“ಅರೆ, ಇಷ್ಟು ಹೊತ್ತು ಭಯ ಹುಟ್ಟಿಸುವಂತೆ ಮಾಡಿ ಪುಸ್ತಕ ಓದನ್ನು ನಿಲ್ಲಿಸಿದ್ದು ಇದೇನಾ” ಎಂದು ಕಾಗೆ ಜನ್ಮಕ್ಕಿಷ್ಟು ಉಗಿದೆ. ತಕ್ಷಣ ಓಡಿಸಲೆಂದು ಬೊಬ್ಬೆ ಹಾಕಲು ಬಾಯಿ ತೆಗೆದವನು, ಏನೋ ನೆನಪಾಗಿ ಸುಮ್ಮನಾದೆ. ‘ಅಲ್ಲ, ಈ ಕಾಗೆಯೇಕೆ ಹಾಗೆ ವಿಚಿತ್ರವಾಗಿ ಕೂಗಿರಬಹುದು?’ ತಲೆಗೆ ಹುಳ ಬಿಟ್ಟುಕೊಂಡೆ. ಈಗ ಕಾಗೆ ಸ್ವಲ್ಪ ಮೆಲ್ಲಗೆ ಹಾರಿ ಸರಿಯಾಗಿ ಕಿಟಕಿಯಿಂದ ನನಗೆ ಕಾಣಿಸುವಲ್ಲಿ ಕುಳಿತಿತು. ನೋಡುತ್ತೇನೆ, ಬಾಯಿಯಲ್ಲಿ ಎಂದಷ್ಟು ತೆಂಗಿನ ಚಿಪ್ಪಿನ ನಾರುಗಳಿದೆ. ಹೆಕ್ಕಿ ತೆಗೆದಂತೆ ಬಿಡಿ ಬಿಡಿಯಾಗಿ ಕೊಕ್ಕಿನಲ್ಲಿ ಹಿಡಿದುಕೊಂಡಿದ್ದ ಉದ್ದುದ್ದು ನಾರುಗಳನ್ನು ಹಿಡಿದು ಬಾಯ್ಮುಚ್ಚಿದ್ದರಿಂದ ಈ ವಿಚಿತ್ರ ಶಬ್ಧ ಹೊರಡುತ್ತಿತ್ತಷ್ಟೇ.
ಮುನವ್ವರ್ ಜೋಗಿಬೆಟ್ಟು ಬರೆಯುವ ಪರಿಸರದ ಕಥೆಗಳು.

 

ಮೊನ್ನೆಯಷ್ಟೆ ನನ್ನ ಕೋಣೆಯಲ್ಲಿ ಕುಳಿತು ಸೂರ್ಯ ಇಣುಕುವ ಕಿಟಕಿಯ ಬೆಳಕಿಗೆ ಮುಖ ಮಾಡಿ ಪುಸ್ತಕ ಓದುತ್ತಿದ್ದೆ. ಕೆಲ ದಿನಗಳ ಹಿಂದೆ ಅಪ್ಪ ಬಚ್ಚಲು ಹಂಡೆಗೆ ನೀರು ಕಾಯಿಸಲು ನಮ್ಮ ಪರಿಚಯದವರ ಮನೆಯವರಿಂದ ತೆಂಗಿನ ಕಾಯಿ ಸಿಪ್ಪೆ ತರಿಸಿದ್ದರು. ಆಳೆತ್ತರಕ್ಕೆ ರಾಶಿ ಹಾಕಿದ್ದರಿಂದ ನೇರ ಬೀಳುವ ಕಿಟಕಿ ಬೆಳಕಿಗೆ ಅದು ಅಡ್ಡಲಾಗುತ್ತಿತ್ತು. ನಾನು ಓದುತ್ತಿದ್ದಂತೆ ಆಗಾಗ್ಗೆ ಕಿಟಕಿಯ ಹೊರ ಬಾಗದಿಂದ ಯಾರೋ ಅತ್ತಿಂದಿತ್ತ ಸುಳಿದಾಡಿದಂತೆ ಭಾಸವಾಗುತ್ತಿತ್ತು. ನಾನು ಸೊಪ್ಪು ಹಾಕಿರಲಿಲ್ಲ. ಮತ್ತೆ ಮತ್ತೆ ಏನೋ ಸುಳಿದಾಡಿದಂತೆ ನೆರಳು ಬೆಳಕಿನಾಟ! “ಕಿಟಕಿಯ ಮೂಲಕ ಯಾವುದಾದರೂ ಹಾವು ಹರಿಯುತ್ತಾ ಬಂದು ಹಾಸಿಗೆಗೆ ಸೇರಿ ಬಿಟ್ಟಿತೇ?” ಈ ಯೋಚನೆ ಹೊಳೆದದ್ದೇ ನನಗೆ ಒಮ್ಮೆಲೆ ಮೈಯೆಲ್ಲಾ ಚಳಿ ಹಿಡಿಯಿತು. ದಿಗ್ಗನೆ ಭಯ ಆವರಿಸಿತು. ಸರಕ್ಕನೆ ತಿರುಗಿ ನನ್ನ ಬೆನ್ನ ಹಿಂದೆ ಇದ್ದ, ದಿಂಬು ಹೊದಿಕೆಗಳನ್ನೆಲ್ಲಾ ಎತ್ತಿ ಕೆಳಗೆಸೆದು ಚೆಲ್ಲಾ ಪಿಲ್ಲಿ ಮಾಡಿದೆ. ಅಬ್ಬಾ.. ಸದ್ಯ ಏನೂ ಇರಲಿಲ್ಲ. ಮತ್ತೆ ನಾನು ಬೆಳಕು ಬೀಳುವ ಕಡೆಗೆ ತಿರುಗಿ ಕುಳಿತು ಪುಸ್ತಕ ಹಿಡಿದು ಓದತೊಡಗಿದೆ.

