Advertisement
ಅಮ್ಮನ ದ್ಯಾವ್ರು: ಸುಮಾ ಸತೀಶ್ ಸರಣಿ

ಅಮ್ಮನ ದ್ಯಾವ್ರು: ಸುಮಾ ಸತೀಶ್ ಸರಣಿ

ಅವು ಈಗಿನ್ ಕಾಲುದ್ ಗುಲಾಬಿ ಅಲ್ಲ್ ಕಣೇಳಿ. ರೋಜಾ ಬಣ್ದವು. ತೆಳ್ಳುಗಿರಾ ರೆಕ್ಕೆಗ್ಳು. ಬಲ್ ನಾಜೂಕು. ಗಟ್ಟಿಯಾಗಿ ಒತ್ತಿದ್ರೆ ಬಾಡೋಗೋಂತವು. ಚಿಕ್ಕದಾದ್ರೆ ಐದು ಪೈಸಾ. ದೊಡ್ಡವು ಹತ್ತು ಪೈಸಾ. ಸ್ಯಾನೇ ದೊಡ್ಡವು ನಾಕಾಣೆ. ಮನ್ಯಾಗೆ ಇರಾ ಚಿಲ್ರೆ ಹುಡುಕೀ ಹುಡುಕೀ ಅಮ್ಮ‌ ರಾತ್ರೀನೇ ರೆಡಿ ಇಕ್ಕಿರ್ತಿತ್ತು. ಮದ್ಲೇ ಗೊತ್ತಿರ್ತಿತ್ತಲ್ಲ. ಆದ್ರೂ ಸತ ಗುಲಾಬಿ ಸ್ಯಾನೆ ಇದ್ರೆ ಆಸೆ. ಅವುನ್ ತಾವ ಕೊಸರಾಡೋದು. ಇನ್ನೊಂದು ಹಾಕು, ಇದು ಚಿಕ್ದು, ಇದು ರೆಕ್ಕೆ ಕಿತ್ತೋಗದೆ, ಬಾಡೋಗದೆ, ಸಿಕ್ಕಾಪಟ್ಟೆ ಕಾಸು ಯೋಳ್ತೀಯಾ. ನಾಳಿಂದ ಬ್ಯಾಡಾಕ್ಕೆ ಬ್ಯಾಡ ಇಂಗೆ ನಮ್ಮಮ್ಮುನ್ ಕೂಗಾಟ. ಅವ್ನೂ ಕಮ್ಮಿ ಇರ್ತಿರ್ಲಿಲ್ಲ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ ಬರಹ ನಿಮ್ಮ ಓದಿಗೆ

ಸಾಮಾನ್ಯುಕ್ಕೆ ನಮ್‌ ಜನಪದರ ಕತೇಗ್ಳಾಗೆ ದ್ಯಾವ್ರುಗೂ ಮನುಸ್ಯರ ಬುದ್ಧೀನೇ ಇರ್ತೈತೆ ಅಂತ ನಂಬ್ತಾರೆ. ಅಂಗೇ ಕತ್ಯೂ ಕಟ್ತಾರೆ. ಆ ಪೈಕಿನಾಗೆ ನಮ್ಮಮ್ಮನೂ ಒಂದು. ಬಲೇ ಮುಗ್ಧತೆ. ದ್ಯಾವ್ರು ಅಂದ್ರೆ ಬಯ ಬಕ್ತಿ ಸ್ಯಾನೇ ಅಂದ್ರೆ ಸ್ಯಾನೇನೆ. ಎದ್ದೇಟ್ಗೇ ದ್ಯಾವ್ರ ಹಾಡು ಏಳ್ಕಂತಾ ಪೂಜೇಗೆ ಸುರು ಹಚ್ಕಂಡ್ರೆ ಹತ್ತು ಹನ್ನೊಂದು ಗಂಟೆ ತಕಾನೂ ಅದೇ ಕೆಲ್ಸ್ವೇಯಾ. ಮಧ್ಯೆ ನಂಗೆ ಇಸ್ಕೂಲ್ಗೆ ಟೇಮಾಗ್ತದೆ, ಅಪ್ಪನೂ ಹೊಲುಕ್ಕೋ ರಾಜಕೀಯದ್ ಕೆಲ್ಸುಕ್ಕೋ ಓಯ್ಬೇಕಲ್ಲಾ ಅದುಕ್ಕಾರಾ ವಸಿ ನಾಷ್ಟಾ ಮಾಡಿಕ್ಕಿ, ನಂಗೆ ಎಲ್ಡು ಜಡೆ ಹಾಕಿದ್ರೆ ಮುಗೀತು, ನಮ್ಮಮ್ಮನ್ ಲೋಕ್ವೇ ಬ್ಯಾರೆ. ಹನ್ನೆಲ್ಡು ಗಂಟೆಗೆ ತಿಂಡಿ ತಿಂತಿತ್ತು.‌ ಅಡುಗೇ ಮನೇನಾಗೇ ಒಂದು ಮೂಲೇನಾಗೆ ಮೂರಡಿ ಕಟ್ಟೆ ಇತ್ತು. ಅದ್ರಾಗೆ ಗ್ವಾಡೆ ಮಗ್ಗುಲಿಗೆ ಸಣ್ಣದೊಂದು ಗೂಡು ಇತ್ತು. ಅದ್ರಾಗೇ ದ್ಯಾವ್ರನ್ನು ಇಕ್ಕಿ ಪೂಜೆ ಮಾಡ್ತಿದ್ವು. ಆ ಕಟ್ಟೆ ಮ್ಯಾಗೆ ಅಚ್ಚುಕಟ್ಟಾಗಿ ಒಂದಾಳು ಕುಂತು ಪೂಜೆ ಮಾಡಾ ತರುಕ್ಕಿತ್ತು. ಒಂದು ದಿನದಾಗೆ ಅರ್ಧ ಟೇಮು ಆ ಕಟ್ಟೇ ಮ್ಯಾಗೆ ಕುಂತಿರ್ತಿತ್ತು ನಮ್ಮಮ್ಮ. ತರತರಾದ್ದು ಹುವ್ವಾವಾ ಅಲಂಕಾರವಾಗಿ ಜೋಡಿಸೋದ್ರಾಗೆ ಪಸ್ಟು ಪ್ರೈಜು.

