‘ಕೊರೊನಾ’ ದಿನಗಳು

ಮಧ್ಯಾಹ್ನದ
ಬೋರಲುಬಿದ್ದ
ಕ್ಷಣಗಳು
ನನ್ನನ್ನು ಸಾಯಿಸುತ್ತಿವೆ
ಎನ್ನುವುದಕ್ಕಿಂತ
ಗುಟುಕು ಜೀವವನ್ನು
ಸಲಹುತ್ತಿವೆ..

ಜೀರುಂಡೆಗಳ
ಸಂಗೀತ ಕಛೇರಿಗೆ
ಇಂಥದೇ
ಸಮಯವಿಲ್ಲ;
ನೆರಳು ಬಿಡಿಸುವ
ಚಿತ್ರ ಜಗತ್ತಿನ ಯಾವ
ಚಿತ್ರಕಾರನೂ ಬಿಡಿಸದೇ
ಉಳಿದ ಕಲಾಕೃತಿಯಂತೆ
ಇಲ್ಲೇ ವಿರಮಿಸಿದೆ..

ಪಾಳುಬಿದ್ದ ಈ
ಹಾಳು ಶಹರವೀಗ
ದೀರ್ಘ ನಿಟ್ಟುಸಿರಿಟ್ಟಿದೆ;
ಗೋರಿಯೊಳಗಿನ
ಮೌನ ಕೇಳಿಸುತ್ತಿದೆ;
ದಫನವಾಗದ ನೆನಪಿನ
ರಾತ್ರಿಗಳು ನಗ್ನವಾಗಿ
ನರ್ತಿಸುತ್ತಿವೆ..

ಸವೆಯದ
ಚಪ್ಪಲಿಗಳೀಗ
ನವ ವಧುವರರಂತೆ
ಬಿಟ್ಟಿರಲಾರದಂತೆ
ಬಾಗಿಲಲ್ಲೇ ಸುಖಿಸುತ್ತಿವೆ;
ಮೂಲೆಯಲ್ಲಿಟ್ಟ
ಗುಲಾಬಿ ಗಿಡವೀಗ
ಮೊಗ್ಗು ಕಚ್ಚಿ ಚಿಗುರಲಾರಂಭಿಸಿದೆ;
ನಿದ್ರಾಹೀನ ರಸ್ತೆಗಳು
ಸ್ವಚ್ಛಂದವಾಗಿ
ನಿದ್ರೆಹೋಗಿವೆ..

ವಟಗುಟ್ಟುವ ನಿನ್ನ
ಮಾತುಗಳ
ಪ್ರತಿಧ್ವನಿಯಷ್ಟೇ ಅನುರಣಿಸುತ್ತಿದೆ;
ತುಟಿಯನ್ನು
ಒತ್ತಿದ
ಮೌನದ ಮಹಲಿನಲ್ಲಿ
ನಿನ್ನನ್ನು
ಸ್ಪರ್ಶಿಸದ ಈ ದಿನಗಳು
ನನ್ನನ್ನು ನಿಜ ಮನುಷ್ಯನನ್ನಾಗಿಸಿವೆ…!

 

ಅಭಿಷೇಕ್ ವೈ.ಎಸ್ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ.
‘ಕಣ್ಣಿಲ್ಲದ ಕತ್ತಲರಾತ್ರಿ’ ಇವರ ಪ್ರಕಟಿತ ಕವನ ಸಂಕಲನ
ಕಥೆಗಳನ್ನು ಬರೆಯುವುದು,ಕವಿತೆಗಳನ್ನು ಬರೆಯುವುದು, ಛಾಯಾಗ್ರಹಣ, ತಿರುಗಾಟ ಇವರ ಹವ್ಯಾಸಗಳು