ಅವನು ಎರಡೂ ಬ್ಯಾಟುಗಳನ್ನು ನನಗೆ ಕೊಟ್ಟ. ಆ ಬ್ಯಾಟುಗಳೊಂದಿಗೆ ಮನೆಯಲ್ಲಿ ತಮ್ಮನೊಂದಿಗೆ ಆಡುತ್ತಿದ್ದೆ. ಹದಿನೈದು ದಿನವಾದರೂ ಶಾಲೆಗೆ ಆತ ಬರಲಿಲ್ಲ. ಹೊಸದುರ್ಗದ ಕಡೆ ಯಾವುದೊ ಊರಿಗೆ ಹೋದರು ಅಂತ ಗೊತ್ತಾಯ್ತು. ಅಲ್ಲಿನ ಶಾಲೆಗೆ ನೇರವಾಗಿ ವರ್ಗಾವಣೆ ಪತ್ರವನ್ನು ತರಿಸಿಕೊಂಡಿದ್ದರು. ಅಯ್ಯೋ ಆತನ ಪೂರ್ಣ ವಿಳಾಸವು ಇರಲಿಲ್ಲ. ಶಾಲೆಯಲ್ಲಿ ಕೇರಾಫ್ ವಿಳಾಸವನ್ನೆ ಕೊಟ್ಟಿದ್ದರು. ಆತನ ಎರಡು ಬ್ಯಾಟುಗಳು ನನ್ನಲ್ಲಿಯೆ ಉಳಿದು ಬಿಟ್ಟವು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನೆಂಟನೆಯ ಕಂತು
ಬಾಲ್ಯದ ಗೆಳೆತನ ಅಮೂಲ್ಯವಾದುದು. ಯಾವ ಕಲ್ಮಷವಿಲ್ಲದೆ ನೀರಿನೊಂದಿಗೆ ಮಣ್ಣು ಬೆರೆಯುವಷ್ಟೆ ಸಲೀಸಾಗಿ ಪ್ರತಿಯೊಬ್ಬರನ್ನು ಅಪ್ಪಿಕೊಳ್ಳುತ್ತದೆ. ಅದು ಬಾಲ್ಯದ ಮನಸ್ಸಿನ ರೂಪ. ಇಂತಹವರನ್ನೆ ಗೆಳೆಯರನ್ನಾಗಿ ಮಾಡಿಕೊಳ್ಳಬೇಕು ಎಂಬ ಯಾವ ನಿಯಮವನ್ನು ಮನಸ್ಸು ಸ್ವೀಕರಿಸುವುದಿಲ್ಲ. ಅದೊಂದು ಸ್ವಚ್ಛ ತಿಳಿಯ ಮನಸ್ಸ ಚಂದ್ರ. ಹಾಗಾಗಿ ಹತ್ತಿರಕ್ಕೆ ಬಂದವರೆಲ್ಲರಿಗೂ ಸ್ನೇಹದ ಬೆಳಕಿನಲ್ಲಿ ಮಿಂದೇಳುತ್ತಾರೆ ಬೆಳಗುತ್ತಾರೆ, ಸ್ನೇಹವು ಬೆಳಗುತ್ತದೆ. ಪ್ರತಿಯೊಬ್ಬರಿಗೂ ಹಾಗೇ ಅನ್ನಿಸುತ್ತದೆ. ಬದುಕಿನ ದಾರಿಯಲ್ಲಿ ಬಹುದೂರ ದಾಟಿ ಬಂದ ಮೇಲೂ ಬಾಲ್ಯದ ದಿನಗಳು. ನಡೆದ ಘಟನೆಗಳು, ಬಂದು ಹೋದ ಗೆಳೆಯರು ಆಗಾಗ ನೆನಪಾಗುತ್ತಲೆ ಇರುತ್ತಾರೆ. ಆ ನೆನಪುಗಳಲ್ಲೆ ಸವಿನೆನಪೊಂದನ್ನು ಬಿಟ್ಟು ಹೋಗಿರುತ್ತಾರೆ. ಇವೆಲ್ಲವೂ ನಮ್ಮ ಬದುಕನ್ನು ಇನ್ನಷ್ಟು ಪ್ರೀತಿಸುವಂತೆ, ಜೀವಪರವಾಗುವಂತೆ, ನಮ್ಮನ್ನು ನಾವು ಅವಲೋಕಿಸುವಂತೆ ಮಾಡಿರುತ್ತದೆ. ಸಮನ್ವಯ ಕವಿಯೆಂದೆ ಪ್ರಸಿದ್ಧರಾದ ಚನ್ನವೀರ ಕಣವಿಯವರು ‘ಗೆಳೆತನ ‘ಎಂಬ ಕವಿತೆಯನ್ನೆ ಬರೆದಿದ್ದಾರೆ. “ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತನ್ನೆಳಲ ತಂಪಿನಲಿ ತಂಗಿರುವೆನು.. ಎಂದು ಹೇಳುತ್ತ ಮುಂದುವರಿಯುತ್ತ ಗೆಳೆತನದ ಶ್ರೇಷ್ಟತೆಯನ್ನು “ಇಲ್ಲಿ ವಂಚನೆಯಿಲ್ಲ ಚಂಚಲತೆ ಇನಿತಿಲ್ಲ ಮೇಲು ಕೀಳುಗಳೆಂಬ ಬೇಧವಿಲ್ಲ, ಮನವು ಬಾನಗಲ ಎದೆ ತಿಳಿಗೊಳದೊಲು, ಭಾವ ಶುದ್ಧ ಸ್ಪಟಿಕ ಬೆಳದಿಂಗಳು” ಎಂದಿದ್ದಾರೆ. ಅಂತಹದೊಂದು ಗೆಳೆತನವನ್ನು ನಿಮ್ಮ ಮುಂದಿಡುವ ಪ್ರಯತ್ನವಷ್ಟೆ.
ನಮ್ಮ ಶಾಲೆಗೆ ಹೊಸದಾಗಿ ಬರಗೂರಿನಿಂದ ಜಯರಾಮಯ್ಯ ಶಿಕ್ಷಕರು ವರ್ಗಾವಣೆಯಾಗಿ ಬಂದಿದ್ದರು. ಅವರು ನಮಗೆ ಇಂಗ್ಲೀಷ್ ವಿಷಯವನ್ನು ಭೋದಿಸುತ್ತಿದ್ದರು. ಅವರು ಈ ಹಿಂದೆ ಇದ್ದ ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಕರಾಗಿದ್ದರು. ಅವರು ಬಹಳ ಶಿಸ್ತಿನವರಾಗಿದ್ದರು. ಬಹಳ ಗಂಭೀರವಾಗಿ ಕಾಣುತ್ತಿದ್ದ ಅವರಲ್ಲಿ ವಿಶೇಷವಾದ ಹಾಸ್ಯಪ್ರಜ್ಞೆ ಇತ್ತು. ಅವರ ಬೋಧನೆಗೆ ಆಕರ್ಷಿತರಾಗಿದ್ದ ಏಳೆಂಟು ವಿದ್ಯಾರ್ಥಿಗಳು ನಮ್ಮ ತರಗತಿಗೆ ದಾಖಲಾಗಲು