ರೂಮಿನ ತುಂಬಾ ಪುಸ್ತಕಗಳು, ಟೇಬಲ್ಲಿನ ಮೇಲೆ ಅರ್ಧ ಓದಿದ್ದ ಆರೆಂಟು ಅರೆ ತೆರೆದ ಪುಸ್ತಕ, ಅರ್ಧ ತೆರೆದುಕೊಂಡಿದ್ದ ಪೇಪರು, ರಟ್ಟಿನ ಪ್ಯಾಡ್ ಮೇಲೆ ಬರೆಯುತ್ತಿದ್ದ ಜೋಡಿಸಿದ್ದ ಹಾಳೆಗಳು, ಕ್ಯಾಪ್ ತೆಗೆದಿರಿಸಿದ ಎರಡು ಪೆನ್ನು, ಪಕ್ಕದಲ್ಲಿ ಕನ್ನಡ ಇಂಗ್ಲಿಷ್ ಡಿಕ್ಷನರಿ….. ಇದ್ದಕ್ಕಿದ್ದ ಹಾಗೆ ನನ್ನ ರೂಮಿನಲ್ಲಿ ಕೂತಿದ್ದೀನಿ, ಹರಡಿರುವ ಪುಸ್ತಕಗಳು ನಾನೇ ಹರಡಿದ್ದು, ಕ್ಯಾಪ್ ತೆಗೆದಿಟ್ಟವನು ನಾನೇ…. ಅನಿಸಿಬಿಟ್ಟಿತು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತಾರನೆಯ ಕಂತು ನಿಮ್ಮ ಓದಿಗೆ
ಶೇಷಾದ್ರಿ ಪುರಕ್ಕೆ ಹೆಸರು ಕೊಟ್ಟ ದಿವಾನರನ್ನು ಪರಿಚಯಿಸಿದ್ದು, ಅಲ್ಲಿನ ಕೆಲವು ನೆನಪು ಆಯಿತು. ಶೇಷಾದ್ರಿಪುರದ ಕೆಲವು ವಿಶೇಷಗಳು ಅಂದರೆ ಅಲ್ಲಿನ ವಿದ್ಯಾಸಂಸ್ಥೆಗಳು, ಅಲ್ಲಿನ ಹೆಸರುವಾಸಿ ಕ್ಷೇತ್ರಗಳು, ಅಲ್ಲಿನ ಈಟ್ ಔಟ್ಸ್, ಅಲ್ಲಿನ ಪ್ರಸಿದ್ಧರು…. ಹೀಗೆ….
ಶೇಷಾದ್ರಿ ಪುರಕ್ಕೆ ಸೇರಿದ ಒಂದು ಭಾಗ ನೆಹರೂ ನಗರ. ತಮಾಶೆ ಅಂದರೆ ಕರ್ನಾಟಕದ ಸುಮಾರು ನಗರ ಪಟ್ಟಣ ಜಿಲ್ಲೆಗಳಲ್ಲಿ ನೆಹರೂ ಅವರ ನೆನಪು ತರುವ ಹಲವಾರು ಪ್ರದೇಶಗಳಿಗೆ ಅವರ ಹೆಸರಿದೆ. ಅದೇರೀತಿ ಬೆಳಗಾವಿಯಲ್ಲಿ ಒಂದು ನೆಹರುನಗರ ಉಂಟು. ಇನ್ನೂ ತಮಾಷೆ ಅಂದರೆ ಇಂದಿರಾ, ರಾಜೀವ್ ಮತ್ತು ಸಂಜಯ್ ಹೆಸರಿನ ಹಲವು ನೂರು ಮಂಡಳಿ ನಿಗಮ ಸ್ಪೋರ್ಟ್ಸ್ ಅಂಕಣ… ಮೊದಲಾದವುಗಳ ಒಂದು ದೊಡ್ಡ ಪಟ್ಟಿ ಕೆಲವು ವರ್ಷಗಳ ಹಿಂದೆ ಚಲಾವಣೆ ಆಯಿತು. ಇಡೀ ದೇಶದಲ್ಲಿ ಇವರಷ್ಟು ಹೆಸರು ಹೊತ್ತಿರುವ ಬೇರೆ ಯಾವುದೂ ಸಂಸ್ಥೆಗಳೂ ಇಲ್ಲ. ಅದೇರೀತಿ ಗಾಂಧೀಜಿ ಹೆಸರು ಹೊತ್ತ ರಸ್ತೆಗಳು, ಬಡಾವಣೆಗಳು ಪ್ರತಿ ಊರಿನಲ್ಲೂ ಇದೆ. ಬಾಪೂಜಿ, ಗಾಂಧಿ, ಮಹಾತ್ಮ ಇವೆಲ್ಲ ಗಾಂಧೀಜಿಯ ಮತ್ತೊಂದು ಪರ್ಯಾಯ. ಗಾಂಧಿ ಅವರ ಹೆಸರು ಇಲ್ಲದ ಒಂದೇ ಒಂದು ಪ್ರದೇಶ ಇಡೀ ಕರ್ನಾಟಕದಲ್ಲಿ ಎಲ್ಲೂ ಇರಲಾರದು!
