Advertisement
ಅನುಭವಗಳನ್ನು ಮರಳಿ ಬಾಳಿಸುವ ಕಥೆಗಳು: ಎಡೆಯೂರು ಪಲ್ಲವಿ ಕಥೆಗಳಿಗೆ ವಿನಯಾ ಒಕ್ಕುಂದ ಮುನ್ನುಡಿ

ಅನುಭವಗಳನ್ನು ಮರಳಿ ಬಾಳಿಸುವ ಕಥೆಗಳು: ಎಡೆಯೂರು ಪಲ್ಲವಿ ಕಥೆಗಳಿಗೆ ವಿನಯಾ ಒಕ್ಕುಂದ ಮುನ್ನುಡಿ

ನಾಗರಿಕ ಸೌಜನ್ಯಕ್ಕಾಗಿ ಬಲು ಬೆಲೆ ತೆರಬೇಕಾದ ಆಧುನಿಕ ಬದುಕಿನ ಪಂಚಾಂಗ ಇಲ್ಲಿದೆ. ಹಾಗಿದ್ದರೆ, ಆಧುನಿಕತೆಯು ಹಳೆಯ ವರ್ಗೀಕೃತ ತಪ್ಪುಗಳನ್ನು ಮೀರಿಸಿಕೊಂಡಿದೆಯೇ? ಸಾಮಾಜಿಕ ಸಾಂಕ್ರಾಮಿಕಗಳಾಗಿದ್ದ ಜಾತಿ, ಧರ್ಮ, ವರ್ಗ, ಲಿಂಗಗಳೀಗ ಇಲ್ಲವಾಗಿವೆಯೇ? ಖಂಡಿತ ಇಲ್ಲ. ಈಗಲೂ ಈ ಎಲ್ಲ ತರತಮಗಳು ಹಾಗೆಯೇ ಮುನ್ನಡೆಯುತ್ತಿವೆ. ರೂಪಾಂತರಗೊಂಡು ವಿವರಣೆಗೆ ನಿಲುಕದಷ್ಟು ಸಂಕೀರ್ಣ ಸ್ಥಿತಿಯನ್ನು ಪಡೆದಿವೆ. ಪ್ರೀತಿಯ ರಾಜಕಾರಣದಿಂದ ಮತ್ತೆ ಬಲವರ್ಧನೆಗೊಳ್ಳುತ್ತಿವೆ. ಯಾಜಮಾನ್ಯವು ಯಾಜಮಾನ್ಯವೇ ಆಗಿ ಮುನ್ನಡೆಯುತ್ತಿದೆ.
ಎಡೆಯೂರು ಪಲ್ಲವಿ ಕಥಾ ಸಂಕಲನ “ಕುಂಡದ ಬೇರು” ಕೃತಿಗೆ ವಿನಯಾ ಒಕ್ಕುಂದ ಮುನ್ನುಡಿ

ಕುಂಡದ ಬೇರು ಮತ್ತು ಇತರ ಕಥೆಗಳು ಎನ್ನುವ ಒಂಭತ್ತು ಕಥೆಗಳ ಹಸ್ತಪ್ರತಿಯನ್ನು ಪಲ್ಲವಿ, ಬಲು ಪ್ರೀತಿಯಿಂದ ಕಳಿಸಿದ್ದರು. ನಾನು ಅರೆಮನಸ್ಸಿನಿಂದಲೇ ತೆಗೆದುಕೊಂಡಿದ್ದೆ. ಈಗ ಈ ಕಥೆಗಳನ್ನು ಮತ್ತೆ ಮತ್ತೆ ಓದಿದಾಗ, ಹೀಗೆ ಒಟ್ಟು ಓದಿನ ಸಂದರ್ಭವನ್ನು ಒದಗಿಸಿದ್ದಕ್ಕಾಗಿ ಪಲ್ಲವಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ಕನ್ನಡ ಕಥಾ ಪರಂಪರೆಗೆ ಸಶಕ್ತ ಕಥೆಗಾರ್ತಿಯನ್ನು ಬರಮಾಡಿಕೊಳ್ಳುವ ಆಯಾಚಿತ ಅವಕಾಶವನ್ನು ಒದಗಿಸಿದ್ದಕ್ಕಾಗಿ.

