Advertisement
ಅಪ್ಪಂತನದ ವ್ಯವಸ್ಥೆಗೆ ಬೆತ್ತಲೆಯ ಗೀಳು!: ಸುಕನ್ಯಾ ಕನಾರಳ್ಳಿ ಅಂಕಣ

ಅಪ್ಪಂತನದ ವ್ಯವಸ್ಥೆಗೆ ಬೆತ್ತಲೆಯ ಗೀಳು!: ಸುಕನ್ಯಾ ಕನಾರಳ್ಳಿ ಅಂಕಣ

ನಮ್ಮ ಮಟ್ಟಿಗೆ ಹೇಳುವುದಾದರೆ ಇಂದೊಂದು ತೀರಾ ಅಸಂಭಾವ್ಯವೂ, ಅಸಂಬದ್ಧವೂ ಆದ ಕಲ್ಪನೆಯಾಗಿದೆ. ಹನ್ನೆರಡನೆಯ ಶತಮಾನದಷ್ಟು ಹಿಂದಿನ ಆ ಪರಿಸರದಲ್ಲಿ ಹೆಣ್ಣೊಬ್ಬಳು ಅವಳೆಂಥ ಅನುಭಾವಿಯಾಗಿದ್ದರೂ, ಬೆತ್ತಲೆಯಾಗಿ, ಕೂದಲನ್ನು ಮರೆಮಾಡಿಕೊಂಡು ಸಂಚರಿಸಿದಳೆಂಬುದು ಅತ್ಯಂತ ಅಸಂಗತವೂ, ಅನುಚಿತವೂ ಆದ ಭ್ರಮಾಕಲ್ಪನೆಯಾಗಿ ಮಾತ್ರ ತೋರುತ್ತದೆ. ಈ ನಡೆವಳಿಕೆ ವೀರಶೈವ ಧರ್ಮಕ್ಕೆ ಸಂಪೂರ್ಣ ವಿರುದ್ಧ ಮಾತ್ರವಲ್ಲದೆ ವೈಯುಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಕೂಡ ಹೆಣ್ಣಿಗೆ ಕ್ಷೇಮಕರವಾದದ್ದಲ್ಲ.
ಸುಕನ್ಯಾ
ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೆರಡನೆಯ ಬರಹ

ಈ ಲೇಖನದಲ್ಲಿ ‘(ಅರೆ) ಬೆತ್ತಲಾಗಿ ನಡೆದಳು’ ಎನ್ನಲಾದ ಅಕ್ಕಮಹಾದೇವಿ ಎಂಬ ವಚನಕಾರ್ತಿಯ ಬಗೆಗಿನ ದಂತಕಥೆಯನ್ನು  ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಾಗಿದೆ. ಇದೇ ಮೊದಲ ಪ್ರಯತ್ನವೇನೂ ಅಲ್ಲ. ಆದರೆ ಇಂಗ್ಲೀಷಿನಲ್ಲಿ ಬಂದಿರುವ ಅಕ್ಕನ ಕಥನಗಳನ್ನು ಸಹ ವಿಮರ್ಶಾತ್ಮಕ ದೃಷ್ಟಿಯಿಂದ ನೋಡಲು ಪ್ರಯತ್ನಿಸಿರುವುದು ಹೊಸತಿರಬಹುದೇನೋ, ಗೊತ್ತಿಲ್ಲ. ಅದಕ್ಕೆ ನಿದರ್ಶನವಾಗಿ ಒಂದು ಕೃತಿಯನ್ನು ಇಲ್ಲಿ ಉದಾಹರಿಸಿ ನಂತರ ಅಕ್ಕ ಚರಿತ್ರೆಯಲ್ಲಿ ಸಾಗಿ ಬಂದ ಕಡೆಗೆ ಕಣ್ಣು ಹಾಯಿಸುವ ಪ್ರಯತ್ನವಿದೆ.

ಅಕ್ಕನ ನೆಪದಲ್ಲಿ ನಡೆದಿರುವ ಇಂಗ್ಲಿಷ್ ಭಾಷೆಯಲ್ಲಿನ ಅಧ್ಯಯನಗಳ ಉದ್ದೇಶಿತ ಓದುಗರು ಅಂತಾರಾಷ್ಟ್ರೀಯ ನೆಲೆಯಲ್ಲಿ ಇರುತ್ತಾರೆ. ಅವರು ಏರ್ಪೋರ್ಟಿನಲ್ಲಿ ಇರುವ ಅಂಗಡಿಗಳಲ್ಲಿ ‘ಭಾರತೀಯ’ ವನ್ನು ಆದಷ್ಟೂ ಮಟ್ಟಿಗೆ ಸಿಂಗಲ್ ಪ್ಯಾಕೇಜಿನಲ್ಲಿ ಕೊಳ್ಳಲು ಇಚ್ಛಿಸುತ್ತಾರೆ. ಅಲ್ಲಿ ಸಲ್ಲುವ ‘ಅಕ್ಕ’ ಬೇರೆಯ ತರದವಳು. ಆ ಅಕ್ಕಳನ್ನು  ಉದಾರವಾದಿ ಹಿಂಸೆಯ  (liberal violence) ನಿದರ್ಶನವಾಗಿ ಸಹ ನೋಡಬಹುದು. ಹನ್ನೆರಡನೆಯ ಶತಮಾನದಲ್ಲಿ ಹೆಣ್ಣೊಬ್ಬಳು ಬೆತ್ತಲಾಗಿ ನಡೆಯಬಹುದಾದಂತಹ ಪ್ರಗತಿಪರ ಸಮಾಜ ನಮ್ಮಲ್ಲಿತ್ತು ಎಂದು ಅಂತಾರಾಷ್ಟ್ರೀಯ ಓದುಗ ಸಮುದಾಯಕ್ಕೆ ಸಾರುವ ಹಂಬಲವೇ?

Sky-Clad ಎಂಬ ಕೃತಿಯ ಈ ಭಾಗವನ್ನು ಗಮನಿಸಿ:

ಅನುಭವಮಂಟಪದ ಶಿವಶರಣರಿಗೆ ಮಹಾದೇವಿ ಕಲ್ಯಾಣದತ್ತ ಹೊರಟು ಬರುತ್ತಿರುವುದು ಗೊತ್ತಿತ್ತು ಎಂದು ದಂತಕತೆ ಹೇಳುತ್ತದೆ. ಅವಳು ಕಲ್ಯಾಣವನ್ನು ತಲುಪಿದಾಗ ಗುರಿಮುಟ್ಟಿದ ಸಂತಳಂತೆ ಅಲ್ಲದಿದ್ದರೂ ಸಹ  ಅಧ್ಯಾತ್ಮಾರ್ಥಿಯಾಗಿ ಅವಳಿಗೆ ಪ್ರಚಂಡ ಸ್ವಾಗತ ಸಿಕ್ಕಿದ್ದಿರಬಹುದು. ನ ಭೂತೋ! ಎಂಬ ಈ ಗಳಿಗೆಗೆ ಸಾಕ್ಷಿಯಾಗಲು ಮಾಡುತ್ತಿದ್ದ ಮನೆಕೆಲಸಗಳನ್ನು ಬಿಟ್ಟು ಹೆಂಗಸರೆಲ್ಲರೂ ತತ್ತರಬತ್ತರ ಮುಂಬಾಗಿಲಿಗೆ ಓಡಿ ಬಂದು ನಿಂತಿರಬಹುದೇ? ಬೀದಿಯ ಗಂಡಸರು ಮಾತು ಕಳೆದು ನಿಂತರೇ? ಆಡುತ್ತಿದ್ದ ಮಕ್ಕಳು ಬಿಟ್ಟಬಾಯಿ ಬಿಟ್ಟಂತೆ ಮೂಕರಾದರೆ? ಈ ವಿಚಿತ್ರ ಆದರೆ ಅದ್ಭುತ ದೃಶ್ಯಕ್ಕೆ ಎಲ್ಲರೂ ಮರುಳಾದರೆ?

