ರೊಟಿಮಿ ಅವರ ‘ದಿ ಗಾಡ್ಸ್ ಆರ್ ನಾಟ್ ಟು ಬ್ಲೇಮ್’ ನಲ್ಲಿ ಈಡಿಪಸ್ ‘ಒಡೆವಲೆ’ಯಾಗಿ ರೂಪಾಂತರ ತಳೆದಿದ್ದಾನೆ. ಕಿಂಗ್ ಲಯಸ್ ಆಫ್ರಿಕದ ದೊರೆ ‘ಅಡೆಟುಸ’ ಆಗುತ್ತಾನೆ. ರಾಣಿ ಜೊಕಾಸ್ತ ಆಫ್ರಿಕದ ರಾಣಿ ‘ಒಜೋಲ’ ಆಗುತ್ತಾಳೆ. ಕ್ರಯಾನ್ ಅಡ್ರೆಪೊ ಆಗುತ್ತಾನೆ. ಟೈರೀಷಿಯಸ್ ಬಾಬ ಫಕನುಲ್ – ಕುರುಡು ತತ್ವಜ್ಞಾನಿ ಆಗುತ್ತಾನೆ. ಮೂಲ ಪಠ್ಯದಲ್ಲಿನ ಕುರಿಗಾಹಿ, ಘೂಂಕ ಆಗುತ್ತಾನೆ. ಥೀಬ್ಸ್ ಎನ್ನುವುದು ಆಫ್ರಿಕನ್ ಹಿನ್ನೆಲೆಯಲ್ಲಿ ಕುಟುಂಜೆ ಆಗಿ ‘ಇಡೆ’ ಎನ್ನುವುದು ಮಾತಾಪಿತೃಗಳ ವಧಾ ಸ್ಥಾನವಾಗುತ್ತದೆ.
ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ
ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳು ಕೆಲಸ ಮಾಡಲು ಆರಂಭಿಸಿದಂತಿವೆ. ಪರಿಣಾಮವಾಗಿ ಸೋಂಕಿನ ಪ್ರಮಾಣ ದಿನೇದಿನೇ ತಗ್ಗುತ್ತಿರುವ ಲಕ್ಷಣಗಳು ಕಾಣುತ್ತಿದೆ. ಕೊಂಚ ನಿರಾಳವಾಗಿ ಉಸಿರಾಡಬಹುದಾರೂ ಮಾಸ್ಕ್ ತೆರೆಯುವಂತಿಲ್ಲ. ಕೊರೋನ ಎಂಬುದು ಅಲೆಗಳ ರೂಪ ತಳೆದು ಬಂದು ಅಪ್ಪಳಿಸಿದ ಪರಿಣಾಮ ಬಹುತೇಕರ ಬದುಕು ಮೂರಾಬಟ್ಟೆಯಾಯಿತು. ಹಲವು ರಂಗಕಲಾವಿದರು ಒಬ್ಬರ ಹಿಂದೆ ಒಬ್ಬರು ರಂಗ ಬಿಟ್ಟು ತೆರಳಿದರು. ಅವರ ಸಾವು ನೋವಿನ ಸಂಗತಿ ನಿತ್ಯ ಕೇಳುತ್ತಿದ್ದರೂ ಅವರ ಮನೆಗೆ ತೆರಳಿ ನೊಂದವರಿಗೆ ಒಂದೆರಡು ಸಾಂತ್ವನದ ಮಾತಾಡಲು ಧಾವಿಸಲಿಕ್ಕೂ ಆಗದ ನಿಸ್ಸಹಾಯಕ ಸ್ಥಿತಿ ನಿರ್ಮಾಣವಾಗಿತ್ತು. ರಂಗ ಒಡನಾಡಿಗಳು ಮಾತ್ರವಲ್ಲ ಅವರ ಮನೆಯ ಸದಸ್ಯರಿಗೇ ಮೃತ ದೇಹದ ಬಳಿ ಸುಳಿಯದಂಥ ನಿರ್ಬಂಧ.
ಆದರೆ ಇದು ತಂತ್ರಜ್ಞಾನದ ಯುಗ. ಕೊರೋನ ಸೃಷ್ಟಿಸಿದ ನಿರ್ವಾತ ತುಂಬಲು ವರ್ಚುವಲ್ ಮಾತುಕತೆಗಳು ಮತ್ತು ಡ್ರಾಮಗಳು ಶುರುವಾದರೂ ರಂಗಭೂಮಿ ಜೀವಂತಗೊಳ್ಳುವುದು ನೇರ ಮುಖಾಮುಖಿಯಲ್ಲೇ ಎಂಬುದು ನಿಜ. ಎರಡು ಅಲೆಗಳು ನಮ್ಮ ಕೆಲವು ರಂಗ ಕಲಾವಿದರನ್ನ ಬಲಿಪಡೆಯಿತು. ಅದರ ಪಟ್ಟಿ ದೊಡ್ಡದೇ ಇದೆ. ವಿ. ರಾಮಮೂರ್ತಿ, ಹೆಚ್.ಜಿ ಸೋಮಶೇಖರ ರಾವ್, ಆರ್.ಎಸ್. ರಾಜಾರಾಂ, ಕೃಷ್ಣೇಗೌಡ, ಹುಲಿವಾನ್ ಗಂಗಾಧರಯ್ಯ, ಎಂ.ಜಿ ವೆಂಕಟೇಶ್, ಎಂ.ಸಿ ಆನಂದ್, ಶಾರದಾ ಸಿಂಹ, ಸಂಚಾರಿ ವಿಜಯ್, ಚನ್ನಕೇಶವ, ರವಿಕುಮಾರ್, ಸ್ಟಾಂಪ್ ವೆಂಕಟೇಶ್, ಕಬಡ್ಡಿ ರಾಮಚಂದ್ರ – ರಂಗಭೂಮಿಗೆ ಈ ಎಲ್ಲರ ಕೊಡುಗೆ ಸ್ಮರಣೀಯ. ಎಲ್ಲರೂ ಕೋವಿಡ್ ಕಾರಣದಿಂದ ತೀರಿಹೋದದ್ದಲ್ಲವಾದರೂ ಬಹುತೇಕರನ್ನ ಕೋವಿಡ್ ಬಲಿ ತೆಗೆದುಕೊಂಡಿತು. ತಂತ್ರಜ್ಞಾನದ ವ್ಯವಸ್ಥೆ ಇದ್ದಾಗ ಆಯಾ ಕಲಾವಿದರು ತೀರಿಹೋದಾಗ ನಮನ ಸಲ್ಲಿಸುವ ಸೌಲಭ್ಯವಿತ್ತು. ಆದರೆ ರಂಗಭೂಮಿಯವರು ಜನರ ಉಸಿರು ಬೆರೆತ ಗಾಳಿಯಲ್ಲಿ ಕದಲಿ ಅಭ್ಯಾಸವಿರಿಸಿಕೊಂಡವರು.