ದಿನದಿಂದ ದಿನಕ್ಕೆ ಬದುಕು ಬಿಕ್ಕಟ್ಟಿನದಾಗುತ್ತಿದೆ. ಬಾಳಿನ ವಿವೇಕ ಕಳೆದು ಹೋಗುತ್ತಿದೆ. ಸಾಮಾಜಿಕ ಸಾಮರಸ್ಯ ಗೀರು ಗೀರು ಗಾಯದಿಂದ ಕೀವುಗಟ್ಟಿ ನರಳುತ್ತಿದೆ. ಕೆಡುಕಿನ ತಾಪದಲ್ಲಿ ವ್ಯಕ್ತಿಗತ ಬಾಳಿನ ಸೌಖ್ಯವೂ ದುರ್ಲಭವಾಗಿದೆ. ಎಲ್ಲವೂ ತೋರುಂಬ ಲಾಭದ ತಹತಹದ ಬೇನೆ. ಇಂತಹ ಸ್ಥಿತಿ ಸಂವೇದನಾಶೀಲತೆಯನ್ನು ಗಾಸಿಗೊಳಿಸುತ್ತಿದೆ. ದಿಕ್ಕೆಡಿಸುತ್ತಿದೆ. ಆದರೆ, ಕೇಡುಗಾಲವನ್ನು ಕಡುಹಚ್ಚೆಯಂತಹ ಅಭಿವ್ಯಕ್ತಿಗಳಲ್ಲಿ ಹಿಡಿದಿಡಲೇಬೇಕಲ್ಲವೆ? ಅದಕ್ಕಾಗಿಯೇ ಏನೋ, ನಮ್ಮ ಮುಂದಿನ ತಲೆಮಾರು ಬಲು ಜತನದಿಂದ ಅಭಿವ್ಯಕ್ತಿಯ ಘನತೆಯನ್ನು ಹೆಚ್ಚಿಸುತ್ತಿದ್ದಾರೆ. ಕಾವ್ಯ, ಕಥೆ, ನಾಟಕ, ಸಿನೆಮಾ, ಚಿತ್ರಗಳಂತಹ ಸಿದ್ಧ ಮಾದರಿಗಳಲ್ಲಿ ಮಾತ್ರವಲ್ಲ ಊಟ, ಹರಟೆ, ತಮಟೆ, ಭಾಷಣ, ವಿಡಿಯೋಗಳಂತ ವಿಭಿನ್ನ ದಾರಿಗಳನ್ನೂ ಹುಡುಕಿಕೊಳ್ಳುತ್ತಿದ್ದಾರೆ. ಕಿರಿಯರ ಗಟ್ಟಿ ಹೆಜ್ಜೆಗಳನ್ನು ಕಂಡಾಗೆಲ್ಲ ಮದರ್ ಕಾದಂಬರಿಯ ತಾಯಿ ನನ್ನೊಳಗೆ ಗಕ್ಕನೆ ಹೊಕ್ಕಿ ಕುಳಿತುಬಿಡುತ್ತಾಳೆ. ಅಂತಹ ದುರಿತ ಕಾಲದಲ್ಲಿ ತನ್ನ ಮಗನ ಕರಪತ್ರವನ್ನು ಹಂಚುತ್ತ, ದುಃಖದಲ್ಲಿ ಸಂಭ್ರಮಿಸುವ ತಾಯಿ ಆ ಅನುಭೂತಿಯನ್ನು ಇಲ್ಲಿಯ ಕಥೆಗಳೂ ಕೊಟ್ಟವು.

(ಎಡೆಯೂರು ಪಲ್ಲವಿ)

ಈ ಒಂಭತ್ತೂ ಕಥೆಗಳ ಕೇಂದ್ರ ಹೆಣ್ಣು. ಆದರೆ, ಎಲ್ಲ ಕಥೆಗಳನ್ನೂ ಒಂದೇ ಹಿಡಿಯಲ್ಲಿಟ್ಟುಕೊಂಡು ಸಾಮಾನ್ಯೀಕರಿಸಿ ಮಾತನಾಡುವುದು ಸಾಧ್ಯವಿಲ್ಲ. ಪರಂಪರೆಯಿಂದ ಮತ್ತು ವರ್ತಮಾನದಿಂದ ಸ್ಥಾಪಿತಗೊಳಿಸಿದ್ದ ಹೆಣ್ಣುಲೋಕದ ಚೌಕಟ್ಟುಗಳನ್ನು ಬಲು ಪ್ರಜ್ಞಾಪೂರ್ವಕವಾಗಿ ದಾಟುವ ಕಥೆಗಳಿವು. ತನ್ನ ಕಾಲದ ಸ್ಥಾಪಿತ ಸತ್ಯಗಳೆಂಬ ಭ್ರಮೆಯ ತೋರುಗಾಣ್ಕೆಯನ್ನು ಪ್ರಶ್ನಿಸುವುದು ಮಾತ್ರವಲ್ಲ, ಮತ್ತೊಂದು ಪರ್ಯಾಯವನ್ನು ಎದುರಿಡುವ ಕಥನಗಾರಿಕೆಯ ಉತ್ತಮ ಮಾದರಿ ಇಲ್ಲಿದೆ. ಇಲ್ಲಿಯ ಹಲವು ಕಥೆಗಳು ಪ್ರೀತಿಯ ಆತ್ಯಂತಿಕತೆ ಏನೆಂಬುದನ್ನು ಹಲವು ರೂಪಗಳಲ್ಲಿ ನಿಷ್ಠುರವಾಗಿ ಎದುರಿಡುತ್ತವೆ. ಹೆಣ್ಣು ಬಾಳನ್ನು, ಈಗಾಗಲೇ ಮಂಡಿತವಾಗಿರುವ ವ್ಯವಸ್ಥೆಯ ಯಾವ ವರ್ಗೀಕೃತ ನೆಲೆಯಿಂದಲೂ ನೋಡುವುದು ಸಾಧ್ಯವಿಲ್ಲ. ಶೈಶವ, ಬಾಲ್ಯ, ಯೌವನ, ವೃದ್ಧಾಪ್ಯ ಎಂಬ ವಿಂಗಡನೆ ಹೆಣ್ಣಿಗೆಲ್ಲಿ ಅನ್ವಯಿಸುತ್ತದೆ? ಕೌಟುಂಬಿಕವಾದ “ಸುಸಂಸ್ಕೃತ ಕಟ್ಟುಪಾಡು” ಅವಳನ್ನು ಶಾಶ್ವತವಾಗಿ ವೃದ್ಧಾಪ್ಯದಲ್ಲೇ ಇಡಬಯಸುತ್ತದೆ. ಹಾಗಿದ್ದರೇ ಅವಳಿಗೆ ‘sಸೌಶೀಲ್ಯದ’ ಹಣೆಪಟ್ಟಿ ಲಭ್ಯವಾಗುವುದು.

