ಅಧಿಕಾರಿಗಳಿಗೆ ಈಗ ಪೇಚಿಗಿಟ್ಟುಕೊಂಡಿತು. ಸದ್ಯಕ್ಕೆ ಅಲ್ಲಿಂದ ತೊಲಗಿ ನಂತರ ಬಂದರೆ ಹೇಗೆ? ಆದಿವಾಸಿ ಹೆಂಗಸರಿಗೆ ಸರಕಾರದ ಕುತಂತ್ರಗಳೇನೂ ಅಪರಿಚಿತವಲ್ಲ. ಅವರ ಆಯುಧಗಳನ್ನು ಹೊತ್ತೊಯ್ದು ಕೊಡುವ ನೆಪದಲ್ಲಿ ತಾತ್ಕಾಲಿಕವಾಗಿ ಕಟ್ಟಿದ್ದ ಸೇತುವೆಯನ್ನು ಅದೇ ಅಸ್ತ್ರಗಳಿಂದ ಉರುಳಿಸಿದಾಗ ಸರಕಾರ ಇತ್ತ ಕಡೆಯಲ್ಲಿ, ಇವರೆಲ್ಲ ಅತ್ತ ಕಡೆಯಲ್ಲಿ. ಇಡೀ ರಾತ್ರಿ ಸರಕಾರದ ಮಂದಿ ಮತ್ತೆ ಕಾಡೊಳಗೆ ನುಸುಳದಂತೆ ಹೆಂಗಸರು ಕಾವಲಿದ್ದರು. ಮಾರನೆಯ ದಿನ ಹಳ್ಳಿಗೆ ಹಿಂತಿರುಗಿದ ಗಂಡಸರಿಗೆ ಆಶ್ಚರ್ಯ ಕಾದಿತ್ತು. ಮಾರ್ಚ್ ೩೧, ೧೯೭೪ ರಂದು ಕಣಿವೆಯಲ್ಲಿ ತಮಟೆ ಕಹಳೆಗಳ ಸಮೇತ ಬೃಹತ್ ಪ್ರದರ್ಶನ ನಡೆಯಿತು. ಅಕ್ಕಪಕ್ಕದ ಹಳ್ಳಿಗಳ ಹೆಂಗಸರೆಲ್ಲ ನೆರೆದಿದ್ದರು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹನ್ನೆರಡನೆಯ ಬರಹ
ಭಾರತದಲ್ಲಿ ಇಪ್ಪತ್ತನೆಯ ಶತಮಾನದ ೭೦-೭೨ ರ ನಡುವೆ ಪ್ರಾಕೃತಿಕ ನೆಲೆಯಲ್ಲಿ ಸಾಕಷ್ಟು ಘಟಿಸಿತ್ತು! ಉತ್ತರಾಖಂಡದ ಅಲಕಾನಂದ ಮತ್ತು ಮಂದಾಕಿನಿ ನದಿಗಳೆರಡೂ ಹುಚ್ಚೆದ್ದು ಹಳ್ಳಿಗಳ ಮೇಲೆ ಪ್ರಹಾರವನ್ನೇ ನಡೆಸಿದ್ದವು. ಅರಣ್ಯ ಇಲಾಖೆ ಬೇಕಾಬಿಟ್ಟಿಯಾಗಿ ಖಾಸಗಿ ಕಂಪೆನಿಗಳಿಗೆ ಕೊಟ್ಟ ಮರಗಳ ಗುತ್ತಿಗೆಯ ಫಲವಾಗಿ ಬೆಟ್ಟಗಳ ಇಳಿಜಾರುಗಳು ಬೋಳಾಗಿ ನಿಂತಿದ್ದವು. ಧೋ ಎಂದು ಬಿದ್ದ ಮಳೆ ಮೇಲ್ಮೈ ಮಣ್ಣನ್ನು ಎಲ್ಲಿಗೋ ರವಾನಿಸಿದ್ದವು. ಬೋಳು ಇಳಿಜಾರುಗಳು ಹುಚ್ಚುಮಳೆ ಕೆಳಗೆ ಧುಮ್ಮಿಕ್ಕಿ ನದಿಗಳನ್ನು ಕೂಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದವು. ಆಧುನಿಕತೆಯ ತಲೆಕೆಟ್ಟ ರೂಪಕ್ಕೆ ಹುಚ್ಚುಹೊಳೆ ತಾರ್ಕಿಕ ತೀರ್ಮಾನವನ್ನು ಒದಗಿಸಿ ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆಯಾಗಿಸಿತ್ತು.
