1 ಪ್ರೇಮ ಪರಾಕಾಷ್ಟೆ..!
ಭೆಟ್ಟಿಯಾಗುವ ಉತ್ಕಟಕೆ ಪ್ರಸವ ತೀವ್ರತೆ
ಕಚಗುಳಿಯ ಉದರ, ನೆನಪ ನೇವರಿಕೆ..
ಯಾರಿರದ ಕಾಡುಮೇಡುಗಳ ಅಲೆದು
ಹೆಬ್ಬಂಡೆ ಸೂರಿರದ ಗುಡ್ಡ ಸೇರುತ ನಲಿದು…
ಬಂಡೆಕಲ್ಲ ಮೇಲೆ ಕೂತು, ಬೆನ್ನಬೆನ್ನಿಗಾತು..
ರವಿ ತಾ ಸುಡುತ ಮುಖಕೆ ಕೆಂಪೆರಚಿ
ನಡುವ ಹಿಡಿವ ಹೊತ್ತು ನಾಚಿಕೆಯ ಕಳಚಿ
ಪಿಸುನುಡಿಯ ಗುಟ್ಟು ತಂಗಾಳಿಯಲಿ ರಟ್ಟು..
ಎದೆಯಲವಿತ ಭಾವ ಚಿಟ್ಟೆಯಾಗುವ ಸಮಯ
ಕೋಟಿ ಮಾತುಗಳೆನಿತು ಸೇರಿ ಗಮ್ಯ
ಬೆನ್ನಲಿಳಿವ ನದಿ ಹರಿದು ಸುರಿದು
ಪಸೆಯಾದಂತೆಲ್ಲಾ ಮೌನ ಬೀಗ ಜಡಿದು..
ಹುಟ್ಟುತಿಹ ಭಾವಕೆ ಹರೆಯ ಬಾಗಿ
ಹೂವು ಬಾಡುವ ಬಿಸಿಲು ಹಣ್ಣೊಲವು ಮಾಗಿ..
ಗಿಡಮರಗಳಿದ್ದರೆ ಚೆಂದಿತ್ತು ಅವನೆಂದ ನೆರಳ ಸೋಗೆ..!
ನಿನ್ನೊಲವ ನೆರಳಿರೆ ಸುಡದು ಬಿಸಿಲ ಬೇಗೆ..!!
ನನ್ನೆಷ್ಟು ಪ್ರೇಮಿಸುವೆ..!? ಕಡಲಷ್ಟೇ ಆಕಾಶದಷ್ಟೇ..!?
ಅಧರಕ್ಕೊತ್ತಿ ಮಧುಮನೆಂದ ಇಷ್ಟೇ..!
ಪ್ರೇಮವೆಂದರೆ ಮುತ್ತೇ..!? ಮತ್ತೇನಲ್ಲವೆ..!?
ನೀನು..!ನಿನ್ನಷ್ಟು..! ನೀನಷ್ಟೆ..! ಪ್ರೇಮ ಪರಾಕಾಷ್ಟೆ..!
ಇಳಿಸಂಜೆ ಗೂಡು ಸೇರುವ ತವಕವಾಕೆಗೆ
ಕತ್ತಲಾವರಿಸಲಿ ಮತ್ತೆ ಹೊರಡುವ ಹಠ ಹಿಡಿದ ನಲ್ಲ
ಬೆಳಗಾಗಲಿ ಮತ್ತೆ ಮನ್ವಂತರಗರುರುಳಲಿ
ಹಳಿದು ಹೊರಟಳವಳು…
ಮತ್ತುದಿಸಲು ವಿರಹ, ದಾವಾಗ್ನಿ ಸೂರ್ಯ…!
2 ನೆನಪ ನೇವರಿಕೆ
ಈ ರಾತ್ರಿಗಳೇಕೆ ಹೀಗೆ?
ಎದೆಯ ದುಮ್ಮಾನಗಳನೆಲ್ಲಾ ಧುತ್ತನೆ
ಬಡಿದೆಬ್ಬಿಸಿ ತಾನೂ ನಿದ್ರಿಸದೆ ನನ್ನನೂ
ಬಿಡದೆ ವಿಕ್ರಮನ ಬೇತಾಳದಂತೆ
ಬೆಂಬಿಡದೆ ಕಾಡುವುದು…!?
ನೆಪಮಾತ್ರಕ್ಕೆ ಅವನ ನೆನಪುಗಳು
ಬಂದು ಹೋಗುವುದಿದ್ದರೆ ಎಷ್ಟು ಚೆಂದಿತ್ತು!?
