OLYMPUS DIGITAL CAMERA

೯೦ ವರ್ಷದ ಡೇನಿಶ್ ಆರ್ಕಿಟೆಕ್ಟ್ ಯ್ಯಾನ್ ಉಟ್ಸನ್ (Jorn Utzon) ಹೋದ ವಾರ ತೀರಿಕೊಂಡ. ಕಣ್ಣಿನ ನೋಟ ತಗ್ಗಿ ಬಹುಪಾಲು ಕುರುಡಾಗಿಬಿಟ್ಟಿದ್ದ. ಮೆದುನುಡಿಯ ಇವನಿಗೆ ನಿದ್ದೆಯಲ್ಲೇ ಹೃದಯಾಘಾತ – ಮೌನ ಸಾವು. ಸಿಡ್ನಿಯ ಹೆಸರಾಂತ “ಆಪೆರಾ ಹೌಸ್”ನ ಮೂಲ ವಿನ್ಯಾಸಕನಾಗಿಯೂ ಅದನ್ನು ತನ್ನ ಕಣ್ಣಿಂದ ಒಮ್ಮೆಯೂ ನೋಡದೇ ತೆರಳಿಬಿಟ್ಟ.

ಆಪೆರಾ ಹೌಸನ್ನು ಜಗತ್ತಿನ ಎಲ್ಲ ಮೂಲೆಗಳಿಂದ ಬಂದು ಜನ ಕತ್ತೆತ್ತಿ ನೋಡಿ ಬೆರಗಾಗುತ್ತಾರೆ. ನೋಡಲು ಬಂದ ಗೆಳೆಯರನ್ನು ಅಲ್ಲಿಗೆ ಕರದೊಯ್ದ ನಮಗೆ, ಅವರ ಅರಳುವ ಕಣ್ಣನ್ನು ನೋಡುವುದೇ ಒಂದು ಆನಂದ. ವರ್ಷವರ್ಷವೂ ಆ ಕಟ್ಟಡಕ್ಕೆ ಬರುವ ಮಿಲಿಯಗಟ್ಟಲೆ ನೋಟಕರು ತಲೆತೂಗದೇ ಹೋಗುವುದೇ ವಿರಳ. ಆದರೆ ಅದರ ಮೂಲ ವಿನ್ಯಾಸಕ ಉಟ್ಸನ್, ಆಪೆರಾ ಹೌಸ್ ಪೂರ್ಣಗೊಳ್ಳುವ ಮೊದಲೇ ಆಸ್ಟ್ರೇಲಿಯ ಬಿಟ್ಟು ಹೊರನಡೆದ. ಆಮೇಲೆ ಒಮ್ಮೆಯೂ ಅದನ್ನು ಸಂದರ್ಶಿಸಿಲ್ಲ! ಆಪೆರಾ ಹೌಸ್ ಜಾಗತಿಕ ಹೆರಿಟೇಜ್ ಪಟ್ಟಿಯಲ್ಲೀಗ ಸೇರಿದೆ.

ಸಿಡ್ನಿಯ ಹಾರ್ಬರಿನ ತಟಕ್ಕೊಂದು ಕಟ್ಟಡಕ್ಕಾಗಿ ನ್ಯೂ ಸೌತ್ ವೇಲ್ಸ್ ರಾಜ್ಯಸರ್ಕಾರ ೧೯೫೭ರಲ್ಲಿ ವಿನ್ಯಾಸದ ಸ್ಪರ್ಧೆ ನಡೆಸಿತು. ಅನಿರೀಕ್ಷಿತವಾಗಿ ಉಟ್ಸನ್‌ನ ವಿನ್ಯಾಸ ಗೆದ್ದು – ಕಟ್ಟಲು ಅವನನ್ನು ಬರಮಾಡಿಕೊಂಡರು. ೧೯೬೬ರಲ್ಲಿ ಕಟ್ಟಡ ಅರ್ಧವಾಗಿದ್ದಾಗ ಉಟ್ಸನ್ ನಿರ್ಮಾಣದಿಂದ ಹೊರ ನಡೆದ. ಸರ್ಕಾರದ ಧೋರಣೆ ಹಾಗು ಖರ್ಚಿನ ವಿಚಾರ ಅವನನ್ನು ನಿರಾಶೆಗೊಳಿಸಿತ್ತು. ಅದೊಂದು ವಿಚಿತ್ರ ಕಥನ.

