Advertisement
ಅಂದುಕೊಂಡಿದ್ದು ಆಗೇಹೋಯಿತು!: ಜುಲೇಖಾ ಬೇಗಂ ಜೀವನ ವೃತ್ತಾಂತ

ಅಂದುಕೊಂಡಿದ್ದು ಆಗೇಹೋಯಿತು!: ಜುಲೇಖಾ ಬೇಗಂ ಜೀವನ ವೃತ್ತಾಂತ

ಜುಬೇದಾಬಾಯಿ ಅವರನ್ನು ಮಾಕನೂರು ಭರಮಣ್ಣ ಅವರು ಅಪಹರಿಸಲು ಸಾಧ್ಯವಿರಲಿಲ್ಲ. ಅವರು ಪಾತ್ರಕ್ಕಾಗಿ ಹುಡುಕಾಡುತ್ತಿದ್ದರು; ನಾನೂ ಕಾಯುತ್ತಿದ್ದೆ. ರೋಗಿ ಬಯಸುವುದಕ್ಕೂ ವೈದ್ಯ ಹೇಳುವುದಕ್ಕೂ ಸರಿ ಹೋದರೆ ಇನ್ನೇನು? ಖುಷಿಯಿಂದ ಕುಪ್ಪಳಿಸಿದೆ. ಎರಡು ನಿಮಿಷ ಭೂಮಿಕೆಯಲ್ಲಿ ಇರುತ್ತಿದ್ದೆನೊ ಇಲ್ಲವೊ, ಆದರೆ ಆನಂದಿಸಿದೆ. ಮಾತಿಲ್ಲದ ಮುಖ್ಯ ಪಾತ್ರ ನನಗೆ ಸಿಕ್ಕಿತಲ್ಲಾ ಎಂಬ ಸಂಭ್ರಮ. ಉಳಿದವರೆಲ್ಲ, ‘ನಿಂಗೆ ಕೊಂಬು ಬರಬಾರದವ್ವಾ’ ಎಂದು ಛೇಡಿಸುತ್ತಾ, ನಗಿಸುತ್ತಿದ್ದರು. ಬರಬರುತ್ತಾ ಜಟಾಯು, ಅಂಗದ ಮಹಾರಾಜ, ಅಕ್ಷಯಕುಮಾರನ ಪಾತ್ರಗಳನ್ನೂ ಮಾಡತೊಡಗಿದೆ.
ಕೀರ್ತಿ
ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹನ್ನೆರಡನೆಯ ಕಂತು

ಕಂಪೆನಿಯ ಕ್ಯಾಂಪ್ ಮುಗಿದು, ದುಡ್ಡಿನ ಲೆಕ್ಕಾಚಾರ ಚುಕ್ತಾ ಆಗುತ್ತಿದ್ದಂತೆಯೆ ಹಾವೇರಿ ಜುಬೇದಾಬಾಯಿ ಅವರೊಡನೆ ಹೊರಟೇಬಿಟ್ಟೆ. ನನಗೇನೂ ಹಣ ಸಂದಾಯ ಆಗಬೇಕಿರಲಿಲ್ಲ. ನಾಟಕ ಆರಂಭಕ್ಕೂ ಮುನ್ನ ಐದು ಪೈಸೆ ಕೊಡುತ್ತಿದ್ದರಲ್ಲಾ, ಅದರಲ್ಲೇ ಉಳಿಸಿಟ್ಟುಕೊಂಡಿದ್ದೆ. ಹೆಚ್ಚುವರಿಯಾಗಿ ಮಾಲೀಕರು ಆಗಾಗ ನಾಲ್ಕಾಣೆ, ಎಂಟಾಣೆಯನ್ನೂ ಕೊಡುತ್ತಿದ್ದರು. ಲಂಗ ಬ್ಲೌಸನ್ನು ನನಗಾಗಿ ಹೊಲಿಸಿ ತಂದಿದ್ದರು. ಪ್ರೀತಿಗೆ ಕೊರತೆಯೇನೂ ಇರಲಿಲ್ಲ. ಆದರೆ, ನನ್ನೊಳಗೆ ತುಡಿಯುತ್ತಿದ್ದದ್ದು ಪಾತ್ರ ಮಾಡಬೇಕೆಂದು. ಅದೇ ಆಗುತ್ತಿಲ್ಲವಲ್ಲಾ ಎಂಬ ಹತಾಶೆ, ಮಾಲೀಕರ ಪ್ರೀತಿಯನ್ನೂ ಮರೆಸಿದ್ದಿರಬಹುದು.