ಕೋವಿಡ್ ಗೆ ಶೀಲ್ಡು ಅಡ್ಡಬರಲು ಆರಂಭಿಸಿದಾಗ ಮತ್ತು ರಂಗಮಂದಿರಗಳು ಕೆಲವು ನಿರ್ಬಂಧಗಳೊಂದಿಗೆ ಮತ್ತೆ ಆರಂಭಗೊಂಡಾಗ ಕೆಲವು ಹಿರಿಯ ರಂಗಕರ್ಮಿಗಳು ಒಟ್ಟು ಸೇರಿ ಅಗಲಿದ ರಂಗಚೇತನಗಳಿಗೆ ರಂಗ ನಮನ ಸಲ್ಲಿಸಲು ಕಾರ್ಯಕ್ರಮ ಆಯೋಜಿಸಿದರು. ಸಂಜೆಯಾದರೆ ಜಿನುಗಲು ಆರಂಭಿಸುವ ಮಳೆಯ ನಡುವೆಯೂ ರಂಗಾಸ್ತಕರು ಬಂದು ಕಾರ್ಯಕ್ರಮದಲ್ಲಿ ಭಾಗಿಯಾದರು. ರಂಗ ಬಿಟ್ಟು ತೆರಳಿದವರ ಕುರಿತ ನೆನಪುಗಳು, ಅವರ ಕೊಡುಗೆ, ಅನನ್ಯತೆ, ಕಾರ್ಯವಿಧಾನ, ಆಲೋಚನೆ, ಚಿಂತನೆ, ಒಳ್ಳೆಯತನ, ಉದಾರತೆ, ಚಟ ಎಲ್ಲದರ ಬಗೆಗೆ ಮಾತುಗಳು ಸುಳಿ ತಿರುಗಿದವು. ವಿಸ್ತೃತವಾಗಿ ತಿಳಿಯಲು ಸಮಯವಿಲ್ಲದಿದ್ದರೂ ಸಂಕ್ಷಿಪ್ತವಾಗಿ ಕೆಲವು ವಿಚಾರಗಳು ಬೆಳಕು ಕಂಡವು. ಅಗಲಿದ ರಂಗ ಕಲಾವಿದರ ಜೊತೆ ಹತ್ತಿರದ ಒಡನಾಟವಿರಿಸಿಕೊಂಡವರು ಮಾತಿಗೆ ತೊಡಗಿದ್ದರಿಂದ ನೆನಪು ಮತ್ತು ಕೊಡುಗೆಗಳ ಬಗೆಗೆ ಸ್ಪಷ್ಟತೆ ಗುರುತಿಸಬಹುದಿತ್ತು.
ಈ ಅತಂತ್ರದ ಮತ್ತು ಭಯದ ಸಂದರ್ಭದಲ್ಲಿಯೂ ಕೂಡ ಅಗಲಿದ ಕಲಾವಿದರನ್ನು ಸ್ಮರಿಸಿಕೊಂಡದ್ದು ನಿಜಕ್ಕೂ ಅವರುಗಳಿಗೆ ಸಲ್ಲಿಸಿದ ಗೌರವ. ಅವರೆಲ್ಲ ಮರೆವಿಗೆ ಸಂದು ಸವಾಲಿನ ಹೊಸ ಚಟುವಟಿಕೆ ಆರಂಭವಾಗುತ್ತದೆ ಅಂದುಕೊಳ್ಳುತ್ತಿರುವ ಹೊತ್ತು ನಡೆದ ಇಂಥದ್ದೊಂದು ಕಾರ್ಯಕ್ರಮ ರಂಗದ ಬಗ್ಗೆ ಬದ್ಧತೆ ಹೊಂದಿದ್ದ ಹಲವು ಕಲಾವಿದರಿಗೆ ಸಲ್ಲಿಸಿದ ಭಾವಪೂರ್ಣ ನಮನ ಅನಿಸಿತು. ಜೊತೆಗೆ ನಮ್ಮ ಹಿರಿಯ ರಂಗಕರ್ಮಿಗಳಲ್ಲಿರುವ ಸಂಸ್ಕಾರದ ದ್ಯೋತಕದಂತೆ ಕಂಡಿತು.
ಯಾರೂ ಸುಮ್ಮನೆ ನೆನಪಿನಲ್ಲಿ ಉಳಿಯುವುದಿಲ್ಲ ಮತ್ತು ನಮನ, ಗೌರವಕ್ಕೆ ಭಾಜನರಾಗುವುದಿಲ್ಲ. ಈ ಎಲ್ಲ ಘಟಿಸುವುದು ಅವರುಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಮೂಡಿಸಿದ ಛಾಪಿನಿಂದ ಎನ್ನುವುದು ನಿಜದ ಸಂಗತಿ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ನನ್ನ ಮನಸ್ಸಿನಲ್ಲಿ ಸುಳಿಯಲು ಆರಂಭಿಸಿದ ನಾಟಕಕಾರ ಒಲಾ ರೊಟಿಮಿ.
ಮೂಲತಃ ನೈಜೀರಿಯಾದ ಸ್ಯಾಪೆಲ್ ನಲ್ಲಿ 1938ರಲ್ಲಿ ಹುಟ್ಟಿದವರು. ಮತ್ತು ಕಣ್ಮರೆಯಾದದ್ದು 2000ರಲ್ಲಿ. ತುಂಬ ಚೆಂದದ, ಚಿಂತನೆಗೆ ಹಚ್ಚುವ ನಾಟಕಗಳನ್ನು ಬರೆದೂ ಮರೆವಿಗೆ ಸಂದರು ಅಂದುಕೊಳ್ಳುತ್ತಿದ್ದ ಹೊತ್ತಲ್ಲಿ ಕೆಲ ತಿಂಗಳ ಹಿಂದೆ ಸ್ಯಾನ್ ಡೀಗೊ ರಾಜ್ಯ ಮುಕ್ತ ವಿಶ್ವವಿದ್ಯಾಲಯ ರೊಟಿಮಿ ಕುರಿತು ಒಂದು ವೆಬಿನಾರ್ ಆಯೋಜಿಸಿತು. ಇದರ ಜೊತೆಗೆ ನೈಜೀರಿಯಾದ ಬೊವೆನ್ ವಿಶ್ವವಿದ್ಯಾಲಯ ಕೂಡ ವೆಬಿನಾರ್ ಏರ್ಪಡಿಸಿ ಗೌರವ ಸೂಚಿಸಿತು. ಒಲಾ ರೊಟಿಮಿ ಎಂಬ ನೈಜೀರಿಯಾದ ನನ್ನ ಇಷ್ಟದ ನಾಟಕಕಾರ ತಾವು ತೀರಿಹೋದ ಸರಿಸುಮಾರು ಇಪ್ಪತ್ತು ವರ್ಷಗಳ ನಂತರ ವೆಬಿನಾರ್ ನಲ್ಲಿ ಚರ್ಚೆಗೆ ನಿಲುಕಿದ್ದು ಸಂತೋಷ.
