ಬೆಳಕು ಹರಿಯುವಷ್ಟರಲ್ಲಿ ಬೆಂಗಳೂರು ತಲುಪಿದೆ. ಅವರಿವರ ವಿಚಾರಿಸಿ ಅಗ್ರಿ ಕಾಲೇಜಿನ ಬಸ್ಸು ಹತ್ತಿ ಪ್ರವೇಶ ಪರೀಕ್ಷೆಯನ್ನೂ ಬರೆದೆ. ಇನ್ನೇನು ಸಂಜೆಯಾಯಿತು ವಾಪಸು ಧಾರವಾಡಕ್ಕೆ ಬಸ್ಸಿರುವುದು ರಾತ್ರಿ ಒಂಬತ್ತೂವರೆಗೆ ಅಲ್ಲಿಯವರೆಗೂ ಏನು ಮಾಡುವುದು? ಸಿನೇಮಾ ನೋಡಲು ಮನಸಿರಲಿಲ್ಲ. ಏಕೆಂದರೆ ಕರೀಶ್ಮಾ ಕಪೂರಳ ಆ ಚೆಲುವು, ಕಾರಿನ ಹೆಡ್ ಲೈಟಿನಂತಹ ಅವಳ ಎರಡು ಕಣ್ಣುಗಳು, ಅಂತಹ ಸಿರಿವಂತರ ಮಗಳು ಯಕಶ್ಚಿತ್ ಅಮೀರಖಾನ್ ನಂತಹ ಒಬ್ಬ ಡ್ರೈವರನ ಪ್ರೀತಿಸುವುದೆಂದರೇನು? ಹೌದು ಪ್ರೀತಿ! ಪ್ರೀತಿಯೆಂದರೆ ಹಾಗೇ ಇರಬೇಕು.. ಬೇರೆ ಯಾವ ಸಿನೇಮಾ ಈ ಸಿನೇಮಾಕೊಟ್ಟ ಅನುಭೂತಿ ಕಸಿಯಬಾರದೆಂದೇ ನನಗೆ ಸಿನೇಮಾ ನೋಡಲು ಮನಸು ಬರಲಿಲ್ಲ.
ಡಾ.ಲಕ್ಷ್ಮಣ ವಿ.ಎ. ಅಂಕಣ

 

1996 ಜೂನ್ ತಿಂಗಳಿನ ಒಂದು ದಿನ. ನಾನಾವಾಗ ಧಾರವಾಡದಲ್ಲಿದ್ದೆ. ಅಗ್ರಿ ಕಾಲೇಜಿನ ಪ್ರವೇಶ ಪಡೆಯಲು ಬೆಂಗಳೂರಿಗೆ ಮೊಟ್ಟ ಮೊದಲಬಾರಿಗೆ ಒಬ್ಬನೇ ಹೊರಟಿದ್ದೆ. ಧಾರವಾಡ ಸೀಮೆ ಎಂದಿಗೂ ದಾಟದ ನನಗೆ ಬೆಂಗಳೂರೆಂದರೆ ಭಯ ಮತ್ತು ಬೆರಗು. ಅವ್ವ ಕಟ್ಟಿಕೊಟ್ಟ ಬುತ್ತಿ ಬೆನ್ನಿಗೆ ಇತ್ತು ಬೆಚ್ಚಗೆ. ಜೂನ್ ತಿಂಗಳಿನ ಜಡಿಮಳೆಯ ಚಳಿಗೆ ನಾನು ನಡುಗುವಾಗ ಬೆನ್ನ ಮೇಲಿನ ಬ್ಯಾಗಿನೊಳಗಿನ ಬುತ್ತಿ ಏನೋ ಏನೋ ಸಮಾಧಾನ ನೀಡುತ್ತಿತ್ತು. ದೇವರು ಅಭಯ ನೀಡುವಂತೆ. ಅಪ್ಪ ಕೊಟ್ಟ ಸಾವಿರ ರೂಪಾಯಿಗಳಲ್ಲಿ ಅದಾಗಲೇ ಜಬ್ಬಾರ ಟ್ರಾವೆಲ್ಸ್ ನ ಬಸ್ಸಿನ ತಿಕೀಟಿಗೆ ಮುನ್ನೂರು ರೂಪಾಯಿ ಪಾವತಿ ಮಾಡಿಯಾಗಿತ್ತು. ಹೊಟ್ಟೆ ಹಸಿದಿತ್ತು ಹೋಟೇಲಿನೊಳಗೆ ಹೋದರೆ ಊರ ಬುತ್ತಿ ಬಿಚ್ಚಿ ತಿನ್ನುವ ಹಾಗಿಲ್ಲ.

