ಲೋಕ ಕಂಡ ಅತ್ಯುತ್ತಮ ಚಲನಚಿತ್ರ ನಿರ್ದೇಶಕರಲ್ಲೊಬ್ಬರಾದ ಜಪಾನಿನ ಅಕಿರ ಕುರಸೋವನ ಚೇತೋಹಾರಿ ಆತ್ಮಕತೆ Something Like an Autobiography ಪುಸ್ತಕದ ಕೆಲವು ಅಧ್ಯಾಯಗಳು ಇಲ್ಲಿವೆ . ರೇಷ್ಮೆ ಹುಳುವೊಂದು ಚಿಟ್ಟೆಯಾದ ಕತೆಯಂತಿದೆ ಈ ಆತ್ಮಕತೆಯ ಕೆಲವು ಭಾಗಗಳು. ಮಕ್ಕಳ ಸಹಜ ಸಾಮರ್ಥ್ಯಗಳನ್ನು ಸಹಜವಾಗಿ ಅರಳಲು ಬಿಡದೆ ಅವರ ಮೇಲೆ ಒತ್ತಡ ಹೇರುವ ನಮ್ಮ ಈ ಕಾಲದ ರೋಗಗಳು ಜಪಾನಿನಲ್ಲಿ ಆ ಕಾಲದಲ್ಲೂ ಇತ್ತು. ಅಂತಹ ಕಾಲದಲ್ಲಿ ಬಾಲಕನಾಗಿದ್ದ ಕುರಸೋವಾ ತನ್ನ ಬದುಕನ್ನು ಬದಲಿಸಿದ ಮೂವರು ವ್ಯಕ್ತಿಗಳ ಬಗ್ಗೆ ಈ ಅಧ್ಯಾಯಗಳಲ್ಲಿ ಹೇಳುತ್ತಾನೆ. ತನ್ನನ್ನು ಬೆಳೆಸಿದ ಆ ವ್ಯಕ್ತಿಗಳನ್ನು ಕುರಿತು, ಫ್ಲ್ಯಾಷ್ ಬ್ಯಾಕ್ ನಂತೆ ನಿರೂಪಿಸುತ್ತಾ ತನ್ನ ಕಳೆದುಹೋದ ಆ ದಿನಗಳನ್ನು ಸಿನೆಮಾ ದೃಶ್ಯಗಳಂತೆ ಕಣ್ಣಿಗೆ ಕಟ್ಟಿಕೊಡುತ್ತಾನೆ.
ಆಡೀ ಇ. ಬಾಕ್ ಇಂಗ್ಲಿಷಿಗೆ ಅನುವಾದಿಸಿರುವ ಈ ಆತ್ಮಕತೆಯ ಕೆಲವು ಭಾಗಗಳನ್ನು ಕನ್ನಡಕ್ಕೆ ನಿಮಗಾಗಿ ತಂದಿದ್ದಾರೆ ಹೇಮಾ.ಎಸ್.
ಮೊರಿಮುರ ಗಾಕ್ಯುಎನ್
ಒಂದು ದಿನ ಸ್ವಲ್ಪ ವಿಚಿತ್ರ ಅನ್ನಿಸೋ ಘಟನೆ ನಡೆಯಿತು. ಅಷ್ಟೊತ್ತಿಗಾಗಲೇ ನಾನು ನಿರ್ದೇಶಕನಾಗಿದ್ದೆ. ಟೋಕಿಯೊದ ನಿಶಗೆಕಿ ಅನ್ನೋ ಥಿಯೇಟರ್ ನಲ್ಲಿ ನನ್ನ ಸಮಕಾಲೀನ ಇನಗಾಕಿ ಹಿರೋಶಿಯ- ವೆಶ್ಯುರೆರ್ ರೆಟ ಕುರಾ (Forgotten Children, 1949) ಅನ್ನೋ ಚಿತ್ರ ಪ್ರದರ್ಶನವಿತ್ತು. ಅದು ಬುದ್ಧಿಮಾಂದ್ಯ ಮಕ್ಕಳ ಬಗೆಗಿನ ಚಿತ್ರ. ಒಂದು ದೃಶ್ಯದಲ್ಲಿ ಕ್ಲಾಸ್ ರೂಮಿನ ತುಂಬ ಕೂತಿರೋ ಮಕ್ಕಳು ಮೇಷ್ಟ್ರ ಪಾಠ ಕೇಳ್ತಿದ್ದಾರೆ. ಒಂದು ಮಗು ಮಾತ್ರ ಇವರಿಂದ ದೂರ ತನ್ನ ಬೆಂಚಿನಲ್ಲಿ ಕೂತು ಅಲ್ಲಿ ಬೇರೆಯವರು ಇದ್ದಾರೆ ಅನ್ನೋ ಪರಿವೆ ಕೂಡ ಇಲ್ಲದೆ ತನ್ನಷ್ಟಕ್ಕೆ ತಾನೇ ಆಟಆಡಿಕೊಳ್ತಿದೆ. ಈ ದೃಶ್ಯ ನೋಡ್ತಿದ್ದ ಹಾಗೇ ನನ್ನೊಳಗೆ ಅದೇನೋ ತಳಮಳ. ಅದ್ಯಾಕೋ ಖಿನ್ನನಾಗಿಬಿಟ್ಟೆ. ಇದ್ದಕ್ಕಿದ್ದ ಹಾಗೇ ವಿಚಿತ್ರ ತಲ್ಲಣ ಶುರುವಾಯಿತು. ಆ ಮಗುವನ್ನ ನಾನೆಲ್ಲೋ ನೋಡಿದಿನಿ. ಯಾರದು?
ತಕ್ಷಣ ಸೀಟಿನಿಂದ ಎದ್ದವನೇ ಹೊರಗೆ ಹೋಗಿ ಅಲ್ಲಿದ್ದ ಸೋಫಾ ಮೇಲೆ ದಪ್ಪಂತ ಕೂತೆ. ತಲೆಸುತ್ತಿದಂತಾಗಿ ಕಾಲು ಚಾಚಿ ತಲೆ ಕೆಳಗೆ ಹಾಕಿ ಕೂತುಬಿಟ್ಟೆ. ಆ ಥಿಯೇಟರ್ ನಲ್ಲಿ ಕೆಲಸಮಾಡುತ್ತಿದ್ದಾಕೆ ಹುಷಾರಾಗಿದೀರಿ ತಾನೇ ಅಂತ ಕೇಳಿದಳು. “ಹ್ಞಾಂ. ಏನಿಲ್ಲ” ಅಂತ ಎದ್ದು ನಿಲ್ಲಲು ಹೋದೆ, ಮತ್ತೆ ತಲೆ ತಿರುಗಿದಂತಾಯ್ತು ಹಾಗೇ ಕೂತುಬಿಟ್ಟೆ. ಮನೆಗೆ ಹೋಗಲು ಟ್ಯಾಕ್ಸಿ ತಂದುಕೊಡುವಂತೆ ಆಕೆಯನ್ನೇ ಕೇಳಿದೆ. ಆ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೇ ನನಗ್ಯಾಕೆ ಹಾಗಾಯ್ತು? ಯಾವುದೋ ಅಹಿತವಾದ ಭಾವನೆ- ನೆನಪಿಸಿಕೊಳ್ಳಲು ಕೂಡ ಇಷ್ಟಪಡದೆ ಇರೋಂಥದ್ದು ನೆನಪಾಗಿತ್ತು.
ನಾನಾಗ ಮೊರಿಮುರ ಗಾಕ್ಯುಎನ್ ಪ್ರೈಮರಿ ಸ್ಕೂಲಿನಲ್ಲಿದ್ದೆ. ಅದು ನನ್ನ ಮೊದಲ ವರ್ಷ. ಸ್ಕೂಲು ಅನ್ನೋದಕ್ಕಿಂತ ನಂಗದು ಜೈಲು. ಕ್ಲಾಸಲ್ಲಿ ನನ್ನ ಜಾಗದಲ್ಲಿ ಸುಮ್ಮನೆ ಕೂತಿರ್ತಿದ್ದೆ. ನನ್ನ ತಲೆತುಂಬ ಬರೀ ಕಹಿಭಾವನೆಗಳು. ನಾನು ಮಾಡ್ತಿದ್ದ ಒಂದೇ ಕೆಲಸ ಗಾಜಿನ ಬಾಗಿಲುಗಳಿಂದ ಹೊರಗೆ ಇರುತ್ತಿದ್ದ ನಮ್ಮನೆ ಕೆಲಸದವನನ್ನ ನೋಡ್ತಿರೋದು. ಅವನೇ ನನ್ನ ಸ್ಕೂಲಿಗೆ ಕರ್ಕೊಂಡು ಬರ್ತಾಇದ್ದಿದ್ದು. ಅವನು ಏನೋ ಯೋಚಿಸ್ತಾ ಅಲ್ಲಿದ್ದ ಮೆಟ್ಟಿಲುಗಳನ್ನ ಹತ್ತುತ್ತಾ ಇಳೀತಾ ಇರ್ತಿದ್ದ. ನಾನು ಬುದ್ಧಿಮಾಂದ್ಯ ಮಗು ಅಂತ ಅಂದ್ಕೊಳ್ಳೋಕೆ ನಂಗಿಷ್ಟ ಇಲ್ಲ. ಆದರೆ ನಾನು ಕಲಿಕೆಯಲ್ಲಿ ನಿಧಾನ. ಯಾಕೇಂದ್ರೆ ನಂಗೆ ಮೇಷ್ಟ್ರು ಹೇಳಿದ್ದು ಏನೂ ಅರ್ಥಾನೇ ಆಗ್ತಿರಲಿಲ್ಲ. ನಂಗೆ ಖುಷಿಯಾಗೋ ಅಂಥದ್ದನ್ನ ಮಾಡ್ತಾ ಕೂತ್ಕೊಂಡು ಇರ್ತಿದ್ದೆ. ಕಡೆಗೆ ಅವರು ಬೇರೆ ಮಕ್ಕಳಿಂದ ದೂರಕ್ಕೆ ನನ್ನ ಮೇಜು, ಬೆಂಚನ್ನ ಸರಿಸಿಬಿಟ್ಟರು. ನಂಗೆ ಸ್ಪೆಷಲ್ ಟ್ರೀಟ್ಮೆಂಟ್ ಶುರುವಾಯಿತು.
ಮೇಷ್ಟ್ರು ಪಾಠ ಮಾಡೋವಾಗ ಮಧ್ಯೆ ಮಧ್ಯೆ ನನ್ನ ಕಡೆ ನೋಡ್ತಾ “ಬಹುಶಃ ಅಕಿರಾಗೆ ಇದು ಅರ್ಥವಾಗಿರಲ್ಲ. ಆದರೆ…” ಅನ್ನೋರು, ಅಥ್ವಾ “ಈ ಲೆಕ್ಕ ಮಾಡೋದಿಕ್ಕೆ ಅಕಿರಾಗೆ ಸಾಧ್ಯವಿಲ್ಲ. ಆದರೆ…” ಅನ್ನೋರು. ಮೇಷ್ಟ್ರು ಹೀಗೆ ಹೇಳಿದಾಗೆಲ್ಲ ಮಕ್ಕಳು ನನ್ನ ಕಡೆ ನೋಡಿ ಮುಸಿಮುಸಿ ನಗೋರು. ನಂಗೆ ಬೇಜಾರಾಗೋದು. ಆದರೆ ಮೇಷ್ಟ್ರು ಹೇಳ್ತಿದ್ದಿದ್ದು ನಿಜ. ನಂಗೆ ಅದ್ಯಾವ ಸಬ್ಜೆಕ್ಟ್ ಆದರೂ ಅರ್ಥವಾಗ್ತಿರಲಿಲ್ಲ. ನೆಟ್ಟಗೆ ನಿಂತ್ಕೋ ಅಂತ ಹೇಳಿದರೆ ಸಾಕು ತಲೆ ತಿರುಗಿ ಬಿದ್ದೇ ಹೋಗ್ತಿದ್ದೆ. ಅದ್ಯಾಕೋ “ಅಟರನ್ಷನ್” (“Attention”)! ಅನ್ನೋ ಕಮಾಂಡ್ ಕೇಳ್ತಿದ್ದ ಹಾಗೆ ನಾನು ನೆಟ್ಟಗೆ ನಿಂತುಕೊಳ್ಳೋದರ ಜೊತೆಗೆ ಉಸಿರು ಬಿಗಿಹಿಡಿದು ಬಿಡ್ತಿದ್ದೆ. ಕಣ್ಣುಬಿಟ್ಟಾಗ ಸ್ಕೂಲಿನ ಮೆಡಿಕಲ್ ರೂಮಿನಲ್ಲಿ ನರ್ಸ್ ನನ್ನನ್ನ ನೋಡ್ತಾ ಕೂತಿರೋದು ಕಾಣ್ಸೋದು.
