ಆಧುನಿಕ ಖಗೋಳ ವಿಜ್ಞಾನ ಪ್ರಾರಂಭವಾದದ್ದು ನಾಲ್ಕುನೂರು ವರ್ಷಗಳಷ್ಟು ಹಿಂದೆ. ತನ್ನ ಸಿದ್ಧಾಂತಗಳಿಂದ, ಉಪನ್ಯಾಸಗಳಿಂದ ರೂಢಮೂಲ ಪರಿಕಲ್ಪನೆಗಳನ್ನು ಬುಡಮೇಲು ಮಾಡುತ್ತಿದ್ದ ಜಗಳಗಂಟ ಎಂದೇ ಪ್ರಖ್ಯಾತನಾದ, ಇಟಲಿಯ ಭೌತ ಮತ್ತು ಗಣಿತವಿದ ಗೆಲಿಲಿಯೋ ಗೆಲಿಲಿ (೧೫೬೪-೧೬೪೨) ದೂರದರ್ಶಕವೆಂಬ ಹೊಸದೊಂದು ಉಪಕರಣವನ್ನು ನಿರ್ಮಿಸಿದಂದಿನಿಂದ. ತಾನು ಉಪಜ್ಞಿಸಿದ (invented) ಉಪಕರಣದಿಂದ ಬಾನಿನ ಅಂತರಾಳವನ್ನು ಗಮನಿಸಿದ. ಆಗ ಅವನ ಮುಂದೆ ಕಂಡದ್ದು ಅದ್ಭುತ ಲೋಕ. ವಿಶ್ವದ ಕುರಿತಾಗಿ ನವ ದೃಷ್ಟಿ.

ಗೆಲಿಲಿಯೋನಿಗೆ ಒಬ್ಬ ಸ್ನೇಹಿತನಿದ್ದ. ಅವನ ಹೆಸರು ಜೊಹಾನೆಸ್ ಕೆಪ್ಲರ್(೧೫೭೧ – ೧೬೩೦). ಜರ್ಮನಿಯ ಖಗೋಳ ವಿಜ್ಞಾನಿ. ಸೂರ್ಯನ ಸುತ್ತ ಭೂಮಿ ಸೇರಿದಂತೆ ಗ್ರಹ ಉಪಗ್ರಹಗಳು ದೀರ್ಘ ವೃತ್ತಾತ್ಮಕ ಕಕ್ಷೆಗಳಲ್ಲಿ (elliptical orbits) ಪರಿಭ್ರಮಿಸುತ್ತವೆಂದು ನಿರೂಪಿಸಿದವನು ಕೆಪ್ಲರ್. ತನ್ನ ಪರಿಕಲ್ಪನೆಗಳನ್ನು ಮತ್ತು ಸಿದ್ಧಾಂತಗಳನ್ನು ಒಟ್ಟೈಸಿದ ಆಸ್ಟ್ರೋನಾಮಿಯಾ ನೋವಾ (Astronomia Nova) ಎಂಬ ಗ್ರಂಥವನ್ನು ಲೋಕಾರ್ಪಣ ಮಾಡಿದ್ದು ಕೂಡ ೧೬೦೯ರಲ್ಲಿ.

ಈ ಎಲ್ಲ ಐತಿಹಾಸಿಕ ಸಂಶೋಧನೆಗಳ ಸ್ಮರಣೆಗಾಗಿ ೨೦೦೯ ಅನ್ನು ಜಾಗತಿಕ ಖಗೋಳ ವಿಜ್ಞಾನ ವರ್ಷವೆಂದು ಸಂಭ್ರಮದಿಂದ ಆಚರಿಸಲು ಜಾಗತಿಕ ಖಗೋಳ ವಿಜ್ಞಾನ ಸಂಸ್ಥೆ (International Astronomical Union -IAU) ಮತ್ತು ಯುನೆಸ್ಕೊ (United Nations Educational, Scientific and Cultural Organization -UNESCO)
ನಿರ್ಧರಿಸಿವೆ.

ವಿಶ್ವದ ಕೇಂದ್ರ 

ಇಡೀ ವಿಶ್ವದ ಕೇಂದ್ರ ಭೂಮಿ ಮತ್ತು ಭೂಮಿಯ ನಿಯಂತ್ರಣಕ್ಕೊಳಪಟ್ಟೇ ಎಲ್ಲವೂ ನಡೆಯುತ್ತಿದೆ ಎಂದು ಭಾವಿಸಿದ ಕಾಲವೊಂದಿತ್ತು. ಇದು ತಪ್ಪೇನೂ ಅಲ್ಲ. ಇಂದು ನಮಗೆ ಗೋಚರಿಸುವುದು ಕೂಡ ಅದೇ ರೀತಿಯೇ. ದಿನನಿತ್ಯವೂ ಪೂರ್ವಾಕಾಶದಲ್ಲಿ ಮೂಡುವ ಸೂರ್ಯ, ಪಶ್ಚಿಮದ ಕಡೆಗೆ ಸರಿಯುತ್ತಾನೆ. ಮಧ್ಯಾಹ್ನದ ಹೊತ್ತು ನಡು ನೆತ್ತಿಯಲ್ಲಿ ಪ್ರಖರವಾಗಿ ಕೋರೈಸಿ, ಸಂಜೆಯ ಹೊತ್ತಿಗೆ ಪಶ್ಚಿಮ ದಿಗಂತದಲ್ಲಿ ಕಂತುತ್ತಾನೆ. ಆದೇ ಹೊತ್ತಿಗೆ ಮತ್ತೆ ಪೂರ್ವಾಕಾಶದಲ್ಲಿ ಯಾವುದೋ ಇನ್ನೊಂದು ನಕ್ಷತ್ರಪುಂಜ ಅಥವಾ ಗ್ರಹ ಮೂಡುತ್ತದೆ. ಇರುಳು ಕಳೆದಂತೆ ಪಶ್ಚಿಮದೆಡೆಗೆ ಇವುಗಳ ಮೆರವಣಿಗೆ ಸಾಗುತ್ತದೆ. ಅಂದರೆ ಹಗಲಿನಲ್ಲಿ ಸೂರ್ಯ ಮತ್ತು ರಾತ್ರಿ ಹೊತ್ತು ಎಲ್ಲ ಗ್ರಹ-ನಕ್ಷತ್ರಗಳು ಭೂಮಿ ಸುತ್ತ ಸುತ್ತುತ್ತಿರುವಂತೆ ಭಾಸವಾಗುತ್ತದೆ. ನಾವು ಇವೆಲ್ಲದರ ನಡುವೆ ಇದ್ದಂತೆ ಮತ್ತು ಭೂಮಿ ಇವೆಲ್ಲವನ್ನು ನಿಯಂತ್ರಿಸಿದಂತೆ ಅನಿಸುತ್ತದೆ. ಇಂಥ ಅನಿಸಿಕೆಯೇ ಭೂಮಿ ವಿಶ್ವದ ಕೇಂದ್ರ ಎಂಬ ಸಿಧ್ಧಾಂತದ ಮಂಡನೆಗೆ ಕಾರಣವಾಯಿತು. ಇಂಥದೊಂದು ಊಹೆಯನ್ನು ಪ್ರಚಾರಕ್ಕೆ ತಂದವನು ಜಗತ್ತು ಕಂಡ ಶ್ರೇಷ್ಠ ತತ್ವಜ್ಞಾನಿ, ಗ್ರೀಸಿನ ಅರಿಸ್ಟಾಟಲ್ (ಕ್ರಿ.ಪೂ ೩೮೪-೩೨೨). ಈತ  ಪ್ಲೇಟೋನ(ಕ್ರಿಪೂ ೪೨೮-೩೪೭) ಶಿಷ್ಯ, ಚಕ್ರವರ್ತಿ ಅಲೆಗ್ಸಾಂಡರಿನ (ಕ್ರಿಪೂ ೩೫೬ -೩೨೩) ಗುರು. ತತ್ವಶಾಸ್ತ್ರ, ಭೌತ ಶಾಸ್ತ್ರ, ಜೀವ ಶಾಸ್ತ್ರ, ಭೂಗರ್ಭಶಾಸ್ತ್ರ ಹೀಗೆ ಆ ದಿನಗಳಲ್ಲಿ ಮುಂಚೂಣಿಯಲ್ಲಿದ್ದ ಎಲ್ಲ ಜ್ಞಾನದ ಶಾಖೆಗಳನ್ನು ಸ್ವಾಂಗೀಕರಿಸಿಕೋಂಡ ಮೇಧಾವಿ.