ನೀಳವಾದ ಕೂದಲನ್ನು ಹರಡಿಕೊಂಡು ಬೀದಿಯಲ್ಲಿ ನಡೆದು ಬರುತ್ತಿರುವ ಮಹಾದೇವಿಯನ್ನು ಕಲ್ಪಿಸಿಕೊಳ್ಳಿ. ಅವಳ ಹಿಂದೆ ಅಭಿಮಾನಿಗಳು ಮತ್ತು ಹಿಂಬಾಲಿಗರು ಧೀಯೆಂದು ತಲೆಯೆತ್ತಿಕೊಂಡು ಬೆಳಗಿನ ಸೂರ್ಯನಂತಹ ಫಳ್ಳನೆಯ ನಗು ಬೀರುತ್ತಾ ಹೆಜ್ಜೆ ಹಾಕುತ್ತಿರುವುದನ್ನು ಊಹಿಸಿಕೊಳ್ಳಿ. ಕಳ್ಳ ದೃಷ್ಟಿಯಲ್ಲಿ ಅವಳ ದೇಹವನ್ನು ಅಳೆಯುತ್ತಾ, ಕೆಮ್ಮಿ, ಕ್ಯಾಕರಿಸಿ, ಕುಹಕದಿಂದ ನಕ್ಕವರೂ ಸಹ ಇದ್ದಿರಬಹುದು. ಆದರೆ ಈ ಅಪೂರ್ವ ದೃಶ್ಯದೆದುರು ಬೆರಗಿನಲ್ಲಿ ಮುಂದಡಿ ಇಡಲಾಗದೆ ಉಳಿದವರೂ ಸಹ ಇದ್ದರಲ್ಲ? ಸುದ್ದಿ ಕೇಳಿ ಬೀದಿಗೆ ಇಳಿದವರು ಅದೆಷ್ಟು ಮಂದಿಯೋ! ಕಾರ್ಯಪ್ರವೃತ್ತರಾದ ಸೈನಿಕರು ಜನಜಂಗುಳಿಯನ್ನು ಹಿಡಿತಕ್ಕೆ ತರಲಾಗದೆ ಒದ್ದಾಡಿರಬಹುದು! ಕೆಲವರು, ವಿಶೇಷವಾಗಿ ಹೆಂಗಸರು, ಮಹಾದೇವಿಯ ಕಾಲನ್ನು ಮುಟ್ಟಿ ನಮಸ್ಕರಿಸಿ ಧನ್ಯರಾಗಲು ನಾಮುಂದು ತಾಮುಂದು ಎಂದು ಮುಗಿಬಿದ್ದಿರಬಹುದು!

ಈ ಮಂದಿ ಮಹಾದೇವಿಗೆ ಉಘೇ ಉಘೇ ಎನ್ನುತ್ತಾ ಬಾಜಾಬಜಂತ್ರಿಗಳನ್ನು ತರಲು ಓಡಿದ್ದಿರಬಹುದು. ಶರಣರ ಎದೆ ತುಂಬಿ ಬಂದು ‘ಓಂ ನಮಃ ಶಿವಾಯ’ ಎಂದು ಒಕ್ಕೊರಲಿನಿಂದ ಸ್ತುತಿಸಿರಬಹುದು. ಯಾರಿಗೆ ಗೊತ್ತು, ರಣರಂಗದಿಂದ ವಿಜಯಿಯಾಗಿ ಬಂದ ಚಕ್ರವರ್ತಿಯನ್ನು ಸ್ವಾಗತಿಸುವ ರೀತಿಯ ಸಂಭ್ರಮ ಅಲ್ಲಿ ತಾನೆ ತಾನಾಗಿ ಮೆರೆದಿದ್ದಿರಬಹುದು!

ಹೌದೆ? ಈ ತರಹದ ಕಲ್ಪನೆಗೆ ಚಾರಿತ್ರಿಕ ಆಧಾರ ಅಲ್ಪಸ್ವಲ್ಪವಾದರೂ ಇರಬಹುದೇ? ಕಾಲ್ಪನಿಕತೆಗೆ ಸಹ ಚರಿತ್ರೆಯ ಹಂಗು ಅಷ್ಟಿಷ್ಟಾದರೂ ಇರಬೇಕಲ್ಲ? ಇಲ್ಲಿ ಅಕ್ಕ ಮಹಾದೇವಿಯ ನೆಪದಲ್ಲಿ ವಚನ, ದ್ವೈತ, ಅದ್ವೈತ, ಉಪನಿಷತ್ತು, ಆಂಡಾಳ್, ಲಲ್ಲಾ, ಯು ಜಿ ಕೃಷ್ಣಮೂರ್ತಿ ಇತ್ಯಾದಿ ಹತ್ತು ಹಲವಾರುಗಳ ಕಲಸುಮೇಲೋಗರ ಮಾಡಿ ಬಡಿಸುವ ಉದ್ದೇಶ ಏರ್ಪೋರ್ಟ್ ಮಂದಿಗೆಂದೇ?

ಅಕ್ಕನನ್ನು ಬೆತ್ತಲಾಗಿಸಿದ್ದು ಕೌಶಿಕ ಒಬ್ಬನೇ ಅಲ್ಲ!

*****

ಹನ್ನೆರಡನೆಯ ಶತಮಾನದ ‘ಕಡಲುಗಟ್ಟಿ ನಿಂತಿದ್ದ’ ಕೋಟಿಗಟ್ಟಲೆ ವಚನಗಳು ಶತಮಾನಗಳ ನಂತರ ಸಿಕ್ಕಿರುವುದು ‘ಕುಡಿತೆಯಷ್ಟು ಮಾತ್ರ. ಕನ್ನಡನಾಡಿನ ಆದ್ಯಂತ ವಿದ್ವಾಂಸರು ಪರ್ಯಟನ ಮಾಡಿ ಓಲೆಯ  ಅಥವಾ ಕತ್ತೆಕಾಗದದ ಗ್ರಂಥಗಳನ್ನೆಲ್ಲಾ ಸಂಚಯನ ಮಾಡಿ ಅವುಗಳಲ್ಲಿನ ವಚನಸಾಹಿತ್ಯವಷ್ಟನ್ನೂ ಪ್ರಕಟಿಸಿದರೂ ಮೊತ್ತದಲ್ಲಿ ಅದು ೧೦-೧೨ ಸಹಸ್ರಕ್ಕಿಂತ ಹೆಚ್ಚಾಗದು.’

ಹೀಗೆ ಸ್ವಲ್ಪ ಸಿಕ್ಕಿದೆಯೆಂದ ಮಾತ್ರಕ್ಕೆ ಅದರ ಮಹತ್ವವೇನೂ ಕಮ್ಮಿಯಲ್ಲ. ಆದರೆ ‘ಸಿಕ್ಕಿರುವುದೆಲ್ಲ ಸಂಗ್ರಾಹಕರ ರುಚಿಗೆ, ವಾದಕ್ಕೆ ಅಳವಡುವಂತಹವಷ್ಟು ಮಾತ್ರ’ ಎಂಬ ಸತ್ಯವನ್ನು ಕಡೆಗಣಿಸಬಾರದು. ಅಷ್ಟೇ ಅಲ್ಲ, ಸಿಕ್ಕವೂ ಸಹ ಯಾರ ಯಾರ ‘ಸಂಪಾದನೆ’ ಯಲ್ಲಿ ಯಾವ್ಯಾವ ರೀತಿಯ ಬದಲಾವಣೆಗಳಿಗೆ ಒಳಗಾದವು ಎಂಬ ಪ್ರಶ್ನೆಯಂತೂ ಇನ್ನಷ್ಟು ಮಹತ್ವದ್ದು.

ಅಂತಹ ಜಿಜ್ಞಾಸೆ ಕೇವಲ ವಚನಸಾಹಿತ್ಯಕ್ಕೆ ಸೀಮಿತವಾದದ್ದಲ್ಲ. ವೇದ, ವೇದಾಂತ, ಆಗಮ, ಪುರಾಣ, ಶಾಸ್ತ್ರ, ಅಷ್ಟೇ ಏಕೆ, ಮೌಕಿಕ, ಲಿಖಿತ ಆಕರಗಳಲ್ಲಿ ಸಿಕ್ಕವಕ್ಕೂ ಸಹ ಅನ್ವಯಿಸುತ್ತವೆ. ಹೆಚ್ಚು ಪ್ರಶ್ನೆ ಕೇಳಿದರೆ ‘ಋಷಿ ಮೂಲ, ನದಿ ಮೂಲಗಳನ್ನು ಪ್ರಶ್ನಿಸಲು ಹೋಗಬಾರದು’ ಎಂಬ ‘ವಿವೇಕ’ ವನ್ನು ಹೇಳಿ ಬಾಯಿ ಮುಚ್ಚಿಸಲಾಗುತ್ತದೆ.

ಇರಲಿ, ವಚನಗಳು ಶತಮಾನಗಳನ್ನು ಹಾದುಬಂದ ಇತಿಹಾಸ; ಮತ್ತು ಸಿಕ್ಕ ಮೇಲೂ ಅದರ ಹಿಂದಿದ್ದ ಆಯ್ಕೆಯ ಒತ್ತಡಗಳು; ಒಂದಕ್ಕಿಂತ ಹೆಚ್ಚು ಹಸ್ತಪ್ರತಿ ಆಕರಗಳು; ಮಾಸಿದ ಅಕ್ಷರಗಳು; ಅರ್ಥೈಸಿಕೊಳ್ಳುವಾಗ ಪದಗಳಿಗೆ ಇರುವ ಅರ್ಥ-ಬಹುಳತೆ ಒಡ್ಡಿರಬಹುದಾದ ದ್ವಂದ್ವಗಳು; ಇತ್ಯಾದಿ ವಾಸ್ತವಾಂಶಗಳನ್ನು ಸುಲಭವಾಗಿ ಪಕ್ಕಕ್ಕೆ ಸರಿಸುವುದು ಸುಲಭವಲ್ಲ. ಬೌದ್ಧಿಕ ಪ್ರಾಮಾಣಿಕತೆ ಅದನ್ನು ಒಪ್ಪುವುದೂ ಇಲ್ಲ.

ವಚನ ಸಾಹಿತ್ಯದ ಪಿತಾಮಹ ಎಂದೆನಿಸಿಕೊಂಡಿರುವ ಫ.ಗು. ಹಳಕಟ್ಟಿ ಈ ನೆಲೆಯಲ್ಲಿ ಅತ್ಯಂತ ಮಹತ್ವದ ಹೆಸರು. ೧೯೨೩ ರಲ್ಲಿ ಪ್ರಕಟವಾದ ‘ತಮ್ಮ ವಚನಶಾಸ್ತ್ರಸಾರದ ಪ್ರಥಮ ಭಾಗದ ಮುನ್ನುಡಿ (ಪುಟ ೪-೫) ಯಲ್ಲಿ ಹೇಳಿಕೊಂಡಿರುವಂತೆ ಅವರು ಮೊದಲಿಗೆ ವಿಜಾಪುರ ಜಿಲ್ಲೆಯಲ್ಲಿ ಶರಣಸಾಹಿತ್ಯ ಸಂಶೋಧನೆಗಾಗಿ ಪ್ರವಾಸ ನಡೆಸಿದಾಗ ಸಿಕ್ಕ ಎಲ್ಲ ವಚನಗಳನ್ನೂ ಸಂಗ್ರಹಿಸದೆ, ತಮಗೆ ಮಹತ್ವವೆಂದು ಕಂಡ ವಚನಗಳನ್ನಷ್ಟೇ ಬರೆದಿಟ್ಟುಕೊಂಡರು. ಹೀಗಾಗಿ ಅವರ ಮೂಲಕ ಕೈಗೆ ಬಂದ ವಚನಾಮೃತದ ತುತ್ತುಗಳಲ್ಲಿ ಬಹುಪಾಲು ಜನತೆಯ ಬಾಯಿಗೆ ಬರದೆಹೋದವು.’

ಇದು ಕೇವಲ ಒಂದೇ ಒಂದು ನಿದರ್ಶನ. ಅಲ್ಲಿ  ತಪ್ಪು ಹೊರೆಸುವ ಉದ್ದೇಶವಂತೂ  ಅಲ್ಲ. ಹನ್ನೆರಡನೆಯ ಶತಮಾನದ ಕನ್ನಡನಾಡಿನಲ್ಲಿ ನಡೆದ ಒಂದು ಅದ್ಭುತ ಕ್ರಾಂತಿಯ ಬಗೆಗಿನ ಮಾಹಿತಿ ಶತಮಾನಗಳ ಮಟ್ಟಿಗೆ ಎಲ್ಲೆಲ್ಲೋ ಹರಿದು ಹಂಚಿ ಹೋಗಿ, ಕಣ್ಣಿಗೆ ಕಾಣದಂತೆ ಅಡಗಿ, ಕೊನೆಗೆ ಬೆಳಕಿಗೆ ಬಂದಾಗ ಯಾವ ಯಾವ ರೂಪಗಳನ್ನು ತಳೆಯಿತು, ಯಾರು ಅದನ್ನು ಒಟ್ಟುಗೂಡಿಸಿದರು, ಬಿಟ್ಟು ಹೋದ ಮತ್ತು ಕಟ್ಟಿಕೊಂಡ ವಿವರಗಳು ಸಮುದಾಯದ ಅಸ್ಮಿತೆಗೆ ಹೇಗೆ ಒದಗಿ ಬಂದವು  ಎಂಬುವುದರ ಬಗ್ಗೆ ಅಧ್ಯಯನಗಳು ನಡೆದಿವೆ.

ಅಲ್ಲಮ, ಬಸವ, ಅಕ್ಕಮಹಾದೇವಿ, ಚೆನ್ನಬಸವಣ್ಣ ಇತ್ಯಾದಿ ಪ್ರಮುಖರೆಂದು ಕರೆಯಲ್ಪಡುವ ವಚನಕಾರರೂ ಸೇರಿದಂತೆ  ಅವರೆಲ್ಲ ಎಲ್ಲಿ ಹುಟ್ಟಿದರು; ಯಾವಾಗ ಹುಟ್ಟಿದರು; ಯಾರಿಗೆ ಹುಟ್ಟಿದರು; ಅವರ ಬದುಕು ಸಾಗಿ ಬಂದ ವಿವರಗಳೇನು  ಇತ್ಯಾದಿ ಖಚಿತ ಚಾರಿತ್ರಿಕ ವಿವರಗಳು ಲಭ್ಯವೇ ಇಲ್ಲ. ಆದರೂ ಪಠ್ಯದ ಒತ್ತಡಗಳಿಗೆ (textual compulsions) ತಕ್ಕಂತೆ ಅಲ್ಲಲ್ಲಿ ಕೆಲವು ಸಂಶೋಧನೆಗಳನ್ನು ಆಧರಿಸಿ ವಿವರಗಳನ್ನು ಕೊಡಲಾಗಿದೆ. ಹಾಡಿ ಹಾಡಿ ರಾಗ ಹೊಮ್ಮಿದಂತೆ ಒಂದು ಚೌಕಟ್ಟು ಹೊಮ್ಮಿ ಅದರೊಳಗೆ ವಿವರಗಳು ಹೋಗಿ ತಮ್ಮ ತಮ್ಮ ಸ್ಥಾನಗಳನ್ನು ಆಕ್ರಮಿಸಿ ಕೂತಿವೆ.