ಒಂದು ಸಾರಿ ಆಟಆಡ್ತಿರಬೇಕಾದರೆ ನಡೆದ ಘಟನೆ ನೆನಪಿದೆ. ಅದು ಮಳೆಗಾಲ. ಹಾಗಾಗಿ ನಾವೆಲ್ಲ ಜಿಮ್ನಾಶಿಯಂ ಸ್ಟೇಡಿಯಂ ಒಳಗೆ ಡಾಡ್ಜ್ ಬಾಲ್ (dodge-ball) ಆಡ್ತಾ ಇದ್ವಿ. ಬಾಲ್ ನನ್ನ ಕಡೆಗೆ ಎಸೆದಾಗ ನಂಗೆ ಹಿಡ್ಕೊಳ್ಳೋಕೆ ಆಗ್ತಿರಲಿಲ್ಲ. ಬೇರೆಯವರಿಗೆ ಇದು ತಮಾಷೆಯಾಗಿತ್ತು. ಎಲ್ಲ ದಿಕ್ಕಿನಿಂದಲೂ ಬಾಲು ಬಂದು ಬಂದು ನಂಗೆ ಹೊಡೀತಿತ್ತು. ನಂಗದು ತಮಾಷೆಯಾಗಿರಲಿಲ್ಲ, ನೋವಾಗ್ತಿತ್ತು. ಆಗ ನಾನೇನು ಮಾಡಿದೆನಂದ್ರೆ ಬಾಲ್ ತೊಗೊಂಡು ಹೋಗಿ ಸ್ಟೇಡಿಯಂ ಹೊರಗೆ ಮಳೆಯಲ್ಲಿ ಎಸೆದುಬಿಟ್ಟೆ. “ಏನು ಮಾಡ್ತಿದೀಯಾ?” ಅಂತ ಮೇಷ್ಟ್ರು ಸಿಟ್ಟಲ್ಲಿ ಕಿರುಚಿದರು. ಈಗ ಅವರಿಗೆ ಯಾಕೆ ಸಿಟ್ಟು ಬಂತು ಅರ್ಥವಾಗುತ್ತೆ. ಆಗ ನಾನು ಮಾಡಿದ್ದು ತಪ್ಪು ಅಂತ ನಂಗೆ ಅನ್ನಿಸಿರಲಿಲ್ಲ. ಆ ಬಾಲು ನಂಗೆ ತೊಂದರೆ ಕೊಡ್ತಿತ್ತು. ನಾನು ಅದರಿಂದ ತಪ್ಪಿಸ್ಕೋಬೇಕಿತ್ತು.
ಪ್ರೈಮರಿ ಸ್ಕೂಲಿನ ಮೊದಲೆರಡು ವರ್ಷಗಳು ನಂಗೆ ನರಕಯಾತನೆ. ನಿಜಕ್ಕೂ ಯಾವುದೋ ಕಾನೂನು ಹೇಳುತ್ತೆ ಅನ್ನೋ ಕಾರಣಕ್ಕೆ ಈ ತರಹದ ತೊಂದರೆ ಇರುವ ಮಕ್ಕಳನ್ನು ಸ್ಕೂಲಿಗೆ ಕಳಿಸೋದು ಭಾರಿ ಕೆಟ್ಟದ್ದು. ಮಕ್ಕಳಲ್ಲಿ ವೈವಿಧ್ಯತೆಯಿರುತ್ತೆ. ಐದು ವರ್ಷದ ಕೆಲವು ಮಕ್ಕಳಿಗೆ ಏಳು ವರ್ಷದ ಮಕ್ಕಳ ಬುದ್ಧಿವಂತಿಕೆ ಇದ್ದರೆ ಮತ್ತೆ ಏಳು ವರ್ಷದ ಕೆಲವು ಮಕ್ಕಳಿಗೆ ಐದು ವರ್ಷದವರಷ್ಟು ಬುದ್ಧಿ ಇರಲ್ಲ. ಬುದ್ಧಿವಂತಿಕೆಯ ಬೆಳವಣಿಗೆ ಒಬ್ಬೊಬ್ಬರಲ್ಲಿ ಒಂದೊಂದು ತರಹ. ಒಂದು ವರ್ಷ ಅಂದ್ರೆ ಆ ವರ್ಷದಲ್ಲೇ ಪ್ರಗತಿ ಸಾಧಿಸಿಬಿಡಬೇಕು. ಓದಿ ಮುಗಿಸಿಬಿಡಬೇಕು ಅನ್ನೋದೇ ತಪ್ಪು.
ನಾನು ಭಾವುಕನಾಗಿ ಮಾತಾಡ್ತಿದೀನಿ ಅನ್ನಿಸುತ್ತೆ. ಆದರೆ ಏಳು ವರ್ಷದವನಾಗಿದ್ದಾಗ ಆ ಸ್ಕೂಲು ದಿನಗಳಲ್ಲಿ ಅನುಭವಿಸಿದ ಒಂಟಿತನ ನನ್ನೊಳಗೆ ಉಳಿದುಬಿಟ್ಟಿದೆ. ಅಪ್ರಜ್ಞಾಪೂರ್ವಕವಾಗಿ ಆ ಮಗುವಿನ ದೃಷ್ಟಿಕೋನವೇ ಬರವಣಿಗೆಯಲ್ಲಿ ನುಸುಳಿದೆ.
ಗಾಳಿಗೆ ಮಂಜು ಹಾರಿಹೋಗೋ ಹಾಗೆ ನನ್ನ ಬುದ್ಧಿಗೆ ಮುಸುಕಿದ್ದ ಮಂಕು ಕಡೆಗೂ ಮಾಯವಾಯಿತು. ಟೋಕಿಯೋದ ಮತ್ತೊಂದು ಜಿಲ್ಲೆ ಕಶಿಕಾವಗೆ ಬರೋವರೆಗೂ ನನ್ನ ಬುದ್ಧಿವಂತಿಕೆ ಪೂರ್ತಿಯಾಗಿ ಅರಳಲಿಲ್ಲ. ಅದಾದದ್ದು ಕ್ಯುರೊಡ ಪ್ರೈಮರಿ ಸ್ಕೂಲಿನಲ್ಲಿ ಮೂರನೇ ಕ್ಲಾಸಿನಲ್ಲಿದ್ದಾಗ.
ಅಳುಮುಂಜಿ/ ಅಳುಬುರುಕ
ನಾನು ಎರಡನೇ ಕ್ಲಾಸೋ ಅಥ್ವಾ ಮೂರನೇ ಕ್ಲಾಸಿನಲ್ಲಿದ್ದಾಗ ಮೊರಿಮುರ ಗಾಕ್ಯುಎನ್ ಸ್ಕೂಲಿಂದ ಈ ಸ್ಕೂಲಿಗೆ ಬಂದೆ. ಹಳೇ ಸ್ಕೂಲಿಗೆ ತದ್ವಿರುದ್ಧವಾದದ್ದು ಈ ಸ್ಕೂಲು. ನಂಗೆ ಸಖತ್ ಆಶ್ಚರ್ಯವಾಗೋಯ್ತು. ಸ್ಕೂಲು ಬಿಲ್ಡಿಂಗ್ ಗೆ ಬಿಳಿಬಣ್ಣ ಹೊಡೆದಿರಲಿಲ್ಲ. ಅದೊಂದು ಅಲಂಕಾರವಿಲ್ಲದ ಮರದ ಕಟ್ಟಡ. ಮೆಯ್ಜಿ ಕಾಲದಲ್ಲಿನ ಮಿಲಿಟರಿ ಕಟ್ಟಡಗಳ ಹಾಗಿತ್ತು. ಮೊರಿಮುರ ಸ್ಕೂಲಿನಲ್ಲಿ ವಿದ್ಯಾರ್ಥಿಗಳಿಗೆ ಯುರೋಪಿಯನ್ ಶೈಲಿಯ ಯೂನಿಫಾರ್ಮ್ ಗಳಿತ್ತು. ಇಲ್ಲಿ ಜಪಾನಿ ಶೈಲಿಯ ಹಕಾಮ ಅನ್ನೋ ಪ್ಯಾಂಟ್ ಹಾಕ್ತಿದ್ದರು. ಅಲ್ಲಿ ಜರ್ಮನ್ ಶೈಲಿಯಲ್ಲಿರುತ್ತಿದ್ದ ಬೆನ್ನಿಗೆ ಹಾಕೋತಿದ್ದ ಚೀಲದಲ್ಲಿ ಪುಸ್ತಕ ತೊಗೊಂಡುಹೋದರೆ ಇಲ್ಲಿ ಬಟ್ಟೆಯ ಚೀಲದಲ್ಲಿ ಪುಸ್ತಕ ತೊಗೊಂಡುಹೋಗ್ತಿದ್ದರು. ಮೊರಿಮುರದಲ್ಲಿ ಚರ್ಮದ ಶೂ ಹಾಕ್ಕೋತಿದ್ದರೆ, ಇಲ್ಲಿ ಮರದ್ದನ್ನ ಹಾಕ್ಕೋತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿನವರ ಮುಖಗಳು ಬೇರೆ ತರಹ ಇತ್ತು. ಯಾಕಂದ್ರೇ ಮೊರಿಮುರದ ವಿದ್ಯಾರ್ಥಿಗಳು ಉದ್ದ ಕೂದಲನ್ನು ಬಿಡ್ತಿದ್ದರು. ಇಲ್ಲಿನವರು ಚಿಕ್ಕದಾಗಿ ಕೂದಲು ಕತ್ತರಿಸಿ ಕೊಂಡಿರುತ್ತಿದ್ದರು. ನಂಗನ್ನಿಸುತ್ತೆ ಕ್ಯುರೊಡ ಸ್ಕೂಲಿನ ವಿದ್ಯಾರ್ಥಿಗಳನ್ನ ನೋಡಿ ನಂಗೆ ಆಶ್ಚರ್ಯ ಆಗಿದ್ದಕ್ಕಿಂತ ಹೆಚ್ಚಾಗಿ ಅವರಿಗೆ ನನ್ನ ನೋಡಿ ಆಶ್ಚರ್ಯವಾಗಿತ್ತು.
