರಗಿಂದ ದುಡ್ಡು ಕೊಟ್ಟು ಇಂಜೆಕ್ಷನ್ ತಂದು ಇಲ್ಲಿ ಚುಚ್ಚಿಸಿಕೊಳ್ಳಬೇಕು, ಬ್ಯಾಂಡೇಜ್ ತಂದು ಇಲ್ಲಿ ಸುತ್ತಿಸಿಕೊಳ್ಳಬೇಕು. ಪ್ಲಾಸ್ಟರ್ ತಂದು ಇಲ್ಲಿ ಅಂಟಿಸಿಕೊಳ್ಳಬೇಕು ಅಂತಹ ವ್ಯವಸ್ಥೆ! ಚಿಕಿತ್ಸೆಗೆ ಬರುವ ಸುಮಾರು ರೋಗಿಗಳು ಕಡು ಬಡವರು ಮತ್ತು ಬೇರೆ ಕಡೆ ಹೋಗುವ ಆರ್ಥಿಕ ಚೈತನ್ಯ ಇಲ್ಲದವರು. ಅದು ವ್ಯವಸ್ಥೆ. ಆಗಲೂ ಸರ್ಕಾರ ಈಗಿನ ಹಾಗೇ dont care ಮನಸ್ಥಿತಿಯದು. ನನಗೆ ಸರ್ಕಾರದ ಬಗ್ಗೆ ದೊಡ್ಡ ಮೆಚ್ಚುಗೆ ಯಾವಾಗಲೂ. ಕಾರಣ ಅಂದರೆ ಅದು ಎಲ್ಲಾ ಕಾಲದಲ್ಲೂ ಅಳವಡಿಸಿಕೊಂಡಿರುವ dont care ಮನಸ್ಥಿತಿ. ಬಹುಶಃ ಯಾರೋ ಪ್ರಭಾವಿ ವ್ಯಕ್ತಿಗಳ ನೆರವಿಗೆ ಹೇಳಿ ಮಾಡಿಸಿದ ವ್ಯವಸ್ಥೆ ಇದಾಗಿತ್ತು. ಪ್ರಭಾವಿ ಅಂದರೆ ಡಾಕ್ಟರು, ನರ್ಸುಗಳು ಬೆಂಗಳೂರಿನಿಂದ ಆಚೆ ನಾವು ಬದುಕಲಾರೆವೂ, ಉಸಿರು ಆಡೇವು… ಬೆಂಗಳೂರೇ ಆಗಬೇಕು ಎನ್ನುವ ಬೆಂಗಳೂರು ಮೇನಿಯಾ ಅಂಟಿಸಿಕೊಂಡಿರುವ ಜನರಿಗೆ ಎಂದೇ ಹುಟ್ಟು ಹಾಕಿದ ವ್ಯವಸ್ಥೆ ಇದು. ಸಾರ್ವಜನಿಕರ ತೆರಿಗೆ ಹಣ ಹೇಗೆ ಪೋಲು ಮಾಡಬಹುದು ಎಂದು ಸರ್ಕಾರ ವ್ಯವಸ್ಥಿತವಾಗಿ ಯೋಜನೆಗಳನ್ನು ರೂಪಿಸುತ್ತಿದ್ದ ಕಾಲದ ಮೊದಮೊದಲ ಪ್ರಯೋಗ ಇದು. ಈ ಪ್ರಯೋಗ ಭಾರೀ ಯಶಸ್ವಿಯಾಗಿದ್ದು ಈಗ ದೊಡ್ಡ ಹೆಮ್ಮರವಾಗಿ ಬೆಳೆದಿದೆ.

ಅಲ್ಲಿನ ಅವ್ಯವಸ್ಥೆ ಬಗ್ಗೆ ಯಾರು ಏನೇ ದೂರು ಕೊಟ್ಟರೂ ಒಂದೇ ಒಂದು ಹಂಚಿ ಕಡ್ಡಿ ಅಲ್ಲಾಡುತ್ತಾ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ದೂರು ಕೊಡಬಹುದು ಅಂತಲೇ ಯಾರಿಗೂ ತಿಳಿಯದು! ಅದರಿಂದ ರೋಗಿಗಳು ಹೋಗೋರು, ರೋಗ ಹೇಳಿಕೊಂಡು ಜೇಬಿನಲ್ಲಿ ಕಾಸು ಇದ್ದರೆ ಇಂಜಕ್ಷನ್ ತಂದು ಚುಚ್ಚಿಸಿಕೊಳ್ಳೋರು. ಇಲ್ಲ ಅಂದರೆ ಅವರು ಕೊಟ್ಟಿದ್ದು ತಂದು ಕುಡಿದು ಹಣೆಬರಹ, ವಾಸಿ ಆಗಲಿಲ್ಲ ಅಂದುಕೊಳ್ಳೋರು.

ಈ ಎಲ್ ಎಫ್ ಡಿಸ್ಪೆನ್ಸರಿಲಿ ನನ್ನ ಅನುಭವ ಒಂದೆರೆಡು ಜೀವಮಾನ ಪೂರ್ತಿ ನೆನಪಿನಲ್ಲಿ ಉಳಿಯುವ ಹಾಗೆ ಆಯಿತು. ಅದರ ಕತೆ ಈಗ…

ಈ ಪ್ರಸಂಗ ನಡೆದಾಗ ನನಗೆ ಹದಿನೇಳು-ಹದಿನೆಂಟು ವರ್ಷ, ಇಪ್ಪತ್ತು ಅಂತಲೇ ಇಟ್ಟುಕೊಳ್ಳಿ. ವಯಸ್ಸಿನ ಪ್ರಭಾವ ಮುಖದ ತುಂಬಾ ಮೊಡವೆ ಇತ್ತು. ಶೇವ್ ಮಾಡಬೇಕಾದರೆ ರಕ್ತ ಬಳ ಬಳ ಸುರಿದುಬಿಡೋದು. ಅದರ ಜತೆಗೆ ಕೈ ಸುಮ್ಮನಿರಲು ಬಿಡಬೇಕಲ್ಲಾ. ಆಗಾಗ ಈ ಮೊಡವೆ ಹಿಸಿಕಿ ಹಿಸುಕಿ ಕೀವು ಇತ್ಯಾದಿ ಅದರೊಳಗಿಂದ ಆಚೆಗೆ ತೆಗೀತಿದ್ದೆ. ಮುಖದ ತುಂಬಾ ಹೀಗೆ ನಾನೇ ಮಾಡಿಕೊಂಡ ಮೊಡವೆ ನಿರ್ಮೂಲನ ಯೋಜನೆಯ ಗುರುತುಗಳು ಹೇರಳವಾಗಿ ಇದ್ದವು, ಇದ್ದವು ಏನು ಈಗಲೂ ಇವೆ. ರಾಣಾ ಪ್ರತಾಪ ಸಿಂಗ್ ಮುಖದ ಮತ್ತು ಮೈ ಮೇಲೆ ಕತ್ತಿ ಏಟಿನ ಗುರ್ತು ಇದ್ದ ಹಾಗೆ. ಅವನು ಒಂದೊಂದು ಗುರುತು ತೋರಿಸುತ್ತಾ ಯಾವ ಯುದ್ಧದಲ್ಲಿ ಆದ ಗುರುತು ಅಂತ ವಿವರಿಸುತ್ತಾ ಇದ್ದನಂತೆ. ನಾನೂ ಸಹ ಹೀಗೆ ವಿವರಿಸಬಲ್ಲ ವೀರನಾಗಿದ್ದೆ. ಹೀಗೇ ಒಂದು ಸಲ ಒಂದು ಮೊಡವೆ ಕಿತ್ತಾಗ ಉಗುರು ತಗುಲಿ ಸೆಪ್ಟಿಕ್ ಆಗಿಬಿಡ್ತು (ಉಗುರು ತಗುಲಿದರೆ ಸೆಪ್ಟಿಕ್ ಆಗುತ್ತೆ. ಅಂತ. ಯಾರೋ ಹೇಳಿದ್ದು ತಲೆಯಲ್ಲಿ ಕೂತಿತ್ತು). ಸೆಪ್ಟಿಕ್ ಅಂದರೆ ನಂಜು ಅಂತ, ಈಗ ಹೇಳುವ ಹಾಗೆ infection. ಆಗ ಈ ಪದ ಇನ್ನೂ ಹುಟ್ಟಿರಲಿಲ್ಲ ಅಂತ ಕಾಣ್ಸುತ್ತೆ. ಸೆಪ್ಟಿಕ್ ಆಗಿ ಬಲಗೆನ್ನೆ ಮೇಲೆ ಒಂದು ಟೆನಿಸ್ ಬಾಲ್ ಮುಕ್ಕಾಲು ಭಾಗ ಕೊಯ್ದು ಅಂಟಿಸಿ ಇಟ್ಟ ಹಾಗೆ ಊದಿಕೊಂಡಿತು. ಇದು ಒಂದು ವಾರದಲ್ಲಿ ಸಣ್ಣ ಕಡಲೆ ಕಾಳು ಸೈಜಿನಿಂದ ಟೆನಿಸ್ ಬಾಲ್ ಹಂತಕ್ಕೆ ಬೆಳೆದದ್ದು. ಮನೆ ಹತ್ತಿರ ಲೋಕಲ್ ಫಂಡ್ lf ಆಸ್ಪತ್ರೆ ಇತ್ತು ಅಂತ ಹೇಳಿದೆನಲ್ಲಾ. ಬೇರೆ ಡಾಕ್ಟರ ಹತ್ತಿರ ಹೋದರೆ ಫೀಸ್ ತೆರಬೇಕು. ಇಲ್ಲಿ ಅಂದರೆ ಫೀಸ್ ಇಲ್ಲ. ಗವರ್ಮೇಂಟ್ ಆಸ್ಪತ್ರೆ, ಬಿಟ್ಟಿ ಚಿಕಿತ್ಸೆ ಕೊಡ್ತಾರೆ. ಪಾಪ ಸರ್ಕಾರ ನಮಗೋಸ್ಕರ ಈ ಆಸ್ಪತ್ರೆ ಶುರು ಮಾಡಿದೆ. ಹೋಗದೇ ಇದ್ದರೆ ಸರ್ಕಾರಕ್ಕೆ ಅವಮಾನ ಮಾಡಿದ ಹಾಗೆ ತಾನೇ? ಹೀಗೆ ಅಲ್ಲಿಗೆ ಹೋಗಲು ಸೂಕ್ತ ಮತ್ತು ಬಲವಾದ ಜಸ್ಟೀಫೈಯಬಲ್ ಕಾರಣ ಹುಡುಕಿದೆ ಮತ್ತು ಅಲ್ಲಿಗೆ ಹೋದೆ.