‘ಉಡುತಡಿ ಎಂಬ ಗ್ರಾಮದಲ್ಲಿ ನಿರ್ಮಲಾ ಸೆಟ್ಟಿ ಮತ್ತು ಸುಮತಿದೇವಿ ಎಂಬ ದಂಪತಿಗಳಿಗೆ ಹುಟ್ಟಿದ ಮಗಳೇ ಮಹಾದೇವಿ,’ ಎಂದು ಮಕ್ಕಳು ಪರೀಕ್ಷೆಗೆ ಉರು ಹಚ್ಚಿದಂತೆ ನಮಗೂ ಉರು ಹೊಡೆದಿದ್ದನ್ನೇ ಹೇಳಿ, ನಂಬಿ ಅಭ್ಯಾಸ. ನೂರು ಬಾರಿ ಯಾರೋ ಹೇಳಿದರೆ ನೂರಾ ಒಂದನೆಯ ಬಾರಿಗೆ ಕೇಳಿದವರು ಅದನ್ನು ಪ್ರಶ್ನಿಸುವ ಗೋಜಿಗೆ ಯಾಕೆ ಹೋದಾರು?

ಹುಟ್ಟು, ಬಾಲ್ಯ, ಇತ್ಯಾದಿಗಳು ಕೊನೆಗೆ ಕೇವಲ ಹೆಸರುಗಳು. ದೇವರ ರೂಪಗಳು ಸಹ ನಮ್ಮ ಕಾಲ್ಪನಿಕತೆಯ ಫಲವೇ. ಗೋಪಾಲಕೃಷ್ಣ ಅಡಿಗರು ತಮ್ಮ ‘ರಾಮನವಮಿ’ ಪದ್ಯದಲ್ಲಿ ‘ಚಿತ್ತ ಹುತ್ತಗಟ್ಟದೆ ಕೆತ್ತಿತೇನು, ಪುರುಷೋತ್ತಮನ ಆ ಅಂತ ದಿವ್ಯ ರೇಖೆ?’ ಎನ್ನುವುದು ದಿವ್ಯರೂಪಗಳು  ಹೊಮ್ಮುವುದು ನಮ್ಮ ಚಿತ್ತದಿಂದಲೇ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.

ಸಾಕಷ್ಟು ಚಾರಿತ್ರಿಕ ವಿವರಗಳು ಲಭ್ಯವಿಲ್ಲದಾಗ ದಂತಕತೆಗಳು ಹೊಮ್ಮಿ ಮೆರೆಯುತ್ತವೆ. ಇತಿಹಾಸದಲ್ಲಿ ಆಗಿ ಹೋಗಿರಬಹುದಾದ ವ್ಯಕ್ತಿಗಳ ರೂಪಗಳನ್ನು ಸಹ ಹೀಗೆ ಜನಮಾನಸದಲ್ಲಿ ಪ್ರತಿಷ್ಠಾಪಿಸುವ ಪ್ರಯತ್ನದ ಹಿಂದೆ ಹಲವಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ಒತ್ತಡಗಳು ಕೆಲಸ ಮಾಡುತ್ತವೆ.

ಉದಾಹರಣೆಗೆ ಅಯೋಧ್ಯೆಯ ಹಿನ್ನೆಲೆಯಲ್ಲಿ ಹೊಮ್ಮಿದ ರಾಮ ಹೇಗಿದ್ದಾನೆ? ಕಣ್ತುಂಬ ಕರುಣೆ ತುಂಬಿದ ರಾಮನ ಅಕ್ಕಪಕ್ಕ ಇದ್ದ ಸೀತೆ, ಲಕ್ಷ್ಮಣ, ಮುಂದಿದ್ದ ಹನುಮಂತ ಎಲ್ಲರನ್ನೂ ಕಿತ್ತು ತೆಗೆದು ಸೀತಾರಾಮನನ್ನು ಕೇವಲ  ಶ್ರೀರಾಮನನ್ನಾಗಿಸಿ ಕೈಗೆ ಬಿಲ್ಲುಬಾಣ ಕೊಟ್ಟು ಯುದ್ಧಭೂಮಿಯ ರಾಮನಾಗಿಸಿದ್ದರ ಹಿಂದೆ ಯಾವ ರೀತಿಯ ಹುನ್ನಾರಗಳು ಕೆಲಸ ಮಾಡಿವೆ? ಹಾಗೆಯೇ, ಬಸವಣ್ಣ ಯಾಕೆ ಕುದುರೆಯ ಮೇಲೆ, ಸೊಂಟದಲ್ಲಿ ಖಡ್ಗವನ್ನು ಹೊತ್ತ ರೂಪದಲ್ಲಿ? ಮತ್ತೆ, ಎಲ್ಲ ರಚನೆಗಳನ್ನು ಮುಲಾಜಿಲ್ಲದೆ ಅಲ್ಲಗಳೆಯುವ ಅಲ್ಲಮನಿಗೆ ಗಡ್ಡ, ವಿಭೂತಿ, ಅರೆಗಣ್ಣು ಮುಚ್ಚಿದ ತನ್ಮಯತೆ? ಹಾಗೆಯೇ ಅಕ್ಕ ಯಾಕೆ (ಅರೆ) ಬೆತ್ತಲೆ?

ಸಂಯಮದ ವಿಶ್ಲೇಷಣೆಗೆ  ನಮ್ಮ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪರತ್ತ ತಿರುಗಬಹುದು. ಅವರು ಹೇಳುವಂತೆ ಅಕ್ಕ ಅಂದು ‘ಬಸವಣ್ಣನವರ ವ್ಯಕ್ತಿ ಕೇಂದ್ರದಲ್ಲಿ ರೂಪುಗೊಂಡ ಶರಣ ಚಳುವಳಿಯ ಮೇಲೆ ಹಾದುಹೋದ ಒಂದು ಉಜ್ವಲವಾದ ಮಿಂಚಿನ ಗೆರೆ’ ಅಷ್ಟೇ. ಆಕೆಗೂ ಈ ಚಳುವಳಿಗೂ ಇದ್ದ ಸಂಬಂಧ ಕೇವಲ ‘ಆಗಂತುಕವೂ, ತಾತ್ಕಾಲಿಕವೂ’ ಆಗಿತ್ತು.

ಮುಂದುವರೆಸಿ ಅಲ್ಲಮನದೂ ಸಹ ಇದೆ ಸ್ವರೂಪದ್ದಾಗಿತ್ತು ಎಂದು ಕವಿ ಹೇಳುತ್ತಾರೆ. ‘ಆದರೆ ಅಲ್ಲಮ ಈ ಚಳುವಳಿಯಲ್ಲಿ ವಹಿಸಿದ ಪಾತ್ರ, ಅಕ್ಕನಾದಕ್ಕಿಂತ ಭಿನ್ನವಾದುದು ಹಾಗೂ ಮಹತ್ವದ್ದು. ಆತ ‘ಅನುಭವ ಮಂಟಪ’ದ  ಅಧ್ಯಕ್ಷನಾಗಿ, ಗುರುವಾಗಿ, ಮಾರ್ಗದರ್ಶಕನಾಗಿ, ವಿಮರ್ಶಕನಾಗಿ ‘ಪ್ರಭು’ ಎನ್ನುವ ಗೌರವಕ್ಕೆ ಪಾತ್ರನಾಗಿ, ಈ ಚಳುವಳಿಯೊಂದಿಗೆ ಹೆಚ್ಚು ಗಾಢವಾದ ಸಂಬಂಧವನ್ನು ಹೊಂದಿ ಕೆಲವು ಕಾಲವಾದರೂ ಜೊತೆಗೆ ಇದ್ದವನು. ಆದರೆ ಮಹಾದೇವಿ ಊಡುತಡಿಯಿಂದ ಶ್ರೀಶೈಲ ಶಿಖರಕ್ಕೆ ಬಿಟ್ಟ ಬೆಳಕಿನ ಬಾಣದಂತೆ ನೇರವಾಗಿ ಹೋರಾಟ ಹಾದಿಯಲ್ಲಿ, ಕಲ್ಯಾಣದ ಈ ಶರಣ ಕಿರಣ ಕೇಂದ್ರದಿಂದ ಆಕರ್ಷಿತಳಾಗಿ ಸ್ವಲ್ಪ ಕಾಲ ನಿಂತವಳು. ತನ್ನ ವ್ಯಕ್ತಿತ್ವ ಹಾಗೂ ಅನುಭಾವಿಕ ನಿಲುವುಗಳಿಂದ ಶರಣ ಸಮೂಹವನ್ನು ಬೆರಗುಗೊಳಿಸಿದಳು. ತನ್ನ ವೈರಾಗ್ಯ ಮತ್ತು ವೈಚಾರಿಕತೆಯ ಪರಿಣತಿಯಿಂದ ‘ಅಕ್ಕ’ ಎಂದು ಕರೆಯಿಸಿಕೊಳ್ಳುವ ಗೌರವಕ್ಕೆ ಪಾತ್ರಳಾದವಳು.’