ಸಂಜೆ ಹೊತ್ನಾಗೆ ತೋಟ್ದಾಗಿರಾ ಕದರಪ್ಪನ್ ಗುಡೀನಾಗೆ ಪೂಜೆ ಮಾಡ್ತಿತ್ತು. ಇಸ್ಕೂಲ್ ತಾವ್ ಬಂದು ನಂಗೆ ಮನೆ ಬೀಗ ಕೊಟ್ಟು ತ್ವಾಟುದ್ ತಾವ್ ಹೋಗ್ ಬತ್ತೀನಿ ಅಂತ ಹೇಳ್ತಿತ್ತು. ಪೂಜೆ ತಟ್ಟೆ ಜೋಡುಸ್ಕಂಡು ಬುಟ್ಟೀಲಿ ಹುವ್ವ ಇಟ್ಕಂಡು ಹೊರಡೋ ಸಂಭ್ರಮ ನೋಡಾಕೆ ಎಲ್ಡು ಕಣ್ಣು ಸಾಲ್ದು.

ಗುಲಾಬಿ ಹುವ್ವ‌ದವನ ಜೊತೆ ಚೌಕಾಸಿ

ನಮ್ ತ್ವಾಟದಾಗೆ ವಸಿ ಹುವ್ವಾನಾ ಬಿಡ್ತಿತ್ತು. ದಾಸ್ವಾಳ್ದಾಗೆ ಎಲ್ಡು ರಕಮ್ಮು, ಬಿಳೇದು, ಕೆಂಪ್ದು. ಕೆಂಪುದ್ರಾಗೆ ಎಲ್ಡು ರಕ, ಒಂದು ಸುತ್ತಿಂದು, ಏಳು ಸುತ್ತಿಂದು. ಗಣೇಶನ ಹುವ್ವ, ಚಿಂತಾಮಣಿ ಹುವ್ವ, ಕಾಕ್ಡಾ, ಏಳುಸುತ್ತಿನ್ ಮಲ್ಲಿಗೆ, ಸೂಜ್ಮಲ್ಲಿಗೆ, ಕನಕಾಂಬ್ರ, ಟೇಬಲ್ ರೋಜಾ, ಸಂಕು(ಶಂಕು) ಹುವ್ವದಾಗೂ ಬಿಳೇ ಸಂಕ, ನೀಲಿ ಸಂಕ ಬುಡ್ತಿದ್ವು. ಪಟಿಕ(ಸ್ಫಟಿಕ)ದಾಗೆ, ರೋಜಾ ಬಣ್ಣದ್ದು, ನೀಲಿ ಬಣ್ದವು, ಬಿಳೇ ಬಣ್ದವೂ ಇದ್ವು. ಸದ್ಯುಕ್ಕೆ ಈಸೇ ಗ್ಯಪ್ತಿ ಬರ್ತಿರೋದು. ದೋಡ್ಡ ಮಂಕರಿನಾಗೆ ಹುವ್ವ ಜೋಡಿಸ್ಕಣಾದು ನಮ್ಮಮ್ಮ. ಹಿಂದ್ಲ ರಾತ್ರೀನೇ ಕುಂತು ತಾನೇ ಹಾರ ಏರುಸ್ಕಂಡು (ಪೋಣಿಸು), ಆಳುಗ್ಳ ಕೈಯಾಗೆ ಒತ್ತುಗೆ ಕಟ್ಟುಸಿ ರೆಡಿ ಇಕ್ಕಂಡು, ದೋಡ್ಡ ಪರಾತಾದಾಗಿಕ್ಕಿ, ಅದ್ರ ಮ್ಯಾಗೆ ತ್ಯಾವದ ಬಟ್ಟೆ ಹಾಕಿ ಬಲ್ ಜ್ವಾಪಾನ ಮಾಡ್ತಿತ್ತು. ಆದ್ರೂವೇ ಈಸೆಲ್ಲಾ ಬಿಟ್ಟಿ(ನಮ್ ತ್ವಾಟುದ್ದೇಯಾ) ಹುವ್ವ ಸಿಕ್ಕೀರೂ ಜೀವುಕ್ಕೆ ಸಮಾಧಾನ್ವೇ ಇರ್ಲಿಲ್ಲ. ನಮ್ ತ್ವಾಟದಾಗೆ ಗುಲಾಬಿ ಗಿಡ ಇರ್ನಿಲ್ಲ. ನಮ್ಮಮ್ಮುಂಗೆ ಅದೇನೋ ಸ್ಯಾನೆ ಆಸೆ. ದ್ಯಾವ್ರಿಗೆ ಜಿನಾ(ದಿನಾ) ಗುಲಾಬಿ ಮುಡುಸ್ಬೇಕು ಅಂತ. ತಿಗಳರ ಹುಡುಗ ಒಬ್ಬ ಗುಲಾಬಿ ಮಾರ್ಕಂಡು ಬರ್ತಿದ್ದ. ಅವುಂಗೂ ಆ ಊರ್ನಾಗೆ ನಮ್ಮಮ್ಮನ್ನ ಬುಟ್ರೆ ಬ್ಯಾರೆ ಗಿರಾಕಿ ಇಲ್ಲ. ಆದ್ರೂವೇ ಇವ್ರಿಬ್ಬರ ಚೌಕಾಸಿ ನೋಡಾಕೆ ಬಲ್‌ ಮಜಾ ಇರ್ತಿತ್ತು. ಆವಾಗ್ ತಾನೆ ಕಣ್ ತಿಕ್ಕಂತಾ ಎದ್ದು ಮನೆಮುಂದುಕ್ಕೆ ಬಂದು ತುಳಸೀ ಗಿಡುದ್ ಕಟ್ಟೆ ಮ್ಯಾಗೆ ಕುಂತ್ಕಂತಿದ್ದೆ. ಇಬ್ರು ಜಟಾಪಟಿ ಸುರು ಆಗಿರ್ತಿತ್ತು. ಅವುನೋ ಮಂಕರೀನಾಗೆ ಒಂದತ್ತೋ ಹದಿನೈದೋ ಗುಲಾಬಿ ಮಡಿಕ್ಕಂಡು ಮನ್ ತಾವ್ಕೇ ಬತ್ತಿದ್ದ. ಇಬ್ರುದೂ ಹತ್ತಿದ್ರೆ ಹರೀತಿರ್ಲಿಲ್ಲ. ಅವು ಈಗಿನ್ ಕಾಲುದ್ ಗುಲಾಬಿ ಅಲ್ಲ್ ಕಣೇಳಿ. ರೋಜಾ ಬಣ್ದವು. ತೆಳ್ಳುಗಿರಾ ರೆಕ್ಕೆಗ್ಳು. ಬಲ್ ನಾಜೂಕು. ಗಟ್ಟಿಯಾಗಿ ಒತ್ತಿದ್ರೆ ಬಾಡೋಗೋಂತವು. ಚಿಕ್ಕದಾದ್ರೆ ಐದು ಪೈಸಾ. ದೊಡ್ಡವು ಹತ್ತು ಪೈಸಾ. ಸ್ಯಾನೇ ದೊಡ್ಡವು ನಾಕಾಣೆ. ಮನ್ಯಾಗೆ ಇರಾ ಚಿಲ್ರೆ ಹುಡುಕೀ ಹುಡುಕೀ ಅಮ್ಮ‌ ರಾತ್ರೀನೇ ರೆಡಿ ಇಕ್ಕಿರ್ತಿತ್ತು. ಮದ್ಲೇ ಗೊತ್ತಿರ್ತಿತ್ತಲ್ಲ. ಆದ್ರೂ ಸತ ಗುಲಾಬಿ ಸ್ಯಾನೆ ಇದ್ರೆ ಆಸೆ. ಅವುನ್ ತಾವ ಕೊಸರಾಡೋದು. ಇನ್ನೊಂದು ಹಾಕು, ಇದು ಚಿಕ್ದು, ಇದು ರೆಕ್ಕೆ ಕಿತ್ತೋಗದೆ, ಬಾಡೋಗದೆ, ಸಿಕ್ಕಾಪಟ್ಟೆ ಕಾಸು ಯೋಳ್ತೀಯಾ. ನಾಳಿಂದ ಬ್ಯಾಡಾಕ್ಕೆ ಬ್ಯಾಡ ಇಂಗೆ ನಮ್ಮಮ್ಮುನ್ ಕೂಗಾಟ. ಅವ್ನೂ ಕಮ್ಮಿ ಇರ್ತಿರ್ಲಿಲ್ಲ. ಯಕ್ಕೋ ಬ್ಯಾಡಾಂದ್ರೆ ಬುಡಕ್ಕೋ, ನನ್ ಗುಲಾಬೀಗೆ ಸ್ಯಾನೆ ಡಿಮಾಂಡು. ನಾಳಿಂದ ನಾನ್ ಇತ್ಲಾಗೆ ಬರಾದೇ ಇಲ್ಲ. ಕಮ್ಮಿ ಕ್ಯೋಳ್ಳೇ ಬ್ಯಾಡ‌ ಅಂತ ಅವುನ್ ಹಾರಾಟ. ಅಂಗಾಡಿ ಇಂಗಾಡಿ ಇಬ್ರೂ ಜಗ್ಗಾಡಿ ಏನೋ ಒಂದು ಕುದುರುಸ್ತಿದ್ರು. ಸ್ಯಾನೆ ಕ್ವಾಪ ಬಂದ್ ದಿನ ನಾಳಿಂದ ಬ್ಯಾಡಾ ಅಂತ ಒಳೀಕ್ ಬಂದ್ರೆ, ಬರಲ್ಲ ಅಂತ ಅವ್ನೂ ಹೋಗ್ತಿದ್ದ. ತಿರ್ಗಾ ಬೆಳಕರಿಯಾ ಹೊತ್ಗೆ ಮಂಕರಿ ಹಿಡ್ಕಂಡು ಅವುನೂ ಹಾಜ್ರಿ. ಕಾಸು ತಡಕಾಡ್ಕಂಡು ನಮ್ಮಮ್ನೂ ರೆಡಿ.