ಇಲ್ಲಿ ಕರ್ನಾಟಕದಲ್ಲಿ ಮತ್ತೊಂದು ತಮಾಷೆ ತೀರಾ ಈಚೆಗೆ ಕಂಡು ಬರ್ತಾ ಇದೆ. ಕುವೆಂಪು ಅವರ ಹೆಸರು ತುಂಬಾ ಕಡೆ ಪ್ರಚಲಿತ ಆಗ್ತಾ ಇದೆ. ಒಂದು ರಸ್ತೆ ಆದರೆ ಅದಕ್ಕೆ ಕುವೆಂಪು ಹೆಸರು ಬರುತ್ತೆ. ಅದರ ಹಿಂದೆ ಮಹಾಕವಿ ಅಂತ ಸೇರಿಸಿ ಮಹಾಕವಿ ಕುವೆಂಪು ರಸ್ತೆ ಅಂತ ಹೆಸರು ಇಡ್ತೀವಿ. ಕುವೆಂಪು ಅಂದರೆ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅಂತ ಪೂರ್ತಿ ಹೆಸರು ತಿಳಿದವರು ಕಡಿಮೆ… ಇನ್ನು ಅವರ ಬಗ್ಗೆ ಅರಿತವರು ಅದೂ ಕಡಿಮೆ ಸಂಖ್ಯೆಯ ಜನರೇ.. ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ – ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು… ಈ ಯಾವ ವಿವರಗಳೂ ಗೊತ್ತಿಲ್ಲದವರು ಹೆಚ್ಚು. ಸರ್ಕಲ್‌ಗಳಿಗೆ, ಕಂಬಗಳಿಗೆ ಇಮಿಡಿಯೇಟ್ ಆಗಿ ಹೆಸರು ಇಡಬೇಕು ಅಂದರೆ ತುಂಬಾ ಸುಲಭವಾಗಿ ಮನಸಿಗೆ ಬರುವವರು ಕುವೆಂಪು! ಹಾಗೇ ಮತ್ತೊಂದು ಹೆಸರು ತುಂಬಾ ಪ್ರಚಲಿತ ಇರೋದು ಕೆಂಪೇಗೌಡರದ್ದು. ಇವರ ಹೆಸರು ಯಾವುದಾದರೂ ಕೆರೆ ಕುಂಟೆ ಸರ್ಕಲ್ ಕಂಡಾಗ, ಅವುಗಳಿಗೆ ಹೆಸರು ಬೇಕು ಅಂದರೆ ರೆಡಿಯಾಗಿ ಸಿಗುತ್ತೆ. ಆ ಹೆಸರಿನ ಹಿಂದೆ ನಾಡಪ್ರಭು ಅಂತ ಸೇರಿಸಿ ನಾಡಪ್ರಭು ಕೆಂಪೇಗೌಡ ರಸ್ತೆ ಅಂತ ಇಟ್ಟರೆ ಆಯ್ತು. ಇಲ್ಲೂ ಅಷ್ಟೇ ಕೆಂಪೇಗೌಡರ ಬಗ್ಗೆ ಅದೇನು ಹೆಚ್ಚಿನ ಸಂಗತಿ ಗೊತ್ತಿರಲ್ಲ. ಅವರು ಬೆಂಗಳೂರು ಕಟ್ಟಿದವರು ಎನ್ನುವ ಪ್ರಾಥಮಿಕ ತಿಳುವಳಿಕೆ ಬಾಯಿಂದ ಬಾಯಿಗೆ ಹರಡಿ ಗೊತ್ತಿರುತ್ತೆ ಅಷ್ಟೇ. ಕೆಲವರಿಗೆ ಬೆಂಗಳೂರಿನ ನಾಲ್ಕು ಗಡಿ ಗೋಪುರ ಅವರು ಕಟ್ಟಿಸಿದ್ದು ಅಂತ ಗೊತ್ತು, ಒಂದು ಗೋಪುರ ಲಾಲ್ ಬಾಗ್‌ನಲ್ಲಿದೆ ಅಂತ ಗೊತ್ತು. ಮಿಕ್ಕಿದ್ದು ಮೂರು ಎಲ್ಲಿದೆ ಅಂತ ಕೇಳಿ, ನೂರಕ್ಕೆ ಐದು ಜನ ಸರಿಯುತ್ತರ ಕೊಡಬಹುದೇನೋ…
ವಿಕಿಪೀಡಿಯದ ಮಾಹಿತಿ ಸಹ ಪೂರ್ಣ ಎನಿಸದು. ಕೊಟ್ಟಿರುವುದೂ ವಿಚಿತ್ರ ಮಾಹಿತಿಯಂತೆ ಕಾಣುತ್ತದೆ. ಗವರ್ನರ್ ಆಗಿದ್ದರು, ರಾಜ್ಯಪಾಲರಾಗಿದ್ದರು… ಮೊದಲಾದ ಅಂದಿನ ಕಾಲದಲ್ಲಿ ಇಲ್ಲದಿದ್ದ ರಾಜ್ಯಪಾಲ ಗವರ್ನರ್ ಹುದ್ದೆಗಳ ಹೆಸರುಗಳು. ಎಷ್ಟೋ ಸಲ ವಿಕಿಪೀಡಿಯ ಓದುತ್ತಾ ಓದುತ್ತಾ ತಮಾಷೆಯ ಸುಖ.