ಅಂದರೆ ಅಕ್ಕನಿಗೆ ಕಲ್ಯಾಣದ ಅನುಭವ ಮಂಟಪ ಕೇವಲ ಒಂದು ತಂಗುದಾಣವಾಗಿದ್ದಿರಬಹುದು. ಆ ಅಲ್ಪಕಾಲದ ಎಳೆಯನ್ನೇ ಹಿಡಿದು ಅವಳ ಬಗ್ಗೆ ಬರೆದ ಅಪ್ಪಂತನದ ಸಮಾಜ ತಮ್ಮೆಲ್ಲ ಗೀಳುಗಳನ್ನೂ ಅವಳ ದೇಹದ ಮೇಲೆ, ಬದುಕಿನ ಮೇಲೆ ಆರೋಪಿಸಿ ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಅತ್ಯಂತ ವೈಯುಕ್ತಿಕವಾದ ಅಕ್ಕನ ಆಧ್ಯಾತ್ಮ ಸಾಧನೆಯನ್ನು ಮತ್ತು ಗಾಢವಾದ ಅಂತರ್ಮುಖ ಪ್ರವೃತ್ತಿಯನ್ನು ನಂತರದ  ಸಾಂಸ್ಥಿಕ ಅಗತ್ಯಗಳಿಗೆ ಹಿಗ್ಗಾಮುಗ್ಗಾ ಎಳೆಯುತ್ತದೆ.

ಬೆಳಕಿಗೆ ಬಂದ ಮೇಲೆ ಈ ಅಪ್ಪಂತನದ ಸಮಾಜಕ್ಕೆ ಅಕ್ಕನ ಬದುಕಿನ ಬಗ್ಗೆ ಕಾಡಿರುವ ಪ್ರಶ್ನೆಗಳಲ್ಲಿ ಎರಡು ಮುಖ್ಯವಾದ್ದವು. ಒಂದು: ಅವಳಿಗೆ ಮದುವೆಯಾಗಿತ್ತೆ ಇಲ್ಲವೇ? ಎರಡು: ಆಕೆ ನಿಜವಾಗಿ ಬೆತ್ತಲೆ ನಡೆದಳೆ? ಹೆಣ್ಣೆಂದರೆ ದೇಹ; ಹೆಣ್ಣೆಂದರೆ ಗಂಡ ಎಂಬ ಸಾಮಾಜಿಕ ಪರಿಕಲ್ಪನೆಗೆ  ಈ ಗೀಳು-ದ್ವಯ ಸೃಷ್ಟೀಕರಣ ನೀಡಬಲ್ಲದು.

ಜಿಎಸ್ಸೆಸ್ ಅಕ್ಕನಿಗೆ  ಮದುವೆಯಾಯಿತೆ ಇಲ್ಲವೇ ಎನ್ನುವುದು ಅವಳ ವ್ಯಕ್ತಿತ್ವದ ಮಹತ್ವವನ್ನು ಗುರುತಿಸಲು ಮಾನದಂಡವೇನಲ್ಲ ಎಂದು  ಸ್ಪಷ್ಟಪಡಿಸುತ್ತಾರೆ. ಹರಿಹರನ ರಗಳೆಯ ನಂತರದಲ್ಲಿ ಹೆಚ್ಚಿನಂಶ ಅಕ್ಕನಿಗೆ ಮದುವೆಯಾಗಿರಲಿಲ್ಲ ಎಂದು ಚಿತ್ರಿಸುವ ಹಠವೇ ಯಾಕೆ ಪ್ರಾಧಾನ್ಯತೆಯನ್ನು ಪಡೆಯಿತು? ಯಾವ ಚಾರಿತ್ರಿಕ ಒತ್ತಡಗಳ ಸಲುವಾಗಿ? ‘ಮೀಸಲಳಿಯದ’ ಅಕ್ಕನನ್ನು ಜನಮಾನಸದಲ್ಲಿ ಪ್ರತಿಷ್ಠಾಪಿಸಲು ಮೀಸಲು-ಗೀಳಿನ ಮಂದಿ ಶತಾಯಗತಾಯ ಪ್ರಯತ್ನಿಸಿರಬಹುದೆ?

*****

ಇನ್ನು ಬತ್ತಲೆತನದ ಪ್ರಶ್ನೆ. ಹರಿಹರನ ‘ಮಹಾದೇವಿಯಕ್ಕನ ರಗಳೆ’ ಆಕೆ ಬದುಕಿದ್ದಳು ಎನ್ನುವ ಕಾಲಕ್ಕೆ ಅತ್ಯಂತ ಹತ್ತಿರದ್ದು. ಅವನು ಸಹ ಆಕೆ ಬತ್ತಲೆಯಾಗಿ ನಡೆದಳೆಂದು ಹೇಳಿಲ್ಲ. ಆಕೆ ಕಲ್ಯಾಣಕ್ಕೆ ಬಂದಳೆಂದು ಸಹ ಹೇಳಿಲ್ಲ. ಹರಿಹರನ ಪ್ರಕಾರ ಅವಳು ನೇರವಾಗಿ ಹೋದದ್ದು ಶ್ರೀಶೈಲಕ್ಕೆ. ಬತ್ತಲೆತನದ ಬಗ್ಗೆ ಜಿಎಸ್ಸೆಸ್ ಸ್ಪಷ್ಟಪಡಿಸುವಂತೆ,

ನಮ್ಮ ಮಟ್ಟಿಗೆ ಹೇಳುವುದಾದರೆ ಇಂದೊಂದು ತೀರಾ ಅಸಂಭಾವ್ಯವೂ, ಅಸಂಬದ್ಧವೂ ಆದ ಕಲ್ಪನೆಯಾಗಿದೆ. ಹನ್ನೆರಡನೆಯ ಶತಮಾನದಷ್ಟು ಹಿಂದಿನ ಆ ಪರಿಸರದಲ್ಲಿ ಹೆಣ್ಣೊಬ್ಬಳು ಅವಳೆಂಥ ಅನುಭಾವಿಯಾಗಿದ್ದರೂ, ಬೆತ್ತಲೆಯಾಗಿ, ಕೂದಲನ್ನು ಮರೆಮಾಡಿಕೊಂಡು ಸಂಚರಿಸಿದಳೆಂಬುದು ಅತ್ಯಂತ ಅಸಂಗತವೂ, ಅನುಚಿತವೂ ಆದ ಭ್ರಮಾಕಲ್ಪನೆಯಾಗಿ ಮಾತ್ರ ತೋರುತ್ತದೆ. ಈ ನಡೆವಳಿಕೆ ವೀರಶೈವ ಧರ್ಮಕ್ಕೆ ಸಂಪೂರ್ಣ ವಿರುದ್ಧ ಮಾತ್ರವಲ್ಲದೆ ವೈಯುಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಕೂಡ ಹೆಣ್ಣಿಗೆ ಕ್ಷೇಮಕರವಾದದ್ದಲ್ಲ.

ಅಷ್ಟೇ ಅಲ್ಲ, ಅಕ್ಕನ ವಚನಗಳಲ್ಲಿ ತನ್ನ ಬತ್ತಲೆತನದ ಬಗ್ಗೆ ಉಲ್ಲೇಖಗಳೇ ಇಲ್ಲ.  ಸಮಕಾಲೀನ ವಚನಕಾರ್ತಿಯರ ಯಾವ ವಚನಗಳಲ್ಲಿಯೂ ಈ ಕುರಿತು ಒಂದಾದರೂ ಪ್ರತಿಕ್ರಿಯೆ ದಾಖಲಾಗಿಲ್ಲ. ಜೊತೆಗೆ ಇತರ ಅನೇಕ ವಚನಕಾರರ ವಚನಗಳಲ್ಲಿ ಅವಳ ಬತ್ತಲೆತನದ ಬಗ್ಗೆ ಒಂದಾದರೂ ಉಲ್ಲೇಖವಿಲ್ಲ!