ಆಸ್ಪತ್ರೆ ತೆಗೆದಿದ್ದರು. ಒಳಗೆ ರೂಮಿನಲ್ಲಿ ಬಿಳೀ ಏಪ್ರನ್ ತೊಟ್ಟಿದ್ದ ಒಬ್ಬರು ಇದ್ದರು. ಒಳಗೆ ಹೋದೆ. ಎತ್ತರದ ಅತಿ ಕಪ್ಪನೆಯ ಜೊಂಡು ಕೂದಲಿನ ದಪ್ಪಗಿನ ಡಾಕ್ಟರು ಏಪ್ರನ್ ತೊಟ್ಟು ಕೂತಿದ್ದರು. ಅವರೆದುರು ನಿಂತೆ. ತಲೆ ಎತ್ತಿ ಎಸ್ ಅಂದರು. ಸಾರ್ ಹೀಗೆ ಆಗಿದೆ ಪಿಂಪಲ್ಸ್ ಆಗಿತ್ತು, ಸೆಪ್ಟಿಕ್ ಆದ ಹಾಗಿದೆ ಅಂದೆ. ಮುಖ ತೋರಿಸಿದೆ. ಮೊಡವೆ ಕಿತ್ತುಕೊಂಡೆ ಅಂತ ಹೇಳೋಕೆ ಸಾಧ್ಯವೇ? ಅವರಿಗೆ ಕೆನ್ನೆ ತೋರಿಸಿದೆ. ಕೆನ್ನೆ ಮುಟ್ಟಿ ನೋಡಿದರು. ಒಂದೆರೆಡು ಕಡೆ ಬೆರಳಿಂದ ಟಪ್ ಟಪಾ ಅಂತ ತಟ್ಟಿದರು. ತಲೆ ಆಡಿಸಿ ಇನ್ನೂ ಹಾರ್ಡ್ ಇದೆ ಆಪರೇಟ್ ಮಾಡಬೇಕು ಅಂದರು. ಪರವಾಗಿಲ್ಲವೇ ಅಂದೆ. ಏನೂ ಆಗಲ್ಲ. ಓಪನ್ ಮಾಡಿದರೆ ಸಾಕು ಅಂದರು. ಅಂದರೆ ಒಂದು ರೀತಿ ಧೈರ್ಯ ತುಂಬಿದರು! ಆಗಲಿ ಸಾರ್ ಆಪರೇಶನ್ ಮಾಡಿ ಸಾರ್ ಅಂದೆ. ನಿನ್ನ ವಯಸ್ಸು ಎಷ್ಟು, ಏನು ಮಾಡ್ತಾ ಇದೀಯ ಮೊದಲಾದ ವಿವರ ಕೇಳಿದರು. ಹೆಸರು ಹೇಳಿದೆ. BSc ಓದುತ್ತಾ ಇದೀನಿ ಗವರ್ಮೆಂಟ್ ಕಾಲೇಜಲ್ಲಿ ಅಂತ ಉತ್ತರ ಕೊಟ್ಟೆ. ಅದೇ ವಿವರ ರಿಜಿಸ್ಟರ್‌ನಲ್ಲೂ ಬರೆದರು.

ಔಷಧ ಇಟ್ಟಿದ್ದ ರೂಮಿನಲ್ಲಿ ಒಂದು ಮಂಚ ಇತ್ತು. ಮಂಚದ ಮೇಲೆ ಕೆಂಪು ಬಣ್ಣದ ರೆಕ್ಸಿನ್ ಹೊದಿಸಿದ್ದ ಒಂದು ಹಾಸಿಗೆ ಇತ್ತು. ಅಲ್ಲಿಗೆ ಬಾ ಅಂದರು. ಅಂಗಾತ ಮಲಗು ಅಂದರು. ಅಂಗಾತ ಮಲಗಿದ ಮೇಲೆ ಸೈಡ್ ಮಲಗಿಸಿದರು. ಮಲಗಿಸಿ ಈ ಇಂಜೆಕ್ಷನ್ ನಾನು ತಂದಿರೋದು. ಒಂದೂಕಾಲು ರೂಪಾಯಿ. ಅದು ಕೊಟ್ಟು ಆಪರೇಟ್ ಮಾಡ್ತೀನಿ, ಒಂದೂಕಾಲು ಕೊಡು ಅಂದರು.

ಸಾರ್ ನಾನು ಇನ್ನೂ ಓದುತ್ತಾ ಇದೀನಿ, ಅಷ್ಟಿಲ್ಲ.. ಅಂದೆ.

ಎಷ್ಟಿದೆ ಅಂದರು.

ಜೇಬು ತಡಕಿದೆ. ಅರವತ್ತು ಪೈಸೆ ಇತ್ತು. ಇಷ್ಟೇ ಸಾರ್ ಇರೋದು ಅಂದೆ.

ಕೊಡು ಅಂದರು. ಕೊಟ್ಟೆ.

ಆಪರೇಶನ್ ಆಯ್ತು. ದಪ್ಪನೆ ಬ್ಯಾಂಡೇಜು ಹಾಕಿ ಹೋಗು ಅಂದರು. ಮನೆಗೆ ಬಂದೆ. ಮುಖದ ತುಂಬಾ ಸುತ್ತಿದ್ದ ಬ್ಯಾಂಡೇಜ್ ನೋಡಿದರು.

ಲೂಸ್ ಮುಂಡೆದೇ ಮನೇಲಿ ಹೇಳಿ ಅಲ್ವಾ ಇದು ಮಾಡಿಸಿಕೊಳ್ಳೋದು, ಬುದ್ಧಿ ಇದ್ಯಾ ಅಂತ ಮನೇಲಿ ಇರೋರು ಎಲ್ಲರೂ ಬೈದರು. ಬೈಸಿಕೊಂಡು ಉಂಡು ಬಿದ್ದುಕೊಂಡೆ.

ದಿವಸ ಬಿಟ್ಟು ದಿವಸಕ್ಕೆ ಒಂದು ಸಲ ಕ್ಲಿನಿಂಗು ಡ್ರೆಸಿಂಗು, ಮಾಡಿಸಿಕೊಂಡು ಬರ್ತಾ ಇದ್ದೆ. ಹತ್ತು ದಿವಸ ಆದರೂ ಗಾಯ ಮಾಗಲಿಲ್ಲ, ಬದಲಿಗೆ ಕೀವು ತುಂಬುತ್ತಾ ಇತ್ತು. ಮೂರನೇ ವಾರ ಡ್ರೆಸಿಂಗ್‌ಗೆ ಹೋದಾಗ ಯಾಕೆ ಹೀಗೆ… ಅಂತ ಕೇಳಿದೆ. ಆಂಟಿ ಬಯಾಟಿಕ್ ಇಂಜೆಕ್ಷನ್ ಕೊಡಬೇಕಿತ್ತು, ಕಾಸಿಲ್ಲ, ನೀನು ತಗೊಳ್ಳಿಲ್ಲ… ಅಂದರು.

