ಅವಳಿಗೂ ಬುದ್ಧನಾಗುವ ಆಸೆ. ವೃಷ್ಟಿ ಅವಳು ಸಮಷ್ಟಿ, ಸೃಷ್ಟಿ ಉತ್ಪತ್ತಿಯ ಕಾರಣಕರ್ತೆ ಬುದ್ಧನಾದರೆ ಜಗವ ಪೋಷಿಸುವವರ್ಯಾರು? ತ್ಯಜಿಸಿ ಹೊರಟರೆ ಅಮ್ಮನಾಗಿ ಪಾಲಿಸುವವರ್ಯಾರು? ಒತ್ತಾಸೆಯಾಗುವ ಅವಳು ಹೊರಟುಬಿಟ್ಟರೆ ಭೂಮಿ ಬಂಜರಲ್ಲವೇ? ಹತ್ತದ ಒಲೆಯ ಊದಿ ಊದಿ ಹೆಂಚಿನ ಸಂದಿನಲ್ಲಿ ಬರುವ ಸಣ್ಣ ಸೂರ್ಯ ಕಿರಣ ಅಲ್ಲಿದೆ ಅವಳ ಚೈತನ್ಯ.
ಮಹಾಲಕ್ಷ್ಮೀ ಕೆ.ಎನ್. ಬರಹ ನಿಮ್ಮ ಓದಿಗೆ
ರಾತ್ರಿ ಪೂರಾ ಮಳೆ ಸೌದೆಯೆಲ್ಲಾ ಒದ್ದೆ ಬಿಸಿಲಿಗೆ ಹಾಕಿದ್ದಾಗಿದೆ. ಪುಟ್ಟಿ ಒಲೆಯ ಮುಂದೆ ಕುಳಿತಿದ್ದಾಳೆ. ಒದ್ದೆ ಸೌದೆಗಳೆಲ್ಲಾ ಬೆಂಕಿ ಮುಟ್ಟಿಸಿಕೊಳ್ಳಲಾರವು. ಉರಿಯುತ್ತಲೇ ಇಲ್ಲ, ಕೊಳವೆ ಊದುತ್ತಿದ್ದಾಳೆ. ಉಸಿರೆಳೆದು ಎಳೆದು ಹೊತ್ತಿಸಿಕೊಳ್ಳುತ್ತಲೇ ಇಲ್ಲ ಸೌದೆಗಳು, ಅಂಗೈಗಿಂತಲೂ ಅಗಲ ಚಂದ್ರನ ತೊಟ್ಟಿದ್ದಾಳೆ ಪುಟ್ಟಿ. ಅಂಚಿನಲ್ಲಿ ಕೈ ಸುಟ್ಟರೂ ಗಮನಿಸದೆಯೇ ಬೇಯಿಸುತ್ತಾಳೆ. ಎಲ್ಲವನ್ನೂ ಒಪ್ಪಮಾಡಿ ಶಾಲೆ ಗಂಟೆ ಬಾರಿಸುವುದರೊಳಗೆ ಗೆಳತಿಯರೊಂದಿಗೆ ಓಡುವ ಅವಳಿಗೆ ಭವಿತವ್ಯದ ಆಸೆ.
ಶಾಲೆಯಲ್ಲಿ ಪ್ರೇಯರ್‌ಗೆ ಸಾಲಾಗಿ ನಿಲ್ಲಿಸಲು ಪಿಟಿ ಮಾಸ್ತರರು ವಿಶಲೂದುತ್ತಿದ್ದಾರೆ, ಶನಿವಾರದ ವ್ಯಾಯಾಮ ಮುಗಿಯುತ್ತದೆ, ಏನೋ ಹೊಸ ಪ್ರಕಟಣೆ ಬಂದಿದೆ. ಶುಕ್ರವಾರದ ಪ್ರತಿಭಾ ಕಾರಂಜಿಯಲ್ಲಿ ಬಹುಮಾನ ಪಡೆದವರ ಪಟ್ಟಿಯನ್ನ ಮುಖ್ಯೋಪಾಧ್ಯಾಯರು ಓದುತ್ತಿದ್ದಾರೆ, ಅಭಿನಯ ಗೀತೆಯಲ್ಲಿ ಪ್ರಥಮಳು, ಭಾಷಣದಲ್ಲಿ ಪ್ರಥಮಳು, ರಸಪ್ರಶ್ನೆಯಲ್ಲಿ ಪ್ರಥಮಳು. ಬಹುಮಾನದ ಅಷ್ಟೂ ಪುಸ್ತಕಗಳ ತಬ್ಬಿ ಹಿಡಿದಳು. ಅಂಗೈಯಗಲದ ಮುಖ ಚಂದಿರ ಅರಳಿದ.
