ಗುರುಪ್ರಸಾದ್ ಕಾಗಿನಲೆ ಅವರ ಕತೆಗಳಲ್ಲಿ ರೂಪಕಗಳ ಉಪಯೋಗ ಮತ್ತು ಪ್ರಯೋಗ ಎರಡೂ ತುಂಬ ಕಡಿಮೆ. ಒಳಪ್ರಪಂಚದ ವಿವರಗಳನ್ನು ಎಷ್ಟು ಬೇಕೋ ಅಷ್ಟೇ ಉಪಯೋಗಿಸುತ್ತಾರೆ. ಅಂತರಂಗದ ಭಾವನಾಲೋಕವನ್ನು ತುಂಬ ಕೆದಕುತ್ತ ಹೋಗುವುದಿಲ್ಲ.. ಬಾಹ್ಯವಿವರಗಳನ್ನು ಹೆಚ್ಚಾಗಿ ಕೊಟ್ಟು ಪುಟ ತುಂಬಿಸುವುದೆಂದರೆ ಇವರಿಗಾಗದು. ಯಾವ ಪಾತ್ರವನ್ನೂ ಅವರ ರೂಪ, ಎತ್ತರ, ಅಗಲ ಇತ್ಯಾದಿಗಳನ್ನು ತಿದ್ದಿ ತೀಡಿ ಬರೆಯುವುದಿಲ್ಲ. ಪಾತ್ರಗಳ ಊಹೆಯ ಸ್ವಾತಂತ್ರ್ಯವನ್ನು ನಮಗೇ ಬಿಡುತ್ತಾರೆ. ಅವರ ಬಹಳಷ್ಟು ಕತೆಗಳು ನಡೆಯುವುದು ಅಮೇರಿಕದಲ್ಲಿ; ಅವು ಕನ್ನಡದ ಓದುಗನಿಗೆ ಅಪರಿಚಿತ.
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

 

“ನೀನು ನನ್ನನ್ನು ಭಾರತದಿಂದ ತೆಗೆದು ಹಾಕಬಹುದು, ಆದರೆ ನನ್ನಿಂದ ಭಾರತವನ್ನು ತೆಗೆದು ಹಾಕುವುದು ಸಾಧ್ಯವಿಲ್ಲ,” ಎನ್ನುವುದು ತುಂಬ ಕ್ಲೀಷೆಯಾದ ನುಡಿ; ಇದನ್ನೇ ಸ್ವಲ್ಪ ತಿರುಚಿ “ನೀನು ನನ್ನನ್ನು ಕನ್ನಡ ನಾಡಿನಿಂದ ಹೊರಗೆ ಇಡಬಹುದು, ಆದರೆ ನನ್ನಿಂದ ಕನ್ನಡವನ್ನು ತೆಗೆದು ಹಾಕಲು ಸಾಧ್ಯವಿಲ್ಲ,” ಎಂದು ಕೆಲವು ಅನಿವಾಸಿ ಕನ್ನಡಿಗರಿಗಾದರೂ ಅನ್ವಯಿಸಬಹುದು ಎನ್ನಿಸುತ್ತದೆ. ಅಮೇರಿಕಾದ ಜನಜೀವನವನ್ನು ಕನ್ನಡದಲ್ಲಿ ಕತೆ-ಕಾದಂಬರಿಗಳಿಂದ ದಾಖಲಿಸುವ, ವೃತ್ತಿಯಿಂದ ವೈದ್ಯರಾದ ಗುರುಪ್ರಸಾದ ಕಾಗಿನೆಲೆ (ಗುರು) ಅವರಿಗೆ ಈ ಮಾತನ್ನು ಖಂಡಿತ ಹೇಳಬಹುದು.

