ಮೌನದ ಅಂತಿಮಯಾತ್ರೆ

ನಿನ್ನ ಮೌನ
ಗ್ರಹಿಸುವವರಾದರೂ
ಇದ್ದಾರೆ;
ನನ್ನ ಮೌನ
ಗ್ರಹಿಸುವವರು
ಯಾರೂ ಇಲ್ಲವೆಂದು
ಹೇಗೆ ಹೇಳಲಿ?

ಇಳಿಸಂಜೆಯ
ಬಿಡುವು ಕೊಡದೇ
ಸೋರುವ ಮಳೆ
ನೆನಪುಗಳನ್ನಾದರೂ
ಕೊಚ್ಚಿ ಹೋಗಬಾರದಿತ್ತೇ ಎನಿಸುತ್ತದೆ.
ನಗ್ನರಾತ್ರಿಗಳ ಬೆವರು
ಉಸಿರುಗಟ್ಟಿ ಸಾಯಿಸಬೇಕಿತ್ತು;
ನೆತ್ತರ ದಾಹದ ರಾತ್ರಿಗಳು
ಮತ್ತೆ ಬೇಡವೆನಿಸುತ್ತದೆ;
ಇರಿದು ಇರಿದೂ ಕೊಲ್ಲುತ್ತಿದ್ದ
ನಟ್ಟಿರುಳ ನಿಷ್ಕರುಣ ಚಳಿಯನ್ನು
ನೀಗಿಸಿದ್ದ ನಿನ್ನ ಬೆಚ್ಚನೆಯ
ಉಷ್ಣಾಂಶ ಸಾಕೆನಿಸುತ್ತಿದೆ..

ನಕ್ಷತ್ರಗಳೆ ಇಲ್ಲವಾದಮೇಲೆ
ಬರೀ ಖಾಲಿ ಆಕಾಶದ
ಮುಖವನ್ನು ಹೇಗೆ ನೋಡಲಿ?
ತುಕ್ಕು ಹಿಡಿದು ಶಿಥಿಲಗೊಂಡ
ಸೇತುವೆಯ ಮೇಲೆ ನಿನ್ನ ಊರಿಗೆ
ಹೆಜ್ಜೆಯನ್ನು ಇಕ್ಕುವುದಾದರೂ ಹೇಗೆ?
ಚಂದದಪಾರಿಜಾತವೇ
ನೆಲಕ್ಕೆ ಮುಖಮಾಡಿ
ಬಿದ್ದ ಮೇಲೆ
ಪಾರಿಜಾತದಂಥ ಈ ಸಂಕಟವ
ಹೇಗೆ ಹಾಡಲಿ?

ಮೌನದ
ಅಂತಿಮಯಾತ್ರೆಯಲ್ಲಿ
ಕಂಬನಿಸುರಿಸುವ
ಮಳೆ
ನನ್ನ ಕಣ್ಣೀರನ್ನು
ಕಾಣದಂತೆ ಮಾಡಿದ್ದಕ್ಕೆ
ನಾನು ಸದಾ ಕೃತಜ್ಞ..

 

ಅಭಿಷೇಕ್ ವೈ.ಎಸ್ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ.
‘ಕಣ್ಣಿಲ್ಲದ ಕತ್ತಲರಾತ್ರಿ’ ಇವರ ಪ್ರಕಟಿತ ಕವನ ಸಂಕಲನ
ಕಥೆಗಳನ್ನು ಬರೆಯುವುದು,ಕವಿತೆಗಳನ್ನು ಬರೆಯುವುದು, ಛಾಯಾಗ್ರಹಣ, ತಿರುಗಾಟ ಇವರ ಹವ್ಯಾಸಗಳು