ಈ ಕತೆಗಳಲ್ಲಿ ಕೆಲವು ಬಹುಕಾಲ ಬಾಳಿ ನಮ್ಮನ್ನು ಕೆದಕುವಂಥವು. ಆರಂಭದ ದಿನಗಳಲ್ಲಿಯೇ ರಶೀದ್ ಬರೆದ ‘ಮೂಸಾ ಮೊಯಿಲಿಯವರ ಮುದ್ದಿನ ಮಗಳು ಮತ್ತು ಹೆಲಿಪೆಟ್ಟರ್ ಎಂಬ ದುಷ್ಟಜಂತು’ ಕತೆಯು ಕನ್ನಡದ ಶ್ರೇಷ್ಟ ಕತೆಗಳಲ್ಲಿ ಒಂದಾಗಿರುವುದಕ್ಕೆ ಕಾರಣವೆಂದರೆ ತುಂಬಾ ಸಹಜವಾಗಿ ಅದು ಪಡೆದುಕೊಳ್ಳುವ ಸಾಂದ್ರತೆ ಮತ್ತು ಬಂಧ. ಮರಗಳಿಗೆ ಕೀಟನಾಶಕವನ್ನು ಸಿಂಪಡಿಸಲು ಬಂದ ಹೆಲಿಕಾಪ್ಟರ್ ಪುರಾಣಸದೃಶವಾದ ಅಚ್ಚರಿಯ ವಸ್ತುವಾಗಿಬಿಡುತ್ತದೆ. ಅದರ ‘ಡ್ರೈವರ್’ ನನ್ನೇ ಮದುವೆಯಾಗುತ್ತೇನೆ ಎಂದು ನಿರ್ಧರಿಸಿದ ಅಮೀನಾ ಬೀಬಿಯು ಅಮದ್ ಕುಟ್ಟಿಯ ಕಾಮದಾಸೆಗೆ ಬಲಿಯಾಗುತ್ತಾಳೆ.
ಕಥೆಗಾರ ಅಬ್ದುಲ್‌ ರಶೀದ್‌ ಅವರ ʼಹೊತ್ತು ಗೊತ್ತಿಲ್ಲದ ಕಥೆಗಳುʼ ಕಥಾ ಸಂಕಲನಕ್ಕೆ ಡಾ. ರಾಜೇಂದ್ರ ಚೆನ್ನಿ ಬರೆದ ಮುನ್ನುಡಿಯ ಮಾತುಗಳು

 

ಅಬ್ದುಲ್ ರಶೀದ್‍ ರ ಕತೆಗಳ ಮಾಯಾಲೋಕ

ಎಲ್ಲಾ ವಿಮರ್ಶೆಯ ಹಿಂದೆ ವಿಮರ್ಶಕನ ego ಇರುತ್ತದೆ. ಅವನಿಗೆ ಕೃತಿಗೆ ಶರಣಾಗತನಾಗುವುದು ಬೇಡ. ಆ ಕೃತಿಯ ಅನಾಮಿಕ ಓದುಗರಲ್ಲಿ ತಾನೂ ಒಬ್ಬನು ಎಂದು ಅವನು ಒಪ್ಪಲು ತೈಯಾರಿರುವುದಿಲ್ಲ. ಇದಕ್ಕೆ ತದ್ವಿರುದ್ಧವಾಗಿ ಕತೆಗಾರಿಕೆ ವಿಮರ್ಶಕನ ego ಅನ್ನು ಕ್ಯಾ ಬಿ ನೈ ಮಾಡಿ ಅವನ ಜೊತೆಗೆ ಜಗಳ ಮಾಡಲೂ ನಿರಾಕರಿಸಿ ತನ್ನ ಪಾಡಿಗೆ ಮುಂದುವರೆಯುತ್ತದೆ. ಕತೆಗಾರನನ್ನು ತುಂಬು ಅಂತಃಕರಣದಿಂದ ಕ್ಷಮಿಸಿ, ನಯವಾಗಿ ಆಚೆಗಿಟ್ಟು ಮುಂದುವರೆಯುತ್ತದೆ.

ಇದು ನನಗೆ ಅರ್ಥವಾಗಿದ್ದು ಧಾರವಾಡದಲ್ಲಿ ಮಲ್ಲಿಕಾರ್ಜುನ ಮನಸೂರರ ಹಾಡುಗಾರಿಕೆ ಕೇಳಿದಾಗ. ಇದನ್ನು ನಾನು ‘ಧಾರವಾಡದ ಪಡ್ಡೆದಿನ’ಗಳಲ್ಲಿ ಬರೆದಿದ್ದೇನೆ. ಅವರು ಹಾಡುತ್ತಿದ್ದಾಗ ಅವರೆದುರಿಗೆ ಅವರ ಹಾಡುಗಾರಿಕೆಯ ಸೂಕ್ಷ್ಮ ಕಂಪನಗಳಿಗೆ ಸ್ಪಂದಿಸುತ್ತಿದ್ದ ಕೇಳುಗರ ಒಂದು ಸಣ್ಣ ಗುಂಪು ಇರುತ್ತಿತ್ತು. ಅವರಾರೂ ಪಂಡಿತರಲ್ಲ, ಸಂಗೀತದ ಅಧ್ಯಯನ ಮಾಡಿದವರಲ್ಲ, ಆದರೆ ಅವರ ದೇಹ-ಮನಸ್ಸುಗಳು ಮಾತಿಗೆ ಮೀರಿದ, ವ್ಯಾಖ್ಯಾನಗಳನ್ನೂ ಮೀರಿದ ಒಂದು ಲಯದಲ್ಲಿ ಅವರ ಹಾಡುಗಾರಿಕೆಗೆ ಸ್ಪಂದಿಸುತ್ತಿದ್ದವು. ನನಗೆ ಇನ್ನೂ ಬಗೆಹರಿಯದ ಪ್ರಶ್ನೆಯೆಂದರೆ ಸಾಹಿತ್ಯ ವಿಮರ್ಶೆಗೆ ಇದು ಯಾಕೆ ಸಾಧ್ಯವಾಗಿಲ್ಲ? ಇನ್ನೆಲ್ಲಾ ಕಲೆಗಳಿಗೆ ಇದು ಸಾಧ್ಯವಾಗಿರುವಾಗ ಸಾಹಿತ್ಯದ ಬಗ್ಗೆ ಇದು ಸಾಧ್ಯವಾಗಿಲ್ಲವೇಕೆ? ಇದೆಲ್ಲವನ್ನು ಪ್ರಸ್ತಾಪಿಸಿ ರಶೀದ್‍ ರ ಗೇಲಿಗೆ ನನ್ನನ್ನು ಒಡ್ಡಿಕೊಂಡಿರುವ ಕಾರಣವೆಂದರೆ ಈ ಕೃತಿಯಲ್ಲಿರುವ ಕತೆಗಳನ್ನು ನಾನು ಓದಿದಾಗ ನನಗಾದ ಅನುಭವವನ್ನು ವಿವರಿಸಲು.