ಏನು ಮಾಡುವುದು? ಪಕ್ಕದ ಅಪ್ಸರಾ ಟಾಕೀಜಿನಲ್ಲಿ ಅಮೀರಖಾನನ “ರಾಜಾ ಹಿಂದುಸ್ತಾನಿ” ಚಲನಚಿತ್ರ ಪ್ರದರ್ಶನವಾಗುತ್ತಿತ್ತು. ಹೇಗೂ ಬಸ್ಸು ಹೊರಡುವುದು ಒಂಬತ್ತೂವರೆಗೆ ಅಲ್ಲಿಯವರೆಗೆ ಟಾಕೀಜಿನಲ್ಲಿ ಫಿಲ್ಮ ನೋಡುತ್ತ ಚಿತ್ರಮಂದಿರದ ಆಪ್ತ ಕತ್ತಲೆಯಲ್ಲಿ ರೊಟ್ಟಿ ಬಿಚ್ಚಿ ತಿನ್ನಬಹುದೆಂಬ ಯೋಚನೆಯಲ್ಲಿ ಇಪ್ಪತ್ತು ರೂಪಾಯಿಯ ಸಾದಾ ಕುರ್ಚಿಯ ತಿಕೀಟು ತಗೊಂಡು ಸಿನೇಮಾ ನೋಡಿದೆ, ಊಟವನ್ನೂ ಮಾಡಿದೆ….. ನಾಳೆ ಬರೆಯುವ ಪ್ರವೇಶ ಪರೀಕ್ಷೆಯ ತಯಾರಿಯ ಬದಲಾಗಿ ಅಮೀರಖಾನ ‘ಪರದೇಶಿ, ಪರದೇಶೀ ಜಾನಾ ನಂಹೀ… ಮುಝೇ ಛೋಡಕೆ, ಮುಝೇ ಛೋಡಕೆ’ ಎಂಬ ಹಾಡು ಗುಣಗುಣಿಸುತ್ತ ಬೆಂಗಳೂರಿನ ದಾರಿಯ ಬಸ್ಸು ಹತ್ತಿದ್ದೆ.

ಈ ಹಾಡು ಅಷ್ಟು ದಿನ ಬಾಳಿ ಬದುಕಿದ ಧಾರವಾಡ ಬೆಂಗಳೂರೆಂಬ ಮಹಾನಗರದ ಮೋಹಕೆ ಬೀಳದಿರು ಮಗೂವೇ ಎಂದು ಯಾರೋ ನನ್ನ ಅಣಕಿಸಿ ಹಾಡಿದಂತಿತ್ತು… ಅಂದಹಾಗೆ ಈ ಹಾಡಿನಲ್ಲಿ ಅಮೀರಖಾನ್ ಹಾಕಿದ ಬಿಳಿಯ ದೊಗಳೆ ಶರಟು ತುಂಬ ಇಷ್ಟವಾಯಿತು.