ಅರಿಸ್ಟಾಟಲ್ ಹೇಳುವಂತೆ ವಿಶ್ವ ಎಂಬುದೊಂದು ಪಾರದರ್ಶಕವಾದ ಮಹಾ ಗೋಳ. ಗೋಳದ ಕೇಂದ್ರದಲ್ಲಿ ಭೂಮಿ ಮತ್ತು ನಕ್ಷತ್ರಗಳೆಲ್ಲ ಗೋಳದ ಒಳ ಭಾಗಕ್ಕೆ ಅಂಟಿಕೊಂಡು ಇಡೀ ಗೋಳ ನಿಧಾನವಾಗಿ ಭೂಮಿ ಸುತ್ತ ತಿರುಗುತ್ತಿದೆ. ಈ ಭ್ರಮಣೆಯಲ್ಲಿ ಸ್ವರ್ಗೀಯ ಸಂಗೀತ ಹೊಮ್ಮುತ್ತದೆ. ಅದು ಕೇಳಿಸುವುದು ಪಾವನಾತ್ಮಜರಿಗೆ ಮಾತ್ರ! ನಿತ್ಯದ ಅನುಭವಕ್ಕೆ ಅನುಭಾವದ ಮಣೆ.

ಅರಿಸ್ಟಾಟಲನ ವಿಶ್ವಕ್ಕೂ ಧಾರ್ಮಿಕ ಗ್ರಂಥಗಳಲ್ಲಿ ಉಕ್ತವಾದ ವಿಶ್ವದ ಪರಿಕಲ್ಪನೆಗೂ ಸಾಕಷ್ಟು ಸುಸಾಂಗತ್ಯವಿತ್ತು. ಮೇಲಾಗಿ ಅರಿಸ್ಟಾಟಲ್ ಮಹಾನ್ ತತ್ವವಿದ. ಆತ ಹೇಳಿದ ಭೂಮಿಯೇ ವಿಶ್ವದ ಕೇಂದ್ರ ಎಂಬ ಪರಿಕಲ್ಪನೆ ಜನಮಾನ್ಯತೆಯನ್ನು ಪಡೆಯಿತು. ನಿಜ, ಇಂಥ ಕಲ್ಪನೆ ನಮಗೆ ಹೆಚ್ಚು ಆಪ್ಯಾಯಮಾನವಾಗುತ್ತದೆ. ಅಯಾಚಿತವಾಗಿ ಪ್ರಭು ಸ್ಥಾನ ಲಭ್ಯವಾದರೆ ಯಾರಿಗೆ ಬೇಡ?

ವಿಜ್ಞಾನ ಇತಿಹಾಸಕಾರ ಡ್ರೇಯರ್ ಹೇಳುವಂತೆ ಭೌತ ವಿಜ್ಞಾನದ ಮೂಲ ತತ್ವಗಳನ್ನು ಅನ್ವೇಷಿಸಿ ನೈಸರ್ಗಿಕ ವಿದ್ಯಮಾನಗಳನ್ನು ವಿವರಿಸುವಾಗ ರೂಢಿಯಲ್ಲಿರುವ ಅತಿ ಸಾಮಾನ್ಯ ಪರಿಕಲ್ಪನೆಗಳನ್ನೇ ಬಳಸಿಕೊಂಡದ್ದು ಅರಿಸ್ಟಾಟಲ್ ಮಾಡಿದ ದೊಡ್ಡ ತಪ್ಪು. ಹಾಗಾಗಿ ಆತನ ತೀರ್ಮಾನಗಳು ಸಂಪ್ರದಾಯ ಶರಣರು ಏನು ನಿರೀಕ್ಷಿಸುತ್ತಿದ್ದರೋ ಅದಕ್ಕೆ ಸರಿಯಾಗಿಯೇ ಇದ್ದುವು. ದುರದೃಷ್ಟದಿಂದ ಇಂಥ ತಪ್ಪು ಸಿದ್ಧಾಂತಗಳು ಮುಂದೆ ಸಾವಿರ ವರ್ಷಗಳ ಕಾಲ ಅಬಾಧಿತವಾಗಿ ಮುಂದುವರಿದು ಕೋಪರ್ನಿಕಸ್ ಮತ್ತು ಗೆಲಿಲಿಯೋ ದಿನಗಳ ತನಕವೂ ವಿಜ್ಞಾನದ ಬೆಳವಣಿಗೆಯನ್ನು ಕುಂಠಿತಗೊಳಿಸಿದುವು

ಹೊಸತನದ ಹರಿಕಾರ ಕೊಪರ್ನಿಕಸ್

ಅರಿಸ್ಟಾಟಲ್ ಮತ್ತಿತರ ಗ್ರೀಕ್ ವಿದ್ವಾಂಸರು ಸೂಚಿಸಿದ ವಿಶ್ವರಚನೆ ಅತ್ಯಂತ ಸಂಕೀರ್ಣವಾಗಿತ್ತು. ಹಾಗಾಗಿ ಅರಿಸ್ಟಾಟಲ್ ಬಳಿಕ ಬಂದ ಗ್ರೀಕ್ ಖಗೋಳವಿದ ಅರಿಸ್ಟಾರ್ಕಸ್ (೩೧೦-೨೩೦) ಹೊಸದೊಂದು ಊಹೆಯನ್ನು ಮಂಡಿಸುವ ಧೈರ್ಯ ಮಾಡುತ್ತಾನೆ. ನಕ್ಷತ್ರಗಳು ಮತ್ತು ಸೂರ್ಯ ನಿಶ್ಚಲ. ಭೂಮಿ ಸೂರ್ಯನಿಗೆ ವೃತ್ತಾಕಾರದ ಪಥದಲ್ಲಿ ಪ್ರದಕ್ಷಿಣೆ ಬರುತ್ತಿದೆ. ಸೂರ್ಯ ವಿಶ್ವದ ಕೇಂದ್ರ ಸ್ಥಾನದಲ್ಲಿದೆ ಎಂದು ಆತ ಘೋಷಿಸಿದ. ಜನಜನಿತ ನಂಬಿಕೆಗಳಿಗೆ ತದ್ವಿರುದ್ಧವಾದ ಸೂರ್ಯ ಕೇಂದ್ರ ಸಿಧ್ಧಾಂತ ಜನಮನ್ನಣೆ ಗಳಿಸಲೇ ಇಲ್ಲ. ಇಟಲಿಯ ಖಗೋಳವಿದ ಪ್ಲುಟೋರ್ಕ್ (ಕ್ರಿ.ಶ ೫೦-೧೨೫) ಕೂಡ ಅರಿಸ್ಟಾರ್ಕಸ್ ನನ್ನು ಬೆಂಬಲಿಸಿದರೂ, ಅವನ ವಾದಗಳು ಮೂಲೆಗುಂಪಾದುವು.

ಈ ನಡುವೆ, ನಾಗರೀಕತೆ ಉಗಮವಾದಂದಿನಿಂದ ವಿಶ್ವದ ರಚನೆ ಬಗ್ಗೆ ಬೆಳೆದು ಬಂದ ಪರಿಕಲ್ಪನೆಗಳನ್ನು ಕ್ರೋಢೀಕರಿಸಿ ಅಲ್ಮಾಜೆಸ್ಟ್ ಎಂಬ ಬೃಹತ್ ಗ್ರಂಥವನ್ನು ಈಜಿಪ್ಟಿನ ಖಗೋಳವಿದ ಟಾಲೆಮಿ (೧೨೭-೧೪೧) ರಚಿಸಿದ. ಖಗೋಳಶಾಸ್ತ್ರಜ್ಞರಿಗೆ ನೂರಾರು ವರ್ಷಗಳ ಕಾಲ ಮುಖ್ಯ ಆಕರ ಗ್ರಂಥವಾಗಿದ್ದ ಆಲ್ಮಾಜೆಸ್ಟಿನಲ್ಲಿ ಭೂಮಿ ವಿಶ್ವದ ಕೇಂದ್ರದಲ್ಲಿದೆ ಮತ್ತು ಎಲ್ಲ ಗ್ರಹ ನಕ್ಷತ್ರಗಳು ಇದರ ಸುತ್ತ ಸುತ್ತುತ್ತಿವೆ ಎನ್ನುವ ವಾದವನ್ನು ಟಾಲೆಮಿ ಪ್ರತಿಪಾದಿಸಿದ. ಇದರೊಂದಿಗೆ ಬೇರೆ ಬೇರೆ ಕವಿಗಳು, ನಾಟಕಗಾರರು ಕೂಡ ಟಾಲೆಮಿಯನ್ನು ಬೆಂಬಲಿಸಿದರು. ಪರಿಣಾಮವಾಗಿ ಭೂಮಿ ವಿಶ್ವದ ಕೇಂದ್ರ ಎಂಬ ಪರಿಕಲ್ಪನೆ ಭದ್ರವಾಗಿ ಬೇರೂರಿತು. ಮುಂದೆ ಸುಮಾರು ಸಾವಿರ ವರ್ಷಗಳ ತನಕವೂ ಈ ಪರಿಕಲ್ಪನೆಗೆ ಬರಲಿಲ್ಲ  ಚ್ಯುತಿ!