ಇಲ್ಲಿರುವ ಕತೆಗಳಿಗೆ ಈ ಅಪೂರ್ವ ಶಕ್ತಿಯಿದೆ. ತಮ್ಮದೇ ಆದ ಸ್ವಾಯತ್ತ ಲೋಕದೊಳಗೆ ಬರಮಾಡಿಕೊಂಡು ಇನ್ನು ನೀವುಂಟು ನಾವುಂಟು ಎನ್ನುವ ದಿವ್ಯ ನಿರ್ಲಕ್ಷ್ಯದ ಗುಣ ಅವುಗಳಿಗಿದೆ. ಎದ್ದು ಕಾಣುವಂಥ ಘನವಾದ ಉದ್ದೇಶಗಾರಿಕೆಯನ್ನು ಅವು ದೂರವಿಡುತ್ತವೆ. ಏಕೆಂದರೆ ಒಂದು ಕತೆಯ ಅರ್ಥ ಅಥವಾ ಉದ್ದೇಶವನ್ನು ಹೇಳಹೊರಟರೆ ಅದಕ್ಕಾಗಿ ಇನ್ನೊಂದು ಕತೆಯನ್ನು ಹೇಳಬೇಕಾಗುತ್ತದೆ. ಈ ಸಂಕಲನದ ಅನೇಕ ಕತೆಗಳ ಒಳಗೆ ಸರಣಿ ಕತೆಗಳಿವೆ. ಹಾಗಾದರೆ ಇವು ಏನನ್ನೂ ಹೇಳುವುದಿಲ್ಲವೆ?

(ಅಬ್ದುಲ್‌ ರಶೀದ್)

ಇಂಗ್ಲೆಂಡ್‍ ನಲ್ಲಿ ಮನೋವೈದ್ಯಕೀಯ/ಮನಃಶಾಸ್ತ್ರ ಓದಿ ಬ್ರಿಟಿಷ್ ಕಾಲದ ಬಂಗಲೆಯಲ್ಲಿ ಒಬ್ಬಂಟಿಯಾಗಿ ಬಾಳುತ್ತಿರುವ ‘ಮನೋಚಿಕಿತ್ಸಕ’ ರಲ್ಲಿ ಕತೆಗಾರ ಕಾಣುವ ಒಂದು ಕೊರತೆಯೆಂದರೆ ‘ಅವರಿಗೆ ನವಿರು’ ಇಷ್ಟವಾಗುತ್ತಿರಲಿಲ್ಲವೆನ್ನುವುದು. ರಶೀದ್‍ ರ ಕತೆಗಾರಿಕೆ ಈ ‘ನವಿರಿನ’ ಬಗ್ಗೆ ಇದೆ. ಹಿಡಿಯ ಹೊರಟರೆ ಬೆರಳ ಮಧ್ಯದಿಂದ ಜಾರಿಹೋಗುವಂಥ ಒಂದು ಭಾವವಲಯವು ಈ ಕತೆಗಾರಿಕೆಯ ವಸ್ತುವಾಗಿದೆ. ಇದು ಘಟನೆಯಾಗಿ ಬರಬೇಕೆಂದಿಲ್ಲ. ಹಿಂದೂಸ್ತಾನಿ ಸಂಗೀತದ ಬಹುಪಾಲು ‘ಸಾಹಿತ್ಯ’ ವಿಲ್ಲದೆ ಸಮಗ್ರ ಭಾವನಾ ಲೋಕವನ್ನು ವಿಹರಿಸುವಂತೆ ಈ ಕತೆಗಳಲ್ಲಿ ಕೂಡ ಸೂಕ್ಷ್ಮವಾದ, ಮಾತಿನ ಆಚೆಗೆ, ಹಿಂದೆ ಇರುವ ಭಾವನೆಗಳಿವೆ.

ಉದಾಹರಣೆಗೆ ಸಲ್ಮಾನ್ ರಶ್ದಿಯ ಮೇಲಿನ ಫತ್ವಾ ಬಗ್ಗೆ ಬಾಪಾನಿಂದ ಕೇಳಿದ ನಿರೂಪಕ ‘ಅವರು ಅವನನ್ನು ಕೊಲ್ಲುವುದಾದರೆ ನಾನು ಜಾತಿಯನ್ನು ಬಿಡುತ್ತೇನೆ’ ಎಂದು ಹಟಮಾಡುತ್ತಾನೆ. ತಾಯಿ ಅವನು ಹಾಗೆ ಮಾಡುವ ಮೊದಲು ತಾನು ಸಾಯುತ್ತೇನೆ ಎಂದು ಶುರುಮಾಡಿಕೊಂಡು ಮಗನನ್ನು ನೀನು ಸಾಯಬಾರದಿತ್ತೆ ಎಂದು ಬೈದು, ತಕ್ಷಣ ಅಯ್ಯೋ ನಾನು ಹೀಗೆ ಅಂದುಬಿಟ್ಟೆ ಎಂದು ದೇವರ ಕ್ಷಮೆ ಕೇಳುತ್ತಾಳೆ. ಅಷ್ಟರಲ್ಲಿ ಒಲೆಯ ಬೆಂಕಿಯನ್ನು ಊದಲು ಉಪಯೋಗಿಸುವ ಓಟೆಯ ಕತೆ ಆರಂಭವಾಗುತ್ತದೆ. ಫತ್ವಾ, ಜಾತಿ ಬಿಡುವುದು ಇವೆಲ್ಲಾ ಹೋಗಿ ಉಳಿಯುವುದು ಪರಸ್ಪರ ಅವರು ಬಯಸುವ ಆತ್ಮೀಯತೆ. ಇಲ್ಲಿ ಏನು “ಆಗುವುದಿಲ್ಲ”, ಆದರೆ ಈ ಚಿಕ್ಕನಾಟಕದ ಹಿಂದೆ ಏನೆಲ್ಲಾ ಇದೆ. ಅದು ನವಿರಾಗಿದೆ.

