ನೇರವಾದಿಯಾಗಿದ್ದರಿಂದ ನನಗೆ ಟಿಸಿಹೆಚ್ ನಲ್ಲಿ ನಮ್ಮಂತಹ ಕೆಲವರನ್ನು ಹತ್ತಿಕ್ಕುವ ಪ್ರಯತ್ನವು ನಡೆಯುತ್ತಿತ್ತೇ ವಿನಃ ಯಾರೂ ನಮಗೆ ಸಪೋರ್ಟ್ ಮಾಡಲಿಲ್ಲ. ಈ ರೀತಿಯ ಸ್ಥಿತಿ ಇದ್ದುದರಿಂದ ನಾವು ಯಾವುದೇ ಅಸೈನ್ ಮೆಂಟ್ ಅನ್ನು ಕಾಲಕಾಲಕ್ಕೆ ಬರೆದು ಕೊಡುತ್ತಿದ್ದೆವು. ಇನ್ನು ಪ್ರಾಕ್ಟೀಸ್ ಟೀಚಿಂಗ್‌ನಲ್ಲಿ ಒಂದು ಸಣ್ಣ ತಪ್ಪಿಗೂ ಅವಕಾಶ ಮಾಡಿಕೊಡ್ತಾ ಇರಲಿಲ್ಲ. ಆಗ ನಾವು ಪ್ರಾಕ್ಟಿಕಲ್ ಕ್ಲಾಸ್ ಕೊಡಬೇಕಾಗಿತ್ತು. ಅದಕ್ಕೆ ಒಂದು ಅವಧಿಯ ಪಾಠಕ್ಕೆ 50 ಅಂಕಗಳು ಇದ್ದವು. ನಾವು ಮೊದಲ ವರ್ಷದಲ್ಲಿ ಲಾಂಗ್ವೇಜ್ ಹಾಗೂ ಗಣಿತ ವಿಷಯವನ್ನು ತೆಗೆದುಕೊಂಡು ಬೋಧಿಸಬೇಕಾಗಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತೆರಡನೆಯ ಕಂತು ನಿಮ್ಮ ಓದಿಗೆ
ಬೋಧಿಸುವುದು ಒಂದು ಕಲೆ. ಅದನ್ನು ನಾವೇ ಕಲಿಯುವುದು ಬೇರೆಯವರು ನಮಗೆ ಕಲಿಸುವುದಕ್ಕಿಂತ ಚೆಂದ. ಕೆಲವರಿಗೆ ಕಲಿಸುವ, ವಿಷಯ ಪ್ರಸ್ತುತಪಡಿಸುವ ಕಲೆ ಹುಟ್ಟು ಗುಣವಾಗಿ ಬಂದಿರುತ್ತದೆ. ಅವರು ಏನನ್ನಾದರೂ ಹೇಳುವಾಗ, ಕೇಳುತ್ತಾ ಇರಬೇಕು ಎನಿಸುತ್ತದೆ. ನನಗೆ ಚಿಕ್ಕಂದಿನಿಂದಲೂ ಹಾಡು ಕೇಳುವ ಜೊತೆಗೆ ಗುರುರಾಜಲುನಾಯ್ಡುರವರ ಹರಿಕಥೆ ಕೇಳುವ ಹವ್ಯಾಸ ಇತ್ತು. ನಮ್ಮ ಮನೆಯಲ್ಲಿ ಕ್ಯಾಸೆಟ್ ಹಾಕಿ ಕೇಳುವ ಒಂದು ಹಳೆಯದಾದ ಟೇಪ್ ರೆಕಾರ್ಡರ್ ಇತ್ತು. ರಾಜ್ ಕುಮಾರ್ ನಟಿಸಿದ ಆಡಿಯೋ ಚಲನಚಿತ್ರಗಳು, ರವಿಚಂದ್ರನ್ ಅಭಿನಯದ ಚಲನಚಿತ್ರ ಗೀತೆಗಳು ಹಾಗೂ ಗುರುರಾಜಲುನಾಯ್ಡು ಹೇಳಿರುವ ಹರಿಕಥೆಗಳ ಕ್ಯಾಸೆಟ್ಟುಗಳು ಇದ್ದವು. ಇವಿಷ್ಟೇ ಇದ್ದುದರಿಂದ ಇವನ್ನೇ ನಾನು ಪುನಃ ಪುನಃ ಕೇಳಿದ್ದಿದೆ. ಅದರಲ್ಲೂ ಗುರುರಾಜಲುನಾಯ್ಡು ರವರ ಹರಿಕಥೆ ಕೇಳುವಾಗ ಮೈಮರೆತು ಹೋಗುತ್ತಿದ್ದೆ. ‘ಇತ್ತ ಕೀರ್ತನಾರಂಭ ಕಾಲದಲ್ಲಿ…..’ ಅಂತಾ ಶುರು ಮಾಡಿದ್ರೆ ಮನಸ್ಸು ಪ್ರಫುಲ್ಲಗೊಳ್ಳುತ್ತಿತ್ತು. ಅದು ಮುಗಿಯೋವರೆಗೂ ಎಲ್ಲಿಗೂ ಎದ್ದು ಹೋಗುತ್ತಿರಲಿಲ್ಲ. ಅನೇಕ ಪುರಾಣ ಕಥೆಗಳನ್ನು ಇದರ ಮುಖೇನ ತಿಳಿದುಕೊಂಡಿದ್ದೇನೆ. ಯಾರಾದರೂ ಯಾವುದೇ ವಿಷಯವನ್ನು ಮತ್ತೊಬ್ಬರಿಗೆ ಅರ್ಥವಾಗುವಂತೆ ಹೇಳುತ್ತಾರೋ ಅವರಿಗೆ ಆ ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ ಎಂದರ್ಥ. ಈ ರೀತಿ ಹೇಳಲು ಹೊರಡುವವರು ಮೊದಲು ಹೇಳುವವರು ಆ ವಿಷಯವನ್ನು ತಾವು ಚೆನ್ನಾಗಿ ಅರ್ಥೈಸಿಕೊಂಡಿರಬೇಕು ಮತ್ತು ಅವರಿಗೆ ಅವರೇ ಬೋಧಿಸಿಕೊಂಡಿರಬೇಕು! ಈ ವಿಷಯವನ್ನು ನಾನು ಮೊದಲಿನಿಂದಲೂ ರೂಢಿಸಿಕೊಂಡಿದ್ದೇನೆ. ಯಾವುದೇ ವಿಷಯವನ್ನು ಓದಿದಾಗ ಆ ವಿಷಯದ ಬಗ್ಗೆ ನಾನೇ ಸ್ವಬೋಧನೆ ಸ್ವಮೌಲ್ಯಮಾಪನ, ಮಾಡಿಕೊಳ್ಳುತ್ತೇನೆ. ಕಲಿಕೆಯ ಪರಿಣಾಮಕಾರಿತ್ವಕ್ಕೆ ಸ್ವ ಅಧ್ಯಯನ ಹಾಗೂ ಸ್ವ ಮೌಲ್ಯಮಾಪನ ಇವೆರಡೂ ತುಂಬಾ ಮುಖ್ಯ.