ಒಂದೇ ಬ್ಯಾಸ್ರ ಅಂದ್ರೆ ಗುಲಾಬೀಯಾ ನಮ್ಗೆ ಮುಡ್ಕಣಾಕೆ ಕೊಡ್ತಾ ಇರಲಿಲ್ಲ. ಅದು ದ್ಯಾವ್ರಿಗೇ ಮೀಸ್ಲು. ನಮ್ಗೆ ತ್ವಾಟುದ್ ಕಾಕಡಾ, ಕನಕಾಂಬ್ರ, ಪಟಿಕದ ಹುವ್ವಾನೇ ಗತಿ. ಅದೇನ್ ಬುಡಮ್ಮಿ, ಬಿಸುಲ್ಗೆ ಬ್ಯಾಗ್ನೇ ಬಾಡೋಗ್ತೈತೆ ಅಂತ ಬಾಯ್ಮುಚ್ಸೋದು. ಒಂತರಾ ಮಗೂ ತರದ್ ಮನ್ಸು, ದ್ಯಾವ್ರ ಇಚಾರದಾಗೆ. ಆಚಾರ ಸಂಪ್ರದಾಯಾ ಅಂದೇಟ್ಗೆ ಒಂದಕ್ಸರ ಆಚೀಚ್ಗೆ ಆಗ್ದಂಗೆ ಮಾಡ್ ತೀರ್ತಿತ್ತು.