‘ಕುಂಡದ ಬೇರು’ ಕಥೆಯ ಚಿನ್ನಮ್ಮ ಎಂಬ ಎಳೆಯ ಹುಡುಗಿಯ ಮಿಂಚುಳದಂತಹ ಪುಟ್ಟ ಪುಟ್ಟ ಆಸೆಗಳೂ ಗಂಡಸಿನಧಿಕಾರ ಗಾಣದ ಬೆಂಕಿಯಲ್ಲಿ ದಹಿಸಿಹೋಗುತ್ತದೆ. “ಅಬ್ಬ, ಗಂಡಸ್ರು ಇಲ್ಲದೆ ಮನೆಯೆ ಸ್ವರ್ಗ ಚಿನ್ನಿ” ಅಂತ ಅವಳ ಅವ್ವ ಅಸಹಾಯಕತೆಯಿಂದ ಗೊಣಗಿಕೊಳ್ಳುತ್ತಾಳಾದರೂ, ಅದೊಂದು ಅರ್ಧ ಸತ್ಯವೆನ್ನುವುದು ಚಿನ್ನಮ್ಮನಿಗೆ ಮನೆಯಿಂದ ಶಾಲೆಗೆ ಹೋಗಿಬರುವ ದಾರಿಯಲ್ಲಿ ಗೆಳತಿಯೊಂದಿಗಿನ ಪಿಸು ಮಾತುಗಳಲ್ಲಿ ಅರಿವಾಗುತ್ತದೆ. ಅವಳ ಅಪ್ಪನ ಕ್ರೌರ್ಯದ ಪರಮಾವಧಿಯ ತಳಾದಿಯಲ್ಲಿರುವುದು ಸಮಾಜದ ಬಗೆಗಿನ ಭೀತಿ. ಮರ್ಯಾದಾ ಹತ್ಯೆಗೆ ಈಡಾಗಿ ಹೋದ ಸೋದರನ ಸಾವಿನ ಸ್ಮೃತಿ. ಚಿನ್ನಮ್ಮನ ಅಪ್ಪನ ಮೂಲಕ ಕಥೆ ಪಶ್ನಿಸುತ್ತದೆ. ‘ಸಮಾಜದ ಮರ್ಯಾದಾವಂತರೇ ನೀವು ಪ್ರಶ್ನಿಸಬೇಕಾಗಿದ್ದು ಯಾರನ್ನ’? ಯಾವುದು ಅಮಾನವೀಯವೋ ಅನಾಗರಿಕವೋ ಅದನ್ನು ಪ್ರಶ್ನಿಸಬೇಕಿತ್ತು. ಆದರವರು ತಮ್ಮ ತಮ್ಮ ಹೆಣ್ಣುಮಕ್ಕಳನ್ನು ಉಸಿರುಗಟ್ಟಿಸಿ ಜಾತಿ-ಧರ್ಮದ ನೂಲುಗಳಲ್ಲಿ ಗಲ್ಲಿಗೇರಿಸುತ್ತಿದ್ದಾರೆ. ಮಕ್ಕಳು ಅದರಲ್ಲೂ ಹೆಣ್ಣುಮಕ್ಕಳು ಜೀವಂತ ಶವಗಳಂತೆ ಇರಬೇಕೆನ್ನುತ್ತಾರೆ. ಅದನ್ನು ಸಂಸ್ಕಾರ ಎನ್ನುತ್ತಾರೆ. ಯಾವ ಜಾತಿ-ಧರ್ಮಗಳೂ ಇದಕ್ಕೆ ಹೊರತಲ್ಲ. ಮಗಳ ಪಾಟಿಚೀಲವನ್ನು ತಪಾಸಣೆ ಮಾಡುವ ಅಪ್ಪನಿಗೆ ಹೃದಯದ ಮಾರ್ಕ್‌ ಅಂಟಿಸಿಟ್ಟುಕೊಂಡಿರುವ, ಏನೂ ಬರೆಯದ, ಬರೆಸಿಕೊಳ್ಳುವ ಸಿದ್ಧತೆಯ ಪತ್ರ ದೊಡ್ಡ ತಪ್ಪಾಗಿ ಕಾಣುತ್ತದೆ. ಅದು, ಅಮ್ಮಂದಿರ ದಿನದ ತಯಾರಿಯಲ್ಲಿದ್ದೀತು ಅಥವಾ ಅಂಥದ್ದೇನಾದರೂ ಇದ್ದೀತು. ವ್ಯವಧಾನಿಸಬೇಕಲ್ಲವೇ ಎಂಬ ಯೋಜನೆಯೂ ಬರುವುದಿಲ್ಲ.