ನನಗೆ ಕಲಿಸಿದ ಗುರುಗಳ ಬಗ್ಗೆಯಾಗಲೀ ಹಾಗೂ ಹಿರಿಯರ ಬಗ್ಗೆಯಾಗಲೀ ಮನಸ್ಸಿನಲ್ಲಿ ತುಂಬಾ ಗೌರವ ಇಟ್ಟುಕೊಳ್ಳುತ್ತೇನೆ. ಹಾಗಂತ ಅದನ್ನು ಮೇಲ್ನೋಟಕ್ಕೆ ತೋರಿಸಿಕೊಳ್ಳಲು ಹೋಗುವುದಿಲ್ಲ. ಕೆಲವರಂತೂ ಅತಿರೇಕವಾಗಿ ವರ್ತಿಸುತ್ತಾರೆ. ಅಗತ್ಯಕ್ಕಿಂತ ಹೆಚ್ಚೇ ಬೆಲೆ ಕೊಡುವಂತೆ ವರ್ತಿಸುವುದು ಇಷ್ಟಪಡುವುದಿಲ್ಲ ಹಾಗೂ ನಾನು ಮತ್ತೊಬ್ಬರಿಂದ ನಿರೀಕ್ಷಿಸುವುದೂ ಇಲ್ಲ. ‘ಅತೀ ವಿನಯಂ ಧೂರ್ತ ಲಕ್ಷಣಂ’ ಎಂಬ ಮಾತಿನ ಪ್ರಭಾವವೋ ಏನೋ?! ನಾನು ಈ ರೀತಿ ಓವರ್ ಆಗಿ ಗೌರವ ಕೊಡಲು ಹೋಗುವುದಿಲ್ಲ. ಆದರೆ ಇಂದಿನ ಸಮಾಜದಲ್ಲಿ ಮೇಲ್ನೋಟಕ್ಕೆ ಗೌರವ ಕೊಡೋದನ್ನು ಹಲವರು ಅತಿಯಾಗಿ ನಿರೀಕ್ಷಿಸುತ್ತಾರೆ. ಇದಕ್ಕೆ ಪಾರಿಭಾಷಿಕವಾಗಿ ‘ಬಕೆಟ್ ಹಿಡಿಯೋದು’ ಅಂತಾ ಹೇಳ್ತಾರೆ. ಅನೇಕ ಕಡೆ ಇದು ವರ್ಕ್ ಔಟ್ ಆಗುತ್ತೆ!! ಸಮಯ ಸಾಧಕರು ಹಾಗೂ ಕಾರ್ಯ ಸಾಧಕರಿಗೆ ಇದೇ ಪ್ರಮುಖ ಮಾನದಂಡ!! ಆದರೆ ಇದು ಬಹಳ ಕಾಲ ಉಳಿಯೋದಿಲ್ಲ. ಅಬ್ದುಲ್ ಕಲಾಂ ರವರು If you salute your duty, you need not salute everybody: but if you pollute your duty, you need to salute everybody!! ಎಂದು ಹೇಳುತ್ತಾರೆ. ಇದಕ್ಕೆ ಪೂರಕವಾಗಿ ಜೆಆರ್ ಡಿ ಟಾಟಾರವರ ಜೀವನದಲ್ಲಿ ಘಟಿಸಿದ ಒಂದು ಘಟನೆಯನ್ನು ಹೇಳುತ್ತೇನೆ. ಅದು ಹೀಗಿದೆ:
