ಉತ್ತರ ಕರ್ನಾಟಕದ ಅನೇಕ ದೇವಾಲಯಗಳ ಮುಖ್ಯ ಆಕರ್ಷಣೆ ಅವುಗಳ ಬಾಗಿಲವಾಡದ ಸೂಕ್ಷ್ಮಕೆತ್ತನೆಯೇ ಎಂದರೆ ಅತಿಶಯೋಕ್ತಿಯಲ್ಲ. ಅಣ್ಣಿಗೇರಿ ದೇವಾಲಯವೂ ಅದಕ್ಕೆ ಹೊರತಲ್ಲ. ಒಂಬತ್ತು ಪಟ್ಟಿಕೆಗಳಿರುವ ದ್ವಾರಪಟ್ಟಕದ ಸೊಬಗನ್ನು ಎಷ್ಟು ವರ್ಣಿಸಿದರೂ ಸಾಲದು. ಒಂದೊಂದು ಸಾಲಿನಲ್ಲಿ ಅನುಕ್ರಮವಾಗಿ ಸಿಂಹಮುಖಗಳು, ನರ್ತಕರು, ನಾಗದಂಪತಿಗಳು, ಹೂಬಳ್ಳಿಗಳು, ನೃತ್ಯಭಂಗಿಯ ಪುರುಷವಿಗ್ರಹಗಳು, ಬಳ್ಳಿಕಬ್ಬುಗಳ ವಿನ್ಯಾಸವಿರುವ ವಲಯಗಳೊಳಗೆ ವಿವಿಧ ಮಾನವ ಶಿಲ್ಪಗಳು- ಒಂದಕ್ಕಿಂತ ಒಂದು ಸೂಕ್ಷ್ಮವಾಗಿ ಕೆತ್ತಿರುವ ಬಗೆ ಅಚ್ಚರಿತರುತ್ತದೆ. ಒಳಹೊರಗೆ ಉಬ್ಬಿದಂತೆ, ಅಲ್ಲಲ್ಲಿ ಟೊಳ್ಳುಗಳನ್ನು ಸೃಷ್ಟಿಸಿ ಮೂರು ಆಯಾಮಗಳನ್ನು ಉಂಟುಮಾಡಿರುವ ಬಗೆ ಶಿಲ್ಪಕಲಾಪ್ರತಿಭೆಯ ಪರಾಕಾಷ್ಠೆಯೇ ನಿಜ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಮೂವತ್ತೇಳನೆಯ ಕಂತು
ಧಾರವಾಡ ಜಿಲ್ಲೆಯ ಅಣ್ಣಿಗೇರಿಗೆ ಸಾವಿರ ವರ್ಷಗಳಿಗೂ ಮೀರಿದ ಭವ್ಯ ಇತಿಹಾಸವಿದೆ. ಕನ್ನಡದ ಆದಿಕವಿ ಪಂಪನ ಜನ್ಮಸ್ಥಳವಾದ ಅಣ್ಣಿಗೇರಿಯು ಪುರಾಣಕಾಲದಲ್ಲಿ ಅನ್ನಗಿರಿಯೆಂದೂ ಶಾಸನಗಳಲ್ಲಿ ಅಣ್ನಿಂಗೆರೆ ಎಂದೂ ಹೆಸರುಪಡೆದಿದೆ. ಅರವತ್ತು ವರ್ಷಗಳಿಗೆ ಹಿಂದೆ ಅಣ್ಣಿಗೇರಿಯ ಮತದಾರರ ಯಾದಿ ತಯಾರಿಸಹೊರಟ ಸಿಬ್ಬಂದಿಗೆ ಆಶ್ಚರ್ಯವಾಯಿತಂತೆ. ಏಕೆಂದರೆ, ಪ್ರತಿಮನೆಯಲ್ಲೂ ಒಂದಾದರೂ ಹೆಸರು ಅಮೃತ ಎಂಬ ಪದದಿಂದ ಪ್ರಾರಂಭವಾಗುವುದು. ಗಂಡಸಾದರೆ ಅಮೃತಪ್ಪ, ಹೆಂಗಸಾದರೆ ಅಮೃತವ್ವ. ಈ ಹೆಸರಿಗೆ ಕಾರಣಕರ್ತನಾಗಿ ಅಣ್ಣಿಗೇರಿಯಲ್ಲಿ ನೆಲೆನಿಂತ ದೇವರು-ಅಮೃತೇಶ್ವರ. ಸ್ವಯಂಭೂಲಿಂಗವೆಂದು ಪುರಾಣಗಳಲ್ಲಿ ಕೀರ್ತಿತನಾದ ಅಮೃತೇಶ್ವರ.