ಎಲ್ಲ ದಿಕ್ಕಿನಿಂದಲೂ ಬಾಲು ಬಂದು ಬಂದು ನಂಗೆ ಹೊಡೀತಿತ್ತು. ನಂಗದು ತಮಾಷೆಯಾಗಿರಲಿಲ್ಲ, ನೋವಾಗ್ತಿತ್ತು. ಆಗ ನಾನೇನು ಮಾಡಿದೆನಂದ್ರೆ ಬಾಲ್ ತೊಗೊಂಡು ಹೋಗಿ ಸ್ಟೇಡಿಯಂ ಹೊರಗೆ ಮಳೆಯಲ್ಲಿ ಎಸೆದುಬಿಟ್ಟೆ. “ಏನು ಮಾಡ್ತಿದೀಯಾ?” ಅಂತ ಮೇಷ್ಟ್ರು ಸಿಟ್ಟಲ್ಲಿ ಕಿರುಚಿದರು. ಈಗ ಅವರಿಗೆ ಯಾಕೆ ಸಿಟ್ಟು ಬಂತು ಅರ್ಥವಾಗುತ್ತೆ. ಆಗ ನಾನು ಮಾಡಿದ್ದು ತಪ್ಪು ಅಂತ ನಂಗೆ ಅನ್ನಿಸಿರಲಿಲ್ಲ.
ಸುಮ್ಮನೆ ಕಲ್ಪಿಸಿಕೊಳ್ಳಿ ಜಪಾನಿ ಸಂಪ್ರದಾಯದಂತೆ ಬದುಕುತ್ತಿದ್ದ ಗುಂಪಿನವರ ಮಧ್ಯೆ ಇದ್ದಕ್ಕಿದ್ದ ಹಾಗೆ ನನ್ನಂತಹವನೊಬ್ಬ ಕಾಣಿಸಿಕೊಂಡರೆ ಏನಾಗಬೇಡ? ನಾನಾಗ ಹೀಗಿದ್ದೆ: ಇಳಿಬಿಟ್ಟ ಕೂದಲು, ಬೆಲ್ಟು, ಕೋಟು, ಶಾರ್ಟ್ ಪ್ಯಾಂಟು, ಕೆಂಪು ಸಾಕ್ಸು ಮತ್ತು ಶೂಗಳು. ನಾನಾಗ ಹುಡುಗಿಯರಿಗಿಂತ ಬೆಳ್ಳಗಿದ್ದ ಅರಳುಗಣ್ಣುಂಗಳ ಹುಡುಗ- ಇದಕ್ಕಿಂತ ಇನ್ನೇನು ಬೇಕು? ಅವರ ಮಧ್ಯೆ ನಾನೊಂದು ತಮಾಷೆ ವಸ್ತುವಾಗಿಬಿಟ್ಟೆ. ಅವರು ನನ್ನ ಉದ್ದ ಕೂದಲು ಹಿಡ್ಕೊಂಡು ಎಳೀತಿದ್ದರು, ಬ್ಯಾಗಿಗೆ ಚುಚ್ಚುತ್ತಿದ್ದರು, ಬಟ್ಟೆಯ ಮೇಲೆ ಏನೋನೋ ಹಾಕ್ಕೊಂಡು ಉಜ್ಜೋರು… ಒಟ್ಟಿನಲ್ಲಿ ನಾನು ಅಳೋ ಹಾಗೆ ಮಾಡ್ತಿದ್ದರು. ನಾನ್ಯಾವಾಗಲೂ ಅಳುಮುಂಜಿನೇ. ಆದರೆ ಈ ಹೊಸಸ್ಕೂಲಲ್ಲಿ ಅದರ ಜೊತೆಗೆ ಹೊಸ ಹೆಸರು ಬೇರೆ ಇಟ್ಟರು. ಅವರೆಲ್ಲ ನನ್ನ “ಕೊನ್ಬೆತೊ ಸಾನ್” (Mr. Gumdrop) ಅಂತ ಕರೀತಿದ್ದರು. ಅದೊಂದು ಜನಪ್ರಿಯ ಹಾಡು. ಆ ಹಾಡಿನ ಸಾಲುಗಳು ಹೀಗಿತ್ತು:**
ನಂ ಜೊತೆಲೊಬ್ಬ ಅಳುಬುರುಕ
ಅವನದಂತೂ ಭಾರಿ ಗೋಳಪ್ಪ
ಯಾವಾಗ ನೋಡಿದ್ರೂ ಅಳ್ತಾನಪ್ಪ
ವ್ಯಾಂ.. ವ್ಯಾಂ.. ವ್ಯಾಂ…
ಅತ್ತರೆ ಅವನು ಕಣ್ಣೀರು ಹರಿಯಲ್ಲಪ್ಪ
ಗೋಂದಿನ ಹಾಗೆ ಜಾರುತ್ತಲ್ಲಪ್ಪ
ವ್ಯಾಂ.. ವ್ಯಾಂ.. ವ್ಯಾಂ…
ಆ ಹಾಡಿನ ತಾತ್ಪರ್ಯ ಏನಪ್ಪಾ ಅಂದ್ರೆ ಆ ಅಳುಬುರುಕನ ಕಣ್ಣೀರ ಹನಿಗಳು ಗೋಂದಿನ ಹನಿಗಳ ಹಾಗೆ ದೊಡ್ಡದು ಅಂತ. ನಂಗೀಗಲೂ ಆ ಹೆಸರು ನೆನಪಾದಾಗೆಲ್ಲ ಅವಮಾನವಾಗುತ್ತೆ. ನಾನು ಕುರೊದ ಪ್ರೈಮರಿ ಸ್ಕೂಲಿಗೆ ಸೇರಿದ ಸಮಯದಲ್ಲೇ ನನ್ನ ಅಣ್ಣ ಕೂಡ ಸೇರ್ಕೊಂಡ. ಅವನು ತನ್ನ ಪ್ರತಿಭೆಯಿಂದ ಅಲ್ಲಿನವರನ್ನೆಲ್ಲ ಗೆದ್ದುಬಿಟ್ಟ. ಆದರೆ ಒಳಗೊಳಗೆ ಈ ಅಳುಮುಂಜಿ ತಮ್ಮ ನಮ್ಮಣ್ಣ ನಂಗೊಂಚೂರು ಹೆಲ್ಪ್ ಮಾಡಲಿಲ್ವಲ್ಲ ಅಂತ ಕೊರಗಿದ. ಅಲ್ಲಿ ನಂಗೊಂದು ಜಾಗ ಕಂಡ್ಕೊಳ್ಳೋಕೆ ಸುಮಾರು ಒಂದು ವರ್ಷ ಬೇಕಾಯ್ತು. ವರ್ಷದ ಕೊನೆ ಹೊತ್ತಿಗೆ ಜನರ ಮುಂದೆ ಅಳೋದನ್ನ ಬಿಟ್ಟಿದ್ದೆ. ಯಾರೂ ನನ್ನ ಅಳುಮುಂಜಿ ಅಂತ ಕರೀತಿರಲಿಲ್ಲ. ಎಲ್ಲರೂ ಈಗ ನನ್ನ ‘ಕುರೊಚಾನ್’ ಅಂತ ಮರ್ಯಾದೆಯಿಂದ ಕರೀತಿದ್ದರು. ಆ ವರ್ಷ ನನ್ನಲ್ಲಾದ ಬದಲಾವಣೆಗಳು ಸಹಜವಾಗಿತ್ತು. ನನ್ನ ಬುದ್ಧಿವಂತಿಕೆ ಅರಳಿ ಘಮಘಮಿಸಲು ಶುರುಮಾಡಿತ್ತು. ನನ್ನ ವಯಸ್ಸಿನವರೊಂದಿಗೆ ಆರಾಮಾಗಿ ಬೆರೆತುಬಿಟ್ಟೆ. ಈ ಅದ್ಭುತ ಪ್ರಗತಿಯ ಹಿಂದೆ ಮೂರು ಶಕ್ತಿಗಳಿದ್ದವು.
ಅದರಲ್ಲಿ ಒಬ್ಬ ನಮ್ಮಣ್ಣ. ನಾವಾಗ ಒಮಗರಿ ಅನ್ನೋ ಊರಲ್ಲಿದ್ವಿ. ಅದು ಕೊಯಿಶಿಕಾವ ಜಿಲ್ಲೆಯ ಕೇಂದ್ರಭಾಗ. ಪ್ರತಿದಿನ ಬೆಳಗ್ಗೆ ನಾನು ನಮ್ಮಣ್ಣ ಎಡೊಗಾವ ನದಿ ದಂಡೆ ಮೇಲೆ ನಡ್ಕೊಂಡು ಸ್ಕೂಲಿಗೆ ಹೋಗ್ತಿದ್ವಿ. ನಾನು ಕೆಳಗಿನ ಕ್ಲಾಸಿನಲ್ಲಿದ್ದಿದ್ದರಿಂದ ಸ್ಕೂಲು ಮಧ್ಯಾಹ್ನ ಮುಗಿದುಹೋಗ್ತಿತ್ತು. ನಾನೊಬ್ಬನೇ ಮನೆಗೆ ಬರಬೇಕಿತ್ತು. ಬೆಳಗಿನ ಹೊತ್ತು ಅವನ ಜೊತೆಲೇ ಸ್ಕೂಲಿಗೆ ಹೋಗ್ತಿದ್ದೆ. ನಮ್ಮಣ್ಣ ಪ್ರತಿದಿನ ಬೆಳಗ್ಗೆ ನಂಗೆ ಸರಿಯಾಗಿ ಉಗೀತಿದ್ದ. ನನ್ನ ಬೈಯಕ್ಕೆ ಅದೆಷ್ಟು ತರಹದ ಪದಗಳನ್ನ ಬಳಸ್ತಿದ್ದ ಅಂದರೆ ನಂಗದು ಅದ್ಭುತ ಅನ್ನಿಸಿಬಿಡೋದು. ಅವನು ಜೋರಾಗೂ ಬೈಯ್ತಿರಲಿಲ್ಲ ಗುಟ್ಟಾಗೂ ಬೈಯ್ತಿರಲಿಲ್ಲ. ಬಹಳ ಮೆಲುದನಿಯಲ್ಲಿ ಬೈಯ್ತಿದ್ದ. ನಂಗಾಗಲಿ ಪಕ್ಕದಲ್ಲಿ ನಡ್ಕೊಂಡು ಹೋಗ್ತಿದ್ದವರಿಗಾಗಲಿ ಕೇಳ್ತಿರಲಿಲ್ಲ. ಅವನು ಜೋರಾಗಿ ಬೈದಿದ್ದರೆ ನಾನು ತಿರುಗಿಸಿ ಬೈದುಬಿಡ್ತಿದ್ದೆ ಇಲ್ಲ ಅತ್ತುಬಿಡ್ತಿದ್ದೆ ಇಲ್ಲ ಓಡಿಹೋಗ್ತಿದ್ದೆ ಇಲ್ಲ ಕಿವಿಗಳನ್ನ ಮುಚ್ಕೊಂಡುಬಿಡ್ತಿದ್ದೆ. ಆದರೆ ಅವನು ಅದೆಷ್ಟು ಸದ್ದಿಲ್ಲದೆ ಮಾತಾಡ್ತಿದ್ದ ಅಂದ್ರೆ ನಂಗೆ ತಿರುಗಿಸಿ ಏನೂ ಹೇಳೋಕು ಆಗ್ತಿರಲಿಲ್ಲ. ಅವನು ಮಾತ್ರ ನನ್ನ ಮೇಲೆ ಬೈಗುಳಗಳ ಮಳೆ ಸುರಿಸ್ತಾನೆ ಇರ್ತಿದ್ದ.