ಈಗ ಕಿಟಕಿಯಿಂದ ಹೊರಗಿನ ಚಲನವಲನಗಳು ಸ್ಪಷ್ಟವಾಗಿ ಕಾಣುತ್ತಿತ್ತು. ಅಷ್ಟೊತ್ತಿಗೆ ಮೆಲುದನಿಯಲ್ಲಿ “ಕ್ರಾ, ಕ್ರಾ” ಎಂದು ಗಂಟಲು ನೋವಿನವನು ಕೆಮ್ಮಿದಂತಹ ವಿಕಾರ ಸದ್ದು. ನಾನು ಪುಸ್ತಕ ಕೆಳಗಿಟ್ಟು ಕಿಟಕಿಯಿಂದ ಹೊರಗೆ ನೋಡುತ್ತಾ ಕುಳಿತೆ. ಆಗಷ್ಟೇ ಒಣಗಲು ಹಾಕಿದ್ದ ತೆಂಗಿನ ಚಿಪ್ಪಿನ ರಾಶಿಗೆ ಲಕ್ಷಾಂತರ ಇರುವೆಗಳು ಮುತ್ತಿಕ್ಕಿದ್ದವು. ತೆಂಗಿನ ನಾರಿನ ಸಿಹಿಯಿಂದಲೇ ಇರಬೇಕು, ಆ ಇರುವೆಗಳಷ್ಟೇ ಅಲ್ಲದೇ ಒಂದಷ್ಟು ಮಕರಂದ ಹೀರುವ ದುಂಬಿಗಳೂ ಅದರ ಸುತ್ತ ಹಾರಾಡುತ್ತಿದ್ದವು. ಇದೆಲ್ಲದರ ನಡುವೆ ಈ ಸದ್ದು ಎಲ್ಲಿಂದ ಬಂತೆಂದು ನನಗೆ ದಿಗಿಲು. ನಾನು ಇನ್ನಷ್ಟು ಇಣುಕಿ ನೋಡಿದೆ. ಕಿಟಕಿಯ ಬಾಗಿಲಿಗೆ ನೇರವಾಗಿ ಕಾಗೆಯೊಂದು ಕುಂಟು ಹೆಜ್ಜೆ ಹಾಕುತ್ತಿರುವುದು ಕಂಡಿತು.