ಜುಬೇದಾಬಾಯಿ ಅವರೊಂದಿಗೆ ಮಾಕನೂರು ಸೇರಿದೆ. ತುಂಬಿನಕಟ್ಟೆಯ ಹತ್ತಿರದ ಊರಿರಬಹುದೆಂದು ನನ್ನ ನೆನಕೆ. ಅಲ್ಲಿ ಆಗತಾನೆ ಒಂದು ಹೊಸ ಕಂಪೆನಿ ಆರಂಭವಾಗಿತ್ತು. ಮಾಕನೂರು ಭರಮಣ್ಣನವರ ಕಂಪೆನಿಯದು. ಹೊಸನಗರದ ಹತ್ತಿರವೇ ಮನೆ, ತೋಟವೆಲ್ಲ ಮಾಡಿಕೊಂಡಿದ್ದರು. ಅವರು ತೀರಿಹೋಗಿ ನಾಲ್ಕೈದು ವರ್ಷಗಳಾಗಿರಬಹುದು. ಅಂತೂ ಮಾಕನೂರು ಭರಮಣ್ಣನವರ ಕಂಪೆನಿಗೆ ಜುಬೇದಾಬಾಯಿ ಕರೆದುಕೊಂಡು ಹೋದರು.

ಎಂತೆಂಥ ಕಲಾವಿದರಿದ್ದರು ದೇವಾ! ಬೆಕ್ಕಸ ಬೆರಗಾಗಿ ಹೋಗಿದ್ದೆ. ಹಾವೇರಿ ಜುಬೇದಾಬಾಯಿಯ ನಟನೆಗೆ ಶರಣಾಗದವರೇ ಇಲ್ಲ. ಅಭಿನಯ ದೇಗುಲದ ಕಳಶವೆಂದು ತಿಳಿದಿದ್ದೆ. ಇಲ್ಲಿದ್ದ ಕಲಾವಿದರೆಲ್ಲ ಅಂಥ ಕಳಶವೇ! ನಟರೂ ಸಂಗೀತಗಾರರೂ ಆಗಿದ್ದ ಗುಬ್ಬಿ ಮುದೂರಾಚಾರ್, ಮಾಕನೂರು ಭರಮಣ್ಣ ಮತ್ತವರ ತಮ್ಮ ಲಕ್ಷ್ಮಣ. ರಾಮಾಯಣ ನಾಟಕವಾಡಿದರೆ, ಭರಮಣ್ಣನೇ ರಾವಣ, ತಮ್ಮ ಲಕ್ಷ್ಮಣನಾಗ ರಾಮನಾಗುತ್ತಿದ್ದ. ಸೀತೆಯಾಗುತ್ತಿದ್ದದ್ದು, ಹಾವೇರಿ ಜುಬೇದಾಬಾಯಿ. ಗುಬ್ಬಿ ಮುದೂರಾಚಾರ್ ಅವರ, ಹನುಮಂತನ ಪಾತ್ರವನ್ನು ನೋಡುವುದಕ್ಕೆಂದೇ ಊರೂರಿಂದ ಜನ ಬರುತ್ತಿದ್ದರು. ಕಂಠವೂ ಹಾಗೇ ಇತ್ತು. ಅದಕ್ಕೆ ತಕ್ಕನಾಗಿ ಹನುಮಂತನ ಗತ್ತನ್ನು ಹೇಗೆ ಅಭಿನಯಿಸುತ್ತಿದ್ದರೆಂದರೆ, ಕೈ ಮುದುರಿಕೊಂಡು, ಬೆನ್ನು ಬಾಗಿಸಿ, ಸುಸ್ತೆ ಆಗದ ಜಿಗಿತ, ಅಬ್ಬಬ್ಬಾ! ಹನುಮಂತ ಇದ್ದಿದ್ದರೆ ಹೀಗೆ ಇರುತ್ತಿದ್ದ ಎಂದನಿಸಬೇಕು. ಹಾಗಿತ್ತು ಅವರ ಪಾತ್ರದೊಳಗಿನ ಪರಕಾಯ ಪ್ರವೇಶ.