ಬೆಳಕು ಹರಿಯುವಷ್ಟರಲ್ಲಿ ಬೆಂಗಳೂರು ತಲುಪಿದೆ. ಅವರಿವರ ವಿಚಾರಿಸಿ ಅಗ್ರಿ ಕಾಲೇಜಿನ ಬಸ್ಸು ಹತ್ತಿ ಪ್ರವೇಶ ಪರೀಕ್ಷೆಯನ್ನೂ ಬರೆದೆ. ಇನ್ನೇನು ಸಂಜೆಯಾಯಿತು ವಾಪಸು ಧಾರವಾಡಕ್ಕೆ ಬಸ್ಸಿರುವುದು ರಾತ್ರಿ ಒಂಬತ್ತೂವರೆಗೆ ಅಲ್ಲಿಯವರೆಗೂ ಏನು ಮಾಡುವುದು? ಸಿನೇಮಾ ನೋಡಲು ಮನಸಿರಲಿಲ್ಲ. ಏಕೆಂದರೆ ಕರೀಶ್ಮಾ ಕಪೂರಳ ಆ ಚೆಲುವು, ಕಾರಿನ ಹೆಡ್ ಲೈಟಿನಂತಹ ಅವಳ ಎರಡು ಕಣ್ಣುಗಳು, ಅಂತಹ ಸಿರಿವಂತರ ಮಗಳು ಯಕಶ್ಚಿತ್ ಅಮೀರಖಾನ್ ನಂತಹ ಒಬ್ಬ ಡ್ರೈವರನ ಪ್ರೀತಿಸುವುದೆಂದರೇನು? ಹೌದು ಪ್ರೀತಿ! ಪ್ರೀತಿಯೆಂದರೆ ಹಾಗೇ ಇರಬೇಕು.. ಬೇರೆ ಯಾವ ಸಿನೇಮಾ ಈ ಸಿನೇಮಾಕೊಟ್ಟ ಅನುಭೂತಿ ಕಸಿಯಬಾರದೆಂದೇ ನನಗೆ ಸಿನೇಮಾ ನೋಡಲು ಮನಸು ಬರಲಿಲ್ಲ. ಮತ್ತು ಅಮೀರಖಾನ್ ಹಾಕಿದ ದೊಗಳೆ ಬಿಳೀ ಅಂಗಿ ಎಷ್ಟು ಚೆನ್ನಾಗಿತ್ತು? ಹಾಂ ಅಗೋ! ಅಲ್ಲಿ ನೋಡಿದರೆ ಮೆಜೆಸ್ಟಿಕ್ ನ ಫುಟ್ ಪಾತಿನ ಎರಡೂ ಬದಿ ಥೇಟ್ ಅಮೀರಖಾನ್ ಹಾಕಿದ ಅಂಗಿಯನ್ನೇ ಮಾರಲು ಹಾಕಿದ್ದಾರೆ!! ಒಂದು ಅಂಗಿ ಕೊಳ್ಳಲೇ? ದುಡ್ಡು!?

ಆಗಲೇ ಊಟ ಬಸ್ಸು ಚಾರ್ಜು ಅಂತ ಎಲ್ಲ ಖರ್ಚಾಗಿ ಉಳಿದಿರುವುದೇ ನೂರು ರೂಪಾಯಿ. ಅರ್ಧ ದಾರಿಯಲ್ಲಿ ಹಸಿವಾದರೆ ಏನು ತಿನ್ನುವುದು? ಇರಲಿ ಒಂದು ರಾತ್ರಿ ಉಪವಾಸ ಕಳೆದರೆ ಯಾರೂ ಸತ್ತು ಹೋಗುವುದಿಲ್ಲ ಅಂತ ಎಷ್ಟು ಸಲ ಸಾಬೀತಾಗಿಲ್ಲ?