“ಅರೆ, ಇಷ್ಟು ಹೊತ್ತು ಭಯ ಹುಟ್ಟಿಸುವಂತೆ ಮಾಡಿ ಪುಸ್ತಕ ಓದನ್ನು ನಿಲ್ಲಿಸಿದ್ದು ಇದೇನಾ” ಎಂದು ಕಾಗೆ ಜನ್ಮಕ್ಕಿಷ್ಟು ಉಗಿದೆ. ತಕ್ಷಣ ಓಡಿಸಲೆಂದು ಬೊಬ್ಬೆ ಹಾಕಲು ಬಾಯಿ ತೆಗೆದವನು, ಏನೋ ನೆನಪಾಗಿ ಸುಮ್ಮನಾದೆ. ‘ಅಲ್ಲ, ಈ ಕಾಗೆಯೇಕೆ ಹಾಗೆ ವಿಚಿತ್ರವಾಗಿ ಕೂಗಿರಬಹುದು?’ ತಲೆಗೆ ಹುಳ ಬಿಟ್ಟುಕೊಂಡೆ. ಈಗ ಕಾಗೆ ಸ್ವಲ್ಪ ಮೆಲ್ಲಗೆ ಹಾರಿ ಸರಿಯಾಗಿ ಕಿಟಕಿಯಿಂದ ನನಗೆ ಕಾಣಿಸುವಲ್ಲಿ ಕುಳಿತಿತು. ನೋಡುತ್ತೇನೆ, ಬಾಯಿಯಲ್ಲಿ ಎಂದಷ್ಟು ತೆಂಗಿನ ಚಿಪ್ಪಿನ ನಾರುಗಳಿದೆ. ಹೆಕ್ಕಿ ತೆಗೆದಂತೆ ಬಿಡಿ ಬಿಡಿಯಾಗಿ ಕೊಕ್ಕಿನಲ್ಲಿ ಹಿಡಿದುಕೊಂಡಿದ್ದ ಉದ್ದುದ್ದು ನಾರುಗಳನ್ನು ಹಿಡಿದು ಬಾಯ್ಮುಚ್ಚಿದ್ದರಿಂದ ಈ ವಿಚಿತ್ರ ಶಬ್ಧ ಹೊರಡುತ್ತಿತ್ತಷ್ಟೇ. ಹಾಗೇ ಹೇಳುವುದಕ್ಕಿಂತ ಅದು ಬಾಯಿಯಲ್ಲಿದ್ದರಿಂದಲೇ ಅದರ ಕೂಗು ವಿಚಿತ್ರವಾಗಿ ಕೇಳಿಸುತ್ತಿತ್ತೇನೋ. ಸ್ವಲ್ಪ ಹೊತ್ತು ಅದನ್ನೇ ನೋಡುತ್ತಾ ನಿಂತೆ, ಅಷ್ಟರಲ್ಲೇ ಇನ್ನೊಂದು ಕಾಗೆ ಅಮಟೆ ಕಾಯಿ ಮರದ ಮೇಲೆ “ಕ್ರಾ ಕ್ರಾ” ಎಂದು ಕೂಗಿಕೊಂಡಿತು. ಸ್ವಲ್ಪ ಹೊತ್ತಿನಲ್ಲೇ ನಾರು ಹಿಡಿದುಕೊಂಡಿದ್ದ ಕಾಗೆ ಎತ್ತಲೋ ಹಾರಿ ಹೋಯಿತು. ಮರದ ಮೇಲಿದ್ದ ಕಾಗೆ ಕೆಳಗಿಳಿದು ಬಂದು ಮತ್ತಷ್ಟು ನಾರುಗಳನ್ನು ಹೆಕ್ಕತೊಡಗಿತು. ಇವುಗಳು ಜೋಡಿ ಕಾಗೆಗಳಿರಬೇಕೆಂದ ಅಂದಾಜು ಹಾಕಿದೆ.

ಕಾಗೆಗಳು ಗೂಡುಕಟ್ಟುವುದೇ ಹಾಗೆ, ಒಂದಷ್ಟು ಕೋಲು ಕಡ್ಡಿಗಳನ್ನೆಲ್ಲಾ ರಾಶಿ ಹಾಕಿ, ಬ್ಯಾಚುಲರ್ಸ್ ರೂಂ ನಂತೆ ಅಡ್ಡಾದಿಡ್ಡಿ ಹಾಕಿದರೆ ಮುಗಿಯಿತು, ಗೂಡು ತಯಾರು. ಕುಳಿತಲ್ಲೇ ಕಾಗೆ ನೋಡುತ್ತಿದ್ದವನಿಗೆ ತಲೆ ಎಲ್ಲೆಲ್ಲಿಗೋ ಓಡಿತು. ಸಣ್ಣವನಿರುವಾಗ ಒಮ್ಮೆ ಶಾಲೆಯಲ್ಲಿ ಟೀಚರ್ ಬೆಳಗ್ಗೆ ತರಗತಿಗೆ ಬಂದವರೇ, ಹಾಜರಿ ಕರೆದು ಮುಗಿಸಿ “ಎಲ್ಲರೂ ತಿಂಡಿ ತಿಂದಿದ್ದೀರಾ?” ಅಂತ ಕೇಳಿದ್ರು. ಎಲ್ಲರೂ “ಆಯ್ತು ಟೀಚ” ಅನ್ನುತ್ತಾ ರಾಗ ಎಳೆಯುವ ಕಿರಿಚುವಿಕೆಗೆ ಟೀಚರೊಮ್ಮೆ ಕಿವಿ ಮುಚ್ಚಿಕೊಂಡರು. ನನ್ನ ಜೊತೆಗೆ ಕುಳಿತುಕೊಳ್ಳುವವನೊಬ್ಬ ಮಾತ್ರ “ಇಲ್ಲ, ಟೀಚರ್” ಅಂದ. ಒಮ್ಮೆಲೆ ಎಲ್ಲರ ಮುಖವೂ ಅವನತ್ತ ಹೊರಳಿತು.