ಬೆಚ್ಚಿ ಬಿದ್ದ ಸ್ಥಳೀಯ ಜನತೆ ಪ್ರತಿಭಟನೆ ನಡೆಸಿತು. ತಮ್ಮ ನೆಲೆಯ ಪ್ರಾಕೃತಿಕ ಸಂಪತ್ತನ್ನು ದುರಾಸೆಗೆ ಲೂಟಿ ಮಾಡುವ ಹೊರಗಿನವರನ್ನು ಆಚೆಗಿಡುವಂತೆ ಪ್ರಭುತ್ವವನ್ನು ಆಗ್ರಹಿಸಿತು. ವಿವೇಚನೆಯಿಂದ ನಿರ್ಧಾರಗಳನ್ನು ಕೈಗೊಳ್ಳುವ ಸ್ಥಳೀಯ ಸಹಕಾರ ಸಂಘಗಳಿಗೆ ಕೊಡುವಂತೆ ಅವರ ಬೇಡಿಕೆಯಾಗಿತ್ತು. ಸರಕಾರ ಅವರ ಪ್ರಾರ್ಥನೆಯನ್ನು ದುರ್ಲಕ್ಷಿಸಿದ್ದಷ್ಟೇ ಅಲ್ಲ, ಇನ್ನಷ್ಟು ಕಾಂಟ್ರಾಕ್ಟುಗಳನ್ನು ಖಾಸಗಿಯವರಿಗೆ ಸಹ ನೀಡಿತು. ಅದರಲ್ಲಿ ಕ್ರೀಡಾಸಾಮಗ್ರಿಗಳನ್ನು ತಯಾರಿಸುವ ಸೈಮನ್ ಕಂಪೆನಿ ಸಹ ಒಂದು. ಮಾರ್ಕ್ಸ್ ಶೆಫರ್ಡ್ ಮಾತುಗಳಲ್ಲಿ ‘ಉಳುವ ನೇಗಿಲನ್ನು ಅತ್ತ ತಳ್ಳಿ ಟೆನಿಸ್ ಬ್ಯಾಟು ಮುಂದೆ ಬಂದು ನಿಂತಿತ್ತು!’
ಸೈಮನ್ ಸಂಸ್ಥೆಯ ಏಜೆಂಟರು ಮರ ಕಡಿಯಲು ಸಜ್ಜಾಗಿ ಆಯುಧಗಳನ್ನು ಹೊತ್ತು ಅವತರಿಸಿದಾಗ ಸ್ಥಳೀಯರು ಬೆಚ್ಚಿ ಬಿದ್ದಿದ್ದರು. ಏನು ಮಾಡಬಹುದೆಂದು ಯೋಚಿಸಲು ಸಭೆ ಸೇರಿದಾಗ ಎಂದಿನಂತೆ ಹಲವಾರು ಸಲಹೆಗಳು ಬಂದವು. ಆದಿವಾಸಿ ಚಳುವಳಿಯ ಸಂಘಟನಕಾರರಲ್ಲಿ ಒಬ್ಬರಾದ ಚಂಡಿ ಪ್ರಸಾದ್ ಭಟ್ ಅವರು ಕೊಟ್ಟ ಸಲಹೆ ಮಾತ್ರ ಎಲ್ಲರ ಮನಸ್ಸನ್ನು ನಾಟಿತ್ತು. ‘ಮರ ಕಡಿಯಲು ಬಂದಾಗ ಮರವನ್ನು ಅಪ್ಪಿಕೊಂಡರೆ ಹೇಗೆ? ಕೊಡಲಿಗಳು ಬೇಕಿದ್ದರೆ ನಮ್ಮ ಬೆನ್ನಿನ ಮೇಲೆ ಬೀಳಲಿ!’ ಅಪ್ಪಿಕೋ (ಚಿಪ್ಕೋ) ಚಳುವಳಿ ಪ್ರಾರಂಭವಾಗಿದ್ದು ಹೀಗೆ.