ಧೈರ್ಯ ಮಾಡಿ ಸರ್ ಆ ಅಂಗಿಯ ಬೆಲೆ ಎಷ್ಟೆಂದು ಫುಟ್ ಪಾತಿನ ಮೇಲೆ ಮಾರಲು ಇಟ್ಟಿದ್ದ ಆ ವ್ಯಕ್ತಿಯ ಹತ್ತಿರ ಕೇಳಿದೆ. ಅವನು ನೂರ ಐವತ್ತು ಅಂದ. ನಾನು ಮರು ಮಾತನಾಡದೇ ಮುಂದೆ ಹೊರಟಿದ್ದೆ, “ರೀ ಬನ್ರೀ ಇಲ್ಲಿ ಎಷ್ಟು ಕೊಡ್ತೀರ ಹೇಳ್ರೀ” ಎಂದು ಜೋರು ಮಾಡಿದ. ನನಗೆ ಆವಾಗ ಬಾರ್ಗೇನ್ ಹೇಗೆ ಮಾಡುವುದೆಂದೇ ಗೊತ್ತಿರಲಿಲ್ಲ. ನನ್ನ ಬಳಿ ಇರುವುದೇ ನೂರು ರೂಪಾಯಿ ಹಾಗಂತ ಹೇಳಲೂ ಧೈರ್ಯ ಸಾಲಲಿಲ್ಲ. ಅವನು ಆ ಬಟ್ಟೆ ಮಾರುವವನು ಒಳ್ಳೆ ರೌಡಿ ತರಹ ಇಷ್ಟಗಲ ಕಣ್ಣು ಕಿಸಿದು ಹೋಗ್ಲೀ ಎಷ್ಟು ಕೊಡ್ತೀರಿ ಹೇಳಿ ಲಾಸ್ಟ್ ಫೈನಲ್ ಅಂತ ಒತ್ತಾಯ ಮಾಡುತ್ತ ಕೊನೆಗೆ ನೂರಿಪ್ಪತ್ತು ಕೊಡಿ ಹೋಗಲಿ ಅಂದ, ದೇವರಾಣೆಗೂ ನನ್ನ ಹತ್ತರ ಇರುವುದೇ ನೂರು ರೂಪಾಯಿ ಇನ್ನು ಇಪ್ಪತ್ತು ರೂಪಾಯಿ ಎಲ್ಲಿಂದ ತರುವುದು? ಬೇಡ ಸರ್ ನನಗೆ ನೂರು ರೂಪಾಯಿಗೆ ಕೊಡುವ ಹಾಗಿದ್ದರೆ ಕೊಡಿ ಅಂತ ಹೇಳಿ ಸದ್ಯ ಈ ಅವಮಾನದಿಂದ ಪಾರಾಗಲು ಅಲ್ಲಿಂದ ಕಾಲು ಕಿತ್ತೆ… ಅವನು ಅಲ್ಲಿಂದ ಗೊಣಗುತ್ತಲೇ ಇದ್ದ, ಯೋಗ್ಯತೆ ಇದ್ರೆ ವ್ಯಾಪಾರ ಮಾಡಬೇಕು ಜೇಬಲ್ಲಿ ಮೂರು ಕಾಸು ಇಲ್ಲದವರು ವ್ಯಾಪಾರ ಮಾಡೋಕ್ ಬಂದ ದೊಡ್ಡ ಮನಸಾ… ಇಪ್ಪತ್ತು ರೂಪಾಯಿಗೆ ಹಿಂದೆ ಮುಂದೆ ನೋಡ್ತಾನೆ…. ಯೋ ಮನೆ ಕಟ್ಟಲ್ಲಾ ನೀನು ಇಷ್ಟೆಲ್ಲ ಲೆಕ್ಕಾಚಾರ ಹಾಕಿದ್ರೆ ಬದುಕಿನಲ್ಲಿ ಅಂತ ಏನೇನೋ ಗೊಣಗುತ್ತಲೇ ಇದ್ದ… ನನಗೆ ತುಂಬ ಮುಜುಗರ ನಾಚಿಕೆಯಾಗಿ ಮೆಜೆಸ್ಟಿಕ್ ನ ಜನರಲ್ಲಿ ಕರಗಿ ಹೋಗಿ ಬಸ್ಸಿನ ದಾರಿ ಕಾಯುತ್ತ ನಿಂತೆ. ಅಮೀರುಖಾನ್ ಹಾಕಿದಂತಹ ಆ ದೊಗಳೆ ಅಂಗಿ ಮತ್ತು ನೀನು ಬದುಕಿನಲ್ಲಿ ಮನೆ ಕಟ್ಟಲ್ಲ ಎಂಬ ಅವನ ಚುಚ್ಚು ಮಾತುಗಳು ಮುಂದೆ ಬಹಳ ದಿನಗಳವರೆಗೆ ತುಂಬ ಡಿಸ್ಟರ್ಬ್ ಮಾಡುತ್ತಲೇ ಇದ್ದವು..

