Advertisement
ಅಪರೂಪದ ಗ್ರೂಪ್ ಫೋಟೋ: ಜಯಂತ ಕಾಯ್ಕಿಣಿ ಬರಹ

ಅಪರೂಪದ ಗ್ರೂಪ್ ಫೋಟೋ: ಜಯಂತ ಕಾಯ್ಕಿಣಿ ಬರಹ

ವ್ಯಕ್ತಿಗತವಾಗಿ ವಿಭಿನ್ನ ಹುಡುಕಾಟ, ನೋಟ, ನಿಲುವುಗಳಿದ್ದರೂ, ಒಟ್ಟಾರೆ ಸೇರಿ ಏನೋ ಒಂದು ಒಳ್ಳೆಯದರಲ್ಲಿ ತೊಡಗಿರುವ ಭಾವವೊಂದು ಇಲ್ಲಿ ನಿಚ್ಚಳವಾಗಿದೆ. ‘ಬೇಂದ್ರೆ-ತರಾಸು ತೊಡೆನಾಟʼ ಇದಕ್ಕೆ ಸೊಗಸಾದ ಸಾಕ್ಷಿ. ಬೇಂದ್ರೆ ಮತ್ತು ಅಡಿಗರ ನಡುವೆ ಕಾಯ್ಕಿಣಿ, ಎಕ್ಕುಂಡಿ, ಶರ್ಮ ಇರುವುದೇ ಒಂದು ರೂಪಕ. ಬಹುಶಃ ಇದು ಆಗ ನಡೆದಿದ್ದ ಕುಮಟಾ ಸಾಹಿತ್ಯ ಸಮ್ಮೇಳನಕ್ಕೆ ಬಂದ ಕೆಲವು ಅತಿಥಿಗಳು ಗೋಕರ್ಣವನ್ನೂ ನೋಡಿಕೊಂಡು ಹೋಗಲು ಬಂದಾಗ ನಡೆದ ಕೂಟ ಕಲಾಪ….
ಕವಿ, ಕತೆಗಾರ, ಸಿನಿಮಾ ಹಾಡುಗಳ ಸರದಾರ, ಜಯಂತ ಕಾಯ್ಕಿಣಿ ತಮ್ಮ ತಂದೆ; ವಿದ್ವಾಂಸ, ವಿಮರ್ಶಕ, ಸಂಶೋಧಕ ಗೌರೀಶ ಕಾಯ್ಕಿಣಿ ಮತ್ತು ಅವರ ಸಮಕಾಲೀನ ಬರಹಗಾರರರನ್ನು ಅಪರೂಪದ ಫೋಟೋವೊಂದರ ಮೂಲಕ ನೆನಪಿಸಿಕೊಂಡಿದ್ದಾರೆ.