ಸರಕಾರ ಒಪ್ಪಿದಂತೆ ನಟಿಸಿತು. ಆದರೆ ಸ್ವಲ್ಪ ಹತ್ತಿರದಲ್ಲೇ ಇದ್ದ ರೇಣಿ ಪ್ರದೇಶದಲ್ಲಿ ಮರ ಕಡಿಯಲು ಸೈಮನ್ ಕಂಪೆನಿಗೆ ಗುತ್ತಿಗೆ ಕೊಟ್ಟಿತು. ಅಪ್ಪಿಕೋ ಚಳುವಳಿಯ ಮಂದಿ ಪ್ರತಿಭಟನೆಯನ್ನು ತೀವ್ರಗೊಳಿಸುವ ನಿರ್ಧಾರ ಮಾಡಿದರು.
ಮಾರ್ಚ್ ೨೪, ೧೯೭೪ ರಂದು ಸರಕಾರ ರೇಣಿಯ ಜನರನ್ನು ಪಕ್ಕದ ಹಳ್ಳಿಯಲ್ಲಿದ್ದ ಸರಕಾರಿ ಆಫೀಸಿಗೆ ಬರುವಂತೆ ಆದೇಶವಿತ್ತಿತು. ಸುಮಾರು ಹದಿನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಭೂಮಿ ಪರಿಹಾರವನ್ನು ಕೊಡುವ ನೆಪ. ಅಮಾಯಕ ಹಳ್ಳಿಗರು ಅಲ್ಲಿಗೆ ಧಾವಿಸಿದ ಮೇಲೆ ಖಾಲಿ ಹೊಡೆಯುತ್ತಿದ್ದ ಹಳ್ಳಿಯಲ್ಲಿ ಉಳಿದಿದ್ದವರು ಕೇವಲ ಹೆಂಗಸರು ಮತ್ತು ಮಕ್ಕಳು. ಹೊರಗಿನವರಿಗೆ ಏನೂ ಕಾಣಿಸದಂತೆ ಕಿಡಕಿ ಬಾಗಿಲುಗಳು ಮುಚ್ಚಿದ್ದ ಬಸ್ಸಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಏಜೆಂಟನೊಬ್ಬನ ಸಮೇತ ಕಳ್ಳತನದಿಂದ ಕಾಡನ್ನು ಹೊಕ್ಕರು.
ಆದರೆ ಒಬ್ಬ ಪುಟ್ಟ ಹುಡುಗಿ ಇವರನ್ನು ನೋಡಿದ್ದಳು. ಕಳ್ಳರಂತೆ ಕಾಡಿನೊಳಗೆ ತೆವಳುತ್ತಿದ್ದವರನ್ನು ನೋಡಿ ಏನೋ ಸರಿಯಿಲ್ಲ ಅಂತನ್ನಿಸಿ ಹೋಗಿ ಹಳ್ಳಿಯ ಹಿರಿಯರಲ್ಲಿ ಒಬ್ಬಳಾದ ಗೌರಾದೇವಿಗೆ ಹೋಗಿ ದೂರು ಕೊಟ್ಟಳು. ಮಿಂಚಿನ ವೇಗದಲ್ಲಿ ಸುಮಾರು ಮೂವತ್ತು ಮಂದಿ ಹೆಂಗಸರು ಮತ್ತು ಮಕ್ಕಳು ಕಾಡಿನ ಕಡೆಗೆ ಧಾವಿಸಿದರು.