ನೋಡಿ ಎಲ್ಲಿಂದ ಎಲ್ಲಿಗೆ ಒಯ್ತಾ ಇದೆ ನಮ್ಮ ಪುರಾಣ. ಮತ್ತೆ ಶೇಷಾದ್ರಿಪುರಕ್ಕೆ ನುಗ್ಗೋಣ. ನೆಹರೂ ನಗರ ಸೇರಿದ ಹಾಗೆ ಹಲವು ಸಣ್ಣಪುಟ್ಟ ಬಡಾವಣೆಗಳು ಇಲ್ಲಿನ ಭಾಗಗಳು. ಮುಖ್ಯವಾಗಿ ನೆಹರೂ ನಗರ, ಮಾಧವ ನಗರ, ಕುಮಾರ ಪಾರ್ಕ್, ಅಣ್ಣಯಪ್ಪ ಬ್ಲಾಕ್.. ಮತ್ತೂ ಹಲವು ಇವುಗಳು ಶೇಷಾದ್ರಿ ಪುರದ ಹೆಸರು ಮತ್ತು ಅಲ್ಲಿನ ಜನರ ಹೆಮ್ಮೆಯನ್ನು ಎತ್ತರಕ್ಕೆ ಏರಿಸಿವೆ. ಆರ್ ಎಂ ಎಸ್ ರಸ್ತೆ ಇಲ್ಲಿನ ಪ್ರಮುಖ ರಸ್ತೆ. ಸೆಂಟ್ರಲ್ ಥಿಯೇಟರ್ (ಇದು ಈಗ ಇಲ್ಲ. ಮಂತ್ರಿ ಮಾಲ್ ಈಗಿನ ಲ್ಯಾಂಡ್ ಮಾರ್ಕ್) ನಿಂದ ನೇರ ನೀವು ಬಂದರೆ ಸ್ವಸ್ತಿಕ್ ಟಾಕೀಸು. ಬಲಗಡೆ ಹೋದರೆ ಆನಂದರಾವ್ ಸರ್ಕಲ್‌ಗೆ ಹೋಗುತ್ತೀರಿ. ಸ್ವಸ್ತಿಕ್ ಎಡಕ್ಕಾದರೆ ಅದು ಹಳೇ ಆರ್ ಎಂ ಎಸ್ ರಸ್ತೆ. ಈ ರಸ್ತೆಯಲ್ಲಿ ಕೊಂಚ ಮುಂದೆ ನಡೆದರೆ ನಾಗಪ್ಪ ರಸ್ತೆ, ಲಿಂಗಪ್ಪ ರಸ್ತೆ ಹೀಗೆ. ಲಿಂಗಪ್ಪ ಅನ್ನುವವರು ಬೆಂಗಳೂರು ಮೇಯರ್ ಆಗಿದ್ದವರು. ಬಹುಶಃ ನಾಗಪ್ಪ ಅವರೂ ಸಹ ಗಣ್ಯರು. ಅವರ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲ. ಅಲ್ಲೇ ಕೊಂಚ ಮುಂದುವರೆದು ಎಡಕ್ಕೆ ತಿರುಗಿದರೆ ಅಲ್ಲಿನ ರಸ್ತೆ ತುಂಬಾ ಆಕಾಶವಾಣಿ ಕಲಾವಿದರು. ಶ್ರೀ ಆರ್ ಕೆ ಶ್ರೀಕಂಠನ್ ಅವರ ಮನೆ ಇಲ್ಲೇ. ಒಂದು ಸಲ ರಾತ್ರಿ ಹತ್ತುವರೆಗೆ ಅವರ ಮನೆಗೆ ಹೋಗಿದ್ದ ಪ್ರಸಂಗ ನಿಮಗೆ ಹೇಳಿದ್ದೆ. ಒಂದು ಬೆಳಿಗ್ಗೆ ಆ ರಸ್ತೆಯಲ್ಲಿ ಹೋದರೆ ಅಂದಿನ ಆಕಾಶವಾಣಿಯ ಕಲಾವಿದರು ಒಬ್ಬೊಬ್ಬರ ಹೆಸರೂ ಅವರ ಮನೆ ಮುಂದೆ ನೇಮ್ ಪ್ಲೇಟ್‌ನಲ್ಲಿ ನೋಡಬಹುದು!
ಶ್ರೀ ಆರ್ ಕೆ ಶ್ರೀಕಂಠನ್ ಅವರ ಮನೆಗೆ ಹೋಗಿದ್ದೆ. ಗೆಳೆಯನ ಸಂಗಡ ರಾತ್ರಿ ಹತ್ತೂವರೆಗೆ ಅಂತ ಹೇಳಿದ್ದೆ. ಅವರ ರೂಮಿನ ಒಳಗೆ ಹೋದೆವು. ಅವರ ರೂಮು ನೋಡಿದ ಕೂಡಲೇ ನನಗೆಷ್ಟು ಖುಷಿ ಆಯಿತು ಮತ್ತು feel at home ಭಾವನೆ ಬಂತು ಅಂದರೆ ನನ್ನ ಇಷ್ಟು ವರ್ಷಗಳ ಅನುಭವದಲ್ಲಿ ಕೈ ಬೆರಳಿನಲ್ಲಿ ಎಣಿಸಬಹುದಾದಷ್ಟು ಮನೆಗಳಲ್ಲಿ
ಮಾತ್ರ ಹೀಗೆ ಅನಿಸಿದ್ದು.
ಯಾಕೆ ಹೀಗೆ ಅನ್ನಿಸುತ್ತಿದೆ ಅಂತ ಮೊದಲು ಕೆಲವು ಕ್ಷಣ ನಾನು ತಬ್ಬಿಬ್ಬು ಆಗಿಬಿಟ್ಟೆ. ಆರ್ ಕೆ ಶ್ರೀಕಂಠನ್ ಅವರ ಶ್ರೀಮತಿ ಅವರು ಕಾಫಿ ತಂದರು. ಅದನ್ನು ಕುಡಿಯುತ್ತಾ ಕುಡಿಯುತ್ತಾ ನಾನು ತಬ್ಬಿಬ್ಬು ಆಗಲು ಮತ್ತು feel at home ಭಾವನೆ ಬರಲು ಏನು ಕಾರಣ ಅಂತ ರೂಮಿನ ಸುತ್ತ ಕಣ್ಣಾಡಿಸಿದೆ. ರೂಮಿನ ತುಂಬಾ ಪುಸ್ತಕಗಳು, ಟೇಬಲ್ಲಿನ ಮೇಲೆ ಅರ್ಧ ಓದಿದ್ದ ಆರೆಂಟು ಅರೆ ತೆರೆದ ಪುಸ್ತಕ, ಅರ್ಧ ತೆರೆದುಕೊಂಡಿದ್ದ ಪೇಪರು, ರಟ್ಟಿನ ಪ್ಯಾಡ್ ಮೇಲೆ ಬರೆಯುತ್ತಿದ್ದ ಜೋಡಿಸಿದ್ದ ಹಾಳೆಗಳು, ಕ್ಯಾಪ್ ತೆಗೆದಿರಿಸಿದ ಎರಡು ಪೆನ್ನು, ಪಕ್ಕದಲ್ಲಿ ಕನ್ನಡ ಇಂಗ್ಲಿಷ್ ಡಿಕ್ಷನರಿ….. ಇದ್ದಕ್ಕಿದ್ದ ಹಾಗೆ ನನ್ನ ರೂಮಿನಲ್ಲಿ ಕೂತಿದ್ದೀನಿ, ಹರಡಿರುವ ಪುಸ್ತಕಗಳು ನಾನೇ ಹರಡಿದ್ದು, ಕ್ಯಾಪ್ ತೆಗೆದಿಟ್ಟವನು ನಾನೇ…. ಅನಿಸಿಬಿಟ್ಟಿತು!