ಬಂದಿದ್ದರು. ಅದು ಪಕ್ಕದ ಊರಿನಿಂದ ಎರಡು ಕಿಲೋ ಮೀಟರ್ ನಡೆದು ಬರಬೇಕಾಗಿದ್ದರಿಂದ ಅವರ ಮನೆಯಲ್ಲಿ ಪೋಷಕರು ಬೇಡವೆಂದರು. ಶಿಕ್ಷಕರಿಂದ ಹೇಳಿಸಿ ನೋಡಿದರು. ಯಾವುದಕ್ಕೂ ಜಗ್ಗಲಿಲ್ಲ. ಕೊನೆಗೆ ಪೋಷಕರ ಒತ್ತಡದಿಂದ ಶಿಕ್ಷಕರ ಒತ್ತಾಯದಿಂದ ಕೆಲವು ವಿದ್ಯಾರ್ಥಿಗಳು ವಾಪಸ್ಸಾದರು. ಕೊನೆಗೆ ಉಳಿದುಕೊಂಡವರು ಸೋಮಶೇಖರ್ ಮತ್ತು ವೀರೇಂದ್ರ ಪಾಟೀಲ್ ಎಂಬ ಇಬ್ಬರು ವಿದ್ಯಾರ್ಥಿಗಳು ಮಾತ್ರ. ಯಾರೆ ಬಂದರೂ ನನಗೆ ಬಹುಬೇಗ ಸ್ನೇಹಿತರಾಗುತ್ತಿದ್ದರು. ಅದಕ್ಕೆ ನಾನು ತರಗತಿಗೆ ಮೊದಲಿಗನಾಗಿದ್ದೆ. ಓದಿನಲ್ಲಿ ಬಹಳ ಚುರುಕು ಎಂಬ ವಿಶೇಷಣಗಳು ಕಾರಣವಾಗಿದ್ದವು. ಅದರಲ್ಲಿ ಹೆಚ್ಚು ಆಕರ್ಷಿತನಾದವನು ವೀರೇಂದ್ರ ಪಾಟೀಲ್. ಯಾಕೆಂದರೆ ಇಬ್ಬರ ಮನೆಯ ಸ್ಥಿತಿಯೂ ಒಂದೆಯಾಗಿತ್ತು. ಹಾಗಾಗಿ ಇಬ್ಬರೂ ಬಹಳ ಆತ್ಮೀಯರಾದೆವು.
ಅವರದು ಬೇರೆ ಊರಾಗಿತ್ತು. ಹೊಟ್ಟೆ ಪಾಡಿಗಾಗಿ ಪಕ್ಕದ ಬರಗೂರಿಗೆ ಬಂದಿದ್ದರು. ಅವರ ತಂದೆ ಟೈಲರಿಂಗ್ ಮಾಡುತ್ತಿದ್ದರು. ಅವರಮ್ಮ ಗೃಹ ಕೆಲಸ ಜೊತೆಗೆ ಬೀಡಿ ಸುತ್ತುವ ಕಾಯಕ ಮಾಡುತ್ತಿದ್ದರು. ಅವನು ಎಷ್ಟೊ ದಿನಗಳು ಬೆಳಗ್ಗೆ ಊಟವನ್ನೆ ಮಾಡುತ್ತಿರಲಿಲ್ಲ. ಮಧ್ಯಾಹ್ನದ ಗೋಧಿ ಉಪ್ಪಿಟ್ಟು ಹೊಟ್ಟೆಯ ಹಸಿವನ್ನು ನೀಗಿಸುತ್ತಿದ್ದವು. ಒಂದೆರಡು ದಿನ ನಮ್ಮ ಮನೆಯಲ್ಲಿ ಉಳಿದುಕೊಂಡಿದ್ದು ನೆನಪಿದೆ. ಅವನು ಹೆಚ್ಚು ಆಕರ್ಷಿತನಾಗಲು ಕಾರಣ ಅವನತ್ತಿರ ಎರಡು ಬ್ಯಾಡ್ಮಿಂಟನ್ ಬ್ಯಾಟ್ ಇದ್ದವು. ಕೆಲವೆ ದಿನಗಳಲ್ಲಿ ನನಗೆ ಅದರ ಹುಚ್ಚು ಹಿಡಿಸಿಬಿಟ್ಟಿದ್ದ. ನಾನು ಮನೆಯಲ್ಲಿ ಬ್ಯಾಟು ಬೇಕೆಂದು ಹಠಹಿಡಿದಿದ್ದೆ. ನನಗೆ ಅಪ್ಪನಿಂದ ಒಂದಷ್ಟು ಏಟು ಬಿದ್ದವೇ ಹೊರತು, ಬ್ಯಾಟು ಬರಲಿಲ್ಲ. ಅವನು ಪ್ರತಿದಿನ ಎರಡು ಬ್ಯಾಟುಗಳನ್ನು ತರುತ್ತಿದ್ದ. ಇಬ್ಬರೂ ಆಡುತ್ತಿದ್ದೆವು. ಅವನು ನನ್ನಿಂದ ಅನೇಕ ಬಾರಿ ನೋಟ್ಸ್ ಪಡೆದುಕೊಂಡು ಹೋಗುತ್ತಿದ್ದ. ಊರಿನಲ್ಲಿ ಷಟಲ್ ಕಾಕ್ ಆಡುವುದು ವಿಶೇಷವಾಗಿತ್ತು. ಅದರಿಂದಲೆ ಊರಿನವರೆಲ್ಲರೂ ನನ್ನನ್ನೆ ಗಮನಿಸುತ್ತಿದ್ದಾರೆ ಎಂದು ಬೀಗುತ್ತಿದ್ದೆ. ಆದರೆ ಈ ಬೀಗುವಿಕೆ ಬಹಳ ದಿನ ನಡೆಯಲಿಲ್ಲ. ಇದ್ದಕ್ಕಿದ್ದಂತೆ ವೀರೇಂದ್ರ ಶಾಲೆಗೆ ಬರುವುದು ಅಪರೂಪವಾಗತೊಡಗಿತು. ವಾರಕ್ಕೆರಡು ದಿನ ಬರುತ್ತಿದ್ದ ನನಗೆ ಷಟಲ್ ಕಾಕ್ ಆಡುವುದಕ್ಕೆ ಗೆಳೆಯ ಬರುತ್ತಿಲ್ಲವೆಂಬ ಕೊರಗು ಭಾದಿಸುತ್ತಿತ್ತು. ಆಗಾಗ ನಮ್ಮ ತಂದೆಗೆ ಹುಷಾರಿಲ್ಲ ಎನ್ನುತ್ತಿದ್ದ.
ಅವರ ಬೋಧನೆಗೆ ಆಕರ್ಷಿತರಾಗಿದ್ದ ಏಳೆಂಟು ವಿದ್ಯಾರ್ಥಿಗಳು ನಮ್ಮ ತರಗತಿಗೆ ದಾಖಲಾಗಲು ಬಂದಿದ್ದರು. ಅದು ಪಕ್ಕದ ಊರಿನಿಂದ ಎರಡು ಕಿಲೋ ಮೀಟರ್ ನಡೆದು ಬರಬೇಕಾಗಿದ್ದರಿಂದ ಅವರ ಮನೆಯಲ್ಲಿ ಪೋಷಕರು ಬೇಡವೆಂದರು. ಶಿಕ್ಷಕರಿಂದ ಹೇಳಿಸಿ ನೋಡಿದರು. ಯಾವುದಕ್ಕೂ ಜಗ್ಗಲಿಲ್ಲ. ಕೊನೆಗೆ ಪೋಷಕರ ಒತ್ತಡದಿಂದ ಶಿಕ್ಷಕರ ಒತ್ತಾಯದಿಂದ ಕೆಲವು ವಿದ್ಯಾರ್ಥಿಗಳು ವಾಪಸ್ಸಾದರು.