ಹುಬ್ಬಳ್ಳಿಯಿಂದ ಮೂವತೈದು ಕಿ.ಮೀ. ಹಾಗೂ ಗದಗದಿಂದ ಇಪ್ಪತೈದು ಕಿ.ಮೀ. ದೂರದಲ್ಲಿ ಕಾಣಸಿಗುವ ಅಣ್ಣಿಗೇರಿ ಇತಿಹಾಸಪ್ರಸಿದ್ಧ ಕೇಂದ್ರ. ಬಾದಾಮಿ ಚಾಲುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಹೊಯ್ಸಳ, ಯಾದವ ಮೊದಲಾದ ಅರಸರ ಆಳ್ವಿಕೆಗೆ ಈ ‘ತಿರುಳ್ಗನ್ನಡ’ದ ನಾಡು ಸಾಕ್ಷಿಯಾಗಿದೆ. ಇಲ್ಲಿನ ಅಮೃತೇಶ್ವರ ದೇಗುಲ ಕಲ್ಯಾಣ ಚಾಲುಕ್ಯರ ಆಳ್ವಿಕೆಯ ಕಾಲದಲ್ಲಿ (ಹತ್ತನೆಯ ಶತಮಾನದಲ್ಲಿ) ನಿರ್ಮಾಣಗೊಂಡಿರಬಹುದಾದ ಕಪ್ಪುಶಿಲೆಯ ಕಟ್ಟಡ. ಅನೇಕ ಶಾಸನಗಳಲ್ಲಿ ಈ ದೇವಾಲಯಕ್ಕೆ ವಿವಿಧ ಕಾಲಗಳಲ್ಲಿ ಹೊಯ್ಸಳ ಅಧಿಕಾರಿಗಳು ದತ್ತಿನೀಡಿದ ವಿವರಗಳಿದ್ದು ದೇಗುಲವು ಹೊಯ್ಸಳಕಾಲದ (12ನೇ ಶತಮಾನ) ನಿರ್ಮಾಣವಿರಬಹುದೆಂಬ ಅಭಿಪ್ರಾಯವೂ ಇದೆ.
ಪ್ರವೇಶದ್ವಾರದ ಹೊರಗಿನಿಂದಲೇ ದೇವಾಲಯದ ಭವ್ಯಕಟ್ಟಡವು ಕಣ್ಸೆಳೆಯುತ್ತದೆ. ಪ್ರವೇಶದ್ವಾರದಲ್ಲೇ ಅಡ್ಡಲಾಗಿ ಕಲ್ಲಿನ ದೊಡ್ಡಕಂಬವೊಂದನ್ನು ಇರಿಸಿ ಜನರು ಮೈಬಗ್ಗಿಸಿ ಹೋಗುವಂತಹ ಅನಿವಾರ್ಯವನ್ನು ಅದೇಕೆ ಸೃಷ್ಟಿಸಲಾಗಿದೆಯೋ ತಿಳಿಯದು. ಅಲ್ಲೇ ಮುಂದೆ ಒಳಗುಡಿಗೆ ಸಾಗುವಲ್ಲಿ ಅರ್ಧಮಂಟಪವೊಂದು ಎದುರಾಗುತ್ತದೆ. ಒರಗಲು ಕಕ್ಷಾಸನ, ಕಲ್ಲುಚಪ್ಪಡಿಗಳನ್ನು ಇಳಿಜಾರಾಗಿ ವಿನ್ಯಾಸಗೊಳಿಸಿರುವ ಮುಂದಿನ ಸೂರು, ಬಾಗಿಲ ಚೌಕಟ್ಟಿನ ಸೂಕ್ಷ್ಮಕೆತ್ತನೆ ಎಲ್ಲವೂ ಸೊಗಸಾಗಿವೆ. ಒಳಗುಡಿಯ ಭುವನೇಶ್ವರಿ, ಕಂಬಗಳ ಕೆತ್ತನೆ ಪೂರ್ವಕಾಲದ ಶಿಲ್ಪಪ್ರಾವೀಣ್ಯವನ್ನು ತೋರ್ಪಡಿಸುವಂತಿವೆ. ಮುಖ್ಯಗರ್ಭಗುಡಿಯಲ್ಲಿ ಎರಡು ಅಡಿಗಳಷ್ಟು ಎತ್ತರದ ಅಮೃತೇಶ್ವರಲಿಂಗವಿದೆ. ಅದಕ್ಕೆ ಅಭಿಮುಖವಾಗಿ ಇನ್ನೊಂದು ದಿಕ್ಕಿನಲ್ಲಿ ನಂದಿಯ ವಿಗ್ರಹ. ಇನ್ನೊಂದು ಬದಿಗೆ ಪಾರ್ವತೀದೇವಿಯ ಗುಡಿ.