ನನ್ನ ಕಣ್ಣು ರೂಮಿನ ಸುತ್ತಾ ಓಡಾಡುತ್ತಾ ಇದ್ದದ್ದನ್ನು ಶ್ರೀಕಂಠನ್ ಅವರು ಗಮನಿಸಿದರು ಅಂತ ಕಾಣುತ್ತೆ. ನನ್ನ ರೂಮು ಹೀಗೇ…. ಏನೋ ಓದ್ತಾ ಇರ್ತೀನಿ ಪುಸ್ತಕ ಅಲ್ಲೇ ಇರುತ್ತೆ, ಏನೋ ಬರೀತಾ ಇರ್ತೀನಿ ಫೋನ್ ಬಂತು ಅಂತ ಆಚೆ ಹೋದರೆ ಇಲ್ಲಿ ಕ್ಯಾಪ್ ಬೇರೆ ಪೆನ್ನು ಬೇರೆ ಕಡೆ……. ಅಂತ ಹೇಳುತ್ತಿದ್ದರು. ಆಗಿನ್ನೂ ಮೊಬೈಲ್ ಫೋನ್ ಬಂದಿರಲಿಲ್ಲ ಮತ್ತು ಎಲ್ಲರ ಮನೆಯಲ್ಲೂ ಫೋನ್ ಇರಲಿಲ್ಲ. ಮೇಲ್ ಮಧ್ಯಮ ವರ್ಗದವರ ಮನೇಲಿ ಫೋನ್ ಇರ್ತಿತ್ತು ಮತ್ತು ಕೆಲವು ಮನೆಗಳಲ್ಲಿ ಅದಕ್ಕೆ ಬೀಗ ಹಾಕಿ ಇಡ್ತಾ ಇದ್ದರು, mis use ಆಗದೇ ಇರಲಿ ಅಂತ!
ಸಾರ್ ನನ್ನ ರೂಮೂ ಹೀಗೇನೇ. ಇಲ್ಲಿ ನಿಮ್ಮ ರೂಮಿನ ಒಳಗೆ ಬಂದ ಕೂಡಲೇ ಒಂದು ಕ್ಷಣ ತಲೆ ಗಿರ್ ಅಂದು ಬಿಡ್ತು. ನನ್ನ ರೂಮಿಗೆ ಬಂದು ಬಿಟ್ನಾ ಅಂತ…. ಅಂದೆ. ಶ್ರೀಕಂಠನ್ ಅವರು ಬಾಯಿ ತುಂಬಾ ನಕ್ಕರು. ಅವರ ಶ್ರೀಮತಿ ಅವರೂ ಬಾಗಿಲಲ್ಲಿ ನಿಂತು ನನ್ನ ಮಾತು ಕೇಳಿ ನಕ್ಕಿದ್ದರು. ಶ್ರೀಕಂಠನ್ ಅವರ ಹೆಂಡತಿ ಕಡೆ ತಿರುಗಿ ನಮ್ಮನೆ ಒಂದೇ ಅಲ್ಲ ಹೀಗಿರೋದು, ಸುಮಾರು ಮನೆ ಹೀಗೇ ಇರುತ್ತೆ.. ಅಂದರು. ಪಾಪ ಅವರೂ ಹೆಂಡತಿ ಕೈಲಿ ಎಷ್ಟು ಸಾವಿರ ಅಲ್ಲ ಲಕ್ಷ ಊಹೂಂ ಲಕ್ಷವೂ ಅಲ್ಲ ಕೋಟಿ ಸಾರಿ ಬೈಸಿಕೊಂಡಿರಬಹುದು ಅನಿಸಿತು ಮತ್ತು ಅವರ ಮೇಲೆ ಒಂದು ರೀತಿಯ ಸಹಾನುಭೂತಿ ಮತ್ತು ಅನುಕಂಪ ಹುಟ್ಟಿತು. ಅವರಾಕೆ ಅಲ್ಲಿಲ್ಲದಿದ್ದರೆ ನಾನು ನನ್ನ ಸ್ವಂತ ಮನೆಯಲ್ಲಿ ಪಡುತ್ತಿರುವ ಮಾನಸಿಕ ಹಿಂಸೆ ಅವರಿಗೆ ಹೇಳುತ್ತಿದ್ದೇನೋ ಏನೋ ಎಂದು ಎಷ್ಟೋ ಸಲ ಅನಿಸಿದೆ! ಇಬ್ಬರೂ ಒಬ್ಬರ ಕಷ್ಟ ಮತ್ತೊಬ್ಬರಿಗೆ ಹೇಳಿಕೊಂಡು ಸಾಂತ್ವನ ಪಡೆಯಬಹುದಿತ್ತು ಅಂತಲೂ ಅನಿಸಿದೆ. ಹಾಗಾಗಿ ಆಗಾಗ ಶ್ರೀ ಶ್ರೀಕಂಠನ್ ಅವರ ನೆನಪು ಬಂದರೆ ಅದರ ಜತೆಜತೆಗೆ ಈ ನೆನಪು ಸಹಾ ಬರುತ್ತದೆ, ಒಂದು ಕೊಂಡರೆ ಒಂದು ಉಚಿತ ಅನ್ನುವ ಹಾಗೆ! ಈ ಯೋಚನೆಗಳು ನಂತರ ಬಂದದ್ದು. ಅವರ ಹತ್ತಿರ ಮುಖ್ಯವಾದ ಮಾತು ಮುಗಿಯಿತು.