ಪಕ್ಕದ ಅಪ್ಸರಾ ಟಾಕೀಜಿನಲ್ಲಿ ಅಮೀರಖಾನನ “ರಾಜಾ ಹಿಂದುಸ್ತಾನಿ” ಚಲನಚಿತ್ರ ಪ್ರದರ್ಶನವಾಗುತ್ತಿತ್ತು. ಹೇಗೂ ಬಸ್ಸು ಹೊರಡುವುದು ಒಂಬತ್ತೂವರೆಗೆ ಅಲ್ಲಿಯವರೆಗೆ ಟಾಕೀಜಿನಲ್ಲಿ ಫಿಲ್ಮ ನೋಡುತ್ತ ಚಿತ್ರಮಂದಿರದ ಆಪ್ತ ಕತ್ತಲೆಯಲ್ಲಿ ರೊಟ್ಟಿ ಬಿಚ್ಚಿ ತಿನ್ನಬಹುದೆಂಬ ಯೋಚನೆಯಲ್ಲಿ ಇಪ್ಪತ್ತು ರೂಪಾಯಿಯ ಸಾದಾ ಕುರ್ಚಿಯ ತಿಕೀಟು ತಗೊಂಡು ಸಿನೇಮಾ ನೋಡಿದೆ, ಊಟವನ್ನೂ ಮಾಡಿದೆ…..

ಮೊಂಡ ತೋಳಿನ ಅಂಗಿ, ಧೋತರ, ತಲೆಯ ಮೇಲೊಂದು ಗಾಂಧೀ ಟೊಪ್ಪಿಗೆ -ಇದಿಷ್ಟು ಅಪ್ಪ.

ಯುಗಾದಿಯ ಹಿಂದೆ ಮುಂದೆ ಎರಡು ವರುಷಕ್ಕೊಮ್ಮೆಯೋ ಮೂರುವರ್ಷಕ್ಕೊಮ್ಮೆಯೋ ಜವಳಿ ಅಂಗಡಿ ಮೆಟ್ಟಿಲು ಹತ್ತುತ್ತಿದ್ದ ಅಪ್ಪನ ಹಳೆಯ ಬಟ್ಟೆಗಳನ್ನು ಅವ್ವ ಮತ್ತೊಮ್ಮೆ ತೊಳೆದು ಜೋಪಾನವಾಗಿ ಲ್ಯಾವೀ ಗಂಟಿನಲಿ ಮಡಚಿ ಇಡುತ್ತಿದ್ದಳು. ಅಪ್ಪನ ಕಾಟನ್ ಧೋತರವನ್ನು ಕರವಸ್ತ್ರದ ಅಳತೆಗೆ ಹರಿದು ಅದರಲ್ಲಿ ಜೋಳದ ರೊಟ್ಟಿಯ ಬುತ್ತಿ ಕಟ್ಟಿ ಕೊಡುತ್ತಿದ್ದಳು, ಮಾಸಿದ ಅಂಗಿಗಳನ್ನು ಕೌದಿ ಹೊಲೆಯಲು ಬಳಸುತ್ತಿದ್ದಳು.. ಇದ್ದುದರಲ್ಲೆ ತುಸು ಗಟ್ಟಿಮುಟ್ಟಾದ ಗಾಂಧೀ ಟೊಪ್ಪಿಗೆಯನ್ನು ಶಾಲೆಗೆ ಹೋಗುವ ನನ್ನ ಯುನಿಫಾರ್ಮಿನ ಹರಿದ ಚಡ್ಡಿಗಳಿಗೆ ತೇಪೆ ಹಚ್ಚುತ್ತಿದ್ದಳು… ಧೋತರದ ಚುಂಗಿನ ಎಳೆಯನ್ನೇ ಹೊಸೆದು ಸೀಮೆ ಎಣ್ಣೆಯ ಲಾಟೀನಿಗೆ ಬತ್ತಿ ಮಾಡುತ್ತಿದ್ದಳು. ಆ ಬೆಳಕಿನಲ್ಲೇ ನಾನು ಕಾಗುಣಿತ ಬರೆಯಲು ಕಲಿತದ್ದು. ಆ ಲ್ಯಾಟೀನಿನ ಬೆಳಕು ರಾತ್ರಿಯಿಡೀ ಅಪ್ಪನ ಕಣ್ಣುಗಳಂತೆ ಉರಿದು ಕತ್ತಲೆ ಕಾದಿವೆ.