1953 – 1954 ರ ಆಸುಪಾಸಿನ ಈ ಕಪ್ಪುಬಿಳುಪು ಗ್ರೂಪ್‌ ಫೋಟೋ ತನ್ನ ಇಡಿಯಲ್ಲಿಯೂ, ಬಿಡಿಯಲ್ಲಿಯೂ ವಿಶಿಷ್ಟವೊಂದನ್ನು ಉದ್ದೀಪಿಸುವಂತಿದೆ. ಇದು ಗೋಕರ್ಣದಲ್ಲಿ ನಮ್ಮ ಮನೆಯ ಪಕ್ಕದಲ್ಲಿರುವ ಶೇಷಂಭಟ್ಟರ ಮನೆಯ ಹಿಂಗಡೆ ಬಾವಿ ಕಟ್ಟೆಯ ಬಳಿ ತೆಗೆದದ್ದು. ಈ ಶೇಷಂಭಟ್ಟರು ಬಿಷಪ್ಪರಿಗೆ ಹಸ್ತೋದಕ ಕೊಟ್ಟು ಉದ್ದಂಡ ನಮನ ಮಾಡಿದ ಧೀಮಂತ. ಈ ಮನೆಗೆ ಮೂಲೆ ಮನೆ ಅಂತಲೂ ಹೇಳುತ್ತೇವೆ. ನಾನು ನನ್ನ ಬಾಲ್ಯದ ಗೆಳೆಯ ನೀಲಕಂಠ, ಪಮ್ಮೇಚ ಇದೇ ಬಾವಿಕಟ್ಟೆಯಲ್ಲಿ ಆಡುತ್ತಿದ್ದೆವು. ಅದರ ಹಿಂದಿನ ತೆಂಗಿನ ಮಡಲಿನ ಪರ್ಣಕುಟಿಯಲ್ಲಿ ಕೊಟ್ಟಿಗೆ ಇದ್ದ ನೆನಪು. ಆ ಬಾವಿ ಕಟ್ಟೆಯ ಮೇಲೆ ಈ ಕನ್ನಡದ ಕಣ್ಮಣಿಗಳು ಕೂತಿರುವ ಈ ಚಿತ್ರವನ್ನು ಈಚೆಗೆ ನೋಡಿದ್ದೇ ಮೈ ಜುಮ್ಮೆಂದಿತು. ಇದನ್ನು ತೆಗೆದವರು ಗಂಗಾರಾಂ ರಜಪೂತ ಎಂಬ ಛಾಯಾಗ್ರಾಹಕ. ಅವರು ಆ ದಿನಗಳಲ್ಲಿ ಗೋಕರ್ಣದಲ್ಲಿದ್ದರು. ನಂತರ ಆತ ದಾಂಡೇಲಿಗೆ ಪೇಪರ್‌ ಮಿಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿ ಸ್ಟುಡಿಯೋ ಸಹ ಇಟ್ಟುಕೊಂಡಿದ್ದರು. ಅವರ ಮಗ ಅಜಿತ್‌ ಈಗ ದಾಂಡೇಲಿಯಲ್ಲಿ ‘ಗೀತಾ ಸ್ಟುಡಿಯೋʼ ಅಂತ ಅದನ್ನು ಮುಂದುವರೆಸಿದ್ದಾನೆ. ಅವನು ಎರಡು ವರ್ಷಗಳ ಹಿಂದೆ ನನಗೆ ಉಡುಗೊರೆಯಾಗಿ ಈ ಅಮೂಲ್ಯ ಚಿತ್ರ ಕೊಟ್ಟ. ನಾನು ಹುಟ್ಟುವ ಮುಂಚಿನ ಸಮಯದ ಚಿತ್ರ ಇದು.

(ಗೌರೀಶ ಕಾಯ್ಕಿಣಿ)

ಇಲ್ಲಿ ಮುಂದಿನ ಸಾಲಿನಲ್ಲಿ ಬೇಂದ್ರೆಯವರ ಪಕ್ಕ ತೊಡೆಗೆ ತೊಡೆ ಕೊಟ್ಟು ಆಪ್ತವಾಗಿ ಕೂತ ತರಾಸು, ಗೌರೀಶ ಕಾಯ್ಕಿಣಿ, ಸು ರಂ ಎಕ್ಕುಂಡಿ (ಗದ್ದದ ಮೇಲೆ ಕೈ ನೋಡಿ!), ರಾಮಚಂದ್ರ ಶರ್ಮ ಮತ್ತು ವಟುವಿನಂತೆ ಕಾಣುವ ಎಳೆ ಗೋಪಾಲಕೃಷ್ಣ ಅಡಿಗ!

