ಕೆಲಸದ ಬಳಿ ಟ್ರೈನ್ ಇಳಿದು ಉದ್ದದ ಸುರಂಗದ ಮೂಲಕ ನಡೆದು ಹೋಗಬೇಕು. ಸಿಡ್ನಿಯ ಹೈಡ್ ಪಾರ್ಕ್ ಅಡಿಯ ಆ ಒಳದಾರಿಯಲ್ಲಿ ದೂರದ ಮೆಟ್ಟಿಲ ಕಡೆ ನೋಡುತ್ತಾ ನಡೆಯುವುದು ಒಂದು ಚಂದದ ಅನುಭವ. ಒಂದೆರಡು ನಿಮಿಷ ಯಾವುದಾದರೂ ಸಂಗತಿಯ ಬಗ್ಗೆ ಮನಸ್ಸು ಧ್ಯಾನಸ್ತವಾಗುತ್ತದೆ.
ಅಲ್ಲಿ ಮತ್ತೊಂದು ವಿಶೇಷವೂ ಇದೆ. ದಿನಾಲೂ ಅಲ್ಲದಿದ್ದರೂ, ವಾರಕ್ಕೊಂದೆರಡು ದಿನ ಯಾರಾದರೂ ಅಲ್ಲಿ ಹಾಡುತ್ತಲೋ, ವಾದ್ಯ ನುಡಿಸುತ್ತಲೋ ಇರುತ್ತಾರೆ. ಆ ಸಂಗೀತದ ದನಿ ಒಂದು ವಿಚಿತ್ರ ಬಗೆಯ ಕಳೆ ಆ ಒಳದಾರಿಗೆ ತಂದು ಕೊಡ್ಡುತ್ತದೆ. ಆ ತೂಬಿನಲ್ಲಿ ಸಣ್ಣಗೆ ಮರುದನಿ ಕೊಡುತ್ತಾ ತುಂಬಿಕೊಳ್ಳುತ್ತದೆ. ಬರೇ ಪಕ್ಕದ ಗೋಡೆಯ ಚೌಕವನ್ನೆಣಿಸುತ್ತಲೋ ಅಥವಾ ನೆಲದ ಮೇಲೆ ಕಣ್ಣಿಟ್ಟೋ ನಡೆಯುತ್ತಿರುತ್ತೇವೆ. ಸಂಗೀತ ಪರಿಚಿತವಿರಬಹುದು ಇಲ್ಲದಿರಬಹುದು. ಆದರೂ ಸಂಗೀತದ ಮಟ್ಟು ಎಲ್ಲಿಗೋ ಕರಕೊಂಡು ಹೋಗುತ್ತದೆ. ಆ ಪಲುಕು ನೆನಪಿಸುವ ಮಂದಿಯೋ, ಸಂಗತಿಯೋ, ಜಾಗವೋ ನಮ್ಮೊಡನೆ ಇರುತ್ತದೆ. ತುದಿಯ ಮೆಟ್ಟಿಲು ತಲುಪಿ ಒಳದಾರಿಯ ಹೊಟ್ಟೆಯಿಂದ ಹೊರಗೆದ್ದು ಬೆಳಕಿಗೆ ಬರುವವರೆಗೂ.
ಈವತ್ತು ಅಲ್ಲಿ ಕೇಳಿದ್ದು ಪಿಂಕ್ ಪ್ಯಾಂತರ್ ಸಂಗೀತ. ತುಂಟ ಡಿಟೆಕ್ಟಿವ್ ಸಂಗೀತವಾದರೂ, ಕೇಳಿದ್ದು ಕುಣಿಯವಂತೇನೂ ಇರಲಿಲ್ಲ. ನುಡಿಸುವವ ಅಷ್ಟೇನೂ ಕುಶಲನೂ ಅನಿಸಲಿಲ್ಲ. ಮೂಲ ಸಂಗೀತದ ನಡೆಗಿಂತಲೂ ಕೊಂಚ ನಿಧಾನಕ್ಕೆ ಇತ್ತು. ತಡೆತಡೆದು ಅಲ್ಲವಾದರೂ ನುಡಿಸುತ್ತಿರುವವ ಸ್ವರಗಳನ್ನು ಹುಡುಕುಡುಕಿ ನುಡಿಸುತ್ತಿರಬಹುದು ಅನಿಸುವಂತಿತ್ತು. ಮೂಲ ಸಂಗೀತಕ್ಕಿಂತ ನಿಧಾನವಾದ್ದರಿಂದ ಅದಕ್ಕೆ ಬೇರೇನೋ ಬಂದು ಸೇರಿಕೊಂಡಂತೆ ಅನಿಸುತ್ತಿತ್ತು. ಅದನ್ನು ನುಡಿಸುವವನ ಮುಖ ನೋಡುವ ತವಕವಾಯಿತು.