“ಯಾಕೋ, ತಿಂಡಿ ತಿಂದಿಲ್ಲ?”
“ಇವತ್ತು ಅಮ್ಮ ಹೊರಗೆ, ಟೀಚರ್” ಹುಡುಗ ಮೆಲ್ಲನೆ ಹೇಳಿದ. ಟೀಚರ್ ಏನೋ ಮರೆ ಮಾಚುವವರಂತೆ ಹುಡುಗನನ್ನು ಕೂರಲು ಹೇಳಿ ನಮ್ಮನ್ನು ಪಾಠದ ಕಡೆ ಸೆಳೆದರು. ನನಗವತ್ತಿನ ಪಾಠ ಸ್ವಲ್ಪವೂ ತಲೆಗೆ ಹೋಗಲೇ ಇಲ್ಲ. ನನಗೆ ಆಶ್ಚರ್ಯ! ಅಲ್ಲ ಅವರ ಅಮ್ಮ ಯಾಕೆ ಹೊರಗೆ ಹೊರ ಹೋಗಬೇಕು?
“ಅಲ್ಲ ಟೀಚರ್, ಈ ಅಮ್ಮ ಹೊರಗೆ ಅಂದರೆ ಏನು” ನಾನು ಕುತೂಹಲ ತಾಳದೆ ಕೇಳಿಯೇ ಬಿಟ್ಟೆ. “ಏನೂ ಇಲ್ಲ, ಪಾಠದ ಕಡೆ ಗಮನ ಕೊಡು” ಎಂದು ಟೀಚರ್ ಗದರಿದರು.

ನನಗೆ ಈ ಹುಚ್ಚು ಕುತೂಹಲ ತಣಿಯಲೇ ಇಲ್ಲ. ಯಾವಾಗ ಈ ಟೀಚರ್ ನ ತರಗತಿಯ ಪೀಡೆ ತೊಲಗುತ್ತದೋ ಎಂದು ಗಂಟೆ ಬಾರಿಸುವುದನ್ನೇ ಕಾದು ಕುಳಿತೆ. ಅಂತೂ ಗಂಟೆ ಬಾರಿಸಿತು. ಟೀಚರ್ ತರಗತಿ ಬಿಟ್ಟು ಹೊರಗೆ ಹೋದ್ದು ಗೊತ್ತು.
“ಏನಾ, ಅದು ಅಮ್ಮ ಹೊರಗೆ ಅಂದ್ರೆ, ನಮ್ಮ ಅಮ್ಮನವರು ಹೊರಗೇನೇ ಇರಲ್ಲ ಅಲ್ವಾ?” ಸಂಶಯ ಒಮ್ಮೆಲೆ ಸ್ಪೋಟಗೊಂಡಿತು. “ಇಲ್ಲ ಏನೂ ಇಲ್ಲ” ಹುಡುಗ ನುಣುಚಿಕೊಂಡ.

“ಅರೆ, ಇಷ್ಟು ಹೊತ್ತು ಭಯ ಹುಟ್ಟಿಸುವಂತೆ ಮಾಡಿ ಪುಸ್ತಕ ಓದನ್ನು ನಿಲ್ಲಿಸಿದ್ದು ಇದೇನಾ” ಎಂದು ಕಾಗೆ ಜನ್ಮಕ್ಕಿಷ್ಟು ಉಗಿದೆ. ತಕ್ಷಣ ಓಡಿಸಲೆಂದು ಬೊಬ್ಬೆ ಹಾಕಲು ಬಾಯಿ ತೆಗೆದವನು, ಏನೋ ನೆನಪಾಗಿ ಸುಮ್ಮನಾದೆ. ‘ಅಲ್ಲ, ಈ ಕಾಗೆಯೇಕೆ ಹಾಗೆ ವಿಚಿತ್ರವಾಗಿ ಕೂಗಿರಬಹುದು?’ ತಲೆಗೆ ಹುಳ ಬಿಟ್ಟುಕೊಂಡೆ.