ನನ್ನದೊಂದು ಬಡ ಸೈಕಲ್ ಇತ್ತು. ನಾನಿನ್ನು ‘ತೊಡರುಗಾಲು ‘ತುಳಿಯುವುದಕ್ಕಷ್ಟೆ ಕಲಿತಿದ್ದೆ. ಒಂದಿನ ಅದೆ ಸೈಕಲ್ ತೆಗೆದುಕೊಂಡು ಬರಗೂರಿಗೆ ಹೋಗಿದ್ದೆ. ಅವರ ಮನೆ ಒಂದು ಚಿಕ್ಕ ಬಾಡಿಗೆ ಮನೆ. ತಾಯಿ ಬೀಡಿ ಸುತ್ತುತ್ತಿದ್ದಳು. ಅವರಪ್ಪ ಮಲಗಿದ್ದ ಎಂದು ಕಾಣಿಸುತ್ತದೆ. ನನ್ನನ್ನು ನೋಡಿದವನೆ ಹೊರಗೆ ಬಂದ. ನಾನು ಅವನನ್ನು “ಯಾಕೆ ನೀನು ಶಾಲೆಗೆ ಬರುತ್ತಿಲ್ಲ?” ಎಂದು ಕೇಳಿದೆ. ಅದಕ್ಕವನು “ಮನೆಯಲ್ಲಿ ತೊಂದರೆ ಇದೆ” ಎಂದು ಹೇಳಿದ. ನನಗೆ ಬ್ಯಾಟ್‌ಗಳನ್ನಾದರೂ ಕೊಡು ಒಂದೆರಡು ದಿನ ವಾಪಸ್ ಕೊಡ್ತೀನಿ. ನನಗೆ ಹೊಸ ಆಟವಾದ್ದರಿಂದ ಏನೊ ಒಂಥರಾ ಖುಷಿ ಅಂದೆ. ಆಯ್ತು ಹೊರಗಡೆ ಇರು. ನಮ್ಮಪ್ಪ ನೋಡುದ್ರೆ ಬಯ್ತಾರೆ ಅಂದ. ಆಯ್ತು ಅಂದು ಹೊರಗಡೆ ನಿಂತುಕೊಂಡೆ. ಅವನು ಎರಡೂ ಬ್ಯಾಟುಗಳನ್ನು ನನಗೆ ಕೊಟ್ಟ. ಆ ಬ್ಯಾಟುಗಳೊಂದಿಗೆ ಮನೆಯಲ್ಲಿ ತಮ್ಮನೊಂದಿಗೆ ಆಡುತ್ತಿದ್ದೆ. ಹದಿನೈದು ದಿನವಾದರೂ ಶಾಲೆಗೆ ಆತ ಬರಲಿಲ್ಲ. ಹೊಸದುರ್ಗದ ಕಡೆ ಯಾವುದೊ ಊರಿಗೆ ಹೋದರು ಅಂತ ಗೊತ್ತಾಯ್ತು. ಅಲ್ಲಿನ ಶಾಲೆಗೆ ನೇರವಾಗಿ ವರ್ಗಾವಣೆ ಪತ್ರವನ್ನು ತರಿಸಿಕೊಂಡಿದ್ದರು. ಅಯ್ಯೋ ಆತನ ಪೂರ್ಣ ವಿಳಾಸವು ಇರಲಿಲ್ಲ. ಶಾಲೆಯಲ್ಲಿ ಕೇರಾಫ್ ವಿಳಾಸವನ್ನೆ ಕೊಟ್ಟಿದ್ದರು. ಆತನ ಎರಡು ಬ್ಯಾಟುಗಳು ನನ್ನಲ್ಲಿಯೆ ಉಳಿದು ಬಿಟ್ಟವು.