“ಹೊಂದಿಸಿ ಬರೆಯಿರಿ” ಥರ, ತಮ್ಮ ತಮ್ಮ ಸಾಹಿತಿ ಗಂಡಂದಿರ ಹಿಂದೆ ಕೂತ ಆಯಾ ಹೆಂಡತಿಯರ ಬದ್ಧ ಭೂಮಿಕೆಯೂ ಟಿಪಿಕಲ್. ಗೌರೀಶರ ಹಿಂದೆ ನನ್ನ ತಾಯಿ ಶಾಂತಾ ಇದ್ದಾರೆ (ಮತ್ತೆ ಗದ್ದಕ್ಕೆ ಸ್ಟೈಲಿಶ್‌ ಆಗಿ ಕೈ ಬೆರಳು ಇಟ್ಟುಕೊಂಡು). ಶಾಂತಾರ ಬಲಕ್ಕೆ, ಚಿತ್ತಾಲ ಬಂಧುಗಳಲ್ಲೇ ಹಿರಿಯರಾದ ದಾಮೋದರ ಚಿತ್ತಾಲ ಇದ್ದಾರೆ (ಕನ್ನಡಕ, ಕೋಟು). ಇವರ ಬಗ್ಗೆ “ದಾಮಣ್ಣ” ಎಂಬ ವಿಖ್ಯಾತ ಕವಿತೆಯೊಂದನ್ನು ಗಂಗಾಧರ ಚಿತ್ತಾಲರು ಬರೆದಿದ್ದಾರೆ. ಈ ದಾಮೋದರ ಚಿತ್ತಾಲರು ಎಂ. ಎನ್. ರಾಯ್ ಅವರ ರೆಡಿಕಲ್ ಹ್ಯುಮಾನಿಸಂ ಬಳಗದ ಬೆಂಬಲಿಗರಾಗಿದ್ದರು. ಅವರ ಹಿಂಬದಿಗೆ ಬಲಕಟ್ಟೆಯ ಮೇಲೆ ಕೂತ ನೀಳ ಕಾಯದವರು ವಿಖ್ಯಾತ ಹಿಂದೂಸ್ತಾನಿ ಗಾಯಕ, ರಮೇಶ್‌ ನಾಡಕರ್ಣಿ. ಇವರು ಬೇಂದ್ರೆಯವರ ‘ಕಲ್ಪವೃಕ್ಷʼ ಒಳಗೊಂಡು ಎಕ್ಕುಂಡಿಯವರ ಅನೇಕ ಗೀತೆಗಳನ್ನು ಆಕಾಶವಾಣಿಯಲ್ಲಿ ಹಾಡಿ ಜನಪ್ರಿಯಗೊಳಿಸಿದ್ದಾರೆ. ನಂತರ ಮುಂಬೈ ಭೋಪಾಲ್ ಆಕಾಶವಾಣಿ ನಿಲಯಗಳಲ್ಲಿ ಗಾಯಕ ಮತ್ತು ಸಂಗೀತಜ್ಞರಾಗಿ ದುಡಿದವರು, ಮಲ್ಲಿಕಾರ್ಜುನ ಮನ್ಸೂರರ ಆಪ್ತವರ್ತಿ. ಹಿಂದಿನ ಸಾಲಿನಲ್ಲಿ, ಮಧ್ಯದಲ್ಲಿ ಬಾವಿಕಟ್ಟೆಯ ಗಡಗಡೆಯ ಕೆಳಗೆ ಅಧ್ಯಕ್ಷನಂತೆ ಎರಡೂ ಕೈಗಳನ್ನು ಎರಡೂ ತೊಡೆಗಳ ಮೇಲೆ ಇಟ್ಟು ಕೂತವರು ಖ್ಯಾತ ಬೆಳಗಾಂ ವಕೀಲ, ಲೇಖಕ ರಂಗರಾವ ತಲಚೇರಕರ್.‌ ಇವರು ವಿಶಿಷ್ಟ ವಕೀಲಿ ಕೇಸುಗಳನ್ನು ಆಧರಿಸಿ ಕಥೆಗಳನ್ನು ಬರೆಯುತ್ತಿದ್ದರು. ಅವರ “ಕುಮಾರಿ ಸುನೇತ್ರಾ” ಎನ್ನುವ ಕಾದಂಬರಿ ನಮ್ಮ ಕಪಾಟಿನಲ್ಲಿ ಇತ್ತು. ಅವರ ಮತ್ತು ನಾಡಕರ್ಣಿ ಅವರ ನಡುವೆ ಇರುವವರು ಗೋಕರ್ಣದ ಪ್ರಾಧ್ಯಾಪಕ ಪ್ರಸಾದ್.