ಭಾರತದಿಂದ ದಶಕಗಳವರೆಗೂ ದೂರವಿದ್ದರೂ ಕನ್ನಡದ ಪತ್ರಿಕೆಗಳನ್ನು ಮತ್ತು ಕನ್ನಡ ಪುಸ್ತಕಗಳನ್ನು ಓದುವ ಅನಿವಾಸಿ ಕನ್ನಡಿಗರು ಕೆಲವರಾದರೂ ಇದ್ದಾರೆ. ಕನ್ನಡದಲ್ಲಿ ಕೆಲವರು ಒಂದೆರೆಡು ಪುಸ್ತಕಗಳನ್ನು ಪ್ರಕಟಿಸಿದರು ಅಲ್ಲಲ್ಲಿ ಸಿಗುತ್ತಾರೆ. ಆದರೆ ಅನಿವಾಸಿ ಜೀವನವನ್ನು ಕಥೆ ಮತ್ತು ಕಾದಂಬರಿಗಳಲ್ಲಿ ದಾಖಲಿಸುತ್ತ ನಿರಂತರವಾಗಿ ಬರೆಯುತ್ತ ಬಂದವರು ಬೆರಳಣಿಕೆಯಷ್ಟು. ಅಂಥ ಲೇಖಕರಲ್ಲಿ ಅಗ್ರವಾಗಿ ಕಾಣುವ ಹೆಸರು ಗುರು ಅವರದು..

ನಾನು ಬ್ರಿಟನ್ನಿಗೆ ಬಂದ ಹೊಸದು. ಭಾರತದಿಂದ ತಂದ ನಾಕಾರು ಪುಸ್ತಕಗಳನ್ನು ಆಗಲೇ ಓದಿ ಆಗಿತ್ತು. ಆಗ ಜಾಲತಾಣಗಳಲ್ಲಿ ಕನ್ನಡ ಈಗಿನಷ್ಟು ಓದಲು ಸಿಗುತ್ತಿರಲಿಲ್ಲ. ಜಾಲಗಳಲ್ಲಿ ಕನ್ನಡ ವಿರಳವಾಗಿದ್ದ ಆ ಕಾಲದಲ್ಲಿ ನನ್ನ ಕಣ್ಣಿಗೆ ಬಿದ್ದವರು ಗುರು ಅವರು. ಆಗ ಅವರು ಬರೆದ ಕೆಲವು ಕತೆಗಳು ಜಾಲದಲ್ಲಿ ಓದಲು ಸಿಕ್ಕವು. ಮಾಧ್ವಸಂಪ್ರದಾಯದಲ್ಲಿ ಬೆಳೆದು, ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ಮಾಡಿ, ಅಮೇರಿಕಕ್ಕೆ ಹೋದ ವೈದ್ಯನ ಕತೆಗಳಾಗಿದ್ದವು. “ಅಲೆಲೆ, ನನ್ನ ಕತೆಗಳನ್ನು ಅಥವಾ ನಾನು ಬರೆಯಬೇಕಾಗಿದ್ದ ಕತೆಗಳನ್ನು ಇವರು ಬರೆಯುತ್ತಿದ್ದಾರಲ್ಲ” ಎಂದೆನಿಸಿದ್ದು ಅತಿಶಯೋಕ್ತಿಯೇನಲ್ಲ. ಅನಿವಾಸಿಯಾದ ನನಗೆ ಗುರು ಅವರ ಕತೆಗಳು ತುಂಬ ಹತ್ತಿರವಾಗುತ್ತದೆ. ಆ ನೆಲೆಯಲ್ಲಿ ಆಗಿನಿಂದ ಈಗಿನವರೆಗೆ ಗುರು ಅವರ ಸಾಹಿತ್ಯವನ್ನು ಓದುತ್ತ ಬಂದಿದ್ದೇನೆ.

ಗುರು ಅವರು ಅಮೇರಿಕಾದಲ್ಲಿ ಕೆಲವು ದಶಕಗಳಿಂದ ನೆಲೆಸಿದ ತುರ್ತುಚಿಕಿತ್ಸೆ ವಿಭಾಗದ ಅನುಭವಿ ವೈದ್ಯರು. ಅಮೇರಿಕದ ನೆಲೆಯಲ್ಲಿನ ಕತೆಗಳನ್ನು ಹೇಳುವಾಗ ಅವರು ಕನ್ನಡವನ್ನು ಬಳಸುವ ಬಗೆ ಅನನ್ಯವಾದುದು. ಗುರು ಅವರು ಎದುರಿಗೆ ಕೂರಿಸಿಕೊಂಡು ‘ಹೇಳಿದಂತೆ’ ಕತೆಗಳನ್ನು ಬರೆಯುತ್ತ ಹೋಗುತ್ತಾರೆ. ಎದುರಿಗೆ ಕೂತಿರುವವರು ತಮ್ಮಂತೆಯೇ ಭಾರತದಿಂದ ವಲಸೆಬಂದ ವೈದ್ಯರೇ ಇರಬಹುದು ಎನ್ನುವಂತೆ ಸರಳವಾಗಿ ಸರಾಗವಾಗಿ ಬರೆಯುತ್ತಾರೆ.