ಚಿಕ್ಕವಳು ಹುಡುಗಿ ಎಷ್ಟೊಂದು ಚುರುಕು ಕಲಿಯಬೇಕಿದೆ, ಗೋಲಿ ಕಣ್ಣಲ್ಲಿ ಎಷ್ಟು ದೊಡ್ಡ ಜಗತ್ತ ನೋಡಬೇಕಿದೆ, ಪುಟ್ಟ ಹೆಜ್ಜೆಯಲ್ಲಿ ಎಷ್ಟೊಂದು ಮಾರು ನಡೆಯಬೇಕಿದೆ, ಪುಟ್ಟ ಬೊಗಸೆಯಲ್ಲಿ ಎಷ್ಟೊಂದು ಕೆಲಸವಾಗಬೇಕಿದೆ, ಎಷ್ಟು ಜೀವಿಗಳ ಪಾಲಿಸಬೇಕಿದೆ, ಮಾರುದ್ದ ಜಡೆಯಲ್ಲಿ ಜಗದ ದೃಷ್ಟಿ ನೀವಾಳಿಸಬೇಕಿದೆ, ಹಿತ್ತಲಿನ ಗೋರಂಟಿ ಹಚ್ಚಿ ನಲಿಯುವ ಪುಟ್ಟಿ ಎಷ್ಟು ಬದುಕಿಗೆ ಬಣ್ಣವಾಗಬೇಕಿದೆ. ಅವಳೆಂದರೆ ಬಣ್ಣದ ಓಕುಳಿ, ಮಲ್ಲಿಗೆಯ ಮೈಯವಳು ಇನ್ನು ಎಷ್ಟು ಜಂಜಡಗಳ ನೋಡಬೇಕಿದೆ… ನಿಭಾಯಿಸಬೇಕಿದೆ.
ಸೈಕಲ್ ಏರಿ ಹೈಸ್ಕೂಲಿಗೆ ಬಂದವಳು ರಸಾಯನಶಾಸ್ತ್ರದಲ್ಲಿ ಮೂಲಧಾತುಗಳ ಆವರ್ತಕ ಕೋಷ್ಟಕದಲ್ಲಿ ಬರುವ ಅತ್ಯಂತ ವಿಕಿರಣಶೀಲ ಲೋಹವಾದ ರೇಡಿಯಂ ಕಂಡಳು. ಅವಳಿಗೆ ರೇಡಿಯಂ ಮಾತೆ ಮೇರಿ ಕ್ಯೂರಿಯ ಪರಿಚಯವಾಗುತ್ತೆ, ಯಾವುದೋ ಒಂದು ಕನಸು ಅಲ್ಲಿಯೇ ಹುಟ್ಟುತ್ತೆ. ಹಾಳೆ ತಿರುವಿ – ತಿರುವಿ ದೃಷ್ಟಿ ಕ್ಯೂರಿಯ ಕಡೆಗೆ ಜಾಗೃತವಾಗುತ್ತೆ.
ಕನ್ನಡ ಪುಸ್ತಕದಲ್ಲಿ ಷಟ್ಪದಿಗಳ ಕಂಡ ಷೋಡಶಿ. ಅದರ ಸೌಂದರ್ಯಕ್ಕೆ ಬೆರಗಾಗುವಾಗ ಇನ್ಯಾವ ಬೆರಗೂ ಬೇಡ. ಅಲ್ಲೊಂದು ಹೂವರಳುತ್ತೆ, ಮಳೆಗಾಲದಲ್ಲಿ ಒಲೆ ಹೆಚ್ಚಿಗೆ ಸೌದೆಗಳ ಕೇಳುತ್ತೆ, ಕಿಡಿ ಬಿದ್ದು ಕೈ ಚುರುಗುಟ್ಟಿದರೂ ಒತ್ತುದೀರ್ಘಗಳನ್ನ ಹೆಚ್ಚಿಗೆಯೇ ಎಳೆಯುತ್ತಾಳೆ ಮನವ ತಣ್ಣಗಿಡಲು.