“ಗೆಳೆಯ ಜಯಂತ ಕಾಯ್ಕಿಣಿ ಕಳೆದ ತಿಂಗಳು ತಮ್ಮ ತಂದೆ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವದ ಆಚರಣೆಯ ಮುಕ್ತಾಯ ಸಮಾರಂಭದ ಆಹ್ವಾನ ಪತ್ರ ಕಳಿಸಿದಾಗ, ನನ್ನ ಗಮನ ಸೆಳೆದದ್ದು, ಆ ಆಹ್ವಾನ ಪತ್ರದ ವಿವರಗಳಿಗಿಂತ ಹೆಚ್ಚಾಗಿ ಅದರ ಹಿಂಬದಿಯಲ್ಲಿ ಮುದ್ರಿತವಾಗಿದ್ದ ಈ ಮೇಲಿನ ಛಾಯಾಚಿತ್ರ. ಸುಮಾರು ಅರವತ್ತು ವರ್ಷಗಳ ಹಿಂದಿನ ಈ ಚಿತ್ರವನ್ನು ಈಗ ಸಂಸ್ಕರಿಸಿ ಮುದ್ರಿಸಿ ಹಂಚಿರುವುದರ ಹಿಂದೆ ಒಂದು ಸೂಕ್ಷ್ಮ ಭಾವನಾತ್ಮಕತೆ ಮತ್ತು ಅದಕ್ಕಿಂತ ಹೆಚ್ಚು, ಒಂದು ವಿಶಿಷ್ಟ ಸಾಂಸ್ಕೃತಿಕ ಕಾಳಜಿ ಇದೆ. ಅದು ಈ ಚಿತ್ರವನ್ನು ನೋಡಿದವರೆಲ್ಲರಿಗೂ ತಾಕುವಷ್ಟು ಜೀವಂತವಾಗಿದೆ. ಇಲ್ಲಿ ನನ್ನ ಕೋರಿಕೆಯ ಮೇರೆಗೆ ಅದನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಜಯಂತ್  ನಿರೂಪಿಸಿದ್ದಾರೆ.
-ಡಿ ಎಸ್ ನಾಗಭೂಷಣ, ಸಂಪಾದಕ, ಹೊಸ ಮನುಷ್ಯ ಮಾಸಿಕ, ನವೆಂಬರ್ 2012.”

ಈ ಚಿತ್ರ ನೋಡುವಾಗ ಈಗ ಹೊಳೆಯುವ ವಿಷಾದದ ಸಂಗತಿ ಎಂದರೆ, ಮುಂದಿನ ಸಾಲಿನಲ್ಲಿ ಕೂತವರ ತೊಡೆಯ ಮೇಲಿರುವ ಅನಾಮಿಕ ಮಗು ಮತ್ತು ಈಗ ಗೋಕರ್ಣದ ಮನೆಯಲ್ಲಿ ಬಹುಪಾಲು ಮಗುವಿನಂತೆಯೇ ಆಗಿರುವ ಶಾಂತಾರನ್ನು ಬಿಟ್ಟರೆ ಈ ವೃಂದದ ಯಾರೂ ಈ ಉಪಗ್ರಹದ ಮೇಲೆ ಈಗ ಇದ್ದಂತಿಲ್ಲ.