ಸರಿ ಹೊತ್ತಾಗಿದೆ ಅಂತ ಆ ಮಾತು ಅಲ್ಲಿಗೇ ನಿಲ್ಲಿಸಿ ಮುಂದೆ ನಾವು ಹೋಗಿದ್ದ ಸಂಗತಿಗೆ ಬಂದೆವು. ಮುಂದೆ ಯಾವತ್ತಾದರೂ ಹಗಲಿನಲ್ಲಿ ಬಂದು ಅವರ ರೂಮಿನಲ್ಲಿ ಕೂತು ಅವರ ಲೈಬ್ರರಿ ನೋಡುತ್ತಾ ಅವರ ಜತೆ ಮಾತಾಡಬೇಕು ಅಂತ ಮನಸಿನಲ್ಲೇ ಯೋಜನೆ ಹಾಕಿಕೊಂಡೆ. ಮತ್ತೆ ಆ ದಿನ ಬರಲಿಲ್ಲ ಮತ್ತು ಜೀವನದಲ್ಲಿ ಮಾಡದೇ ಉಳಿದ ಹಲವು ಸಹಸ್ರಾರು ಕಾರ್ಯಗಳ ಪಟ್ಟಿಗೆ ಇದೂ ಸೇರಿ ನನ್ನ ಕೊರಗು ಹೆಚ್ಚಿತು. ಆಗಾಗ ಶ್ರೀಕಂಠನ್ ಅವರ ಸಂಗೀತ ಕೇಳಿದಾಗ ಅವರ ಬಗ್ಗೆ ಓದಿದಾಗ ಅದಕ್ಕಿಂತಲೂ ಹೆಚ್ಚಾಗಿ ಆಡುಕಳೆ ಚಕ್ಕಲಿ (ಇದರ ಅಂದರೆ ಆಡುಕಳೆ ಓನರು ಶ್ರೀ ಶ್ರೀಕಂಠನ್ ಅವರ ಮಗಳು ಶ್ರೀಮತಿ ರತ್ನಮಾಲಾ ಪ್ರಕಾಶ ಅವರು)
ಶಿವಾನಂದ ಸ್ಟೋರ್ಸ್ ಬಗ್ಗೆ ಹೇಳಿಲ್ಲ ಅಂತ ಕಾಣುತ್ತೆ. ಇದು ಬೆಂಗಳೂರಿನ ಮೊಟ್ಟ ಮೊದಲಿನ ಡಿಪಾರ್ಟ್ಮೆಂಟ್ ಸ್ಟೋರ್ಸ್‌ಗಳಲ್ಲಿ ಒಂದು. ಶೇಷಾದ್ರಿ ಪುರಕ್ಕೆ ಅಂಟಿದ ಹಾಗೆ ಇದು ಇದ್ದರೂ ಕುಮಾರ ಪಾರ್ಕ್ ಪೂರ್ವ, ಗಾಂಧಿನಗರದ ಅಂಚೆ ವ್ಯಾಪ್ತಿಗೆ ಇದು ಸೇರಿದ್ದು. ಅದರ ಎದುರು ಆಗ ದೇಸಾಯಿ ನರ್ಸಿಂಗ್ ಹೋಂ ತುಂಬಾ ಹೆಸರುವಾಸಿ, ಅದರ ಪಕ್ಕ ಜನಾರ್ಧನ ಹೋಟೆಲ್. ಇಲ್ಲೇ ಶಿವರಾಮ ಕಾರಂತರು ಬೆಂಗಳೂರಿಗೆ ಬಂದಾಗ ವಾಸ್ತವ್ಯ ಮಾಡುತ್ತಿದ್ದ ಸ್ಥಳ. ಅದರ ಪಕ್ಕ ಡಾಕ್ಟರ್ ಓಂ ಪ್ರಕಾಶ್ ಅವರ ಮನೆ.
ಡಾಕ್ಟರ್ ಓಂ ಪ್ರಕಾಶ್ ಡಾಕ್ಟರ್ ಶಿವರಾಂ ಅವರ ಮಗ ಮತ್ತು ಚೆಸ್ಟ್ ಡಾಕ್ಟರ್ ಎಂದು ಹೆಸರುವಾಸಿ. ಅದರ ಎದುರು ಮಲ್ಲಿಗೆ ನರ್ಸಿಂಗ್ ಹೋಂ. ಶಿವಾನಂದ ಸ್ಟೋರ್ಸ್‌ನ ಎಡಕ್ಕೆ ತಿರುಗಿ ಮುಂದೆ ಹೋದರೆ ಅಲ್ಲಿ ಖಾದಿ ಭವನ, ಅದಕ್ಕೆ ಮೊದಲು ಎಡಕ್ಕೆ ತಿರುಗಿದರೆ ಗಾಂಧಿ ಭವನ, ಗಾಂಧಿ ಅಧ್ಯಯನ ಕೇಂದ್ರ, ಅದಕ್ಕೆ ಅಂಟಿದ ಹಾಗೆ ಒಂದು ವೃದ್ಧಾಶ್ರಮ ಅದರ ಪಕ್ಕ ಅನಾಥಾಶ್ರಮ. ಇವುಗಳ ಸ್ಥಾಪಕರು ರಾಮಕೃಷ್ಣ ಹೆಗಡೆ ಅವರ ತಾಯಿ. ಅದೇ ಕಾಂಪೌಂಡ್‌ನಲ್ಲಿ ಮುಂದಕ್ಕೆ ಬಂದರೆ ಸರ್ವೋದಯ ಸಂಘ ಮತ್ತು ಎಡಭಾಗಕ್ಕೆ ಎದುರಿನಲ್ಲಿ ಒಂದು ರಾಜಸ್ಥಾನ್ ಕಾಲೋನಿ. ಸ್ಥಳೀಯರ ಮಾತಿನಲ್ಲಿ ಇದು ಮಾರವಾಡಿ ಕಾಲೋನಿ. ಈಗ ಹೇಳಿದ ಎಲ್ಲಾ ಸ್ಥಳಗಳಿಗೂ ನನಗೂ ಒಂದು ರೀತಿಯ ವಿಚಿತ್ರ ಅನ್ನಬಹುದಾದ ನಂಟು. ಅದನ್ನು ಮುಂದೆ ವಿವರಿಸುತ್ತೇನೆ.