ಅಭಿಸೇಕ

ಅದೆಂಗೆ ಸುರು ಆತೋ ಗೊತ್ತಿಲ್ಲ. ನಾನು ನಾಕೈದ್ನೇ ಕ್ಲಾಸ್ನಾಗಿದ್ದಾಗ ಸುರು ಆಗಿದ್ದು. ಜಿನಾ ಬೆಳುಗ್ಗೆ ದ್ಯಾವ್ರಿಗೆ ಅಭಿಸೇಕ. ನಮ್ ಮನ್ಯಾಗೇ ಹಸಾ ಎಮ್ಮೆಗ್ಳು ಇದ್ವಲ್ಲ. ಹಸುವಿನ್ ನೊರೆ ಹಾಲು, ಎಮ್ಮಿದು ಗಟ್ಟಿ ಕೆನಿ ಮಸ್ರು, ಮನ್ಯಾಗೇ ಮಾಡಿರಾ ಮರಳು ತರ ಅರಳ್ಕಂಡಿರಾ ಗಮಗಮಾಡೋ ತುಪ್ಪ, ತ್ವಾಟುದಾಗೆ ಕಟ್ಟಿರಾ ಜೇನು ರೊಟ್ಟಿ ಹಿಂಡಿ ತಂದಿರಾ ಜೇನುತುಪ್ಪ, ನಮ್ ತ್ವಾಟುದ್ದೇಯಾ ಬಾಳೆ ಹಣ್ಣು. ಸಕ್ರೆ ಮಾತ್ರ ಅಂಗ್ಡೀದು. ಸಕ್ರೆ ಕಮ್ಮಿ ಆಕಿ, ಜೇನುತುಪ್ಪಾ ಸ್ಯಾನೆ ಹಾಕ್ತಿತ್ತು. ಎಲ್ಲಾ ಹಾಕಿ ದಿನಾ ಅಭಿಸೇಕ ಮಾಡುದ್ರೆ, ಅದು ತೀರ್ತುದ್ ತರ ಕೈಯಾಗೆ ತಕಳಾದಲ್ಲ. ಒಂದು ದೋಡ್ದ ಗ್ಲಾಸಿನಾಗೆ ಅಳತೆ ಇಕ್ಕಂಡಿದ್ದೆ.

ಬೆಳ್ ಬೆಳುಗ್ಗೇನೇ ದೋಡ್ಡ ಲೋಟ್ದಾಗೆ ಕುಡೀವೆ. ಹೊಟ್ಟೆ ಹಸ್ವು ಮುಚ್ಕಂಡೋಗಿ ತಿಂಡಿ ವಸಿ ಆದ್ರೆ ಸಾಕಿತ್ತು. ನಮ್ಮನೇಗೆ ಬರಾ ನಂಟ್ರಿಗೂ ಆಸೆ. ಅವ್ರೂ ಕಾಯ್ಕಂಡಿರ್ತಿದ್ರು. ಆವಾಗ್ ಸ್ಯಾನೆ ಮಾಡ್ತಿದ್ರು. ಆದ್ರೂ ಒನ್ನೊಂದು ಕಿತ ನಮ್ಗೇ ತೀರ್ತುದ್ ತರುಕ್ಕೆ ಈಸೇಸೇ ಸಿಗ್ತಿತ್ತು. ನಿಂಗೇನ್ ಬುಡಮ್ಮಿ, ಜಿನಾ ಕುಡೀತೀಯಾ ಅಂಬ್ತ ಅಮ್ಮ ಗದರ್ತಿತ್ತು. ಬಂದೋರ್ಗೆ ಮದ್ಲು ಕೊಡಾ ಮನ್ಸು. ಅವ್ರೂ ಚಪ್ಪರಿಸ್ಕಂಡು ಕುಡೀತಿದ್ರೆ ನಂಗೆ ಉರಿ ಹತ್ಕಣಾದು.