ಅವರ ಕತೆಗಳಲ್ಲಿ ರೂಪಕಗಳ ಉಪಯೋಗ ಮತ್ತು ಪ್ರಯೋಗ ಎರಡೂ ತುಂಬ ಕಡಿಮೆ. ಒಳಪ್ರಪಂಚದ ವಿವರಗಳನ್ನು ಎಷ್ಟು ಬೇಕೋ ಅಷ್ಟೇ ಉಪಯೋಗಿಸುತ್ತಾರೆ. ಅಂತರಂಗದ ಭಾವನಾಲೋಕವನ್ನು ತುಂಬ ಕೆದಕುತ್ತ ಹೋಗುವುದಿಲ್ಲ.. ಬಾಹ್ಯವಿವರಗಳನ್ನು ಹೆಚ್ಚಾಗಿ ಕೊಟ್ಟು ಪುಟ ತುಂಬಿಸುವುದೆಂದರೆ ಇವರಿಗಾಗದು. ಯಾವ ಪಾತ್ರವನ್ನೂ ಅವರ ರೂಪ, ಎತ್ತರ, ಅಗಲ ಇತ್ಯಾದಿಗಳನ್ನು ತಿದ್ದಿ ತೀಡಿ ಬರೆಯುವುದಿಲ್ಲ. ಪಾತ್ರಗಳ ಊಹೆಯ ಸ್ವಾತಂತ್ರ್ಯವನ್ನು ನಮಗೇ ಬಿಡುತ್ತಾರೆ. ಅವರ ಬಹಳಷ್ಟು ಕತೆಗಳು ನಡೆಯುವುದು ಅಮೇರಿಕದಲ್ಲಿ; ಅವು ಕನ್ನಡದ ಓದುಗನಿಗೆ ಅಪರಿಚಿತ. ಆದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ಕತೆ ನಡೆಯುವ ಊರಿನ, ಆಸ್ಪತ್ರೆಯ, ರೆಸ್ಟೋರಂಟಿನ ಅಥವಾ ಪಾರ್ಕಿನ ವಿವರಗಳನ್ನು ನೂರಾರು ಶಬ್ದಗಳಲ್ಲಿ ಬರೆಯುತ್ತ ಕೂರುವುದಿಲ್ಲ. ಕತೆಯನ್ನು ಪಟಪಟನೇ ಹೇಳುತ್ತಾರೆ. ಇವರ ಕತೆಗಳಲ್ಲಿ ರಮ್ಯತೆಗೆ ಜಾಗವೇ ಇಲ್ಲ. ಯಾವುದನ್ನೂ ಯಾರನ್ನೂ ವೈಭವೀಕರಿಸುವುದೂ ಇಲ್ಲ, ತುಚ್ಛವಾಗಿ ಕಾಣುವುದೂ ಇಲ್ಲ.

