ಅಲಂಕಾರ

ದಿನವು
ಸೂರ್ಯಕಾಂತಿಯನ್ನು
ಮುಡಿಗೇರಿಸಿಕೊಂಡಾಗ
ಗಿಡ ಮರಗಳ ತಲೆ ಬಳಸಿ
ಹೆಗಲೇರಿ ಕುಳಿತ
ಬತ್ತಲೆ ಚಳ್ಳೆಪಿಳ್ಳೆ ಮೊಗ್ಗುಗಳು ಕಣ್ಣರಳಿಸಿ ‘ಆಹಾ’! ಎಂದು ಉದ್ಗರಿಸುತ್ತವೆ.

ಹದಿಹರೆಯದ ಮೊಗ್ಗೊಂದು ಬಣ್ಣದ
ಕುಪ್ಪಸ ತೊಟ್ಟು ನಿಂತ
ಚಂದಕೆ ಅದರ ಪ್ರತಿಬಿಂಬವೇ
ಮೈಮರೆಯುತ್ತದೆ.
ನೀಳ ದಂಟುಕೊರಳ ಮೇಲಿನ
ಅದರ ಚೂಪು ಮೊಗವನ್ನು
ಮುದ್ದಿಸಲೆಂದೇ ಕಿರಣಗಳ ಗಡ್ಡದ ಬೆಳಕು ಮುಖವು ಬಾಗಿದಾಗ
ನಾಚುತ್ತಲೇ ಅದು ಮೈತೆರೆಯುತ್ತದೆ.

ಮಿಂದು ಚಂಡಿಪುಂಡಿಯಾದ
ಹಂಸಪಕ್ಷಿಗಳು
ಒದ್ದೆ ಒಜ್ಜೆ
ಮೋಡ ಪುಕ್ಕಗಳ ಪಕ್ಕೆಗಳನ್ನು
ಕತ್ತು ಕೊಂಕಿಸಿ ಕುಕ್ಕುತ್ತ
ಕೋಮಲ ಮೈಯನ್ನು ಜಾಡಿಸಿ ಫಟ್ ಫಟ್ಟೆಂದು ಕೊಡವಿದಾಗ
ಮಳೆ ಸುರಿಯುತ್ತದೆ.

ಸೂರ್ಯನು ತನ್ನ ಮೈಯ ಬೆಂಕಿ ಕಾಪಾಡಲು ಬೆಳಕು
ಕೊಡೆ ಬಿಡಿಸುತ್ತಾನೆ,
ಖಾಂಡವದಹನ ಕಾಲದಲ್ಲಿ
ಅರ್ಜುನ ಅಗ್ನಿಗೆ ಬಿಲ್ಗೊಡೆ ಬಿಡಿಸಿದ ನೆನಪಲ್ಲಿ.

ಮಳೆಬಿಲ್ಲು ಖಮಾಜ್ ರಾಗದಲ್ಲಿ
ಹೋಲಿ ಹಾಡನ್ನು ಹಾಡುತ್ತ
ಮೈಮುರಿದು ಬಿದ್ದು
ಎರಡು ಹೋಳುಗಳಾಗಿ
ನಲ್ಲ – ನಲ್ಲೆಯರಾಗುತ್ತವೆ.
ಹೆಣ್ಣು, ಗಂಡಿನ
ತೋಳಲ್ಲಿ ಕಾಮನ ಬಿಲ್ಲಾಗಿ
ಚುಂಬನವೇ ಹೂಬಾಣವಾಗಿ
ಹೃದಯಗಳು ಹೂ ಮಾಲೆಯಾಗುತ್ತವೆ.

ಮೈಗೆ ಮೈ ಉಯ್ಯಾಲೆಯಾಗಿ
ಬೆಂಕಿತುಟಿಗಳ ನೀಳ ಉಸಿರು
ಹೊಲಗಳಲ್ಲಿ ಪೈರುಗಳಾಗಿ
ತಲೆದೂಗುತ್ತವೆ.
ಎರಡು ಹೋಳುಗಳು ಒಂದಾಗಿ
ಚಂದ್ರನಾಗುತ್ತವೆ.

ಗುಲಾಬಿ ಪಕಳೆಗಳ
ಒಂದೊಂದು ಹನಿ
ಕಣ್ಣಲ್ಲೂ ಪ್ರೀತಿಯ ಬಣ್ಣ ಹೊಳೆಯುತ್ತಲೇ
ಅಗಲಿಕೆಯ ಬೇಸರ ಜಾರಿ
ಉದುರುತ್ತವೆ.