ವಿಶೇಷವೆಂದರೆ, ಇಲ್ಲಿಯ ಹಲವು ಕಥೆಗಳು ಬಾಲ್ಯ ಕಳಚಿ ಯೌವನಕ್ಕೆ ಕಾಲಿಟ್ಟ ಎಳೆಯ ಹೆಣ್ಣುಮಕ್ಕಳ ತಾಕಲಾಟಗಳನ್ನು ತಬ್ಬಲಿತನಗಳನ್ನು ಕಾಣಿಸುತ್ತಿದೆ. ಈ ತಬ್ಬಲಿತನ, ಎಲ್ಲರಿದ್ದೂ ಎಲ್ಲರೊಂದಿಗಿದ್ದೂ ಜೀವದಾಳದಲ್ಲಿ ಮೊಳೆತು ಇರುವ ಮುಳ್ಳು. ‘ಕಣಗಿಲೆ’ ಕಥೆಯ ಕುಂಟು ಹುಡುಗಿ ಸಂಪಿಗೆ, ತಾನು ಕಾಮದ ವಸ್ತುವಿನಂತೆ ಚಪ್ಪರಿಸಲ್ಪಟ್ಟಿದ್ದು, ಮತ್ತ ಮತ್ತದೇ ನರಕದಲ್ಲಿ ತನ್ನನ್ನು ದೂಡಿದ್ದು ಅನೂಹ್ಯ ಹಿಂಸೆಯಾಗಿದೆ. ಈ ಹಿಂಸೆಗೆ ಕಾರಣನಾದವನು ಸಭ್ಯ ಗೃಹಸ್ಥನಾಗಿ ಸಜ್ಜನಿಕೆಯ ಮುಖವಾಡದಲ್ಲಿರುವುದು ಇನ್ನೂ ಆ ಹಿಂಸೆಯನ್ನು ಹೆಚ್ಚಿಸಿದೆ. ಅದನ್ನವಳು ತನ್ನ ಹೆತ್ತ ಅವ್ವನೊಂದಿಗೂ ಹೇಳಿಕೊಳ್ಳಲಾರಳು. ಮರೆಯಲಾರಳು. ಅರಗಿಸಿಕೊಳ್ಳಲಾರಳು. ಮನೋವ್ಯಾಧಿಯಂಥ ಬಳಲಿಕೆಯದು.

ಯುರೊಫ್ಲೊಮೆಟ್ರಿ ಎಂಬ ಕಥೆ, ‘ಅಯ್ಯೋ ಹೆಣ್ಣು ಜನ್ಮವೇ’ ಎಂದು ದಿಗಿಲುಬೀಳಿಸುವಂಥದ್ದು. ಮೂತ್ರವಿಸರ್ಜನೆ ಸರಿಯಾಗಿ ಆಗದೆ, ಪದೇ ಪದೇ ಮೂತ್ರಕ್ಕೆ ಹೋಗಬೇಕೆನ್ನುವ ತೊಂದರೆಯಿಂದ ಬಳಲುವವಳ ಸಮಸ್ಯೆಗೆ ಹೆತ್ತವರು ಸ್ಪಂದಿಸುವ ರೀತಿ ಗಾಬರಿಬೀಳಿಸುವಂಥದ್ದು. ಮದುವೆ ನಿಶ್ಚಿತಾರ್ಥ ಆದಮೇಲೆ ತನ್ನ ಕಾಯಿಲೆ ಪರಿಹರಿಸಿಕೊಳ್ಳಲೇಬೇಕೆಂದು ಹಠಮಾಡಿ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಿಕೊಳ್ಳುತ್ತಾಳೆ. ಆದರೆ, ಅವಳ ಅಪ್ಪನಿಗಾಗಲಿ ಅಮ್ಮನಿಗಾಗಲಿ ಮಗಳ ಕಾಯಿಲೆಯ ಯಾತನೆಗಿಂತಲೂ, ಇದು ಗಂಡಿನ ಮನೆಯವರಿಗೆ ಗೊತ್ತಾದರೆ ಏನೇನು ಅರ್ಥ-ಅಪಾರ್ಥಗಳು ಹುಟ್ಟಿಕೊಂಡು ಬಿಡುತ್ತವೆಯೋ ಎಂಬ ಭಯವೇ ಹೆಚ್ಚಾಗುತ್ತದೆ. ಅವಳು ಜೀವನ್ಮರಣದ ಯಾತನೆಯಲ್ಲಿ ಸಿಲುಕಬೇಕಾಗುತ್ತದೆ. ವ್ಯವಸ್ಥೆಯ ನಿಯಂತ್ರಕ ಬಾಹುಗಳು ಎಷ್ಟುದ್ದ ಚಾಚಿವೆ! ನಡೆ-ನುಡಿ ಆಚಾರ-ವಿಚಾರಗಳ ಮೂಲಕ ಅವಳ ಮನಸ್ಸು, ದೇಹ ಕಡೆಗೆ ಅವಳ ಆರೋಗ್ಯ-ಅನಾರೋಗ್ಯಗಳ ನಿರ್ಣಯಾಧಿಕಾರವನ್ನೂ ತನ್ನ ಕಕ್ಷೆಗೆ ತೆಗೆದುಕೊಂಡಿದೆ. ಹೌದಲ್ಲವೇ ಕುಟುಂಬದ ಆರ್ಥಿಕತೆಗೆ, ಅನುಕೂಲಕ್ಕೆ ತೊಂದರೆಯಾದೀತೆಂದು, ಯಾರಾದರೂ ಏನಾದರೂ ಅಂದಾರೆಂದು ಕಾಯಿಲೆಗೆ ಔಷಧಿ ಮಾಡಿಕೊಳ್ಳದೆ, ಒಳಗೇ ನುಂಗಿ ಉಲ್ಬಣಿಸಿ ಸಾಯುವ ಹೆಣ್ಣು ಮಕ್ಕಳ ಸಂಖ್ಯೆ ಎಷ್ಟಿದ್ದೀತು? ಇದನ್ನು ಯಾವ ಗಣತಿಯ ಯಾವ ಕಾಲಂನಲ್ಲಿ ತುಂಬಲಾದೀತು? ಅಂತಹ ಮಾನದಂಡವನ್ನು ಯೋಚಿಸಲೂ ಈ ವ್ಯವಸ್ಥೆ ಅಸಮರ್ಥವಾಗಿದೆಯಲ್ಲವೇ? ಮೇಲ್ನೋಟಕ್ಕೆ ಹಾಯದ ಸೂಕ್ಷ್ಮ ತರಂಗಗಳನ್ನು ಕಾಣಿಸುವ ಕಥೆಯ ನೇಯ್ಗೆ ಇಲ್ಲಿದೆ.