ಕನ್ನಡದ ಬೇರೆ ಲೇಖಕರಿಗಿಂತ ಸಾಕಷ್ಟು ಹೆಚ್ಚೇ ಎನ್ನುವಷ್ಟು ಇಂಗ್ಲೀಷ್ ಶಬ್ದಗಳನ್ನು ಯಾವ ಅಂಜಿಕೆಯಿಲ್ಲದೇ ಉಪಯೋಗಿಸಿ ಬರೆಯುತ್ತಾರೆ, ಏಕೆಂದರೆ ಅಮೇರಿಕದ ಕತೆಯನ್ನು ಕನ್ನಡದಲ್ಲಿ ಹೇಳುವಾಗಿನ ಅನಿವಾರ್ಯತೆ ಇವರ ಕತೆಗಳಿಗಿವೆ. ಅವೈದ್ಯಕೀಯದ ಓದುಗರಿಗೆ ಎಷ್ಟರಮಟ್ಟಿಗೆ ಅರ್ಥವಾಗುತ್ತದೆ ಎನ್ನುವುದರ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳದೇ ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ವೈದ್ಯಕೀಯ ಶಬ್ಧಗಳನ್ನು ಬಳಸಿ ಬರೆಯುತ್ತ ಹೋಗುತ್ತಾರೆ. ನನ್ನ ಸಲಹೆ ಏನೆಂದರೆ, ಕತೆಯ ಅಂತ್ಯದಲ್ಲಿ ಒಂದು ಚಿಕ್ಕ ಅಡಿಟಿಪ್ಪಣೆಯನ್ನು ಕೊಡುವುದು ಒಳ್ಳೆಯದು.

ಕೊರೋನಾ ಪೀಡಿತ ಕಳೆದ ವರ್ಷದಲ್ಲಿ ಗುರು ಅವರು ‘ಲೋಲ’ ಎನ್ನುವ ಕಥಾಸಂಕಲನವನ್ನೂ ಮತ್ತು ‘ಕಾಯಾ’ ಎನ್ನುವ ಕಾದಂಬರಿಯನ್ನೂ ಪ್ರಕಟಿಸಿದ್ದಾರೆ.

ಲೋಲ:

‘ಮುಂದುವರಿದ’ ಎಂದೆನಿಸಿಕೊಂಡ ದೇಶಗಳ ವೈದ್ಯಕೀಯ ಸಂಕಷ್ಟಗಳು ಭಾರತದ ದೊಡ್ಡ ನಗರಗಳಲ್ಲಿ ಇತ್ತೀಚಿನ ದಶಕಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಗುರು ಇಂಥ ಸಮಸ್ಯೆಗಳನ್ನು ಎತ್ತಿಕೊಂಡು, ವೈದ್ಯಕೀಯ ವೃತ್ತಿಯ ಸೀಮಿತದಲ್ಲಿ ವೈದ್ಯರ ಮತ್ತು ರೋಗಿಗಳ ಕಥೆಗಳನ್ನು ಹೇಳಿದರೂ, ಅದರಾಚೆಯ ಉತ್ತರವಿಲ್ಲದ ಪ್ರಶ್ನೆಗಳನ್ನು ನಮ್ಮ ತಲೆಯಲ್ಲಿ ಹುಳ ಬಿಡುತ್ತಾರೆ. ಇಲ್ಲಿನ ಬಹುತೇಕ ಕಥೆಗಳು ನಡೆಯುವುದು ‘ಪ್ರಥಮ ಪುರುಷ’ ದಲ್ಲಿ ಮತ್ತು ನಾಯಕನೂ ವೈದ್ಯನೇ ಆಗಿರುವುದರಿಂದ, ಓದುವಾಗ ಕಣ್ಣಮುಂದೆ ಗುರು ಅವರ ಚಿತ್ರವೇ ಬರುತ್ತದೆ (ಕಥಾಸಂಕಲನದಲ್ಲಿ ಪ್ರಕಟವಾದ) ಎನ್ನುವುದು ಓದುಗನಾಗಿ ನನ್ನ ಮಿತಿ ಇರಬಹುದು, ನನಗೆ ಇದರಿಂದ ತಪ್ಪಿಸಿಕೊಳ್ಳಲಾಗಲಿಲ್ಲ.

ಅಲೆಲೆ, ನನ್ನ ಕತೆಗಳನ್ನು ಅಥವಾ ನಾನು ಬರೆಯಬೇಕಾಗಿದ್ದ ಕತೆಗಳನ್ನು ಇವರು ಬರೆಯುತ್ತಿದ್ದಾರಲ್ಲ” ಎಂದೆನಿಸಿದ್ದು ಅತಿಶಯೋಕ್ತಿಯೇನಲ್ಲ. ಅನಿವಾಸಿಯಾದ ನನಗೆ ಗುರು ಅವರ ಕತೆಗಳು ತುಂಬ ಹತ್ತಿರವಾಗುತ್ತದೆ. ಆ ನೆಲೆಯಲ್ಲಿ ಆಗಿನಿಂದ ಈಗಿನವರೆಗೆ ಗುರು ಅವರ ಸಾಹಿತ್ಯವನ್ನು ಓದುತ್ತ ಬಂದಿದ್ದೇನೆ.