ನಾನು ಕಲಿಯುವುದರಲ್ಲಿ ಮುಂದಿದ್ದರಿಂದ ನನ್ನನ್ನು ತರಗತಿಯೆಲ್ಲೆಲ್ಲಾ ಹೆಚ್ಚಿನವರು ಹೆದರುತ್ತಿದ್ದರು. ಲೀಡರ್ ಆಗಿ ಹೆಸರು ಬರಿಯುತ್ತಾನೆಂಬ ಭಯ. ಮತ್ತೆ ಅದೇ ಅಧಿಕಾರವನ್ನು ನಾನು ರಾಜಕೀಯದವರಂತೆ ಬಳಸಿದ್ದೂ ಉಂಟು. “ಹೇಳ್ತೀಯೋ ಇಲ್ವೋ” ಎಂದು ಸ್ವಲ್ಪ ಉಚ್ಫ ಸ್ವರದಲ್ಲೇ ದಬಾಯಿಸಿದೆ.

ಹುಡುಗ ಸ್ವಲ್ಪ ಹೆದರಿಕೊಂಡ. “ಏನೂ ಇಲ್ಲ, ತಿಂಗಳಲ್ಲಿ ನಾಲ್ಕೈದು ದಿನ ಅಮ್ಮ ಮನೆಯ ಹೊರಗಿರ್ತಾರೆ, ಒಳಗೆ ಬಾರಲಿಕ್ಕಿಲ್ಲ. ಕಾಗೆಯೊಂದು ಬಂದು ತಲೆ ಕುಟುಕಿ ಹೋಗುವಷ್ಟು ದಿನ ಅಮ್ಮ ಹೊರಗೆ ಇರಬೇಕು” ಎಂಬ ಗೊಂದಲಮಯ ಉತ್ತರ ಕೊಟ್ಟ. ನನಗೆ ತೃಪ್ತಿಯಾಗಲಿಲ್ಲ, “ಅಲ್ಲ ಕಾಗೆಯೇಕೆ ಕುಟುಕುತ್ತದೆ, ಅವನಮ್ಮ ಯಾಕೆ ಹೊರಗಿರುತ್ತಾರೆ” ನನಗೊಂದೂ ತಲೆ ಬುಡ ಅರ್ಥವಾಗಲಿಲ್ಲ. ಅವನು ಹೇಳಿದ ಬಳಿಕ ಸಂಶಯ ಹೆಚ್ಚಾಯಿತೇ ಹೊರತು, ನನ್ನ ಸಮಸ್ಯೆ ಇತ್ಯರ್ಥವಾಗಲೇ ಇಲ್ಲ.

ಅದು ಕಳೆದು ಸುಮಾರು ದಿನ ನಾನು ಆ ವಿಚಾರ ಮರೆತಿದ್ದೆ. ಯಾರೋ, ಮಾತಾನಾಡುವಾಗ ‘ಹಿಂದೂ ಸಂಸ್ಕೃತಿಯಲ್ಲಿ ಸತ್ತವರ ಪಿಂಡ ತಿನ್ನಲು ಕಾಗೆಗೆಳು ಬರುತ್ತದೆಂದು’ ಕೇಳಿಸಿಕೊಂಡಿದ್ದೆ. ಇದೇ ವಿಚಾರ ಅದೇ ಹುಡುಗನಲ್ಲಿ ಕೇಳೋಣವೆಂದಿದ್ದರೂ, ಅವನ ಅಪ್ರಬುದ್ಧತೆ ತಡೆಯಾಯ್ತು. ಹಾಗೇ, ತರಗತಿಯಲ್ಲಿದ್ದ ಇನ್ನೊಬ್ಬ ನನ್ನಷ್ಟೇ ದೊಡ್ಡ ಕಿಲಾಡಿ ಹುಡುಗ ನಿರಂಜನನಲ್ಲಿ ಹಂಚಿಕೊಂಡು ಮಾತನಾಡಿದೆ. “ಹೌದು, ತಲೆಗೆ ಕುಟುಕಬಾರದು. ಹಾಗೆ ಏನಾದರೂ ಕುಟುಕಿದರೆ ಆ ವ್ಯಕ್ತಿ ಕೆಲವೇ ದಿನಗಳಲ್ಲಿ ಸತ್ತೇ ಹೋಗುತ್ತಾನೆ” ಎಂದು ಹೆದರಿಸಿ ಬಿಟ್ಟ. ‘ಅಲ್ಲ ಹಾಗಿದ್ದರೆ, ಅವನ ಅಮ್ಮ ಯಾಕೆ ತೀರಿ ಹೋಗಲಿಲ್ಲ?’ ನನಗೆ ತಲೆ ಪೂರ್ತಿ ಸಂಶಯ ತುಂಬಿ ಸಮಸ್ಯೆ ಇನ್ನಷ್ಟು ಜಟಿಲವಾದಂತಾಯ್ತು. ಅದನ್ನು ನಾನು ಅಲ್ಲಿಗೆ ಬಿಟ್ಟಿದ್ದೆ.