ಅವನು ಹೀಗೆ ಮಾಡ್ತಾನೆ ಅಂತ ನಮ್ಮಮ್ಮ ಮತ್ತು ನಮ್ಮಕ್ಕಂದಿರಿಗೆ ಕೂಡ ಹೇಳಕ್ಕೆ ಆಗ್ತಿರಲಿಲ್ಲ. ಸ್ಕೂಲಿನ ಹತ್ತಿರ ಬರ್ತಿದ್ದ ಹಾಗೆ “ನಂಗೊತ್ತೋ ನೀನು ಹೆದರುಪುಕ್ಕಲ ಅಂತ. ಮನೆಗೆ ಹೋಗಿ ನಾನು ಹೀಗೆ ಮಾಡಿದೆ ಅಂತ ಅಮ್ಮಂಗೆ ಅಕ್ಕಂದಿರಿಗೆ ಚಾಡಿ ಹೇಳ್ತಿಯ. ಹೇಳಿನೋಡು ಏನು ಮಾಡ್ತೀನಿ ಅಂತ. ನಿನ್ನ ಇನ್ನಷ್ಟು ಬೈಯ್ತೀನಿ” ಅಂತಿದ್ದ. ಅವನ ಕಡೆ ಬೆರಳು ತೋರಿಸೋಕೆ ಕೂಡ ಆಗದ ಹಾಗೆ ಮಾಡ್ಬಿಟ್ಟಿದ್ದ.
ಇಷ್ಟು ಸಣ್ಣತನದಿಂದ ವರ್ತಿಸ್ತಿದ್ದ ಅಣ್ಣನೇ ಸ್ಕೂಲಿನ ವಿರಾಮದ ಹೊತ್ತಲ್ಲಿ ನನ್ನ ನೆರವಿಗೆ ಬರ್ತಿದ್ದ. ಬೇರೆ ಮಕ್ಕಳು ನನ್ನ ಚುಡಾಯಿಸ್ತಿದ್ದರೆ ಇವನು ಅದೆಲ್ಲಿಂದಾನೋ ಪ್ರತ್ಯಕ್ಷ ಆಗ್ತಿದ್ದ. ಅದ್ಯಾವ ಮೂಲೆಯಲ್ಲಿ ನಿಂತು ನನ್ನ ನೋಡ್ತಿದ್ದನೋ ಗೊತ್ತೇ ಆಗ್ತಿರಲಿಲ್ಲ. ಅವನು ನಮ್ಮ ಸ್ಕೂಲಿನ ಹೀರೋ ಆಗಿಬಿಟ್ಟಿದ್ದ. ನನ್ನ ರೇಗಿಸ್ತಿದ್ದ ಹುಡುಗರೆಲ್ಲ ಅವನ ಜ್ಯೂನಿಯರ್ ಗಳು ಹಾಗಾಗಿ ಅವನು ಬರ್ತಿದ್ದ ಹಾಗೇ ಎಲ್ಲರೂ ಹಿಂದಕ್ಕೆ ಸರ್ಕೊಂಡು ಬಿಡೋರು. ಅವರಲ್ಲಿದ್ದಾರೆ ಅಂತ ಕೂಡ ತಲೆಕೆಡಿಸಿಕೊಳ್ಳದೆ “ಅಕಿರಾ ಒಂದು ನಿಮಿಷ ಬಾ ಇಲ್ಲಿ” ಅನ್ನೋನು. ಸದ್ಯ ಬಚಾವಾದೆನಲ್ಲ ಅಂತ ನಾನವನ ಹತ್ತಿರ ಓಡ್ಹೋಗಿ “ಏನು?” ಅಂದ್ರೆ “ಏನಿಲ್ಲ” ಅಂದು ದುಡುದುಡು ಹೋಗ್ಬಿಡ್ತಿದ್ದ.
ಹೀಗೆ ಘಟನೆಗಳು ನಡೀತಾ ನಡೀತಾ ನನ್ನ ಬುದ್ಧಿಗೆ ಕವಿದಿದ್ದ ಮಂಕು ಸರಿಯಲಾರಂಭಿಸಿತು. ನಾನು ಸ್ವಲ್ಪ ಸ್ವಲ್ಪವೇ ಯೋಚಿಸಲು ಅರ್ಥಮಾಡಿಕೊಳ್ಳಲು ಶುರುಮಾಡಿದೆ: ನಮ್ಮಣ್ಣ ದಾರಿಯಲ್ಲಿ ಬರಬೇಕಾದ್ರೆ ಒಂಥರಾ ಆಡ್ತಾನೆ. ಸ್ಕೂಲೊಳಗೆ ಒಂಥರಾ ಆಡ್ತಾನೆ. ನಿಧಾನವಾಗಿ ದಿನನಿತ್ಯದ ಅವನ ಬೈಗುಳದ ಬಗ್ಗೆ ದ್ವೇಷ ಕಡಿಮೆಯಾಗ್ತಾ ಬಂತು. ಮೌನವಾಗಿ ಖುಷಿಯಿಂದ ಕೇಳಿಸ್ಕೊಳ್ಳೋಕೆ ಶುರುಮಾಡಿದೆ. ಈಗ ಹಿಂತಿರುಗಿ ನೋಡಿದಾಗ ಅನ್ನಿಸುತ್ತೆ ಈ ಸಮಯದಲ್ಲಿ ನಾನು ಚಿಕ್ಕಮಗುವಿನ ಹಾಗಿದ್ದವನು ನಿಧಾನವಾಗಿ ಯೋಚಿಸಲು ಕಲಿತು ಎಲ್ಲರಂತೆ ಸ್ಕೂಲಿಗೆ ಹೋಗೋ ವಯಸ್ಸಿನ ಮಕ್ಕಳ ಮಟ್ಟಕ್ಕೆ ಬೆಳೆದೆ.
ಇನ್ನೊಂದು ಘಟನೆಯು ನಮ್ಮಣ್ಣಂಗೆ ಸಂಬಂಧಿಸಿದ್ದೇ. ಅದು ನಾನಿನ್ನೂ “ಅಳುಮುಂಜಿ”ಯಾಗಿದ್ದ ಕಾಲ. ನಮ್ಮಪ್ಪ ಇದ್ದಕ್ಕಿದ್ದ ಹಾಗೇ ನಮ್ಮನ್ನೆಲ್ಲ ಸುಯಿಫ್ಯುರ್ಯು ಈಜುಕೊಳಕ್ಕೆ ಕರ್ಕೊಂಡು ಹೋಗೋ ನಿರ್ಧಾರ ಮಾಡಿಬಿಟ್ಟರು. ಅದನ್ನ ಕಟ್ಟಿದ್ದಿದ್ದು ಅರ್ಕಾವ ನದಿಯಲ್ಲಿ. ಆಗ ನಮ್ಮಣ್ಣ ಬಿಳಿ ಟೋಪಿ ಹಾಕ್ಕೊಂಡಿದ್ದ. ಅದರ ಮೇಲೆ ಒಂದು ಕಪ್ಪು ತ್ರಿಭುಜದ ತರಹದ ಡಿಸೈನ್ ಇತ್ತು. ಈಜುಕೊಳದಲ್ಲಿ ಅವನಾಗಲೇ ಮೊದಲ ಹಂತದ ಈಜು ಕಲಿತಿದ್ದ. ಅಲ್ಲಿನ ಮೇಷ್ಟ್ರು ನಮ್ಮಪ್ಪನ ಸ್ನೇಹಿತರು. ಅವರ ಸುಪರ್ದಿಗೆ ನನ್ನನ್ನ ಒಪ್ಪಿಸಿದರು. ಮನೆಯಲ್ಲಿ ನಾನೇ ಕೊನೆಮಗು ಹಾಗಾಗಿ ನಮ್ಮಪ್ಪ ಮುದ್ದುಮಾಡಿ ಹಾಳುಮಾಡಿದ್ದರು. ನಾನು ಹುಡುಗಿಯರ ಹಾಗೇ ಅಳೋದನ್ನ ನೋಡಿ, ನಮ್ಮಕ್ಕಂದಿರ ಜೊತೆ ಅಚ್ಚಚ್ಚು ಬೆಲ್ಲದಚ್ಚು, ದಾರದ ಆಟ ಆಡೋದನ್ನ ನೋಡಿ ಅವರಿಗೆ ಹೇಗನ್ನಿಸಿರಬೇಡ. ನಾನು ಈಜು ಕಲಿತರೆ, ಬಿಸಿಲಿಗೆ ಕಪ್ಪಾದರೆ ಅಥ್ವಾ ಈಜು ಕಲೀದಿದ್ದರೂ ಪರವಾಗಿಲ್ಲ ಕಪ್ಪಾದರೂ ಸಾಕು ನಂಗೇನೋ ಗಿಫ್ಟ್ ಕೊಡ್ತೀನಿ ಅಂತ ಹೇಳಿದರು. ನಂಗೆ ನೀರಂದ್ರೆ ಭಯ. ಕೊಳಕ್ಕೆ ಇಳಿತಾನೇ ಇರಲಿಲ್ಲ. ಈಜು ಕಲಿಸೋ ಮೇಷ್ಟ್ರು ಎಷ್ಟೋ ದಿನ ಬೈದಮೇಲೆ ಸೊಂಟ ಮಟ್ಟದವರೆಗೆ ನೆನೆಯೋ ಹಾಗೆ ನೀರಿಗೆ ಇಳಿದೆ.
ಇಷ್ಟು ಸಣ್ಣತನದಿಂದ ವರ್ತಿಸ್ತಿದ್ದ ಅಣ್ಣನೇ ಸ್ಕೂಲಿನ ವಿರಾಮದ ಹೊತ್ತಲ್ಲಿ ನನ್ನ ನೆರವಿಗೆ ಬರ್ತಿದ್ದ. ಬೇರೆ ಮಕ್ಕಳು ನನ್ನ ಚುಡಾಯಿಸ್ತಿದ್ದರೆ ಇವನು ಅದೆಲ್ಲಿಂದಾನೋ ಪ್ರತ್ಯಕ್ಷ ಆಗ್ತಿದ್ದ. ಅದ್ಯಾವ ಮೂಲೆಯಲ್ಲಿ ನಿಂತು ನನ್ನ ನೋಡ್ತಿದ್ದನೋ ಗೊತ್ತೇ ಆಗ್ತಿರಲಿಲ್ಲ. ಅವನು ನಮ್ಮ ಸ್ಕೂಲಿನ ಹೀರೋ ಆಗಿಬಿಟ್ಟಿದ್ದ. ನನ್ನ ರೇಗಿಸ್ತಿದ್ದ ಹುಡುಗರೆಲ್ಲ ಅವನ ಜ್ಯೂನಿಯರ್ ಗಳು ಹಾಗಾಗಿ ಅವನು ಬರ್ತಿದ್ದ ಹಾಗೇ ಎಲ್ಲರೂ ಹಿಂದಕ್ಕೆ ಸರ್ಕೊಂಡು ಬಿಡೋರು.
ನಮ್ಮಣ್ಣ ನಾವು ಈಜೋದಕ್ಕೆ ಹೋದಾಗೆಲ್ಲ ಜೊತೆ ಬರ್ತಿದ್ದ. ಆದರೆ ಈಜುಕೊಳದ ಹತ್ತಿರ ಬರ್ತಿದ್ದ ಹಾಗೆ ನಮ್ಮನ್ನ ಬಿಟ್ಟು ಹೊರಟುಹೋಗ್ತಿದ್ದ. ತುಂಬ ಆಳವಿದ್ದ ಕಡೆ ಈಜೋಕೆ ಹೋಗ್ಬಿಡ್ತಿದ್ದ. ಮನೆಗೆ ಹೋಗೋ ಹೊತ್ತಾಗೋವರೆಗೂ ಬರ್ತಿರಲಿಲ್ಲ. ಒಬ್ಬನೇ ಹೆದರಿಕೆ ಹುಟ್ಟಿಸೋ ಗಳಿಗೆಗಳನ್ನ ಕಳೆದೆ.