ನನಗೆ ಶೇಷಾದ್ರಿಪುರ ಅಂದಕೂಡಲೇ ನೆನಪಾಗುವ ಹಲವು ಸ್ಥಳಗಳಲ್ಲಿ ಅಲ್ಲಿನ ಕಾಮಧೇನು ಪ್ರಕಾಶನ ಮತ್ತು ಅದನ್ನು ನಡೆಸುತ್ತಿರುವ ಶ್ರೀ ಶಾಮಸುಂದರ್ ಅವರು. ಇವರ ಪರಿಚಯ ಹೇಗಾಯಿತು ಅಂತ ವಿವರಿಸಬೇಕಾದರೆ ನನ್ನ ಅರಾಸೇ ನಂಟು ಶುರುವಾದದ್ದು ಹೇಳಬೇಕು. ಅದನ್ನು ಈಗ ವಿವರಿಸಲೇ….
ಅ.ರಾ.ಸೇತೂರಾಮರಾವ್
‘ಅ.ರಾ.ಸೇ’ ಎಂದೇ ಖ್ಯಾತರಾಗಿರುವ ಶ್ರೀ ಅಣಜಿರಾಮಣ್ಣ ಸೇತೂರಾಮರಾವ್ ರವರು ತಮ್ಮದೇ ಆದ ಹಾಸ್ಯದ ಛಾಪನ್ನು ಮೂಡಿಸಿ, ವಿಶಿಷ್ಟ ವರ್ಗವೊಂದನ್ನು ಬೆಳೆಸಿಕೊಂಡಿದ್ದ ಹಾಸ್ಯ ಲೇಖಕರು.
೧೯೩೧, ಜನೆವರಿ, ೨೬ರಂದು ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ಜನಿಸಿದರು. ಭರಮಸಾಗರದ ಸುತ್ತಮುತ್ತಲ ಸ್ಥಳಗಳಾದ ಮರಡಿಹಳ್ಳಿ, ಮಾಯಕೊಂಡ, ದುರ್ಗ ಮುಂತಾದ ಊರುಗಳಲ್ಲಿ ಅಧ್ಯಾಪಕರಾಗಿ ‘ಕನ್ನಡ ಉಪನ್ಯಾಸಕ’ರಾಗಿ ಸೇವೆಸಲ್ಲಿಸಿ ಕಡೆಗೆ ಕಾಲೇಜಿನ ಉಪನ್ಯಾಸಕರಾಗಿ ನಿವೃತ್ತರಾದರು.
ಅ.ರಾ.ಸೇ.ಯವರು ಕೊರವಂಜಿ ಬಳಗದ ಲೇಖಕರು. ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್ಸಿ ಮಾಡುವಾಗ ‘ಪಂಚ್ ಪತ್ರಿಕೆ’ಯಿಂದ ಪ್ರಭಾವಿತರಾಗಿ ‘ಕೊರವಂಜಿ’ಗೆ ಬರೆದು ಖ್ಯಾತರಾದರು. ೧೯೬೭-೬೮ ರಲ್ಲಿದಾವಣಗೆರೆ ಸರ್ಕಾರಿ ಶಿಕ್ಷಣ ಕಾಲೇಜಿ ನಿಂದ ಬಿ.ಎಡ್, ಕವಿವಿ ಯಿಂದ ಕನ್ನಡ ಎಂ.ಎ ಪಡೆದರು. ‘ರಾಶಿ’ ಯವರ ಮಗ ‘ಶ್ರೀ ಶಿವಕುಮಾರ್’ ಪ್ರಾರಂಭಿಸಿದ ‘ಅಪರಂಜಿ ನಗೆ ಪತ್ರಿಕೆ’ಗೆ ಸಲಹೆ, ಸೂಚನೆ, ಲೇಖನದಿಂದ ನೆರವಾದರು. ಅವರು 9 ಎಪ್ರಿಲ್ 2015 ರಂದು ನಿಧನರಾದರು.