ಇಲ್ಲೊಂದು ತಮಾಷೆ ನಡೆಯಿತು. ನಟಿಸಬೇಕು ಅಂತಲೇ ಹಾವೇರಿ ಜುಬೇದಾಬಾಯಿ ಜೊತೆ ಕಂಪೆನಿ ಬಿಟ್ಟು ಬಂದಿದ್ದೆನಲ್ಲಾ, ರಂಗದ ಮೇಲೆ ಮುಖ್ಯ ಪಾತ್ರವಾಗುವ ಅವಕಾಶ ಒದಗಿಬಂತು. ಸೀತೆಯ ಪಾತ್ರ ನೀಡಿದರು. ಹೌದು, ಸೀತೆಯ ಪಾತ್ರವೇ. ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವ ದೃಶ್ಯದಲ್ಲಿ ನಾನೇ ಸೀತೆ. ಜುಬೇದಾಬಾಯಿ ಅವರನ್ನು ಮಾಕನೂರು ಭರಮಣ್ಣ ಅವರು ಅಪಹರಿಸಲು ಸಾಧ್ಯವಿರಲಿಲ್ಲ. ಅವರು ಪಾತ್ರಕ್ಕಾಗಿ ಹುಡುಕಾಡುತ್ತಿದ್ದರು; ನಾನೂ ಕಾಯುತ್ತಿದ್ದೆ. ರೋಗಿ ಬಯಸುವುದಕ್ಕೂ ವೈದ್ಯ ಹೇಳುವುದಕ್ಕೂ ಸರಿ ಹೋದರೆ ಇನ್ನೇನು? ಖುಷಿಯಿಂದ ಕುಪ್ಪಳಿಸಿದೆ. ಎರಡು ನಿಮಿಷ ಭೂಮಿಕೆಯಲ್ಲಿ ಇರುತ್ತಿದ್ದೆನೊ ಇಲ್ಲವೊ, ಆದರೆ ಆನಂದಿಸಿದೆ. ಮಾತಿಲ್ಲದ ಮುಖ್ಯ ಪಾತ್ರ ನನಗೆ ಸಿಕ್ಕಿತಲ್ಲಾ ಎಂಬ ಸಂಭ್ರಮ. ಉಳಿದವರೆಲ್ಲ, ‘ನಿಂಗೆ ಕೊಂಬು ಬರಬಾರದವ್ವಾ’ ಎಂದು ಛೇಡಿಸುತ್ತಾ, ನಗಿಸುತ್ತಿದ್ದರು. ಬರಬರುತ್ತಾ ಜಟಾಯು, ಅಂಗದ ಮಹಾರಾಜ, ಅಕ್ಷಯಕುಮಾರನ ಪಾತ್ರಗಳನ್ನೂ ಮಾಡತೊಡಗಿದೆ. ಗುಬ್ಬಿ ಮುದೂರಾಚಾರ್ ಅವರನ್ನು ಕಂಡರೆ ಅದೇನೊ ನನಗೆ ವಿಶೇಷ ಗೌರವ. ಹಾಗಾಗಿ ಅವರ ಸೇವೆಯನ್ನೂ ಮಾಡಿಕೊಡುತ್ತಿದ್ದೆ. ಅವರಿಗೂ ವಯಸ್ಸಾಗಿದ್ದರಿಂದ ನೆರವು ಅಗತ್ಯವಿತ್ತು.

ಕಂಪೆನಿಯ ಆರಂಭದ ದಿನಗಳು ಬಹು ಸೊಗಸಾಗಿತ್ತು. ನಾವೆಲ್ಲರೂ ಒಟ್ಟಾಗಿ ಮೊಸರು ಕುಡಿಕೆ ಮಾಡುತ್ತಿದ್ದೆವು. ಹಾಲನ್ನು ಖರೀದಿಸಿ, ಹೆಪ್ಪುಹಾಕಿ ಇಡುತ್ತಿದ್ದೆವು. ಥಿಯೇಟರಿಗೆ ಹೋಗುವ ಮುನ್ನ ಒಂದು ಮೊಸರು ಗಡಿಕೆಯೊಳಕ್ಕೆ ಅವಲಕ್ಕಿ, ಹೆಪ್ಪುಹಾಕಿಟ್ಟ ಹಾಲು ಎಲ್ಲವನ್ನೂ ಸೇರಿಸಿ, ನೆನೆಸಿಡುತ್ತಿದ್ದೆವು. ನಾಟಕ ಮುಗಿದ ಬಳಿಕ ಮಣ್ಣಿನ ಮನೆ ಅಥವಾ ಜಂತಿ ಮನೆಯ ಮಾಳಿಗೆಯಲ್ಲಿ ಒಟ್ಟಾಗುತ್ತಿದ್ದೆವು. ನಳಿನಿ – ನಳಪಾಕ ಮಾಡಿಟ್ಟಿರುತ್ತಿದ್ದೆವಲ್ಲಾ, ಅದನ್ನು ಎಲ್ಲರಿಗೂ ಹಂಚಿ ತಿನ್ನುವ ಪರಿಪಾಠ. ಕೆಲವರು ಕಲ್ಲುಸಕ್ಕರೆ ಬೆರೆಸಿ ತಿನ್ನುತ್ತಿದ್ದರೆ, ಇನ್ನುಳಿದವರು ಖಾರ ಚಟ್ನಿ ಹಾಕಿ ಮೆಲ್ಲುತ್ತಿದ್ದರು.