ಈ ಅವಧಿಯಲ್ಲಿ – ಅಂದರೆ ಎರಡನೇ ಶತಮಾನದಿಂದ ಹನ್ನೆರಡನೇ ಶತಮಾನದ ತನಕ – ವೈಜ್ಞಾನಿಕ ಪ್ರಗತಿಯಿಂದ ಹಿಡಿದು, ಎಲ್ಲ ರೀತಿಯ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಒಂದು ಬಗೆಯಲ್ಲಿ ಸ್ತಬ್ದವಾದುವು. ನಾಗರೀಕತೆಯ ಬೆಳವಣಿಗೆಯಲ್ಲಿ ಕತ್ತಲೆಯ ಯುಗ (Dark Age) ಎಂದು ಇತಿಹಾಸಕಾರರು ಕರೆಯುವ ಈ ಕಾಲದಲ್ಲಿ ಯುರೋಪಿನಾದ್ಯಂತ ಧಾರ್ಮಿಕ ಮೂಲಭೂತವಾದ ಪರಾಕಾಷ್ಠೆಗೆ ತಲುಪಿತು. ವಿಶ್ವ ರಂಗಸ್ಥಳದಲ್ಲಿ ಭೂಮಿಯ ಸ್ಥಾನ-ಮಾನದ ಬಗ್ಗೆ ದನಿ ಎತ್ತಿದವರನ್ನು ಪಾಷಾಂಡಿ ಅಥವಾ ಧರ್ಮ ಲಂಡ ಎಂದು ಕರೆದು ತೀವ್ರ ದಂಡನೆಗೆ ಒಳಪಡಿಸುವ ಪ್ರವೃತ್ತಿ ಹೆಚ್ಚಿತು. ಗ್ರೀಕಿನ ಹೈಪೇಟಿಯಾ ಎಂಬ ಗಣಿತಶಾಸ್ತ್ರಜ್ಞೆಯನ್ನು ನಗ್ನಗೊಳಿಸಿ ಕಲ್ಲು ಹೊಡೆದು ಬರ್ಬರವಾಗಿ ಹತ್ಯೆ ಮಾಡುವ ಮಟ್ಟಿಗೂ (ಕ್ರಿ.ಶ.೪೧೫).

ಆದರೆ ನಿಸರ್ಗದ ಸತ್ಯವನ್ನು ಎಷ್ಟು ಕಾಲ ಮುಚ್ಚಿಡಲಾದೀತು. ಕತ್ತಲೆಯ ಯುಗ ಸರಿದು ಬೆಳಕು ನಿಧಾನವಾಗಿ ಮತ್ತೆ ಬರಲಾರಂಭಿಸಿತು. ಆ ಹಣತೆ ಬಂದದ್ದು ಪೋಲೆಂಡ್ ಸಂಜಾತ, ಖಗೋಳವಿದ ನಿಕೊಲಸ್‌ ಕೊಪರ್ನಿಕಸ್ (೧೪೭೩-೧೫೪೩) ರೂಪದಲ್ಲಿ. ಧಾರ್ಮಿಕ ನಂಬುಗೆಯ ಪರಿಸರದಲ್ಲಿ ಹುಟ್ಟಿದರೂ, ಧಾರ್ಮಿಕ ನಂಬಿಕೆಗಳ ಕಟ್ಟುಪಾಡುಗಳನ್ನು ಮೀರಿ ನಿಂತ ಚಿಂತನಶೀಲ. ಆಕಾಶದಲ್ಲಿ ಗ್ರಹಗಳ ಚಲನೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದ ಅವನಿಗೆ ಅರಿಸ್ಟಾಟಲ್ ಮತ್ತು ಟಾಲೆಮಿ ಸಿದ್ಧಾಂತ ತಪ್ಪೆಂದು ಅರಿವಾಯಿತು. ತನ್ನೆಲ್ಲ ಚಿಂತನೆಗಳು ಹರಳುಗಟ್ಟಿದ “De Revolutionibus Orbium Colestium” (ಆಕಾಶಕಾಯಗಳ ಪರಿಭ್ರಮಣೆ) ಎನ್ನುವ ತನ್ನ ಗ್ರಂಥವನ್ನು ಗೆಳೆಯರ ಒತ್ತಾಯಕ್ಕೆ ಮಣಿದು ಪ್ರಕಟಿಸುವ ಕಾಲಕ್ಕೆ (೧೫೪೩) ಕೊಪರ್ನಿಕಸ್ ಮರಣದಂಚಿನಲ್ಲಿದ್ದ.

ಇಂದು ತೀರ ಸಹಜವೆಂದೇ ಒಪ್ಪಿಕೊಂಡಿರುವ ಸತ್ಯವನ್ನು ಕೋಪರ್ನಿಕಸ್ ಆ ಗ್ರಂಥದಲ್ಲಿ ಹೇಳುವ ಧೈರ್ಯ ಮಾಡಿದ. ಚಲಿಸುತ್ತಿರುವ ಕಾಯಗಳಲ್ಲಿ ಶನಿ ಮೂವತ್ತು ವರ್ಷಗಳಲ್ಲಿ ಒಂದು ಪರಿಭ್ರಮಣೆ ಮಾಡುತ್ತಾನೆ. ಅವನ ನಂತರ ಬರುವ ಗುರು ಹನ್ನೆರಡು ವರ್ಷಗಳಲ್ಲಿ ತನ್ನ ಒಂದು ಪರಿಭ್ರಮಣೆಯನ್ನು ಮುಗಿಸುತ್ತಾನೆ. ಎರಡು ವರ್ಷಗಳಲ್ಲಿ ಕುಜ (ಮಂಗಳ) ಒಂದು ಸುತ್ತು ಬರುತ್ತಾನೆ. ಆ ನಂತರದ ಸರದಿ ನಮ್ಮ ಭೂಮಿಗೆ. ವರ್ಷದಲ್ಲಿ ಒಂದು ಪರಿಭ್ರಮಣೆಯನ್ನು ಮುಗಿಸುತ್ತಾಳೆ ಮತ್ತು ಭೂಮಿ ಸುತ್ತ ಚಂದ್ರ ಪರಿಭ್ರಮಿಸುತ್ತಾನೆ. ಐದನೇಯ ಸ್ಥಾನ ಶುಕ್ರನಿಗೆ – ಒಂದು ಪರಿಭ್ರಮಣೆಗೆ ಒಂಬತ್ತು ತಿಂಗಳು ಬೇಕಾಗುತ್ತದೆ. ಆರನೇಯ ಸ್ಥಾನದಲ್ಲಿರುವ ಬುಧ ಪ್ರತಿ ಎಂಬತ್ತು ದಿನಗಳಲ್ಲಿ ಒಂದು ಪರಿಭ್ರಮಣೆ ಮುಗಿಸುತ್ತಾನೆ. ಇಡೀ ವ್ಯವಸ್ಥೆಯ ಕೇಂದ್ರದಲ್ಲಿ ಹೊಳೆವ ಸೂರ್ಯನಿದ್ದಾನೆ. ಅತ್ಯಂತ ಸುಂದರವಾದ ವ್ಯವಸ್ಥೆಯ ಈ ದೇವಾಲಯದ ಕೇಂದ್ರದಲ್ಲಿ ಎಲ್ಲರಿಗೆ ಏಕಕಾಲದಲ್ಲಿ ಬೆಳಕು ನೀಡುತ್ತಿರುವುದಕ್ಕೆ ಸೂರ್ಯನನ್ನು ಬಿಟ್ಟರೆ ಮತ್ತಿನ್ನು ಯಾರಿರಬಹುದು? ಕೆಲವರು ಇವನನ್ನು ವಿಶ್ವಕ್ಕೆ ಬೆಳಕನ್ನು ನೀಡುವ ದೇವರೆಂದರೆ, ಇನ್ನು ಕೆಲವರು ವಿಶ್ವ ನಿಯಾಮಕನೆನ್ನುತ್ತಾರೆ. ಆದರೆ ಒಂದಂತೂ ನಿಜ – ಎಲ್ಲವನ್ನು ನಿಯಂತ್ರಿಸುವ ಘನ ಸ್ಥಾನದಲ್ಲಿ ಸೂರ್ಯ ಮತ್ತು ಅವನ ಸುತ್ತ ಸುತ್ತುತ್ತಿರುವ ಗ್ರಹ ಮತ್ತು ನಕ್ಷತ್ರಗಳಿವೆ. ಇಂಥ ವ್ಯವಸ್ಥೆಯಲ್ಲಿ ವಿಶ್ವದ ಪರಮಾಅದ್ಭುತ ಸಮ್ಮಿತಿ (symmetery) ಗೋಚರಿಸುತ್ತದೆ.