ಅಲ್ಲಿ ನಡೆದ ಘರ್ಷಣೆ ಯಾವ ರೀತಿಯಿಂದಲೂ ಹಿತವಾಗಿರಲಿಲ್ಲ. ಬಸ್ಸಿನ ಮಂದಿ ಇಳಿದು ಅಡಿಗೆಯನ್ನು ಬೇಯಿಸಿ ಊಟ ಮಾಡುವ ತರಾತುರಿಯಲ್ಲಿದ್ದರು. ಗೌರಾದೇವಿ ಸೌಜನ್ಯದಿಂದಲೇ ಅವರಲ್ಲಿ ಕೇಳಿಕೊಂಡಳು; ‘ನೋಡಿ ತಮ್ಮಂದಿರ, ನಮಗೆ ಕಾಡು ತವರುಮನೆಯಿದ್ದಂತೆ. ಸೌದೆ, ಮೇವು, ಔಷಧಿ ಎಲ್ಲವನ್ನೂ ಕೊಟ್ಟು ನಮ್ಮನ್ನು ಕಾಪಾಡುತ್ತದೆ. ನಮ್ಮ ಮಾತನ್ನು ನೀವು ಕೇಳದಿದ್ದರೆ ಈ ಬೆಟ್ಟದ ಇಳಿಜಾರು ಬೋಳಾಗಿ ಕುಸಿದು ನಮ್ಮ ಹಳ್ಳಿಗಳ ಮೇಲೆ ಕವುಚಿಕೊಳ್ಳುತ್ತದೆ. ಪ್ರವಾಹದಲ್ಲಿ ಎಲ್ಲವೂ ಕೊಚ್ಚಿಹೋಗಿ ಭೂಮಿಯೇ ಬರಡಾಗುತ್ತೆ. ಊಟ ಮಾಡಿ ಇಲ್ಲಿಂದ ದಯವಿಟ್ಟು ಹೊರಟು ನಮ್ಮ ಹಳ್ಳಿಗೆ ಬನ್ನಿ. ಗಂಡಸರು ಹಿಂತಿರುಗಿ ಬರುತ್ತಾರೆ. ಅವರ ಹತ್ತಿರ ಮಾತಾಡುವಿರಂತೆ.’
ಅಧಿಕಾರಿಗಳು ಅವಳ ಮಾತಿಗೆ ಕಿವಿಗೊಡದಿದ್ದಾಗ ಗೌರಾದೇವಿ ಬಿಗಿಯಾದ ಧ್ವನಿಯಲ್ಲಿ, ‘ಇಲ್ಲಿಂದ ಸುಮ್ಮನೆ ಹೋಗದಿದ್ದರೆ ಪರಿಣಾಮ ನೆಟ್ಟಗಿರಲ್ಲ. ನಾವೆಲ್ಲ ನಿಮ್ಮ ತಾಯಿ ಅಕ್ಕ ತಂಗಿಯರಂತೆ. ಇಷ್ಟಕ್ಕೂ ನಮಗೆ ಇದೇನೂ ಹೊಸದಲ್ಲ. ಹೇಗೆ ಉತ್ತರ ಕೊಡಬೇಕೆಂದು ಗೊತ್ತಿದೆ. ಕಾಡು ಕಡಿದರೆ ಏನಾಗುತ್ತೆ ಅಂತ ನಮಗೆ ಚೆನ್ನಾಗಿ ಗೊತ್ತು. ನಮ್ಮ ಗದ್ದೆ, ಮನೆ, ಆಕಳು ಎಲ್ಲವನ್ನೂ ಕಳೆದುಕೊಂಡು ನಾವು ಬೀದಿಗೆ ಬರುತ್ತೇವೆ. ನಿಮ್ಮ ಹೊಟ್ಟೆಪಾಡಿಗೆ ಕಾಡನ್ನೇ ಕಡೀಬೇಕಾ? ನೀವು ಜಾಸ್ತಿ ಮಂದಿ ಇದೀರಾ, ನಿಜ. ನಿಮ್ಮ ಹತ್ತಿರ ಅಸ್ತ್ರಗಳೂ ಇವೆ ಅಂತ ನಮಗೆ ಗೊತ್ತು. ಆದರೆ ನಮ್ಮ ಶಕ್ತಿ ಕಮ್ಮಿ ಅಂತ ಅಂದ್ಕೋಬೇಡಿ.’