ಒಮ್ಮೆ ಜೆ ಆರ್ ಡಿ ಟಾಟಾ ಅವರನ್ನು ಪ್ರತಿಭಾವಂತ ಯುವಕನೊಬ್ಬ ಭೇಟಿಯಾಗಿ ತಾನು ಐಐಟಿ ಯಲ್ಲಿ ಪ್ರಥಮ ರ್ಯಾಂಕ್ ಪಡೆದಿರುವುದಾಗಿ ಹೇಳಿದ. ಆಗ ಅವರು ಅವನಿಗೆ ‘ನಿನ್ನ ಬಯೋಡೇಟಾ ಕೊಡು’ ಎಂದರು. ಅವನು ಅರ್ಜಿಯ ಜೊತೆ ಬಯೋಡೇಟಾ ಕೊಟ್ಟನು. ಅವನ ಬಯೋಡೇಟಾ ಹಾಗೂ ಅರ್ಜಿಯನ್ನು ಕೂಲಂಕುಷವಾಗಿ ಓದಿದ ಟಾಟಾ, ತುಸು ಕೋಪದಿಂದ “ನಿನಗೆ ನೌಕರಿ ಕೊಡುವುದಿಲ್ಲ” ಎಂದು ಹೇಳಿದರು. ಆಗ ಆತ ಹಾಗೆಯೇ ನಿಂತಿದ್ದ. ಅವರ ಬಳಿ ಯಾಕೆ? ಎಂದು ಕೇಳಲು ಅವನಿಗೆ ಧೈರ್ಯ ಸಾಕಾಗಲಿಲ್ಲ. ಆಗ ಟಾಟಾರವರೇ ಹೇಳಿದರು- “ನಿನ್ನ ಸಾಧನೆ ಶ್ಲಾಘನೀಯ. ನೀನು ನಿಜಕ್ಕೂ ಬುದ್ಧಿವಂತನಿದ್ದೀಯಾ. ಆದರೆ ನಿನ್ನ ಮನಸ್ಥಿತಿ ಬಗ್ಗೆ ನನಗೆ ಮರುಕವಿದೆ. ಹೀಗಾಗಿ ನಿನಗೆ ನೌಕರಿ ಕೊಡುವುದಿಲ್ಲ” ಎಂದರು! ಆಗ ಹುಡುಗನು ಅವರ ಮಾತಿಗೆ ಕಕ್ಕಾಬಿಕ್ಕಿಯಾಗಿ ನಿಂತಿದ್ದಾಗ ತಮ್ಮ ಮಾತನ್ನು ಮುಂದುವರೆಸಿ “ನಿನ್ನ ಬಯೋಡೇಟಾದಲ್ಲಿ ದಯವಿಟ್ಟು ನಿಮ್ಮ ಘನ ಸಂಸ್ಥೆಯಲ್ಲಿ ನನಗೊಂದು ನೌಕರಿ ಕೊಡಬೇಕೆಂದು ಬೇಡಿಕೊಳ್ಳುತ್ತೇನೆ” ಎಂದು ಬರೆದಿದ್ದೀಯಲ್ಲಾ “ಭಿಕ್ಷುಕನ ಹೊರತಾಗಿ ಬೇರೆ ಯಾರಿಗೂ ಬೇಡುವ ಹಕ್ಕಿಲ್ಲ. ನೌಕರಿ ಬೇಡಲು ನೀನು ಭಿಕ್ಷಕನಲ್ಲ. ನೀನು ಎಂಜಿನಿಯರ್. ಯಾರನ್ನೂ, ಯಾವತ್ತೂ ಬೇಡಬಾರದು. ನಮ್ಮದನ್ನು ಕೇಳಿ ಪಡೆಯಬೇಕು. ಆ ಹಕ್ಕು ಎಲ್ಲರಿಗೂ ಇರುತ್ತದೆ. ಇನ್ನು ಮುಂದೆ ಹಾಗೆ ಬರೆಯಬೇಡ, ಹಾಗೆ ಬದುಕಬೇಡ” ಎಂದು ಹೇಳಿ ನೌಕರಿ ಕೊಟ್ಟರು!!
ನಿತ್ಯಜೀವನದಲ್ಲಿ ನಮಗೆ ಹಕ್ಕಿದ್ದೂ ನಾವು ಹೀಗೆ ಬೇಡಿಕೊಳ್ಳುವ ಅನೇಕ ಸನ್ನಿವೇಶಗಳನ್ನು ಕಾಣುತ್ತೇವೆ. ನಾವು ಓದುವಾಗ ಟಿಸಿಹೆಚ್ ನಲ್ಲಿ ಶಿಕ್ಷಕರ ನೇಮಕಾತಿಗೆ ಆಂತರಿಕ ಅಂಕಗಳು ಪರಿಗಣನೆಗೆ ಇದ್ದ ಕಾಲ. ಮಾತೆತ್ತಿದರೆ ಇಂಟರ್ನಲ್ ಕಟ್ ಮಾಡ್ತಾರೇನೋ ಎಂಬ ಭಯದಲ್ಲಿ ಅನೇಕ ಪ್ರಶಿಕ್ಷಣಾರ್ಥಿಗಳು ಮನದಲ್ಲಿ ಅವ್ಯಕ್ತ ಭಯವನ್ನು ಮೂಡಿಸಿಕೊಂಡಿದ್ದ ಕಾಲ. ಉಪನ್ಯಾಸಕರಿಗೆ ಪ್ರಶ್ನೆ ಮಾಡುವುದಿರಲಿ ಅವರು ಹೇಳಿದಂತೆ ಶಿರಸಾವಹಿಸಿ ಮಾಡುತ್ತಿದ್ದರು. ನಾನು ಅವರ ಗುಂಪಿಗೆ ಸೇರಿಲ್ಲವಾದ್ದರಿಂದ ಹಿಂದಿನ ಸಾಲಿನಲ್ಲಿ ಕೂರುತ್ತಿದ್ದ ನನ್ನ ಗೆಳೆಯರನೇಕರಿಗೆ ನಮ್ಮ ಉಪನ್ಯಾಸಕರು ತೀರಾ ಕ್ಲೋಸ್ ಆಗಲಿಲ್ಲ. ಕೆಲವರಂತೂ ಈ ಸಿಟ್ಟನ್ನು ಅವರ ವಿಷಯದಲ್ಲಿ ಆಂತರಿಕ ಅಂಕ ಕೊಡುವಾಗ ಫಲಿತಾಂಶದಲ್ಲಿ ತೋರಿಸಿಬಿಟ್ಟಿದ್ದರು. ಇದರ ಎಫೆಕ್ಟ್ ನನಗೆ 2004 ರಲ್ಲಿ ಶಿಕ್ಷಕರ ನೇಮಕಾತಿಗೆ ಅರ್ಜಿ ಕಾಲ್ ಮಾಡಿದಾಗ ಆಯ್ತು. ಆಗ ಆಂತರಿಕ ಅಂಕಗಳ ಪರಿಗಣನೆಗೆ ಇದ್ದುದ್ದರಿಂದ ನನಗೆ ಆಗ ಕೆಲಸ ಸ್ವಲ್ಪವೇ ಅಂಕದಲ್ಲಿ ತಪ್ಪಿ ಹೋಯ್ತು. ಹೀಗೆ ಆದದ್ದೂ ಒಳ್ಳೆಯದೇ ಆಯ್ತು!! ಒಂದೊಳ್ಳೆ ಕಂಪೆನಿಯಲ್ಲಿ ಮೆಡಿಕಲ್ ರೆಪ್ ಆಗಿ ಕಾರ್ಯನಿರ್ವಹಿಸಲು ನನಗೆ ಇದರಿಂದಾಗಿ ನೆರವಾಯ್ತು. ಇದರ ಬಗ್ಗೆ ಮುಂದೆ ಬರೆಯುತ್ತೇನೆ. ಆದರೆ ಈ ರೀತಿ ನನಗೆ ಒಂದು ಅವಕಾಶ ಸಿಗುವಂತೆ ಮಾಡಲು ಹಾಗೂ ನನ್ನ ಮಾನಸಿಕ ಸ್ಥೈರ್ಯವನ್ನು ಬೆಳೆಸಿಕೊಳ್ಳಲು ಆಂತರಿಕ ಅಂಕವನ್ನು ಕಮ್ಮಿ ಕೊಟ್ಟ ನನ್ನ ಟಿಸಿಹೆಚ್ ಗುರುವರ್ಯರಿಗೆ ನನ್ನ ಅನಂತಾನಂತ ಧನ್ಯವಾದಗಳು!! ಮುಂದೆ ಆಂತರಿಕ ಅಂಕವನ್ನು ಪರಿಗಣನೆ ಮಾಡದೇ, ಬರೀ ಬಾಹ್ಯ ಅಂಕಗಳನ್ನೆ ಪರಿಗಣಿಸಿ ಶಿಕ್ಷಕರ ನೇಮಕಾತಿ ನಡೆದಿದ್ದರಿಂದ ನಾನು ಸಿಇಟಿ ಯಲ್ಲಿ ಉತ್ತಮ ಅಂಕ ಪಡೆದು ಶಿಕ್ಷಕನಾದೆ.