‘ಚೆನ್ನಮಲ್ಲಿಕಾರ್ಜುನನ ಬೆಳಗುನುಟ್ಟು ಲಜ್ಜೆಗೆಟ್ಟವಳಿಗೆ ಉಡುಗೆ ತೊಡುಗೆಯ ಹಂಗೇಕೋ?’ ಅಥವಾ ‘ನಾನು ಸೀರೆಯನುಡುವ ಮುನ್ನವೇ ಜಂಗಮ ದೇವಾಗಂವ ನುಡಿಸುವೆ’ ಅಥವಾ ‘ಉಡುವೆ ನಾನು ಲಿಂಗಕ್ಕೆಂದು, ತೊಡುವೆ ನಾನು ಲಿಂಗಕ್ಕೆಂದು’ ಎನ್ನುವುದೆಲ್ಲವೂ ನಿರ್ಲಕ್ಷ್ಯವೇ ಹೊರತು ನಿರಾಕರಣೆ ಅಲ್ಲ. ಇಷ್ಟಕ್ಕೂ ಅಕ್ಕನ ವಚನಗಳೇ ಅವಳ ಜೀವನ ಚರಿತ್ರೆ ಎಂದು ಭಾವಿಸುವ ಅತಿರೇಕವೇಕೆ? ಜೊತೆಗೆ ಅಕ್ಷರಶಃ ಅರ್ಥೈಸಿಕೊಳ್ಳುವ ಬೌದ್ಧಿಕ ಹಠವೇಕೆ?

ಈ ಹಿಗ್ಗಾಮುಗ್ಗಾ ಜಗ್ಗುವ ಪ್ರಕ್ರಿಯೆ ಪ್ರಾರಂಭವಾಗಿದ್ದು ನಂತರದಲ್ಲಿಯೇ. ಅಂದರೆ ವಚನಗಳನ್ನು ಆಧರಿಸಿದ ನಂತರದ ಸೃಷ್ಟಿಯಲ್ಲಿ. ವಚನಗಳೇ ಎಷ್ಟರ ಮಟ್ಟಿಗೆ ‘ಮೂಲ’ ಎಂಬ ಪ್ರಶ್ನೆ ಇದೆ. ಅಂಥಾದ್ದರಲ್ಲಿ ಬಿಟ್ಟು ಹೋದ, ಕಟ್ಟಲ್ಪಟ್ಟ, ಮತ್ತು ಸೇರಿಸಲ್ಪಟ್ಟ ವಚನಗಳನ್ನು ಆಧರಿಸಿ ಹೊಮ್ಮುವ ‘ಸಂಪಾದನೆ’ಗಳು ಬರೆದವರ ಅಥವಾ ಆಗಿನ ಕಾಲದ ಸಮಾಜದ ಅಗತ್ಯಗಳೇ ಹೊರತು ಅಕ್ಕನ ಬದುಕಿನ ಸೃಷ್ಟೀಕರಣವಂತೂ ಆಗಲಾರದು.

ಆ ನಂತರದ ಸೃಷ್ಟಿಗಳನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ. ಆ ನಾಲ್ಕು ‘ಶೂನ್ಯ ಸಂಪಾದನೆ’ ಎಂಬ ಅನುಸೃಷ್ಟಿ ಪ್ರತಿಭೆಗಳಲ್ಲಿ  ಮೊದಲಿನವನಾದ ಶಿವಗಣ ಪ್ರಸಾದಿ ಮಹದೇವಯ್ಯ (ಸುಮಾರು ೧೪೬೦), ಅಕ್ಕ ಕಲ್ಯಾಣಕ್ಕೆ ‘ಆಗಮಿಸಿದ’ ಪ್ರಕರಣವನ್ನು ನಾಟಕೀಯಗೊಳಿಸಿ,

ದಿಗಂಬರದುಡಿಗೆಯನುಟ್ಟು
ಕೇಶವೆಂಬ ಅಂಬರವಂ ಮುಸುಕಿಟ್ಟು
ಕರಸ್ಥಳದೊಳಿರ್ಪ ಇಷ್ಟಲಿಂಗದೊಳು ದೃಷ್ಟಿ ನೆಟ್ಟು,
ಭಾವಕರಿಗೊಂಡು
ಲೌಕಿಕದ ಲಜ್ಜಾಭಿಮಾನಮಂ ತೊರೆದು
ಭವಸಾಗರಮಂ ದಾಟಿ
ಚೆನ್ನಮಲ್ಲಿಕಾರ್ಜುನನ
ವಿಕಳಾವಸ್ಥೆಯೊಳು ತನ್ನ ಮರೆದು

ಎಂದು  ವರ್ಣಿಸುತ್ತಾನೆ. ‘ಇಷ್ಟಲಿಂಗದೊಳು ದೃಷ್ಟಿ ನೆಟ್ಟು’, ‘ಲಜಾಭಿಮಾನಮಂ ತೊರೆದು’, ‘ವಿಕಳಾವಸ್ಥೆಯೊಳು ತನ್ನ ಮರೆದು’ ಇತ್ಯಾದಿ ವಿವರಗಳನ್ನು ಗಮನಿಸಿ.  ಈ ನಾಟಕೀಯತೆಗೆ ನಮ್ಮ ವ್ಯಾಪಾರಿ ಚಲನಚಿತ್ರಗಳ ಫಾರ್ಮುಲಾಗಳೂ ಸಹ ನಾಚಿಕೊಳ್ಳಬಹುದು.

ಹರಿಹರನ ರಗಳೆಯಲ್ಲಿ ಗುರುಗಳು ಬಂದಾಗ ಹಾಸಿಗೆಮನೆಯಲ್ಲಿ ಮಹಾದೇವಿ ಬೆತ್ತಲೆಯಾಗಿದ್ದದ್ದು; ಅವಳು ಸೀರೆ ಉಡಲು ಹೋದಾಗ ಕೌಶಿಕ ‘ತೆಗೆತೆಗೆ ನಿನಗೆ ಸೀರೆಯೇಕೆ’ ಎಂದದ್ದು; ಆಕೆ ಕೇಶಾಂಬರಿಯಾಗಿ (ಒರಟಾದ ಉಣ್ಣೆಯ ಗೊಂಗಡಿಯನ್ನು ಹೊದ್ದು), ಇಷ್ಟಲಿಂಗವನ್ನು ಕೈಗೆತ್ತಿಕೊಂಡು ಶ್ರೀಶೈಲದತ್ತ ನಡೆದಿದ್ದು; ಇತ್ಯಾದಿ  ವಿವರಗಳು ನಂತರದವರ ಕೈಗೆ ಸಿಕ್ಕಿ ಅಕ್ಕ ಬೆತ್ತಲಾಗಿ ಹಾದಿಯುದ್ದಕ್ಕೂ ನಡೆದಳು ಎಂದು ಚಿತ್ರಿಸುವ ವಿಕೃತಿಯನ್ನು ಮೆರೆದಿವೆ. ಅಷ್ಟೇ ಅಲ್ಲ, ಹಾದಿಯಲ್ಲಿ ಆಕೆಗೊಂದು ತಂಗುದಾಣವನ್ನು ದಯಪಾಲಿಸಿ  ಅಲ್ಲಿಯ ಪ್ರಮುಖರ ಪ್ರಶ್ನೆಗಳನ್ನು ಆಕೆ ಬೆತ್ತಲಾಗಿ ನಿಂತು ಎದುರಿಸುವ ‘ಧೈರ್ಯ’ ವನ್ನು ಸಹ ನೀಡಿವೆ.