ಮೆಣಸಿನಕಾಯಿ ಬೋಂಡಾ

ನಮ್ ತಾತ ವಾರಕ್ಕೊಂದು ದಪ ಅಜ್ಜಿ ಕೊಡಾ ತರಾವರಿ ತಿಂಡಿ ಬುತ್ತಿ ತಕ್ಕಂಡು ಬರ್ತಿದ್ರೂ ನಮ್ಮಮ್ಮುಂಗೆ ಅದ್ರ ದ್ಯಾಸ್ವೇ ಇರ್ಲಿಲ್ಲ. ಅದೇನೋಪ್ಪ ಸುಬ್ಬರಾಯ ಶೆಟ್ಟಿ ಅಂಗ್ಡೀದು ಮೆಣಸಿನಕಾಯಿ ಬೋಂಡಾ ಅಂದ್ರೆ ಬಲು ಆಸೆ ಬೀಳ್ತಿತ್ತು. ಅದೊಂದೇ ನಮ್ಮಮ್ಮ ಕನವರಿಸ್ಕಂಡು ತಿಂತಿದ್ದಿದ್ದು. ಆಸೆ ಬೀಳೋದೂ ಅಂದ್ರೆ ತಿಂಗ್ಳಿಗೊಂದು ಸತಿನಾರಾ ತಿನ್ನೋ ಖಾಯಿಶ್ಶು ಇತ್ತು.(ಆಸೆ) ಸಾಮಾನ್ಯುಕ್ಕೆ ಎಂಟಾಣೆ ಕೊಡ್ತಿತ್ತು. ಅಪ್ರೂಪುಕ್ಕೆ ಎಂದಾನಾ ಒಂದ್ರೂಪಾಯಿ. ಹತ್ತು ಪೈಸೇಗೊಂದು ಮೆಣಸಿನಕಾಯಿ ಬೋಂಡಾ. ನಂಗೆ ಅದು ಕಾರ ಆಗ್ತಿತ್ತು. ಐದು ಪೈಸಾಗೊಂದು ಈರುಳ್ಳಿ ಪಕೋಡ ಸಿಗ್ತಿತ್ತು. ಎಂಟಾಣೆನಲ್ಲಿ ಮೂರು ಮೆಣಸಿನಕಾಯಿ ಬೋಂಡಾ, ನಾಕು ಈರುಳ್ಳಿ ಪಕೋಡಾ ತಂದ್ರೆ ಮಸ್ತಾಗ್ತಿತ್ತು. ಆದ್ರೆ ಇದ್ನ ತರಾದೇನೂ ಆಸು ಸಲೀಸಿರ್ನಿಲ್ಲ. ಯಾಕೇಂದ್ರೆ ಸುಬ್ಬರಾಯಪ್ಪನ ಅಂಗಡೀ ಇಂದ ಬರಾ ಮುಂದೆ ಆದಿನಾರಾಯಣಪ್ಪನ ಮನೀ ಆಸೀನೆ ಬರ್ಬೆಕಿತ್ತು. ಆ ದೊಡ್ಡಮ್ಮನೋ ಯಾವಾಲೂ ಮನೆ ಮುಂದೆ ಕುಂತು ಓಗೀಬರಾರ್ನೆಲ್ಲ ಕೆದುಕ್ತಿತ್ತು. ಅಮ್ಮ ಮದ್ಲೇ ಉಸಾರು ಯೋಳಿ ಕಳುಸ್ತಿತ್ತು. ನಾನು ಬೋಂಡಾ ಕಟ್ಟಿದ್ದ ಪೇಪರ್ನ ಲಂಗದಾಗೆ ಮುಚ್ಚಿಕ್ಕಣೀವೆ. ಮೆಲ್ಲುಕೆ ಏನೂ ತಿಳೀದಂಗೆ ಅವುರ್ ಮನೆ ಕಡೆ ನೋಡ್ದಂಗೆ ಬರೀವೆ. ಆದ್ರೂ ಸೈತ ಆ ದೊಡ್ಡಮ್ಮ ಬುಡವಲ್ದು. ಏನಮ್ಮಿ ಎತ್ಲಗೋಗಿದ್ದೆ. ಬಾ ಇಲ್ಲಿ. ದೊಡ್ಡಮ್ಮನ್ನ ಮಾತಾಡುಸ್ದೆ ಓಯ್ತಾ ಇದ್ದೀಯಾ ಅಂಬ್ತ ಕೆದಕೋದು. ನಾನೂ ಪೆದ್ಪೆದ್ದಾಗಿ ನಕ್ಕಂಡು ಯೋನು ಮಾಡೋದಪ್ಪ ಅಮ್ಮ ಬೈತೈತಲ್ಲ ಅನ್ನಾ ಯೋಸ್ನೇಲಿ ಸುಮ್ನೆ ನಿಂತ್ಕಣೀವೆ. ತಿರ್ಗಾ ಬೋಂಡಾ ತಕ್ಕಾ ವೋಯ್ತಿದ್ದೀಯಾ. ನಿಮ್ಮಮ್ಮುಂಗೆ ಯೋಳಿ ಮನ್ಯಾಗೇ ಮಾಡ್ಸಕಣಾದಲ್ವೇನಮ್ಮಿ ಅಂಬ್ತ ರೇಗೋದು ಬ್ಯಾರೆ. ನಮ್ಮಮ್ನೇ ಯೋಳಿದ್ದು ಅಂಬ್ತ ನಾಯೇನೂ ಬಾಯ್ಬಿಡ್ತಿರ್ಲಿಲ್ಲ. ಸೀದಾ ಅಮ್ಮುನ್ ತಾವ್ ಬಂದು ಆ ದೊಡ್ಡಮ್ಮಂಗೆ ಬ್ಯಾರೆ ಕ್ಯಾಮೇ ಇಲ್ಲ್ ಕಣಮ್ಮ. ಮೂರೊತ್ತೂ ಬೀದೀ ಕಡೇನೇ ನೋಡ್ಕಂಡು, ಓಗೀ ಬರಾರ್ ಇಚಾರ ಎಲ್ಲಾ ಕೆದುಕ್ಕಂಡು ಕುಂತಿರ್ತೈತೆ ಅಂಬ್ತ ಬೈಯ್ಯೀವೆ. ಅಮ್ಮನೂ ಬುಡ ಅತ್ಲಾಗೆ, ನಾ ಅದುಕ್ಕೇ ಉಸಾರಿ ಅಂದಿದ್ದು. ನೀನೊಳ್ಳೆ ಬರಾ ಇಸ್ಟೈಲ್ನಾಗೇ ಆವಕ್ಕುಂಗೆ ಗೊತ್ತಾಗ್ದೇ ಇದ್ದಾತಾ ಅಂತ ನಂಗೇ ಯೋಳೋರು. ಥೋ ಓಗಮ್ಮೋ ಅತ್ಲಾಗೆ ನಿನ್ ಸಾವಾಸ ಬ್ಯಾಡುಕ್ಕೇ ಬ್ಯಾಡ, ಇನ್ನೊಂದು ಕಿತ ನಾನ್ ಬೋಂಡಾ ತರಾದೇ ಇಲ್ಲ ನೋಡ್ಕೋ ಅಂತ ಹೆದುರ್ಸೀವೆ. ಪಾಪ‌ ಅಮ್ಮ ಹೋಗ್ಲಿ ಬಿಡಮ್ಮಿ, ಅವುರ್ ಅಂದಿದ್ಕೆ ಬ್ಯಾಸ್ರ ಮಾಡ್ಕಬ್ಯಾಡಾ ಅಂತ ಸಮಾಧಾನ ಯೋಳ್ತಿತ್ತು. ಒನ್ನೊಂದು ಕಿತ ಸ್ಯಾನೆ ಕ್ವಾಪ ಮಾಡ್ಕಂಡಾಗ ತಕಾ ನಾಕಾಣೆ ಬ್ಯಾರೆ ಏನನ್ನಾ ತಕಾ ಅಂಬ್ತ ಕೊಡ್ತಿತ್ತು. ಅದ್ನ ತಕಂಡು ಜಕ್ಕೇನಳ್ಳಿ ಅವ್ರ ಅಂಗಡೀಗೋ, ಪ್ರಾಣೇಶಪ್ನ ಅಂಗಡೀಗೋ ಓಡೀವೆ.