ಕುಡಿದಿದ್ದ ಸರಕಾರಿ ಗಂಡಸರು ಗೌರಾದೇವಿಯ ಮಾತಿಗೆ ಇಷ್ಟೂ ಸೊಪ್ಪು ಹಾಕಲಿಲ್ಲ. ಜೊತೆಗೆ ಅವರೊಂದಿಗೆ ದುರಾಚಾರದಿಂದ ವರ್ತಿಸಲು ಪ್ರಾರಂಭಿಸಿದರು. ‘ನಿಮ್ಮನ್ನ ಜೈಲಿಗೆ ಹಾಕ್ತೀವಿ, ನೋಡ್ತಿರಿ’ ಎಂದು ಗುಡುಗುತ್ತಾ ಅವರಲ್ಲೊಬ್ಬ ಕೋವಿಯನ್ನು ಗೌರಾದೇವಿಯ ಕಡೆಗೆ ಗುರಿಯಿಟ್ಟ. ಒಂದಿಷ್ಟು ಹೆದರದ ಗೌರಾದೇವಿ ‘ಸರಿ, ಉಡಾಯಿಸು’ ಎಂದು ಹೇಳುತ್ತಾ ಎದೆಯೊಡ್ಡಿ ಅವನೆದುರಿಗೆ ನಿಂತಳು. ಮರಗಳು ಬೀಳುವ ಮುಂಚೆ ಹೆಣಗಳನ್ನು ಬೀಳಿಸು ಎಂದು ಸವಾಲೆಸೆದಳು.
ಅಧಿಕಾರಿಗಳಿಗೆ ಈಗ ಪೇಚಿಗಿಟ್ಟುಕೊಂಡಿತು. ಸದ್ಯಕ್ಕೆ ಅಲ್ಲಿಂದ ತೊಲಗಿ ನಂತರ ಬಂದರೆ ಹೇಗೆ? ಆದಿವಾಸಿ ಹೆಂಗಸರಿಗೆ ಸರಕಾರದ ಕುತಂತ್ರಗಳೇನೂ ಅಪರಿಚಿತವಲ್ಲ. ಅವರ ಆಯುಧಗಳನ್ನು ಹೊತ್ತೊಯ್ದು ಕೊಡುವ ನೆಪದಲ್ಲಿ ತಾತ್ಕಾಲಿಕವಾಗಿ ಕಟ್ಟಿದ್ದ ಸೇತುವೆಯನ್ನು ಅದೇ ಅಸ್ತ್ರಗಳಿಂದ ಉರುಳಿಸಿದಾಗ ಸರಕಾರ ಇತ್ತ ಕಡೆಯಲ್ಲಿ, ಇವರೆಲ್ಲ ಅತ್ತ ಕಡೆಯಲ್ಲಿ. ಇಡೀ ರಾತ್ರಿ ಸರಕಾರದ ಮಂದಿ ಮತ್ತೆ ಕಾಡೊಳಗೆ ನುಸುಳದಂತೆ ಹೆಂಗಸರು ಕಾವಲಿದ್ದರು.

ಮಾರನೆಯ ದಿನ ಹಳ್ಳಿಗೆ ಹಿಂತಿರುಗಿದ ಗಂಡಸರಿಗೆ ಆಶ್ಚರ್ಯ ಕಾದಿತ್ತು. ಮಾರ್ಚ್ ೩೧, ೧೯೭೪ ರಂದು ಕಣಿವೆಯಲ್ಲಿ ತಮಟೆ ಕಹಳೆಗಳ ಸಮೇತ ಬೃಹತ್ ಪ್ರದರ್ಶನ ನಡೆಯಿತು. ಅಕ್ಕಪಕ್ಕದ ಹಳ್ಳಿಗಳ ಹೆಂಗಸರೆಲ್ಲ ನೆರೆದಿದ್ದರು. ಋಷಿಗಂಗಾ ದಡದಲ್ಲಿ ನಡೆದ ಸಭೆಯಲ್ಲಿ ಗೌರಾದೇವಿ ಮುಂಚೂಣಿಯಲ್ಲಿದ್ದಳು.