ನಂತರ ಒಂದೆರಡು ತಿಂಗಳು ಕಳೆದ ಮೇಲೆ ಹತ್ತು ಪೈಸೆಯ ಅಂಚೆ ಕಾರ್ಡಿನಲ್ಲಿ ಪತ್ರವೊಂದು ಮನೆಗೆ ಬಂದಿತ್ತು. ಅದು ಗೆಳೆಯ ವೀರೇಂದ್ರನ ಪತ್ರವಾಗಿತ್ತು. ಆತ ನನ್ನ ಹಾಗೂ ಆತನ ಗೆಳೆತನದ ಬಗ್ಗೆ ವಿವರಿಸಿದ್ದ. ಅಪ್ಪ ವಿಪರೀತ ಕುಡಿಯುತ್ತಿದ್ದ. ಇದ್ದಕ್ಕಿದ್ದಂತೆ ತೀರಿ ಹೋದರು. ಹಾಗಾಗಿ ಅನಿವಾರ್ಯವಾಗಿ ಸ್ವಂತ ಊರಿಗೆ ಬರಬೇಕಾಯಿತು ಎಂದೆಲ್ಲಾ ವಿವರಿಸಿದ್ದ. ಬ್ಯಾಟಿನ ವಿಷಯ ಎಲ್ಲಿಯೂ ಪ್ರಸ್ತಾಪಿಸಿರಲಿಲ್ಲ. ಆ ಬ್ಯಾಟುಗಳು ನನ್ನಲ್ಲಿಯೆ ಹಾಗೆ ಉಳಿದು ಬಿಟ್ಟವು. ಆತನಿಗೆ ಪತ್ರ ಬರೆಯೋಕೆ ಆತ ವಿಳಾಸ ಬರೆದಿರಲಿಲ್ಲ. ಈಗಿನಂತೆ ಆಗ ಮೊಬೈಲ್, ಫೋನ್‌ಗಳ ಕಾಲವೂ ಅಲ್ಲ. ಹಾಗಾಗಿ ಆತನನ್ನು ಸಂಧಿಸುವ ಯಾವ ಸಂದರ್ಭವೂ ಮತ್ತೆಂದೂ ಬರಲೆ ಇಲ್ಲ. ಬ್ಯಾಟುಗಳು ಮುರಿದು ಹೋದವು. ಬಹಳ ದಿನ ಪತ್ರವು ಹಾಗೆಯೆ ಇತ್ತು. ಕಳೆದು ಹೋದ ಬದುಕಿನಲ್ಲಿ ಸ್ನೇಹದ ನೆನಪು ಮಾತ್ರ ಹಾಗೆ ಉಳಿದು ಬಿಟ್ಟಿದೆ. ಆತನ ಬಗ್ಗೆ ಕೆಲವು ವರ್ಷಗಳ ನಂತರ ವಿಚಾರಿಸಿದೆನಾದರೂ ಯಾರಿಗೂ ಆತನ ಸಂಪರ್ಕವಿಲ್ಲ ಎಂದೆ ಹೇಳಿದರೂ ಕೆಲವರು ಆತನಿಗೆ ಕ್ಯಾನ್ಸರ್ ಇತ್ತು. ಆತನೆ ಸತ್ತು ಹೋಗಿದ್ದಾನೆ ಎಂದರು. ಯಾವುದೂ ನಿಜವೊ ಗೊತ್ತಿಲ್ಲ. ಅಂತೂ ಇಲ್ಲಿಯವರೆಗೂ ಆತನ ಸುಳಿವಂತೂ ಇಲ್ಲ.
*****
ಇನ್ನೊಬ್ಬ ಸೋಮಶೇಖರ. ಆತನು ಯಾವಾಗಲೂ ನನ್ನ ಪಕ್ಕದಲ್ಲಿಯೆ ಕೂರುತ್ತಿದ್ದ. ಸ್ವಲ್ಪ ದಿನಗಳು ಶಾಲೆಗೆ ಬಂದ ನಂತರ ವಾಪಸ್ ತಮ್ಮ ಶಾಲೆಗೆ ಹೋದ ಎಂದು ನೆನಪು. ರವಿ ಆರನೆ ತರಗತಿಯಲ್ಲಿದ್ದಾಗ ನನಗೆ ಜೊತೆಯಾದವನು. ನಮ್ಮ ಊರಿನಲ್ಲಿ ಆತನ ಅಮ್ಮನ ಕಡೆಯಿಂದ ಸಂಬಂಧವಿತ್ತು. ನೋಡಲು ಬಹಳ ಸುಂದರನಾಗಿಯೆ ಇದ್ದ. ಆತನು ನನ್ನಿಂದಲೆ ನೋಟ್ಸ್ ಪಡೆಯುತ್ತಿದ್ದ ಪರೀಕ್ಷೆಗಳ ಸಮಯದಲ್ಲಿ. ನಮ್ಮ ಮನೆಯಲ್ಲಿ ರಾತ್ರಿಯೆಲ್ಲಾ ಓದಿ ಬೆಳಗ್ಗೆ ಪರೀಕ್ಷೆ ಬರೆಯುತ್ತಿದ್ದೆವು. ನಮ್ಮ ಮನೆಯ ಹೊರಗೆ ಸಗಣಿ ಸಾರಿಸಿದ ಅಂಗಳವಿತ್ತು. ಅಲ್ಲಿ ಚಾಪೆ ಹಾಸಿಕೊಂಡು ಓದಿಕೊಳ್ಳುತ್ತಿದ್ದೆವು. ಏಳನೆ ತರಗತಿ ಮುಗಿದ ಮೇಲೆ ಬೇರೆ ಬೇರೆ ಶಾಲೆಗೆ ಸೇರಿದೆವು. ಮತ್ತೆ ಯಾರ ಸಂಪರ್ಕವೂ ಸಿಗಲಿಲ್ಲ. ಮತ್ತೆ ಸಿಕ್ಕಿದ್ದು ನಾನು ಪಿಯುಸಿಗೆ ತುಮಕೂರಿಗೆ ಸೇರಿದಾಗ ಆತ ಆಗ ಕಾಮರ್ಸ್ ಮಾಡುತ್ತಿದ್ದ. ಆತನೊಂದಿಗೆ ಆಡಿದ ಬಾಲ್ಯದ ನೆನಪುಗಳು ಈಗಲೂ ನೆನಪಿನಲ್ಲಿ ಹಾಗೆಯೆ ಇವೆ. ಈಗ ‘ಸಿಎ’ ಮಾಡಿಕೊಂಡು ಬ್ಯಾಂಕ್‌ನಲ್ಲಿ ಕೆಲಸಕ್ಕಿದ್ದಾನೆ ಎಂದಷ್ಟೆ ಗೊತ್ತು.
ಬದುಕು ಎಷ್ಟೊಂದು ನೆನಪುಗಳನ್ನು ನಮಗೆ ಕೊಟ್ಟಿದೆಯಲ್ಲಾ ಅನಿಸುತ್ತದೆ. ಇವರು ಬಾಲ್ಯದ ಗೆಳೆಯರು ಅವರೊಂದಿಗೆ ಆಡಿ ನಲಿದ ಜಾಗಗಳೆಷ್ಟು. ಅದು ಯಾವುದನ್ನು ಅರಿಯದ ಬಾಲ್ಯ ಕೇವಲ ಸಂತೋಷವನ್ನಷ್ಟೆ ಬಯಸುತ್ತಿದ್ದ ಬಾಲ್ಯದ ಮನಸ್ಸು ಹಾಗೇ ಇದ್ದರೆ ಚೆನ್ನಾಗಿತ್ತು ಎನಿಸುತ್ತದೆ. ಆದರೆ ಅದು ಸಾಧ್ಯವಿಲ್ಲ. ಜಗತ್ತಿನ ಪ್ರತಿ ವಸ್ತುವಿಗೂ ಚಲನೆಯಿದೆ. ಅದು ಚಲಿಸುತ್ತಲೆ ಇರಬೇಕು. ಆಗ ಮಾತ್ರ ಅದು ಜೀವಂತ. ನೆನಪೂ ಜೀವಂತ. ಇಂತಹ ಬದುಕು ನನ್ನದು ನಿಮ್ಮದು ಕೂಡಾ ಅಲ್ಲವೇ. ಬದುಕಿಗೊಂದು ಥ್ಯಾಂಕ್ಸ್ ಹೇಳದಿದ್ದರೆ ಹೇಗೆ ಥ್ಯಾಂಕ್ಯು ಅಂದು ಬಿಡಿ. ಯಾಕೆಂದರೆ ಬದುಕು ಚಿರಾಯು..