ಇದು ಹೊಸ ಕಂಪೆನಿಯಾದ್ದರಿಂದ ಎಲ್ಲರಿಗೂ ಸೇರಿ ದೊಡ್ಡ ಮನೆಯೊಂದನ್ನು ಗೊತ್ತುಮಾಡಿದ್ದರು. ದೊಡ್ಡ ನಟರಿಗೆಲ್ಲ ಪ್ರತ್ಯೇಕ ಕೊಠಡಿಗಳಿದ್ದವು. ಉಳಿದ ಕಲಾವಿದರೆಲ್ಲ ಹಾಲ್‌ನಲ್ಲೇ ಉಳಿಯಬೇಕಿತ್ತು. ಅಲ್ಲಿದ್ದವರಿಗಿಂತ ನಾನೇ ಚಿಕ್ಕವಳಾಗಿದ್ದೆ. ನಾನು ನೇರವಾಗಿ ಭರಮಣ್ಣನವರ ಮನೆಗೇ ಹೋಗುತ್ತಿದ್ದೆ. ಅವರ ತಂಗಿಗಿನ್ನೂ ಮದುವೆಯಾಗಿರಲಿಲ್ಲ. ತಾಯಿ ಮಂಕುಬಡಿದಂತಿದ್ದರು. ಅವರ ಮನೆಯಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದೆ. ಒಮ್ಮೆ ಭರಮಣ್ಣನವರ ತಂಗಿಯನ್ನು ನೋಡಲು ಗಂಡಿನ ಕಡೆಯವರು ಬರುವವರಿದ್ದರು. ಆ ಹೊತ್ತಿಗಾಗಲೇ ನನ್ನ ಓಡಾಟವೋ ಬಹಳ ಜೋರಿತ್ತೆನ್ನಿ. ಕಂಡದ್ದನ್ನೆಲ್ಲ ನಾನೇ ಮಾಡಬೇಕೆಂಬ ಉಸಾಬರಿ! ಹೆಂಗಳೆಯರೆಲ್ಲ ಕೂಡಿ ಕರ್ಜೀಕಾಯಿ ಮಾಡುತ್ತಿದ್ದರು. ಇರಲಾರದೆ ಇರುವೆ ಬಿಟ್ಟುಕೊಂಡ ಗಾದೆ ನೆನಪಿದೆಯಾ ನಿಮಗೆ? ಹಾಂ, ಅದೇ ಅವಸ್ಥೆ ಆಗಿದ್ದು ನನಗೆ.

ಹಿಟ್ಟಿನ ಉಂಡೆಯನ್ನು ಸಣ್ಣ ವೃತ್ತಾಕಾರವಾಗಿ ಲಟ್ಟಿಸಿ, ಅದರೊಳಕ್ಕೆ ಕಾಯಿ ಮತ್ತು ಬೆಲ್ಲದ ಹೂರಣವನ್ನು ತುಂಬಿಸಿ, ಅದರ ತುದಿಗೆ ವಿನ್ಯಾಸ ಮಾಡಿ ಅದನ್ನು ಮೊರದೊಳಕ್ಕೆ ಇರಿಸುತ್ತಿದ್ದರು. ಅದರಿಂದ ಒಂದೊಂದೇ ತೆಗೆದು, ಕಾದ ಎಣ್ಣೆಯಲ್ಲಿ ಕರಿಯುತ್ತಿದ್ದರು. ನೋಡುತ್ತಿದ್ದ ನನಗೆ ಅರೇ! ಇದೆಷ್ಟು ಸರಳ, ನಾನೂ ಮಾಡಬಹುದಲ್ಲಾ ಎನಿಸಿತು. ತಡಮಾಡದೆ, ಮೊರ ಹಿಡಿದದ್ದೇ. ಬೇಡ, ಬೇಡವೆಂದು ಗಂಟಲು ಹರಿಯುವಂತೆ ಒತ್ತಾಯಿಸಿದರೂ ಕೇಳದಷ್ಟು ನನ್ನ ಕಿವಿ ತೂತು ಬಿದ್ದುಹೋಗಿತ್ತೋ ಏನೊ! ಬರದ ಬೆವರನ್ನು ಒರೆಸಿಕೊಂಡು, ನಾನೇನೊ ಘನಕಾರ್ಯ ಮಾಡುತ್ತಿದ್ದೇನೆ ಎಂಬಂತೆ ಮೊರ ಪೂರ ಬಗ್ಗಿಸಿದೆ. ಬಗ್ಗಿಸಿದ ಹೊಡೆತಕ್ಕೆ ಕಾದ ಎಣ್ಣೆ ಪೂರ ದೇಹಕ್ಕೆ ರಾಚಿತು. ತತ್‌ಕ್ಷಣ ತಣ್ಣಗಾಗಲೆಂದು ನೀರು ಹಾಕಿದರು. ಅರ್ಧ ಗಂಟೆ ಕಳೆಯಿತೊ ಇಲ್ಲವೊ ಮೈ ಪೂರ್ತಿ ಬೊಬ್ಬೆ ಎದ್ದಿತು. ಭರಮಣ್ಣ ನನಗೆ ಬೈಯುತ್ತಲೇ ಎಣ್ಣೆ ಸೀರಿದ ಜಾಗಕ್ಕೆಲ್ಲ ಪೆನ್ನಿನ ಇಂಕು ಹಾಕಿದ್ದರು. ಆ ಗಾಯ ಇನ್ನೂ ಮಾಸಿಲ್ಲ.

*****

ಒಂದು ಊರಿನಲ್ಲಿ ಕಂಪೆನಿ ಟೆಂಟ್ ಕಟ್ಟುವುದರ ಹಿಂದೆ ಪರಿಶ್ರಮ ಸಾಕಷ್ಟಿರುತ್ತದೆ. ಕೆಇಬಿ, ಪಿಡಬ್ಲ್ಯೂಡಿ ಇಲಾಖೆ, ಪೊಲೀಸ್, ಜಿಲ್ಲಾಧಿಕಾರಿಗಳ ಕಛೇರಿಯಿಂದೆಲ್ಲ ಅನುಮತಿ ಪಡೆಯಬೇಕಿತ್ತು. ಸರಕಾರಿ ಅಧಿಕಾರಿಗಳ ಮುಂದೆ ಕೂತು ಕೆಲಸ ಪೂರೈಸಿಕೊಳ್ಳುವುದು, ಲೈಸೆನ್ಸ್ ಪಡೆಯುವುದು ಸುಲಭದ ಕೆಲಸವಾಗಿರಲಿಲ್ಲ. ಅದಲ್ಲದೆ, ನಾಟಕದ ಅಷ್ಟೂ ವಸ್ತುಗಳನ್ನು ಹೊತ್ತು ಆ ಜಾಗಕ್ಕೆ ಹಾಕುವುದು, ಮತ್ತೆ ಬಿಡಾರ ಹೂಡುವುದು. ಹಾಗಾಗಿ ಒಂದು ಊರಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಲೆಕ್ಷನ್ ಮಾಡಿಕೊಳ್ಳಬೇಕೆಂಬುದು ಕಂಪೆನಿಯವರ ಇರಾದೆ. ಊರಿನಲ್ಲಿ ಮಾಡುವ ಕೊನೆಯ ನಾಟಕ ಮಾತ್ರ ಸಾಕಷ್ಟು ಸನ್ನಿವೇಶ ಇರದ, ಒಂದೇ ಪರದೆಯನ್ನು ತಿರುಗುಮುರುಗು ಮಾಡಿದರೆ ಎರಡು ಮನೆಯಾಗಬೇಕು. ಕಡಿಮೆ ದೃಶ್ಯಗಳಿರುವ ನಾಟಕವನ್ನೇ ಆಡುತ್ತಿದ್ದೆವು. ಪ್ರಾಪರ್ಟಿಗಳೆಲ್ಲವನ್ನು ಅಷ್ಟು ಹೊತ್ತಿಗಾಗಲೇ ಬೇರೆಡೆಗೆ ಸಾಗಿಸಿಯಾಗುತ್ತಿತ್ತು.