ಮುಂದೆ ನಡೆದಿದ್ದು ಇತಿಹಾಸ! ಸರಕಾರ ರಚಿಸಿದ ಸಮಿತಿ ಎರಡು ವರ್ಷಗಳಲ್ಲಿ ಒಂದು ವರದಿಯನ್ನು ಸಲ್ಲಿಸಿತು. ಕೊನೆಯ ಪಕ್ಷ ಮುಂದಿನ ಹತ್ತು ವರ್ಷಗಳ ಮಟ್ಟಿಗಾದರೂ ರೇಣಿಯ ಸುತ್ತಮುತ್ತೆಲ್ಲಾ ವಾಣಿಜ್ಯ ಕಾರಣಗಳಿಗೆ ಕಾಡನ್ನು ಬಳಸಿಕೊಳ್ಳಬಾರದೆಂದು ಶಿಫಾರಸ್ಸು ಮಾಡಿತು. ಅಪ್ಪಿಕೋ ಚಳುವಳಿ ಸರಕಾರ ಕಡೆಗಣಿಸಬಲ್ಲ ಪ್ರಕರಣವಾಗಿ ಉಳಿಯಲಿಲ್ಲ. ಕಚ್ಚಾ ಸಾಮಗ್ರಿಗಳು ಸಿಗದೆ ಏನೋ ಹಳ್ಳಿಯವರು ಪ್ರತಿಭಟಿಸುತ್ತಾರೆ ಎಂದು ತಳ್ಳುವ ಹಾಗಿರಲಿಲ್ಲ. ‘ಅಪ್ಪಿಕೋ’ ದಿನಗಳೆದಂತೆ ರೈತಾಪಿ ಮಂದಿ ಅರಣ್ಯದ ಮೇಲೆ ತಮ್ಮ ಸಾಂಪ್ರದಾಯಿಕ ಹಕ್ಕೊತ್ತಾಯಗಳನ್ನು ಮಂಡಿಸಿದ ಚಳುವಳಿಯಾಗಿ ಬೆಳೆಯಿತು. ಸುಮಾರು ಒಂದು ಶತಮಾನದುದ್ದಕ್ಕೂ ಸರಕಾರ ತಮ್ಮ ಬದುಕಿನ ಆಧಾರವಾಗಿದ್ದ ಕಾಡನ್ನು ಅತಿಕ್ರಮಿಸದಂತೆ ತಡೆದಿದ್ದ ಅನುಭವವಂತೂ ಇತ್ತಲ್ಲ?
ಯಾರೀ ಗೌರಾದೇವಿ?
ಗೌರಾದೇವಿ ಹುಟ್ಟಿದ್ದು ೧೯೨೫ ರಲ್ಲಿ. ಉತ್ತರಾಖಂಡದಲ್ಲಿ ಚಮೋಲಿ ಜಿಲ್ಲೆ, ನೀತಿ ಕಣಿವೆ, ಲಾಟಾ ಹಳ್ಳಿಯ ಮರ್ಚಾ ಆದಿವಾಸಿ ಕುಟುಂಬದಲ್ಲಿ ಹುಟ್ಟಿದ ಈಕೆ ಶಾಲೆಗೆ ಹೋಗಿದ್ದೇ ಇಲ್ಲ. ಆದರೆ ತನ್ನ ಕುಟುಂಬದ ಸಾಂಪ್ರದಾಯಿಕ ಉಣ್ಣೆ ವೃತ್ತಿಯಲ್ಲಿ ಪಳಗಿದ್ದಳು. ತುಂಬ ಚಿಕ್ಕ ವಯಸ್ಸಿನಲ್ಲೇ ಮದುವೆಯಾದ ಆಕೆಯ ಗಂಡನ ಮನೆತನ ಸಹ ಉಣ್ಣೆಯ ವೃತ್ತಿಯ ಜೊತೆಗೆ ತುಂಡು ಜಮೀನನ್ನೂ ಹೊಂದಿತ್ತು. ಗಂಡ ಸತ್ತಾಗ ಅವಳಿಗೆ ಕೇವಲ ಇಪ್ಪತ್ತೆರಡು ವರ್ಷ. ಇದ್ದ ಒಬ್ಬ ಮಗನನ್ನು ಸಾಕುವ ಹೊಣೆಯ ಜೊತೆ ಉಣ್ಣೆ ಕೆಲಸವೂ ಅವಳ ಹೆಗಲೇರಿತ್ತು.
ಮಗ ಚಂದ್ರ ಸಿಂಗ್ ಬೆಳೆದ ಮೇಲೆ ಸಂಸಾರದ ಹೊಣೆಯನ್ನು ಅವನಿಗೆ ಕೊಟ್ಟಳೇನೋ ನಿಜ. ಆದರೆ ಆ ಪ್ರದೇಶದ ಬಡ ಹೆಂಗಸರ ಜೊತೆ ಬೆರೆತು ಕೆಲಸ ಮಾಡುವುದನ್ನು ನಿಲ್ಲಿಸಲಿಲ್ಲ. ಸಮುದಾಯದ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದಳು. ರೇಣಿಯ ಹೆಂಗಸರು ತಮ್ಮ ಮಹಿಳಾ ಮಂಗಳ ದಳ ಎಂಬ ಸ್ವ-ಸಹಾಯ ಸಂಸ್ಥೆಗೆ ಅಧ್ಯಕ್ಷೆಯಾಗಬೇಕೆಂದು ಬಯಸಿದ್ದು ಸುಮ್ಮನೆ ಅಲ್ಲ.