ದೀಪಾವಳಿ ಬಂತೂಂದ್ರೆ ಸೊಂಟ ಬಿದ್ದೋಗ್ತಿತ್ತು

ನಮ್ಮನ್ಯಾಗೆ ದೀಪಾವಳಿ ಬಲ್ ಜೋರಿನ್ ಹಬ್ಬ. ಕೇದಾರೇಸ್ವರನ ಪೂಜೆಗೆ ಅತ್ತೆದೀರು, ನಂಟ್ರು‌, ಊರಿನ್ ಜನ್ವೆಲ್ಲಾ ಸೇರ್ತಿದ್ರು. ಹಬ್ಬ ಸುರು ಆಗಾ ಮುಂಚೆ ಒಂದು ತಿಂಗ್ಳು ಮುಂದಾಗೆ ಸುರು.‌ ಮದ್ಲೆಲ್ಲಾ ಗಂಗಸಾಲ ಅಕ್ಕಿ ಕುಟ್ಸಿ ಕಜ್ಜಾಯುಕ್ಕೆ ಹಿಟ್ಟು ಮಾಡ್ತಿದ್ರು. ಮರಕ್ಕೆ(ಕೇರೋ ಮೊರ) ಸುತ ಗಂಜಳ ಬಳ್ಸಿ, ಒನಕೆ ತೊಳ್ಸಿ ಮಡಿಯಾಗೇ

ಅವಲಕ್ಕಿ ಮಾಡ್ಸೋದು, ಬತ್ತ ಕುಟ್ಸೋದು, ಮನೆಗೆ ಸುಣ್ಣಾ ಕಾರಣೆ ಮಾಡ್ಸಿ, ಅಟ್ಟದ್ ಮ್ಯಾಗಿನ ದೊಡ್ಡ ಕೊಳದಪ್ಪಲೆ, ಮಣ್ಣಿನ ದೊಡ್ಡ ದೀಪುಗ್ಳು, ಅವೂ ಇವೂ ಆಳುಗ್ಳ ಕೈಲಿ ಇಳ್ಸಿ ಕಿಲೀನ್ ಮಾಡ್ಸೋದು. ಕೆಮ್ಮಣ್ಣು ಸುದ್ದೆ ಮಣ್ಣು ತಕಂಡು ಪಡಸಾಲೇನಾಗೆ ಚೆಂದುಕ್ಕೆ ರಂಗೋಲಿ ಬಿಡ್ಸೋದು. ಇಂಗೇ ನೂರೆಂಟು ಆಚರ್ಣೆ ಇದ್ವು. ಒಂದೂ ಬುಡದಂಗೆ ಸಾಂಗವಾಗಿ ಮಾಡಾದ್ರಾಗೆ ಅಮ್ಮುನ್ ಜೀವುಕ್ಕೆ ನೆಮ್ದಿ. ಅಪ್ಪನೋ ಪುರುಸೊತ್ತಿಲ್ದೆ ರಾಜ್ಕೀಯ ಬೇಸಾಯಾ ಅಂತ ಓಡಾಡ್ತಿತ್ತು. ಮನೆ ಸುದ್ದೀ ತಲೇಗೇ ಹಾಕ್ಕಂತಿರ್ಲಿಲ್ಲ. ಆಳುಗ್ಳ ಹತ್ರ ಎಲ್ಲಾ ಯೋಳಿ ಕೆಲ್ಸ ಮಾಡ್ಸಾದು ಅಮ್ಮುಂಗೇ ಬುಟ್ಟಿದ್ದು. ನಂಗೆ ಅತ್ತೆದೀರು ಬತ್ತಾರೆ ಅನ್ನೋ ಸಂಭ್ರಮ. ಅಮ್ಮುಂಗೆ ಬಂದೋರ್ನೆಲ್ಲಾ ಸುದಾರ್ಸೋ ಯೋಸ್ನೆ. ಮನೆ ಸುತ್ತೂರ ದೀಪ ಇಕ್ಕೋದೂ ಅಂದ್ರೆ ಅಮ್ಮುಂಗೆ ಬಲು ಕುಸಿ. ದೀಪದ ಹಬ್ಬ ಅಂದ್ ಮ್ಯಾಗೆ ದೀಪ ಇಕ್ಕ್ದಿದ್ರೆ ಎಂಗೆ ಅಂತ ಅನ್ನೋದು. ಮನೆತನುಕ್ಕೆ ಒಳ್ಳೆದಾಗ್ಬೇಕಾರೆ ಯಾವ್ದೂ ಬುಡದಂಗೆ ಎಲ್ಲಾ ಆಚಾರಾನೂ ಮಾಡ್ಬೇಕು ಅಂತಿತ್ತು.

ಕಿವಿ ನೋವಾದ್ರೆ ನಾಗಪ್ಪನ ಕ್ವಾಪ್ವೇ ಕಾರಣ

ಕಿವಿ ನೋವಾದ್ರೆ, ಸೋರುದ್ರೆ ಅಯ್ಯೋ ನಾಗಪ್ಪುಂಗೆ ಕ್ವಾಪ ಬಂದದೆ ಅಂತ ಹರುಸ್ಕಂಡು, ಹುತ್ತದ ಮಣ್ಣು ತಂದು ನೆನ್ಸಿ ಕಿವೀಗೆ ಹಚ್ಚೋದು. ವರ್ಸಕ್ಕೊಂದು ದಪ ತಪ್ಪುಸ್ದೆ ತೆರಿಯೂರಿಗೆ ಸುಬ್ರಮಣ್ಯನ ತೇರಿಗೆ ಹೋಗ್ತಿತ್ತು. ‌ಇವಾಗ ಊರು ಬುಟ್ಟಿ ತುಮಕೂರು ಸೇರಿದ್ ಮ್ಯಾಗೆ ಅದು ತಪ್ಪೋಯ್ತು. ಆದ್ರೂ ಹೋದ ವರ್ಸ ಕಿವಿ ನೋವಾದ್ ತಕ್ಸನ ಅಯ್ಯೋ ಏಸು ವರ್ಸ ಆಯ್ತು, ತೆರಿಯೂರು ತೇರಿಗೆ ಹೋಗಿ ಅಂತಾ ಹರುಸ್ಕಂಡು ಹೋಗಿ ಬಂದ್ ಮೇಲೇನೇ ಸಮಾಧಾನ. ಇಂಗೇಯಾ ಎಲ್ಲಿಂದ್ ಎಲ್ಗೋ ಕನೆಕ್ಸನ್ನು ಕೊಟ್ಬುಟ್ಟು ನಮ್ಗೇ ತಲೆಕೆರ್ಕಣಂಗೆ ಮಾಡೋದು ನಮ್ಮಮ್ಮ.