ಒಂದು ದಿನ ಆಗಷ್ಟೇ ಈಜು ಕಲಿತಿರೋರ ಜತೆಯಲ್ಲಿ ನೀರಲ್ಲಿ ಮರದ ದಿಮ್ಮಿ ಹಿಡ್ಕೊಂಡು ಕಾಲು ಬಡಿಯೋದನ್ನ ಕಲೀತಿದ್ದೆ. ನಮ್ಮಣ್ಣ ಪ್ರತ್ಯಕ್ಷವಾದ. ಅವನು ದೋಣಿಯಲ್ಲಿ ಕೂತ್ಕೊಂಡು ಹತ್ತಿರ ಬಂದು ರೌಂಡು ಹೋಗೋಣ ಬಾ ಅಂದ. ನಾನು ಹತ್ಕೊಳ್ತಿದ್ದ ಹಾಗೇ ಜೋರು ಜೋರಾಗಿ ಹುಟ್ಟುಹಾಕ್ತಾ ನದಿ ಮಧ್ಯಕ್ಕೆ ಬಂದ. ಕೊಳದ ಹತ್ತಿರದಲ್ಲಿದ್ದ ಬಾವುಟ, ಪುಟ್ಟ ಗುಡಿಸಲು ಎಲ್ಲ ಚಿಕ್ಕದಾಗಿ ಕಾಣಿಸ್ತಿತ್ತು. ಇದ್ದಕ್ಕಿದ್ದ ಹಾಗೆ ನನ್ನ ನದಿಗೆ ತಳ್ಳಿಬಿಟ್ಟ. ನಾನಾಗ ನನ್ನ ಶಕ್ತಿಯೆಲ್ಲ ಹಾಕಿ ತೇಲ್ತಾ ಈಜ್ತಾ ನನ್ನಣ್ಣ ಇದ್ದ ದೋಣಿ ಹತ್ತಿರ ಹೋದೆ. ನಾನು ಹತ್ತಿರ ಹೋಗ್ತಿದ್ದ ಹಾಗೆ ಅವನು ದೋಣಿ ದೂರ ತೊಗೊಂಡು ಹೋಗೋನು. ಹೀಗೆ ಸುಮಾರು ಸಲ ಮಾಡಿ ಮಾಡಿ ಸುಸ್ತಾದೆ. ನಂಗೆ ದೋಣಿನೂ ಕಾಣಿಸ್ತಿಲ್ಲ, ನಮ್ಮಣ್ಣನೂ ಕಾಣಿಸ್ತಿಲ್ಲ ಮುಳುಗೋಕೆ ಶುರುಮಾಡಿದ್ದೆ. ಅವನು ತಕ್ಷಣ ನನ್ನ ಬಟ್ಟೆಹಿಡಿದು ಮೇಲಕ್ಕೆ ಎಳ್ಕೊಂಡು ದೋಣಿಯೊಳಗೆ ಹಾಕ್ಕೊಂಡ.
ನಂಗೆ ಆಶ್ಚರ್ಯ. ಒಂಚೂರು ನೀರು ಕುಡಿದಿದ್ದೆ ಅನ್ನೋದು ಬಿಟ್ರೆ ನಂಗೇನೂ ಆಗಿರಲಿಲ್ಲ. ಏದುಸಿರು ಬಿಡ್ತಾ ಕಣ್ಣರಳಿಸ್ಕೊಂಡು ನಮ್ಮಣ್ಣನ್ನ ನೋಡ್ತಿದ್ದರೆ “ಅಂತೂ ಈಜು ಕಲಿತೆ ಅಕಿರಾ” ಅಂದ. ಅದಾದ ಮೇಲೆ ಮತ್ತೆಂದೂ ನಾನು ನೀರಿಗೆ ಹೆದರಲಿಲ್ಲ. ಈಜು ಹೊಡೆಯೊದನ್ನ ಕಲಿತೆ. ಈಜನ್ನ ಪ್ರೀತಿಸೋದನ್ನ ಕಲಿತೆ. ಮನೆಗೆ ವಾಪಸ್ಸು ಬರಬೇಕಾದರೆ ನಮ್ಮಣ್ಣ ರೆಡ್ ಬೀನ್ ಸಾಸ್ ಮತ್ತು ಐಸ್ ತಂದುಕೊಟ್ಟ. ತಿನ್ತಾ ಬರಬೇಕಾದರೆ “ಅಕಿರಾ ಮುಳುಗಿ ಸಾಯೋರು ನಗ್ತಿರ್ತಾರಂತೆ. ನೀನು ಮಾಡಿದ ಹಾಗೆ” ಅಂದ. ನಂಗೆ ಸಿಟ್ಟು ಬಂತು. ಆದರೆ ನಂಗೂ ಹಾಗೇ ಅನ್ನಿಸಿತು. ನೀರಲ್ಲಿ ಮುಳುಗ್ತಿರಬೇಕಾದರೆ ವಿಚಿತ್ರ ಶಾಂತಿ ತುಂಬಿಕೊಂಡಿದ್ದು ನೆನಪಿದೆ.
ನನ್ನ ಬೆಳವಣಿಗೆಯ ಹಿಂದೆ ಇದ್ದ ಎರಡನೆಯ ಶಕ್ತಿ ಕ್ಯುರೊಡ ಪ್ರೈಮರಿ ಸ್ಕೂಲಿನ ಮೇಷ್ಟ್ರದು. ಅವರು ತಚಿಕಾವ ಸೆಯ್ಜಿ. ನಾನು ಸ್ಕೂಲಿಗೆ ಸೇರಿದ ಎರಡು ವರ್ಷಗಳ ನಂತರ ತಾಕಿಕಾವರವರ ಪ್ರಗತಿಪರ ಶೈಕ್ಷಣಿಕ ತತ್ವಗಳಿಗೂ ಶಾಲೆಯ ಸಾಂಪ್ರದಾಯಿಕ ಮನೋಭಾವದ ಶಾಲೆಯ ಪ್ರಾಶುಂಪಾಲರಿಗೂ ತಿಕ್ಕಾಟವಾಯಿತು. ಹಾಗಾಗಿ ತಚಿಕಾವ ಶಾಲೆಗೆ ರಾಜಿನಾಮೆ ನೀಡಿದರು. ನಂತರ ಅವರನ್ನು ಗಿಯೊಸಿ ಪ್ರೈಮರಿ ಶಾಲೆಯವರು ತಮ್ಮ ಶಾಲೆಗೆ ಆಹ್ವಾನಿಸಿದರು. ಅಲ್ಲಿ ಅವರು ಹಲವು ಪ್ರತಿಭಾವಂತರ ಬೆಳವಣಿಗೆಗೆ ಕಾರಣರಾದರು.
ತಚಿಕಾವರ ಬಗ್ಗೆ ಎಷ್ಟೊಂದು ವಿಷಯ ಹೇಳಬೇಕು. ಒಂದು ಘಟನೆಯನ್ನು ಮೊದಲು ಹೇಳಲೇಬೇಕು. ಆಗ ನಾನಿನ್ನೂ ನನ್ನ ವಯಸ್ಸಿನ ಉಳಿದ ಮಕ್ಕಳಿಗಿಂತ ಬೌದ್ಧಿಕವಾಗಿ ಹಿಂದಿದ್ದೆ. ಆ ಬಗ್ಗೆ ನಂಗೆ ಹಿಂಜರಿಕೆಯಿತ್ತು. ತಚಿಕಾವ ಅವರು ನನ್ನ ರಕ್ಷಣೆಗೆ ನಿಂತರು. ನನ್ನ ಜೀವನದಲ್ಲಿ ಮೊದಲ ಸಲ ನಂಗೆ ಆತ್ಮವಿಶ್ವಾಸದ ಅನುಭವವಾಯಿತು. ಅದು ನಡೆದದ್ದು ಕಲಾ ತರಗತಿಯಲ್ಲಿ. ಹಿಂದಿನದಿನಗಳಲ್ಲಿ ಅಂದರೆ ನಮ್ಮ ಕಾಲದಲ್ಲಿ ಕಲಾಶಿಕ್ಷಣ ಬಹಳ ಅವ್ಯವಸ್ಥಿತವಾಗಿತ್ತು. ಅದ್ಯಾವಾದೋ ಕೆಟ್ಟ ಚಿತ್ರವನ್ನ ನೋಡಿಕೊಂಡು ಮಕ್ಕಳು ಬರೀಬೇಕಿತ್ತು. ಯಾರ ಚಿತ್ರ ಆ ಮೂಲವನ್ನ ಹೆಚ್ಚು ಹೋಲುತ್ತಿತ್ತೋ ಅವರಿಗೆ ಹೆಚ್ಚು ಅಂಕಗಳು ಸಿಗ್ತಿತ್ತು. ಆದರೆ ತಚಿಕಾವ ಆ ತರಹದ ಮೂರ್ಖ ಕೆಲಸಗಳನ್ನ ಮಾಡ್ತಿರಲಿಲ್ಲ. “ನಿಮಗಿಷ್ಟ ಬಂದಿದ್ದನ್ನ ಬರೀರಿ” ಅಂತ ಹೇಳಿದರು. ಎಲ್ಲರೂ ಡ್ರಾಯಿಂಗ್ ಪೇಪರ್, ಕಲರ್ ಪೆನ್ಸಿಲ್ ತೊಗೊಂಡು ಬರೆಯಲು ಶುರುಮಾಡಿದರು. ನಾನು ಏನು ಬರೆದೆ ಅಂತ ನೆನಪಿಲ್ಲ. ಆದರೆ ನನ್ನೆಲ್ಲ ಶಕ್ತಿ ಹಾಕಿ ಬರೆಯಲು ಶುರುಮಾಡಿದೆ. ಶಕ್ತಿಯೆಲ್ಲ ಹಾಕಿ ಒತ್ತಿ ಪೆನ್ಸಿಲ್ ನಲ್ಲಿ ಗೆರೆ ಹಾಕ್ತಿದ್ದ ಹಾಗೆ ಪೆನ್ಸಿಲ್ ಮುರಿದು ಹೋಗ್ತಿತ್ತು. ಬೆರಳಿನ ತುದಿಗೆ ಎಂಜಲು ಹಚ್ಚಿಕೊಂಡು ಬಣ್ಣಗಳನ್ನ ಬಳಿಯಲು ಶುರುಮಾಡಿದೆ. ಒಟ್ಟಿನಲ್ಲಿ ಕೈಯಲ್ಲಿ ಬಳಿದ ವಿವಿಧ ಬಣ್ಣಗಳೊಟ್ಟಿಗೆ ಕೆಲಸ ಮುಗಿಸಿದೆ.