ಕುಮಾರವ್ಯಾಸ ಭಾರತದ ೮,೬೦೦ ಪದ್ಯಗಳಿಗೆ ತಾತ್ಪರ್ಯ ಬರೆದಿದ್ದಾರೆ, ‘ಕಾಮಧೇನು ಪ್ರಕಾಶನದ ಶ್ರೀ ಶಾಮಸುಂದರ್’, ‘ಗಂಜೀಫಾ ಚಿತ್ರ’ಗಳೊಂದಿಗೆ ಅಚ್ಚುಕಟ್ಟಾಗಿ ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಉಪಕರಿಸಿದ್ದಾರೆ. ಈಗ ಜೈಮಿನಿ ಭಾರತಕ್ಕೆ, ತಾತ್ಪರ್ಯ ಬರೆಯಲಾರಂಭಿಸಿದ್ದಾರೆ. ‘ನಗೆಮುಗಿಲು’- ಇವರ ಕವನಸಂಕಲನ. ಶೀನಣ್ಣನ ರೋಮಾನ್ಸ್ – ಆಯ್ದ ನಗೆ ಬರಹಗಳ ಸಂಕಲನ. ‘ಸೊಗದಿರಳು ನಲ್ವಗಲು’-ಇವರ ಕಾದಂಬರಿ. ‘ಅನುಭವಾಮೃತ’ ದ ತಾತ್ಪರ್ಯ, ಅದರ ಬಗ್ಗೆ ಆಳವಾದ ಅಧ್ಯಯನದೊಂದಿಗೆ ಮೂಲದೊಂದಿಗೆತಾತ್ಪರ್ಯ, ‘ಪರಮಾರ್ಥಪದಕೋಶ’, ‘ದೇವಿಪುರಾಣ’, ‘ಶ್ರೀ ಗುರುಕಥಾಮೃತ'(ಶ್ರೀ ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರ ಜೀವನ ಚರಿತ್ರೆ),ಇವರ ಅಮೂಲ್ಯಕೃತಿಗಳು. ‘ಹಾಸ್ಯಲೇಖನ’ಗಳನ್ನಲ್ಲದೆ, ಇವರು ‘ಕವನಸಂಗ್ರಹ’, ‘ಕಾದಂಬರಿ’, ‘ಗದ್ಯ ರೂಪಾಂತರ’, ‘ಪ್ರವಾಸ ಕಥನಗಳು, ‘ಜೀವನ ಚರಿತ್ರೆ’ಗಳನ್ನೂ ಸಹ ಪ್ರಕಟಿಸಿದ್ದಾರೆ. ಇವರ “ಮುಗಿಲುಹಳ್ಳಿ ಬಖೈರು” ಹಾಸ್ಯ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ ದೊರಕಿದೆ.
ಇದು ಅರಾಸೇ ಅವರ ಬಗ್ಗೆ ವಿಕಿಪೀಡಿಯ ಮಾಹಿತಿ .
ವಿನೋದ ಎನ್ನುವ ಹಾಸ್ಯ ಮಾಸಪತ್ರಿಕೆಯ ಸಂಪಾದಕರಾಗಿದ್ದ ಶ್ರೀದೇಶಹಳ್ಳಿ ಜಿ. ನಾರಾಯಣ ಅವರು ಆಗಾಗ ವಿಶೇಷ ಸಭೆ ಸಮಾರಂಭ ನಡೆಸಿ ವಿನೋದ ಪತ್ರಿಕೆಯ ಯಶಸ್ಸಿಗೆ ಕೈ ಜೋಡಿಸುತ್ತಿದ್ದರು. ೧೯೫೧ ರಲ್ಲಿ ಆರಂಭವಾದ ಪತ್ರಿಕೆಯ ಒಂದು ವಿಶೇಷ ಸಂಚಿಕೆಯ ಬಿಡುಗಡೆ ಸಮಾರಂಭ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಏರ್ಪಾಟಾಗಿತ್ತು. ನಾನು ಹಾಗೂ ಗೌತಮ (ಶ್ರೀ ರಾಮಮೂರ್ತಿ ಎಸ್.. ಖ್ಯಾತ ಸಾಹಿತಿಗಳು ಮತ್ತು ನನ್ನ ಗೆಳೆಯರು) ಈ ಸಭೆಗೆ ಹೋಗಿದ್ದೆವು. ಈ ಸಭೆಗೆ ಎಂದೇ ಹೋಗಿರಲಿಲ್ಲ. ಇನ್ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದವರು ವಾಪಸ್ ಆಗುವಾಗ್ಗೆ ಹಾಗೆ ಇಲ್ಲಿ ನುಗ್ಗಿದ್ದೆವು. ಕೊನೇ ಸಾಲಿನ ಕುರ್ಚಿಯಲ್ಲಿ ಕೂತೆವು. ವೇದಿಕೆ ಮೇಲೆ ಅರಾಸೇ ಭಾಷಣ ನಡೆಯುತ್ತಿತ್ತು. ಆಗಲೇ ಸುಮಾರು ಹೊತ್ತು ಮಾತು ಆಡಿರಬೇಕು, ಪ್ರೇಕ್ಷಕರು ನಿರಾಸಕ್ತಿಯಿಂದ ಕೂತಿದ್ದ ಹಾಗೆ ನಮಗನ್ನಿಸಿತು. ಸರಿಯಾಗಿ ಕೊರೆದು ಕತ್ತರಿಸಿ ಹಾಕಿಬಿಟ್ಟಿದ್ದಾರೆ ಅಂತ ನಾನು ರಾಮಮೂರ್ತಿ ಕಿವಿಯಲ್ಲಿ ಹೇಳಿದೆ, ಅದೇ ಸಮಯದಲ್ಲಿ ಅರಾಸೇ ಒಂದು ಜೋಕ್ ಹೊಡೆದರು. ರಾಮಮೂರ್ತಿ ಜೋರಾಗಿ ನಕ್ಕರು, ನಾನು ಅವರ ಜತೆ ಸೇರಿದೆ. ಇಡೀ ಪ್ರೇಕ್ಷಕ ಸಮೂಹದಲ್ಲಿ ಕೇಳಿಸಿದ ಈ ಜೋಡಿ ನಗೆ ಅರಾಸೇ ಅವರ ಗಮನ ಸೆಳೆಯಿತು. ಭಾಷಣ ಮುಗಿಸಿ ಮುಂದಿನ ಭಾಷಣಕಾರರಿಗೆ ಮೈಕ್ ಒಪ್ಪಿಸಿ ಸೀದಾ ಹಿಂದೆ ಬಂದು ನಮ್ಮಿಬ್ಬರ ಮಧ್ಯೆ ಚೇರ್ ಎಳೆದುಕೊಂಡು ಕೂತರು.