ಈಗಲೂ ಕಾಸು ತಂದರೆ ಏನಾದರೂ ಮಾಡೋಣ…. ಅಂದರು. ಕಾಸು ಕೊಡುವ ಮತ್ತು ಅವರ ಪ್ರಯೋಗಕ್ಕೆ ಒಳಗಾಗುವ ಇಚ್ಛೆ ಇರಲಿಲ್ಲ. ಕಾಸು ಕೊಡಬಾರದು ಅನ್ನುವ ಕೆಟ್ಟ ಹಠ ಹುಟ್ಟಿತ್ತು ಅಂತ ಕಾಣುತ್ತೆ. ಈಯಪ್ಪನ ಸಾವಾಸ ಬೇಡ ಅಂತ ವಿಕ್ಟೋರಿಯಾ ಆಸ್ಪತ್ರೆಗೆ ಹೋದೆ. ಅಲ್ಲೂ ದಿನ ಬಿಟ್ಟು ದಿನ ಚಿಕಿತ್ಸೆ. ಅಲ್ಲಿ ಪೂರಾ ಫ್ರೀ, ಬಿಟ್ಟಿ ಚಿಕಿತ್ಸೆ. ಬೆಳಿಗ್ಗೆ ಹೋಗಿ ಚಿಕಿತ್ಸೆ ಪಡೆಯೋದು. ಒಂದು ತಿಂಗಳು ಗಾಯ ದೊಗರಿ ದೋಗರಿ ಕ್ಲೀನ್ ಮಾಡಿ ಡ್ರೆಸ್ ಮಾಡತಾ ಇದ್ದರು. ಗಾಯ ಕೊಂಚ ಮಾಗಿದ ಮೇಲೆ ಕೆನ್ನೆ ಮೇಲೆ ಎಕ್ಸ್ ಆಕಾರದಲ್ಲಿ ಪ್ಲಾಸ್ಟರ್ ಅಂಟಿಸುತ್ತಾ ಇದ್ದರು. ಪ್ರತಿ ದಿನ ಸೈಕಲ್ ಮೇಲೆ ವಿಕ್ಟೋರಿಯಾ ಆಸ್ಪತ್ರೆ, ಅಲ್ಲಿಂದ ಹಾಗೇ ಗ್ಯಾಸ್ (ಗವರ್ನಮೆಂಟ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜ್) ಕಾಲೇಜಿಗೆ ಹೋಗ್ತಾ ಇದ್ದೆ. ಮುಖದ ಮೇಲೆ ಎಕ್ಸ್ ಆಕಾರದಲ್ಲಿ ಬಿಳೀ ಪ್ಲಾಸ್ಟರ್ ಇರ್ತಾ ಇತ್ತು. ಅದರಡಿಯಲ್ಲಿ ದಪ್ಪನೆ ಹತ್ತಿ. ಮುಖ ಮುಚ್ಚುತ್ತಾ ಇರಲಿಲ್ಲ. ರಾಜಾರೋಷವಾಗಿ ಈ ಅಲಂಕಾರ ಪ್ರದರ್ಶನ ಮಾಡ್ತಾ ಇದ್ದೇ… ಬೋರೇಗೌಡ ಅನ್ನುವ ಫಿಸಿಕ್ಸ್ ಮೇಷ್ಟರು ಸೀ ದಟ್ ಫೆಲೋ ವಿತ್ ಎ ಪ್ಲಸ್ ಆನ್ ಹಿಸ್ ಫೇಸ್ ಅನ್ನೋರು! ರಾಮಚಂದ್ರ ಅನ್ನುವ ಕೆಮಿಸ್ಟ್ರಿ ಮೇಷ್ಟರು ವಿ ಶುಡ್ ಬೀ ಕೇರ್ ಫುಲ್ ಅನ್ನೋರು. ಶಿವಪ್ಪ ಅನ್ನೋ ಕನ್ನಡದ ಮೇಷ್ಟ್ರು ಅಯ್ಯೋ ಏನಾಯಿತ್ರೀ ಅನ್ನೋರು. ನನ್ನ ಪಕ್ಕದಲ್ಲೇ ಕುತ್ಕೋತಿದ್ದ ನಾಗರಾಜನಿಗೆ ಬೋರೆಗೌಡರ ಮಾತು ಕೇಳಿ ಖುಷಿ ಅಂದರೆ ಖುಷಿ. ಇದು ಅವನಿಗೆ ತುಂಬಾ ಖುಷಿಯ ಸಂಗತಿ. ಎ ಪ್ಲಸ್ ಆನ್ ಫೇಸ್ ಅಂತ ಅವನಿಗೆ ಅವನೇ ಹೇಳಿಕೊಂಡು ಮಜಾ ತಗೋತಿದ್ದ. ಈಗ ಅವನಿಲ್ಲ, ಅವನು ಮಜಾ ತಗೊಂಡಿದ್ದು ತಲೇಲಿ ಉಳಿದುಬಿಟ್ಟಿದೆ. ಹಾಗೇ ಅವನಿಗೆ ಆಂಟಿ ಹಿಂದಿ ಸ್ಟ್ರೈಕ್‌ನಲ್ಲಿ ತೋಳಿನ ಮೇಲೆ ಪೊಲೀಸರು ಬಾರಿಸಿದ್ದ ಲಾಠಿ ಏಟಿನಿಂದ ಆದ ಬಾಸುಂಡೆ ನೆನಪೂ ಸಹ ಇದೆ. ಹಾಳಾದ್ದು ಈ ನೆನಪು ಅವನು ಎ ಪ್ಲಸ್ ಆನ್ ಫೇಸ್ ಅಂತ ಹೇಳುತ್ತಿದ್ದಾಗ ಯಾಕೆ ನನಗೆ ಬರಲಿಲ್ಲ ಅನ್ನುವ ನೋವು ಈಗ ಕಾಡುತ್ತದೆ!

ಗಾಯ ಪೂರ್ತಿ ಮಾಗಿ ಪ್ಲಾಸ್ಟರ್ ತೆಗೆದ ನಂತರ ನನ್ನ ಬಲಗೆನ್ನೆ ಮೇಲೆ ಒಂದು ಇಂಚು ಉದ್ದ ಒಂದು ಇಂಚು ಅಗಲದ ಎಕ್ಸ್ ಗುರುತು ಹಾಗೇ ಉಳಿದೇ ಹೋಯ್ತು. ಕನ್ನಡಿ ಮುಂದೆ ನಿಂತಾಗಲೆಲ್ಲಾ ಅಯ್ಯೋ ನನ್ನ ಪಾಡೇ ಅನಿಸೋದು. ಈ ಗುರುತು ಇರೋದರಿಂದ ಮದುವೆ ಆಗುತ್ತಾ ಅಂತ ಯೋಚನೆ ಸುಮಾರು ದಿವಸ, ವರ್ಷ ಕಾಡಿತ್ತು.

ಅದು ಹೇಗೋ ಮದುವೆ ಆಗಿ ಬಿಡ್ತು. ಈ ಮಾರ್ಕ್ ಇರೋದರಿಂದ ನನಗೆ ರೌಡಿ ಪಟ್ಟ ಸಿಗಬಹುದು ಅನಿಸಿತ್ತು. ಅದೂ ಸಹ ಆಗಲೇ ಇಲ್ಲ! ಹೆಚ್ಚು ಕಮ್ಮಿ ಐವತ್ತೈದು ವರ್ಷದಿಂದ ಕನ್ನಡಿ ಮುಂದೆ ನಿಂತು ನನ್ನ ಮುಖ ನೋಡಿಕೊಂಡು ಮನಸಿನಲ್ಲೇ ಗೋಳಾಡಿದ್ದೇನೆ, ಮೌನವಾಗಿ ರೋಧಿಸಿದ್ದೇನೆ! ಯಾರಾದರೂ ನನ್ನ ಗುರುತನ್ನ ಬೇರೆಯವರಿಗೆ ನನ್ನ ಅನುಪಸ್ಥಿತಿಯಲ್ಲಿ ಅದೇ ಮುಖದ ಮೇಲೆ ಪ್ಲಸ್ ಮಾರ್ಕ್ ಇದೆಯಲ್ಲಾ ಅಂತ ವಿವರಿಸುವ ಸಂದರ್ಭ ನೆನೆದು ಭೂಮಿಗೆ ಇಳಿದಿದ್ದೇನೆ. ನಾನು ಈ ಜಗತ್ತಿನಿಂದ ಕಣ್ಮರೆ ಆಗೋವರೆಗೂ ಈ ಮಾರ್ಕು ಶಾಶ್ವತ. ಮುಂದಿನ ಜನ್ಮ ಅನ್ನೋದು ಇದ್ದರೆ ಆಗ ಈ ಎಕ್ಸ್ ಮಾರ್ಕ್ ಇಲ್ಲದಿರುವ ಮುಖ ಇರಲಿ ಅಂತ ನನ್ನ ಆಸೆ!

ಸುಮಾರು ವರ್ಷ ಅಲ್ಲಿ ಈ ಲೋಕಲ್ ಫಂಡ್ ಆಸ್ಪತ್ರೆ ಕೆಲಸ ನಡೆಸಿತು. ಅದರ ಸುತ್ತ ಒಂದು ಪುಟ್ಟ ಮೈದಾನ ಇದ್ದು ಅದರಲ್ಲಿ ಪುಟ್ಟವರು ಕ್ರಿಕೆಟ್ ಆಡುತ್ತಿದ್ದರು. ಹಸು ಕರು ನಾಯಿ ಸಂಗಡ ಎದುರಲ್ಲೇ ಇದ್ದ ಅಗಸರ ಅಂಗಡಿಯ ಕತ್ತೆ ಸಹ ಸಹ ಬಾಳ್ವೆ ನಡೆಸುತ್ತಿದ್ದವು…

ಈಗ ಇದೇ ಸ್ಥಳದಲ್ಲಿ ಅಂದರೆ ಲೋಕಲ್ ಫಂಡ್ ಆಸ್ಪತ್ರೆ ಇದ್ದ ಕಡೆ ಒಂದು ಅತ್ಯಾಧುನಿಕ ಡಯಾಲಿಸಿಸ್ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ ಮತ್ತು ಸಾವಿರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಾ ಇದ್ದಾರೆ. ಲೋಕಲ್ ಫಂಡ್ ಆಸ್ಪತ್ರೆ ಹೀಗೆ ಒಂದು ಸಾರ್ವಜನಿಕ ಆರೋಗ್ಯ ಕೇಂದ್ರ ಆಗಿದೆ.

*****

ಇದು ಮೇಲಿನ ಪ್ರಸಂಗಕ್ಕಿಂತ ಸೀನಿಯರ್, ಸುಮಾರು ಹತ್ತು ಹದಿನೈದು ವರ್ಷ. ನಮ್ಮ ದೊಡ್ಡ ಅಕ್ಕ ದೊಡ್ಡ ಏನು ಇದ್ದವಳು ಒಬ್ಬಳೇ ಅಕ್ಕ, ಎಲ್ಲರಿಗಿಂತ ದೊಡ್ಡವಳು. ಒಂದು ಸಲ ಮನೆಯ ಹಿತ್ತಲಲ್ಲಿ ಅದೇನೋ ಕೆಲಸ ಮಾಡುತ್ತಿದ್ದಳು. ಅಸಾಧ್ಯ ಕೋಪ ಅವಳಿಗೆ. ಅದೇನೋ ಕೇಳಿದಳು. ನಾನು ನನ್ನ ಆಟದಲ್ಲಿ ಮಗ್ನ. ಅವಳಿಗೆ ಉತ್ತರ ಕೊಡಲಿಲ್ಲ. ಎರಡನೇ ಸಲ ಕೇಳಿದಳು, ಆಗಲೂ ಉತ್ತರ ಇಲ್ಲ. ಮೂರನೇ ಸಲ ಕೋಪದಿಂದ ಏರಿದ ಕಂಠದಲ್ಲಿ ಅದೇ ಪ್ರಶ್ನೆ ಕೇಳಿದ್ದಾಳೆ. ನಾನು ಆಗಲೂ ಮೌನ. ಅವಳಿಗೆ ಕೋಪ ನೆತ್ತಿಗೇರಿತು. ನನ್ನ ಮೇಲೆ ಏನು ಎಸಿಬೇಕು ಅಂತ ಸುತ್ತಲೂ ಕಣ್ಣಾಡಿಸಿದ್ದಾಳೆ. ಎದುರಿಗೆ ಮುಗುಚೆ ಕಾಯಿ ಕಾಣಿಸಿತು. ಮುಗುಚೆ ಕಾಯಿ ಅಂದರೆ ದೋಸೆ ಮುಗುಚುವ ಸೌಟು. ಅದಕ್ಕೆ ಹಲ್ಲೆ ಅಂತ ಇನ್ನೊಂದು ಪದವೂ ಇದೆಯಂತೆ. ಅದನ್ನ ನನ್ನ ಹತ್ತಿರ ಎಸೆದಳು. ಅದು ನನಗೆ ತಗುಲಿ ನನ್ನ ಗಮನ ಅತ್ತ ಹರಿಯಲಿ ಅನ್ನುವ ಉದ್ದೇಶ ಅವಳದು. ಆದರೆ ಆಗಿದ್ದೇ ಬೇರೆ. ಮುಗುಚೆ ಕಾಯಿ ಸೀದಾ ಬಾಣದ ಹಾಗೆ ಬಂದು ನನ್ನ ಎಡಗೈ ಮೊಣಕೈಗಿಂತ ಎರಡು ಇಂಚು ಮೇಲೆ ಚುಚ್ಚಿಕೊಳ್ತು. ರಕ್ತ ಬಳ ಬಳ ಸುರಿಯಲು ಶುರು.

ಹಾಗೆ ರಕ್ತ ಸುರಿಯಲಾರಂಭಿಸಿದ್ದೇ ಅವಳು, ಮುಗುಚೆ ಕಾಯಿಕಿತ್ತು ಆಕಡೆ ಎಸೆದು ಕೈಗೆ ಒಂದು ದಪ್ಪ ಬಟ್ಟೆ ಸುತ್ತಿ ರಕ್ತ ನಿಲ್ಲಿಸಿದಳು. ಅವತ್ತು ಯಾವುದೋ ಸರ್ಕಾರಿ ರಜೆ. ಡಾಕ್ಟರ ಶಾಪು ಆಸ್ಪತ್ರೆ ರಜಾ… ಒಂದು ದಿವಸ ಪೂರ್ತಿ ಅಕ್ಕ ನಿದ್ದೆ ಬಿಟ್ಟು ನೋಡಿಕೊಂಡಳು. ಮಾರನೇ ದಿವಸ ಖಾಸಗಿ ಡಾಕ್ಟರ ಹತ್ತಿರ ಹೋದೆ. ಕೈ ತೋರಿಸಿ ಹೀಗಾಯ್ತು ಅಂದೆ. ಅಯ್ಯೋ ಆಗಲೇ ಸ್ಟಿಚ್ ಮಾಡಬೇಕಿತ್ತು, ಈಗಾಗಲೇ ಇಷ್ಟೊಂದು ಸಮಯ ಆಗಿದೆ, ಸ್ಟಿಚಿಂಗ್ ನಿಲ್ಲೋಲ್ಲ ಅಂತ ಬ್ಯಾಂಡೇಜು ಕಟ್ಟಿದರು. ಸಾರ್ ದುಡ್ಡು ತಂದಿಲ್ಲ, ನಾಳೆ ತಂದು ಕೊಡ್ತೀನಿ ಅಂದೆ. ತಲೆ ಆಡಿಸಿದರು. ಹತ್ತು ಹದಿನೈದು ಹೆಜ್ಜೆ ನಡೆದಿರಬಹುದು. ಯಾರೋ ಪುಟ್ಟ ಹುಡುಗ ಡಾಕ್ಟರು ಕರೀತಾ ಅವ್ರೆ ಬಾ ಅಂದ. ಮತ್ತೆ ಹೋದೆ. ಫೀಸು ಎಲ್ಲಿ ಅಂದರು.

ನಾಳೆ ಖಂಡಿತ ತಂದು ಕೊಡ್ತೀನಿ. ನಮ್ಮನೆ ಅಡ್ರೆಸ್ಸು ಇದು ಅಂತ ಹೇಳಿ ಬಂದೆ. ಮಾರನೇ ದಿವಸ ಹಳೇ ಬಿಲ್ ಚುಕ್ತಾ ಮಾಡಿದೆ. ಪ್ರತಿ ಎರಡು ದಿವಸಕ್ಕೆ ಡ್ರೆಸಿಂಗ್ ಮಾಡಿಸ್ತಾ ಇದ್ದೆ. ಅವತ್ತಿನ ಫೀಸ್ ಅವತ್ತೇ ಚುಕ್ತಾ. ಗಾಯ ಪೂರ್ತಿ ಮಾಗಿತಾ.. ಆದರೆ ಎಡಗೈ ಮೇಲೆ ಆ ಗುರುತು ಇನ್ನೂ ಹಂಗೇ ಇದೆ. ಈಗಲೂ ನನ್ನವಳು ರೇಗಿದಾಗ, ಕೈಯಲ್ಲಿ ಏನಿದೆ ನೋಡು ಅಂತ ಮುಗುಚೆ ಕಾಯಿ ಝಳಪಿಸುತ್ತಾಳೆ! ನಮ್ಮ ಅಕ್ಕ ಎರಡು ವರ್ಷದ ಹಿಂದೆ ದೇವರ ಪಾದ ಸೇರಿದಳು, ಅವಳ ನೆನಪಿಗೆ ಎಡಗೈ ಎಲ್ಬೋ ಮೇಲೆ ಈ ಒಂದೂವರೆ ಇಂಚಿನ ಮಚ್ಚೆ…! ಅಕ್ಕ ಅವಳ ನೆನಪು ಮಾಸದಿರದ ಹಾಗೆ ಒಂದು ಗುರುತು ಮಾಡಿದ್ದಾಳೆ!

*****

ಹಾಲಿನ ಬೂತ್ Milk Booth ೧೯೬೫ ರಲ್ಲಿ ಬೆಂಗಳೂರು ಡೈರಿ ಆರಂಭ ಆಯಿತು. ಮನೆ ಮನೆಗೆ ವರ್ತನೆ ಹಾಲು ಕೊಡುತ್ತಿದ್ದವರಿಂದ ಗಿರಾಕಿಗಳನ್ನು ಡೈರಿ ಹಾರಿಸಿಕೊಳ್ಳಬೇಕಿತ್ತು. ಕರೆಯೋ ಹಾಲು ಕ್ರಿಮಿಗಳಿಂದ ಕೂಡಿರುತ್ತದೆ, ಯಾವ ಯಾವುದೋ ನೀರು ಹಾಕಿರುತ್ತಾರೆ, ದೇಹಕ್ಕೆ ಒಳ್ಳೆಯದು ಅಲ್ಲ, ಹಸು ಎಮ್ಮೆ ಅದೇನೇನೋ ತಿಂದು ಬರುತ್ವೆ, ಅದೇ ಹಾಲು ನೀವು ತಗೊಳ್ಳೋದು, ಅದರಿಂದ ನಿಮ್ಮ ಆರೋಗ್ಯ ಹಾಳು…. ಹೀಗೆ ವ್ಯವಸ್ಥಿತ ಪ್ರಚಾರವನ್ನು ಡೈರಿ ಮಾಡಿತು. ನಮ್ಮ ಹಾಲು ಇಷ್ಟು ತಾಪಮಾನದಲ್ಲಿ ಪಾಸ್ಟರೈಸ್ ಆಗಿರುತ್ತದೆ, ಅದರಿಂದ ಅದರಲ್ಲಿ ರೋಗಾಣು ಇಲ್ಲ ಅಂತ ತನ್ನ ಹಾಲಿನ ಪ್ರಚಾರವನ್ನು ದೊಡ್ಡದಾಗಿ ಮಾಡಿತು. ನಾವು ಎಂದಿನ ಹಾಗೆ ಪ್ರಚಾರಕ್ಕೆ ಬೋಲ್ಡ್ ಆದೆವು. ಇಷ್ಟುವರ್ಷ ಇದೇ ಹಾಲು ಕುಡಿದೆವು, ಏನೂ ಆಗಿಲ್ಲ ಅಂತ ನಮ್ಮ ಬುರುಡೆಗೆ ಹೊಳೆಯಲಿಲ್ಲ.