ರೊಟಿಮಿ ರಂಗ ನಿರ್ದೇಶಕರಾಗಿ ತಮ್ಮ ಛಾಪು ಮೂಡಿಸಿದ್ದರು. ಆ ಹೊತ್ತು ನೈಜೀರಿಯಾದ ರಂಗಭೂಮಿ ವಸಾಹತುಶಾಹಿ, ನೈಜೀರಿಯಾದ ಅಂತರ್ಯುದ್ಧ ಹಾಗು ವಸಾಹತೋತ್ತರ ಸಮಾಜದ ಸುತ್ತ ಸುಳಿತಿರುಗುತ್ತ ರಾಜಕೀಯ ಪ್ರಜ್ಞೆ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಪಾತ್ರವಹಿಸಿತ್ತು. ರೊಟಿಮಿ ಅವರು ಗುರುತಿಸಿಕೊಂಡದದ್ದು ಡಿಕಲೋನಿಯಲ್ ಆರ್ಟಿಸ್ಟ್ ಎಂದು. ಅವರ ಥಿಯೇಟರ್ ಕಲೆಕ್ಟಿವ್ ಹೆಸರು ‘ಒರಿ ಒಲಕುಮ್’. 1968 ರಲ್ಲಿ ನೈರುತ್ಯ ನೈಜೀರಿಯಾದ Ile Ife ನಲ್ಲಿ ‘ಒರಿ ಒಲಕುಮ್’ ಸ್ಥಾಪಿಸಿದರು. ಈ ತಾಣ ಹಲವು ಪ್ರತಿಭಾನ್ವಿತ ಹಾಗು ಸಂಪನ್ಮೂಲ ರಂಗಕರ್ಮಿಗಳು ಹೊರಹೊಮ್ಮಲು ಕಾರಣವಾಯಿತು.
ರೊಟಿಮಿ ಹುಟ್ಟುಹಾಕಿದ ಒರಿ ಒಲಕುಮ್ ನಲ್ಲಿ ಭಾಗಿಯಾದ ಪ್ರತಿಯೊಬ್ಬರಲ್ಲೂ ಬಿಡಿಸಿಕೊಳ್ಳಲಾರದ ಒಂದು ನಂಟು ಬೆಳೆಯಲು ಆರಂಭಿಸಿತು. ಅವರೆಲ್ಲರಿಗೆ ವಯೋಮಾನ ಹೆಚ್ಚುತ್ತಾ ಹೋದಂತೆಲ್ಲ ಈ ನಂಟು ಹೆಚ್ಚುತ್ತಲೇ ಹೋದದ್ದು ವಿಶೇಷ. ಒರಿ ಒಲಕುಮ್ ಸದಸ್ಯರೆಲ್ಲರಲ್ಲಿ ಒಂದು ಬಗೆಯ ನಿಕಟ ಸ್ನೇಹ ಇರುವುದು ಸ್ಯಾನ್ ಡಿಗೊ ರಾಜ್ಯಮುಕ್ತ ವಿಶ್ವವಿದ್ಯಾಲಯ ಏರ್ಪಡಿಸಿದ ವೆಬಿನಾರ್ ನಲ್ಲಿ ಸ್ಪಷ್ಟವಾಗುತ್ತಿತ್ತು.
ರೊಟಿಮಿ ಅವರ ಕೆಲವು ನಾಟಕಗಳನ್ನ ಹೆಸರಿಸಬಹುದು. ‘ಅವರ್ ಹಸ್ಬೆಂಡ್ ಹ್ಯಾಸ್ ಗಾನ್ ಮ್ಯಾಡ್ ಅಗೇನ್’, ‘ಕುರುಮ್ನಿ’, ಒವನ್ರಮೆವೆನ್ ನೊಬೈಸಿ’, ‘ದಿ ಗಾಡ್ಸ್ ಆರ್ ನಾಟ್ ಟು ಬ್ಲೇಮ್..’. ಇವುಗಳಲ್ಲಿ ತುಂಬ ಚರ್ಚೆಗೆ ನಿಲುಕಿದ್ದು ದಿ ಗಾಡ್ಸ್ ಆರ್ ನಾಟ್ ಟು ಬ್ಲೇಮ್’ ನಾಟಕ. ಇದು ನನ್ನ ತುಂಬ ಇಷ್ಟದ ನಾಟಕ ಕೂಡ. ವೆಬಿನಾರ್ ನಲ್ಲಿ ರೊಟಿಮಿ ಬಗ್ಗೆ ಮಾತುಕಥೆ ಸಾಗಿದ್ದಾಗ ನನ್ನನ್ನು ಈ ನಾಟಕದ ಅನನ್ಯತೆ ತಾಕಲು ಆರಂಭಿಸಿತು. ತುಂಬ ಹಿಂದೆ ಓದಿ ನೋಟ್ಸ್ ಮಾಡಿಕೊಂಡಿದ್ದ ನಾಟಕ.
ಈ ನಾಟಕ ಅರ್ಥೈಸಿಕೊಳ್ಳಲು ರಂಗಭೂಮಿಯಲ್ಲಿ ರೊಟಿಮಿ ನಡೆಸಿದ ಪ್ರಯೋಗಗಳ ಹಿನ್ನೆಲೆ ಕೆದಕಬೇಕು. ಆಗ ನಾಟಕದ ಒಳಪದರಗಳ ಅರ್ಥ ತೆರೆದುಕೊಳ್ಳುತ್ತದೆ.
ರೊಟಿಮಿ ಪಾಶ್ಚಾತ್ಯ ರಂಗಪರಂಪರೆಯಿಂದ ಶಿಕ್ಷಣ ಪಡೆದರೂ ಆ ಎಲ್ಲದರಿಂದ ಬಿಡಿಸಿಕೊಂಡು ತನ್ನ ನೆಲದ ರಂಗಭೂಮಿಯಲ್ಲಿನ ಪ್ರಯೋಗಗಳ ಜೊತೆ ಸಂಪರ್ಕ ಸೇತು ನಿರ್ಮಿಸಿಕೊಂಡವರು. ದೇಸಿ ಪರಂಪರೆಯಲ್ಲಿನ ನಾಟಕ, ಹಾಡು, ಕುಣಿತ ಹಾಗು ಮೂಕಾಭಿನಯದಿಂದ ಸರಕು ತೆಗೆದುಕೊಂಡು ನಾಟಕ ಕಟ್ಟಲು ಅಣಿಯಾದವರು. ಜೊತೆಗೆ ಜನಪ್ರಿಯ ರಂಗಭೂಮಿಯನ್ನ ಉತ್ತೇಜಿಸಲು ಆರಂಭಿಸಿದರು.
Theatre of conviviality – ಒಂದು ಬಗೆಯ ಉತ್ಸಾಹಭರಿತ ಮನರಂಜನೆಯ ರಂಗಭೂಮಿಯ ಪ್ರತಿನಿಧೀಕರಣ ಅವರ ಎಲ್ಲ ನಾಟಕಗಳಲ್ಲಿ ತುಂಬ ನಿಚ್ಚಳವಾಗಿ ಕಾಣುತ್ತಿತ್ತು. ಸಮುದಾಯ ಮತ್ತು ಒಳಗೊಳ್ಳುವಿಕೆ ರೊಟಿಮಿ ನಾಟಕಗಳ ಮೂಲ ಸ್ರೋತ ಅನಿಸುವಷ್ಟರ ಮಟ್ಟಿಗೆ ಅವರ ಪ್ರಯೋಗಗಳು ಇರುತ್ತಿದ್ದವು. ಇದು ಉಂಟುಮಾಡಿದ ಪರಿಣಾಮ ಹಾಗೂ ಮೂಡಿಸಿದ ಪ್ರಭಾವ ತುಂಬ ದೊಡ್ಡಮಟ್ಟದ್ದು.