ಅತ್ಯಾಧುನಿಕತೆಯು ಬದಲಿಸಿದ ಜೀವನ ವಿನ್ಯಾಸದಿಂದಾಗಿ ಪೂರ್ವಕಲ್ಪಿತ ತಿಳುವಳಿಕೆಯನ್ನು ಮರುಪರೀಕ್ಷೆಗೆ ಒಡ್ಡುವುದು ಅಗತ್ಯವೂ ಆಗಿದೆ. ಪೂರ್ವನಿಶ್ಚಿತ ನಿಲುವುಗಳೀಗ ಬದಲಿಯಾಗಿವೆ. ಗಂಡು-ಹೆಣ್ಣು ವಿರುದ್ಧಾರ್ಥಕ ಪದಗಳಲ್ಲ. ಜೈವಿಕ ವ್ಯತ್ಯಾಸ ಸಾಮಾಜಿಕ ವ್ಯತ್ಯಾಸವೂ ಆಗಬೇಕಿಲ್ಲ-ಈ ತಿಳಿವು ವಿರಳವಾಗಿಯಾದರೂ ಅಂತರ್ಗತವಾಗುತ್ತಿದೆ. ಆಗಬೇಕಿದೆ ಕೂಡ. ತನ್ನ ನೋವಿನ ನೆನಪು ಅಸಹನೀಯವಾದಾಗ ನಿದ್ದೆಗೆ ಜಾರುವ ಸಂಪಿಯ ಬೇನೆ, ‘ನಿದ್ದೆಗೆ ಯಾವ ನೋವ್ಗಳೂ ಇರಲ್ಲ ಅಲ್ವ’ ಎನ್ನುವ ಅವಳ ಬೇಗುದಿಗೆ ಪ್ರಾಮಾಣಿಕ ಅಂತಃಕರಣದಿಂದ ಸ್ಪಂದಿಸಬಲ್ಲ ರೂಪೇಶನಿದ್ದಾನೆ. ಸಂಪಿಯ ಯಾತನೆಗೆ ಕಾರಣನಾದವನು ಗಂಡಸು. ಅವಳನ್ನು ತಾಯಿಯಂತೆ ಎದೆಗಾತ್ಕೊಂಡು ಪುಟ್ಟ ಮಗುವಿನಂತೆ ಬೆಚ್ಚಿ ಬೀಳುತ್ತಿದ್ದವಳ ಸಂಕಟಕ್ಕೆ ಹನಿಗಣ್ಣಾಗುವವನೂ ಗಂಡಸೇ. ಗಂಡು ಹೆಣ್ಣು ಎಂಬ ಸ್ವಭಾವ ವಿಂಗಡನೆಯ ತಪ್ಪನ್ನು ಕಾಣಿಸುವ ಕಥೆಗಳಿವು. ಜೈವಿಕತೆಗೂ ಸಂವೇದನಾಶೀಲತೆಗೂ ಕಟ್ಟುನಿಟ್ಟಾದ ಸಂಬಂಧ ಸೂತ್ರವಿಲ್ಲ. ಗಂಡಾಗುವ ಹೆಣ್ಣಾಗುವ ಅಥವಾ ಏನೆಲ್ಲವನ್ನೂ ಸಂವೇದನೆಯಾಗಿ ಪರಿಭಾವಿಸುವ ಇಚ್ಛಾಶಕ್ತಿ ಮನುಷ್ಯರಿಗಿದೆ. ಅದೇ ಮನುಷ್ಯತ್ವ.