ಸುಮಾರು ದಿನಗಳ ತರುವಾಯ, ಶಾಲೆಯಲ್ಲಿ ಒಂದು ಸಂಜೆ ಆಟದ ವಿರಾಮ. ಎಲ್ಲರೂ ಆಡುತ್ತಿದ್ದರು. ನನಗೆ ಪತ್ತೇದಾರಿ, ಸಾಹಸ ಕಥೆಗಳನ್ನೇ ಹೆಚ್ಚು ನೆಚ್ಚಿಕೊಳ್ಳುತ್ತಿದ್ದರಿಂದ, ಅವುಗಳೇ ತುಂಬಿ ಹೋಗಿ ಐದನೇ ತರಗತಿವರೆಗೂ ಕಳ್ಳ ಪೋಲಿಸ್ ಆಟ ಆಡುತ್ತಿದ್ದೆ. ನಮ್ಮ ಆಟದ ಮೈದಾನದ ಬದಿಯಲ್ಲೇ ಒಂದು ಮನೆಯಿತ್ತು. ಅದು ನನ್ನ ಸಹಪಾಠಿಯದ್ದೇ ಆಗಿತ್ತು. ಅವರ ಮನೆಯ ಅಂಗಳಕ್ಕೂ ನಮ್ಮ ಶಾಲೆಯ ಆಟದ ಮೈದಾನವೇನೂ ಬೇರೆ ಬೇರೆಯಲ್ಲ. ಅದರ ಮೂಲೆಯಲ್ಲೇ ದೊಡ್ಡ ಸಾಗುವಾನಿ ಮರವೊಂದಿತ್ತು. ದೊಡ್ಡದೆಂದರೆ ಅಂದಿನ ವಿವರಣೆಯಂತೆ ಗಗನ ಚುಂಬಿ. ಆ ದಿನ ಯಾರೋ ಒಂದಿಬ್ಬರು ಆ ಮರದ ಬುಡದಲ್ಲಿ ನಿಂತು ಮರ ನೋಡಿಕೊಂಡು ಮಾತನಾಡುತ್ತಿದ್ದರು. ನಾನು ಕಳ್ಳ ಪೋಲಿಸ್ ಆಟ ಮರೆತು ಮರದ ಹತ್ತಿರ ಓಡಿ ಬಂದೆ. ನಮ್ಮದೇ ತರಗತಿ ಹುಡುಗ ‘ನೌಫಲ್’ ಮರ ಏರುವುದರಲ್ಲಿ ಮಂಗಗಳಿಗೂ ಸ್ಪರ್ಧೆ ಕೊಡುವಂಥವನು. ಹತ್ತಿರ ಮನೆಯ ಒಂದಿಬ್ಬರು ಮರದ ಸುತ್ತ ನಿಂತು ಮಾತನಾಡುತ್ತಿದ್ದರು. ನಾನು ಓಡಿ ಹೋಗಿ ಅವರ ಗುಂಪಿಗೆ ಸೇರಿಕೊಂಡೆ. ಅಷ್ಟರಲ್ಲೇ ನೌಫಲ್ ಸರಸರನೆ ಮರವೇರಿದ. ನಾನು ಕತ್ತು ಆಕಾಶಕ್ಕೆ ನೆಟ್ಟು ಮರ ನೋಡುತ್ತಿರಬೇಕಾದರೆ ಹಿಂದಿನಿಂದ ಯಾರೋ ಹೆಗಲಿಗೆ ಕೈ ಹಾಕಿದಂತಾಯ್ತು.