ಕನಸು ಬಂದ್ರೂ ಅರ್ಥ ಹುಡುಕಾಟ

ಹಿಂದಿನ್ ಕಾಲ್ದಾಗೆ ರಾಜ್ಮಾರಾಜ್ರು ಕನಸು ಬಿದ್ದೇಟ್ಗೆ ಇದ್ರ ಅರ್ಥ ಯೋನು ಅಂತ ಕ್ಯೋಳಾಕೆ ಜೋಯಿಸ್ರುನ್ನ ಕರುಸ್ತಿದ್ರಂತೆ. ಅಂಗೇಯ ನಮ್ಮಮ್ಮ ಕನಸು ಕಂಡ್ರೂ ಸೈತ ಅದುಕ್ಕೇ ಏನು ಅರ್ಥ ಇರ್ಬೈದು ಅಂತ ತಲೆಕೆಡುಸ್ಕಣಾ ಗಿರಾಕಿ. ಹಾವು ಕಂಡ್ರೆ ನರಸಿಂಹಪ್ಪಂಗೆ ಏನೋ ಅಪಚಾರ ಆಗದೆ ಅಂತ. ಇನ್ನೇನೋ ಕಂಡ್ರೆ ಇನ್ನೊಂದು ಅರ್ಥ. ಯಪ್ಪಾ ಸಿವ್ನೆ ನಂಗಂತೂ ಅಂಗಲ್ಲ ಕಣಮ್ಮ‌ ಅಂತ ಯೋಳಿ ಸಾಕಾಗೈತೆ.‌

ಪಾಸಾಲಮ್ಮ

ಮದ್ಲಿಂದ್ಲೂ ನಮ್ಮಮ್ಮ ಬಲು ಮೆತ್ತೆ. ನಮ್ಮುನ್ನ ಜೋರಾಗಿ ಬೈದಿದ್ದೂ ಇಲ್ಲ. ಅದ್ರಾಗೂ ನಂಗೂ ವಸಿ ವಯಸ್ಸಿಗೆ ಮೀರಿದ್ ಬುದ್ಧೀನೆ. ಹುಟ್ತಾಲೇ ಪುಸ್ತಕಗ್ಳು ನಂಗೆ ಗಂಟು ಬಿದ್ದಿದ್ದು ಕಾರ್ಣಾನೋ ಏನೋ. ಸ್ಯಾನೆ ಕೋಪಾ ಬಂತೂ ಅಂದ್ರೆ ಕತ್ತೆ ಅಂತ ಮಾತ್ರಾ ಬೈತಿತ್ತು. ಅದೇ ದೊಡ್ಡದು. ನಿಂತಾವ ಯೇಗೋಕೆ ನಂಕೈಲಾಗಲ್ಲ ಅಂತ ಗೊಣುಗ್ತಿತ್ತು. ಇಲ್ದಿದ್ರೆ ಪಾಸಾಲಮ್ಮ, ಕಣ್ಣು ನೆತ್ತಿ ಮ್ಯಾಗೆ ಇರ್ತೈತೆ ಅಂತ ಬಯ್ಯೋದು. ಯಾಕಂದ್ರೆ ನಾನು ಬೇರೆ ತೀಟೆ ಗೀಟೆ ಮಾಡ್ತಿರ್ಲಿಲ್ಲ. ಆದ್ರೆ ಯಾವಾಗ್ಲೂ ಗಾಯ ಮಾಡ್ಕಳಾದು. ಯಾತುರ್ದಾನಾ ತಗುಲ್ಸ್ಕಳ್ಳೋದು ದಿನ ಇರ್ತಿತ್ತು. ಪಾಸಾಲಮ್ಮ ಅಂದ್ರೆ ಅಡ್ಡಾದಿಡ್ಡಿ ನಡೆಯೋದು. ಸೊಟ್ಗಾಲು ಹಾಕ್ಕಂಡು ಎಲ್ಲಾನಾ ಎಟ್ಟುಸ್ಕಳ್ಳೋದು.(ತಗುಲಿಸಿ) ಕೈಯಿ ಕಾಲೂ ಯಾವಾಗ್ಲೂ ಗೋಡೇಗೋ, ಕಂಬಕ್ಕೋ ತಗುಲುಸ್ಕಂಡು ಗಾಯ ಮಾಡ್ಕಣಾದೇ ನನ್ ಕೆಲ್ಸ ಆಗಿತ್ತು. ಈಟೇ ಬೈಗ್ಳ. ಒಂದಿನ್ವೂ ಕೈಯೆತ್ತಿದ್ದು ನೆಪ್ಪಿಲ್ಲ. ಅಂತಾದ್ರಾಗೆ ಒಂದು ದಿಸ ಅದೇನ್ ಕೋಪ್ವೋ ಯಾಕೆ ಬಂತೋ ಕಾಣೆ, ಬೀಸಣ್ಕೆ ತಕಂಡು ರಪ್ಪಂತ ಎಸಿದಿತ್ತು. ಪುಣ್ಯುಕ್ಕೆ ನಂಗೆ ತಗುಲ್ದೆ ದೂರ ಬಿತ್ತು. ಅಷ್ಟುಕ್ಕೆ ನಾನು ಅಳಾಕೆ ಸುರು ಮಾಡ್ಡೇಟ್ಗೆ ಓಡ್ ಬಂದು ಸಮಾಧಾನ ಮಾಡ್ತು. ಪಾಪ ಅಪ್ಪನೂ ಅಮ್ಮನೂ ನಮ್ಮುನ್ನ ಒಂದು ದಿನ್ವೂ ಹೊಡ್ದಿಲ್ಲ. ಬಯ್ಯೋದೂ ಅಂದ್ರೂ ಅವು ಬೈಗ್ಳ ಅಲ್ಲ್ವೇ ಅಲ್ಲ ಅಂಬೋ ತರುಕ್ಕೆ. ಇನ್ನಾ ಆಳುಗ್ಳ ಅಂತೂ ಬಯ್ಯೋಕೂ ಬರ್ತಿರಲಿಲ್ಲ. ಅವ್ರೂ ಅದುಕ್ಕೇಯಾ ಅಕ್ಕ ಅಂದ್ರೆ ಸ್ಯಾನೆ ಇಷ್ಟದಿಂದ್ಲೇ ಕೆಲ್ಸ ಮಾಡೋದು.