ಅತಿನಾಗರಿಕ ಸಮಾಜವನ್ನು ಪ್ರವೇಶಿಸುವ ಸಂದರ್ಭದಲ್ಲಿ ಎದುರಿಸಬೇಕಾದ ಆತಂಕ ನೇರವಾದದ್ದಲ್ಲ. ಅದಕ್ಕೆ ಹಲವು ಮೊನಚುಗಳಿವೆ. ಹೆಣ್ಣು ಬಾಳು ಈಗ ದಮನಿತ ನೆಲೆಯಲ್ಲಿ ಮಾತ್ರವೇ ಇಲ್ಲ. ಅದೀಗ ಯೋಚಿಸಲೂ ಸಾಧ್ಯವಿಲ್ಲದ ದಮನಕಾರೀ ನೀತಿಗಳನ್ನು ಹೊಂದಿದೆ. ಇಲ್ಲಿ ಭಿನ್ನಾಭಿಪ್ರಾಯ, ವಿರೋಧ ಎದುರುನಿಲ್ಲುವಿಕೆಗಳಿಲ್ಲ. ನಮ್ಮ ದೇಹದಲ್ಲೇ ಸೇರಿಕೊಂಡು ವೈರಸ್ ನಮ್ಮ ನೆಮ್ಮದಿಯನ್ನು ಕೆಡಿಸುವ ಹಾಗೆ, ಪ್ರೀತಿ-ಸ್ನೇಹ-ಸಲುಗೆಗಳಿಂದ ನಟಿಸಿ ನಮ್ಮಿಂದಲೇ ಉಪಕೃತರಾಗಿ, ನಮ್ಮನ್ನೇ ಕೀಳರಿಮೆಗೆ ದೂಕಿ ಅಸ್ವಸ್ಥಗೊಳಿಸುವ ಆಧುನಿಕ ಸಂಬಂಧಗಳು ಕಳಚಲಾಗದ ಬಿಗಿತದಲ್ಲಿ ಕಾಡುತ್ತವೆ. ಮೋಸಹೋಗಿದ್ದೇನೆ ಎಂದು ಅರಿವಾಗುವ ಹೊತ್ತಿಗೆ ಬಹುದೂರ ಬಂದು ಆಗಿರುತ್ತದೆ. ನಾಗರಿಕ ಸೌಜನ್ಯಕ್ಕಾಗಿ ಬಲು ಬೆಲೆ ತೆರಬೇಕಾದ ಆಧುನಿಕ ಬದುಕಿನ ಪಂಚಾಂಗ ಇಲ್ಲಿದೆ. ಹಾಗಿದ್ದರೆ, ಆಧುನಿಕತೆಯು ಹಳೆಯ ವರ್ಗೀಕೃತ ತಪ್ಪುಗಳನ್ನು ಮೀರಿಸಿಕೊಂಡಿದೆಯೇ? ಸಾಮಾಜಿಕ ಸಾಂಕ್ರಾಮಿಕಗಳಾಗಿದ್ದ ಜಾತಿ, ಧರ್ಮ, ವರ್ಗ, ಲಿಂಗಗಳೀಗ ಇಲ್ಲವಾಗಿವೆಯೇ? ಖಂಡಿತ ಇಲ್ಲ. ಈಗಲೂ ಈ ಎಲ್ಲ ತರತಮಗಳು ಹಾಗೆಯೇ ಮುನ್ನಡೆಯುತ್ತಿವೆ. ರೂಪಾಂತರಗೊಂಡು ವಿವರಣೆಗೆ ನಿಲುಕದಷ್ಟು ಸಂಕೀರ್ಣ ಸ್ಥಿತಿಯನ್ನು ಪಡೆದಿವೆ. ಪ್ರೀತಿಯ ರಾಜಕಾರಣದಿಂದ ಮತ್ತೆ ಬಲವರ್ಧನೆಗೊಳ್ಳುತ್ತಿವೆ. ಯಾಜಮಾನ್ಯವು ಯಾಜಮಾನ್ಯವೇ ಆಗಿ ಮುನ್ನಡೆಯುತ್ತಿದೆ. ಗುಲಾಮೀ ಸಂವೇದನೆಗಿದು ತಿಳಿಯುವುದು ಮಿಕ್ಕು ಮೀರಿ ಹೋದ ಮೇಲೆ. ಆಗ ಅದು ಪ್ರತಿಕ್ರಿಯೆ ಮಾಡುವ ವಿಷಯವಾಗಿಯೂ ಇರುವುದಿಲ್ಲ. ಹಾಗಿದ್ದರೆ ಬದಲಾಗಿದ್ದಾದರೂ ಏನು ಎಂಬ ವಿಷಾದದ ಪ್ರಶ್ನೆಯನ್ನು ರದ್ದಿ, ಮಾಯದಗಾಯ, ಹುಳಿತೇಗು ಕಥೆಗಳು ಎದುರಿಡುತ್ತವೆ. ಅತ್ಯಾಧುನಿಕ ಬದುಕಾದರೂ ಹೆಣ್ಣಿಗೆ ಸುರಕ್ಷತೆಯನ್ನು ಕೊಟ್ಟಿದೆಯೇ? ಹಿಂಸೆಯೆಂದು ಗುರುತಿಸಲಾಗದ ಕಾನೂನಿನ ಯಾವ ಕಲಮಿನಡಿಯಲ್ಲಿಯೂ ದಾಖಲಿಸಲಾಗದ ಹಿಂಸಾರತಿಯಿದು. ಎಜ್ಯುಕೇಟೆಡ್ ಗರ್ಲ್ಸ್ ಎಂಬ ಕಥೆ, ಹೆಣ್ಣನ್ನು ಸೋಶಿಯಲ್ ಆಗಿರಲು, ಫ್ಯಾಶನೇಬಲ್ ಆಗಿರಲು ನಂಬಿಸಿ ಸಜ್ಜುಗೊಳಿಸುವ ವ್ಯವಸ್ಥೆ, ಆ ಕಾರಣಕ್ಕಾಗಿಯೇ ಅವಳ ಬದುಕಿನ ಹಕ್ಕನ್ನು ಕಸಿಯುತ್ತದೆ. ಕೊಲೆಗಾರರ ಪತ್ತೆಯಾಗುವುದು ಹೋಗಲಿ, ಕೊಲೆಯೂ ಪತ್ತೆಯಾಗದ ಹಾಗೆ, ಹಿಂಸೆಯ ಹತಾರಗಳು ಮೃದು ಮೃದುಲವಾಗಿರುತ್ತದೆ. ಹೆಣ್ಣಿನ ಬದುಕಿನ ಹಕ್ಕು ಕಾಲದಿಂದ ಕಾಲಕ್ಕೆ ಮತ್ತಷ್ಟು ಮತ್ತಷ್ಟು ಇಕ್ಕಟ್ಟಿನದಾಗುತ್ತಿದೆ.