೧೯೧೮ರಲ್ಲಿ ನೇವಲ್ ಆರ್ಕಿಟೆಕ್ಟನ ಮಗನಾಗಿ ಹುಟ್ಟಿದ ಉಟ್ಸನ್ ಡೇನಿಶ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಿಂದ ೧೯೪೨ರಲ್ಲಿ ಪದವಿ ಪಡೆದು ತನ್ನ ಕೆಲಸ ಶುರುಮಾಡಿದ. ಯುದ್ಧದ ವೇಳೆ ಸ್ವೀಡನ್, ಫಿನ್‌ಲ್ಯಾಂಡಲ್ಲಿ ಕೆಲಸ ಮಾಡಿ ಮತ್ತೆ ಡೆನ್ಮಾರ್ಕಿಗೆ ಹಿಂದಿರುಗಿದ. ಸಿಡ್ನಿ ಆಪೆರಾ ಹೌಸಿನ ನಂತರ ಹಲವು ಕಟ್ಟಡಗಳನ್ನು ವಿನ್ಯಾಸ ಮಾಡಿದ್ದರೂ, ಇದು ಮಾತ್ರ ಉಟ್ಸನನ ಹೆಸರನ್ನು ಅಜರಾಮರ ಮಾಡಿದ ಕಟ್ಟಡವಾಗಿ ಉಳಿದಿದೆ.

ಸಮುದ್ರದ ಮುಂಕಿನಾರೆಯಲ್ಲಿ ಚಿಪ್ಪುಗಳನ್ನು ಜೋಡಿಸಿಟ್ಟಂತಿರುವ ಅವನ ವಿನ್ಯಾಸವನ್ನು ಹಲವು ಬಗೆಗಳಲ್ಲಿ ಜನ ಅರ್ಥೈಸುತ್ತಾರೆ. ಕಪ್ಪೆಚಿಪ್ಪಿನ ಚೂಪುಗಳು ಸಾಗರದ ಕತೆ ಹೇಳುತ್ತದೆ ಎಂದು ಕೆಲವರೆನ್ನುತ್ತಾರೆ. ದೋಣಿಯ ಹಾಯಿಗಳು ಆಸ್ಟ್ರೇಲಿಯದ ವಲಸೆಯ ಕತೆ ಹೇಳುತ್ತದೆ ಎಂದು ಇನ್ನು ಕೆಲವರು ಹೇಳುತ್ತಾರೆ. ದೇವ ಮಂದಿರದಂತಹ ಗೋಪುರದ ಶೈಲಿಯೆಂದು ಕೆಲವು ನಂಬಿಕಸ್ತರು ಹೇಳುತ್ತಾರೆ. ಆದರೆ ಡಾಕ್ಯುಮೆಂಟರಿ ಒಂದರಲ್ಲಿ ಸುಲಿದ ಕಿತ್ತಳೆಯ ಸಿಪ್ಪೆ ತನ್ನ ಮೂಲ ವಿನ್ಯಾಸಕ್ಕೆ ಸ್ಪೂರ್ತಿ ಎಂದು ಉಟ್ಸನ್ ಹೇಳಿದಂತೆ ನನ್ನ ನೆನಪು. ಕಿತ್ತಳೆ ಹಣ್ಣಿನ ಮೂಲಕ್ಕೂ – ಚಿಪ್ಪಿನಂತ-ಹಾಯಿಯಂತ-ಗೋಪುರದಂತ ಕಟ್ಟಡದ ಪೂರ್ಣರೂಪಕ್ಕೂ ನಡುವಿನ ಕತೆ ಮಾತ್ರ ರೋಚಕವಾದ್ದು.

ಉಟ್ಸನ್ ಕನಸು ಕಂಡ ಆ ಬಾಗಿದ ಹೊರಮೈ ಛಾವಣಿಯನ್ನು ಗೋಲದ ಸಂಕೀರ್ಣ ಕೋನದ ಭಾಗಗಳಾಗಿ ಮಾಡಬೇಕಿತ್ತು. ಅರವತ್ತರ ದಶಕದ ಆಸ್ಟ್ರೇಲಿಯದಲ್ಲಿ ಅದನ್ನು ನಿರ್ಮಿಸಬಲ್ಲವರು ಇರಲಿಲ್ಲ. ಹಾಗಾಗಿ ಯೂರೋಪಿನ ನಿರ್ಮಾಣಕಾರರ ಮೊರೆ ಹೋದ. ತನ್ನ ವಿನ್ಯಾಸಕ್ಕೆ ಕುಂದಾಗದಂತೆ, ಹೊರಮೈ ಛಾವಣಿಯನ್ನು ಬಿಡಿಬಿಡಿಯಾಗಿ ಮಾಡಿಸಿ ತರಿಸಿದ. ಅಷ್ಟರಲ್ಲಿ ಸರ್ಕಾರ ಬದಲಾಗಿ, ಖರ್ಚು ಹೆಚ್ಚಾಯ್ತು ಎಂಬ ಕೂಗಾಟ ಶುರುವಾಯ್ತು. ಖರ್ಚು ತಗ್ಗಿಸಬೇಕೆಂದು ಠರಾವು ಹೊರಟಿತು. ಉಟ್ಸನ್ ತನ್ನ ವಿನ್ಯಾಸದ ಯಾವುದೇ ಅಂಶವನ್ನೂ ಬಿಟ್ಟುಕೊಡಲು ತಯಾರಿರಲಿಲ್ಲ. ರಂಗಮಂದಿರದ ಒಳಾಂಗಣ, ಆಪೆರಾಗೆ ಬೇಕಾದ ಅಕೌಸ್ಟಿಕ್ಸ್, ಕಲಾವಿದರ ಗ್ರೀನ್ ರೂಮು ಎಲ್ಲವೂ ಒಂದಕ್ಕೊಂದು ತಾಳೆ ಹಾಕಿಕೊಂಡಿದ್ದು ಒಂದು ಬದಲಿಸಿದರೆ ಮತ್ತೊಂದು ಕೆಡುವ ಅಪಾಯವಿತ್ತಂತೆ. ಇದನ್ನೆಲ್ಲಾ ಸರ್ಕಾರಿ ಬ್ಯೂರೋಕ್ರಾಟ್ಸ್ ಜತೆ ವಾದಿಸಿ ವಾದಿಸಿ ಉಟ್ಸನ್ ಸೋತು ಹೋದನಂತೆ.