ಚಿಪ್ಕೋ ಬಗ್ಗೆ ಗೌರಾದೇವಿ ಜನರನ್ನು ಎಚ್ಚರಿಸಲು ಸುತ್ತಮುತ್ತಲ ಹಲವಾರು ಹಳ್ಳಿಗಳಲ್ಲಿ ಕಾರ್ಯಕ್ರಮ ನಡೆಸಿದಳು. ನಂತರ ಅವಳ ಹೆಸರು ಮರೆಯಾಗಲಾರಂಭಿಸಿದ್ದು ಯಾವ್ಯಾವ ಕಾರಣಗಳಿಗೋ! ಹೆಣ್ಣನ್ನು ಇತಿಹಾಸದಿಂದ ಮರೆಯಾಗಿಸುವುದು ಹೊಸದೇನೂ ಅಲ್ಲವಲ್ಲ? ೧೯೯೧ ರ ಜುಲೈನಲ್ಲಿ ಅರವತ್ತಾರು ವಯಸ್ಸಿನ ಗೌರಾದೇವಿ ತೀರಿಕೊಂಡಳು. ಹೊರಗಿನ ಜಗತ್ತಿಗೆ ಅವಳು ಗೊತ್ತಿರಲಿಲ್ಲ. ಚಳುವಳಿಗಳಲ್ಲಿ ಹೆಣ್ಣಿನ ಪಾತ್ರದ ಬಗೆಗಿನ ಅಧ್ಯಯನಗಳು ಪ್ರಾರಂಭವಾದಾಗ ಮಾತ್ರವೇ ಅವಳ ಹೆಸರು ಬೆಳಕಿಗೆ ಬಂತು.
ಉತ್ತರವಿಲ್ಲದೆ ಉಳಿದ ಪ್ರಶ್ನೆಗಳು
ಅಪ್ಪಿಕೋ ಚಳುವಳಿ ಹೆಂಗಸರ ಚಳುವಳಿಯೇ? ಅಥವಾ ರೈತಾಪಿ ಮಂದಿಯ ಸಂಘಟನೆಯೇ? ಅಥವಾ ಒಂದು ಪರಿಸರ-ಸ್ತ್ರೀಪರ ಚಳುವಳಿಯೇ? ಗೌರಾದೇವಿಯ ಮಾತುಗಳಲ್ಲಿ, ‘ಆ ಪ್ರತಿರೋಧ ಥಟ್ಟನೆ ಹೊಮ್ಮಿದ್ದು. ಯೋಚಿಸಿ ಜಾರಿಗೊಳಿಸಿದ್ದೇನೂ ಅಲ್ಲ. ಗಂಡಸುಮಂದಿಯೆಲ್ಲ ಹಳ್ಳಿಯಿಂದ ಹೊರಗೆ ಹೋಗಿದ್ದರು. ಹಾಗಾಗಿ ನಾವು ಮನೆಯಿಂದ ಹೊರಗೆ ಬಂದು ಪ್ರತಿಭಟಿಸಬೇಕಾಯಿತು, ಅಷ್ಟೇ! ನಮಗೆ ಯಾರ ಜೊತೆಯೂ ಜಗಳ, ವಿರೋಧವೇನೂ ಇಲ್ಲ. ಕಾಡಿದ್ದರೆ ಮಾತ್ರ ನಮ್ಮ ಬದುಕೂ ಇರುತ್ತದೆ ಅಂತ ಸ್ಪಷ್ಟಪಡಿಸಬೇಕಿತ್ತು, ಅಷ್ಟೇ.’