ಸೀಲ್ ಮಾಡಿದ ಬಾಟಲಿಯಲ್ಲಿ ಅರ್ಧ ಲೀಟರ್ ಹಾಲು ಸರಬರಾಜು ಆರಂಭ ಆಯಿತು. ಐವತ್ತು ಪೈಸೆಗೆ ಅರ್ಧ ಲೀಟರ್, ಅದಕ್ಕೆ ಅಲ್ಯುಮಿನಿಯಂ ಮುಚ್ಚಳ. ಹಿಂದಿನ ದಿವಸದ ಖಾಲಿ ಬಾಟಲಿ ಕೊಡಿ, ಇವತ್ತಿನ ತುಂಬಿದ ಬಾಟಲಿ ಹಾಲು ಕೊಳ್ಳಿ… ಹೀಗೆ ಅಭಿಯಾನ ಶುರು ಆಯಿತು. ಅಲ್ಯುಮಿನಿಯಂ ಮುಚ್ಚಳ ಖಾಲಿ ಬಾಟಲಿ, ಹಳೇ ಪೇಪರು ಕೊಳ್ಳುವವರಿಗೆ ಮಾರಬಹುದಿತ್ತು. ಒಂದು ಐದಾರು ವರ್ಷ ಹೀಗೆ ಸರಬರಾಜಿನ ನಂತರ ಹೊಸಹೊಸ ಐಡಿಯಾ ಹುಡುಕುತ್ತಿದ್ದರು. ಅದರಲ್ಲಿ ಒಂದು ಟೋಕನ್ ಹಾಕಿ ಹಾಲು ಹಿಡಿದುಕೊಳ್ಳೋದು.

ಹಾಲಿನ ಬೂತಿನ ಹತ್ತಿರ ಟೋಕನ್‌ಗೆ ದುಡ್ಡು ಕೊಟ್ಟು ಕೊಳ್ಳೋದು. ಆ ಟೋಕನ್ ಅನ್ನು ಮೆಷಿನ್‌ನ ಕಿಂಡಿಯಲ್ಲಿ ಹಾಕಿ ಹಾಲು ಹಿಡಿದುಕೊಳ್ಳೋದು; ಇದು ವ್ಯವಸ್ಥೆ. ಟೋಕನ್ ಹಾಕಿದ ನಂತರ ಹಾಲು ಸುರಿಯುವ ಜಾಗದಲ್ಲಿ ನಿಮ್ಮ ಪಾತ್ರೆ ಇಡಬೇಕು, ಅದರೊಳಗೆ ಹಾಲು ಬೀಳುತ್ತದೆ. ಹಾಲು ಹೆಚ್ಚು ಸುರಿದರೆ ಪೈಪ್ ಮೂಲಕ ಹೊರ ಹೋಗಲು ಪಾತ್ರೆ ಇಡುವ ಜಾಗದಲ್ಲೇ ಒಂದು ಕಿಂಡಿ ಮಾಡಿದ್ದರು.

ಅವರಿಗೆ ಕೆನ್ನೆ ತೋರಿಸಿದೆ. ಕೆನ್ನೆ ಮುಟ್ಟಿ ನೋಡಿದರು. ಒಂದೆರೆಡು ಕಡೆ ಬೆರಳಿಂದ ಟಪ್ ಟಪಾ ಅಂತ ತಟ್ಟಿದರು. ತಲೆ ಆಡಿಸಿ ಇನ್ನೂ ಹಾರ್ಡ್ ಇದೆ ಆಪರೇಟ್ ಮಾಡಬೇಕು ಅಂದರು. ಪರವಾಗಿಲ್ಲವೇ ಅಂದೆ. ಏನೂ ಆಗಲ್ಲ. ಓಪನ್ ಮಾಡಿದರೆ ಸಾಕು ಅಂದರು. ಅಂದರೆ ಒಂದು ರೀತಿ ಧೈರ್ಯ ತುಂಬಿದರು! ಆಗಲಿ ಸಾರ್ ಆಪರೇಶನ್ ಮಾಡಿ ಸಾರ್ ಅಂದೆ.

ನಮ್ಮ ಅಣ್ಣನ ಮಗ ರವಿ ಇನ್ನೂ ಪ್ರೈಮರಿ ಶಾಲೆ ಹುಡುಗ. ಹಾಲು ತರಲು ಅವನ ಕೈಲಿ ಸರಿಯಾಗಿ ಕಾಸು ಕೊಟ್ಟು ಕಳಿಸಿದರು. ಕೈಯಲ್ಲಿ ಒಂದು ಗುಂಡನೆಯ ಚೊಂಬು ಹಿಡಿದು ಹಾಲಿನ ಬೂತ್‌ಗೆ ಹೋದ. ಟೋಕನ್ ಕೊಂಡ. ಅದನ್ನು ಮೆಷಿನ್ ಒಳಗೆ ತೂರಿಸಿದ. ಹಾಲು ತಳಗೆ ಇರುವ ಕಿಂಡಿ ಮೂಲಕ ಬರುತ್ತೆ ಅಂತ ಹಾಲಿನ ಚೆಂಬು ಅದರ ಮೇಲೆ ಬೋರಲು ಇಟ್ಟ. ಚೊಂಬು ಬಾಯಿಗೆ ಹಾಲು ಬೀಳುತ್ತೆ ಅಂತ ಅವನ ಲಾಜಿಕ್. ಹಾಲು ಹಾಗೆ ತುಂಬಿದರೆ ಮತ್ತೆ ಸುರಿದು ಹೋಗುತ್ತೆ ಅನ್ನುವ ಮುಂದಿನ ಲಾಜಿಕ್ ಆ ಕ್ಷಣದಲ್ಲಿ ಮರೆತ ಅಂತ ಕಾಣುತ್ತೆ. ಅರ್ಧ ಲೀಟರ್ ಹಾಲು ಬೋರಲು ಪಾತ್ರೆ ಮೇಲೆ ಶಿವರಾತ್ರಿಯ ದಿವಸ ಈಶ್ವರಲಿಂಗ ದೇವರಿಗೆ ಅಭಿಷೇಕ ಮಾಡಿದ ಹಾಗೆ ಸುರಿದು ಆಚೆ ಹರೀತು. ಅಂಗಡಿ ಅವನು ಬೊಬ್ಬೆ ಹೊಡೀತ ಬಂದವನು ಅಲ್ಲೇ ನಿಂತು ಟೋಕನ್ ಹೇಗೆ ಹಾಕಬೇಕು, ಪಾತ್ರೆ ಹೇಗೆ ಇಡಬೇಕು ಅಂತ ಅರ್ಧ ಗಂಟೆ ವಿವರಿಸಿದ. ಮನೇಲಿ ಹೀಗಾಯ್ತು ಅಂತ ಹೇಳು, ಕಾಸು ಇಸ್ಕೊಂಬಾ ಬೇರೆ ಹಾಲು ಕೊಡ್ತೀನಿ, ನಾನೇ ಹಿಡಿದು ಕೊಡ್ತೀನಿ ಅಂತ ಹೇಳಿ ಕಳಿಸಿದ! ರವಿ ಬಂದು ಅಳುತ್ತಾ ಈ ಕತೆ ಹೇಳಿ ಇನ್ಮೇಲೆ ಹಾಲು ತರೋಕ್ಕೆ ನಾನು ಹೋಗಲ್ಲ…. ಅಂದ! ಬಹುಶಃ ಡೈರಿ ಅವರಿಗೆ ಈ ಅನುಭವ ಗೊತ್ತಾಯಿತು ಅಂತಾ ಕಾಣ್ಸುತ್ತೆ, ಕಿಯೋಸ್‌ಗಳು ಹೋದವು, ಬೇರೆಬೇರೆ ಪ್ರಯೋಗ ನಡೆಯಿತು. ಸದ್ಯಕ್ಕೆ ಪ್ಲಾಸ್ಟಿಕ್ ಚೀಲದಲ್ಲಿ ಹಾಲು ತುಂಬಿ ಅದನ್ನು ಸೀಲ್ ಮಾಡಿ ಮಾರ್ತಾ ಇದ್ದಾರೆ. ಇದೂ ಸಹ ಚಾಲ್ತಿಗೆ ಬಂದು ಸುಮಾರು ವರ್ಷ ಆಗಿದೆ. ಮುಂದೆ ಯಾವ ಬದಲಾವಣೆ ಆಗಬಹುದು ಅಂತ ಕಾಯ್ತಾ ಇದ್ದೀನಿ..! ರವಿ ಈಗ ಬೆಳೆದು ಇಂಜಿನಿಯರ್ ಆಗಿದ್ದಾನೆ.
ಹಲ್ಲು ಕೀಳಿಸಿಕೊಂಡ ಅನುಭವ