ವ್ಯಕ್ತಿಗತವಾಗಿ ವಿಭಿನ್ನ ಹುಡುಕಾಟ, ನೋಟ, ನಿಲುವುಗಳಿದ್ದರೂ, ಒಟ್ಟಾರೆ ಸೇರಿ ಏನೋ ಒಂದು ಒಳ್ಳೆಯದರಲ್ಲಿ ತೊಡಗಿರುವ ಭಾವವೊಂದು ಇಲ್ಲಿ ನಿಚ್ಚಳವಾಗಿದೆ. ‘ಬೇಂದ್ರೆ-ತರಾಸು ತೊಡೆನಾಟʼ ಇದಕ್ಕೆ ಸೊಗಸಾದ ಸಾಕ್ಷಿ. ಬೇಂದ್ರೆ ಮತ್ತು ಅಡಿಗರ ನಡುವೆ ಕಾಯ್ಕಿಣಿ, ಎಕ್ಕುಂಡಿ, ಶರ್ಮ ಇರುವುದೇ ಒಂದು ರೂಪಕ. ಬಹುಶಃ ಇದು ಆಗ ನಡೆದಿದ್ದ ಕುಮಟಾ ಸಾಹಿತ್ಯ ಸಮ್ಮೇಳನಕ್ಕೆ ಬಂದ ಕೆಲವು ಅತಿಥಿಗಳು ಗೋಕರ್ಣವನ್ನೂ ನೋಡಿಕೊಂಡು ಹೋಗಲು ಬಂದಾಗ ನಡೆದ ಕೂಟ ಕಲಾಪ. ‘ಬಾವಿಯಲ್ಲಿ ಹಾರುವುದು ಹೇಗೆ’ ಅಥವಾ ‘ಹಾರಲೇ ಬೇಕೆ?ʼ ಎಂಬ ಕುರಿತು ತಲಸ್ಪರ್ಶಿ ಅಧ್ಯಯನ ನಡೆದಿರಬಹುದೆಂಬ ವಕ್ರ ನೋಟವನ್ನೂ ನಮ್ಮಲ್ಲಿ ಹೊಳೆಸುವಂತಿದೆ! ಕೃಷ್ಣಾಜಿನದ ಮೇಲೆ ಸಿವಿಲ್‌ ಡ್ರೆಸ್ಸಿನಲ್ಲಿ ಸ್ವಾಮಿಯಂತೆ ಕೂತಿರುವ ಬೇಂದ್ರೆಯವರ ನಗುವೂ- “ಇದೂ ಒಂದು ಆಗಿ ಹೋಗಲಪ್ಪಾ” ಎನ್ನುವಂತಿದೆ. ಅಡಿಗರು ಮಾತ್ರ ಆಗಷ್ಟೇ ಅವರು ಮೊಳಗಿಸಿದ್ದ ಚಂಡೆ ಮದ್ದಳೆಯ ಅನುರಣದ ಸೂಕ್ಷ್ಮ ಸುಪ್ತ ಬಂಡಾಯದ ಸೌಮ್ಯ ಆವೃತ್ತಿಯಲ್ಲಿ, ಇನ್ನೂ ಹಚ್ಚದಿರುವ ಸಿಗರೇಟಿನಂತೆ ಕಾಣುತ್ತಿದ್ದಾರೆ. ಕುಮಟಾ ಸಮ್ಮೇಳನದಲ್ಲಿ ಬೇಂದ್ರೆ ಮತ್ತು ನವ್ಯದ ನಡುವಣ ಯುದ್ಧ ಘೋಷಣೆ ಅದಾಗಲೇ ಆಗಿತ್ತಂತೆ! ರಮ್ಯ, ಪ್ರಗತಿಶೀಲ, ನವ್ಯಗಳ ‘ಶಾರ್ಟ್‌ ಸರ್ಕೀಟ್‌ʼ ಆಗುವಷ್ಟರ ಮಟ್ಟಿಗಿನ ವಿದ್ಯುದಾಲಿಂಗನ ಇಲ್ಲಿದೆ! ಇಷ್ಟೆಲ್ಲ ಬಿಡಿಗಳನ್ನು ಒಂದಾಗಿಸುವ ಸಂಯುಕ್ತವಾದ ಒಂದು ಇಡಿ ಮನಸ್ಸಿನ ಹಾಜರಿಯೇ ಈ ಚಿತ್ರವನ್ನು ಮತ್ತೆ ಮತ್ತೆ ನೋಡಲು ನಮ್ಮನ್ನು ಒತ್ತಾಯಿಸುವಂತಿದೆ. ಸ್ವಲ್ಪ ಪ್ರಯತ್ನ ಪಟ್ಟರೂ ಆ ಮನಸ್ಸನ್ನು ನಾವು ಎಟುಕಬಹುದಾಗಿದೆ ಎಂಬುದೇ ಖುಷಿಯ ಸಂಗತಿಯಾಗಿದೆ.