ಕೆಲವರ ಅಭಿಪ್ರಾಯದಲ್ಲಿ ಅದು ಬದುಕುಳಿಯುವ ಹೋರಾಟ ಆಗಿತ್ತಷ್ಟೇ ಹೊರತು ಅದನ್ನೊಂದು ಚಳುವಳಿಯಾಗಿಸುವ ಸೈದ್ಧಾಂತಿಕ ಸ್ಪಷ್ಟತೆಯೇನೂ ಅಲ್ಲಿ ಇರಲಿಲ್ಲ. ಕಾಡು ಶ್ರಮಿಕರಾದ ಗೌರಾದೇವಿಯಂತವರು ಚಳುವಳಿಯ ನೇತಾರರಾಗುವಂತಹ ಅರ್ಹತೆಯನ್ನು ಅಥವಾ ಸಂಪನ್ಮೂಲಗಳನ್ನು ಹೊಂದಿರಲಿಲ್ಲ. ಆದರೆ ಅದು ಜೆಂಡರಿನ ಸಿದ್ಧ ಮಾದರಿಗಳನ್ನು ಸ್ವಲ್ಪ ಮಟ್ಟಿಗಾದರೂ ಕದಲಿಸಿದ್ದಂತೂ ಸತ್ಯ.
ಕೆಲವರ ಪ್ರಕಾರ ಆಧುನಿಕ ಅಭಿವೃದ್ಧಿ ಯೋಜನೆಗಳನ್ನೇ ಅವರೇನೂ ಪ್ರತಿರೋಧಿಸಲಿಲ್ಲ. ಸಿಗುವ ಆರ್ಥಿಕ ಲಾಭದಲ್ಲಿ ತಮಗೂ ಒಂದು ಪಾಲು ಸಿಗಬೇಕು ಎನ್ನುವುದಷ್ಟೇ ಅವರ ಕಾಳಜಿಯಾಗಿತ್ತು. ಚಳುವಳಿಯ ಇತಿಹಾಸದಲ್ಲಿ ಗೌರಾದೇವಿಯ ಹೆಸರು ಕೇಳಿಸಿದರೂ ಸಹ ‘ಅಪ್ಪಿಕೋ’ ಒಂದು ಹೆಂಗಸರ ಚಳುವಳಿ ಅಂತಲೋ ಅಥವಾ ರೈತಾಪಿ ಚಳುವಳಿ ಅಂತಲೋ ಗುರುತಿಸುವಷ್ಟೇನೂ ಗಣ್ಯವಲ್ಲ ಎನ್ನುವುದು ಕೆಲವರ ಅಭಿಪ್ರಾಯ.

ಏನೇ ಇರಲಿ, ಗೌರಾದೇವಿ ಒಂದು ದಂತಕತೆಯಾದಳು ಎನ್ನುವುದಂತೂ ನಿಜವೇ. ಡೇವಿಡ್ ಅಲ್ಬರ್ಟ್ ಎಂಬಾತ ಬರೆದ gaura devi saves the trees ಎಂಬ ಮಕ್ಕಳ ಪದ್ಯ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ. ಶಾಲೆಯ ಪಠ್ಯಪುಸ್ತಕಗಳಲ್ಲಿ ‘ಅಪ್ಪಿಕೋ’ ಸಾಮಗ್ರಿಯನ್ನು ಬಳಸಿಕೊಳ್ಳಲು ಸಾಕಷ್ಟು ಸಾಹಿತ್ಯವೂ ಲಭ್ಯವಿದೆ.
References
-
Shepard, M. Gandhi Today: A Report on Mahatma Gandhi’s Successors, Washington, D.C.: Seven Locks Press, 1987.
-
Rangan, H. Of Myths and Monuments, New York: Verso, 2000.
-
Guha, R. The Unquiet Woods: Ecological Change and Peasant Resistance in the Himalaya (Expanded ed.) Berkeley, CA: University of California Press, 2000.
-
Lakshmi C.S. “Lessons from the Mountains: The Story of Gaura Devi,”
-
http://www.hinduonnet.com/2000/05/21/stories/13210414.htm
-
Kunwar, C. (Ed.) Emancipated Women-Folk of Uttarakhand, Dehradun: Himalayan Action Research Centre. 1997.
-
Nanda, M. Prophets Looking Backward: Postmodernism, Science, and Hindu Nationalism, New Delhi: Permanent Black, 2004.