ರೊಟಿಮಿ ರಂಗಭೂಮಿ ಪ್ರಪಂಚದ ಒಳಗೆ ಹಾಗು ಹೊರಗೆ ಸಮುದಾಯಗಳ ನಿರ್ಮಾಣ ಮಾಡುವ ನಿಟ್ಟಿನಲ್ಲಿ ರಂಗವನ್ನ ನೋಡಿದವರು. ರಂಗಸ್ಥಲವೆಂಬುದು ಒಳ ಆವರಣದಲ್ಲಿ ನಡೆಯುವ ಒಂದು ಕೃತಕ ಕಲೆಯಲ್ಲ, ಬದಲಿಗೆ ಭೂತ, ವರ್ತಮಾನ ಹಾಗು ಭವಿಷ್ಯಗಳ ಜೊತೆ ಕಲ್ಪಿಸಿಕೊಳ್ಳುವ ಸಂಪರ್ಕ ಸೇತು ಎನ್ನುವ ಬಗೆಯಲ್ಲಿ ಅವರ ದರ್ಶನವಿತ್ತು. ಇದು ವಿಸ್ತೃತ ಸಮುದಾಯಗಳ ಜೊತೆಗೆ ಒಂದು ನಂಟು ಬೆಳೆಸಿಕೊಳ್ಳಲು ಸಹಕರಿಸುತ್ತದೆ ಹಾಗೂ ಅಂತಿಮವಾಗಿ ಮಾನವತೆಗೆ ತುಡಿಯುತ್ತದೆ ಎನ್ನುವುದನ್ನು ಗುರುತಿಸಿದ್ದರು.
ತುಂಬ ಮಹತ್ವದ ಸಂಗತಿ ಅಂದರೆ ಆಧುನಿಕ ಜಗತ್ತಿನಲ್ಲಿ ಕೆಲವು ನಾಟಕಕಾರರು ಪ್ರತಿಪಾದಿಸಿದ Alienation ತತ್ವಕ್ಕೆ ರೊಟಿಮಿ ರಂಗಪ್ರಯೋಗಗಳು ಮತ್ತು ಅವರ ದರ್ಶನ ವಿರುದ್ಧವಾಗಿತ್ತು. ಒಂದು ಕಡೆ ಐರ್‌ಲ್ಯಾಂಡಿನ ಸ್ಯಾಮುಯಲ್ ಬೆಕೆಟ್, ಫ್ರಾನ್ಸಿನ ಯೂಜಿನ್ ಅಯನೆಸ್ಕೊ ಹಾಗೂ ಜೀನ್ ಜೆನೆಟ್, ಬ್ರಿಟನ್ ನ ಹೆರಾಲ್ಡ್ ಪಿಂಟರ್, ಜೊ ಓರ್ಟನ್ ಇವರೆಲ್ಲರೂ ಏಲಿಯನೇಷನ್ ತತ್ವ ಪ್ರತಿಪಾದಿಸಿದರು. ಅವರುಗಳೆಲ್ಲ ಹತಾಶೆ, ಒಂಟಿತನ, ಖಾಲಿಭಾವ ಹಾಗು ಕಠೋರ ವಿಧಿಯ ಬಗ್ಗೆ ಬರೆದರೆ ರೊಟಿಮಿ ಮಾತ್ರ ಸಮುದಾಯಗಳ ಒಳಗೊಳ್ಳುವಿಕೆ ಕಡೆಗೆ ಹೆಚ್ಚು ಒತ್ತು ಕಲ್ಪಿಸಿದರು.
ರೊಟಿಮಿಯ ಮಾನವತ್ವದ ಪ್ರತಿಪಾದನೆಯೇ ಬೇರೆ ಬಗೆಯದು. ದಕ್ಷಿಣ ಆಫ್ರಿಕಾದ ಪರಿಕಲ್ಪನೆಯ ಉಬುಂಟು ಅಥವಾ ತಾಂಜೇನಿಯನ್ ಮಾದರಿಯ ಉಜಾಮಾ – ಇವು ಸ್ವತಂತ್ರ ಅಸ್ತಿತ್ವಕ್ಕಿಂತ ಒಟ್ಟು ಸಮುದಾಯವಾಗಿ ಒಳಗೊಳ್ಳುವ ಕಡೆ ಹೆಚ್ಚು ಗಮನ ಹರಿಸಿದವು. ಅಂದರೆ ರೊಟಿಮಿಯ ಮಾನವತ್ವ ಸಾಮಾಜಿಕ ಬದಲಾವಣೆಗೆ ಒಂದು ಪ್ರಧಾನ ವಾಹನವಾಗಿ ಕಾರ್ಯನಿರ್ವಹಿಸಿತು ಎಂಬುದು ಗಮನಾರ್ಹ.
ನನಗೆ ರೊಟಿಮಿ ಅವರ ‘ದಿ ಗಾಡ್ಸ್ ಆರ್ ನಾಟ್ ಟು ಬ್ಲೇಮ್’ ತುಂಬ ಮಹತ್ವದ ನಾಟಕ ಅನಿಸಿದ್ದು ಅದನ್ನು ಅವರು ಸೊಪೊಕ್ಲಿಸ್ ನ ‘ಈಡಿಪಸ್’ ನಾಟಕವನ್ನ ರೂಪಾಂತರಿಸಿರುವ ಬಗೆಯಿಂದ. ರೊಟಿಮಿ ತಾವೊಬ್ಬರು ವಸಾಹತೋತ್ತರ ನಾಟಕಕಾರರಾಗಿ ಗ್ರೀಕ್ ನಾಟಕಗಳ ದುರಂತ ಹಾಗೂ ಅವುಗಳ ಪ್ರತಿರೂಪದ ಬಗ್ಗೆ ಆಸ್ಥೆ ಮತ್ತು ಪ್ರಜ್ಞೆ ಹೊಂದಿದ್ದವರು. ಈಡಿಪಸ್ ನಾಟಕವನ್ನ ಅನುವಾದಿಸಿ ಆಡುವುದು ಬೇರೆಯ ಸಂಗತಿ. ಆದರೆ ರೂಪಾಂತರಕ್ಕೆ ಒಳಪಡಿಸಿ ತನ್ನ ಕಾಲಮಾನದ ಚಿಂತನೆಯ ನೆಲೆಯಲ್ಲಿ ನೋಡುವುದು ಸವಾಲಿನ ಕೆಲಸ. ರೊಟಿಮಿ ಈ ಸವಾಲು ಸ್ವೀಕರಿಸಿದರು. ಮತ್ತು ಸಾರ್ವಕಾಲಿಕ ದುರಂತ ನಾಟಕ ಅನಿಸಿಕೊಂಡಿದ್ದ ‘ಈಡಿಪಸ್’ ಅನ್ನು ಪೂರ್ಣ ಹೊಸದಾಗಿ ಸೃಷ್ಟಿಸಿ ಚರ್ಚೆ ಹುಟ್ಟು ಹಾಕಿದರು.
ರೊಟಿಮಿ ಹುಟ್ಟುಹಾಕಿದ ಒರಿ ಒಲಕುಮ್ ನಲ್ಲಿ ಭಾಗಿಯಾದ ಪ್ರತಿಯೊಬ್ಬರಲ್ಲೂ ಬಿಡಿಸಿಕೊಳ್ಳಲಾರದ ಒಂದು ನಂಟು ಬೆಳೆಯಲು ಆರಂಭಿಸಿತು. ಅವರೆಲ್ಲರಿಗೆ ವಯೋಮಾನ ಹೆಚ್ಚುತ್ತಾ ಹೋದಂತೆಲ್ಲ ಈ ನಂಟು ಹೆಚ್ಚುತ್ತಲೇ ಹೋದದ್ದು ವಿಶೇಷ.