ಎಲ್ಲರೂ ಮುಗಿಸಿದ ಮೇಲೆ ತಾಕಿಕಾವ ಪ್ರತಿ ವಿದ್ಯಾರ್ಥಿಯ ಚಿತ್ರ ತೊಗೊಂಡು ಕಪ್ಪು ಹಲಗೆಗೆ ತೂಗುಹಾಕಿ ನಿಮಗನ್ನಿಸಿದ್ದನ್ನ ಹೇಳಿ ಅಂದರು. ನನ್ನ ಸರದಿ ಬಂದಾಗ ಇಡೀ ಕ್ಲಾಸಿನ ಪ್ರತಿಕ್ರಿಯೆ ಒಂದೇ ಜೋರುಜೋರು ನಗು. ಆದರೆ ತಚಿಕಾವ ನಗುತ್ತಿದ್ದವರನ್ನ ತೀಕ್ಷ್ಣವಾಗಿ ನೋಡ್ತಾ ನನ್ನ ಚಿತ್ರವನ್ನ ಹೊಗಳಿ ಅಟ್ಟಕೇರಿಸಿದರು. ಅವರೇನು ಹೇಳಿದ್ದರೋ ನೆನಪಿಲ್ಲ. ಆದರೆ ಎಂಜಲಿಂದ ಉಜ್ಜಿದ್ದೆನಲ್ಲ ಆ ಜಾಗಗಳ ಬಣ್ಣಗಳ ಬಗ್ಗೆ ಮಾತಾಡಿದ್ದರು. ಆಮೇಲೆ ಚಿತ್ರದ ಮೇಲೆ ಕೆಂಪು ಇಂಕ್ ನಲ್ಲಿ ಮೂರು ದೊಡ್ಡ ದೊಡ್ಡ ವೃತ್ತಗಳನ್ನ ಬರೆದರು. ಅಂದರೆ ನಂಗೆ ಅತಿ ಹೆಚ್ಚು ಅಂಕ. ಇದು ಮಾತ್ರ ಚೆನ್ನಾಗಿ ನೆನಪಿದೆ.
ಆವತ್ತಿಂದ ಸ್ಕೂಲು ಅಷ್ಟೇನು ಇಷ್ಟ ಆಗದಿದ್ದರೂ ಕಲಾತರಗತಿಗಳಿದ್ದ ದಿನ ಸ್ಕೂಲಿಗೆ ಬೇಗ ಬೇಗ ಓಡುತ್ತಿದ್ದೆ. ಆ ಮೂರು ವೃತ್ತಗಳು ಚಿತ್ರ ಬರೆಯೋದನ್ನ ಎಂಜಾಯ್ ಮಾಡೋ ಹಾಗೆ ಮಾಡಿತು. ನಾನೆಲ್ಲವನ್ನೂ ಬರೀತಾ ಬರೀತಾ ನಿಜಕ್ಕೂ ಚಿತ್ರಕಲೆಯಲ್ಲಿ ಪರಿಣಿತಿ ಪಡೆದೆ. ಅದೇ ಸಮಯದಲ್ಲಿ ಉಳಿದ ವಿಷಯಗಳಲ್ಲೂ ನನ್ನ ಅಂಕಗಳು ಇದ್ದಕ್ಕಿದ್ದ ಹಾಗೆ ಸುಧಾರಿಸಿದವು. ತಚಿಕಾವ ನಮ್ಮ ಸ್ಕೂಲು ಬಿಡೋ ವೇಳೆಗೆ ನಾನು ನಮ್ಮ ಸ್ಕೂಲಿನ ಅಧ್ಯಕ್ಷನಾಗಿ ಗೋಲ್ಡ್ ಬ್ಯಾಡ್ಜ್ ಮತ್ತು ನೇರಳೆ ಬಣ್ಣದ ರಿಬ್ಬನ್ ಅನ್ನು ಶರ್ಟಿಗೆ ಸಿಕ್ಕಿಸಿಕೊಂಡಿದ್ದೆ. ತಚಿಕಾವ ಅವರಿಗೆ ಸಂಬಂಧಿಸಿದ ಇನ್ನೊಂದು ಮರೆಯಲಾಗದ ಘಟನೆ ನೆನಪಿದೆ. ಒಂದು ದಿನ ಬಹುಶಃ ಅದು ಕರಕುಶಲ ಕಲೆಗಳ ತರಗತಿ ಇರಬೇಕು. ಅವರು ದಪ್ಪಕಾಗದದ ದೊಡ್ಡ ರೋಲ್ ಹಿಡಿದು ತರಗತಿಯೊಳಗೆ ಬಂದರು. ಅದನ್ನು ಬಿಡಿಸಿ ನಮಗೆ ತೋರಿಸಿದರು. ಅದು ಭೂಪಟ. ಅದರಲ್ಲಿ ರಸ್ತೆಗಳನ್ನು ಬರೆದಿದ್ದರು. ಆಮೇಲೆ ಆ ರಸ್ತೆಗಳಲ್ಲಿ ನಮ್ಮ ಮನೆಗಳನ್ನು ಕಟ್ಟಿ ನಮ್ಮದೇ ನಗರವೊಂದನ್ನ ಕಟ್ಟಿಕೊಳ್ಳಲು ಹೇಳಿದರು. ಎಲ್ಲರೂ ಹುಮ್ಮಸ್ಸಿನಲ್ಲಿ ಬರೆಯಲು ಶುರುಮಾಡಿದರು. ಎಲ್ಲರೂ ತಂತಮ್ಮ ಐಡಿಯಾಗಳನ್ನ ಹೇಳಿದರು. ಕಡೆಗೆ ಪ್ರತಿ ವಿದ್ಯಾರ್ಥಿಯ ಕನಸಿನ ಮನೆಯ ಜೊತೆ ರಸ್ತೆಯ ಎರಡೂ ಕಡೆಗಳಲ್ಲಿ ಮರಗಳು, ದೊಡ್ಡ ದೊಡ್ಡ ಹಳೆಯ ಮರಗಳು, ಹೂಬಳ್ಳಿಗಳ ಬೇಲಿಗಳು ಸಿದ್ಧವಾಯಿತು. ಅದೊಂದು ಅದ್ಭುತ ನಗರ. ಪ್ರತಿ ವಿದ್ಯಾರ್ಥಿಯು ತನ್ಮಯನಾಗಿ ತೊಡಗಿಸಿಕೊಂಡು ಸೃಷ್ಟಿಮಾಡಿದ ನಗರ. ನಮಗೆ ಕೊಟ್ಟಿದ್ದ ಪ್ರಾಜೆಕ್ಟ್ ಮುಗಿಸುವ ವೇಳೆಗೆ ನಮ್ಮ ಮುಖದಲ್ಲಿ ಕಳೆ ಕಣ್ಣಿನಲ್ಲಿ ಹೊಳಪು. ನಾವು ಮಾಡಿದ ಕೆಲಸವನ್ನು ಹೆಮ್ಮೆಯಿಂದ ನೋಡಿದೆವು. ಆ ಕ್ಷಣದ ಅನುಭವದ ನೆನಪು ನೆನ್ನೆಯದೇನೋ ಅನ್ನೋವಷ್ಟು ಹಸಿರಾಗಿದೆ.
ತಾಯ್ಶಿಯೊ ಯುಗಕ್ಕೂ (1912-1926) ಮುಂಚೆ ನಾನು ಸ್ಕೂಲಿಗೆ ಹೋಗೋಕೆ ಶುರುಮಾಡಿದ ಕಾಲದಲ್ಲಿ “ಮೇಷ್ಟ್ರು” ಅನ್ನೋ ಪದದ ಅರ್ಥವೇ “ಭಯಾನಕ ವ್ಯಕ್ತಿ” ಅಂತಾಗಿತ್ತು. ಅಂತಹ ಸಮಯದಲ್ಲಿ ನಂಗೆ ಈ ರೀತಿಯ ಸ್ವಚ್ಛಂದ, ಕ್ರಿಯಾತ್ಮಕ ಶಿಕ್ಷಣ ಎದುರಾಯಿತು. ಅದರ ಹಿಂದೆ ಇದ್ದಿದ್ದು ತಚಿಕಾವ ತರಹದ ಪ್ರತಿಭಾವಂತ ಮನಸ್ಸು. ಇದು ನನ್ನ ಭಾಗ್ಯ ಅಂತ ಅನ್ನಿಸುತ್ತೆ.
ಇನ್ನೊಂದು ಮೂರನೆಯ ಶಕ್ತಿ ನನ್ನ ಬೆಳವಣಿಗೆಯ ಹಿಂದಿತ್ತು. ಅವನು ನನ್ನ ತರಗತಿಯಲ್ಲಿದ್ದ ಮತ್ತೊಬ್ಬ ನನಗಿಂತಲೂ ಹೆಚ್ಚು ಅಳುಮುಂಜಿ. ಅವನ ಇರುವಿಕೆಯೇ ನನ್ನ ಮುಖಕ್ಕೆ ಕನ್ನಡಿ ಹಿಡಿದ ಹಾಗಿತ್ತು. ನನ್ನನ್ನ ನಾನು ವಸ್ತುನಿಷ್ಠವಾಗಿ ನೋಡಿಕೊಳ್ಳುವಂತೆ ಮಾಡಿತ್ತು. ಅವನು ಥೇಟ್ ನನ್ನ ಹಾಗೆ ಅನ್ನೋದು ಅರಿವಾಯ್ತು. ಅವನನ್ನ ಗಮನಿಸ್ತಾ ಇದ್ದ ಹಾಗೆ ಅವನ ಸ್ವಭಾವ ಎಷ್ಟು ಕಿರಿಕಿರಿಯದು ಅನ್ನೋದು ಅರ್ಥವಾಗ್ತಿದ್ದ ಹಾಗೆ ನನ್ನ ಬಗ್ಗೆ ನಂಗೆ ಬೇಜಾರಾಗಿತ್ತು. ನನ್ನ ಹಾಗೇ ಇದ್ದವನು, ನನ್ನ ನಾ ನೋಡಿಕೊಳ್ಳೋ ಅವಕಾಶ ಮಾಡಿಕೊಟ್ಟ, ಆ ಮಹಾನ್ ಅಳುಮುಂಜಿಯ ಹೆಸರು ಯೆಕುಸ ಕ್ಯೆನೊಸ್ಯುಕೆ. ಮುಂದೆ ಇವನು ನನ್ನ ಸುಮಾರು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿದ್ದ (ಕೆಯ್ ಚಾನ್ ಈಗ ನನ್ನ ಮೇಲೆ ಕೋಪ ಮಾಡ್ಕೋಬೇಡ. ನಾವಿಬ್ಬರೂ ಅಳುಮುಂಜಿಗಳಾಗಿದ್ವಿ ತಾನೇ? ಈಗ ನೀನು ರೊಮ್ಯಾಂಟಿಕ್ ಅಳುಮುಂಜಿ ನಾನು ಹ್ಯುಮನಿಸ್ಟ್ ಅಳುಮುಂಜಿಯಾಗಿದ್ದೀನಿ). ಅದೇನು ವಿಧಿಲೀಲೆಯೋ ಗೊತ್ತಿಲ್ಲ ಚಿಕ್ಕಂದಿನಿಂದ ಹರೆಯದವರೆಗೆ ನಾನು ಯೆಕುಸ ಜೊತೆಯಾಗಿದ್ವಿ.
ಎಲ್ಲರೂ ಮುಗಿಸಿದ ಮೇಲೆ ತಾಕಿಕಾವ ಪ್ರತಿ ವಿದ್ಯಾರ್ಥಿಯ ಚಿತ್ರ ತೊಗೊಂಡು ಕಪ್ಪು ಹಲಗೆಗೆ ತೂಗುಹಾಕಿ ನಿಮಗನ್ನಿಸಿದ್ದನ್ನ ಹೇಳಿ ಅಂದರು. ನನ್ನ ಸರದಿ ಬಂದಾಗ ಇಡೀ ಕ್ಲಾಸಿನ ಪ್ರತಿಕ್ರಿಯೆ ಒಂದೇ ಜೋರುಜೋರು ನಗು. ಆದರೆ ತಚಿಕಾವ ನಗುತ್ತಿದ್ದವರನ್ನ ತೀಕ್ಷ್ಣವಾಗಿ ನೋಡ್ತಾ ನನ್ನ ಚಿತ್ರವನ್ನ ಹೊಗಳಿ ಅಟ್ಟಕೇರಿಸಿದರು. ಅವರೇನು ಹೇಳಿದ್ದರೋ ನೆನಪಿಲ್ಲ. ಆದರೆ ಎಂಜಲಿಂದ ಉಜ್ಜಿದ್ದೆನಲ್ಲ ಆ ಜಾಗಗಳ ಬಣ್ಣಗಳ ಬಗ್ಗೆ ಮಾತಾಡಿದ್ದರು.