ಕವಿತೆಯೆಂದರೆ ಮೆಜೆಸ್ಟಿಕ್ ನ ಫುಟ್ಪಾತಿನ ಮೇಲಿನ ಬಿಳಿಯ ಅಂಗಿಯ ಮೇಲಿನ ಮೋಹದಿಂದ ಹಿಡಿದು ಈ ಇಲ್ಲಿಯ ಬೆಂಗಳೂರಿನ ಝಗಮಗಿಸುವ ಮಾಲ್ ನ ದುಬಾರಿ ಅಂಗಿ ಕೊಳ್ಳುವಷ್ಟು ಸಾಮರ್ಥ್ಯ ಪಡೆಯುವಷ್ಟು ಕಸುವು ಕೊಟ್ಟ ಬದುಕಿಗೆ ನಾನು ಮಣ್ಣು ಹೊರುವ ಬೆನ್ನ ಮೇಲಿನ ಭಾರವಿದೆಯಲ್ಲ ಅದು. ಬೆನ್ನ ನೋವಿನಂತೆ ಕಾಡುವ ಅವಮಾನಗಳಿದೆಯಲ್ಲ ಆ ಬದುಕು. ಹಸಿವು ಇಂಗಿಸಿತಲ್ಲ ಆ ಅಕ್ಷರ, ಉರಿವ ಲ್ಯಾಟೀನಂತೆ ನಮ್ಮ ಬಾಳಿನ ಕತ್ತಲೆ ಕಾಯಿತಲ್ಲ ಆ ಬೆಳಕು…. ಅಲ್ಲಿಂದ ಇಲ್ಲೀವರೆಗಿನ ಆ ಮಧ್ಯಂತರದ ಬದುಕೇ ಕವಿತೆ.

ನನ್ನ ನೆಚ್ಚಿನ ಕವಿ ತಿರುಮಲೇಶ ಅವರಿಗೆ ಪ್ರಕಾಶಕರು ಒಂದು ಸಲ ಅವರದೇ ಕವನ ಸಂಕಲನಕ್ಕೆ ಮುನ್ನುಡಿ ಬರೆದು ಕೊಡಲು ವಿನಂತಿಸಿಕೊಳ್ಳುತ್ತಾರೆ. ಕಾರಣವಿಷ್ಟೆ. ಸುಮಾರು ಐದುನೂರು ಪುಟಗಳ ಆ ಸಂಕಲನಕ್ಕೆ ಅವರು ಬರೆದಿದ್ದು ಕೇವಲ ನಾಲ್ಕು ಸಾಲಿನ ಮುನ್ನುಡಿ. ಆಗ ಕವಿ ತುಂಬ ಗೊಂದಲಕ್ಕೆ ತಳಮಳಕ್ಕೆ ಈಡಾಗುತ್ತಾರೆ. ಆಗ ಅವರು ಬರೆಯುತ್ತ “ಕವಿತೆ ಬರೆಯುವುದೇ ಒಂದು ಲಜ್ಜೆಯ ಕೆಲಸ, ಇನ್ನು ಅದರ ಕುರಿತಾಗಿ ಬರೆಯುವುದು?
ಅಷ್ಟಕ್ಕೂ ಆದರ್ಶ ಕವಿತೆಯೊಂದಿದೆಯಾ?