ರಾಷ್ಟ್ರಕವಿಯ ಮಾತುಗಳನ್ನು ಮತ್ತೊಮ್ಮೆ ಹೇಳಬೇಕೆಂದರೆ, ‘ಮುಂದೆ ಜನಮನದಲ್ಲಿ ಅಕ್ಕನನ್ನು ಕುರಿತು ಈ ‘ಕೇಶಾಂಬರೆ’ಯಾದ ಚಿತ್ರವೇ ಸ್ಥಾಯಿಯಾಗಿ ಉಳಿದು ಬಂದಿದೆ; ಚಿತ್ರಕಾರರು ಅಕ್ಕಮಹಾದೇವಿಯನ್ನು ಹೀಗೆಯೇ ಚಿತ್ರಿಸಿದ್ದಾರೆ. ಆದರೆ ಹೆಣ್ಣೊಬ್ಬಳು ಈ ಬಗೆಯ ‘ಅವಸ್ಥೆ’ಇಲ್ಲಿ ಇದ್ದಳೆಂಬುದು ಎಷ್ಟು ಸಂಭಾವ್ಯ ಹಾಗೂ ಉಚಿತ ಎಂಬುದರ ಬಗ್ಗೆ ಬಹು ಜನ ಗಂಭೀರವಾಗಿ ವಿಚಾರ ಮಾಡಿದಂತೆ ತೋರುವುದಿಲ್ಲ.’

ಹಲಗೆರ್ಯಾರ ‘ಶೂನ್ಯಸಂಪಾದನೆ’ ಇದನ್ನು ಅತಿರೇಕಕ್ಕೆ ಕೊಂಡೊಯ್ದು ತನ್ನ ಕಲ್ಪನೆಯ ವಿಕೃತವನ್ನು ಮೆರೆದಿದೆ. ಇಲ್ಲಿ ಅಕ್ಕನ ಪರೀಕ್ಷೆಗೆಂದು ಬಂದ (ಅಲ್ಲಮನೇ ಕಳಿಸಿದ್ದ ಎನ್ನುವ ಇನ್ನೊಂದು ಅತಿರೇಕ!) ಕಿನ್ನರಿ ಬೊಮ್ಮಯ್ಯ ಅಕ್ಕನ ‘ಸರ್ವಾಂಗ ಸ್ಥಾನಮಾನಂಗಳಂ ಪರುಷಿಸಿ (ಪರೀಕ್ಷಿಸಿ) ನೋಡುತ್ತಾನೆ. ಅಲ್ಲಿ ‘ದೇಹಾಭಿಮಾನಗಳಿಲ್ಲದಿರಲಾತಂ ಯೋನಿಯೊಳು ಅಂಗುಲಿ ಪ್ರವೇಶವಂ ಮಾಡಲು ಚಿದ್ಭಸ್ಮ ಉದುರುವುದು’ ಕಂಡು ಕಿನ್ನರಿಗೆ ಜ್ಞಾನೋದಯವಾಯಿತಂತೆ!

ಕಿನ್ನರಿ ಬೊಮ್ಮಯ್ಯನ ಪ್ರಕರಣವನ್ನು ರೂಪಕವಾಗಿ ಅರ್ಥೈಸಿಕೊಳ್ಳಬೇಕು ಎಂದು ಹಲವಾರು ವಿಮರ್ಶಕರು ವಾದಿಸಿದ್ದಾರೆ. ಅಕ್ಕನ ‘ಲಜ್ಜೆಗೆಟ್ಟವಳಿಗೆ’ ಇತ್ಯಾದಿಗಳನ್ನು ಅಕ್ಷರಶಃ ಅರ್ಥೈಸುವವರು ಎಲ್ಲಿ ರೂಪಕ, ಎಲ್ಲಿ ಪದಶಃ ಎಂದು ನಿರ್ಧರಿಸುವ ಸ್ವಾತಂತ್ರ್ಯವನ್ನು ಕಾಯ್ದಿರಿಸಿಕೊಂಡಿದ್ದಾರೆಯೇ?

ಕಿನ್ನರಿಯ ಎದುರು ಯೋನಿ-ಪರೀಕ್ಷೆ, ನಂತರ ಬಸವಾದಿ ಪ್ರಮಥರ ಎದುರು  ಸತ್ವಪರೀಕ್ಷೆ! ಸುಮಾರು ಎಂಟುನೂರು ಕಿಮೀಗಳ ಹಾದಿಯಲ್ಲಿ ಒಂಟಿ ಹೆಣ್ಣೊಬ್ಬಳು ಬಟ್ಟೆ ತೊಟ್ಟಿದ್ದರೂ ಸಹ  ಎದುರಿಸಬೇಕಾಗಿದ್ದ  ಪರೀಕ್ಷೆಗಳು ಸಾಲದು ಎಂದೇ? ಐತಿಹಾಸಿಕ ದೃಷ್ಟಿಯಿಂದ ಯಾವ ವಿವರಗಳನ್ನೂ ನೀಡದ ಈ ‘ಸಂಪಾದನೆ’ಗಳ ಉದ್ದೇಶ ಏನಿತ್ತು ಎಂಬ ಪ್ರಶ್ನೆಯಂತೂ ಮೂಡುತ್ತದೆ.  ಸಮಕಾಲೀನರು ಅಂತನ್ನಿಸಿಕೊಳ್ಳುವವರು ಸಹ ಸೇರಿದಂತೆ ಇತಿಹಾಸವನ್ನೂ ಪುರಾಣವಾಗಿಸುವ ಮಂದಿಗಳ ಕಥನಗಳಲ್ಲಿ ಹೊಮ್ಮಿರುವ ಅಕ್ಕ ಎಷ್ಟು ನಿಜವೋ ಎಂದು ಗೊಂದಲವಾಗುತ್ತದೆ.

ಜನಪದ ಸಾಹಿತ್ಯದಲ್ಲಿ ಇರುವ ಅಕ್ಕ ಬೇರೆಯೇ. ಅಲ್ಲಿ ದಿನನಿತ್ಯದ ಶ್ರಮದ ಬದುಕಿಗೆ ಶರಣರ ಬಗೆಗಿನ ಹಾಡುಗಳು ಹಾಯೆನ್ನಿಸುವಂತೆ ಒದಗಿ ಬರುತ್ತವೆ.

ಶರಣೆಂದೆ ಮಲ್ಲಯ್ಯಗೆ / ಶರಣೆಂದೆ ಗುರುವೀಗೆ /
ಶರಣೆಂದೆ ಮಲ್ಲಯ್ಯನ ಮಡದಿ ಮಾದೇವಿಗೆ
ಶರಣೆಂದು ಕಲ್ಲ ಹಿಡಿದೇನು/

ಅಷ್ಟೇ ಅಲ್ಲ, ಅಕ್ಕನನ್ನು ನೆನೆವ ಪದ ಶಿವಪದಕ್ಕಿಂತಲೂ ಮಿಗಿಲು.

ಶಿವ ಶರಣಿ ನಿನಹಾಡು/ ಭವದೊಳಗೆ ಹಾಡುವುದು
ಶಿವ ಪದಕೆ ಮಿಗಿಲು /ನಿತ್ಯದಲಿ ಕೊನೆಯುಂಟೆ
ಶಿವಭಕ್ತಿ ಸಾರ ಗಳಿಸುವುದಕೆ.

ಕೊನೆಗೆ ಜನಪದ ಸಂಶೋಧಕರು ಸ್ಪಷ್ಟವಾಗಿ ಹೇಳಿಬಿಡುತ್ತಾರೆ: ‘ಪಂಡಿತರಲ್ಲದ ಪಾಮರರಾದ ಜನಪದ ಕವಿಗಳು ಅಕ್ಕಮಹಾದೇವಿಯ ಜೀವನ ಚಿತ್ರವನ್ನು ಅಶ್ಲೀಲ, ಅಸಭ್ಯತೆಗೆ ಆಸ್ಪದ ಕೊಡದಂತೆ ವೀರ ವಿರಾಗಿಣಿಯನ್ನಾಗಿ, ಆದರ್ಶನಾರಿಯನ್ನಾಗಿ, ಹೆಣ್ಣುಕುಲಕ್ಕೆ ಹೆಮ್ಮೆ ತರುವಂತ ಸ್ತ್ರೀರತ್ನವನ್ನಾಗಿ, ಸುಂದರವಾಗಿ ಚಿತ್ರಿಸಿರುವುದನ್ನು ನೋಡಿದರೆ ಆನಂದವಾಗುತ್ತದೆ.’