ಹಾಂ, ಭರಮಣ್ಣನವರ ಕಂಪೆನಿ ಮುಂದೆ ತುಂಮನಕಟ್ಟೆ ಕ್ಯಾಂಪ್ ಹೂಡಿತ್ತು. ಈ ಕ್ಯಾಂಪ್ ಆಗುವ ಸಮಯಕ್ಕೆ ನನಗೆ ಹತ್ತು ವರ್ಷ ತುಂಬಿತ್ತು. ಕಂಪೆನಿಯ ಬಿಗುತನ ನನಗೆ ಅರಿವಾಗಿದ್ದು ಅಲ್ಲಿಂದಲೇ. ‘ಗಂಡನ ಮನೆ’ ನಾಟಕದಲ್ಲಿ ಸುಬ್ಬಿ ಪಾತ್ರ, ‘ಸುನಂದಾ’ ನಾಟಕದಲ್ಲಿ ಸುನಂದಾ ಪಾತ್ರ. ಸುನಂದಾ ಕುರುಡಿಯಾಗಿದ್ದವಳು. ಆ ಪಾತ್ರವನ್ನು ಅಭಿನಯಿಸುವುದು ನನ್ನ ವಯಸ್ಸಿಗೆ ಸವಾಲೇ ಆಗಿತ್ತೆನ್ನಿ. ರಿಹರ್ಸಲ್ ಎಂದರೆ ನನ್ನ ಪಾಲಿಗೆ ಅರೆಯುವ ಕ್ರಿಯೆ. ಪಾತ್ರವಾಗುವುದಕ್ಕೆ ಅನುಕ್ಷಣ ಹೆಣಗಾಡಬೇಕು. ನಟನೆಯೊಂದಿಗಿನ ನನ್ನ ಬಹುದೂರದ ಪಯಣಕ್ಕೆ ಈ ತರಹದ ಪಾಲಿಶಿಂಗ್ ತೀರಾ ಅಗತ್ಯವಿತ್ತು. ಪಠ್ಯ ಮತ್ತು ಕ್ರಿಯೆ ಎರಡರಲ್ಲೂ ಸಮಾಸವಾಗುತ್ತಾ ಹೋದೆ. ಉಳಿದ ಕಲಾವಿದರೆಲ್ಲ ನಟನೆಯನ್ನು ಹಿಡಿವ ನನ್ನ ಜಾಡನ್ನು ಶ್ಲಾಘಿಸಿದ್ದಿದೆ. ‘ಇದೊಂದು ಅಂಟ್ರಿಕಿ ಮುಳ್ ಇದ್ಹಂಗೆ. ಫಕ್ಕನೆ ಹಿಡ್ಕೊಂಡ್ ಬಿಡ್ತೈತಿ’ ಎಂದು ಅವರೆಲ್ಲ ಮುದ್ದಾಡುವುದರ ಹಿಂದೆ ಬೈಸಿಕೊಂಡ ಪಾಡು ಯಾರಿಗೂ ಬೇಡವಪ್ಪಾ.