ಒಬ್ಬ ಕವಿ ಒಂದೇ ಕವಿತೆಯನ್ನು ಹಲವು ರೀತಿಗಳಲ್ಲಿ ಬರೆಯುತ್ತಾನೆಯೇ ಅಥವಾ ಒಂದೊಂದು ಕವಿತೆಯೂ ಬೇರೆ ಬೇರೆ ಎನ್ನಬಹುದೆ? ಬರೆಯುತ್ತಾ ಕವಿ ಬೆಳೆಯುತ್ತಾನೆಯೋ ಅಥವಾ ಕೇವಲ ಬದಲಾಗುತ್ತಾನೆಯೆ? ಇದ್ದ ಹಾಗೆ ಇರುತ್ತಾನೆ? ಒಬ್ಬೊಬ್ಬನ ಶೈಲಿ ಎಂದರೇನು? ಇಂಥ ಅಕೆಡೆಮಿಕ್ ವಿಷಯಗಳ ಕುರಿತು ಕವಿ ನಿಜಕ್ಕೂ ಯೋಚಿಸುತ್ತಾನೆ ಎನ್ನುವಂತಿಲ್ಲ. ಯೋಚಿಸಬೇಕಾಗಿಯೂ ಇಲ್ಲ. ಬಹುಶಃ ಯೋಚಿಸಿದರೆ ಅದಕ್ಕೆ ತೊಡಕೆ ಜಾಸ್ತಿ. ಕವಿತೆ ಸಹಜವಾಗಿ ಮೂಡಿ ಬರಬೇಕು ಎನ್ನುತ್ತಾನೆ ಕೀಟ್ಸ್. ಸಹಜವಾಗಿ ಅಂದರೆ? ಕಲೆಯಲ್ಲಿ ಸಹಜ ಎಂಬುದೊಂದಿದೆಯೆ?

ಸಾಹಿತ್ಯ ಲೇಖಕನಿಂದ ಓದುಗನಿಗೆ ದಾಟಿ ಸಾಕಷ್ಟು ಸಮಯವಾಯಿತು. ಓದುಗ ಯಾವುದನ್ನು ಇಷ್ಟ ಪಡುತ್ತಾನೆಯೋ ಅದೇ ಒಳ್ಳೆಯ ಕವಿತೆ. ಓದುಗ ಹೇಗೆ ಅರ್ಥವಿಸುತ್ತಾನೆಯೋ ಅದೇ ಅದರ ಅರ್ಥ… ಎಂಬ ಮುಂತಾದ ವಾದವಿದೆ, ಇದೂ ಅರ್ಧ ಸತ್ಯವೆ. ಯಾಕೆಂದರೆ ಹೀಗೆ ಅಂದುಕೊಳ್ಳುತ್ತಾ ನಾವು ಆದರ್ಶ ಕವಿತೆಯನ್ನು ಬಿಟ್ಟು ಆದರ್ಶ ವಾಚಕನ ಕಲ್ಪನೆ ಮಾಡುತ್ತೇವೆ. ಕವಿತೆ ಅರ್ಥವಾಗುವ ಮೊದಲೇ ಓದುಗನನ್ನು ತಲುಪಬೇಕೆನ್ನುತ್ತಾನೆ ಎಲಿಯೆಟ್. ಇದೂ ಒಂದು ಒಗಟೇ ಸರಿ ಆದರೆ ನಮಗೆ ಇಷ್ಟವಾಗುವ ಒಗಟು.”

ಈಗ ಅಪ್ಪನ ಅಂಗಿಗೆ ಕೋಟು ಹೊಲಿಸುವ ಸಂಭ್ರಮ. ಅಪ್ಪನ ಅಂಗಿಯ ಮೇಲೆ ಕೋಟು ಒಂದಿಷ್ಟೂ ಮ್ಯಾಚ್ ಆಗುವುದಿಲ್ಲವೆನ್ನುವುದು ಗೊತ್ತಿದ್ದರೂ ನಾನು ನನ್ನ ಸಂಭ್ರಮಕ್ಕಾದರೂ ಹೊಲಿಸಲೇಬೇಕೆನಿಸಿತು, ಅಪ್ಪನನ್ನು ಜೀವಂತವಾಗಿಡುವುದೆಂದರೆ ಹೀಗೆ ಅಂತ ಎಲ್ಲೋ ಓದಿದ ನೆನಪು. ಮತ್ತೆ ನೆನಪು ಅಪ್ಪ.