ನಾವಿಬ್ಬರೂ ಎರಡು ದೇಹ ಒಂದೇ ಜೀವ ಅನ್ನೋ ಹಾಗೆ ಸದಾ ಅಂಟಿಕೊಂಡೆ ಇರ್ತಿದ್ವಿ. ನಮ್ಮ ಬದುಕಿನ ಆ ಕಾಲದ ವಿವರಗಳನ್ನ ಯುಕೆಸ ಬರೆದಿರೋ ಕಾದಂಬರಿಯಲ್ಲಿ ನೋಡಬಹುದು. ಆದರೆ ಯುಕೆಸ ಮತ್ತು ನಾನು ನಮ್ಮದೇ ದೃಷ್ಟಿಕೋನಗಳನ್ನ ಹೊಂದಿದ್ದೆವು. ವ್ಯಕ್ತಿಗಳು ತಮ್ಮನ್ನು ತಾವು ಹೀಗೆ ಇದೀವಿ ಹೀಗೆ ಗ್ರಹಿಸಬೇಕು ಅಂದುಕೋತಾರೆ. ಅವರಿಗೆ ತಾವು ಅದೇತರಹ ಇದೀವಿ ಅಂತ ತಮ್ಮನ್ನ ತಾವು ನಂಬಿಸಿಕೊಳ್ಳುವ ವಿಚಿತ್ರ ಮನೋಭಾವವಿರುತ್ತೆ. ಒಂದುವೇಳೆ ನಮ್ಮ ಬಾಲ್ಯದ ಬಗ್ಗೆ ನಾನು ಬರೆದಿರೋದನ್ನ ಯುಕೆಸ ಬರೆದಿರೋ ಕಾದಂಬರಿಯ ಜೊತೆಯಲ್ಲಿ ಹೋಲಿಸಿದಾಗ ಅವೆರಡೂ ಸತ್ಯಕ್ಕೆ ಹತ್ತಿರವಾಗಿರುತ್ತೆ. ಯುಕೆಸ ತನ್ನ ಬಾಲ್ಯದ ಬಗ್ಗೆ ನನ್ನ ಬಗ್ಗೆ ಬರೆಯದೇ ಹೇಳಕ್ಕಾಗಲ್ಲ ಹಾಗೇ ನಂಗೆ ಅವನ ಬಗ್ಗೆ ಮಾತಾಡದೇ ನನ್ನ ಬಗ್ಗೆ ಬರೆಯೋಕೆ ಆಗಲ್ಲ.
ಕ್ಯುರೊಡ ಪ್ರೈಮರಿ ಸ್ಕೂಲಿನಲ್ಲಿ ವಿದ್ಯಾರ್ಥಿಗಳಾಗಿದ್ದಾಗಿನ ದಿನಗಳಲ್ಲಿನ ನನ್ನ ಮತ್ತು ಯುಕೆಸ ಬಗ್ಗೆ ಬರೆಯೋಕೆ ಹೋದರೆ ನೆನಪಾಗುವುದು ಒಂದು ದೊಡ್ಡ ಭೂಮಿಯ ಚಿತ್ರ. ಅದರಲ್ಲಿ ಎರಡು ಚುಕ್ಕಿಗಳ ಹಾಗೆ ಎರಡು ಪುಟಾಣಿ ಮನುಷ್ಯ ಆಕೃತಿಗಳು. ನಾವಿಬ್ಬರೂ ಸ್ಕೂಲಿನ ಮೈದಾನದಲ್ಲಿದ್ದ ವಿಸ್ತೇರಿಯ ಬಳ್ಳಿಯ ಕೆಳಗೆ ನಿಂತಿದೀವಿ, ಗಾಳಿಗೆ ಹೂವಿನ ಗುಚ್ಛಗಳು ತೂಗಾಡ್ತಿವೆ- ಈ ದೃಶ್ಯ ಕಾಣುತ್ತೆ. ಹತ್ತೊರಿಜಕ ಅಥವಾ ಕಾಗುರಜಕಾ ಬೆಟ್ಟವನ್ನ ಹತ್ತುತ್ತಾ ಇರೋದು ಕಾಣುತ್ತೆ. ಜೆಲ್ಕೊವ ಮರದ ಕೆಳಗೆ ದುಷ್ಟ ಶಕ್ತಿಗಳನ್ನ ದಮನ ಮಾಡಲು ಪೇರಿಸಿಟ್ಟ ಹುಲ್ಲಿನ ಬೊಂಬೆಗಳನ್ನ ಬೆಳಗಿನ ಜಾವ ಎರಡರಿಂದ ನಾಲ್ಕು ಗಂಟೆಯ ಸಮಯದಲ್ಲಿ ದೇವಾಲಯಕ್ಕೆ ಹೋಗೋವಾಗ ನೋಡಿದ ದೃಶ್ಯ ಕಾಣುತ್ತೆ. ಪ್ರತಿ ಸಂದರ್ಭದಲ್ಲೂ ಆಗಿನ ಸುತ್ತಲ ಜಾಗ ಸ್ಪಷ್ಟವಾಗಿ ಹೊಳೆಯುತ್ತೆ ಆದರೆ ಇಬ್ಬರು ಹುಡುಗರು ಮಾತ್ರ ಆ ಹೊಳಪಿನ ಮಧ್ಯೆ ಕಪ್ಪುಚುಕ್ಕೆಗಳಾಗಿ ಮಾತ್ರ ಕಾಣುತ್ತಾರೆ.
ಈ ಭಿನ್ನತೆಯ ಕೊರತೆ ಅದು ನಡೆದದ್ದು ಸಾಕಷ್ಟು ಸಮಯದ ಹಿಂದೆ ಅನ್ನೋ ಕಾರಣಕ್ಕೋ ಅಥವ ನನ್ನ ವ್ಯಕ್ತಿತ್ವದ ಕಾರಣಕ್ಕೋ ಗೊತ್ತಿಲ್ಲ. ಅದೇನೇ ಇರಲಿ ಆ ಇಬ್ಬರು ಹುಡುಗರ ವ್ಯಕ್ತಿತ್ವವನ್ನ ನೆನಪಿಸಿಕೊಳ್ಳಲು ಸ್ವಲ್ಪ ವಿಶೇಷವಾಗಿ ಕಷ್ಟಪಡಬೇಕು. ಅದ್ಹೇಗೆ ಅಂದ್ರೆ ಕ್ಯಾಮೆರಾದಿಂದ ವೈಡ್ ಆ್ಯಂಗಲ್ ಲೆನ್ಸ್ ತೆಗೆದು ಟೆಲಿಫೋಟೋ ಲೆನ್ಸ್ ಹಾಕಿ ಆಮೇಲೆ ವ್ಯೂವ್ ಫೈಂಡರ್ನಲ್ಲಿ ನೋಡಬೇಕು. ಬಹುಶಃ ಇದು ಕೂಡ ಸಾಲೋದಿಲ್ಲವೇನೋ. ಈ ಇಬ್ಬರ ಹುಡುಗರ ಮೇಲೆ ಬೆಳಕನ್ನೆಲ್ಲ ಕೇಂದ್ರಿಕರಿಸಿ ಕ್ಯಾಮೆರಾದಲ್ಲಿ ಈ ಎರಡೂ ಆಕೃತಿಗಳ ಸ್ಪಷ್ಟತೆಯನ್ನ ಹೆಚ್ಚು ಮಾಡೋ ಹಾಗೆ ಅಪಾರ್ಚರ್ ಸೆಟ್ ಮಾಡಿ ಅವರನ್ನ ಸ್ಪಷ್ಟವಾಗಿ ರೆಕಾರ್ಡ್ ಮಾಡಬೇಕು.
ಈಗ ಟೆಲಿಫೋಟೋ ಲೆನ್ಸ್ ಮೂಲಕ ಯೆಕುಸ ಕ್ಯೆನೊಸ್ಯುಕೆನ ನೋಡಿದಾಗ ಅವನು ನನ್ನ ಹಾಗೆ ಕ್ಯುರೊಡ ಪ್ರೈಮರಿ ಸ್ಕೂಲಿನ ಉಳಿದ ಮಕ್ಕಳಿಗಿಂತ ಭಿನ್ನವಾಗಿದ್ದ. ಅವನ ಬಟ್ಟೆಗಳು ಕೂಡ ಭಿನ್ನವಾಗಿತ್ತು: ಅವನೊಂತರ ಸಿಲ್ಕ್ ಬಟ್ಟೆಗಳನ್ನ ಹಾಕ್ಕೋತಿದ್ದ. ಅವನ ಪ್ಯಾಂಟು ಕೂಡ ಮೃದುವಾದ ಬಟ್ಟೆಯಿಂದ ಹೊಲಿದಿರುತ್ತಿತ್ತು. ಅವನೊಂತರ ಈ ಲವರ್ ಬಾಯ್ ಪಾತ್ರ ಮಾಡ್ತಾರಲ್ಲ ಅವರ ಹಾಗೆ ಕಾಣ್ತಿದ್ದ. ಹೇಗೆ ಅಂದ್ರೆ ಒಂದು ಸಲ ಗುದ್ದಿದರೆ ಸಾಕು ಬಿದ್ದುಹೋಗೋನ ಹಾಗಿದ್ದ.
ಒಂದು ಸಲ ಗುದ್ದಿದರೆ ಸಾಕು ಬಿದ್ದುಹೋಗ್ತಿದ್ದ ಅಂತಂದನಲ್ಲ- ಯೆಕುಸ ಯಾವಾಗ ನೋಡಿದ್ರೂ ತೊಪಕ್ಕಂತ ಬೀಳ್ತಿದ್ದ, ಅಳ್ತಿದ್ದ. ಒಂದು ಸಲ ಕೆಟ್ಟ ರಸ್ತೆಯೊಂದರಲ್ಲಿ ಬಿದ್ದು ಅವನ ಬಣ್ಣದ ಬಟ್ಟೆಗಳನ್ನ ಹಾಳುಮಾಡಿಕೊಂಡಿದ್ದು ನಂಗಿನ್ನೂ ನೆನಪಿದೆ. ಅವನು ಅತ್ತುಕೊಂಡು ಮನೆಗೆ ಹೋಗೋವಾಗ ನಾನು ಅವನ ಜೊತೆಯಲ್ಲಿ ಹೋಗಿದ್ದೆ. ಇನ್ನೊಂದು ಸಾರಿ ರನ್ನಿಂಗ್ ರೇಸ್ ಟ್ರ್ಯಾಕ್ ನಲ್ಲಿ ಬಿದ್ದು ಬೆಳ್ಳಗಿದ್ದ ಅವನಿದ್ದ ಅಥ್ಲೆಟಿಕ್ ಬಟ್ಟೆಗಳನ್ನ ಗಲೀಜು ಮಾಡಿಕೊಂಡಿದ್ದ. ಜೋರಾಗಿ ಅಳ್ತಿದ್ದ ಅವನನ್ನ ಸಮಾಧಾನ ಮಾಡೋಕೆ ಟ್ರೈ ಮಾಡಿದ್ದೆ.