ಕೊಪರ್ನಿಕಸ್ ಕಾಲದಲ್ಲಿ ವೈಚಾರಿಕತೆಯನ್ನು ಬರ್ಬರವಾಗಿ ದಮನಿಸುವ ಪ್ರವೃತ್ತಿ ಇನ್ನಷ್ಟು ತೀವ್ರ ಸ್ವರೂಪ ಪಡೆಯಿತು. ಇಟಲಿಯಲ್ಲಿ ಗಿಯೋರ್ಡಾನೋ ಬ್ರುನೋ (೧೫೪೮-೧೬೦೦) ಎನ್ನ್ನುವ ತತ್ವವಿದನಿದ್ದ. ವೈಚಾರಿಕ ಸ್ವಾತಂತ್ರ್ಯದ ಪ್ರಬಲ ವಕ್ತಾರ. ವಿಶ್ವವೆನ್ನುವುದು ಅನಂತ. ಭೂಮಿ ಇರುವುದು ಸೂರ್ಯ ಕೇಂದ್ರವಾಗಿರುವ ವಿಶ್ವದಲ್ಲಿ. ಇಂಥ ಹಲವು ವಿಶ್ವಗಳಿವೆ ಎಂದು ಪ್ರಚಾರ ಮಾಡಿದ ಅವನನ್ನು ಬಂಧಿಸಿದ ಧಾರ್ಮಿಕ ಉಗ್ರಗಾಮಿಗಳು ೧೬೦೦ ಫೆಬ್ರವರಿ ೧೭ರಂದು ಸಜೀವವಾಗಿ ದಹನಗೊಳಿಸಿದರು.

ಹೊಸ ದೃಷ್ಟಿ

ಅದಾಗಲೇ ಹರುಕು ಮುರುಕಾಗಿದ್ದ ಭೂಕೇಂದ್ರ ಸಿದ್ಧಾಂತಕ್ಕೆ ಕೊನೆಯ ಪ್ರಹಾರ ನೀಡಲು ವೇದಿಕೆ ಸಿದ್ಧವಾಗಿತ್ತು. ಈ ಕಾಲದಲ್ಲಿ ರಂಗ ಪ್ರವೇಶಿಸಿದವನು ಇಟೆಲಿಯ ಗೆಲಿಲಿಯೋ ಗೆಲಿಲಿ.   ಭೌತ ಮತ್ತು ಖಗೋಳ ವಿಜ್ಞಾನದಲ್ಲಿ ಪ್ರಾಯೋಗಿಕತೆಯನ್ನು ಸಮರ್ಥವಾಗಿ ಅಳವಡಿಸಿದವರಲ್ಲಿ ಈತ ಮೊದಲಿಗ.

ಗೆಲಿಲಿಯೋ ಜನಿಸಿದ್ದು ಇಟಲಿಯ ಪೀಸಾದಲ್ಲಿ ಫೆಬ್ರವರಿ ೧೮, ೧೫೬೪ರಂದು. ಅದು ಮಹಾನ್ ಶಿಲ್ಪಿ ಮೈಕೆಲ್ ಎಂಜೆಲೋ ನಿಧನ ಹೊಂದಿದ ವರ್ಷ, ಭವಿಷ್ಯದ ಶ್ರೇಷ್ಠ ಸಾಹಿತಿ ಶೇಕ್ಸ್ ಪಿಯರ್ ಜನಿಸಿದ ವರ್ಷ! ಮನೆ ಮಂದಿಯ ಒತ್ತಾಯಕ್ಕೆ ವೈದ್ಯ ಶಾಸ್ತ್ರವನ್ನು ಕಲಿಯಲು ಹೋದ ಗೆಲಿಲಿಯೋ, ಗಣಿತಶಾಸ್ತ್ರ ಉಪನ್ಯಾಸವೊಂದರಿಂದ ಪ್ರಭಾವಿತನಾಗಿ, ವೈದ್ಯಶಾಸ್ತ್ರವನ್ನು ತ್ಯಜಿಸಿ ಮನೆಯಲ್ಲಿಯೇ ಗಣಿತವನ್ನು ಅಧ್ಯಯನಿಸಿದ ಮತ್ತು ಪ್ರಾವಿಣ್ಯನಾದ. ಇಟಲಿಯ ಪಾದುವಾ ವಿಶ್ವವಿದ್ಯಾಲಯದಲ್ಲಿ ಗಣಿತ ಪ್ರಾಧ್ಯಾಪಕನಾಗಿ ಸೇರಿದ. ತನಗೆ ಸತ್ಯ ಎಂದು ಅನಿಸಿದ್ದನ್ನು ಮುಲಾಜಿಲ್ಲದೇ ಹೇಳುವ ಧೈರ್ಯ ಅವನಿಗಿತ್ತು.

ಒಂದೇ ಎತ್ತರದಿಂದ ಹಗುರ ಮತ್ತು ಭಾರದ ಎರಡು ವಸ್ತುಗಳನ್ನು ಏಕಕಾಲದಲ್ಲಿ ಕೆಳಕ್ಕೆ ಬಿಟ್ಟರೆ, ಭಾರದ ವಸ್ತು ಹಗುರದ ವಸ್ತುವಿಗಿಂತ ಅಧಿಕ ವೇಗದಲ್ಲಿ ಸಾಗುತ್ತ ಮೊದಲು ಭೂಮಿಯನ್ನು ತಲುಪುತ್ತದೆಂದು ಅರಿಸ್ಟಾಟಲ್ ಹೇಳಿದ್ದ. ಇದನ್ನೊಪ್ಪದ ಗೆಲಿಲಿಯೋ ಇವೆರಡೂ ಏಕಕಾಲದಲ್ಲಿ ಭೂಮಿ ಸೇರುತ್ತವೆನ್ನುವುದನ್ನು ಪೀಸಾದ ಮಾಲುಗೋಪುರದಲ್ಲಿ ನಡೆಸಿದ ಐತಿಹಾಸಿಕ ಪ್ರಾಯೋಗದಿಂದ ನಿರೂಪಿಸಿದ.

ಅದೊಂದು ದಿನ, ಚರ್ಚಿಗೆ ಹೋಗಿದ್ದ ಗೆಲಿಲಿಯೋ ಅಲ್ಲಿದ್ದ ಬೃಹದಾಕಾರದ ತೂಗು ದೀಪ ಅತ್ತಿಂದಿತ್ತ ತೊಯ್ದಾಡುವುದನ್ನು ಕಂಡ – ತನ್ನ ನಾಡಿಯ ಮಿಡಿತವನ್ನೇ ಬಳಸಿಕೊಂಡು ದೀಪದ ಆಂದೋಲಕ ಅವಧಿಯನ್ನು ಲೆಕ್ಕ ಹಾಕಿದ. ಇದರ ಮುಂದಿನ ಭಾಗವಾಗಿ ಪೆಂಡ್ಯುಲಮ್ ಅಥವಾ ಆಂದೋಲಕದ ನಿಯಮವನ್ನು ಗೆಲಿಲಿಯೋ ಮಂಡಿಸಿದ.