ಗುಬ್ಬಿ ಮುದೂರಾಚಾರ್ ಅವರು ಊರಿಗೆ ಹೋದ ಬಳಿಕ ಆ ಜಾಗಕ್ಕೆ ಬಂದಿದ್ದು, ಕೌಲಿ ಸುರೇಶ್ ಬಾಬು. ಪೌರಾಣಿಕ ನಾಟಕಗಳನ್ನು ಮಾತ್ರ ಮುದೂರರು ಮಾಡುತ್ತಿದ್ದರೆ, ಕೌಲಿಯವರು ಎಲ್ಲಾ ಪಾತ್ರಗಳಿಗೂ ಬಣ್ಣ ಹಚ್ಚುತ್ತಿದ್ದರು. ಕುಮ್ಮೂರು ಕಾನಗೌಡರು ಪೆಟ್ಟಿಗೆ ಮಾಷ್ಟ್ರಾಗಿದ್ದರು. ಅವರ ಮಗಳೂ ಪಾತ್ರ ಮಾಡುತ್ತಿದ್ದುದರಿಂದ, ನಾನು ಮತ್ತವಳು ಜೊತೆಯಾದೆವು. ನಮ್ಮಿಬ್ಬರಿಗೂ ಸೇರಿ ಒಂದು ಕೋಣೆಯನ್ನು ನೀಡಿದ್ದರು. ಹಾವೇರಿ ಜುಬೇದಾಬಾಯಿ ಇದ್ದ ಕೋಣೆಯಲ್ಲಿ ಸ್ನಾನಕ್ಕೆಂದು ಪ್ರತ್ಯೇಕ ಸ್ಥಳವಿರಲಿಲ್ಲ. ಹಾಗಾಗಿ ಅವರು ನಮ್ಮ ಕೋಣೆಗೇ ಬರುತ್ತಿದ್ದರು. ಆಗಲೂ ಅವರ ತಲೆಗೆ ಎಣ್ಣೆ ಹಾಕುವ, ಬೆನ್ನು ಉಜ್ಜಿಕೊಡುವ ಕೆಲಸಕ್ಕೆ ನಾನು ಸದಾ ಮುಂದಿರುತ್ತಿದ್ದೆ. ದೇಹ ದೃಢಕಾಯವಾಗಿದ್ದರೂ ಸ್ತನಗಳು ಹೊಂದದೇ ಇದ್ದದ್ದರಿಂದ, ಅದನ್ನು ಸರಿದೂಗಿಸಿಕೊಳ್ಳಲು ಅವರು ಒಳ ಉಡುಪಿನೊಳಕ್ಕೆ ಹತ್ತಿಯನ್ನು ಇಟ್ಟು ಸರಿದೂಗಿಸಿಕೊಳ್ಳುತ್ತಿದ್ದದ್ದನ್ನು ಕಂಡಿದ್ದೇನೆ. ಕಲಾವಿದರೇ ಪಾತ್ರಕ್ಕೆ ಸ್ವತಃ ಪರಿಹಾರವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆಯೂ ಇತ್ತು ಆಗ.

‘ಹೇಮರೆಡ್ಡಿ ಮಲ್ಲಮ್ಮ’ ನಾಟಕದಲ್ಲಿ ನಾಗಮ್ಮನ ಪಾತ್ರ ಸಿಕ್ಕಿತು. ಹತ್ತು ವರ್ಷಕ್ಕೆ ಅಂಥ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದು ಹೆಮ್ಮೆಯೇ ನನ್ನ ಪಾಲಿಗೆ. ಮೇಕಪ್ ಹಾಕಿಕೊಂಡರೆ ದೊಡ್ಡ ಹೆಂಗಸಿನ ರೀತಿ ಕಾಣುತ್ತಿದ್ದೆ. ನಾಗಮ್ಮನ ಪಾತ್ರ ಮುಗಿಯುತ್ತಿದ್ದಂತೆ ಚಿತ್ತರಂಜನಿಯೂ ಆಗಬೇಕಿತ್ತು. ಹೇಳಿ ಕೇಳಿ, ಅದು ಹೊಸತಾಗಿ ಆರಂಭವಾಗಿದ್ದ ಚಿಕ್ಕ ಕಂಪೆನಿಯಲ್ಲವೇ? ಇದ್ದುದರಲ್ಲಿಯೇ ಪಾತ್ರ ಹಂಚಿಕೆಯಾಗುತ್ತಿತ್ತು. ದೊಡ್ಡ ದೊಡ್ಡ ಕಲಾವಿದರನ್ನು ಕರೆಸಿದರೆ ಸಂಭಾವನೆ ಕೊಡಬೇಕಾದೀತು. ಈಗಾಗಲೇ ಹಾವೇರಿ ಜುಬೇದಾಬಾಯಿ, ಪೆಟ್ಟಿಗಿ ಮಾಷ್ಟ್ರ ಮಗಳು ಮತ್ತು ನಾನು ಸೇರಿದರೆ ಮೂರು ಜನ ಆದಂತಾಯಿತು. ಯಾವುದೇ ನಾಟಕ ಮಾಡುವುದಿದ್ದರೂ ಸ್ತ್ರೀ ಪಾತ್ರಗಳನ್ನು ನಾವೇ ಮಾಡಬೇಕಿತ್ತು.

ಮುಂದುವರೆಯುವುದು…
(ಹಿಂದಿನ ಕಂತು: ಕನಸು, ಕನವರಿಕೆ)

About The Author

ಕೀರ್ತಿ ಬೈಂದೂರ್

ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