ನಾನಿಲ್ಲಿ ಈಡಿಪಸ್ ನಾಟಕ ಪರಿಚಯಿಸಿ ರೊಟಿಮಿಗೆ ಹೊರಳುವುದಿಲ್ಲ. ಬದಲಿಗೆ ರೊಟಿಮಿ ತನ್ನ ರೂಪಾಂತರದಲ್ಲಿ ಮಾಡಿಕೊಂಡಿರುವ ಬದಲಾವಣೆಗಳ ಮೂಲಕ ಪ್ರವೇಶಿಸುತ್ತೇನೆ. ಯಾಕೆಂದರೆ ಈಡಿಪಸ್ ನಾಟಕದ ಪಾತ್ರಗಳು ಮತ್ತು ಆ ನಾಟಕದ ಆಶಯ ಹಲವರಿಗೆ ತಿಳಿದೇ ಇರುತ್ತದೆ.
ರೊಟಿಮಿ ಅವರ ‘ದಿ ಗಾಡ್ಸ್ ಆರ್ ನಾಟ್ ಟು ಬ್ಲೇಮ್’ ನಲ್ಲಿ ಈಡಿಪಸ್ ‘ಒಡೆವಲೆ’ಯಾಗಿ ರೂಪಾಂತರ ತಳೆದಿದ್ದಾನೆ. ಕಿಂಗ್ ಲಯಸ್ ಆಪ್ರಿಕದ ದೊರೆ ‘ಅಡೆಟುಸ’ ಆಗುತ್ತಾನೆ. ರಾಣಿ ಜೊಕಾಸ್ತ ಆಫ್ರಿಕದ ರಾಣಿ ಒಜೋಲ ಆಗುತ್ತಾಳೆ. ಕ್ರಯಾನ್ ಅಡ್ರೆಪೊ ಆಗುತ್ತಾನೆ. ಟೈರೀಷಿಯಸ್ ಬಾಬ ಫಕನುಲ್ – ಕುರುಡು ತತ್ವಜ್ಞಾನಿ ಆಗುತ್ತಾನೆ. ಮೂಲ ಪಠ್ಯದಲ್ಲಿನ ಕುರಿಗಾಹಿ, ಘೂಂಕ ಆಗುತ್ತಾನೆ. ಥೀಬ್ಸ್ ಎನ್ನುವುದು ಆಫ್ರಿಕನ್ ಹಿನ್ನೆಲೆಯಲ್ಲಿ ಕುಟುಂಜೆ ಆಗಿ ಇಡೆ ಎನ್ನುವುದು ಮಾತಾಪಿತೃಗಳ ವಧಾ ಸ್ಥಾನವಾಗುತ್ತದೆ.
ತುಂಬ ಮುಖ್ಯವಾದ ಸಂಗತಿ ಅಂದರೆ ಸೋಫಕ್ಲಿಸನ ಈಡಿಪಸ್ ನಾಟಕವನ್ನ ಯೊರೋಬ ಪರಂಪರೆಗಳು ಪ್ರಾಬಲ್ಯವಿರುವಲ್ಲಿ ವಸಾಹತುಪೂರ್ವ ಸಮಾಜಕ್ಕೆ ಹೊಂದಿಸಿ ರೂಪಾಂತರಿಸುವಾಗ ರೊಟಿಮಿ ವಸಾಹತಿನ ಪರಂಪರೆಯಿಂದ ನೈಜೀರಿಯಾದ ಅಸ್ತಿತ್ವವನ್ನ ಸ್ವತಂತ್ರವಾಗಿ ಉಳಿಸಿಕೊಂಡು ಬರೆಯುತ್ತಾರೆ. ಹೀಗೆ ಮಾಡುವಾಗ ರೊಟಿಮಿ ಈಡಿಪಸ್ ಮೂಲ ಪಠ್ಯಕ್ಕೆ ಕೆಲವು ಬದಲಾವಣೆಗಳನ್ನ ಮಾಡಿಕೊಳ್ಳುತ್ತಾರೆ.
ಮೊದಲಿಗೆ ನಮ್ಮ ಗಮನ ಸೆಳೆಯುವುದು ನಾಟಕ ಹೆಸರು. ಈಡಿಪಸ್ ಹೆಸರಿನ ಬದಲಿಗೆ ‘ದಿ ಗಾಡ್ಸ್ ಆರ್ ನಾಟ್ ಟು ಬ್ಲೇಮ್’ ಎಂದು ಬದಲಾಗಿದೆ. ಇದು ನಾಯಕನ ದುರಂತಕ್ಕೆ ದೇವತೆಗಳು ಕಾರಣರಲ್ಲ, ಬದಲಿಗೆ ಒಡೆವಲೆಯ ದುರಂತವನ್ನ ಅವನಲ್ಲಿನ ಗುಣವಿಶೇಷತೆ ಮತ್ತು ದೋಷಗಳಿಂದಲೇ ನಿರ್ಧರಿಸಬೇಕು ಎನ್ನುವುದನ್ನು ಸೂಚಿಸುತ್ತದೆ. ರೊಟಿಮಿ ಪ್ರಕಾರ ಒಡೆವಲೆ ತನ್ನ ಮೊಂಡುತನದಿಂದಲೇ ಗುರುತಿಸಿಕೊಂಡಿದ್ದಾನೆ. ಬಹಳ ಬೇಗ ಕೋಪಿಸಿಕೊಳ್ಳುವ ಗುಣ ಹೊಂದಿದ್ದಾನೆ. ತನ್ನ ಸುತ್ತಲಿನ ಜನಾಂಗದವರ ಅನುಮಾನದ ಗುಣದಿಂದ ಸುತ್ತುವರೆದಿದ್ದಾನೆ.
ಇದು ರೊಟಿಮಿ ಮಾಡಿರುವ ಮಹತ್ವದ ರೂಪಾಂತರ ಅಥವಾ ಬದಲಾವಣೆ. ಸೋಫೋಕ್ಲಿಸನ ನಾಟಕದ ಭಾಗದಲ್ಲಿ ದೈವ ಪ್ರಧಾನ ಪಾತ್ರ ವಹಿಸುತ್ತದೆ. ಅಲ್ಲಿ ಈಡಿಪಸ್ ಅಪೊಲೊ ದೇವತೆಯನ್ನ ತನ್ನ ಹಣೆಬರಹದ ಸಂಬಂಧ ನಿಂದಿಸುತ್ತಾನೆಯೇ ಹೊರತು ತನ್ನನ್ನು ತಾನು ನಿಂದಿಸಿಕೊಳ್ಳುತ್ತಿಲ್ಲ.
ಆದರೆ ಇಲ್ಲಿನ ಈ ಆಫ್ರಿಕನ್ ರೂಪಾಂತರ ಮೂಲ ಕೃತಿಯ ಆಶಯಕ್ಕಿಂತ ಭಿನ್ನ. ಮತ್ತು ತುಂಬ ಸ್ಪಷ್ಟ. ವ್ಯಕ್ತಿಯ ತನ್ನತನ ತನ್ನ ಕ್ರಿಯೆಗಳಿಗೆ ಮೂಲ ಕಾರಣ ಎಂದು ಬಿಂಬಿಸುವುದನ್ನ ರೊಟಿಮಿ ರೂಪಾಂತರದಲ್ಲಿ ಕಾಣಬಹುದು. ಒಡೆವಲೆ ಬೇಟೆಗೆ ಒಳಗಾಗುತ್ತಾನೆ. ಇದಕ್ಕೆ ಕಾರಣ ಅವನು ಅನ್ಯ ಬುಡಕಟ್ಟಿಗೆ ಸೇರಿದವನು ಎನ್ನುವುದು ಕಾರಣವಾಗುತ್ತದೆ. ಸೋಫೋಕ್ಲಿಸನ ಈಡಿಪಸ್ ನಲ್ಲಿ ನಾಯಕರ ಮೂಲ ಸ್ಥಾನ ಬೇರೆಬೇರೆ ಜಾಗಗಳಲ್ಲಿ ಕೇಂದ್ರೀಕೃತವಾಗಿದೆ. ಆದರೆ ಒಡೆವಲೆಯ ಸಂಗತಿ ಬೇರೆ ಇದೆ. ಆತ ತಾನು ಹೊಂದಿರುವ ಜನಾಂಗಿಯ ಹಿನ್ನೆಲೆಯಲ್ಲಿ ಕುಟುಜೆ ಜನಾಂಗದವರಿಂದ ಬಂಧಿತನಾಗುವವನು. ಮತ್ತು ಈ ಎಲ್ಲವನ್ನೂ ವಸಾಹತುಶಾಹಿ ಪ್ರಜ್ಞೆಯ ಕೊನೆಗಾಲದಲ್ಲಿ 1960ರ ದಶಕದಲ್ಲಿ ನೈಜೀರಿಯಾ ಎದುರಿಸಿದ ಅಂತರ್ಯುದ್ಧದ ಘಟನೆಗಳ ಹಿನ್ನೆಲೆಯಲ್ಲಿ ಓದಿಕೊಳ್ಳಬಹುದು.
ಈ ಯುದ್ಧದ ಕಿಡಿ ಹೊತ್ತಿಸಿದ್ದು ಯುರೋಪಿಯನ್ ಶಕ್ತಿಗಳು. ಇವುಗಳಿಂದ ವಸಾಹತುಶಾಹಿ ಹಾಗು ನವ ವಸಾಹತುಶಾಹಿ ಪಾಲಿಸಿಗಳು ನೈಜೀರಿಯಾದ ಮೇಲೆ ಪರಿಣಾಮ ಬೀರಿ ಯುದ್ಧಕ್ಕೆ ಕಾರಣವಾಗಿದ್ದವು. ನೈಜೀರಿಯಾದಲ್ಲಿ ಇಂಥ ಅಂತರ್ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ರೊಟಿಮಿಗೆ ಈಡಿಪಸ್ ನಾಟಕ ಬೇರೆ ಬಗೆಯಲ್ಲಿ ಕಂಡಿತು. ಆದರೆ ರೊಟಿಮಿ ಒಂದು ಸಂದರ್ಶನದಲ್ಲಿ ‘The title really has more to it than it meets the eye. ‘The Gods are not to blame’ does not refer to the mythological gods or mystic dieties of the African pantheon’ ಎಂದಿದ್ದಾರೆ.
ಹಾಗಾದರೆ ಮತ್ತೇನು ಎಂದು ಶೋಧಿಸುತ್ತಾ ಸಾಗಿದರೆ ರೊಟಿಮಿಯ ವಿಚಾರ ಅನಾವರಣಗೊಳ್ಳುತ್ತಾ ಸಾಗುತ್ತದೆ. ಅವರು ಹೇಳುವಂತೆ ನಾಟಕದಲ್ಲಿನ ‘ದೇವರು’ ಪದ ಯಾವ ಪುರಾಣ ದೇವತೆಗಳೂ ಅಲ್ಲ ಅಥವಾ ಆಫ್ರಿಕನ್ ದೇವಾಲಯಗಳ ಪರಂಪರೆಯ ಮಾಂತ್ರಿಕತೆಗೆ ಸಂಬಂಧಿಸಿದವೂ ಅಲ್ಲ. ಬದಲಿಗೆ ಅವು ರಾಷ್ಟ್ರರಾಜಕಾರಣದ ಶಕ್ತಿಗಳನ್ನ ಒಳಗೊಳ್ಳುವಂಥವು. ಉದಾಹರಣೆಗೆ ಅಮೆರಿಕ, ರಷ್ಯಾ, ಇಂಗ್ಲೆಂಡ್ ಇತ್ಯಾದಿ ರಾಷ್ಟ್ರಗಳು. ಇವು ಜಾಗತಿಕ ರಾಜಕಾರಣದ ಗತಿಯ ಮೇಲೆ ಸರ್ವಾಧಿಕಾರ ಸಾಧಿಸುವಂಥವು.
ರೊಟಿಮಿ ಹೇಳುವ ಹಾಗೆ ನಾಟಕದ ಶೀರ್ಷಿಕೆಯ ಹಾಗೆ ರಾಜಕಾರಣದ ‘ದೇವರುಗಳನ್ನು (ಗಾಡ್ಸ್) ದೂಷಿಸಬೇಕಾಗಿಲ್ಲ. ಅಥವಾ ರಾಷ್ಟ್ರಮಟ್ಟದಲ್ಲಿನ ನಮ್ಮ ಸೋಲುಗಳಿಗೆ ಹೊಣೆ ಕೂಡ ಮಾಡಬೇಕಾಗಿಲ್ಲ. ಇದನ್ನು ನೈಜೀರಿಯಾದಲ್ಲಿನ ಅಂತರ್ಯುದ್ಧದ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು ಎನ್ನುತ್ತಾರೆ. ಕಾರಣ ನೈಜೀರಿಯಾದ ಸಂಯುಕ್ತರಾಷ್ಟ್ರವಾದಿಗಳಿಗೆ ಆಸರೆ ಕೊಟ್ಟ ರಷ್ಯಾ ಹಾಗೂ ಬ್ರಿಟನ್ ದೇಶಗಳನ್ನ ಬೈಆಫ್ರನ್ನರು ದೂಷಿಸಿದರು. ಇದಕ್ಕೆ ದಾಳಿ ಮುಖ್ಯ ಕಾರಣವಾಗಿತ್ತು. ಮತ್ತೊಂದು ಕಡೆ ಸಂಯುಕ್ತ ರಾಷ್ಟ್ರವಾದಿಗಳು ಫ್ರಾನ್ಸ್ ದೇಶವನ್ನ ಹಾಗೂ ಒಂದು ಹಂತಕ್ಕೆ ಅಮೇರಿಕವನ್ನ ದೂಷಿಸಿದರು. ಯಾಕೆಂದರೆ ಕೆಲವು ಚಾರಿಟಿ ಸಂಸ್ಥೆಗಳು ಪ್ರತ್ಯೇಕತೆಯನ್ನು ಬೆಂಬಲಿಸಿದ ಬೈಆಫ್ರನ್ನರಿಗೆ ಕುಮ್ಮಕ್ಕು ಕೊಟ್ಟವು ಎನ್ನುವುದು ಕಾರಣವಾಗಿತ್ತು.