ಖರ್ಚಿನ ತಿಕ್ಕಾಟದಲ್ಲಿ ಉಟ್ಸನ್‌ಗೆ ಅವಮಾನವಾಗುವಂತೆ ಹೊಸ ಸರ್ಕಾರ ಅವನ ಸಂಬಳ ನಿಲ್ಲಿಸಿತು. ಉಟ್ಸನ್ ಗಂಟುಮೂಟೆ ಕಟ್ಟಿಕೊಂಡು ದೇಶದಿಂದ ಹೊರಬಿದ್ದ. ಸರ್ಕಾರಿ ಆರ್ಕಿಟೆಕ್ಟರಿಗೆ ಮುಂದಿನ ಕೆಲಸ ವಹಿಸಲಾಯಿತು. ಅವರು ತಮ್ಮ ಯಜಮಾನರ ಮಾತು ಮೀರಲಿಲ್ಲ. ಅಂದಿನ ಪಾರ್ಟಿ ರಾಜಕೀಯಕ್ಕೆ ಸ್ಪಂದಿಸಿದ ಸರ್ಕಾರದ ಸಣ್ಣತನ ಕಡೆಗೂ ಒಳವಿನ್ಯಾಸವನ್ನು ತನ್ನ ಕೈಗೆತ್ತಿಕೊಂಡು ಕೆಡಿಸಿಬಿಟ್ಟಿತು. ಉಟ್ಸನ್ ಕಹಿ ಮನಸ್ಸಿನಿಂದ ಆಸ್ಟ್ರೇಲಿಯ ಬಿಟ್ಟು ಹೋದವನು ಮತ್ತೆ ಇಲ್ಲಿಗೆ ಬರಲೇ ಇಲ್ಲ. ಈ ಎಲ್ಲ ಜಗಳದ ಪರಿಣಾಮವಾಗಿ ಅವನು ತನ್ನ ಜೀವನದಲ್ಲಿ ಮುಂದೆ ಇದಕ್ಕಿಂತ ಚೆನ್ನಾದ ಕೃತಿಯನ್ನು ವಿನ್ಯಾಸಮಾಡಲಿಲ್ಲ. ಅದು ಲೋಕಕ್ಕಾದ ನಿಜವಾದ ದೊಡ್ಡ ನಷ್ಟ ಎಂದು ಹಲವರ ಅಂಬೋಣ. ತೊಂಬತ್ತರ ಕಡೆಯಲ್ಲಿ ಆಪೆರಾ ಹೌಸಿನ ಒಳಾಂಗಣವನ್ನು ಸರಿಮಾಡಲು, ಅವನ ಮಕ್ಕಳ ಮೂಲಕ ಸರ್ಕಾರ ಅವನಿಂದ ಸಲಹೆ ಪಡೆಯಿತು. ಅಷ್ಟೆ. ಮತ್ತೆ ಇಲ್ಲಿಗೆ ಬರುವ ಇಚ್ಛೆ ಅವನು ತೋರಲಿಲ್ಲ.

ಮನಸ್ಸಲ್ಲಿ ಕಹಿ ಉಳಿದಿಲ್ಲ ಎನ್ನುತ್ತಲೇ ತನ್ನ ಹಟವನ್ನು ಸಾಧಿಸಿ ಉಟ್ಸನ್ ಹೊರಟುಬಿಟ್ಟ. ಇಪ್ಪತ್ತನೇ ಶತಮಾನದ ಅಚ್ಚಳಿಯದ ಕುರುಹೆಂದು ಲೋಕವೇ ಕೊಂಡಾಡಿದರೂ, ತನ್ನ ಮನಸ್ಸಿಗೊಪ್ಪದ್ದು ಎಂಬ ತನ್ನ ನಿಲುವನ್ನು ಕಡೆಗೂ ಬಿಟ್ಟುಕೊಡದೇ ಹೊರಟುಬಿಟ್ಟ. ತಮ್ಮ ತಪ್ಪು ಅರಿವಾಗಿರುವ ಸಿಡ್ನಿಯ ಮಂದಿ ಅವನು ತೀರಿಕೊಂಡಾಗ ಕಟ್ಟಡದ ದೀಪವನ್ನು ತಗ್ಗಿಸಿ ಮೌನವಾಗಿ ಉಟ್ಸನ್‌ಗೆ ತಲೆ ಬಾಗಿದರು.