ರಶೀದ್‍ ರ ಕತೆಗಳು ಹೀಗೆ ಘಟನೆಗಳಿಲ್ಲದೆ ಭಾವಗಳ ವಿಶಿಷ್ಟವಾದ ಲಯಗಾರಿಕೆಯನ್ನು ಹಿಡಿದುಕೊಡುತ್ತಿವೆ. ಒಂದು ರೀತಿಯಲ್ಲಿ ಇದು ಸಾರ್ವಕಾಲಿಕವಾದ ಮನುಷ್ಯ ಭಾವನೆಗಳ ಪ್ರಪಂಚ. ಕಾಮ, ಪ್ರೀತಿ, ಅಪರಾಧಿ ಭಾವ, ಪ್ರಾಯಶ್ಚಿತ್ತ, ನೆನಪು, ಬಾಲ್ಯ ಇವೆಲ್ಲವುಗಳೆ ಇಲ್ಲಿ ಮುಖ್ಯವಾಗಿವೆ. ಬಾಪಾ ಇಲ್ಲದ ರಾತ್ರಿಗಳಲ್ಲಿ ಉಮ್ಮಾ ಹೇಳಿಕಳಿಸಿದಾಗ ಬರುವ ನಬೀಸಾ ಮತ್ತು ನಿರೂಪಕರು ಹಲವಾರು ರಾತ್ರಿ ಕೈ ಕೈ ಕೋಸಿಕೊಂಡು ಮಲಗುವವರು. ಅಂದಿನ ರಾತ್ರಿ ಇಬ್ಬರನ್ನೂ ಮೀರಿದ ಗಳಿಗೆಯಲ್ಲಿ ಒಂದಾಗುತ್ತಾರೆ. ಆದರೆ ಇನ್ನು ಅವಳೆಂದೂ ಬರುವುದಿಲ್ಲವೆನ್ನುವ ನೋವು ಮಾತ್ರ ಉಳಿದುಕೊಳ್ಳುತ್ತದೆ. ನಿರೂಪಕನ ಅಪಾಪೋಲಿತನವನ್ನು ವಿವರವಾಗಿ ಹೇಳುವ ಕತೆಯ ಕೊನೆಗೆ ಹಠಾತ್ತನೆ ಈ ನೋವಿನ ಅರಿವು ಮೂಡಿಬಿಡುತ್ತದೆ.

‘ಹಾಲು ಕುಡಿದ ಹುಡುಗ’ ಕತೆಯಲ್ಲಿ ಕೂಡ ಹದಿನೈದು ಹದಿನಾರರ ಆಸುಪಾಸಿನ ಹುಡುಗ ಹುಡುಗಿಯರ ಮಧ್ಯ ನಡೆದದ್ದನ್ನು ದೊಡ್ಡ ಜಗಳವನ್ನಾಗಿ ಮಾಡಲು ಬಂದು ಮೂವರು ಹೆಂಗಸರು, ಮಗನ ಕೈಯಲ್ಲಿ ಆ ಹುಡುಗಿಗಾಗಿ ಬೆಣ್ಣೆ ಕಳಿಸುವ ಉಮ್ಮಾ ಇವೆಲ್ಲ ಒಂದು ದಿಕ್ಕಿಗೆ ಹೋಗುತ್ತಿರುವಾಗ ಮೊಲೆಯಲ್ಲಿ ಹಾಲು ಬರುತ್ತದೆ ಎಂದು ನಂಬಿಸಿ ಕಚ್ಚಿದ ಹುಡುಗನನ್ನು ಹುಡುಗಿ ‘ಕ್ಷಮಿಸುತ್ತಾಳೆ’, ಕತೆಯ ಬಹುಭಾಗವು ತುಂಟ ಕೃಷ್ಣ ಗೋಪಿಯರ ಕತೆಯ ಶೈಲಿಯಲ್ಲಿದೆ. ಹುಡುಗ ಮತ್ತು ಹುಡುಗಿಯ ನಡುವಿನ ಸಂಧಾನವು ನವಿರಾದ ಅನುಭವವನ್ನು ಹಿಡಿದುಕೊಡುತ್ತದೆ. ಇಂಥ ಕತೆಗಳನ್ನು ಬರೆಯುವುದೆಂದರೆ ತುಂಬಾ risk ತೆಗೆದುಕೊಂಡು ಬರೆದಂತೆ. ಏಕೆಂದರೆ ಒಂದು ಕಡೆಗೆ ಭಾವನೆಗಳ ಮೇಲೆ ಕುಸುರಿ ಮಾಡುವ ಕೆಲಸವನ್ನು ಅಸ್ಪಷ್ಟವಾದ (vague ಎನ್ನುವ ಅರ್ಥದಲ್ಲಿ) ಮತ್ತು ಇದು ಕಾವ್ಯವೆಂದು ಪ್ರದರ್ಶಿಸುವ ಅನೇಕ ಕವಿತೆಗಳು ಮಾಡುತ್ತವೆ. ಅವು ಅಂತಿಮವಾಗಿ, ಭಾವುಕತೆಯನ್ನೇ ಭಾವನೆಯೆಂದು ನಂಬಿರುತ್ತವೆ. ಇಂಥ ಒಂದು ಅತಿಗೆ ಹೋಗುವ risk ಇದ್ದೇ ಇರುತ್ತದೆ. ಸೃಜನಶೀಲತೆಗೆ ಇರಬೇಕಾದ ಗಟ್ಟಿತನವು ಕಳೆದುಹೋಗಿ ಎಲ್ಲಾ ತೆಳುವಾಗಿ ಉಳಿದು ಬಿಡುತ್ತದೆ.