ನೇರವಾದಿಯಾಗಿದ್ದರಿಂದ ನನಗೆ ಟಿಸಿಹೆಚ್ ನಲ್ಲಿ ನಮ್ಮಂತಹ ಕೆಲವರನ್ನು ಹತ್ತಿಕ್ಕುವ ಪ್ರಯತ್ನವು ನಡೆಯುತ್ತಿತ್ತೇ ವಿನಃ ಯಾರೂ ನಮಗೆ ಸಪೋರ್ಟ್ ಮಾಡಲಿಲ್ಲ. ಈ ರೀತಿಯ ಸ್ಥಿತಿ ಇದ್ದುದರಿಂದ ನಾವು ಯಾವುದೇ ಅಸೈನ್ ಮೆಂಟ್ ಅನ್ನು ಕಾಲಕಾಲಕ್ಕೆ ಬರೆದು ಕೊಡುತ್ತಿದ್ದೆವು. ಇನ್ನು ಪ್ರಾಕ್ಟೀಸ್ ಟೀಚಿಂಗ್‌ನಲ್ಲಿ ಒಂದು ಸಣ್ಣ ತಪ್ಪಿಗೂ ಅವಕಾಶ ಮಾಡಿಕೊಡ್ತಾ ಇರಲಿಲ್ಲ. ಆಗ ನಾವು ಪ್ರಾಕ್ಟಿಕಲ್ ಕ್ಲಾಸ್ ಕೊಡಬೇಕಾಗಿತ್ತು. ಅದಕ್ಕೆ ಒಂದು ಅವಧಿಯ ಪಾಠಕ್ಕೆ 50 ಅಂಕಗಳು ಇದ್ದವು. ನಾವು ಮೊದಲ ವರ್ಷದಲ್ಲಿ ಲಾಂಗ್ವೇಜ್ ಹಾಗೂ ಗಣಿತ ವಿಷಯವನ್ನು ತೆಗೆದುಕೊಂಡು ಬೋಧಿಸಬೇಕಾಗಿತ್ತು. ಕನ್ನಡ ಅಥವಾ ಇಂಗ್ಲೀಷ್ ನಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನಮಗಿತ್ತು. ನಾನು ಇಂಗ್ಲೀಷನ್ನೇ ಆಯ್ಕೆ ಮಾಡಿಕೊಂಡೆ. ನನ್ನ ಗೆಳೆಯರು ಯಾರೂ ಇಂಗ್ಲೀಷನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಯಾಕೆಂದರೆ ಆ ವಿಷಯವನ್ನು ಆ ಹಳ್ಳಿಯಲ್ಲಿದ್ದ ಸರ್ಕಾರಿ ಶಾಲೆ ಮಕ್ಕಳಿಗೆ ಒಂದು ಪದವನ್ನೂ ಕನ್ನಡ ಬಳಸದೇ ಮಾಡಬೇಕಾಗಿತ್ತು. ಇದಕ್ಕೆ ‘ಡೈರೆಕ್ಟ್ ಮೆಥಡ್ ಆಫ್ ಟೀಚಿಂಗ್ ಇಂಗ್ಲೀಷ್’ ಎಂದು ಕರೆಯುತ್ತಾರೆ. ಅಂಕಗಳಿಗೆ ಹೆದರಿ ಕನ್ನಡ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ನಾನು ಆಯ್ಕೆ ಮಾಡಿಕೊಂಡ ಇಂಗ್ಲೀಷ್ ಪಾಠ ‘ಬೆಂಗಳೂರು’. ಪಾಠದ ಪ್ರಾಕ್ಟಿಕಲ್ ದಿನ. ಮೊದಲು ನಾವು ಇಂಗ್ಲೀಷ್ ಗದ್ಯದ ‘ಗಟ್ಟಿ ಓದಿ’ನ ನಂತರ ‘ಮೌನ ಓದಿ’ಗೆ ಮಕ್ಕಳಿಗೆ ಅವಕಾಶ ಮಾಡಿಕೊಡಬೇಕಾಗಿತ್ತು. ನಾನು ಮಕ್ಕಳಿಗೆ ‘Start your silent reading ‘’ ಎಂದು ಪದೇ ಪದೇ ಈ ಆದೇಶ ನೀಡಿದರೂ ಮಕ್ಕಳು ಅರ್ಥವಾಗದೇ ಸುಮ್ಮನೇ ಕುಳಿತಿದ್ದರು. ಆಗ ನಾನು ‘I start my silent reading. Similarly start your’s silent reading’ ಎಂದು ಹೇಳಿ ನಾನು ಕೆಳಗೆ ಕುಳಿತು ಪುಸ್ತಕವನ್ನು ಹಿಡಿದು ಮಕ್ಕಳ ಮುಂದೆ ಮೌನವಾಗಿ ಓದಿದಂತೆ ನಟಿಸಿದೆ. ಆಗ ಮಕ್ಕಳ ಗುಂಪಿನಲ್ಲಿದ್ದ ಒಬ್ಬ ಹುಡುಗ ‘ಮನಸ್ಸಿನಲ್ಲಿ ಓದಿಕೊಳ್ಳಬೇಕಂತೆ ಕಣ್ರೋ’ ಎಂದ. ನಾನು ತಕ್ಷಣ ‘Yes. Yes… start silent reading’ ಎಂದೆ. ಮಕ್ಕಳು ಮೌನ ಓದು ಮಾಡಿ ನನ್ನ ಪಾಠ ಮುಂದುವರಿಸಲು ಸಹಕರಿಸಿದರು. ನಾನು ಹೇಳಿದ, ಮಾಡಿದ ಚಟುವಟಿಕೆ, ಪ್ರಶ್ನೋತ್ತರಗಳಿಗೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಆ ದಿನದ ಇಂಗ್ಲೀಷ್ ಪಾಠವನ್ನು ನಾನು ಯಶಸ್ವಿಯಾಗಿ ಮುಗಿಸಿದೆ. ವೀಕ್ಷಕ ಉಪನ್ಯಾಸಕರ ಮೆಚ್ಚುಗೆಗೆ ಪಾತ್ರನಾದೆ.
ನನಗೆ ಹಾಡು ಕೇಳುವುದೆಂದರೆ ತುಂಬಾ ಇಷ್ಟ. ಚಿಕ್ಕವನಿದ್ದಾಗ ಬೇರೆ ಊರಿಗೆ ಹೋಗಲು ಬಸ್ಸನ್ನು ಆಯ್ಕೆ ಮಾಡಿಕೊಳ್ಳುವಾಗ, ಯಾವ ಬಸ್ಸಿನಲ್ಲಿ ಹಾಡನ್ನು ಹಾಕುತ್ತಿದ್ದರೋ ಅಂತಹ ಬಸ್ಸನ್ನೇ ಹತ್ತುತ್ತಿದ್ದೆ. ಆಗ ವಿಜಯದಶಮಿ ಹಬ್ಬ ಬಂತೆಂದರೆ ಸಾಕು. ನನಗೆ ತುಂಬಾ ಖುಷಿಯಾಗುತ್ತಿತ್ತು. ಬಸ್ಸುಗಳು ಹೂವುಗಳಿಂದ ಸಿಂಗಾರವಾಗಿ, ಬಸ್ ಮೇಲೆ ಕಟ್ಟಲಾಗುತ್ತಿದ್ದ ಮೈಕ್ ಸೆಟ್‌ನಲ್ಲಿ ಕಿವಿಗಡಚಿಕ್ಕುವಂತೆ ಹಾಡನ್ನು ಹಾಕಿಕೊಂಡು ಬಸ್ಸುಗಳು ಬರುತ್ತಿದ್ದವು. ಆಗ ಆರ್ಕೆಸ್ಟ್ರಾ ಸಮಯ. ಹಾಡುಗಳನ್ನು ಕೇಳಲೆಂದು ನಾವು ಹೋಗುತ್ತಿದ್ದೆವು. ಗಣಪತಿ ಹಬ್ಬದಲ್ಲಿ ಹಾಗೂ ಮದುವೆ ಮನೆಗಳಲ್ಲಿ ಮೈಕ್ ಸೆಟ್ ಹಾಕುತ್ತಿದ್ದರು. ಆ ದಿನ ನನ್ನ ಖುಷಿ ದುಪ್ಪಟ್ಟಾಗುತ್ತಿತ್ತು. ನನಗೆ ನನ್ನ ಕ್ಲಾಸ್ ಮೇಟ್‌ಗಳು ಉತ್ತಮವಾಗಿ ಹಾಡನ್ನು ಹಾಡುತ್ತಿದ್ದರೆ ಅವರ ಬಗ್ಗೆ ವಿಶೇಷ ಗೌರವ ಬರುತ್ತಿತ್ತು. ಪ್ರೌಢಶಾಲೆಯಲ್ಲಿ ನನ್ನ ಸಹಪಾಠಿ ನರಸಿಂಹ ಹೇಳುತ್ತಿದ್ದ ‘ಹರಿ ಭಜನೆ ಮಾಡೋ ನಿರಂತರ’ ‘ಅಪಾರ ಕೀರ್ತಿ ಗಳಿಸಿ ಮೆರೆದ ಭವ್ಯ ನಾಡಿದು’ ಎಂಬ ಹಾಡುಗಳು ಗಮನಸೆಳೆಯುತ್ತಿದ್ದವು. ನಾನು ಅವನ ಪಕ್ಕದಲ್ಲೇ ಕುಳಿತುಕೊಳ್ಳುತ್ತಿದ್ದೆ. ಅವನಿಂದ ಆಗಾಗ್ಗೆ ಹಾಡು ಹಾಡಿಸುತ್ತಿದ್ದೆ. ಟಿಸಿಹೆಚ್ ನಲ್ಲಿ ಸುನೀಲ್ ಎಂಬ ನನ್ನ ಸ್ನೇಹಿತ
‘ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ
ಕರೆಯುವೆ ಕೈ ಬೀಸಿ,
ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು
ಪ್ರೀತಿಯ ಮಳೆ ಸುರಿಸಿ’
ಎಂಬ ಹಾಡನ್ನು ಎಷ್ಟು ಸೊಗಸಾಗಿ ಹಾಡಿದ್ದನೆಂದರೆ ಅವನ ರೂಮಿಗೆ ಹೋಗಿ ಈ ಹಾಡನ್ನು ಅವನಿಂದ ಬಹಳ ಸಲ ಹಾಡಿಸಿದ್ದೆ. ಈಗಲೂ ಅಷ್ಟೇ. ಹಾಡುಗಳನ್ನು ನಾನೇ ಗುನುಗುತ್ತಿರುತ್ತೇನೆ. ಮನಸ್ಸಿಗಾದ ನೋವನ್ನು ಮರೆಯಲು ಈ ಹಾಡುಗಳು ತುಂಬಾ ಪರಿಣಾಮಕಾರಿಯಾಗಿವೆ.
ಜೀವನದಲ್ಲಿ ನಾವು ಒಂದು ಮಾತನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ನಮಗೆ ಸಿಗಬೇಕಾದ ಯಾವುದೋ ಒಂದು ಅವಕಾಶ, ವಸ್ತು ಸಿಗದೇ ಹೋದಲ್ಲಿ ನಾವು ನಿರಾಶರಾಗಬೇಕಿಲ್ಲ.’ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು’ ಎಂಬ ದಾಸರ ವಾಣಿಯಂತೆ ಪುನಃ ಪುನಃ ಯತ್ನಿಸುತ್ತಿರಬೇಕು. ಒಂದೊಮ್ಮೆ ಅದು ಸಿಗದೇ ಹೋದಲ್ಲಿ ಅದಕ್ಕಿಂತ ಉತ್ತಮವಾದುದು ಸಿಗಲಿಕ್ಕೆಂದೇ ಅದು ಸಿಕ್ಕಿಲ್ಲ ಎಂದು ತಿಳಿಯಬೇಕು. ಆಗ ಮಾತ್ರ ನಾವು ನೆಮ್ಮದಿಯಿಂದಿರಲು ಸಾಧ್ಯ.

ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
ಗೌಡ್ರೆ ಬರೆವಣಿಗೆ ಬಹಳ ಆಪ್ತವಾಗಿದೆ. ನನ್ನ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು 👌👌👏👏