ಉತ್ತರ ಕರ್ನಾಟಕದ ಅನೇಕ ದೇವಾಲಯಗಳ ಮುಖ್ಯ ಆಕರ್ಷಣೆ ಅವುಗಳ ಬಾಗಿಲವಾಡದ ಸೂಕ್ಷ್ಮಕೆತ್ತನೆಯೇ ಎಂದರೆ ಅತಿಶಯೋಕ್ತಿಯಲ್ಲ. ಅಣ್ಣಿಗೇರಿ ದೇವಾಲಯವೂ ಅದಕ್ಕೆ ಹೊರತಲ್ಲ. ಒಂಬತ್ತು ಪಟ್ಟಿಕೆಗಳಿರುವ ದ್ವಾರಪಟ್ಟಕದ ಸೊಬಗನ್ನು ಎಷ್ಟು ವರ್ಣಿಸಿದರೂ ಸಾಲದು. ಒಂದೊಂದು ಸಾಲಿನಲ್ಲಿ ಅನುಕ್ರಮವಾಗಿ ಸಿಂಹಮುಖಗಳು, ನರ್ತಕರು, ನಾಗದಂಪತಿಗಳು, ಹೂಬಳ್ಳಿಗಳು, ನೃತ್ಯಭಂಗಿಯ ಪುರುಷವಿಗ್ರಹಗಳು, ಬಳ್ಳಿಕಬ್ಬುಗಳ ವಿನ್ಯಾಸವಿರುವ ವಲಯಗಳೊಳಗೆ ವಿವಿಧ ಮಾನವ ಶಿಲ್ಪಗಳು- ಒಂದಕ್ಕಿಂತ ಒಂದು ಸೂಕ್ಷ್ಮವಾಗಿ ಕೆತ್ತಿರುವ ಬಗೆ ಅಚ್ಚರಿತರುತ್ತದೆ. ಒಳಹೊರಗೆ ಉಬ್ಬಿದಂತೆ, ಅಲ್ಲಲ್ಲಿ ಟೊಳ್ಳುಗಳನ್ನು ಸೃಷ್ಟಿಸಿ ಮೂರು ಆಯಾಮಗಳನ್ನು ಉಂಟುಮಾಡಿರುವ ಬಗೆ ಶಿಲ್ಪಕಲಾಪ್ರತಿಭೆಯ ಪರಾಕಾಷ್ಠೆಯೇ ನಿಜ.
ಈ ಬಾಗಿಲವಾಡಗಳನ್ನು ನೋಡುವುದಕ್ಕಾದರೂ ನೀವು ಅಣ್ಣಿಗೇರಿಗೆ ಬರಲೇಬೇಕು. ಒಳ ಗುಡಿಯ ಮಂಟಪಗಳು ಬಹು ವಿಶಾಲವಾಗಿವೆ. ಅಂತೆಯೇ ಗುಡಿಯ ಹೊರಾವರಣವೂ ವಿಸ್ತಾರವಾಗಿದ್ದು ಕಟ್ಟಡದ ಅಂದಕ್ಕೆ ಪೂರಕವಾಗಿದೆ.
ದೇವಾಲಯದ ಸುತ್ತ ಪ್ರದಕ್ಷಿಣೆ ಬರುವುದಾದರೆ, ಅಮೃತೇಶ್ವರನಿರುವ ಗರ್ಭಗುಡಿಯ ಮೇಲುಭಾಗದಲ್ಲಿ ಶಿಖರವನ್ನು ಕಾಣುತ್ತೀರಿ. ನಾಲ್ಕು ಸ್ತರಗಳ ವಿನ್ಯಾಸವುಳ್ಳ ಶಿಖರರಚನೆ. ಸಿಂಹಮುಖಗಳು, ಅವುಗಳೊಳಗೆ ಯಕ್ಷ, ನರ್ತಕ ಮೊದಲಾದವರು, ಅಲ್ಲಲ್ಲಿ ಆನೆ, ಕಪಿ, ಹಂಸ ಮೊದಲಾದ ಕಿರುಶಿಲ್ಪಗಳು, ಪ್ರತಿಸ್ತರದ ನಡುವೆ ಕೀರ್ತಿಮುಖದೊಳಗೆ ಕಿರುಗೋಪುರಗಳು, ಸ್ತರದ ಹೊರಅಂಚಿನ ಕಳಶ- ಎಲ್ಲವೂ ಸಾವಿರವರ್ಷಗಳ ಕಾಲ ಬಿಸಿಲಿಗೆ ಮೈಯೊಡ್ಡಿ ನಿಂತಿದ್ದರೂ ತಮ್ಮ ಕಲಾಪ್ರೌಢಿಮೆಯನ್ನು ಮೆರೆಸುವಂತೆ ಉಳಿದುಬಂದಿರುವುದು ಸಂತಸದ ವಿಷಯ.