ಮೂರು ದಿವಸ ಒಂದು ಹಲ್ಲು ಭಾರೀ ಬಾಧೆ ಕೊಡ್ತು. ಅದಕ್ಕೆ ಏನೇನು ಮನೆ ಔಷಧಿ ಮಾಡಿದೆನೋ. ಬದನೆ ಕಾಯಿ ಬೀಜ ಸುಟ್ಟು ಅದರ ಹೊಗೆ ಬಾಯಿ ತುಂಬ ತುಂಬಿಕೊಂಡು ಹತ್ತು ನಿಮಿಷ ಆದ ಮೇಲೆ ಹೊಗೆ ಬಿಡು ಅಂತ ನನ್ನ ಸೋದರ ಮಾವ ಹೇಳಿದ ಅಂತ ಗ್ರಂಧಿಗೆ ಅಂಗಡಿಗೆ ಓಡಿದ್ದೆ. ಒಂದು ಅಗ್ಗಿಷ್ಟಿಕೆ, ಬದನೆ ಬೀಜ, ಊದು ಕೊಳವಿ ತಂದು ಪ್ರಯೋಗ ಮಾಡಿದ್ದೆ. ಮಗಚೆ ಕಾಯಿ ಮೇಲೆ ಬದನೆ ಬೀಜ ಹಾಕಿ ಅದನ್ನು ಅಗ್ಗಿಸ್ಟಿಕೆ ಒಳಗೆ ತೂರಿಸಿ ಅದು ಸುಟ್ಟು ಹೊಗೆ ಬಂತಾ… ಬಾಯಿ ತುಂಬಾ ಹೊಗೆ ತುಂಬಿಸಿಕೊಂಡು ಒಂದು ನಿಮಿಷ ದಂ ಕಟ್ಟಿದೆ.

ಬಾಯಲ್ಲಿ ಹೊಗೆ ತುಂಬಿದ್ದಕ್ಕೆ ಹತ್ತು ನಿಮಿಷ ಕೆಮ್ಮು ಬಂದು ಪ್ರಾಣ ಹೋಗುತ್ತೆ ಅನಿಸಿತ್ತು. ಹೀಗೇ ಸುಮಾರು ನಂಟರು ಅಮ್ಮನ ಫ್ರೆಂಡ್ಸು ಇವರೆಲ್ಲಾ ಹೇಳಿದ ಪ್ರಯೋಗ, ಚಿಕಿತ್ಸೆ ಮಾಡಿದೆ. ಏನೂ ಪ್ರಯೋಜನ ಕಾಣಿಸಲಿಲ್ಲ, ಪ್ರಯೋಗ ನಿಲ್ಲಿಸಿದೆ. ನನ್ನ ಮೂರನೇ ಅಣ್ಣ ಶಾಮು ಆಗ BDS ಮೂರನೇ ವರ್ಷ ಓದುತ್ತಿದ್ದ. ಇಡೀ ರಾತ್ರಿ ನಾನು ಪಡುತ್ತಿದ್ದ ಅವಸ್ಥೆ ನೋಡಿದ. ನೋವು ನಿವಾರಕ ಮಾತ್ರೆ ಕೊಟ್ಟ. ಮಾತ್ರೆ ತಿಂದ ಒಂದು ಗಂಟೆ ಪರವಾಗಿಲ್ಲ ಅನಿಸಿದರೂ ಮತ್ತೆ ನೋವು ಶೂಟ್ ಮಾಡಿದ ಹಾಗೆ ಮರುಕಳಿಸೋದು. ಹಾಗಾಗಿ ಅವನು ಬೆಳಿಗ್ಗೆ ಕಾಲೇಜಿಗೆ ಬಾ.. ಅಂದ. ನಾನು ತಲೆ ಆಡಿಸಿದೆ.

ವಿಕ್ಟೋರಿಯಾ ಆಸ್ಪತ್ರೆ ಪಕ್ಕ ಸರ್ಕಾರೀ ಡೆಂಟಲ್ ಕಾಲೇಜು. ಆಗ ಡೆಂಟಲ್ ಕಾಲೇಜಿಗೆ ಎಂದು ಬೇರೆ ಗೇಟ್ ಇರಲಿಲ್ಲ. ವಿಕ್ಟೋರಿಯಾ ಆಸ್ಪತ್ರೆ ಗೇಟ್ ಮೂಲಕವೇ ಇದಕ್ಕೂ ಪ್ರವೇಶ. ಸುಮಾರು ವರ್ಷ ಒಂದೇ ಗೇಟ್ ಮೂಲಕ ಎರಡೂ ಕಡೆ ಪ್ರವೇಶ ಇತ್ತು. ಈಗ ಹೇಗಿದೆಯೋ ತಿಳಿಯದು. ಬೆಳಿಗ್ಗೆ ಎದ್ದು ಮಾರ್ಕೆಟ್ ಬಸ್ಸು ಹಿಡಿದು ಡೆಂಟಲ್ ಕಾಲೇಜು ಸೇರಿದೆ. ಹಲ್ಲು ಕಿತ್ತರೆ ನೋವಿರುತ್ತೆ, ಸೈಕಲ್ ಮೇಲೆ ವಾಪಸ್ ಬರೋದು ಕಷ್ಟ ಆಗ್ಬೋದು ಅಂತ ಈ ಮುನ್ನೆಚ್ಚರಿಕೆ.

ಶಾಮ್ ಕರೆದು ಡೆಂಟಲ್ ಚೇರ್ ಮೇಲೆ ಕೂಡಿಸಿದ. ಅವನ ಪ್ರೊಫೆಸರ್ ಬಂದರು. ಬಾಯಿ ಅಗಲಿಸಿ ಹಲ್ಲಿಗೆ ಸುತ್ತಿಗೆಯಿಂದ ತಟ್ಟಿದರು. ಇಟ್ ಈಸ್ ಫಾರ್ ಎಕ್ಟ್ರಾಕ್ಷನ್ ಅಂದರು. ಅಣ್ಣ ಒಂದು ಸಿರಿಂಜು ಹಿಡಿದು ಬಂದ. ಆ ಅನ್ನು ಅಂತ ಹೇಳಿ ಬಾಯಿ ದೊಡ್ಡದು ಮಾಡಿಸಿ ಎರಡು ಕಡೆ ಚುಚ್ಚಿದ. ಐದು ನಿಮಿಷ ಹಾಗೇ ಇರೂ. ದಪ್ಪ ಆಗುತ್ತೆ, ಬರ್ತೀನಿ ಅಂತ ರೂಮಿನಿಂದ ಹೊರ ಹೋದ.

ಒಮ್ಮೆ ಸುತ್ತಲೂ ನೋಡಿದೆ. ಸುಮಾರು ಇಪ್ಪತ್ತು ಮೂವತ್ತು ಜನ ಗಂಡಸರು ಹೆಂಗಸರು ಮುದುಕರು ಮಕ್ಕಳು… ನನ್ನ ಹಾಗೇ ಚಿಕಿತ್ಸೆಗೆ ಬಂದಿರೋರು, ಕುರ್ಚಿ ಮೇಲೆ ಕೂತಿದ್ದಾರೆ. ಕೆಲವು ಡಾಕ್ಟರು ಇಕ್ಕಳ ಹಿಡಿದು ಬಾಯೊಳಗೆ ಕೈ ಹಾಕಿ ಹಲ್ಲು ಕೀಳಲು ಯತ್ನಿಸುತ್ತಾ ಇದ್ದಾರೆ. ನನಗೂ ಹಾಗೇ ಮಾಡೋದು, ಇಕ್ಕಳ ಕೈ ಜಾರಿ ಗಂಟಲಿಗೆ ಹೋಗಿ ಅಲ್ಲೇ ಸಿಕ್ಕಿ ಹಾಕೊಂಡರೆ… ಹಾಗೇ ಉಸಿರು ಕಟ್ಟಿ ಸತ್ತೂ ಹೋದರೆ…. ಅಥವಾ ಬೇರೆ ಹಲ್ಲು ಕಿತ್ತರೆ…

ಬಾಯಲ್ಲಿ ಇಕ್ಕಳದ ಹಿಂಭಾಗ ಹೊರಗೆ ಕಾಣಿಸುತ್ತಿರುವ, ಮಿಕ್ಕ ಭಾಗ ಗಂಟಲು ಒಳಗೆ ಸಿಕ್ಕಿ ಹಾಕಿಕೊಂಡಿರುವ ಮತ್ತು ನಾನು ಪ್ರಜ್ಞೆ ತಪ್ಪಿ ಬಿದ್ದಿರುವ ದೃಶ್ಯ ಕಣ್ಣ ಮುಂದೆ ಹಾದು ಹೋಗಬೇಕೇ…… ನನ್ನನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಮುಖ ಮುಚ್ಚುವ ಹಾಗೆ ಬಿಳೀ ಪಂಚೆ ಹೊದ್ದಿಸಿ ಹೊತ್ತು ಹೋಗುತ್ತಿರುವ ಹಾಗೆ ಅನಿಸಬೇಕೆ..? ಬಂದೂ ಬಂದು ಇಲ್ಲಿಗೆ ಬಂದು ಇಂತಹ ಕಡೆ ಸಾಯಬೇಕೆ ಅನಿಸಿತಾ…..

