ಧರ್ಮ ಜೋಲಿ ಹೊಡೆಯಲಿ ಬಿಡು ದೇವರು ನನ್ನಂತಾಗುತ್ತಾನೆ ಮಧುಶಾಲೆಯಲ್ಲಿ ಸಾಕಿ
ಹೊಟ್ಟೆಯ ಹಸಿವಿಗಿಂತ ಧರ್ಮದ ಹಸಿವು ಬಲು ವಿಷಕಾರಿ ಜಗದಲ್ಲಿ ಸಾಕಿ

ಧರ್ಮದ ಹಂಗಿನ ಬದುಕಿಗಿಂತ ಇಲ್ಲಿ ಸಾಕಿಯ ಸತ್ಸಂಗವೆ ಲೇಸು
ಸನ್ಮಾರ್ಗ ತೋರುವ ಜ್ಞಾನದ ಅಮಲನ್ನು ತುಂಬಿಕೊಡು ಮಧುಬಟ್ಟಲಲ್ಲಿ ಸಾಕಿ

ಪ್ರೇಮವೆ ದೇವರು ಮಧುಶಾಲೆಯೆ ದೇಗುಲ ಮದಿರೆಯ ಧ್ಯಾನವೆ ಸ್ವರ್ಗ
ಧರ್ಮಗುರು ಬೋಧಿಸುವ ಯಾವುದೇ ಸ್ವರ್ಗವಿಲ್ಲ ಮೇಲಿನ ಆಗಸದಲ್ಲಿ ಸಾಕಿ

ನೀರನ್ನು ಸವಿ ದ್ರಾಕ್ಷರಸವಾಗಿಸಿದ ಮಹಾತ್ಮರು ಮತ್ತೇ ಮತ್ತೇ ಜನಿಸಲಿ
ಶರೀಫರಿಗೆ ಮಧುಶಾಲೆಯೆ ಕಂಡಿತು ತಾಯಿ ದ್ಯಾಮವ್ವನ ಮೂಗುತಿಯಲ್ಲಿ ಸಾಕಿ

ಎಲ್ಲರ ಸಾವು ಒಂದೆ ಹೆಗಲ ಮೇಲೆ ಊರ ಹೊರಗಿನ ಸ್ಮಶಾನದಲಿ
“ಅಭಿ”ಗೆ ಯಾರು ಭೇದ ಮಾಡಲಿಲ್ಲ ಮಧುಶಾಲೆಯ ದರ್ಶನ ಕೂಟದಲ್ಲಿ ಸಾಕಿ

 

ಅಭಿಷೇಕ್ ಬಳೆ ರಾಯಚೂರು ಜಿಲ್ಲೆಯ ಮಸರಕಲ್ ಊರಿನವರು.
ಬಿ.ಎಸ್ಸಿ, ಬಿ.ಎಡ್ ವ್ಯಾಸಂಗ ಮಾಡಿದ್ದಾರೆ
ಓದು ಮತ್ತು ಕವಿತೆ ರಚನೆ ಇವರ ಹವ್ಯಾಸಗಳು