ನಿದಿರೆಗೆಡಿಸಿ ಕರುಳ ಹಿಂಡಿ;
ಎದೆ ಬಗೆವಷ್ಟು, ಪಕ್ಕೆಲುಬುಗಳ ಮುರಿದಷ್ಟು
ನೋವಿಡುವುದ್ಯಾವ ನ್ಯಾಯ?
ಇರುಳಗರ್ಭದಲಿ ಸುರಿದ ಕಣ್ಣೀರು
ಮರುಭೂಮಿಯ ಮರೀಚಿಕೆಯಷ್ಟೇ..!
ಆಂತರ್ಯದ ಆರ್ತನಾದ
ಬೀಗಜಡಿದ ದ್ವಾರಗಳಂತೆ..
ಆತನಿಗೆಂದು ನಿರ್ಬಂಧ..!
ಅತಿಕ್ರಮಿಸುವ ಹುನ್ನಾರ ನಿರಂತರ…
ಹರಡಿದ ಹೆರಳು ಒದ್ದೆಯಾದದ್ದು
ತಾಪಮಾನದಿಂದಲ್ಲ…!
ತೇವದ ತಲೆದಿಂಬು
ಮಗ್ಗಲು ಬದಲಿಸುವಾಗ
ಕೆನ್ನೆ ತಂಪಿರಿಸಿದ್ದು; ನೆಂದ ಕಣ್ಪನ್ನೀರಿನಲಿ…!!
ಅದೆಷ್ಟು ನೋವುಗಳ ಹುದುಗಿಸಿತ್ತೋ ಅದು!?
ಇರುಳ ಆಪ್ತ ಸಂಗಾತಿ..!!
ಬೋರೆ ಬಿದ್ದು ಅವಡುಗಚ್ಚಿ
ಅವುಚಿದ ಮುಖ, ಹುದುಗಿದ್ದು ಅದರೊಳಗೆ….!
ಕಣ್ಣೀರ ಹೀರಿ; ಒಡಲ ಬೆಚ್ಚಗಪ್ಪುಗೆ
ನೀಡುತ್ತಾ….. ಮತ್ತವನ ಸಖ್ಯ ಜ್ಞಾಪನ!!
ಅಶ್ರುತರ್ಪಣದಲಿ ಎಳ್ಳು ನೀರು ಬಿಟ್ಟ ಭವಬಂಧ…
ಉಸಿರ ಏರಿಳಿತ ಹೃದಯದ ಬಡಿತ
ಗದ್ಗದಿತ ಕಂಠ, ಎಡೆಬಿಡದೆ ಬಿಕ್ಕುತ್ತಾ..
ಇರುಳ ಬೆರಳುಗಳು ಎದೆಗಾನಿಸಿ
ಎಂದೂ ಸಾಂತ್ವನಿಸಿಲ್ಲ..
ಕಣ್ಣೀರ ಒರೆಸಿಲ್ಲ..
ಆದರೂ
ಮನದ ದುಗುಡಗಳಿಗೆ ಕಾರಿರುಳ ವ್ಯಾಮೋಹ..!!
ಹುಸಿಯಾಸೆಗಳ ವಿಜೃಂಭಣೆಯಲಿ
ಇರುಳ ಮೆರವಣಿಗೆ…!!
ಹಗಲ ಜಂಜಟಗಳಿಗೆ
ರಾತ್ರಿಗಳ ನೇವರಿಕೆ…!
ಅರ್ಚನಾ ಎಚ್ ಬೆಂಗಳೂರಿನವರು
ಕತೆ ಮತ್ತು ಕವನ ರಚನೆಯಲ್ಲಿ ಆಸಕ್ತಿ ಹೊಂದಿದ್ದಾರೆ
ದಸರಾ ಕಾವ್ಯ ಪುರಸ್ಕಾರ ಸೇರಿದಂತೆ ಹಲವು ಪುರಸ್ಕಾರಗಳು ಇವರ ರಚನೆಗಳಿಗೆ ಲಭಿಸಿವೆ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಹಳೆಯ ಭಾವ ವಸ್ತು ವನ್ನು ಹೊಸ ಪರಿಭಾಷೆಯಲ್ಲಿ ನಿರೂಪಿಸಿದ ಸಾಲುಗಳು ಇಷ್ಟ ಆಯಿತು.
ಇದೆ ಆಗಬೇಕಾದುದು. ಭಾವ ಲೋಕವನ್ನು ಗ್ರಹಿಸುವ ಹೊಸತನದಲ್ಲಿಯೇ ಕವಿ ಕವಿತೆಯ ಅನನ್ಯ ತೆ ಇದೆ.
ಬರೀತಾ ಇರಿ ಸದಾ ಅರ್ಚನಾ