ಈ ಫೋಟೋ ನೋಡುತ್ತಿದ್ದರೆ ಹಳೆಯ ಕಪಾಟಿನ ಹಳೆಯ ಪುಸ್ತಕದ ಪುಟಗಳ ಗಂಧ, ತಲತ್‌ ಮಹಮೂದನ ಕಂಪಿತ ಸ್ವರಗಳ ಹಾಡುಗಳು, ಜಾತ್ರೆಗೆ ಬಂದ ನಾಟಕ ಕಂಪನಿಯ ಡೈನಮೋ ಸದ್ದು .. ಎಲ್ಲ ಸೇರಿದ ಗದ್ಗದ ಭಾವದ ಜೊತೆಗೆ ‘ಸತ್ಯಾರ್ಥಿʼಗಳ ದಾರಿಯ ವಿನಯ ಮತ್ತು ಮುಕ್ತಗೊಳಿಸಬಲ್ಲ ಭಂಗುರತೆಯೂ ಆವರಿಸಿಕೊಳ್ಳುತ್ತದೆ.

ಸೆಪ್ಟೆಂಬರ್ 12 , 2012.

(ಫೋಟೋ ಕೃಪೆ: ಗಂಗಾರಾಮ್‌ ರಜಪೂತ್‌, ದಾಂಡೇಲಿ. (1953) ಹಕ್ಕುಸ್ವಾಮ್ಯ: ಅಜಿತ್‌ ಗಂಗಾರಾಮ್) 

About The Author

ಜಯಂತ ಕಾಯ್ಕಿಣಿ

ಕವಿ, ಕಥೆಗಾರ, ಅಂಕಣಕಾರ, ನಾಟಕಕಾರ, ಸಿನೆಮಾ ಗೀತ ರಚನೆಗಾರ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರು. ಈಗ ಮುಕ್ಕಾಮು ಬೆಂಗಳೂರು.

4 Comments

  1. ಸುಮಾ

    ತುಂಬ ಖುಷಿ ಕೊಟ್ಟ ಬರಹವಿದು… ಆ ಫೋಟೋ ಕೂಡ… ಒಹ್‌ ಹೀಗೆ ಟೈಮ್-ಟ್ರಾವೆಲ್‌ ಂಆಡಿಸಿದ ಜಯಂತರಿಗೆ ಓಂದು ಬೆಚ್ಚನೆಯ ಧನ್ಯವಾದ!

    Reply
  2. B R Vijayavaman

    ಇಡೀ ಚಿತ್ರವೇ ಒಂದು ಡಾಕ್ಯುಮೆಂಟರಿ ವಿಡಿಯೋ ರೀತಿ ಅನಿಸಿತು. ಮತ್ತು ಅತ್ಯಂತ ಆಪ್ತವಾದ ಬರಹ.

    Reply
  3. vishwanna vishwanath

    ಮಹಾನ್ ಸಜ್ಜನರು ✍️❤️

    Reply
  4. ಹರಿಚರಣ್

    “ಫೋಟೋ” ಕುರಿತು ಜಯಂತ ಕಾಯ್ಕಿಣಿ ತಮ್ಮದೇ ಸಿಗ್ನೇಚರ್ ಛಾಪಿನಲ್ಲಿ ವಿಶಿಷ್ಟ ಸ್ಪರ್ಶ ಕೊಟ್ಟು ಹೊಸದೊಂದು ರೀತಿ ವ್ಯಾಖ್ಯಾನಿಸಿದ್ದಾರೆ. ಅವರಿಗೆ ಅವರೇ ಸಾಟಿ !

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