ತಲೆ ಎತ್ತಿ ಸುತ್ತಲೂ ನೋಡಿದೆ. ಅಣ್ಣ ಕಾಣಿಸಲಿಲ್ಲ. ಅವನ ಪ್ರೊಫೆಸರರು ದೂರ ಎಲ್ಲೋ ನನಗೆ ಬೆನ್ನು ಮಾಡಿ ಯಾವುದೋ ಪೇಷಂಟ್ ನೋಡುತ್ತಿದ್ದರು. ಖುರ್ಚಿಯಿಂದ ಮೇಲೆದ್ದೆ. ಒಂದೂವರೆ ನಿಮಿಷದ ನಂತರ ಆಚೆ ಇದ್ದೆ, ಬಸ್ ಹಿಡಿದು ಮೆಜೆಸ್ಟಿಕ್ ಸೇರಿದೆ. ಮಾರ್ನಿಂಗ್ ಶೋ ಒಂದು ಹಳೇ ಹಿಂದಿ ಸಿನೆಮಾ, ಮ್ಯಾಟಿನಿ ಒಂದು ಕನ್ನಡ ಸಿನೆಮಾ ನೋಡಿ ಮುಗಿಸಿಕೊಂಡು ಮನೆ ಸೇರಿದೆ. ಆಗ ತಾನೇ ಅಣ್ಣ ಸಹ ಬಂದಿದ್ದ.. ಆಗ ಇನ್ನೂ ಮೊಬೈಲ್ ಫೋನು ಬಂದಿರಲಿಲ್ಲ. ಲ್ಯಾಂಡ್ ಲೈನ್ ತುಂಬಾ ಸಾಹುಕಾರರ ಮನೆಯಲ್ಲಿ ಮಾತ್ರ ಇದ್ದ ಕಾಲ ಅದು. ಸಂವಹನಕ್ಕೆ ಯಾವುದೇ ಸಲಕರಣೆ ಇಲ್ಲ. ಬರೀ ಪೋಸ್ಟ್ ಕಾರ್ಡು ಮತ್ತು ಟೆಲಿಗ್ರಾಂ ಮಾತ್ರ ಸಂವಹನಕ್ಕೆ ಅಂತ ಇದ್ದ ಸೌಲಭ್ಯ ಆಗ.

ಅಣ್ಣ ನನ್ನನ್ನು ನೋಡಿದ ಕೂಡಲೇ ಕೋಪದಿಂದ ಎಲ್ಲಿ ಹೋದೆಯೋ ನಾನು ಪ್ರೊಫೆಸರರು ನಮ್ಮ ಫ್ರೆಂಡ್ಸ್ ಎಲ್ರೂ ಎಲ್ಲಾ ಕಡೆ ಹುಡುಕಿದರೂ ನೀನು ಪತ್ತೆ ಇಲ್ಲ…. ಅಂತ ಒಂದು ಕೆನ್ನೆಗೆ ಬಿಟ್ಟ. ನಿಧಾನಕ್ಕೆ ಹೆದರಿಕೆ ಆಗಿದ್ದು ಹೇಳಿದೆ. ಮನೆ ಅವರೆಲ್ಲ ರೇಗಿ ಬೈದು ನಕ್ಕರು. ಇಡೀ ಕಾಲೇಜು ಗಾಬರಿ ಆಗಿತ್ತು ನಿನ್ನಿಂದ…. ಎಲ್ಲೋ ಬಸ್ಸಿನ ಕೆಳಗೆ ಬಿದ್ದು ಸತ್ತುಗಿತ್ತು ಹೋದೆಯಾ ಅಂತ ಪ್ರೊಫೆಸರರು ಗಾಬರಿ ಆಗಿಬಿಟ್ಟಿದ್ದರು ಅಂತ ಅಣ್ಣ ವಿವರಿಸಿದ. ಇಡೀ ಸಿಟಿ ಮಾರ್ಕೆಟ್ ಹುಡುಕಿದೆವು ನಿನಗೋಸ್ಕರ… ಮತ್ತೆ ಪೂಜೆ ಸಹಸ್ರನಾಮ ಆಯ್ತು.. ಆಮೇಲೆ ಎಷ್ಟೋ ವರ್ಷ ನಮ್ಮ ಮನೆಯ ಎಲ್ಲರೂ ಗೋಪಿ ಹಲ್ಲು ಕೀಳಿಸಿಕೊಂಡ ಕತೆ ಹೇಳಿಕೊಂಡು ಖುಷಿ ಅನುಭವಿಸುತ್ತಾ ಇದ್ದರು. ನಮ್ಮ ನಂಟರಿಗೆ, ಅವರ ನಂಟರಿಗೇ, ಅವರ ಸ್ನೇಹಿತರಿಗೆ ಈ ಕತೆ ಪ್ರಚಾರ ಆಗಿತ್ತು. ಕೆಲವರು ನನ್ನನ್ನ ನೋಡಿ ಮುಸಿಮುಸಿ ನಗೋರು. ಮುಂಡೇವು ಹಲ್ಲು ಬಾಳ ಚೆನ್ನಾಗಿದೆ ಅಂತ ಕಿಸೀತಿವೆ ಕಿಸೀಲಿ, ಇರೋ ಹಲ್ಲೆಲ್ಲ ನೋವು ಬಂದು ಬಿದ್ದು ಹೋಗಲಿ, ಬಾಯಿ ಬೊಚ್ಚು ಬಾಯಿ ಆಗಲಿ, ಚಕ್ಕಲಿ ಕೋಡುಬಳೆ ತಿನ್ನಬಾರದು ಹಾಗಾಗಲಿ ಅಂತ ಅವರಿಗೆಲ್ಲ ಒಟ್ಟಾರೆ ಶಾಪ ಹಾಕುತ್ತಿದ್ದೆ. ನನ್ನ ಮದುವೆ ನಂತರ ಇದು ನನ್ನಾಕೆ ಮೂಲಕ ಅವರ ಬಂಧುಗಳಿಗೆ ಗೊತ್ತಾಯ್ತಾ..? ನಂತರ ಇದು ಇಡೀ ಬೆಂಗಳೂರಿಗೆ ಹಬ್ಬಿತು, ಅಲ್ಲಿಂದ ಮೈಸೂರು, ಅಲ್ಲಿಂದ ಮಂಗಳೂರು…. ಹೀಗೆ ಊರು ಸುತ್ತಿ ಸಾಗರ ದಾಟಿತು. ಈಚೆಗೆ ಅಮೆರಿಕಾದಿಂದ ಬಂದಿದ್ದ ಹೆಂಡತಿ ಕಡೆ ಬಂಧು, ನನ್ನನ್ನ ತೋರಿಸಿ ಹೆಂಡತಿಗೆ ಹೇಳುತ್ತಿದ್ದ ಮಾತು ಕಿವಿಗೆ ಬಿತ್ತು.. ದಿಸ್ ಈಸ್ ಗೋಪಿ, ಥಟ್ ಗೈ ಹೂ ವೆಂಟ್ ಫಾರ್ ಡೆಂಟಲ್ ಟ್ರೀಟ್‌ಮೆಂಟ್‌, ಐ ಟೋಲ್ಡ್ ಯು ದಟ್ ಡೇ… ಯು ರಿಮೆಂಬರ್…. ಅಂತ ಹೆಂಡತಿಗೆ ನೆನಪು ಮಾಡಿಕೊಡ್ತಾ ಇದ್ದ ನನ್ಮಗ… ತೆಗೆದು ನಾಲ್ಕು ಬಾರಿಸಬೇಕು, ದವಡೆ ಹಲ್ಲು ಉದುರಿಸಬೇಕು ಅನ್ನಿಸಿತು…

ನಾನು ರಿಟೈರ್ ಆಗುವ ಮೊದಲು ನಮ್ಮ ಅಣ್ಣ (ಡಾ. ಶಾಮರಾವ್ ಹಲ್ಲಿನ ಡಾಕ್ಟರು) ಅವನು ನಿನ್ನ ಹಲ್ಲು ಪೂರ್ತಿ ಗಬ್ಬೆದ್ದು ಹೋಗಿದೆ. ಬಾ, ಕಿತ್ತು ಬೇರೆ ಕಟ್ಟುತ್ತೀನಿ ಅಂತ ಹೇಳಿದ್ದ. ಕಾಲೇಜು ಪ್ರಿನ್ಸಿಪಾಲ್ ಬೇರೆ ಆಗಿದ್ದ. ನನ್ನ ಹಾಗೆ ಅವನಿಗೆ ಏನೂ ಚಟ ಇರಲಿಲ್ಲ. ಇನ್ನೂ ಸಾವಿರ ವರ್ಷ ಇರ್ತಾನೆ, ನಾವೆಲ್ಲಾ ಸತ್ತ ಮೇಲೂ ಅವನು ಎಲ್ಲರಿಗೂ ಹಲ್ಲು ಕಟ್ಟಿಕೊಂಡು ಇರ್ತಾನೆ ಅಂತ ನಂಬಿಕೊಂಡಿದ್ದೆ. ಸಮಯ ಬಂದಾಗ ಹಲ್ಲು ಕಟ್ಟಿಸಲು ಹೋದರೆ ಆಯ್ತು ಅಂತ ಉಡಾಫೆ ಮಾಡಿದೆನಾ. ಅವನು ನನಗಿಂತ ತುಂಬಾ ಬೇಗ ದೇವರ ಪಾದ ಸೇರಿಬಿಟ್ಟ. ನನಗೆ ಒಬ್ಬ ಫ್ರೀ ಡೆಂಟಿಸ್ಟ್ ಕಳೆದ ಅಂದರೆ ತಪ್ಪಿದ.