ಈ risk ಅನ್ನು ರಶೀದ್ ಎದುರಿಸುವುದು ಎರಡು ರೀತಿಯಲ್ಲಿ. ಒಂದು, ಅನೇಕ ಪಾತ್ರಗಳ ರಹಸ್ಯಮಯ ಅಥವಾ ಅನೀರೀಕ್ಷಿತ ಮಗ್ಗಲುಗಳನ್ನು ತೆರೆದಿಡುವುದು. ಒಂದು ಖಾಸಗಿ ಬಸ್‍ಸ್ಟಾಂಡ್‍ ನ ಹತ್ತಿರ ನಡೆದು ಬರುತ್ತಿರುವ ಮುದುಕ ಹಾಗೂ ಸುಂದರ ಮುದುಕಿ, ಈ ಅಮರ ಪ್ರೇಮಿಗಳು ನಿರೂಪಕನ ಹದಿಹರೆಯದಲ್ಲಿ ಕಂಡವರು. ಅವಳು ನನಗಾಗಿ ಮೀಸಲಾಗಿರುವವಳು, ಅದರಲ್ಲಿ ನಾಚಿಕೆಯೇನು ಎಂದು ಅವಳು ಮೀಯುವುದನ್ನು ನೋಡಲು ಬರುವ ಮೌಲಾನಾ ಕುಟ್ಟಿ ಅವರನ್ನು ಪ್ರೀತಿಸಿದರೂ ತನ್ನ ಕುರುಡ ಗಂಡನನ್ನು ಬಿಟ್ಟು ಬರಲೊಲ್ಲೆ ಎನ್ನುವ ಆ ಸುಂದರಿಯ ಕತೆ ಈಗ ಒಂದು anti-climax ತಲುಪಿದೆ. ಗೋಣಿಕೊಪ್ಪಲು ಬಸ್‍ಸ್ಟಾಂಡ್ ಹತ್ತಿರ ನಿಂತ ಅವರಿಬ್ಬರು ರಮ್‍ಜಾನ್ ಉಪವಾಸ ಮುರಿಯುವ ಹೊತ್ತಿಗೆ ರಸ್ತೆಯಲ್ಲಿ ನಿಂತು ಎಲ್ಲರನ್ನೂ ತಿಂಡಿಗಾಗಿ ಬೇಡುತ್ತಿದ್ದಾರೆ. ಬಹುಪಾಲು ಕತೆಗಳಲ್ಲಿಯಂತೆ ಇಲ್ಲಿಯೂ ನಿರೂಪಕನು ತನ್ನ ಹೆಸರು, ಗುರುತು ಎಲ್ಲಾ ಬದಲಿಸುತ್ತಾನೆ. ಅವರಿಗೆ ಮುಜುಗರ ಆಗದಿರಲಿ ಎಂದು ಅಥವಾ ಅವರು ಆ ಸ್ಥಿತಿಗಳನ್ನು ದಾಟಿಹೋಗಿರುವ ಕಾರಣಕ್ಕಾಗಿ. ಹೀಗಾಗಿ ರಶೀದ್ ಕತೆಗಳು ಮುಗಿಯುವುದೇ ಇಲ್ಲ. ಯಾಕೆ ಎಂದು ಕೇಳಿದರೆ ಇನ್ನೊಂದು ಕತೆ ಶುರುವಾಗುತ್ತದೆ!

ಹೀಗೆ ಆಗುವುದನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡಿದವಳು ನನ್ನ ಮಗಳು. ಅವಳು ಪುಟ್ಟವಳಾಗಿದ್ದಾಗ ನಾನು ಬಾಲ್ಯದಲ್ಲಿ ಓದದೇ ಇದ್ದ ಮಕ್ಕಳ ಕತೆಗಳನ್ನು ನಾನು ಅವಳಿಗೆ ಹೇಳುತ್ತಿದ್ದೆ. ಆಮೇಲೆ ನೀನು ಕತೆ ಹೇಳು ಎಂದರೆ ಅವಳು ‘ಒಂದು ಊರಿನಲ್ಲಿ ಒಂದು ಕತೆಯಿತ್ತು’ ಎಂದು ಆರಂಭಿಸುತ್ತಿದ್ದಳು. ರಶೀದ್‍ ರಿಗೆ ದೇವರಕೊಲ್ಲಿಯೆನ್ನುವ ಊರಿನಲ್ಲಿ ಪ್ರತಿಸಾರಿಯೂ ಒಂದು ಕತೆ ಸಿಕ್ಕುತ್ತದೆ. ಇನ್ನೊಂದು ರೀತಿಯಲ್ಲಿ ಕೂಡ ಇವು ‘ಒಂದು ಊರಿನಲ್ಲಿ ಒಂದು ಕತೆಯಿತ್ತು’ ಮಾದರಿಯವು. ಆ ಊರಿನ ಹೊರಗೆ ಈ ಕತೆಗಳು ಬದುಕಲಾರವು. ಈ ಕತೆಗಳ ಪ್ರಾಣಪಕ್ಷಿ ಇರುವುದು ಈ ಊರಿನಲ್ಲಿ. ಈ ಊರಿನ ಟಾರ್ ರಸ್ತೆ, ಸುತ್ತಲಿನ ಮೂರು ಮಲೆಗಳು, ನದಿ, ಮ್ಯಾಣ, ಮಸೀದಿ, ಕಾಫೀತೋಟ ಇವುಗಳ ಶಾಶ್ವತತೆಯ ಮಡಿಲಲ್ಲಿ ಮನುಷ್ಯ ಜೀವಿಗಳ ನಿರಂತರವಾದ ಎಡವಟ್ಟುಗಳು.

ಇಲ್ಲಿ ತುಂಬಾ ನೆನಪಾಗುವುದು ಕೋಲಂಬಿಯಾದ ಗಾರ್ಸಿಯಾ ಮಾರ್ಕೇಜ್. ಅವನ ಕತೆಗಳು ಮಾಕಂಡೋ ಎನ್ನುವ ಊರಿನ ಕತೆಗಳು. ಅವುಗಳಿಗೆ ಅದರಾಚೆಗೆ ಬದುಕಿಲ್ಲ. ಆ ಊರಿನ ಕತೆಗಳಾಗಿರುವುದರಿಂದ ಅವು ಎಲ್ಲಾ ಊರಿನ ಕತೆಗಳೂ ಆಗಿವೆ.