ನಾವು ನಮ್ಮ ಪರಿಚಯ ಮಾಡಿಕೊಂಡೆವು. ಹಾಸ್ಯ ಬರಹಗಾರರು, ಪತ್ರಿಕೆಗಳಿಗೆ ಬರೀತೀವಿ, ಪ್ರಜಾವಾಣಿ ಅವರು ತಿಂಗಳಿಗೆ ಸುಮಾರು ನಮ್ಮ ಲೇಖನ ಪ್ರಕಟಿಸುತ್ತಾರೆ…. ಈ ಧಾಟಿಯಲ್ಲಿ ನಮ್ಮ ಪರಿಚಯ ಸಾಗಿದ್ದು ಅವತ್ತು ಆದ ಅವರ ಪರಿಚಯ ಕೊನೆ ತನಕ ಮುಂದುವರೆದು ತುಂಬಾ ಒಳ್ಳೆಯ ಸ್ನೇಹಕ್ಕೆ ಮತ್ತು ಬಾಂಧವ್ಯಕ್ಕೆ ನೆರವಾಯಿತು. ಅರಾಸೇ ಅವರು ಅಪರಂಜಿಗೆ ಬರೀರಯ್ಯಾ ನೀವುಗಳು ಅಂತ ಹೇಳಿ ಅಪರಂಜಿ ಪತ್ರಿಕೆಗೆ ನಮ್ಮ ಲೇಖನಗಳನ್ನು ಬರೆಸಿಸಿದರು. ಲೇಖನ ಪ್ರಕಟ ಆದಕೂಡಲೇ ಒಂದು ಪೋಸ್ಟ್ ಕಾರ್ಡ್‌ನಲ್ಲಿ ಅದರ ಬಗ್ಗೆ ಪುಟ್ಟ ರೈಟ್ ಆಫ್ ರೆಡಿ ಆಗಿ ಎರಡುಮೂರು ದಿವಸದಲ್ಲಿ ಮನೆಗೆ ಬರುತ್ತಿತ್ತು. ಆಗ ಅವರು ಭರಮ ಸಾಗರದ ನಿವಾಸಿ. ಭರಮ ಸಾಗರ ನನ್ನ ಭರಮಸಾಗರ ಎನ್ನುವ ಅವರ ಹಾಸ್ಯಗೀತೆ ತುಂಬಾ ಫೇಮಸ್. ಈ ಗೀತೆ ಕುರಿತು ಶ್ರೀ ದಿವಾಕರ್ ಅವರು ಪ್ರಜಾವಾಣಿಯ ಒಂದು ಲೇಖನದಲ್ಲಿ ಮೆಚ್ಚುಗೆ ವ್ಯಕ್ತ ಮಾಡಿದ್ದರು. ಅದನ್ನು ಅರಾಸೇ ತುಂಬಾ ಸಂತೋಷದಿಂದ ಹಂಚಿಕೊಂಡಿದ್ದರು. ಅವರ ಊರಿಗೆ ಶ್ರೀ ಶಿವಕುಮಾರ ಅವರ ಸಂಗಡ ಹೋಗಿದ್ದು, ಅವರು ಸಂತೋಷದಿಂದ ನಮ್ಮನ್ನು ಕೋಮಾರಣ ಹಳ್ಳಿಗೆ, ಶ್ರೀಧರ ಸ್ವಾಮಿ ಮಠ ಕ್ಕೆ ಮುಂತಾದೆಡೆ ಕರೆದುಕೊಂಡು ಹೋಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ವಾರ್ಷಿಕ ಹಾಸ್ಯ ಸಂಕಲನ ಸಂಪಾದನೆ ಮಾಡುವಾಗ ಗೋಪು (ಅವರು ನನ್ನನ್ನು ಹೀಗೇ ಕರೆಯುತ್ತಾ ಇದ್ದದ್ದು) ನಿನ್ನ ಸ್ನೇಹಿತರು ಹಾಗು ಶತ್ರುಗಳ ಉತ್ತಮ ಅನಿಸುವ ಲೇಖನ ಇದ್ದರೆ ಕಳಿಸು ಅಂದಿದ್ದರು!
ಕುಮಾರವ್ಯಾಸನ ಭಾರತದ ಮೇಲೆ ಅಥಾರಿಟಿಯಿಂದ ಮಾತನಾಡಬಲ್ಲ ಕೆಲವೇ ವಿದ್ವಾಂಸರಲ್ಲಿ ಇವರೂ ಒಬ್ಬರು. ಬೆಂಗಳೂರಿಗೆ ಬಂದಾಗ ಅವರಿಗೆ ಇಸ್ಕಾರ್ಟ್ ನಾನು. ಅವರ ಟ್ರಂಕ್ ನನ್ನ ಕೈಗಿತ್ತು ಅವರು ಹೋಗಬೇಕಾದ ಜಾಗ ಹೇಳುವುದು, ನಾನು ಅವರನ್ನು ಅಲ್ಲಿಗೆ ಕರೆದೊಯ್ಯುವುದು ನಡೆಯುತ್ತಿತ್ತು.
(ಇನ್ನೂ ಇದೆ…)
ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
ರತ್ನಮಾಲ ಶ್ರೀಕಂಠನ್ ಅವರ ಮಗಳು.
ಮೇಡಂ,ಧನ್ಯವಾದಗಳು. ತಪ್ಪನ್ನು ಸರಿಪಡಿಸುತ್ತೇನೆ.