“ಔಟ್, ಈಗ ನೀನು ಪೋಲಿಸ್” ಗೆಳೆಯ ಹಲ್ಲು ಕಿರಿಯುತ್ತ ನಿಂತಿದ್ದ. ‘ಇಲ್ಲೇನೋ ಅದ್ಬುತ ನಡೀತಿದೆ, ನಿನ್ನ ಆಟದ ಮನೆ ಹಾಳಾಗ್ಲೀ’ ಅನ್ನುತ್ತಾ ಅವನೆಷ್ಟು ಕರೆದರೂ ಸೊಪ್ಪು ಹಾಕದೆ ಮರ ಹತ್ತುವುದನ್ನೇ ನೋಡುತ್ತಾ ನಾನಲ್ಲೇ ನಿಂತೆ. ವೇಗವಾಗಿ ಹತ್ತಿದ ನೌಫಲ್ ಗೆ ಯಾರೋ ಕೆಳಗಿನಿಂದ ದೋಟಿಯೊಂದನ್ನು ಕೊಟ್ಟರು. ನಾನು ಉಸಿರು ಬಿಗಿ ಹಿಡಿದು ಮುಂದಿನ ಅದ್ಭುತ ದೃಶ್ಯಕ್ಕಾಗಿ ಕಾಯುತ್ತಿದ್ದೆ. ಬಿದಿರಿನ ದೋಟಿ, ಅಸಾಧಾರಣ ಉದ್ದವಿತ್ತು. ಅರ್ಧದಷ್ಟು ಹತ್ತಿದ ನೌಫಲ್ ಆಗಲೇ ಕಿರಿದಾಗಿ ಕಾಣುತ್ತಿದ್ದ, ದೋಟೆ ಪಡೆದು ಮೆಲ್ಲಗೆ ಎತ್ತುತ್ತಾ ಕೊನೆಯ ಒಂದು ಕೊಂಬೆಯ ಎತ್ತರಕ್ಕೆ ಗುರಿ ಇಡಲು ಪ್ರಯತ್ನಿಸುತ್ತಿದ್ದ. ನಾನು ಇನ್ನಷ್ಟು ಎತ್ತರಕ್ಕೆ ಸೂಕ್ಷ್ಮವಾಗಿ ನೋಡಿದೆ. ಎತ್ತರದಲ್ಲಿ ಮಬ್ಬು ಮಬ್ಬಾಗಿ ಗೂಡೊಂದು ಕಂಡಿತು. ಇನ್ನೇನು ಕಣ್ಣಿಗೆ ಕುಕ್ಕುವ ಸೂರ್ಯನನ್ನು ತಪ್ಪಿಸಿ ನೆರಳಲ್ಲಿ ನಿಂತು ನೋಡ ಬೇಕೆನ್ನುವಷ್ಟರಲ್ಲೆ ನೌಫಲ್ ದೋಟಿ ತೆಗೆದು ಗೂಡಿಗೆ ಗುದ್ದಿ ಬಿಟ್ಟ. ನಾನು ಸ್ವಲ್ಪ ನಿಂತಲ್ಲಿಂದ ಸರಿದು ದೂರ ಬಂದೆ.

ಅಷ್ಟರಲ್ಲೇ ” ಕಾಕಾ.. ಕಾಕಾ” ಕಾಗೆಗಳ ರೋಧನೆ ಮುಗಿಲು ಮುಟ್ಟಿತು. ಒಂದೆರಡು ಗೂಡಿನ ಪಕಳೆಗಳು ನೆಲದ ಮೇಲೆ ಬಿದ್ದವು. ಅವನು ಇನ್ನೊಮ್ಮೆ ದೋಟಿ ಎತ್ತಿದ. ಗೂಡು ಬುಡ ಸಮೇತ ಹರಿದು ದೊಪ್ಪೆಂದು ನೆಲಕ್ಕಪ್ಪಳಿಸಿತು. ಇಡೀ ಗೂಡು ಚಲ್ಲಾ ಪಿಲ್ಲಿಯಾಗಿ ಬಿತ್ತು. ಆಗಷ್ಟೇ ಮೊಟ್ಟೆಯಿಂದ ಹೊರ ಬಂದಿದ್ದ ರೆಕ್ಕೆ ಪುಕ್ಕ ಮೂಡದ ಎರಡು ಮರಿಗಳು ರಕ್ತ ಕಾರುತ್ತಾ ನೆಲದಲ್ಲಿ ಒದ್ದಾಡುತ್ತಿದ್ದವು. ಕಾಗೆಗಳ ಗುಂಪೇ ಅಲ್ಲಿ ಹಾರಾಡತೊಡಗಿತು. ಎಲ್ಲಾ ಕಾಗೆಗಳೂ ಒಗ್ಗಟ್ಟಾಗಿ ಗಲಾಟೆ ಮಾಡತೊಡಗಿದವು. ನನಗೆ ಹಕ್ಕಿ, ಮತ್ತು ಗೂಡಿನ ಅವಸ್ಥೆ ನೋಡಿ ಹೊಟ್ಟೆ ಕಿವುಚಿದಂತಾಯಿತು. ಅಷ್ಟರಲ್ಲೇ ಅಸ್ತವ್ಯಸ್ತವಾದ ಕಾಗೆ ಗೂಡಿನ ಸುತ್ತಾ ಉಳಿದ ವಿದ್ಯಾರ್ಥಿಗಳು ಜಮಾಯಿಸಿದರು. ಗೂಡೆಂದರೆ ಗಟ್ಟಿ ಅಡರುಗಳ ರಾಶಿ, ನಾಲ್ಕೈದು ತೆಂಗಿನ ಸಿಪ್ಪೆಯ ನಾರು. ಬಹಳ ಎತ್ತರದ ಕೊಂಬೆಯಲ್ಲಿ ಕಾಗೆ ಗೂಡು ಕಟ್ಟಿತ್ತು. ಮನೆಯವರು ಹೊಸ ಡ್ರೆಸ್ಸು ಹಾಕಿ ಹೊರಟ ದಿನವೇ ಪಿಚಕಾರಿ ಹಾಕಿ ಯಾವಾಗಲೂ ಉಪದ್ರ ಕೊಡುತ್ತಿತ್ತು. ಅದನ್ನೇ ತಪ್ಪಿಸಲು ಮನೆಯವರು ಸೇರಿ ಗೂಡನ್ನು ತೆಗೆಯಲು ತೀರ್ಮಾನಿಸಿದ್ದರು. ದೌರ್ಭಾಗ್ಯಕ್ಕೆ ಅವರಿಗೆ ಅದರಲ್ಲಿ ಮರಿಗಳಿದ್ದದ್ದು ಗೊತ್ತಾಗಿರಲೇ ಇಲ್ಲ. ನಾನು ಆ ದಿನ ಪೂರ್ತಿ, ಸತ್ತು ಹೋದ ಮರಿಗಳಿಗಾಗಿ ಖೇದಪಟ್ಟೆ.