ಹೀಗೆಂದ ಕೂಡಲೇ ಓಹೋ ರಶೀದ್ ಮಾರ್ಕೇಜ್ ನ Magic realism ನಿಂದ ಇದೆಲ್ಲಾ ಕಲಿತರೆ ಎನ್ನುವ ಉದ್ಗಾರವು ಬರಬಹುದು. ಇದು ತಪ್ಪು ಎನ್ನುವುದನ್ನು ಸಾಬೀತು ಮಾಡಲು ನಾನು ಒಂದು ಅತ್ಯಂತ ಕ್ರಾಂತಿಕಾರಿ ವಾದವನ್ನು ಇಲ್ಲಿ ಮಂಡಿಸುತ್ತಿದ್ದೇನೆ. ಅದೇನೆಂದರೆ ಸ್ವತಃ ಮಾರ್ಕೇಜ್ ತನ್ನ Magic realism ಅನ್ನು ಉಮ್ಮಾನಿಂದ ಕದ್ದಿದ್ದಾನೆ! ಅಥವಾ ಅನೇಕ ಉಮ್ಮಾಗಳಿಂದ ಕದ್ದಿದ್ದಾನೆ. ಏಕೆಂದರೆ ಜಗತ್ತಿನ ಎಲ್ಲಾ ಸಂಸ್ಕೃತಿಗಳಲ್ಲಿ ಉಮ್ಮಾಗಳ ಒಂದು ಗುಪ್ತ ಸಮಾಜವಿದೆ. ಈ ಉಮ್ಮಾಗಳು ದೇವರ ಕೊಲ್ಲಿಯಿಂದ ಕೊಲಂಬಿಯಾದ ಮಾಕೆಂಡೋವರೆಗೆ ಅಮೇರಿಕದ ದಕ್ಷಿಣ ರಾಜ್ಯವಾದ Ohio ನಿಂದ ಚಿಲಿಯ ಸ್ಯಾಂತಿಯಾಗೋ ವರೆಗೆ ಭಾಷೆಯೇ ಬೇಕಿರದ Telepathy ಮೂಲಕ ಜಗತ್ತಿನ ಎಲ್ಲಾ ಕತೆಗಳನ್ನು ಸೃಷ್ಟಿಸಿಬಿಟ್ಟಿದ್ದಾರೆ. ಮಾರ್ಕೇಜ್, ದೇವನೂರು ಮಹಾದೇವ, ರಶೀದ್ ಇವರೆಲ್ಲರೂ ಈ ಉಮ್ಮಾಗಳ ಕತೆಗಳನ್ನು ಕೃತಿ ಚೌರ್ಯ ಮಾಡಿದ್ದಾರೆ. ರಶೀದ್ ಕತೆಗಳ ಉಮ್ಮಾ ಉಮ್ಮಮ್ಮಳನ್ನು ಹೇಗೆ ಒಂದು ಮಾಡಿನಲ್ಲಿ ಕೂಡಿಡಲಾಯಿತು, ಅವಳು ಅಲ್ಲಿಂದ ಹೇಗೆ ಹಾರಿಹೋದಳು ಎಂದು ಆಢಂಟಿಕ್ ಆಗಿ ವಿವರಿಸುತ್ತಾಳೆ.

ಬಾಪಾ ಇಲ್ಲದ ರಾತ್ರಿಗಳಲ್ಲಿ ಉಮ್ಮಾ ಹೇಳಿಕಳಿಸಿದಾಗ ಬರುವ ನಬೀಸಾ ಮತ್ತು ನಿರೂಪಕರು ಹಲವಾರು ರಾತ್ರಿ ಕೈ ಕೈ ಕೋಸಿಕೊಂಡು ಮಲಗುವವರು. ಅಂದಿನ ರಾತ್ರಿ ಇಬ್ಬರನ್ನೂ ಮೀರಿದ ಗಳಿಗೆಯಲ್ಲಿ ಒಂದಾಗುತ್ತಾರೆ. ಆದರೆ ಇನ್ನು ಅವಳೆಂದೂ ಬರುವುದಿಲ್ಲವೆನ್ನುವ ನೋವು ಮಾತ್ರ ಉಳಿದುಕೊಳ್ಳುತ್ತದೆ.

ಸಾಕವ್ವನು ಯಮಧರ್ಮರಾಯನನ್ನು ತಹಬಂದಿಗೆ ತಂದ ವರ್ಣನೆ ಹಾಗೂ ರಶೀದ್‍ ರ ಕತೆಗಳ ಆಕರ್ಷಕ ಭಾಗಗಳು ಈ ಉಮ್ಮಾಗಳು ತಾತಾಗಳ ಮಾಂತ್ರಿಕ ಕತೆಗಳಲ್ಲಿದೆ. ಅವರು ತಮ್ಮ ಕತೆಗಳ ಮೂಲಕ ಒಂದು ಪರ್ಯಾಯ ಸೃಷ್ಟಿಯನ್ನೇ ಮಾಡುತ್ತಾರೆ. ಇದರಲ್ಲಿ ಸೈತಾನ್, ಇಬ್‍ಲಿಸ್, ಜಿನ್‍ ಗಳು, ಪಡೆದವನು ಇವರೆಲ್ಲ ಇದ್ದಾರೆ. ಒಂದು ರಾತ್ರಿಯ ಸಮಯ ಎಲ್ಲ ಮನುಷ್ಯರ ಆಯಸ್ಸು ಅಲ್ಲಿ ಮೇಲೆ ನಿರ್ಧಾರಿತವಾಗುತ್ತದೆ. ಗಂಡ ಹೆಂಡಂದಿರು ಈ ಲೋಕದಲ್ಲಿ ಕೂಡಲಾಗದಿದ್ದರೂ ವಿಶಿಷ್ಟ ಹೆಸರಿನ ಜನ್ನತ್ ನಲ್ಲಿ ಕೂಡಬಹುದಾಗಿದೆ. ಇದು ಬಹು ಸೂಕ್ಷ್ಮವಾದ ವಿಶ್ವದ ಕಲ್ಪನೆ. (Cosmos) ಇದರಲ್ಲಿ ತಪ್ಪಿನಡೆದರೆ ಶಿಕ್ಷೆ ಇದೆ. ನಾನು ಆಗಲೇ ಪ್ರಸ್ತಾಪ ಮಾಡಿದ ಸಲ್ಮಾನ್ ರಶ್ದಿ ಕುರಿತ ಕತೆಯ ಕೊನೆಯಲ್ಲಿ ಮನೆಗೆ ಬಂದ ಬಾಪಾ ಉಮ್ಮಾಳಿಗೆ ಹೇಳುತ್ತಾರೆ. ಅವನನ್ನು ಕೊಲ್ಲುವುದಿಲ್ಲವಂತೆ, ಅವನು ಕ್ಷಮೆ ಕೇಳಿದರೆ ಮಾಫ್ ಮಾಡಿಬಿಡುತ್ತಾರಂತೆ. ಅದಕ್ಕೆ ಉಮ್ಮಾಳ ಉತ್ತರ ಅದ್ಭುತವಾಗಿದೆ. ‘ಇವರಾರು ಮಾಫ್ ಮಾಡುವುದಕ್ಕೆ. ಅಲ್ಲಾಹು ಮಾತ್ರ ಮಾಫ್ ಮಾಡಬಲ್ಲʼ. ಇಂಥ ಉಜ್ವಲವಾದ ನೈತಿಕ ನಿರ್ಣಯದ ಎದುರಿಗೆ ರಶ್ದಿಯನ್ನು ಕೊಂದರೆ ಜಾತಿ ಬಿಡುತ್ತೇನೆ ಎಂದ ನಿರೂಪಕನ ಬಾಲಿಷವಾದ ವಿಚಾರವು ಲಾಗಾ ಹೊಡೆದುಬಿಡುತ್ತದೆ. ಇದು ಕತೆಯ ಶ್ರೇಷ್ಠ ಭಾಗವಾಗಿದೆ. ಈ ಗಲಭೆಕೋರ ರಶ್ದಿ ಸಿಕ್ಕರೆ ಅವನ ಕುಂಡೆಯ ಮೇಲೆ ಬರೆಹಾಕಲು ಸಿದ್ಧಳಿದ್ದ ಉಮ್ಮಾಳ ಈ ಮಾತು ಫತ್ವಾ ನೀಡಿದವರನ್ನು, ಕೃತಿಯನ್ನು ಬಹಿಷ್ಕಾರ ಮಾಡಿದವರನ್ನು ಚಿಂದಿ ಮಾಡಿಬಿಡುತ್ತದೆ.