ಇಲ್ಲಿಯ ಬಹುತೇಕ ಎಲ್ಲ ಕತೆಗಳು ಅಮೇರಿಕದಲ್ಲಿ ಜರಗುತ್ತವೆ.

‘ವ್ಯಕ್ತ ಮಧ್ಯವು’ ಎನ್ನುವ ಅಮೇರಿಕದ ಆಸ್ಪತ್ರೆಯಲ್ಲಿ ನಡೆಯುವ ಘಟನೆಗಳಲ್ಲಿ ಲಿಂಗ ಬದಲಾವಣೆಯ ಕತೆ ಇದೆ. ಲಿಂಗ ಬದಲಾವಣೆಯ ಬಗ್ಗೆ ನಮ್ಮ ಪೂರ್ವಗ್ರಹಗಳು ವೈದ್ಯ ವೃತ್ತಿಯಲ್ಲಿದ್ದರೂ ಹೇಗೆ ಕಾರ್ಯನಿರ್ವಹಿಸುತ್ತವೆ ಎನ್ನುವುದನ್ನು ಈ ಕಥೆಯ ಮೂಲಕ ಹೇಳುತ್ತಾ ಹೋಗುತ್ತಾರೆ.

‘ಲೋಲ’ ಕತೆಯಲ್ಲಿ ‘ಶಿಶುಕಾಮಿ’ಯ (ಪೀಡೋಫಿಲಿಯ) ಕತೆಯಿದೆ. ಅದರಲ್ಲೂ ಈ ಶಿಶುಕಾಮಿಯು ಅಮೇರಿಕದ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯ! ಅವನ ಸಹೋದ್ಯೋಗಿಯಾದ ಭಾರತದಿಂದ ಬಂದ ವೈದ್ಯನಲ್ಲಿ ಶಿಶುಕಾಮಿಗಳ ಬಗ್ಗೆ ಇರುವ ಪೂರ್ವಾಗ್ರಹಗಳು, ಮತ್ತು ಅವುಗಳಿಂದ ಹೊರಬರುವ ಪ್ರಯತ್ನ ಇಲ್ಲಿ ಕಾಣಿಸುತ್ತದೆ. ಜೊತೆಗೆ ಶಿಶುಕಾಮಿಯ ಜೀವನದ ಬಗ್ಗೆ ಉತ್ತರವಿಲ್ಲದ ಪ್ರಶ್ನೆಗಳನ್ನು ಎತ್ತುತ್ತದೆ.

‘ಸಾಕ್ಷಿ’ ಎನ್ನುವ ಕತೆಯಲ್ಲಿ ಅಮೇರಿಕಕ್ಕೆ ವಲಸೆ ಬಂದ ಅನಿವಾಸಿಯ ಕನ್ನಡಿಗನೊಬ್ಬನ ಜೀವನವನ್ನು ಕತೆಯಾಗಿಸಿದ್ದಾರೆ. ಈ ಕತೆಯಲ್ಲಿ ಅಮೇರಿಕದ ಜಗತ್ತಿನ ಎಲ್ಲ ಆಗುಹೋಗುಗಳು ಬಂದುಹೋಗುತ್ತವೆ. ‘ಲಿವಿಂಗ್ ಟು ಗೆದರ್, ವಿಚ್ಛೇದನ, ಮರುವಿಚ್ಛೇದನ, ಅಲ್ಕೋಹಾಲಿಸಂ, ಖಿನ್ನತೆಯ ರೋಗಗಳು ಬರುತ್ತವೆ. ಕಲೆಯ ಬೆನ್ನುಹತ್ತಿ ಬದುಕನ್ನು ತೀವ್ರವಾಗಿ ಬದುಕುವ ವ್ಯಕ್ತಿಯೊಬ್ಬನ ಚಿತ್ರವನ್ನು ಮತ್ತು ಅದು ತರುವ ದುರಂತವನ್ನು ಬಿಚ್ಚುತ್ತಾ ಹೋಗುತ್ತದೆ.