ಅದೇನೋ ಅಂತಾರಲ್ಲ ಒಂದೇ ರೀತಿಯ ಹಕ್ಕಿಗಳು ಒಟ್ಟಿಗೆ ಹಾರುತ್ತೆ ಅಂತ ಹಾಗೆ ನಮ್ಮಿಬ್ಬರಲ್ಲೂ ಸಾಮ್ಯತೆಯಿತ್ತು. ಹಾಗಾಗಿ ಒಬ್ಬರಿಗೊಬ್ಬರು ಹತ್ತಿರವಾಗಿ ಒಟ್ಟಿಗೆ ಆಟಆಡ್ತಿದ್ವಿ. ನಿಧಾನವಾಗಿ ನನ್ನಣ್ಣ ನನ್ನ ನಡೆಸ್ಕೋತಿದ್ದ ರೀತಿಯಲ್ಲಿ ನಾನು ಯೆಕುಸಾನ ನಡೆಸಿಕೊಳ್ಳಲು ಶುರುಮಾಡಿದೆ. ನಮ್ಮಿಬ್ಬರ ಸಂಬಂಧ ಹೇಗಿತ್ತು ಅನ್ನೋದನ್ನ ಯೆಕುಸ ಅವನ ಕಾದಂಬರಿಯಲ್ಲಿ ಆ ಟ್ರ್ಯಾಕ್ ಮೀಟ್ ಬಗ್ಗೆ ಬರೀವಾಗ ಹೇಳಿದಾನೆ. ಒಂದು ಸಾರಿ ಯೆಕುಸ ಯಾವಾಗಲೂ ರನ್ನಿಂಗ್ ರೇಸ್ನಲ್ಲಿ ಕಡೆಯವನಾಗಿ ಬರ್ತಿದ್ದವನು ಅದ್ಯಾವ ಕಾರಣಕ್ಕೋ ಗೊತ್ತಿಲ್ಲ ಎರಡನೆಯವನಾಗಿ ಬಿಟ್ಟಿದ್ದ. ನಾನು ಅವನ ಹಿಂದೆ ಓಡಿಹೋಗಿ “ಗುಡ್! ಗುಡ್! ಕಮಾನ್, ಕಮಾನ್!” ಅಂತ ಕೂಗಿದ್ದೆ. ಇಬ್ಬರೂ ಒಟ್ಟಿಗೆ ಓಡಿ ಫಿನಿಶಿಂಗ್ ಲೈನ್ ಮುಟ್ಟಿದ್ವಿ. ಅಲ್ಲಿ ತಚಿಕಾವ ಅವರ ತೆರೆದ ಬಾಹುಗಳೇ ನಮ್ಮ ಫಿನಿಶಿಂಗ್ ಲೈನ್ ಆಗಿತ್ತು.
ಕ್ರೀಡಾಕೂಟ ಮುಗಿದ ಮೇಲೆ ನಾವು ನಮ್ಮ ಬಹುಮಾನ ತೊಗೊಂಡು ಯುಕೆಸಾ ಮನೆಗೆ ಹೋದ್ವಿ. ಕಲರ್ ಪೆನ್ಸಿಲ್ಲೋ ಬಣ್ಣಗಳೋ ಅಥವ ಇನ್ನೆನೋ ಅದನ್ನ ತೊಗೊಂಡು ಹೋದಾಗ ಅವನಮ್ಮ ಹುಷಾರಿಲ್ಲದೆ ಮಲಗಿದ್ದರು. ಆಕೆ ಖುಷಿಯಿಂದ ಅಳ್ತಾ ತಮ್ಮ ಮಗನ ಪರವಾಗಿ ನಂಗೆ ಥ್ಯಾಂಕ್ಸ್ ಹೇಳಿದರು. ಆದರೆ ಈಗ ಹಿಂದೆ ತಿರುಗಿ ನೋಡಿದಾಗ ಅನ್ನಿಸುತ್ತೆ ನಾನವನಿಗೆ “ಥ್ಯಾಂಕ್ಸ್” ಹೇಳಬೇಕು. ಈ ನಿಶ್ಯಕ್ತ ಯುಕೆಸ ನಾನು ಅವನನ್ನ ರಕ್ಷಣೆ ಮಾಡೋ ಹಾಗೆ ಮಾಡಿದ್ದ ಜೊತೆಗೆ ಅದೇ ಸಮಯದಲ್ಲೇ ಸ್ಕೂಲಿನಲ್ಲಿ ಯಾರೂ ಹಿಂದೆ ತಳ್ಳಕ್ಕೆ ಆಗದಂತಹ ಗೂಳಿ ತರಹ ನಾನು ಬದಲಾಗಿದ್ದೆ.
ತಚಿಕಾವ ಅವರಿಗೆ ನಮ್ಮ ಗೆಳೆತನದ ಬಗ್ಗೆ ಅಭಿಮಾನವಿತ್ತು ಅಂತ ಕಾಣುತ್ತೆ. ಅವರು ಒಂದು ಸಲ ಕ್ಲಾಸಿನ ಪ್ರೆಸಿಡೆಂಟ್ ಆಗಿದ್ದ ನನ್ನ ಕನ್ಸಲ್ಟೇಷನ್ ರೂಮಿಗೆ ಬರಲು ಹೇಳಿದರು. ಮತ್ತೊಬ್ಬ ವೈಸ್ ಪ್ರೆಸಿಡೆಂಟ್ ನ ನೇಮಿಸಿದರೆ ಹೇಗೆ ಅಂತ ನನ್ನ ಕೇಳಿದರು. ನಾನೆಲ್ಲೋ ಸರಿಯಾಗಿ ಕೆಲಸ ಮಾಡ್ತಿಲ್ಲ ಅನ್ನಿಸುತ್ತೆ ಅದಕ್ಕೆ ಹೇಳ್ತಿದಾರೆ ಅಂತನ್ನಸಿ ಸುಮ್ಮನೆ ನಿಂತಿದ್ದೆ. ತಚಿಕಾವ ನನ್ನ ಮನಸ್ಸನ್ನು ಗ್ರಹಿಸಿ ಯಾರನ್ನ ನೇಮಿಸೋಣ ಹೇಳು ಅಂದರು. ನಾನು ನಮ್ಮ ತರಗತಿಯ ಅತ್ಯುತ್ತಮ ವಿದ್ಯಾರ್ಥಿಯೊಬ್ಬನ ಹೆಸರು ಹೇಳಿದೆ. ತಚಿಕಾವ ನಂಗೆ ಅಷ್ಟು ಬುದ್ಧಿವಂತ ಹುಡುಗ ಬೇಡ ಅವನಿಗಿಂತ ಸಾಧಾರಣವಾಗಿರೋನು ಬೇಕು ಅಂದರು. ನಾನು ಆಶ್ಚರ್ಯದಿಂದ ಅವರ ಕಡೆ ನೋಡಿದೆ. ಅವರು ನಗುತ್ತಾ ನಾವೀಗ ಒಬ್ಬ ಸಾಧಾರಣ ಹುಡುಗನಿಗೆ ಈ ಕೆಲಸ ಕೊಟ್ಟರೆ ಅವನು ಮುಂದುವರೆದು ತನ್ನ ಸಾಮರ್ಥ್ಯವನ್ನು ಬೆಳೆಸ್ಕೋತಾನೆ ಅಂತ ಹೇಳಿದರು. ನನ್ನ ಕ್ಲಾಸ್ ಮೇಟ್ಸ್ ಕರೀತಿದ್ದ ಹಾಗೆ “ಹಾಗಾದ್ರೆ ಕುರೊ ಚಾನ್ ಯೆಕುಸನನ್ನ ವೈಸ್ ಪ್ರೆಸಿಡೆಂಟ್ ಮಾಡಿದ್ರೆ ಹೇಗೆ?” ಅಂತ ಕೇಳಿದರು. ಆಗಲೇ ನಂಗೆ ತಾಕಿಕೊವ ಅವರು ನಮ್ಮ ಬಗ್ಗೆ ಇಟ್ಟುಕೊಂಡಿದ್ದ ಅಭಿಮಾನದ ಅರಿವಾಗಿದ್ದು. ಭಾವುಕನಾಗಿ ಅವರನ್ನೇ ನೋಡ್ತಾ ನಿಂತುಬಿಟ್ಟೆ. “ಸರಿ ಹಾಗಿದ್ರೆ. ಈ ವಿಷ್ಯ ನಿರ್ಧಾರವಾಯ್ತು” ಅಂತಂದು ನನ್ನ ಹೆಗಲು ತಟ್ಟಿ ಹೋಗಿ ಯೆಕುಸಾನ ಅಮ್ಮನಿಗೆ ಹೇಳು ಅಂದರು. ಅವರಿಗೆ ಗೊತ್ತಿತ್ತು ಆಕೆಗೆ ತುಂಬ ಖುಷಿಯಾಗುತ್ತೆ ಅಂತ. ಅವರು ನಡೆದು ಹೋಗ್ತಿರಬೇಕಾದರೆ ಅವರ ತಲೆಯ ಸುತ್ತ ಪ್ರಭಾವಳಿ ಇರೋ ಹಾಗೆ ಕಾಣ್ತಿತ್ತು.
ಆವತ್ತಿನಿಂದ ಯೆಕುಸ ಸಿಲ್ವರ್ ಬ್ಯಾಡ್ಜ್ ಮತ್ತು ಕೆಂಪು ರಿಬ್ಬನ್ ಧರಿಸುತ್ತಿದ್ದ. ಕ್ಲಾಸ್ ಒಳಗೆ ಮತ್ತು ಹೊರಗೆ ಅವನು ಯಾವಾಗಲೂ ನನ್ನ ಜೊತೆಯಲ್ಲೇ ಇರುತ್ತಿದ್ದ. ಕ್ಲಾಸಿಗೆ ಅವನು ಕ್ಷಣ ಮಾತ್ರದಲ್ಲಿ ವೈಸ್ ಪ್ರೆಸಿಡೆಂಟ್ ಆಗಿಬಿಟ್ಟ. ಅದ್ಹೇಗೆ ಅಂದರೆ ಮೊದಲೇ ಕುಂಡದಲ್ಲಿ ಹಾಕಿಟ್ಟಿದ್ದ ವೈಸ್ ಪ್ರೆಸಿಡೆಂಟ್ ಅನ್ನೋ ಗಿಡವನ್ನ ಸೂರ್ಯನ ಬೆಳಕಿಗೆ ತಂದಿಟ್ಟ ಹಾಗೆ. ಅವನು ಅರಳಲು ಆರಂಭಿಸಿದ. ತಚಿಕಾವ ಅವನನ್ನ “ಸಾಧಾರಣ” ಅಂತ ನಿರಾಕರಿಸುವಂತೆ ಹೇಳಿದರು ಅಂತನ್ನಿಸಿದರೂ ನನಗನ್ನಿಸಿದ್ದು ನಿಜವಾಗಿ ಅವರು ಅವನೊಳಗಿನ ಪ್ರತಿಭೆಯನ್ನ ಗುರುತಿಸಿದ್ದರು.
ಕನ್ನಡ ಉಪನ್ಯಾಸಕಿ.ಇಂಗ್ಲೀಷ್ ಹಾಗೂ ಹಿಂದಿಯಿಂದ ಲೇಖನ, ಕತೆ ಹಾಗೂ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಅನುವಾದಗಳು ಹಲವು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಇರಾನಿನ ಚಲನಚಿತ್ರ ನಿರ್ದೇಶಕ ಅಬ್ಬಾಸ್ ಕಿರಸ್ತೋಮಿಯ ಕಿರುಪದ್ಯಗಳ ಅನುವಾದ ‘ಹೆಸರಿಲ್ಲದ ಹೂ’ ಪ್ರಕಟಿತ ಸಂಕಲನ..