ಸಿಡ್ನಿಯ ಚಳಿಯಲ್ಲಿ ಎರಡು ವಾರ ಮೈಬಿಸಿ ಕಾಯಿಸಿಕೊಳ್ಳಲೆಂಬಂತೆ ಒಲಂಪಿಕ್ಸ್ ಬಂದು ಹೋಯಿತು. ಆಸೀ ಆಟಗಾರರು ಪಾಲ್ಗೊಂಡ ಹಾಗು ಮುಖ್ಯವಾಗಿ ಗೆಲ್ಲಬಹುದಾದ ಆಟಗಳನ್ನೇ ಟೀವಿ ಪರದೆಯಲ್ಲಿ ನೋಡಿ ನೋಡಿ ಕೊಂಚ ತಲೆಯೂ ಬಿಸಿಯಾಯಿತು. ನನ್ನಂತಹವರು ಹುಡುಕುಡುಕಿ ಇಂಡಿಯಾದವರು ಗೆಲ್ಲಬಹುದಾದ ಆಟಗಳಲ್ಲಿ ಏನಾದವೆಂದು ಪತ್ರಿಕೆಗಳಲ್ಲಿ, ಅಲ್ಲಿ ಇಲ್ಲಿ ಓದಬೇಕಾಯಿತು. ಕುಸ್ತಿಯಲ್ಲಿ ಆಸ್ಟ್ರೇಲಿಯಾದಿಂದ ಪಾಲ್ಗೊಂಡ ಮೆಲ್ಬರ್ನಿನ ಕ್ಯಾಬ್ ಡ್ರೈವರ್ – – ಮಾತು ಆಸೀ ಟೀವಿಯಲ್ಲಿ ಕೇಳಿದಾಗ ಕಿವಿ ನಿಮಿರುತ್ತಿತ್ತು. ನನ್ನ ಕೆಲಸದ ಟೇಬಲ್ಲಿನ ಎದುರೇ ಗೋಡೆಗೆ ದೊಡ್ಡ ಟೀವಿ ಪರದೆ ನೇತಾಕಿ, ಆಸೀ ಆಟಗಾರರು ಗೆಲ್ಲಬಹುದಾದ ಫೈನಲ್ಲಿಗೆ ಕೆಲಸದವರೆಲ್ಲಾ ಸುತ್ತಿಕೊಂಡು ಬೀಜಿಂಗಿನಲ್ಲಿಯೇ ಇದ್ದೇವೇನೋ ಎಂಬಂತೆ ‘ಗೋ… ಗೋ…’ ಎಂದು ಹುರಿದುಂಬಿಸುತ್ತಿದ್ದುದು ತಮಾಷೆಯಾಗಿ ಕಂಡರೂ, ನನ್ನ ಎದೆಯನ್ನೂ ಬೆಚ್ಚಗಾಗಿಸಿತು ಎನ್ನದಿದ್ದರೆ ಸುಳ್ಳಾಡಿದಂತೇ ಹೌದು.
ಅದೆಲ್ಲಾ ಮುಗಿದು ಕ್ಲೋಸಿಂಗ್ ಕೂಟದಲ್ಲಿ ಆಫ್ರಿಕಾದ ಕೆನ್ಯಾ, ಮರೊಕೊ ಮತ್ತು ಇತಿಯೋಪಿಯವೇ ಮೂರೂ ಪದಕಗಳನ್ನು ಗೆದ್ದ ಮೆರಾಥಾನ್ ಓಟದ ವಿಜೇತರಿಗೆ ಪದಕಗಳನ್ನು ಕೊಟ್ಟಿದ್ದು ನೀವೂ ನೋಡಿರಬಹುದು, ಚಿನ್ನದ ಪದಕ ಗೆದ್ದ ಸ್ಯಾಮುಯೆಲ್ ಕಮವು ವಾನ್ಸಿರುನ ಸೌಜನ್ಯದ ನಗು ಮತ್ತು ತನ್ನ ನಾಡಿನ ಬಾವುಟ ನೋಡುತ್ತಾ ಅವನ ಕಣ್ಣಲ್ಲಿ ನೀರಾಡಿದ್ದು ನನ್ನ ಮಟ್ಟಿಗೆ ಹೈಲೈಟಾಯಿತು. ಅತ್ಯಾಧುನಿಕ ತಂತ್ರಜ್ಞಾನ, ವಿಜ್ಞಾನದ ನೆರವಿನಿಂದ ಸಿರಿವಂತ ದೇಶಗಳು ಪದಕಗಳನ್ನು ಕೊಳ್ಳೆ ಹೊಡೆಯುವ ಇಲ್ಲಿ ಇದೊಂದು ವಿಪರ್ಯಾಸ ನೋಡಿ. ತನ್ನ ಪೂರ್ವಿಕರ ಕೊಡುಗೆಯಿಂದ ಹಿಡಿದು ತನ್ನ ಸ್ವಂತ ದೇಹದ ಆಳದಲ್ಲಿರುವ ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿಕೊಂಡು ಗೆಲ್ಲಬೇಕಾದ ಈ ಓಟಗಳು ಯಾವಾಗಲೂ ಆಫ್ರಿಕಾದ ಪಾಲಾಗುವುದು ಸೋಜಿಗವಲ್ಲ.