(ವಿನಯಾ ಒಕ್ಕುಂದ)

ಇಲ್ಲಿಯ ಕಥೆಗಳು ಏನನ್ನು ಹೇಳುತ್ತಿವೆ? ಎಂಬ ಸರಳ ಪ್ರಶ್ನೆಗೆ ಆಸ್ಪದಕೊಡದ ಪ್ರಯತ್ನ ಕಥನಗಾರಿಕೆಯ ಹೆಚ್ಚಳವಾಗಿದೆ. “ನಾವು ಕಥೆಗಳ ಸುತ್ತಲಲ್ಲೇ ಬದುಕುತ್ತೇವೆ”-ಎನ್ನುವುದು ಶ್ರೇಷ್ಠ ಕಥೆಗಾರ ಮಾರ್ಕ್ವೆಜ್ ಮಾತು. ಸುತ್ತುವರಿದಿರುವ ಭಿತ್ತಿಯಲ್ಲಿ ಹೇಗೆ ಆಯ್ದು ಚೌಕಟ್ಟು ಹಾಕುತ್ತೇವೆ ಎನ್ನುವುದು ಮುಖ್ಯ. ಅದು ಕಥೆಗಾರಿಕೆಯ ಹದ. ಆ ಹದ ಹಿಡಿಯುವ ಕಡೆ ಇಲ್ಲಿಯ ನಿರೂಪಣೆಯಿದೆ. ಒಂದು ಕಥೆ ಇನ್ನೊಂದರ ಜೀವಧಾತುವಾಗಿ ಮುನ್ನಡೆಯುತ್ತದೆ. ಒಂದು ಸಮಸ್ಯೆಯಿಂದ ಇನ್ನೊಂದು ಸಮಸ್ಯೆಗೆ, ಒಂದು ಪ್ರಶ್ನೆಯಿಂದ ಮತ್ತೊಂದು ಪ್ರಶ್ನೆಗೆ ಚಲಿಸುತ್ತದೆ. ಸಣ್ಣಕಥೆ ಸಂಕೀರ್ಣ ಶೇಡ್‌ಗಳಲ್ಲಿ ಹಲವನ್ನು ಒಳಗೊಳ್ಳುತ್ತದೆ.