ಅಕ್ಕನ ನೆಪದಲ್ಲಿ ಶರಣಕ್ರಾಂತಿಗೆ ಮೆರುಗು ನೀಡಲಾಗಿದೆ ಎಂಬ ವಿಚಾರವನ್ನು ಮರೆಯುವಂತಿಲ್ಲ. ಇನ್ನೊಬ್ಬ ಚಿಂತಕರು ಹೇಳುವಂತೆ, ‘ನಾರಿಯೊಬ್ಬಳನ್ನು ತಮ್ಮ ಕಾವ್ಯದ ದಾರಿಯನ್ನಾಗಿ ಮಾಡಿಕೊಂಡ ಈ ಶಿವಕವಿಗಳಿಗೆ ಶಿವಶರಣರ ಕ್ರಾಂತಿಯ ಗಾಢ ಪ್ರಭಾವ ಆದಂತಿದೆ… ಸ್ತ್ರೀಸಮಾಜಕ್ಕೆ ಸತ್ ಕೀರ್ತಿ ತಂದ ಮಹಾದೇವಿಯನ್ನು ಕಾವ್ಯದ ನಾಯಕಿಯನ್ನಾಗಿ ಮಾಡಿಕೊಂಡ ಕವಿಗಳು ಭಕ್ತೆ, ವಿರಕ್ತೆ, ವಿರಾಗಿಣಿಯಾಗಿ ಕಂಡಿದ್ದರೂ ಸಹ ಅಕ್ಕನ ನಿಜವಾದ ವ್ಯಕ್ತಿತ್ವ ಮೂಡಿ ಬಂದಿಲ್ಲ ಎನ್ನಬೇಕಾಗುತ್ತದೆ… ಕಲ್ಪನೆಯ ಕುದುರೆಯನ್ನೇರದೆ ವೈಚಾರಿಕ ಅಧ್ಯಯನದಿಂದ ಅಕ್ಕನ ಚರಿತ್ರೆಯನ್ನು ಹುಡುಕುವುದಾದರೆ ಇಡೀ ಸ್ತ್ರೀ ಸಮಾಜಕ್ಕೆ ಮಹಾ ಉಪಕಾರ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸಂಶೋಧನೆ ಮಾಡುವುದು ಅಗತ್ಯವಿದೆ.’

(ಲೇಖಕಿಯ ಮುಂಬರುವ ಇಂಗ್ಲಿಷ್ ಕೃತಿ Akka Mahadevi: Poetry and Panache ಯ ಮುನ್ನುಡಿಯಿಂದ ಆಯ್ದ ಭಾಗದ ಭಾಷಾಂತರ. ಈ ಕೃತಿಯಲ್ಲಿ ಅಕ್ಕನ ಸುಮಾರು ಇನ್ನೂರೈವತ್ತು ವಚನಗಳ ಇಂಗ್ಲಿಷ್ ಭಾಷಾಂತರದ ಜೊತೆಗೆ ವಿಸ್ತೃತವಾದ ಪ್ರಸ್ತಾವನೆ ಇದೆ.)
ಬೌದ್ಧಿಕ ಋಣ
ಡಾ. ಎಲ್. ಬಸವರಾಜು. ಅಕ್ಕನ ವಚನಗಳು. ಬೆಂಗಳೂರು: ಸಪ್ನ (ಹತ್ತನೆಯ ಮುದ್ರಣ). 2016.
ಡಾ. ಜಿ. ಎಸ್. ಶಿವರುದ್ರಪ್ಪ. ‘ಅಕ್ಕ ಮಹಾದೇವಿ’ (ಲೇಖನ, ಪು. ೩೫-೪೭).  ಡಾ. ವಿಜಯಶ್ರೀ ಸಬರದ (ಸಂ). ಅಕ್ಕಮಹಾದೇವಿ. ಗುಲಬರ್ಗಾ: ಕನ್ನಡ ಅಧ್ಯಯನ ಸಂಸ್ಥೆ. ಗುಲಬರ್ಗಾ ವಿಶ್ವವಿದ್ಯಾಲಯ. 2011.
ಪ್ರೊ. ಎಸ್. ಆರ್. ಗೌಡರ. ‘ಜನಪದರ ದೃಷ್ಟಿಯಲ್ಲಿ ಅಕ್ಕ’ (ಲೇಖನ, ಪು. ೫೩-೬೭). ಮೇಲೆ ಉಲ್ಲೇಖಿಸಿರುವ ಡಾ. ವಿಜಯಶ್ರೀ ಸಬರದ ಅವರ ಸಂಪಾದಿತ ಕೃತಿಯಲ್ಲಿ.
ಅದೇ ಕೃತಿಯಲ್ಲಿ. ಡಾ. ಕೆ. ರವೀಂದ್ರನಾಥ. ‘ಪ್ರಾಚೀನ ಕನ್ನಡ ಕವಿಗಳು ಕಂಡ ಅಕ್ಕಮಹಾದೇವಿ’ (ಲೇಖನ, ಪು. ೭೭-೯೦)
Mukunda Rao. Sky-Clad. New Delhi: Westland. 2018.

About The Author

ಸುಕನ್ಯಾ ಕನಾರಳ್ಳಿ

ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ, ಲೇಖಕಿ, ಮತ್ತು ಭಾಷಾಂತರಕಾರ್ತಿ. ವೈದೇಹಿ (An Afternoon with Shakuntala and Other Stories) ಮತ್ತು ಅಗ್ರಹಾರ ಕೃಷ್ಣಮೂರ್ತಿಯವರ ಕೃತಿಗಳು (Love and Water Flow Together) [(ಕುವೆಂಪು ಭಾಷಾಭಾರತಿ ಪ್ರಶಸ್ತಿ  (2023) ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಅನುವಾದಿತ ಪುಸ್ತಕ ಪ್ರಶಸ್ತಿ (2023)] ಇಂಗ್ಲೀಷಿಗೆ ಅನುವಾದಿಸಲ್ಪಟ್ಟ ಕೃತಿಗಳು.  ‘ಹೇಳುತೇನೆ ಕೇಳು: ಮಹಿಳೆಯರ ಆತ್ಮಕಥೆಗಳು’; ‘ಕಥೆ ಹೇಳುವೆ’; ‘ಬರ್ತಿಯಾ?… ಎಷ್ಟು?…: ಭಾರತೀಯ ಸೂಳೆಲೋಕದಕಥೆಗಳು’; ನಯನತಾರ ಸೆಹಗಲ್ ಅವರ ‘ಚಿಟ್ಟೆಗಳ ಪಾಡು’ ಇತ್ಯಾದಿ ಅವರ ಕನ್ನಡ ಭಾಷಾಂತರ ಕೃತಿಗಳು. ಮೌಲಾನಾ ಜಲಾಲುದ್ದೀನ್ ರೂಮಿಯ ಕಾವ್ಯದ ಭಾಷಾಂತರ ಕೃತಿ ‘ದಿವ್ಯದಲ್ಲಿ ಹಿಸ್ಸೆಯಿಲ್ಲ: ಕಡುಪ್ರೇಮಿಯ ಎದೆಯ ಹಾಡು ಇತ್ತೀಚೆಗೆ ಬಿಡುಗಡೆಯಾದ ಕೃತಿ. 'ಕನ್ನಡ-ಕಾಸರವಳ್ಳಿಯವರ ಸಿನಿಮಾಗಳಲ್ಲಿ ರಾಷ್ಟ್ರ ಮತ್ತು ಹೆಣ್ಣು' ಎರಡು ಪುಸ್ತಕಗಳಾಗಿ ಸದ್ಯದಲ್ಲೇ ಬೆಳಕು ಕಾಣಲಿದೆ. 

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