ಆದರೆ ರೊಟಿಮಿ ಹೇಳುವಂತೆ ಆ ರಕ್ತಸಿಕ್ತ ದುರಂತಕ್ಕೆ, ಬದುಕು ಮತ್ತು ಸ್ವತ್ತನ್ನು ಕಳೆದುಕೊಂಡದ್ದಕ್ಕೆ ನಮ್ಮ ಕಾಲಹರಣ ಹಾಗು ಪರಸ್ಪರರಲ್ಲಿದ್ದ ಜನಾಂಗೀಯ ಅಪನಂಬಿಕೆಗಳು ಕಟ್ಟಕಡೆಗೆ ಹಗೆತನವಾಗಿ ಮಾರ್ಪಾಟಾದವು ಎನ್ನುವುದು. ಬುಡಕಟ್ಟುಗಳ ಈ ರಾಕ್ಷಸತ್ವ ರಾಷ್ಟ್ರದ ಬದುಕನ್ನ ಎಲ್ಲ ಬಗೆಯಲ್ಲೂ ಕಲಕಿತು. ಈ ವಿಭಜನೆಯ ಲಾಭವನ್ನ ರಾಜಕಾರಣಿಗಳು ಸಹಜವಾಗಿ ಪಡೆದರು. ದುಡಿಮೆಯ ಫಲವನ್ನು ಅದರಲ್ಲಿ ವಿನಿಯೋಗಿಸಲಾಗಿತ್ತು. ಜೊತೆಗೆ ಮನುಷ್ಯ ಸಂಬಂಧಗಳು ಕೆಲವೊಮ್ಮೆ ಬುಡಕಟ್ಟುಗಳ ಧರ್ಮಾಂಧತೆಗೆ ಸಿಲುಕಿಕೊಂಡವು. ಇಂಥ ರಕ್ಕಸ ನಮ್ಮ ಬದುಕು ಹೊಕ್ಕು ನಮ್ಮಲ್ಲಿ ಒಡಕು ತರುತ್ತಿರುವಾಗ ನಾವು ಹೊರಗಿನ ರಾಜಕೀಯ ಶಕ್ತಿಗಳನ್ನ ದೂಷಿಸಿ ಪ್ರಯೋಜನವಿಲ್ಲ ಎಂಬುದನ್ನು ರೊಟಿಮಿ ಈಡಿಪಸ್ ನಾಟಕದ ತನ್ನ ರೂಪಾಂತರದ ಮೂಲಕ ಹೇಳಲು ಬಯಸಿದ್ದು.
ಬೆಂಗಳೂರಿನಲ್ಲಿ ನಡೆದ ರಂಗನಮನ ಕಾರ್ಯಕ್ರಮದಲ್ಲಿ ನನಗೆ ರೊಟಿಮಿ ಮತ್ತು ಅವರ ನಾಟಕ ಜಗತ್ತು ನೆನಪಾಗಲು ಕಾರಣ ಇದೆ. ರೊಟಿಮಿ ತನ್ನ ನೆಲೆಯಲ್ಲಿ ಮತ್ತು ತನ್ನ ನೆಲದಲ್ಲಿ ಸಮುದಾಯಗಳನ್ನು ಒಳಗೊಳ್ಳುವಂಥ ನಾಟಕ ಪ್ರಯೋಗಗಳಿಗೆ ತೊಡಗಿದವರು. ನಮನ ಕಾರ್ಯಕ್ರಮದಲ್ಲಿ ಬೆಂಗಳೂರು ಸಮುದಾಯ ರಂಗತಂಡದ ಹಲವರು ಇದ್ದರು. ಸಹಜವಾಗಿ ಸಮುದಾಯದ ಆಶಯ ಮತ್ತು ಧ್ಯೇಯೋದ್ದೇಶಗಳ ಅನುಸಾರವಾಗಿಯೇ ಮಾತುಗಳು ಮತ್ತು ನೋಟಕ್ರಮ, ಪರಿಚಯ ಎಲ್ಲ ಇತ್ತು. ಬಹುತೇಕವಾಗಿ ಇದು ರೊಟಿಮಿ ಪ್ರತಿಪಾದಿಸಿದ ಸಮುದಾಯಗಳ ಒಳಗೊಳ್ಳುವಿಕೆಗೆ ಹತ್ತಿರದ ಪರಿಕಲ್ಪನೆ. ಹಾಗಾಗಿ ನನಗೆ ಈಚೆಗೆ ನಡೆದ ವೆಬಿನಾರ್, ಅದರಲ್ಲಿ ಪ್ರಸ್ತಾಪಗೊಂಡ ರೊಟಿಮಿ ನೆನಪಾಗುತ್ತಲೇ ಹೋದರು.
ಇಂಥದ್ದೊಂದು ಕೃತಿಯನ್ನ ತನ್ನ ಕಾಲಮಾನ, ತನ್ನ ನಾಡಿನ ಅಂತರ್ಯುದ್ಧದ ಹಿನ್ನೆಲೆಯಲ್ಲಿ ನೋಡಿ ರೂಪಾಂತರಿಸುವುದು ಕಷ್ಟದ ಕೆಲಸ. ಹೀಗೆ ಮಾಡಿಯೂ ಮರೆವಿಗೆ ಸಂದಂತೆ ಇದ್ದ ರೊಟಿಮಿ ಇಪ್ಪತ್ತು ವರ್ಷಗಳ ನಂತರ ಚರ್ಚೆಗೆ ಬಂದದ್ದು ಕಾಲದ ವೈಚಿತ್ರ್ಯ. ಅಂತೂ ನೆನಪಿಗೆ ನಿಲುಕಿದರಲ್ಲ ಎಂದು ಸಮಾಧಾನ ಮಾಡಿಕೊಳ್ಳಲಿಕ್ಕೆ ರೊಟಿಮಿ ಸಾಧಾರಣ ಮಟ್ಟದ ನಾಟಕಕಾರರೇನೂ ಅಲ್ಲ. ಆದರೂ ಮರೆವಿಗೆ ಸಂದಿದ್ದವರನ್ನು ಮತ್ತೆ ಚಾಲ್ತಿಗೆ ತಂದದ್ದು ಖುಷಿಯ ಸಂಗತಿ. ಜೊತೆಗೆ ಅಗಲಿದ ನಮ್ಮ ನೆಲದ ರಂಗಕಲಾವಿದರಿಗೆ ರಂಗನಮನ ಆಯೋಜಿಸಿದ್ದೂ ರಂಗಕುಟುಂಬದ ಭಾವುಕಲೋಕವನ್ನು ಕಾಣಿಸಿತು.
ಈ ‘ನೆನಪು ನಮನ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಹಲವರು ಹಂಚಿಕೊಂಡ ನೆನಪುಗಳ ಜೊತೆಜೊತೆಗೇ ನನಗೆ ರೊಟಿಮಿ ನೆನಪಿಗೆ ನಿಲುಕಿದರು. ಸಮುದಾಯದ ಕುರಿತ ಅವರ ಪರಿಕಲ್ಪನೆಗಳು, ರೂಪಾಂತರ, ಅದರ ಗಹನತೆ ಎಲ್ಲ ನೆನೆಯುತ್ತಿದ್ದಾಗ ನನಗೆ ಮತ್ತೊಂದು ಸಂಗತಿ ನೆನಪಾಯಿತು.