ಇಲ್ಲಿ ‘ರದ್ದಿ’ ಎಂಬ ಕಥೆಯಿದೆ. ಇದು ಇಬ್ಬರು ಸಮವಯಸ್ಕ ಹೆಂಗಸರನ್ನ ಎದುರುಬದುರು ಇಡುತ್ತ, ಸೋಲು-ಗೆಲುವುಗಳನ್ನು ನಿಷ್ಕರ್ಷೆಗೆ ಒಡ್ಡುತ್ತದೆ. ಸ್ನೇಹವನ್ನು ನಿಕಷಕ್ಕೆ ಹಚ್ಚುತ್ತದೆ. ಎಲ್ಲ ಎಲ್ಲದರಾಚೆ ಮತ್ತೆ ಜಾತಿಯ ಪ್ರಜ್ಞೆಯೇ ಫೂತ್ಕರಿಸಿಬಿಡುವುದನ್ನು ಕಾಣಿಸುತ್ತದೆ. ಅನುಕೂಲ ಅವಶ್ಯಕತೆಗಳಿದ್ದರೆ ಜಾತಿ ಕಾಣುವುದಿಲ್ಲ. ಅವಶ್ಯಕತೆ ಇಲ್ಲದ ಕೆಲಸ ಮುಗಿವ ಹೊತ್ತಲ್ಲಿ ಮತ್ತಷ್ಟು ತನ್ನ ಮೂಲರೂಪವನ್ನು ತೋರಿಸಿಬಿಡುವ ಭೀತಸ್ಥಿತಿಯಿದೆ. ಅದೆಷ್ಟು ರೂಪಾಂತರಗಳು? ಎಂಬ ಪ್ರಶ್ನೆ ಹುಟ್ಟುತ್ತದೆ. ಇಲ್ಲಿಯ ಕಥೆಗಳಲ್ಲಿ ಗಟ್ಟಿಗಿತ್ತಿಯರಿದ್ದಾರೆ. ಮಹಾ ಪುಕ್ಕಲು ಚಿನ್ನಮ್ಮನಿಂದ, ಬಲುಜೋರು ಅನ್ನಿಸುವ ಸಾವಿತ್ರಿಯವರೆಗೆ ಎಲ್ಲರೂ ವ್ಯವಸ್ಥಿತ ಬಡಿತಕ್ಕೆ ಬೆನ್ನುಕೊಡಬೇಕಾದವರೇ. ಮುಖ್ಯವಾಗಿ, ಹಳ್ಳಿಯ ನಗರದ ಅಂಚಿನ ಸಮುದಾಯಗಳ ಬಡ ಮಧ್ಯಮವರ್ಗದ ಮೂಲಕ ಬದುಕಿನ ತಾತ್ವಿಕತೆಯ ಶೋಧವಿದೆ.

ಇಷ್ಟಕ್ಕೇ ಇಲ್ಲಿಯ ಕಥೆಗಳು ಎಲ್ಲವನ್ನೂ ಒಳಗೊಂಡು, ಏನ್ನೆಲ್ಲವನ್ನೂ ಸಾಧ್ಯವಾಗಿಸಿವೆ ಎಂದಲ್ಲ. ಅನುಭವದ್ರವ್ಯ, ಹಿಡಿ ಹಿಡಿಯಲೇ ಸೋರಿ ಹೋಗುವ ಲಕ್ಷಣದ್ದು. ಕಾಣಿಸುವ ಚೌಕಟ್ಟಿನಾಚೆಗೆ ಕಾಣದ ಅಪಾರವಿರುತ್ತದೆ. ಈ ಜವಾಬ್ದಾರಿಯನ್ನು ಪಲ್ಲವಿ ನಿಭಾಯಿಸಬಲ್ಲರೆಂಬ ಆಶ್ವಾಸನೆಯನ್ನು ಈ ಕಥೆಗಳು ಕೊಡುತ್ತಿವೆ. ಮನುಷ್ಯ ಜಗತ್ತು ಎಂದಿನಿಂದಲೂ ಅದದೇ ಬಯಕೆ ಬಾವುಣಿಕೆ ಬಳಲಿಕೆಯ ಜಗತ್ತಿನಲ್ಲಿಯೇ ಇರುವುದು ಅಲ್ಲವೇ? ದೇಶ ಕಾಲ ಸಂದರ್ಭಗಳಲ್ಲವು ಬೇರೆ ಬೇರೆ ಆಕೃತಿಗಳನ್ನು ಪಡೆಯಬಹುದು. ಇಂತಹ ಸಾಮಾನ್ಯ ಲೋಕನಡೆಯನ್ನು, ಸೃಜನಶೀಲವಾಗಿ ಮರುರೂಪಿಸುವ ಸವಾಲನ್ನು ಕಥೆಗಾರರು ಎದುರಿಸಬೇಕಾಗುತ್ತದೆ. ಭಾಷೆಯೆಂಬ ಮಾಯಕದಲ್ಲಿ ಅನುಭವವನ್ನು ಮರಳಿ ಬಾಳಿಸುವದು ಅಪಾರ ಮಾಗುವಿಕೆಯಿಂದ ಮಾತ್ರ ಸಾಧ್ಯ. ನವಮೌಖಿಕತೆಯ ಈ ಕಾಲದಲ್ಲಿ ಮಾತೇ ಹೀನನಡೆಗೆ, ಮೋಸಕ್ಕೆ, ಜಾಳುತನಕ್ಕೆ ಆಧಾರವಾಗಿರುವಾಗ ಅದೇ ಮಾತನ್ನು ಋತುವಾಗಿ ಬದಲಿಸುವ ಹೊಣೆಗಾರಿಕೆ ಕಥೆಗಾರರ ಮೇಲಿದೆ. ಪಲ್ಲವಿ ಆ ಬಗ್ಗೆ ತಿಳಿದಿದ್ದಾರೆ ಅನ್ನಿಸುತ್ತಿದೆ. ಆ ತಿಳಿವು ಪಲ್ಲವಿಗೂ, ಕನ್ನಡಕ್ಕೂ ದಕ್ಕಲಿ ಎಂಬ ಶುಭಾಶಯಗಳೊಂದಿಗೆ….

(ಕೃತಿ: ಕುಂಡದ ಬೇರು (ಕಥಾ ಸಂಕಲನ), ಲೇಖಕರು: ಎಡೆಯೂರು ಪಲ್ಲವಿ, ಪ್ರಕಾಶಕರು: ಮಿಲಿಟರಿ ಪ್ರಕಾಶನ, ಬೆಲೆ: 160/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