‘ಕ್ಲಾಸ್ ಆಫ್ 89’ ವೈದ್ಯಕೀಯ ಕಾಲೇಜಿನ ‘ರಿ-ಯೂನಿಯನ್’ ಕತೆ. ಇಲ್ಲಿ, ನಾಯಕನೂ ಅವನ ಹೆಂಡತಿಯೂ, ಅಮೇರಿಕದಲ್ಲಿ ಕೆಲಸ ಮಾಡುವ ಕನ್ನಡ ವೈದ್ಯರು. ಹೆಂಡತಿಯ ಬ್ಯಾಚಿನ ರಿ-ಯೂನಿಯನ್‌ಗೆ ಅವಳ ಗಂಡನಾಗಿ ಅಮೇರಿಕಾದಿಂದ ಭಾರತಕ್ಕೆ ಹೋಗುತ್ತಾನೆ. ನಾಯಕ ಭಾರತದಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಓದುವಾಗ ನಾಯಕಿಯ ಸೀನಿಯರ್ ಆಗಿದ್ದವ. ಅವಳ ಬ್ಯಾಚಿನವರಿಗೆ ಪಾಠ ಹೇಳಿಕೊಡುತ್ತಾ, ತನ್ನ ಹೆಂಡತಿಯ ಭ್ಯಾಚಿನ ಹುಡುಗಿಯರ ಕಣ್ನಲ್ಲಿ ಒಂದು ಥರದಲ್ಲಿ ‘ಹೀರೋ’ ಆಗಿದ್ದವ (ಅಥವಾ ಹಾಗೆಂದುಕೊಂಡಿದ್ದವ). ಇಪ್ಪತ್ತೈದು ವರ್ಷಗಳಾದ ಮೇಲೆ ‘ರಿ-ಯೂನಿಯನ್ʼನಲ್ಲಿ ಅದೇ ಪ್ರಭಾವಳಿಯನ್ನಿಟ್ಟುಕೊಂಡು ಹೆಮ್ಮೆಯಿಂದ ಬರುತ್ತಾನೆ. ತನ್ನ ಹೆಂಡತಿಯನ್ನು ಕಾಲೇಜಿನ ಸಮಯದಲ್ಲಿ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದ ಹುಡುಗನೂ ಬಂದಿರುತ್ತಾನೆ. ಆದರೆ ಈ ‘ರಿ–ಯೂನಿಯನ್,’ ನಾಯಕನ ಎಲ್ಲ ಅಹಂಅನ್ನು ಕಳೆದು ಹಾಕುತ್ತದೆ. ಪಾಶ್ಚ್ಯಾತ್ಯ ದೇಶಕ್ಕೆ ವಲಸೆ ಹೋಗಿರುವವರು ಹೇಗೆ ಭಾರತ ಬಿಟ್ಟಾಗಿನ ಕಾಲಕ್ಕೆ ಜೋತು ಬಿದ್ದಿರುತ್ತಾರೆ ಎನ್ನುವುದನ್ನು ಘಟನೆಗಳ ಮೂಲಕ ಹೇಳುತ್ತಾರೆ.

‘ಅಮೃತಮ್ಮ ಬಿದ್ದಿದ್ದು’ ಎನ್ನುವ ಕಥೆ ಭಾರತದಲ್ಲಿರುವ ಬಂಧುಗಳು ಪಾಶ್ಚಾತ್ಯ ದೇಶದಲ್ಲಿರುವ ವೈದ್ಯರ ಅಭಿಪ್ರಾಯ ಕೇಳುತ್ತ, ಅದನ್ನು ಭಾರತದ ವೈದ್ಯರ ಮೇಲೆ ಹೇರುತ್ತ ಹೋದರೆ ಆಗುವ ಅವಘಡಗಳನ್ನು ಹಾಸ್ಯಮಯವಾಗಿ ಚಿತ್ರಿಸಿದ್ದಾರೆ. ಈ ಕತೆಯನ್ನು ಅಮೇರಿಕಾದ ವೈದ್ಯನ ದೃಷ್ಠಿಕೋನದಿಂದ ಹೇಳದೇ, ಭಾರತೀಯನ ಬದುಕಿನಿಂದ ನೋಡಿದ್ದು ಕಥೆಗೆ ಬೇರೆರೂಪವನ್ನೇ ಕೊಟ್ಟಿದೆ.