ನಿದಾನಸ್ತೆ

ಸ್ಯಾನೆ ನಿದಾನಸ್ತೆ, ಬಾಯಿಗ್ ಬಂದಿದ್ ಮಾತಾಡ್ತಿರಲಿಲ್ಲ.‌ ಸೂಕ್ಸ್ಮ. ಹಳ್ಳೀ ಕೊಂಪೇನಾಗೆ ಯಾವಾಗ್ಲೂ ರಾಜ್ಕೀಯದ ಗಲಾಟೆ. ಅಪ್ಪನ‌ ಮೇಲೇ ಕೆಲವ್ರ ದ್ವೇಷ. ಯಾವಾಗ್ಲೂ ಬಯ್ದಾಗೇ ದಿನ ಕಳೀತಿತ್ತು. ತುಂಬಿದ್ ಸಂಸಾರದಾಗೆ ಸೈ ಅನ್ನುಸ್ಕಳಾದು ಸಲೀಸೇ. ಫೋನೂ ಇರ್ದಿದ್ದ ಕಾಲ. ಒನ್ನೊಂದು ಸತಿ ಅಪ್ಪ ಊರಿನ್ ಕೆಲುಸುಕ್ಕೆ ಬೆಂಗ್ಳೂರಿಗೆ ಹೋದ್ರೆ ಎಲ್ಡೂ ಮೂರೂ ಜಿನ ಬರ್ತಿರ್ಲಿಲ್ಲ. ಯಾವಾಗ್ ಎಂಗೋ ಏನೋ ಅಂತ ಜೀವ ಅಂಗೈಯಾಗಿಕ್ಕಂಡು ಬಾಳ್ವೆ ಮಾಡ್ಬೇಕಿತ್ತು. ಒಂದ್ ವಡ್ವೇ ಆಸೇ ಪಡ್ಲಿಲ್ಲ. ಅದ್ ಬೇಕು ಇದ್ ಬೇಕೂಂತ ಕಾಡಿದ್ ಕಾಣೆ. ಸೊಲ್ಪುದ್ರಾಗೆ ಕುಸೀ ಕಾಣ್ತಿತ್ತು. ದ್ಯಾವ್ರ ಪೂಜೆಗೆ ಒಂದು ಸಲೀಸಾಗಿ ತಾವಿದ್ರೆ ಆಯ್ತು. ಎಲ್ಲಾ ಮರ್ತು ಬಿಡೋ ಜೀವ. ಕಷ್ಟ ಅಂದ್ರೆ ಮರುಗೋ ಮನ್ಸು.

ಮಡಿಗಿಡಿ ಇಲ್ಲ

ಈಸೆಲ್ಲಾ ದ್ಯಾವ್ರ ಮೇಲೆ ಇದ್ದದ್ದು ಪಿರೂತಿನೇ ವರ್ತು ಮಡಿಗಿಡೀಂತ ಹಾರಾಡಿದ್ದಿಲ್ಲ. ಆಗಿನ್ ಕಾಲ್ದಾಗಿದ್ದ ಮಡಿ ಬಟ್ಟೆ ಗಲಾಟೆ ಮಾಡ್ತಿರ್ಲಿಲ್ಲ. ಸ್ನಾನ ಮಾಡಿ ಒಗೆದ ಬಟ್ಟೆ ಹಾಕ್ಕಂಡ್ರೆ ಮುಗೀತು. ಮನ್ಸು ಸುದ್ದ ಇರ್ಬೇಕು ಮೈಲಿಗೆ ಅಂತ ಹಾರಾಡೋದಲ್ಲ ಅಂತಿತ್ತು. ಮನಸ್ಸು ಮಾತ್ರ ಬಲು ಸುದ್ದ. ಬರೇ ಹೊಟ್ಟೇನಾಗೆ ಪೂಜೆ ಮಾಡ್ಬೇಕೂಂತ್ಲೂ ಇಲ್ಲ. ತಿಂಡಿ ತಿನ್ನೋದ್ ತಡಾ ಆಗುತ್ತೆ. ಅದ್ಕೇ ಕಾಪಿಗೆ ಬಿಸ್ಕತ್ತೋ ಬ್ರೆಡ್ಡೋ ರಸ್ಕೋ ಹಾಕ್ಕಂಡು ಕುಡಿದೇ ಪೂಜೆ‌. ನಮ್ಮತ್ತೇ ಮನ್ಯಾಗೆ ಮಡಿಬಟ್ಟೆ ಗಲಾಟೆ ಜಾಸ್ತಿ ಇತ್ತು. ನಮ್ಮಮ್ಮ ಅಯ್ಯೋ ಅದೇನ್ ಮಡಿಬಟ್ಟೆ ಪ್ರೀತಿಯಿಂದ ದ್ಯಾವ್ರನ್ನ ಪೂಜೆ ಮಾಡುದ್ರೆ ಸಾಕು. ಇದೆಂತದ್ದು. ಬರೀ ಮಡಿ ಮಾಡ್ಬುಟ್ರೆ ಸಾಕಾ, ಮನ್ಸು ಒಳ್ಳೆದಿರ್ದಿದ್ರೆ ಏನ್ ಪ್ರಯೋಜ್ನ ಅಂತ ಬಯ್ತಿತ್ತು. ಒಂತರುಕ್ಕೆ ಹಳೇ ಕಾಲುದ್ದೂ ಅಂತ್ಲೂ ಯೋಳಾಕಾಗ್ದ, ಹೊಸ ಕಾಲುದ್ದೂ ಅಂತ್ಲೂ ಯೋಳಾಕಾಗ್ದ ಇಚಾರಗ್ಳು ಅಮ್ಮುಂದು. ಎಲ್ಡೂ ಕಲ್ಬೆರಕೆ ಆಗಿದ್ರೂ ಸುತ ಕರುಣೇ ಇರೋ ಮನ್ಸು ಮುಖ್ಯ ಅನ್ನೋ ಮಾತು ಅಮ್ಮುನ್ ಮನ್ಸನ್ನ ಯೋಳೋಂತದ್ದು‌.

About The Author

ಸುಮಾ ಸತೀಶ್

ಸುಮಾ ಸತೀಶ್‌ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ),  ಮನನ - ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು),  ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು - ಬರೆಹ) ಇವರ ಪ್ರಕಟಿತ ಕೃತಿಗಳು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