ಪದಕಗಳ ಪಟ್ಟಿಯಲ್ಲಿ ಆಸ್ಟ್ರೇಲಿಯ ಆರನೇ ಜಾಗದಲ್ಲಿದೆ. ಅದಕ್ಕಿಂತ ಮೇಲೆ ಇಂಗ್ಲೆಂಡಿದೆ. ಆಸೀಗಳು ಸಹಿಸಲಾಗದ ನೋವಿನಲ್ಲಿ ಮುಳುಗಿದ್ದಾರೆ. ಹಿಂದಿರುಗಿದ ಆಟಗಾರರನ್ನು “ಮಹೋನ್ನತ ರಾಷ್ಟ್ರೀಯ ಹೆಮ್ಮೆ” ಎಂಬ ಮಾತುಗಳಿಂದ ಬರಮಾಡಿಕೊಂಡೂ, ಒಳಗೊಳಗೆ ಕರುಬುತ್ತಿದ್ದಾರೆ. ಯಾಕೆ ಹೀಗಾಯಿತು, ಎಲ್ಲಿ ತಪ್ಪಿದೆವು ಎಂದೆಲ್ಲಾ ಕೇಳಿಕೊಳ್ಳುತ್ತಿದ್ದಾರೆ. ನಾಕಾರು ವರ್ಷಗಳ ಕಾಲ ತಮ್ಮೆಲ್ಲಾ ಶಕ್ತಿ-ಯುಕ್ತಿಯನ್ನು ಒಟ್ಟುಗೂಡಿಸಿ ಕೆಲಸ ಮಾಡಿದ್ದರೂ ಆಗಬಾರದ್ದು ಆಗಿದೆ ಎಂಬಂತೆ ತಲೆಕೆಳಗೆ ಹಾಕುತ್ತಿದ್ದಾರೆ.
ಕಡೆಗೆ ಆ ದುಃಖ ಬಂದು ನಿಂತಿರುವುದು ಸ್ಪೋರ್ಟ್ಸ್ ಫಂಡಿಂಗ್ ಹೆಚ್ಚಬೇಕು ಎಂಬಲ್ಲಿಗೆ. ಈ ಬಾರಿ ಆಸ್ಟ್ರೇಲಿಯ ಗೆದ್ದಿರುವ ಒಲಂಪಿಕ್ಸ್ ಪದಕ ಒಂದೊಂದಕ್ಕೂ ತಗುಲಿರುವ ವೆಚ್ಚ ಸುಮಾರು ಎಂಬತ್ತು ಮಿಲಿಯನ್ ಡಾಲರಿನಷ್ಟು ಎಂದು ಲೆಕ್ಕಹಾಕುವುದೇ ಕುಚೇಷ್ಟೆಯೆಂದು ಬಯ್ಯುತ್ತಿದ್ದಾರೆ. ಪ್ರತಿ ಪದಕಕ್ಕೆ ಏನಿಲ್ಲವೆಂದರೂ ಸುಮಾರು ಹನ್ನೆರಡು ಮಿಲಿಯನ್ ಡಾಲರಿನಷ್ಟಂತೂ ಸಾರ್ವಜನಿಕೆ ಹಣ ಸಂದಿದೆ ಎಂಬುದನ್ನು ಯಾರೂ ಅಲ್ಲಗಳೆಯುತ್ತಿಲ್ಲ. ಬದಲಾಗಿ ಅದು ಸಾಲದು ಎನ್ನುತ್ತಿದ್ದಾರೆ. ಇಂಗ್ಲೆಂಡಿನವರು ಮಾಡಿದಂತೆ, ಸ್ಪೋರ್ಟ್ಸ್ ಲಾಟರಿಯ ಮೂಲಕ ಹಣವೆತ್ತಬೇಕೆಂಬ ಸಂಗತಿ ಬಲಪಡೆಯುತ್ತಿದೆ. ಸರ್ಕಾರ ಹೆಚ್ಚು ಹಣ ಹೂಡಬೇಕು ಎಂದು ಒತ್ತಾಯ ಬರುತ್ತಿದೆ.
ಆಸೀಗಳಿಗೆ ತಮ್ಮನ್ನು ತಾವು ಆಟ-ಓಟದ ಗೀಳಿನವರು ಎಂದು ಎತ್ತರದ ದನಿಯಲ್ಲಿ ವಿವರಿಸಿಕೊಳ್ಳುವುದು ಖುಷಿ. ಆದರೆ, ನಿಜವಾಗಿಯೂ ನೋಡಿದರೆ ಒಬೀಸಿಟಿಯ ತೊಂದರೆ ದಿನದಿನಕ್ಕೆ ಏರುತ್ತಿದೆ. ಅದರಲ್ಲೂ ಅಮೇರಿಕಣ್ಣನ ಕೈಹಿಡಿದೇ ನಡೆದಿದ್ದೇವೆ ಎಂದು ಮನಸ್ಸಿಲ್ಲದೆ ಸಣ್ಣಗೆ ಗೊಣಗಿಕೊಳ್ಳುತ್ತಾರಷ್ಟೆ. ಒಲಂಪಿಕ್ಸಿನ ಮೇಲು ಸ್ತರದ ಆಟಗಳಿಗಿಂತ, ಊರೂರಲ್ಲಿ ಮಕ್ಕಳ ಆಟದ ಕ್ಲಬ್ಬುಗಳಿಗೆ ಹಣ ಕೊಟ್ಟು, ಹೆಚ್ಚೆಚ್ಚು ಮಕ್ಕಳು ಆಟಗಳಲ್ಲಿ ತೊಡಗುವಂತೆ ಮಾಡುವುದು ಒಳ್ಳೆಯದೆಂದರೆ ಹುಬ್ಬೇರಿಸುತ್ತಾರೆ. ಒಲಂಪಿಕ್ಸಿನಲ್ಲಿ ಪದಕ ಗೆದ್ದು ಎದೆ ತಟ್ಟಿಕೊಳ್ಳುವುದು ಬೇಡವೆ? ಎದೆ ತಟ್ಟಿಕೊಳ್ಳುವುದನ್ನು ಬಿಟ್ಟು ಸಮಾಜಕ್ಕೆ ಬೇರೇನನ್ನೂ ಅದು ಮಾಡದಿದ್ದರೂ ಕೂಡ?
ಒಂದತ್ತ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳಿಗೆ ಸರ್ಕಾರದ ಹಣವನ್ನು ಕಡಿತ ಮಾಡಿಕೊಂಡೇ ಬರಲಾಗಿದೆ. ಹಿಂದೊಮ್ಮೆ ಜಗತ್ತಿನ ಉತ್ತಮ ವಿಶ್ವವಿದ್ಯಾಲಯ ಎನಿಸಿಕೊಂಡಿದ್ದವೆಲ್ಲಾ ಈಗ ಹಿಂದೆ ಬೀಳುತ್ತಿವೆ. ಇನ್ನೊಂದತ್ತ ಮೂಲನಿವಾಸಿಗಳ ಆರೋಗ್ಯಕ್ಕೆ ಸಲ್ಲಬೇಕಾದಷ್ಟು ಹಣ, ಮನಸ್ಸು ಸಲ್ಲುತ್ತಿಲ್ಲ. ಹಾಗಾಗಿ ಅವರಿಗೂ, ಉಳಿದ ಆಸೀಗಳಿಗೂ ಆರೋಗ್ಯದ ಅಳತೆಯಲ್ಲಿ ಅಜಗಜಾಂತರ ಉಳಿದು ಬಿಟ್ಟಿದೆ. ಕ್ಯಾನೆಡಾ, ಫಿನ್ಲಾಂಡ್, ಸ್ವಿಸ್‌ನಂತಹ ದೇಶಗಳ ಹಾಗೆ ಪದಕಗಳ ಪಟ್ಟಿಯಲ್ಲಿ ಕೆಳಕ್ಕಿದ್ದೂ ಜಾಗತಿಕ ಕಾಣ್ಕೆಗಳನ್ನು ಕೊಡುವಂತೆ ಆಸ್ಟ್ರೇಲಿಯಾ ಹುರಿಗೊಳ್ಳಬೇಕೆಂಬ ಮಾತು ಮತ್ತೆ ಕೇಳುತ್ತಿದೆ. ಹೀಗೆ ಪದಕಗಳಿಂದ ತಮ್ಮ ಮೇಲ್ಮೆಯನ್ನು ಅಳೆದುಕೊಳ್ಳುವ ಹುಚ್ಚೇಕೆ ಎಂಬ ಆತ್ಮಾವಲೋಕನ ಸುರುವಾಗಿದೆ…
ಅಯ್ಯೋ ಬಿಡಿ, ನಮ್ಮ ಸಂತೋಷದ ಗಳಿಗೆಯನ್ನು ಹಾಳುಮಾಡಲೇ ಈ ಮಾತುಗಳನ್ನು ಆಡುವುದು ಎಂದು ಹಲವರು ಮುಖ ತಿರುಗಿಸುತ್ತಾರೆ. ಅವರ ಜತೆ ಸ್ಯಾಮುಯೆಲ್ ಕಮವು ವಾನ್ಸಿರುನ ನೀರಾಡುವ ಕಣ್ಣಿನ ಬಗ್ಗೆ ಮಾತುಕತೆ ಶುರುವಾಗುವ ಮುಂಚೆಯೇ ಕೊನೆಗಾಣುತ್ತದೆ.
ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.