ಈ ಕತೆಗಳು ಹುಡುಕುತ್ತಿರುವುದು ಮನುಷ್ಯರೆನ್ನುವ ಈ ಮಹಾ ಎಡವಟ್ಟು ಜೀವಿಗಳಲ್ಲಿ ಎಲ್ಲೋ ಒಂದು ತಿಳುವಳಿಕೆಯ ನೆಲೆಯನ್ನು. ನೀಲಿ ಬುರ್ಖಾ ಹಾಕಿಕೊಂಡು, ತಮ್ಮನ ಮೂಲಕ ಗಿರಾಕಿ ಕುದುರಿಸಿಕೊಳ್ಳುವ ಹೆಂಗಸು ದಿನದ ಕೊನೆಗೆ ಬಂದು ಪಂಡಿತ ಹಾಜಿ ಅವರಿಂದ ತಂಬಾಕನ್ನು ಇಸಿದುಕೊಂಡು ಹೋಗುತ್ತಾಳೆ. ಅವಳ ಕೊಲೆಯಾಗಿದೆಯೆಂದು ಕೇಳಿಬಂದು, ಆಮೇಲೆ ಆ ಕೊಲೆಯಾದ ದೇಹ ಹೆಣ್ಣಿನದೇ ಅಲ್ಲವೆಂದು ತಿಳಿದು Post-moterm ಗಾಗಿ ಕಾಯುವ ಪಂಡಿತ ಹಾಜಿ ಅವರು ‘ಅಂತೂ ತನ್ನ ಕೊನೆಯ ಹೆಂಗಸು ಕೊಲೆಯಾಗಲಿಲ್ಲ’ ವೆನ್ನುತ್ತಾರೆ. ತನ್ನ ಗಂಡ ಇನ್ನೊಬ್ಬಳನ್ನು ಕರೆದುಕೊಂಡು ಬಂದಾಗ ತನ್ನದೇ ಬೇರೆ ಗುಡಿಸಲಲ್ಲಿ ವಾಸಮಾಡಿದರೂ ರಾತ್ರಿಯೆಲ್ಲಾ ಅವನಿಗಾಗಿ ಕಾಯುವ ಹೆಂಡತಿ.

ಈ ವಿಕ್ಷಿಪ್ತ ಮನುಷ್ಯ ಜೀವಿಗಳಲ್ಲಿ ಹರಿದು ಬರುವ ದುಃಖ, ಪಶ್ಚಾತ್ತಾಪ, ನೋವು, ನೈತಿಕತೆ ಇವೆಲ್ಲವುಗಳ ಮೂಲವಾದರೂ ಏನು ಎಂದು ರಶೀದ್‍ ರ ಕತೆಗಳು ಕೇಳಿ, ವಿಸ್ಮಯದಲ್ಲಿ ನಿಂತುಬಿಡುತ್ತವೆ. ತನ್ನನ್ನು ತಬ್ಬಿ ಮುದ್ದಾಡುವ ಸಾರಾ ತಾತಳು ತನ್ನ ತಾಯಿಯೇ ಎಂದು ತಳಮಳದಲ್ಲಿರುವವನಿಗೆ ಅವಳು ಹೇಳುವ ಕತೆಯ ಕರಿಯ ಹುಡುಗ ತನ್ನ ತಂದೆ ಎಂದು ಗೊತ್ತಾಗುತ್ತದೆ. ಮಾಜಿ ಯೋಧನಾದ ಕೇಶವನ್ ನಾಯರ್ ಪ್ರತಿನಿತ್ಯವೂ ಶೀಲಾ ಟೀಚರ್‍ ಗೆ ಪ್ರೇಮಪತ್ರಗಳನ್ನು ಬರೆಯುತ್ತಾನೆ. ಅವುಗಳನ್ನು ಓದಿದ ಅವಳ ಸೋದರ ಮಾವ ಉದ್ರೇಕಿತನಾಗಿ ಅವಳನ್ನು ಪ್ರೀತಿಸುತ್ತಾನೆ. ಆನಂತರ ಕಾಣೆಯಾಗಿದ್ದ ಟೀಚರ್ ಗಂಡ ವಾಪಸ್ಸು ಬಂದು ಹೆಂಡತಿಯ ಸೋದರ ಮಾವನ ಬಗ್ಗೆ ಗೊತ್ತಿದ್ದರೂ ಅವರ ಜೊತೆ ಸುಖವಾಗಿರುತ್ತಾನೆ. ಕೇಶವನ್ ನಾಯರ್‍ ನ ಶವ ಊದಿಕೊಂಡು ಅದನ್ನು ಕೆಳಗೆ ತರುವುದೇ ಕಷ್ಟವಾದ ಮೇಲೆ ನಡೆಯುವ ಈ ಘಟನೆಗಳು ಇನ್ನೂ ಏನನ್ನೋ ಹೇಳುತ್ತವೆ. ಹೀಗೆ ವಾಚ್ಯವನ್ನು ಮೀರಿದ ಸೂಚ್ಯ ಸಂಗತಿಗಳೇ ಜಾಸ್ತಿ.