ಮೇಲಿನ ಸ್ತೂಪಿಯನ್ನು ಗಾರೆಯಿಂದ ಪುನರ್ನಿರ್ಮಿಸಿದೆ. ಗರ್ಭಗುಡಿಯ ಮುಂದಿನ ಅಂತರಾಳ, ನವರಂಗ, ಮುಖಮಂಟಪವೇ ಮೊದಲಾದವುಗಳ ಹೊರಗೋಡೆಗಳ ಮೇಲೆ ಹೆಚ್ಚಿನ ಶಿಲ್ಪಗಳಿಲ್ಲದೆ ಸಪಾಟಾಗಿದ್ದರೂ ಮುಖ್ಯಕಂಬಗಳ ನಡುವೆ ಕಿರುಗಂಬಗಳನ್ನು ರೂಪಿಸಿ ಅವುಗಳ ಮೇಲಕ್ಕೆ ಹೂಬಳ್ಳಿಗಳ ವಿನ್ಯಾಸವನ್ನು ರಚಿಸಿರುವ ಬಗೆ ಅಂದವಾಗಿದೆ. ಸುತ್ತುಕಟ್ಟಡದ ಮೇಲಂಚಿನ ಕೈಪಿಡಿಯ ಹೊರಅಂಚಿನಲ್ಲಿ ಮೂರು ಸಾಲುಗಳ ಪಟ್ಟಿಕೆಗಳಿರುವಂತೆ ಜೋಡಣೆಯಿದ್ದು ಪ್ರತಿಸಾಲಿನಲ್ಲಿ ಕಟ್ಟಡದುದ್ದಕ್ಕೂ ಶಿಲ್ಪಗಳ ಕೆತ್ತನೆಯಿದ್ದಿರಬೇಕು. ಈಗ ಅಳಿದುಳಿದ ಹಲವನ್ನು ಗಮನಿಸಿದರೆ, ಕೆಳಸಾಲಿನಲ್ಲಿ ಆನೆ, ಅದರ ಮೇಲಕ್ಕೆ ಹಂಸ, ಹೊರಚಾಚಿಕೊಂಡಂತಿರುವ ಸೂರಿನ ಅಂಚು, ಎಲ್ಲಕ್ಕೂ ಮೇಲೆ ಕೈಪಿಡಿಯಲ್ಲಿ ಸಿಂಹಮುಖಗಳ ಆವರಣಗಳೊಳಗೆ ದೇವಯಕ್ಷಗಂಧರ್ವಾದಿಗಳು- ಈ ಬಗೆಯ ವಿನ್ಯಾಸವನ್ನು ಗುರುತಿಸಬಹುದು.
ಕೆಲವೆಡೆ ಮಿಥುನಶಿಲ್ಪಗಳೂ ನರ್ತಕನರ್ತಕಿಯರ ಬಿಂಬಗಳೂ ಹಾರುವ ಗಂಧರ್ವರ ಶಿಲ್ಪಗಳೂ ಇವೆ. ಮೇಲಂಚಿನಲ್ಲಿ ಒಂದೆಡೆ ದೊಡ್ಡ ಆಕಾರದ ಗಣಪತಿಯ ಭಗ್ನಶಿಲ್ಪವೊಂದಿರುವುದು ಅಚ್ಚರಿಮೂಡಿಸುತ್ತದೆ. ಗದಗ ಲಕ್ಕುಂಡಿ ಮೊದಲಾದ ಪ್ರಸಿದ್ಧ ಸ್ಥಳಗಳಿಗೆ ಭೇಟಿನೀಡುವವರು ಅಣ್ಣಿಗೇರಿಯನ್ನು ನೋಡಲು ಮರೆಯದಿರಿ.
ತಿರು ಶ್ರೀನಿವಾಸಾಚಾರ್ಯ ಗೋಪಾಲ್ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನದ ಕುರಿತು ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಅವರ ‘ಕಾಡು ಕಲಿಸುವ ಪಾಠ’ ಕೃತಿಗೆ ವಿಜ್ಞಾನ ವಿಷಯದಲ್ಲಿ ೨೦೧೩ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.