ಬೆಳಕಿನ ವೇಗ ಎಷ್ಟು? – ತಿಳಿದಿರಲಿಲ್ಲ ಅಂದು ಯಾರಿಗೂ. ತಿಳಿಯುವ ಕುತೂಹಲ ಗೆಲಿಲಿಯೋನಿಗೆ. ಪೀಸಾದ ಹೊರವಲಯದ ಗುಡ್ಡವನ್ನು ಲಾಂದ್ರ ಹಿಡಿದುಕೊಂಡು ಗೆಲಿಲಿಯೋ ಏರಿದರೆ, ಅವನ ಸಹಾಯಕ ಮತ್ತೊಂದು ಗುಡ್ಡದ ತುದಿಗೆ ಅಡರಿದ. ಗೆಲಿಲಿಯೋ ತನ್ನ ಲಾಂದ್ರದ ಕಿಂಡಿ ತೆರೆದಾಗ ಅದರಿಂದ ಹೊರಟ ಬೆಳಕಿನ ಕಿರಣ ಇನ್ನೊಂದು ಗುಡ್ದದೆಡೆಗೆ ಸಾಗುತ್ತದೆ. ಯಾವಾಗ ಲಾಂದ್ರದ ಬೆಳಕು ಕಾಣುತ್ತದೋ, ಆಗ ಗೆಲಿಲಿಯೋ ಸಹಾಯಕ ತನ್ನ ಲಾಂದ್ರದ ಕಿಂಡಿ ತೆರೆಯಬೇಕು. ಎರಡೂ ಸಂದರ್ಭಗಳಲ್ಲಿ ಬೆಳಕಿನ ಕಿರಣ ಗುಡ್ಡದ ನಡುವಣ ಅಂತರವನ್ನು ಕ್ರಮಿಸಲು ತೆಗೆದುಕೊಂಡ ಅವಧಿಯನ್ನು ಅಳೆದು (ಆಗಿನ್ನೂ ಸುಸಜ್ಜಿತ ಗಡಿಯಾರ ಬಂದಿರಲಿಲ್ಲ!), ಬೆಳಕಿನ ವೇಗವನ್ನು ಲೆಕ್ಕ ಹಾಕುವುದು ಗೆಲಿಲಿಯೋನ ಗುರಿ. ಆದರೆ ಪ್ರಯೋಗ ಸಹಜವಾಗಿಯೇ ವಿಫಲವಾಯಿತು. ಬೆಳಕಿಗೆಂಥ ಲೆಕ್ಕ-ಗುಡ್ಡಗಳ ನಡುವಣ ಅಂತರವನ್ನು ಕ್ರಮಿಸುವುದಕ್ಕೆ,

ನೂರು ವರ್ಷಗಳ ನಂತರ ಬಂದ ನ್ಯೂಟನ್, ಬಲವಿಜ್ಞಾನವನ್ನು (mechanics) ಮಂಡಿಸಿದ. ಆದರೆ ಇದರ ನೆಲೆಗಟ್ಟನ್ನು ರೂಪಿಸಿದವನು ಗೆಲಿಲಿಯೋ. ಪ್ರಯೋಗ ಮತ್ತು ಸೈದ್ಧಾಂತಿಕ ಚೌಕಟ್ಟಿನಲ್ಲಿ ಭೌತ ವಿಜ್ಞಾನವನ್ನು ಗೆಲಿಲಿಯೋ ರೂಪಿಸಿದ – ಎಂದೇ ಇವನನ್ನು ವಿಜ್ಞಾನ ಇತಿಹಾಸದ ಪ್ರಥಮ ಪರಿಪೂರ್ಣ ಭೌತವಿಜ್ಞಾನಿ ಎಂದು ಗುರುತಿಸಲಾಗುತ್ತದೆ.

ನೆರೆಯ ಹಾಲೆಂಡ್ ದೇಶದಲ್ಲಿ ಕನ್ನಡಕ ತಯಾರಿ ಮಾಡುವ ಕುಶಲಿಯೊಬ್ಬನಿದ್ದ. ಅವನ ಹೆಸರು ಹ್ಯಾನ್ಸ್ ಲಿಪ್ಪಾರ್ಷಿಯೇ (೧೫೭೦-೧೬೧೯). ಮಸೂರಗಳನ್ನು ಬಳಸಿ ಆತ ಹೊಸದೊಂದು ಉಪಕರಣ – ದೂರದರ್ಶಕವನ್ನು ನಿರ್ಮಿಸಿದ ಸುದ್ದಿ ಕೇಳಿದ ಗೆಲಿಲಿಯೋ ತಡಮಾಡಲಿಲ್ಲ. ಸ್ವಯಂ ಪ್ರಯೋಗ ಕುಶಲಿಯಾಗಿದ್ದ ಆತ ಅಂಥದೊಂದನ್ನು ನಿರ್ಮಿಸಿಯೇ ಬಿಟ್ಟ. ಗೆಲಿಲಿಯೋ ಬರೆಯುತ್ತಾನೆ ‘ನಾನು ನನ್ನ ಸಲುವಾಗಿ ರಚಿಸಿದ ಉಪಕರಣ ಅದೆಷ್ಟು ಅದ್ಭುತವಾಗಿತ್ತೆಂದರೆ, ಸ್ವಾಭಾವಿಕ ದೃಷ್ಟಿಗೂ ಗೋಚರಿಸದ ವಸ್ತು ಮೂವತ್ತು ಪಟ್ಟು ಸಮೀಪ ಕಾಣಿಸುತ್ತಿತ್ತು ಮತ್ತು ಹಲವು ಪಟ್ಟು ಲಂಬಿತವಾಗುತ್ತಿತ್ತು.’

ಗೆಲಿಲಿಯೋನಿಗೆ ಖಗೋಳ ವೀಕ್ಷಣೆ ಅತ್ಯಂತ ಪ್ರಿಯ ಹವ್ಯಾಸವಾಗಿತ್ತು. ತನ್ನ ಹೊಸ ಉಪಕರಣವಾದ ದೂರದರ್ಶಕವನ್ನು ಆಕಾಶಕ್ಕೆ ಗುರಿ ಹಿಡಿದ. ಅವನ ಮುಂದೆ ಹೊಸದೊಂದು ಪ್ರಪಂಚ ತೆರೆದುಕೊಂಡಿತು.

*ಅದರ ತನಕ ನುಣುಪಾದ ಗೋಲವೆಂದೇ ತಿಳಿದಿದ್ದ ಚಂದ್ರನ ಮೇಲ್ಮೈಯ ತುಂಬ ಹರಡಿ ಹೋಗಿರುವ ಕುಳಿಗಳು ಅದ್ಭುತವಾಗಿ ಗೋಚರಿಸಿದುವು.
*ಬರಿಗಣ್ಣಿಗೆ ಕೆಲವೇ ಕೆಲವು ನಕ್ಷತ್ರಗಳಿರುವಂತೆ ಗೋಚರಿಸುವ ನಕ್ಷತ್ರ ಗುಚ್ಚಗಳಲ್ಲಿ ಅಸಂಖ್ಯ ಪ್ರಮಾಣದಲ್ಲಿ ನಕ್ಷತ್ರಗಳು ಕಂಡುವು.
*ಬರಿಗಣ್ಣಿಗೆ ಆರು ನಕ್ಷತ್ರಗಳಷ್ಟೇ ಗೋಚರಿಸುವ ಕೃತ್ತಿಕಾ ಪುಂಜದಲ್ಲಿ ಮೂವತ್ತೈದು ನಕ್ಷತ್ರಗಳನ್ನು ದಾಖಲಿಸಿದ.

ವಿಶ್ವದ ಎಲ್ಲೆ ಇದೀಗ ವಿಸ್ತಾರಗೊಳ್ಳತೊಡಗಿತು ಗೆಲಿಲಿಯೋನ ಮೂಲಕ.

ಜನವರಿ ೭, ೧೬೧೦, ಗೆಲಿಲಿಯೋ ತನ್ನ ದೂರದರ್ಶಕವನ್ನು ಗುರು ಗ್ರಹದೆಡೆಗೆ ತಿರುಗಿಸಿದ. ಏನಾಶ್ಚರ್ಯ! ಗುರುಗ್ರಹದ ಎಡ ಬಲಗಳಲ್ಲಿ ಮೂರು ಮಿನುಗು ತಾರೆಗಳನ್ನು ಕಂಡ. ಮರು ದಿನ ರಾತ್ರೆ, ನೋಡಿದರೆ ಅವುಗಳ ಸ್ಥಾನ ಬದಲಾಗಿತ್ತು. ಮತ್ತೆರಡು ದಿನಗಳಲ್ಲಿ ಇನ್ನೊಂದು ನಕ್ಷತ್ರ ಕಾಣಿಸಿಕೊಂಡಿತು. ಮುಂದಿನ ದಿನಗಳಲ್ಲಿ ವೀಕ್ಷಿಸುತ್ತ ಹೋದಂತೆ, ಗೆಲಿಲಿಯೋನಿಗೆ ಸ್ಪಷ್ಟವಾಯಿತು – ಈ ನಾಲ್ಕೂ ತಾರೆಗಳು ಗುರುವಿನ ಸುತ್ತ ಪರಿಭ್ರಮಿಸುತ್ತಿರುವ ಉಪಗ್ರಹಗಳೆಂದು. ಈ ನಾಲ್ಕು ಉಪಗ್ರಹಗಳನ್ನು ಒಟ್ಟಾಗಿ ಗೆಲಿಲಿಯೋ ಉಪಗ್ರಹಗಳು (Galilean Satellites) ಎನ್ನುತ್ತೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಬಲ ದೂರದರ್ಶಕಗಳು ಬಂದುವು;  ಇನ್ನಷ್ಟು ಉಪಗ್ರಹಗಳು ಪತ್ತೆಯಾದುವು.