‘ಆ ಬದಿ’ ಎನ್ನುವ ಕಥೆ ಪಾಶ್ಚಾತ್ಯ ದೇಶಗಳಲ್ಲಿ ಮಾತ್ರ ಸಂಭವಿಸಬಹುದಾದ ಕಥೆ. ವೈದ್ಯನು ತಾನು ರೋಗಿಯಾದಾಗ ತನಗೆ ತಾನೇ ಚಿಕಿತ್ಸೆ ತೆಗೆದುಕೊಂಡರೆ ಆಗುವ ತಾಪತ್ರಯಗಳ ಕಥೆ, ವಿಮಾ ಕಂಪೆನಿಗಳು ಕೊಡುವ ತಾಪತ್ರಯಗಳ ಬಗ್ಗೆ ಸುದೀರ್ಘವಾಗಿ ಬರೆದಿದ್ದಾರೆ.

ನನ್ನ ಜನರೇಶನ್ ನವರಿಗೆ ಎರಡೆರಡು ಹುಟ್ಟುಹಬ್ಬವಿರುವುದು ಸ್ವಾಭಾವಿಕ, ಎರಡೇಕೆ? ಮೂರೆಂದರೂ ನಡೆಯುತ್ತದೆ. ಒಂದು ಕ್ಯಾಲೆಂಡರ್ ಪ್ರಕಾರ ಹುಟ್ಟಿದ ದಿನ, ಇನ್ನೊಂದು ಪಂಚಾಂಗದ ಪ್ರಕಾರ, ಮೂರನೆಯದು ‘ಅಧೀಕೃತ’, ಶಾಲೆ ಸೇರುವಾಗ ನಮೂದಿಸಿದ ಹುಟ್ಟಿದ ದಿನ. ಇದನ್ನು ಇಟ್ಟುಕೊಂಡು ‘ನಾನು ಮತ್ತು ನಾನುʼ ಎನ್ನುವ ಕಥೆಯಲ್ಲಿ ನಾಯಕನಿಗೆ ಐವತ್ತು ವರ್ಷವಾದಾಗ ವಯಸ್ಸಿನ ಬಿಜ್ಞಾಸೆಯನ್ನು ಕತೆಯಲ್ಲಿ ಹುಡುಕುತ್ತಾರೆ. ಅಲ್ಲದೆ ‘ಒಸಾಮ ಬೆದರಿದ್ದ’ ಮತ್ತು ‘ಊಬರ್ ಡ್ರೈವರ್’ ಎನ್ನುವ ಎರಡು ಚಿಕ್ಕ ಕಥೆಗಳೂ ಈ ಸಂಕಲನದಲ್ಲಿವೆ.

ಕನ್ನಡ ಭಾಷೆಗೆ ಈಗಾಗಲೇ ಸಾಕಷ್ಟು ‘ಅನಿವಾಸಿ’ ಕತೆಗಳನ್ನು ಕೊಟ್ಟಿರುವ ಗುರು ಅವರು ಹೀಗೇ ಬರೆಯುತ್ತಲಿರಲಿ. ಅವರ ಮಹತ್ವದ ಕತೆಗಳು ಇಂಗ್ಲೀಷ್ ಭಾಷೆಗೂ ಅನುವಾದವಾಗಲಿ ಎನ್ನುವುದು ನನ್ನ ಆಶಯ. ಅನಿವಾಸಿಗಳ ಕತೆಯನ್ನು ಅನಿವಾಸಿಗಳು ಹೇಗೆ ಬರೆಯಬೇಕು ಎನ್ನುವುದಕ್ಕೆ ಗುರು ಅವರ ಶೈಲಿ ನನ್ನಂಥ ಅನಿವಾಸಿ ಕನ್ನಡಿಗರಿಗೆ ಒಂದು ಮಾದರಿ, ಪ್ರೇರಕ ಶಕ್ತಿ ಮತ್ತು ಗುರು.