ಈ ಕೋವಿಡ್ ಸಮಯದಲ್ಲೇ ಕಳೆದ ವರ್ಷ ಒಂದು ಸಂದರ್ಶನ ಸರಣಿ ನೋಡುತ್ತಿದ್ದೆ. ಅದರಲ್ಲಿ ಸಂದರ್ಶಕರು ‘ಸಾಮಾನ್ಯವಾಗಿ ರಂಗದ ಮೇಲಿನ ನಟರನ್ನ ಮತ್ತು ಅವರ ಅಭಿನಯದ ಗಮ್ಮತ್ತನ್ನ ಪ್ರೇಕ್ಷಕರು ಗುರುತಿಸಿ ಮೆಚ್ಚುತ್ತಾರೆ. ಆದರೆ ನಾಟಕ ಬರೆದವರನ್ನು ಅಷ್ಟು ಗುರುತಿಸುವುದಿಲ್ಲ ಯಾಕೆ..?’ ಎಂದು ಪ್ರಶ್ನಿಸಿದ್ದರು. ಯಾರಿಗೆ ಏನು ಅರ್ಥವಾಯಿತೊ ನನಗಂತೂ ಈ ಪ್ರಶ್ನೆಯ ಒಳ ಉದ್ದೇಶ ಸ್ಪಷ್ಟವಾಗಿ ಅರ್ಥಕ್ಕೆ ನಿಲುಕಿತು. ನಕ್ಕು ಸುಮ್ಮನಾಗಿದ್ದೆ.
ಆದರೆ ಮೊನ್ನೆ ರೊಟಿಮಿ ನೆನಪಿಗೆ ನಿಲುಕಿದಾಗ ಸಂದರ್ಶಕರೊಬ್ಬರ ಪ್ರಶ್ನೆಯನ್ನ ರೊಟಿಮಿ ಹಿನ್ನೆಲೆಯಲ್ಲಿ ನನ್ನನ್ನು ನಾನೇ ಕೇಳಿಕೊಂಡೆ. ರಂಗಭೂಮಿಯಲ್ಲಿ ಏನೇನೋ ಸರ್ಕಸ್ ಮಾಡಿ ಇಂಪ್ರೆಸ್ ಮಾಡಲು ಮುಂದಾಗದೆ ತನ್ನ ನೆಲದ ಮತ್ತು ಯುದ್ಧದ ಹಿನ್ನೆಲೆಯಲ್ಲಿ ಒಂದು ಮಹತ್ವದ ಗ್ರೀಕ್ ನಾಟಕವನ್ನು ರೂಪಾಂತರಿಸಿದ ರೊಟಿಮಿಯೇ ಮರೆವಿಗೆ ಸಂದು ಈಗ ಧುತ್ತನೆ ಚರ್ಚೆಗೆ ಒದಗಿ ಬರುತ್ತಾರೆ ಅಂದರೆ ಅವರ ಹಾಗೆ ಚಿಂತಿಸಿ ಬರೆಯದವರ ಕಥೆ ಏನು? ಈ ಹಲುಬುವಿಕೆಗೆ ಅರ್ಥವಿದೆಯೇ ಎಂದು ಕೇಳಿಕೊಂಡು ನಕ್ಕೆ.
ಜೀವಿಸುವುದು, ಬರೆಯುವುದು ಮತ್ತು ನಿರ್ಗಮಿಸುವುದು ಇಷ್ಟನ್ನು ಮಾತ್ರ ಮಾಡಬೇಕು. ನೆನಪಿನಲ್ಲಿ ಉಳಿಯುವಂಥದ್ದನ್ನು ಬರೆದರೆ ಮತ್ತು ಹಾಗೆ ಜೀವಿಸಿದರೆ ನಾವು ಒಂದೊಮ್ಮೆ ಚರ್ಚೆಗೆ ಒಳಗಾಗಬಹುದು, ನಮನ ಕಾರ್ಯಕ್ರಮಕ್ಕೂ ಸರಕಾಗಬಹುದು. ಇಲ್ಲದಿದ್ದರೆ ಇಲ್ಲ. ನಿರ್ಗಮಿಸಿದ ಮೇಲೆ ನಮ್ಮನ್ನು ಭಾವುಕತೆಯಿಂದ ನೆನೆದವರ ನೆನಪುಗಳೂ ತಟ್ಟುವುದಿಲ್ಲ. ಇದು ಬದುಕಿನ ವಿನ್ಯಾಸ ಮತ್ತು ಮಾಯೆ. ಈ ಚೆಂದದ ಫಿಲಾಸಫಿ ತಿಳಿದರೆ ಜೀವಿಸುವುದು ಮತ್ತು ಬರೆಯುವುದರ ಕಡೆ ಹೆಚ್ಚು ತೀವ್ರತೆ ಮೂಡುತ್ತದೆ. ಆದರೆ ಇತರರು ಗುರುತಿಸುವ ಕಡೆ ಮನಸ್ಸು ಹೊಕ್ಕರೆ ಕಾಲದ ತೀರ್ಮಾನ ಅಥವಾ ನಿರ್ಧಾರಗಳ ಕಡೆ ಭಯ ಮತ್ತು ಅಳುಕು ಶುರುವಾಗುತ್ತದೆ. ಚಿಂತಿಸುವ, ಬರೆಯುವ ಖುಷಿಗಿಂತ ಈ ಗುರುತಿಸುವ ಬಯಕೆ ತರುವ ಖುಷಿಯ ಹಿಂದೆ ಏನೇನೋ ನಿರೀಕ್ಷೆಗಳು ಹುದುಗಿಕೊಂಡಿರುತ್ತವೆ. ಈ ನಿರೀಕ್ಷೆ ಬಿಟ್ಟಾಗಲೇ ರೊಟಿಮಿ ಹಾಗೂ ಅವರಂಥ ಸೃಜನಶೀಲರು ನಮಗೆ ಅರ್ಥವಾಗುವುದು. ಮತ್ತು ಅವರ ಕೆಲಸಗಳೇ ನಮ್ಮಲ್ಲಿ ಭಯವನ್ನು ಕಳೆಯುತ್ತವೆ ಮತ್ತು ಎಚ್ಚರ ತಪ್ಪಿದರೆ ಭಯವನ್ನೂ ಹುಟ್ಟುಹಾಕುತ್ತವೆ.
ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ ಉಪನ್ಯಾಸರಾಗಿ ಹಾಗೂ ‘ಕನ್ನಡ ಪ್ರಭ’ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಣೆ. ಸಾಹಿತ್ಯ, ಸಂಗೀತ ಮತ್ತು ರಂಗಭೂಮಿ ಆಸಕ್ತಿಯ ಕ್ಷೇತ್ರಗಳು. ‘ಬೆಳಕು ಸದ್ದುಗಳನ್ನು ಮೀರಿ’, ‘ ಸರಸ್ವತಿ ಅಕಾಡಮಿ’ (ಕಥಾಸಂಕಲನ) ‘ ತಮ್ಮ ತೊಟ್ಟಿಲುಗಳ ತಾವೇ ಜೀಕಿ’ (ಕಾದಂಬರಿ) ಪ್ರಕಟಿತ ಕೃತಿಗಳು. ಪ್ರಸ್ತುತ ‘ಡ್ರಾಮಾಟ್ರಿಕ್ಸ್’ ಎಂಬ ರಂಗತಂಡದಲ್ಲಿ ನಾಟಕ ರಚನೆ ಮತ್ತು ನಿರ್ದೇಶನದಲ್ಲಿ ಸಕ್ರಿಯ.