*ಗೆಲಿಲಿಯೋ ಶನಿಯ ಸುಂದರ ಬಳೆಗಳನ್ನು ಗಮನಿಸಿದ.
*ಗುರುವಿನ ಮೇಲ್ಮೈಯ ಧೂಳಿನ ಬಿರುಗಾಳಿಯನ್ನು ನೋಡಿದ.
*ಎಲ್ಲಕ್ಕಿಂತ ಮುಖ್ಯವಾಗಿ ಸೂರ್ಯನ ಮೇಲ್ಮೈಯಲ್ಲಿರುವ ಕಪ್ಪುಕಲೆಗಳನ್ನು ಪತ್ತೆ ಮಾಡಿದ.
*ಅಲ್ಲಿಯ ತನಕ ಪರಿಪೂರ್ಣನೆಂದೇ ನಂಬಲಾಗಿದ್ದ ಸೂರ್ಯನಲ್ಲಿ ಕಪ್ಪು ಕಲೆಗಳನ್ನು ಕಂಡ.

ಅರಿಸ್ಟಾಟಲನ ಪಾರದರ್ಶಕ ಗೋಳಗಳು ಅಸ್ತಿತ್ವದಲ್ಲಿಲ್ಲ. ಅವು ಕೇವಲ ಕಲ್ಪನಾಲೋಕದ ಅಮೂರ್ತ ಸೌಂದರ್ಯ. ವಿಶ್ವದ ವಾಸ್ತವ ಚಿತ್ರ ಬೇರೆಯೇ ಇದೆ. ಬನ್ನಿ, ದೂರದರ್ಶಕದ ಮೂಲಕ ಖಚಿತಪಡಿಸಿಕೊಳ್ಳಿ ಎಂದು ಇಟಲಿಯ ಘನವಿದ್ವಾಂಸರನ್ನು ಆಹ್ವಾನಿಸಿದರೆ, ಭೂಮಿಯನ್ನು ವಿಶ್ವಕೇಂದ್ರದ ಘನ ಅಂತಸ್ತಿನಿಂದ ಕೆಳಗಿಳಿಸುವ ಗೆಲಿಲಿಯೋನ ಹುನ್ನಾರ ಇದೆಂದು ಹೆಚ್ಚಿನ ವಿದ್ವಾಂಸರು ದೂರವೇ ಉಳಿದರು. ಗೆಲಿಲಿಯೋ ತನ್ನ ಗೆಳೆಯ, ಶ್ರೇಷ್ಠ ಭೌತ ವಿಜ್ಞಾನಿ ಯೊಹಾನ್ ಕೆಪ್ಲರನಿಗೆ ಪತ್ರ ಬರೆದ, ‘ಪ್ರಿಯ ಕೆಪ್ಲರ್, ವಿದ್ಯಾವಂತ ಜನರು ಕೂಡ ನನ್ನ ದೂರದರ್ಶಕದ ಮೂಲಕ ಆಕಾಶದ ಪರಮ ಸೌಂದರ್ಯವನ್ನು ಸವಿಯಲು ನಿರಾಕರಿಸುವ ಬಗ್ಗೆ ನೀನು ಏನು ಹೇಳುವಿ? ನಾನು ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ.’

೧೬೩೨ರಲ್ಲಿ ಗೆಲಿಲಿಯೋ ಪ್ರಕಟಿಸಿದ ವಿಶ್ವದ ಬಗೆಗಿನ ಎರಡು ಪ್ರಮುಖ ಸಿದ್ಧಾಂತಗಳನ್ನು ಕುರಿತ ಸಂವಾದ (Dilogues on the two chief system of the world) ಎನ್ನುವ ಗ್ರಂಥ ಆಸ್ತಿಕ ವರ್ಗದಲ್ಲಿ ಅಭೂತಪೂರ್ವ ಕೋಲಾಹಲ ಹುಟ್ಟಿಸಿತು. ಆ ಗ್ರಂಥವನ್ನು ಬೌದ್ಧಿಕ ವಲಯ ಬಹಿಷ್ಕರಿಸಿತು.

ಗೆಲಿಲಿಯೋ ವಿಚಾರಣೆಗೆ ಪ್ರತ್ಯೇಕ ವಿಶೇಷ ಧಾರ್ಮಿಕ ನ್ಯಾಯಾಲಯವೇ ಸ್ಥಾಪನೆಯಾಯಿತು. ಗೆಲಿಲಿಯೋ ಟಾಲೆಮಿ ಸಿದ್ಧಾಂತವನ್ನು ಧಿಕ್ಕರಿಸಿ ಕೊಪರ್ನಿಕಸ್ ಹೇಳಿದ ಸೂರ್ಯ ಕೇಂದ್ರ ಪರಿಕಲ್ಪನೆಯನ್ನು ಸಮರ್ಥಿಸಲು ಸಾಕಷ್ಟು ವಾದ ಮಂಡಿಸಿದರೂ ವಿಚಾರಣೆಗೆ ಬಂದ ಅಧಿಕಾರಿಗಳ ಮನ ಒಲಿಸಲು ಸಾಧ್ಯವಾಗಲಿಲ್ಲ. ಅದಾಗಲೇ ಗೆಲಿಲಿಯೋ ತನ್ನ ಬಾಳ ಸಂಜೆಯಲ್ಲಿದ್ದ. ದೃಷ್ಟಿ ಮಂದವಾಗಿತ್ತು ಎಪ್ಪತ್ತರ ವೃದ್ಧನಿಗೆ. ದೈಹಿಕವಾಗಿ ಕುಂದಿದ್ದ, ಪ್ರಾಯಶ: ಜನರ ಮೌಢ್ಯದಿಂದ ಮಾನಸಿಕವಾಗಿಯೂ. ನಿರಂತರ ವಿಚಾರಣೆಗೆ ನಲುಗಿದ ಗೆಲಿಲಿಯೋ ಒಲ್ಲದ ಮನದಿಂದ ತಾನು ಮಾಡಿದ್ದು ತಪ್ಪೆಂದು ಒಪ್ಪಿಕೊಂಡು ಕೋಪರ್ನಿಕಸ್ ಹೇಳಿದಂತೆ ಸೂರ್ಯನ ಸುತ್ತ ಭೂಮಿ ಚಲಿಸುತ್ತಿಲ್ಲ ಹೇಳಿದ. ವಿಚಾರಣೆ ಮುಗಿದಾಗ ಗೆಲಿಲಿಯೋ ಉದ್ಗರಿಸಿದನಂತೆ  “Epur si muove” – “still it moves” ಅದು ಹಾಗೆಯೇ ಚಲಿಸುತ್ತದೆ (ಅಂದರೆ ಭೂಮಿ ಸೂರ್ಯನ ಸುತ್ತ!)