ನುಡಿಸುತ್ತಿದ್ದವ ದೊಡ್ಡ ಕಾಯದ ಬಿಳಿಯ ಯುವಕ. ಮಾಸಿದ ಜೀನ್ಸ್, ಹರಿದ ಟೀಶರ್ಟ್, ಕುರುಚಲು ಗಡ್ಡದವ. ಸಣ್ಣ ಡಬ್ಬದ ಮೇಲೆ ಕೂತಿದ್ದಾನೆ. ಸಣ್ಣ ಕೊಳಲಿನಂತಹ ಮರದ ರೆಕಾರ್ಡರ್ ತುಟಿಗಿಟ್ಟುಕೊಂಡಿದ್ದಾನೆ. ಬೆರಳುಗಳು ಸಲೀಸಾಗಿ ಓಡಾಡುತ್ತಿಲ್ಲವಾದರೂ ಕೇಳುತ್ತಿದ್ದ ಮಟ್ಟಿಗೆ ಏನೋ ಮೋಹಕತೆ ಇದೆ. ಕಪ್ಪು ಬೀನಿಯನ್ನು ಮುಂದಿಟ್ಟುಕೊಂಡಿದ್ದಾನೆ. ಅದರಲ್ಲೊಂದಷ್ಟು ಬಿಡಿಕಾಸು ಬಿದ್ದಿದೆ. ಹತ್ತಿರ ಬರುತ್ತಲೂ ಕೈ ತಾನೇ ತಾನಾಗಿ ಜೇಬಲ್ಲಿ ನುಸುಳಿ ಒಂದೆರಡು ಕಾಸು ತೆಗೆದು ಬೀನಿಗೆ ಹಾಕಿತು. ಅವನ ಮುಖ ನೋಡಿದೆ. ಕಣ್ಣು ಮುಚ್ಚಿಕೊಂಡಿದ್ದ. ಕೆಲಸಕ್ಕೆ ಗಡಿಬಿಡಿಯಲ್ಲಿ ಓಡುತ್ತಿರುವವರಿಗೆ ಅಡ್ಡವಾದರೂ ಪರವಾಗಿಲ್ಲ ಎಂದು ಒಂದು ಕ್ಷಣ ಅವನ ಮುಂದೆ ನಿಂತೆ.
ಕಣ್ಣು ತೆರೆದು ನಗದೇ ದಿಟ್ಟಿಸಿದ. ಯಾಕೋ ಆ ಕಣ್ಣಲ್ಲಿ ತೀವ್ರ ಒಂಟಿತನ ಕಂಡಿತು. ಇದೊಂದೇ ಮಟ್ಟು ಇವನಿಗೆ ಬರುವುದೇನೋ ಅನಿಸಿತು. ಅದು ಅವನಿಗೆ ಏನೇನು ನೆನಪಿಸುತ್ತಿರಬಹುದು? ಆ ಮಟ್ಟಿನ ಹಿಂದೆ ಯಾವಾವ ನೋವುಗಳು, ಖುಷಿಗಳು ಅವನನ್ನು ಕಾಡುತ್ತಿರಬಹುದು?
ಮರುಗಳಿಗೆ ತಿರುಗಿ ನಡೆದೆ. ಒಳದಾರಿಯ ತುದಿಯಲ್ಲಿರುವ ಮೆಟ್ಟಿಲು ಹತ್ತುವಾಗ ಹೆಜ್ಜೆ ಭಾರವೆನಿಸಿತು. ಹೌದು ಗೊತ್ತಾಯಿತು. ಆ ಸಂಗೀತದಲ್ಲಿ ಇದ್ದದ್ದು ಏನೋ ಕಳಕೊಂಡ, ಏನೋ ಸಿಕ್ಕದ, ಏನೋ ಬೇಕೆಂದು ಹಂಬಲಿಸುವ ಒಂಟಿತನ. ಪಿಂಕ್ ಪ್ಯಾಂತರಿನಂತಹ ತುಂಟ ಸಂಗೀತದಲ್ಲೂ ಒಂಟಿತನ ಹೊಮ್ಮಿಸಿದನಲ್ಲ ಎಂದುಕೊಂಡೆ. ಅವನಿಗೆ ಅದು ಸಾಧ್ಯವಾದ ಬಗೆ ನನಗೆ ಅಚ್ಚರಿಯಾಯಿತು. ಆ ಜನಪ್ರಿಯ ಮಟ್ಟಿನಡಿಯಲ್ಲಿ, ಅವನ ನುಡಿಸುವಿಕೆಯಲ್ಲಿ ಹೊಸದೊಂದು ಉಪಪಾಟ ಕಂಡಂತಾಗಿ, ಅದು ಹತ್ತು ಹಲವಾರು ಸಾಧ್ಯತೆಗಳನ್ನು ತೆರೆದಿಟ್ಟು ಮೈ ಝಮ್ಮೆಂದಿತು. ಸುರಂಗದ ಮೆಟ್ಟಿಲು ಹತ್ತಿ ಹೊರಬಂದು, ಚಳಿಗಾಲದ ತೆಳುಬಿಸಿಲಿಗೆ ಮುಖವೊಡ್ಡಿ ನಿಟ್ಟುಸಿರುಬಿಟ್ಟೆ.ಒಳಗಿಂದ ಒಂಟಿತನ ಸವರಿಸಿಕೊಂಡ ಪಿಂಕ್ ಪ್ಯಾಂತರ್ ಮಟ್ಟು ಇನ್ನೂ ಕೇಳುತ್ತಲೇ ಇತ್ತು.
ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.