ನನ್ನ ಪುಟ್ಟ ವಯಸ್ಸಿನಲ್ಲಿ ನಡೆದ ಮೇಲಿನ ಡೆಂಟಲ್ ಕಾಲೇಜಿನ ಕತೆ ನಂತರ ನಾನು ಯಾವುದೇ ಹಲ್ಲಿನ ಡಾಕ್ಟರ ಹತ್ರ ಹೋಗ್ತೀನಿ ಅಂದ್ರೆ ನನ್ನ ಜತೆ ಯಾರಾದ್ರೂ ಇದ್ದೇ ಇರ್ತಾರೆ! ಇಂಜೆಕ್ಷನ್ ತಗೊಂಡು ಓಡಿ ಬಿಡ್ತಾನೆ, ತಲೆ ಸುತ್ತಿ ಬಿದ್ದು ಬಿಟಿಎಸ್‌ ತಳದಲ್ಲಿ ಸಿಕ್ಕಿಕೊಂಡು ಪರಲೋಕ ಸೇರುತ್ತಾನೆ, ಮುಖ ಜಜ್ಜಿ ಹೋಗಿದ್ದರೆ ಗುರುತಿಸೋದು ಹೇಗೆ ಅನ್ನೋ ಕಾಳಜಿ ಮತ್ತು ಹೆದರಿಕೆ ಅವರಿಗೆ!

ಅವತ್ತಿನ ಭಯ ಈಗಲೂ ಹಾಗೇ ಉಳಿದುಕೊಂಡಿದೆ. ಅದಕ್ಕೆ ಇಂಬು ಕೊಡುವ ಹಾಗೆ ನನಗೆ ತಿಳಿದಿದ್ದ ನಮ್ಮ ಏರಿಯಾದ ಒಬ್ಬರು, ನನಗಿಂತ ಸುಮಾರು ಚಿಕ್ಕವರು ಹಲ್ಲು ಚಿಕಿತ್ಸೆಗೆ ಎಂದು ಆಸ್ಪತ್ರೆಗೆ ಹೋಗಲು ಬಿಎಂಟಿಸಿ ಬಸ್ ಹತ್ತಿದರು, ಅವರಿಗೆ ಹಾರ್ಟ್ ಅಟ್ಯಾಕ್ ಆಗಿ ಬಸ್‌ನಲ್ಲೇ ಕೊನೆ ಉಸಿರು ಎಳೆದರು. ಮನೆ ಅವರಿಗೆ ಈ ಸುದ್ದಿ ಅದೆಷ್ಟೋ ಗಂಟೆಗಳ ನಂತರ ಸಿಕ್ಕಿತು. ಇದು ನನ್ನ ತಲೆಯಲ್ಲಿ ಆಳವಾಗಿ ಕೂತು ಬಿಟ್ಟಿದೆ. ಬಿಎಂಟಿಸಿ ಬಸ್‌ನಲ್ಲಿ ಏನೇ ಆದರೂ ಸಾಯಬಾರದು ಎಂದು ಹಲ್ಲುನೋವು ಸಹಿಸಿಕೊಂಡು ನಾಲ್ಕು ವರ್ಷದಿಂದ ಹಲ್ಲು ಕೀಳಿಸಿಕೊಳ್ಳದೆ ಹಾಗೇ ಇದ್ದೆ! ಬಾಯಿ ತೆಗೆದರೆ ಮುಂದೆ ಬಿದ್ದಿರುವ ಎರಡು ಹಲ್ಲಿನ ಬೊಚ್ಚು ಕಾಣುತ್ತೆ ಅಂತ ಕೊರೋನಾ ಕಾಲದ ಅಭ್ಯಾಸ ಮಾಸ್ಕ್ ಹಾಕ್ಕೊಂಡೆ ಜೀವನ ಮಾಡ್ತಾ ಇದ್ದೆನಾ…

ಕಳೆದ ತಿಂಗಳು ಅದಕ್ಕೂ ಡ್ಯಾಮೇಜ್ ಆಯಿತು. ಪ್ರಾರಬ್ಧ ಕರ್ಮಗಳಲ್ಲಿ ನನಗೆ ಅಷ್ಟು ನಂಬಿಕೆ ಇರಲಿಲ್ಲ. ಪ್ರಾರಬ್ಧಕರ್ಮಗಳು ಹೊಂಚು ಹಾಕಿ ಕಾಯುತ್ತವೆ. ದಿಡೀರ್ ತಲೆ ತೂರಿಸೋಕ್ಕೆ ಅಂತ ಕೇಳಿದ್ದೆ. ಈ ಪ್ರಾರಬ್ಧ ನನ್ನನ್ನು ಹೀಗೆ ಕ್ಯಾಚ್ ಮಾಡಿಬಿಟ್ಟಿತು. ಡೆಂಟಲ್ ಕಾಲೇಜಿಗೆ ಹೆಂಡತಿ ಹಲ್ಲಿನ ಟ್ರೀಟ್ಮೆಂಟ್‌ಗೆ ಅಂತ ಹೋದೆ. ಅಲ್ಲೇ ಗೊತ್ತಿರುವ ಪ್ರೊಫೆಸರ್ ಸಿಕ್ಕರು. ಬನ್ನಿ ನಿಮ್ಮದು ಏನ್ರೀ ಹೀಗಾಗಿದೆ. ನಿಮ್ಮದೂ ಸಹ ಸರಿಮಾಡೋಣ ಅಂತ ಚಿಕಿತ್ಸೆ ಶುರು ಮಾಡೇಬಿಟ್ಟರು. ಮೂರು ಹಲ್ಲು ಕಿತ್ರಾ.. ಮಾರನೇ ದಿವಸ ಬಿಪಿ ಜಾಸ್ತಿ ಇದೆ ಅಂತ ಟ್ರೀಟ್ಮೆಂಟ್ ಪೋಸ್ಟ್ ಪೋನ್ ಆಯ್ತಾ… ಬಿಪಿ ಕಡಿಮೆ ಆದಮೇಲೆ ಹೋದರೆ ಶುಗರ್ ಹೆಚ್ಚಿದೆ ಅಂತ ಟ್ರೀಟ್ಮೆಂಟ್ ಮತ್ತೆ ಪೋಸ್ಟ್ ಪೋನ್ ಆಯ್ತಾ…. ಒಟ್ಟಿನಲ್ಲಿ ಇದೂ ಸಹ ಗಜ ಪ್ರಸವ…! ಹಲ್ಲು ಕಟ್ಟಿಸಿಕೊಂಡರೆ ಅದರದ್ದೇ ಬೇರೆ ಪುರಾಣ ಬರೆಯ ಬಹುದೇನೋ….

ಡೆಂಟಲ್ ಚೇರ್ ಮೇಲೆ ಪ್ರಾಣ ಹೋಗದಿರಲಿ ಅಂತ ಪ್ರತಿ ನಿಮಿಷ ಪ್ರಾರ್ಥನೆ ಮಾಡ್ತಾ ಇದೀನಿ, ಬಸ್ಸಿನಲ್ಲಿ ಸಾಯಬಾರದು ಎನ್ನುವ ಪ್ರಾರ್ಥನೆ ನಂತರ ಈ ಪ್ರಾರ್ಥನೆ! ಒಟ್ಟಿನಲ್ಲಿ ಪೂರ್ಣ ವಯಸ್ಸು ಆದ ನಂತರ (ನನ್ನ ಪ್ರಕಾರ ಇದು ಕನಿಷ್ಠ ಇನ್ನೂರಾ ಐವತ್ತು ಆದರೂ ಇರಬೇಕು) ನನ್ನದೇ ಮನೆಯಲ್ಲಿ ಸುಪ್ಪತ್ತಿಗೆ ಮೇಲೆ ಮಲಗಿದ ಹಾಗೆಯೇ ಯಮ ಪಾಶ ಬೀಳಲಿ! ಬಹುಶಃ ಎಲ್ಲರ ಆಸೆಯೂ ಇದೇ ಇರಬಹುದೇನೋ… ಕೋಟಿಯಲ್ಲಿ ಒಬ್ಬರಿಗೆ ಈ ಅದೃಷ್ಟ ಹೊಡೆಯುತ್ತಂತೆ…..

(ಮುಂದುವರಿಯುವುದು….)