ಅರಿಸ್ಟಾಟಲ್ ಪ್ರಣೀತ ಮತ್ತು ಶತ ಶತಮಾನಗಳಿಂದ ಬಂದಂಥ ಜನರ ನಂಬುಗೆಗಳನ್ನು ಬುಡಮೇಲು ಮಾಡಿದ ಹೀನಾಯ ಅಪರಾಧಕ್ಕಾಗಿ ಮರಣದಂಡನೆ ನೀಡಬೇಕಾಗಿದ್ದರೂ, ತನ್ನ ತಪ್ಪು ಒಪ್ಪಿದ ಗೆಲಿಲಿಯೋನಿಗೆ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಲು ಅಧಿಕಾರಿಗಳು ಮನಸ್ಸು ಮಾಡಿದರು. ಗೆಲಿಲಿಯೋನಿಗೆ ಗೃಹ ಬಂಧನ ವಿಧಿಸಲಾಯಿತು. ತನ್ನ ಜೀವಿತದ ಕೊನೆಯ ಆರು ವರ್ಷಗಳನ್ನು ಇಂಥ ಸೆರೆಮನೆಯಲ್ಲೇ ಕಳೆದ ಗೆಲಿಲಿಯೋ ಬಿಟ್ಟು ಹೋದದ್ದು ಪ್ರಖರ ವೈಚಾರಿಕ ಪ್ರಜ್ಞೆಯನ್ನು ಮತ್ತು ಆಕಾಶದ ಸೌಂದರ್ಯವನ್ನು ಅನಾವರಣಗೊಳಿಸುವ ದೂರದರ್ಶಕವನ್ನು.
ಆಧುನಿಕ ಖಗೋಳ ವಿಜ್ಞಾನ

ಗೆಲಿಲಿಯೋ ಮರೆಯಾಗಿ ನಾಲ್ನೂರು ವರ್ಷಗಳು ಉರುಳಿವೆ. ಸುಮಾರು ಐನೂರು ಕೋಟಿ ವರ್ಷ ಪ್ರಾಯದ ಭೂಮಿಯ ಮುಂದೆ, ವಿಜ್ಞಾನ ಇತಿಹಾಸದ ಈ ನಾಲ್ನೂರು ವರ್ಷಗಳು ಏನೇನೂ ಅಲ್ಲ. ಆದರೆ ಇಷ್ಟರಲ್ಲೇ ಪ್ರಪಂಚದ ನಾಗರೀಕತೆ ಎಷ್ಟೊಂದು ಬದಲಾಗಿ ಹೋಗಿದೆ!

ನ್ಯೂಟನ್ ಬಂದ ಹೊಸ ಬೆಳಕು ತಂದ! ಭೂಕೇಂದ್ರವಾದ ಮೂಲೋತ್ಪಾಟನೆಯಾಗಿ ನೂತನ ಖಗೋಳ ವಿಜ್ಞಾನ ಉದಿಸಿತು. ಗುರುತ್ವಾಕರ್ಷಣ ಬಲವನ್ನು ನ್ಯೂಟನ್ ಆವಿಷ್ಕರಿಸಿದಾಗ ಸೂರ್ಯ ಮತ್ತು ಅವನ ಸಂಸಾರ ರಥದ ಚಲನೆ ಸುಸ್ಪಷ್ಟವಾಯಿತು. ಮುಂದಿನ ದಿನಗಳಲ್ಲಿ ಬೆಳಕಿನ ಕುರಿತಂತೆ ನಡೆದ ಚಿಂತನೆಗಳು, ಚರ್ಚೆಗಳು ಬೆಳಕಿನ ಮೇಲೆ ಬೆಳಕು ಚೆಲ್ಲಿದುವು. ದ್ರವ್ಯ ಮತ್ತು ಶಕ್ತಿಯ ಬೇರೆ ಬೇರೆ ವಿದ್ಯಮಾನಗಳ ತಳದಲ್ಲಿ ಹುದುಗಿರುವ ಸತ್ಯಗಳು ಒಂದೊಂದಾಗಿ ಅನಾವರಣಗೊಂಡುವು.

ಈ ಅವಧಿಯಲ್ಲಿ ಇನ್ನಷ್ಟು ಪ್ರಬಲ ದೂರದರ್ಶಕಗಳು ಬಂದವು. ಹರ್ಷೆಲ್, ಲೊವೆಲ್, ಹಬ್ಬಲ್ ಮೊದಲಾದ ಶ್ರೇಷ್ಠ ಖಗೋಳವಿದರು ಬೆಟ್ಟದ ನೆತ್ತಿ ಮೇಲೆ, ಜನ ವಿದೂರ ಪ್ರದೇಶಗಳಲ್ಲಿ ದೂರದರ್ಶಕಗಳನ್ನು ಸ್ಥಾಪಿಸಿದರು. ದೂರದರ್ಶಕಗಳು ಬೃಹದಾಕಾರ ತಾಳಿದುವು. ಹೊಸ ಹೊಸ ಗ್ರಹಗಳು, ಉಪಗ್ರಹಗಳು, ತಾರಾ ಮಂಡಲಗಳು ಪತ್ತೆಯಾದುವು. ವಿಶ್ವದ ಬಗೆಗಿನ ನಮ್ಮ ಜ್ಞಾನ ಎಲ್ಲೆ ಮೀರಿ ವಿಸ್ತಾರವಾಯಿತು. ಈ ಅವಧಿಯಲ್ಲೇ ನಮಗರಿವಾಯಿತು – ನಾವಿರುವ ಭೂಮಿ ಸೂರ್ಯನ ಸಂಸಾರದ ಭಾಗವೆಂದು. ಈ ಸೌರವ್ಯೂಹವಾದರೋ ಮಿಲಿಯಗಟ್ಟಲೆ ನಕ್ಷತ್ರಗಳುಳ್ಳ ಬ್ರಹ್ಮಾಂಡದಲ್ಲೊಂದು ಬಿಂದುವೆಂದು. ಸಿಂಧು ವಿಶ್ವದಲ್ಲಿ ಮಿಲಿಯಗಟ್ಟಲೆ ಬ್ರಹ್ಮಾಂಡಗಳು ಇವೆಯೆಂದು. ವಿಶ್ವದ ತುಂಬ ಹರಡಿಹೋಗಿರುವ ಈ ಎಲ್ಲ ಬ್ರಹ್ಮಾಂಡಗಳಿಂದ, ನಿಹಾರಿಕೆಗಳಿಂದ, ನಕ್ಷತ್ರಗಳಿಂದ… ನಮಗೆ ಮಾಹಿತಿಗಳು ಬರುತ್ತಿವೆ – ಬೆಳಕು ಮತ್ತು ಇನ್ನಿತರ ವಿಕಿರಣಗಳ ರೂಪದಲ್ಲಿ.

ವಾಸ್ತವವಾಗಿ ವಿಶ್ವದಂತರಾಳದಿಂದ ಬರುತ್ತಿರುವ ವಿಕಿರಣದ ಶೇಕಡಾ ನಾಲ್ಕು ಪಾಲು ಮಾತ್ರ ಗೋಚರ ಬೆಳಕಿನ ರೂಪದಲ್ಲಿದ್ದರೆ, ಉಳಿದೆಲ್ಲವೂ ಅಗೋಚರವಾದ ಗ್ಯಾಮಾ, ಎಕ್ಸ್-ಕಿರಣ, ಅತಿನೇರಿಳೆ, ಅವಕೆಂಪು ಅಥವಾ ರೇಡಿಯೋ ವಿಕಿರಣಗಳ ರೂಪದಲ್ಲಿರುತ್ತವೆ. ಅಂದರೆ ವಿಶ್ವದ ಹುಟ್ಟು ಬೆಳವಣಿಗೆಗಳ ಕುರಿತಂತೆ ಒಂದು ಸ್ಪಷ್ಟ ಚಿತ್ರಣ ಲಭ್ಯವಾಗಬೇಕಾದರೆ ಎಲ್ಲ ಬಗೆಯ ವಿಕಿರಣಗಳನ್ನು ಪತ್ತೆ ಮಾಡುವ ಬೇರೆ ಬೇರೆ ತರಂಗಾತರದ ದೂರದರ್ಶಕಗಳು ಅಗತ್ಯ. ಅಂಥ ದೂರದರ್ಶಕಗಳು ಇಂದು ನಿರ್ಮಿಸಲ್ಪಟ್ಟಿವೆ.