ಇದು ಕೇವಲ ಒಂದು ನಿರೂಪಣೆಯ ತಂತ್ರವಾದರೆ ಅದು ಮುಖ್ಯವಲ್ಲ. ಈ ಕತೆಗಳು ಸೂಚ್ಯವಾಗಿ ಹೇಳುವುದೆಂದರೆ ನಮ್ಮ ಗ್ರಹೀತವಾದ ತಿಳುವಳಿಕೆಗಳು ತಪ್ಪಾಗಿದೆಯೆಂದು. ಯಾರು ಫಿರ್ಯಾದುದಾರರು ಯಾರು ಆರೋಪಿಗಳು ಎಂದು ಗೊತ್ತಾಗದೇ ಇರುವ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ಇದೆಲ್ಲವು ಅಷ್ಟು ಸರಳವೂ ಅಲ್ಲ. ತನ್ನ ಗಂಡನು ತನ್ನ ತಂಗಿಯನ್ನು ನಿಖಾ ಮಾಡಿಕೊಂಡು ಬಂಡಿಯಲ್ಲಿ ಕರೆದು ತಂದರೆ ಮೊದಲ ಹೆಂಡತಿಗೆ ಅವಳು ತುಂಬಾ ಚಿಕ್ಕವಳಲ್ಲವೇ ಎನ್ನುವುದೇ ಮುಖ್ಯ. ಇಬ್ಬರಲ್ಲಿ ಯಾರ ಜೊತೆಗೆ ಮಲಗುವುದು ಎನ್ನುವುದು ಎಂದು ಸಮಸ್ಯೆಯಾದಾಗಾ ಸಿದೀಬ್ಯಾರಿ ಅವರು ಕೊನೆಗೆ ತಮ್ಮ ಅಂಗಡಿಯಲ್ಲಿ ಮಲಗತೊಡಗುತ್ತಾರೆ. ಹೀಗೆಯೆ ಬಹುಪಾಲು ಕತೆಗಳಲ್ಲಿ ಅನಿರೀಕ್ಷಿತವಾದ ನಡವಳಿಕೆಗಳು ಮತ್ತು ರಹಸ್ಯಮಯ ಕತೆಗಳು ಸ್ತ್ರೀಕೃತ-ವಾದ ನೈತಿಕ ಪರಿಕಲ್ಪನೆಗಳನ್ನು ಪರೀಕ್ಷೆಗೆ ಒಡ್ಡುತ್ತವೆ. ಕತೆ ಇಲ್ಲಿಗೆ ಮುಗಿಯುವುದಿಲ್ಲ. ಅದು ಆರಂಭವಾಗುವುದೇ ಸತ್ತು ಹೋಗಿರುವ ಮೂವರ ಗೋರಿಗಳ ವರ್ಣನೆಯಿಂದ. ಕತೆಯ ಕೊನೆಗೆ ಆ ಮೂವರು ತನ್ನ ಕತ್ತು ಹಿಸುಕುತ್ತಿದ್ದಾರೆಂದು ಗೋಳಿಡುವ ಮರಿಯಮ್ಮ ಪ್ರಾಣನೀಗುತ್ತಾಳೆ.

(ಡಾ. ರಾಜೇಂದ್ರ ಚೆನ್ನಿ)

ಬಹುಪಾಲು ಕತೆಗಳು ಯಾರ ಕಣ್ಣಿಗೂ ಬೀಳದ ಕಾಡು, ಮಲೆಗಳ ನಡುವಿನ ಅತಿ ಸಾಮಾನ್ಯ ಊರುಗಳು, ಯಾವುದೋ ಒಂದು ಗೂಡಂಗಡಿ ಇವುಗಳ ವರ್ಣನೆಯಿಂದ ಆರಂಭವಾಗುತ್ತವೆ. ಈ ಸಾಮಾನ್ಯತೆಯ ಒಡಲೊಳಗೆ ಇರುವ ಮನುಷ್ಯ ಸಂಬಂಧಗಳ ಸಂಕೀರ್ಣತೆಯ ಬಗೆಗಿನ ಕುತೂಹಲವೇ ಕತೆಗಳಿಗೆ ಕಾರಣವಾಗಿದೆ. ಹೀಗಾಗಿ ಕತೆಗಳಿಗೆ ಅಚ್ಚರಿಯ, ರಹಸ್ಯಮಯತೆಯ ಗುಣವಿದೆ.

ಈ ಕತೆಗಳಲ್ಲಿ ಕೆಲವು ಬಹುಕಾಲ ಬಾಳಿ ನಮ್ಮನ್ನು ಕೆದಕುವಂಥವು. ಆರಂಭದ ದಿನಗಳಲ್ಲಿಯೇ ರಶೀದ್ ಬರೆದ ‘ಮೂಸಾ ಮೊಯಿಲಿಯವರ ಮುದ್ದಿನ ಮಗಳು ಮತ್ತು ಹೆಲಿಪೆಟ್ಟರ್ ಎಂಬ ದುಷ್ಟಜಂತು’ ಕತೆಯು ಕನ್ನಡದ ಶ್ರೇಷ್ಟ ಕತೆಗಳಲ್ಲಿ ಒಂದಾಗಿರುವುದಕ್ಕೆ ಕಾರಣವೆಂದರೆ ತುಂಬಾ ಸಹಜವಾಗಿ ಅದು ಪಡೆದುಕೊಳ್ಳುವ ಸಾಂದ್ರತೆ ಮತ್ತು ಬಂಧ. ಮರಗಳಿಗೆ ಕೀಟನಾಶಕವನ್ನು ಸಿಂಪಡಿಸಲು ಬಂದ ಹೆಲಿಕಾಪ್ಟರ್ ಪುರಾಣಸದೃಶವಾದ ಅಚ್ಚರಿಯ ವಸ್ತುವಾಗಿಬಿಡುತ್ತದೆ. ಅದರ ‘ಡ್ರೈವರ್’ ನನ್ನೇ ಮದುವೆಯಾಗುತ್ತೇನೆ ಎಂದು ನಿರ್ಧರಿಸಿದ ಅಮೀನಾ ಬೀಬಿಯು ಅಮದ್ ಕುಟ್ಟಿಯ ಕಾಮದಾಸೆಗೆ ಬಲಿಯಾಗುತ್ತಾಳೆ. ಅವನನ್ನೇ ಅಳಿಯನನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದ ಆಕೆಯ ತಂದೆ ಇದು ಗೊತ್ತಿರದೆ ಖುಷಿಯಾಗಿದ್ದಾರೆ. ‘ಹೆಲಿಪೆಟ್ಟರು’ ಸಿಂಪಡಿಸಿದ ಕೀಟನಾಶಕದಿಂದಾಗಿ ಮೀನುಗಳು ಸತ್ತು ಅವನ್ನು ಕೊಡಲಿಕ್ಕೆ ಬಂದ ಅಮದ್ ಕುಟ್ಟಿ ಅಮೀನಾಬೀಬಿಯನ್ನು ಆಸೆಪಡುವುದು, ಮೀನಿನ ಕರುಳನ್ನು ತಿಂದ ಅವಳ ಮುದ್ದು ಬೆಕ್ಕು ಪೂಚೆಕುಟ್ಟಿ ಸಾವಿಗೀಡಾಗುವುದು ಇವೆಲ್ಲವು ಹದವಾಗಿ ಹೆಣಿಗೆಯಾಗುತ್ತವೆ.