ಇದಾಗಿ ಸುಮಾರು ದಿನಗಳ ನಂತರ, ಮನೆಯ ಹತ್ತಿರ ಬಸಳೆ ಚಪ್ಪರದ ಬಳಿ ನಾನು ಆಟವಾಡುತ್ತಿದ್ದಾಗ ಕಾಣೆಯಾದ ಚೆಂಡು ಹುಡುಕುತ್ತಿದ್ದೆ. ಅಲ್ಲೆ ನಾಲ್ಕೈದು ಕಾಗೆಗಳು ಮೊಟ್ಟೆಯ ಓಡುಗಳಲ್ಲಿ ಅಳಿದುಳಿದದ್ದೆಲ್ಲಾ ಕುಕ್ಕಿ ತಿನ್ನುತ್ತಿದ್ದವು. ನಾನು ಚೆಂಡು ಹುಡುಕಲು ಹೋಗಿ ಅವುಗಳ ಆಹಾರಕ್ಕೆ ಸ್ವಲ್ಪ ಉಪದ್ರವಾಯಿತೇನೋ, ಒಂದು ಕಾಗೆ ತಲೆಯ ಮೇಲೊಮ್ಮೆ ಕುಟುಕಿ ಪರಾರಿಯಾಯಿತು. ನನಗೆ ಭಯ ಶುರುವಾಯಿತು. “ಕಾಗೆ ಕುಕ್ಕಿದರೆ ಸಾಯುತ್ತಾರೆಂಬ” ಅಲಿಖಿತ ಭವಿಷ್ಯವಾಣಿ ನೆನಸಿಕೊಂಡು ಎರಡ್ಮೂರು ದಿನ ಒಳಗೊಳಗೆ ಹೆದರಿದೆ. ಯಾರಿಗೂ ಅದನ್ನು ಹೇಳಿಕೊಳ್ಳುವ ಧೈರ್ಯವೂ ಸಾಕಾಗಲಿಲ್ಲ. ಇದಾಗಿ ಸುಮಾರು ವರ್ಷಗಳೇ ಗತಿಸಿ ಹೋದವು. ನಾನಿನ್ನೂ ಜೀವಂತವಾಗಿಯೇ ಇದ್ದೇನೆ. “ಕಾಗೆ ಕುಟುಕಿ ನಿನಗೇನು ಆಗಿಲ್ವಾ, ಮಾರಾಯ” ಅಂಥ ಕೇಳುವುದಿದ್ದರೆ ಇತ್ತಿಚಿಗೆ ತಲೆಗೂದಲು ಉದುರಿ ನಿಧಾನವಾಗಿ ಬೊಕ್ಕ ತಲೆಯವನಾಗುತ್ತಿರುವುದನ್ನು ತೋರಿಸಬಲ್ಲೆನೇ ಹೊರತು, ಅನ್ಯ ಬದಲಾವಣೆಯೇನೂ ಸಂಭವಿಸಿಯೇ ಇಲ್ಲ.