ಭೂಮಿಯ ಸುತ್ತ ಉಪಗ್ರಹದ ಸುತ್ತುಬರಿಕಣ್ಣಿಗೆ ಕಾಣದ್ದನ್ನು ಕವಿ ಕಂಡರೆ, ಕವಿಯೂ ಕಾಣದ್ದನ್ನು ದೂರದರ್ಶಕ ಕಾಣುತ್ತದೆ! ಕೆಲವೊಮ್ಮೆ ತಮಾಷೆಗೆ ಅನ್ನುವುದುಂಟು – ಭೂಮಿಯಿಂದ ಖಗೋಳ ವೀಕ್ಷಣೆ ಅಂದರೆ ಸರೋವರದಡಿಯಿಂದ ಪಕ್ಷಿವೀಕ್ಷಣೆ ಮಾಡಿದಂತೆ. ಇದು ಅರ್ಥಗರ್ಭಿತ ತಮಾಷೆ. ಏಕೆಂದರೆ ಭೂಮಿಯನ್ನು ಆಚ್ಛಾದಿಸಿರುವ ದಟ್ಟ ವಾಯುಮಂಡಲ, ಹವಾಮಾನ ವೈಪರಿತ್ಯ, ವಾಯುಮಾಲಿನ್ಯ, ಧೂಳಿನ ಪದರ ಖಗೋಳ ವೀಕ್ಷಣೆಗೆ ತೊಡಕುಂಟುಮಾಡುತ್ತವೆ. ಹಾಗಿದ್ದರೆ ಭೂವಾಯುಮಂಡಲದ ಕರಕರೆಗಳಿಲ್ಲದ ಬಾಹ್ಯಾಕಾಶದಲ್ಲಿ ದೂರದರ್ಶಕವನ್ನು ಸ್ಥಾಪಿಸಿದರೆ ಹೇಗೆ? ಅಲ್ಲಿಂದ ಇನ್ನಷ್ಟು ದೂರಕ್ಕೆ ದೃಷ್ಟಿ ಚಾಚಬಹುದಲ್ಲ! ಅಮೆರಿಕದ ಖಗೋಳ ವಿಜ್ಞಾನಿ ಲೈಮನ್ ಸ್ಪಿಟ್ಜರ್ (೧೯೧೪-೧೯೯೭) ಇಂಥ ಕನಸು ಕಂಡ. ಅವನ ಕನಸುಗಳು ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ನನಸಾಗತೊಡಗಿದುವು. ಹಬ್ಬಲ್, ಚಂದ್ರ, ಕಾಂಪ್ಟನ್, ಗೆಲಿಲಿಯೋ , ಕೆಪ್ಲರ್ (ಇತ್ತೀಚೆಗಷ್ಟೇ ಉಡ್ಡಯನಗೊಂಡಿದೆ) … ಪ್ರತಿಯೊಂದೂ ಆತ್ಯಾಧುನಿಕ ತಂತ್ರಜ್ಞಾನದ ಪ್ರಬಲ ದೂರದರ್ಶಕಗಳು. ಭೂಮಿ ಸುತ್ತ ಪರಿಭ್ರಮಿಸುತ್ತ ವಿಶ್ವದಂತರಾಳದಿಂದ ಬರುತ್ತಿರುವ ಬಗೆ ಬಗೆಯ ತರಂಗಾಂತರಗಳ ವಿಕಿರಣವನ್ನು ಜರಡಿಯಾಡುತ್ತ ವಿಶ್ವದ ಕುರಿತಂತೆ ನಮ್ಮ ಅರಿವಿಗೆ  ಹೊಸ ತಿಳಿವು ನೀಡುವ ಉಪಕರಣಗಳು.

ವಾಸ್ತವವಾಗಿ ಇಪ್ಪತ್ತನೇ ಶತಮಾನ ಖಗೋಳ ವಿಜ್ಞಾನದ ಸುವರ್ಣ ಯುಗ. ಈ ಅಗಾಧ ವಿಶ್ವ ಹುಟ್ಟಿದ್ದು ಯಾವಾಗ ಮತ್ತು ಹೇಗೆ ಎಂಬ ವಿವರ ಪ್ರಾಪ್ತವಾದದ್ದು, ಸೂರ್ಯ ಸೇರಿದಂತೆ ಬಗೆ ಬಗೆಯ ನಕ್ಷತ್ರಗಳ ಶಕ್ತಿಯ ಗುಟ್ಟು ತಿಳಿದದ್ದು, ನಕ್ಷತ್ರಗಳ ಉಗಮ, ವಿಕಾಸ ಮತ್ತು ಅಂತ್ಯದ ವಿವರಗಳೆಲ್ಲವೂ ಬಯಲಾಗಿದ್ದು, ಭೂಮಿಯ ರಚನೆ ಮತ್ತು ಪ್ರಾಯ ಸ್ಪಷ್ಟವಾದದ್ದು ಇಪ್ಪತ್ತನೇ ಶತಮಾನದಲ್ಲಿ. ಇದೇ ಅವಧಿಯಲ್ಲಿ ವಿಮಾನಗಳ ಹಾರಾಟ ಆರಂಭವಾದವು. ರಾಕೆಟ್ಟುಗಳು ಗಗನಕ್ಕೆ ಏರಿದುವು. ಬಾಹ್ಯಾಕಾಶಕ್ಕೆ ನೌಕೆಗಳು ಹೋದುವು. ಭೂಮಿ ಸುತ್ತ ಮಾನವ ಕೃತ ನೌಕೆಗಳು – ಕೃತಕ ಉಪಗ್ರಹಗಳು ಸುತ್ತತೊಡಗಿದುವು. ಮಾನವ ಚಂದ್ರನ ಮೇಲೆ ಇಳಿದ. ಆಕಾಶ ನೌಕೆಗಳು ಸೌರವ್ಯೂಹದ ಗ್ರಹ ಉಪಗ್ರಹಗಳ ಮೇಲಿಳಿದುವು. ಸೌರವ್ಯೂಹದ ಅಂಚಿಗೂ ಸಾಗಿದ್ದಾವೆ ಆಕಾಶನೌಕೆಗಳು. ಅವು ನೀಡಿರುವ ಮಾಹಿತಿಗಳು ಅನನ್ಯ. ಇದೊಂದು ನಿಜ ಅರ್ಥದಲ್ಲಿ ವ್ಯೋಮ ಯುಗ.

ಡಿವಿಜಿ ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಬರೆಯುತ್ತಾರೆ-

ಏನು ಭೈರವ ಲೀಲೆಯೀ ವಿಶ್ವ ವಿಭ್ರಮಣೆ
ಏನು ಭೂತಗ್ರಾಮ ನರ್ತನೋನ್ಮಾದ
ಏನಗ್ನಿಗೋಳಗಳು ಏನಂತರಾಳಗಳು
ಏನು ವಿಸ್ಮಯ ಸೃಷ್ಟಿ – ಮಂಕುತಿಮ್ಮ

ನಿಜ, ಅನಂತ ವಿಸ್ಮಯಗಳ ಆಗರವಾದ ನಾವಿರುವ ವಿಶ್ವ ಅತ್ಯಂತ ರೋಚಕವಾದರೆ, ಇಂಥ ವಿಸ್ಮಯಗಳನ್ನು ಅನಾವರಣ ಮಾಡುವ ಖಗೋಳ ವಿಜ್ಞಾನ ಇನ್ನಷ್ಟು ರೋಚಕ. ಇದು ಕೇಳುತ್ತದೆ – ನಾವು ಬಂದದ್ದು ಎಲ್ಲಿಂದ ಮತ್ತು ಹೋಗುವುದು ಎಲ್ಲಿಗೆ? ಹುಡುಕಾಟ ಸಾಗಿದೆ.

ಗೆಲಿಲಿಯೋ ನೀಡಿದ ಕಣ್ಣು ದೂರದರ್ಶಕ. ದೂರದರ್ಶಕಗಳ ವ್ಯಾಖ್ಯೆ ವರ್ತಮಾನದಲ್ಲಿ ಬದಲಾಗಿದೆ. ಆದರೆ ಅವು ನೀಡುತ್ತಿರುವ ಕಾಣ್ಕೆಗಳು ಮಾತ್ರ ನಿತ್ಯ ವಿನೂತನ. ಜಾಗತಿಕ ಖಗೋಳ ವಿಜ್ಞಾನ ವರ್ಷದ ಆಚರಣೆಯ ಸಂದರ್ಭದಲ್ಲಿ ಅಸಂಖ್ಯ ನಕ್ಷತ್ರಗಳು ಹರಡಿ ಹೋಗಿರುವ ರಾತ್ರೆಯ ಆಕಾಶದ ಪರಮ ಸೌಂದರ್ಯವನ್ನು ನಿಟ್ಟಿಸಬೇಕು; ವಿಶ್ವಾನುಭೂತಿಯ ಆನಂದವನ್ನು ಅನುಭವಿಸಬೇಕು. ಖಗೋಳ ವಿಜ್ಞಾನ ಪ್ರವರ್ಧಿಸಿದ ಬಗೆಯನ್ನು ಚರ್ಚಿಸಬೇಕು. ನಮ್ಮ ಇಳೆಯ ಕುರಿತಾಗಿ ಚಿಂತಿಸಬೇಕು. ಆ ಮೂಲಕ ಖಗೋಳ ವಿಜ್ಞಾನ ವರ್ಷಾಚರಣೆಯನ್ನು ಆಚರಿಸುವ  ಸಂಭ್ರಮ ನಮ್ಮದಾಗಬೇಕು.