ಆ ಹೆಲಿಪೆಟ್ಟರು ಆನಂತರ ತಂದ ಭೀಕರ ದುರಂತಗಳು ಕತೆಯ ಭಾಗವಾಗಿಲ್ಲದಿದ್ದರೂ ಆ ಮುಗ್ಧ ಹುಡುಗಿಯ ಅತ್ಯಾಚಾರ ಹಾಗೂ ಬೆಕ್ಕಿನ ಸಾವು ದುರಂತದ ಕಪ್ಪು ನೆರಳನ್ನು ದಟ್ಟವಾಗಿಸುತ್ತವೆ. ಮುಗ್ಧತೆಯ ನಾಶದ ಕಥಾವಸ್ತು ಸಶಕ್ತವಾದ ರೂಪವನ್ನು ಪಡೆಯುತ್ತದೆ. ಅಲ್ಲದೆ ಸರ್ವದಯಾಮಯನಾದ ಅಲ್ಲಾಹುವು ಮನುಕುಲದ ತಂದೆತಾಯಿಯರಾದ ಆದಂಪಾಪಾ ಮತ್ತು ಅವ್ವಾಬೀವಿಯರನ್ನು ಸೃಷ್ಟಿಸುವ ಜೊತೆಗೆ ಹೆಲಿಪೆಟ್ಟರ್‍ನ್ನೂ ಸೃಷ್ಟಿಸಿದನೇ ಎಂದು ಅಮೀನಾಬೀಬಿ ಕೇಳುತ್ತಾಳೆ. ವಸ್ತು ಇಷ್ಟು ಘನವಾದರೂ ಕತೆ ಅದನ್ನು ಹಗುರವಾಗಿ ಎತ್ತಿಕೊಂಡು ನಿರ್ವಹಿಸುವ ರೀತಿ ಕತೆಯ ಯಶಸ್ಸಿಗೆ ಕಾರಣವಾಗಿದೆ.

ಈ ಹಿಂದೆ ಹೇಳಿದಂತೆ ರಶೀದ್‍ ರ ಕತೆಗಳು ಬಾಲ್ಯ ಹಾಗೂ ನೆನಪುಗಳ ಬಗ್ಗೆ ಇವೆ. ಅದರಲ್ಲೂ ವಾಸ್ತವವನ್ನು ಅತಿವಾಸ್ತವದ ಭಾಗವಾಗಿ ನೋಡುವಂತೆ ಮಾಡುವ ಬಾಲ್ಯದಲ್ಲಿ ಕೇಳಿದ ಕತೆಗಳನ್ನು ಆಧರಿಸಿವೆ. ಬಾಲ್ಯದಲ್ಲಿ ಕೇಳಿದ ಕತೆಗಳ ಮಾಂತ್ರಿಕತೆಯು ಈ ಕತೆಗಳಿಗೆ ಹರಿದುಬಂದಿದೆ. ಇದು ವಿಶ್ವವನ್ನು, ಮನುಷ್ಯರನ್ನು, ನೈತಿಕತೆಯನ್ನು ಪರಿಭಾವಿಸುವ ಒಂದು ಲೋಕದೃಷ್ಟಿಗೆ ಸಂಬಂಧಪಟ್ಟಿರುವುದು. ಕೇವಲ ಮಾಂತ್ರಿಕ ವಾಸ್ತವವಾದಿ ಶೈಲಿಯೆಂದು ಅದನ್ನು ನೋಡಲಾಗದು. ಅದನ್ನು ‘ಅನ್ಯ’ಗೊಳಿಸದೆ ಸಹಜವೆನ್ನುವಂತೆ ಕತೆಗಳ ಅವಿನಾ ಭಾಗವನ್ನಾಗಿ ಮಾಡಿದ್ದು ರಶೀದ್‍ ರ ಸಾಧನೆಯಾಗಿದೆ.

ಇನ್ನು ಕೊನೆಗೆ ಒಂದಿಷ್ಟು ಅಸಮಾಧಾನದ ಅಥವಾ ವಿಷಾದದ ಮಾತುಗಳು. ಅಪ್ಪಟ ಕತೆಗಾರನ ಉನ್ನತ ಪ್ರತಿಭೆಯ ರಶೀದ್ ಇನ್ನೂ ಹೆಚ್ಚು ಬರೆಯಬೇಕಿತ್ತು. ಅಲ್ಲದೆ ಗಂಭೀರವಾಗಿರಬಾರದು ಎನ್ನುವುದನ್ನೇ ಒಂದು ideology ಮಾಡಿಕೊಳ್ಳಬಾರದು. ಏಕೆಂದರೆ ಈ ಕಾರಣದಿಂದ ಕೆಲವು ಕತೆಗಳು ತೆಳುವಾಗಿ, ಅಸಮಗ್ರವಾಗಿ ಉಳಿದುಬಿಟ್ಟಿವೆ. ಇಂಥ ಅದ್ಭುತವಾದ ಗದ್ಯವನ್ನು ‘ಪಡೆದವನೇ’ ತಮಗೆ ದಯಪಾಲಿಸಿದ್ದಾನೆನ್ನುವುದು ರಶೀದ್‍ ರಿಗೆ ಗೊತ್ತಾಗಿರಬೇಕು. ಅದನ್ನು ಇನ್ನೂ ಹೆಚ್ಚಿನ ಶ್ರದ್ಧೆ ಹಾಗೂ ನಂಬಿಕೆಯಿಂದ ಇನ್ನೂ ತೆರೆಯದ ಅನುಭವಲೋಕಗಳ ಶೋಧಕ್ಕಾಗಿ ಅವರು ಬಳಸುವಂತಾಗಲಿ.

 

(ಕೃತಿ: ಹೊತ್ತು ಗೊತ್ತಿಲ್ಲದ ಕಥೆಗಳು (ಕಥಾ ಸಂಕಲನ), ಲೇಖಕರು: ಅಬ್ದುಲ್‌ ರಶೀದ್‌, ಪ್ರಕಾಶಕರು ಅನುಗ್ರಹ ಪ್ರಕಾಶನ, ಬೆಲೆ:220/-)