ಕೆರೆಗೆ ಬಟ್ಟೆ ಒಗೆಯಲು ಅಜ್ಜಿಯೊಂದಿಗೆ ಹೋಗುವ ಅವಳಿಗೆ ಅಕ್ಕನ ವಚನಗಳದ್ದೇ ಧ್ಯಾನ, ಮನೆಯಲ್ಲಿ ಪುಟ್ಟ ತಂಗ್ಯಮ್ಮನ ಪುಟ್ಟ ತೊಟ್ಟಿಲಲ್ಲಿ ತೂಗುವ ಇವಳಿಗೆ ಜೋಗುಳಗಳು ಬಾಯಿ ಪಾಠ. ತೊಟ್ಟಿಲಿನ ತಂಗಿಯದ್ದು ಹಿಮ್ಮೇಳ ರಾಗ.
ವಯಸ್ಸಿನ ಗೆರೆಗಳಿಲ್ಲದೆಯೂ ಹುಡುಗಿ ಯುವತಿಯಾದಳು, ಯುವತಿ ಸ್ತ್ರೀಯಾದಳು. ಹೊಣೆಗಾರಿಕೆಯ ಹೂವು. ಸುಣ್ಣದ ಗೋಡೆಯ ತುಂಬೆಲ್ಲಾ ಅವಳ ಕನಸುಗಳ ಚಿತ್ರ. ಪುಟ್ಟ ಬೊಗಸೆಯಲ್ಲಿ ಚಂದಿರನಿಡಿಯುವ ಬಯಕೆ. ಮನೆಯ ಜವಾಬ್ದಾರಿಯನ್ನ ಗಂಡು ಮಗನಿಗಿಂತ ಹೆಚ್ಚಾಗಿಯೇ ಹೊರುತ್ತಾಳೆ. ಲಲಿತೆ, ಮೃದುಲೆ, ಕನಕಾಂಗಿ ಈಗ ಸಬಲೆ, ಸಮರ್ಥೆ, ನಿರ್ಭೀತೆ, ಪ್ರೌಢೆ, ಪ್ರಬುದ್ಧೆ.
ಅವನೊಬ್ಬನಿಗೆ ಸಹಚಾರಿಣಿಯಾಗಿ ಕೈ ಹಿಡಿದು ನಿಲ್ಲುತ್ತಾಳೆ. ಅವನ ಬಾಳ ರಥಕ್ಕೆ ಚಕ್ರವಾಗುತ್ತಾಳೆ. ಪಥಕ್ಕೆ ಹಣತೆ ಹಿಡಿಯುತ್ತಾಳೆ. ಋತು, ಕ್ಷೇತ್ರ, ಅಂಬು ಹೊಂದಿ ಬಿತ್ತಿದ ಬೀಜಕ್ಕೆ ಪೋಷಣೆ ನೀಡುತ್ತಾಳೆ.
ಒಡಲ ಮೊಗ್ಗು ಸುಗ್ಗಿಯ ಹಿಗ್ಗು ಎರಡನ್ನೂ ಸುಖಿಸುತ್ತಾಳೆ. ಕೇಸರಿ ದಳದಂತೆ ತುಟಿ ಅರಳಿಸಿ ನಗುವ ಕೂಸಿಗೆ ಮುತ್ತಿಡುವ ಅವಳು ತನ್ನೊಡಲ ಸಂಭ್ರಮಿಸುತ್ತಾಳೆ. ಜೀವದ ಧ್ವನಿ. ಮನೆಮಂದಿಯ ಓರೆ ಕೋರೆಗೆ ಪರಿತಪಿಸುತ್ತಾಳೆ, ಸರಿ ದೂಗಿಸಲು ಹವಣಿಸುತ್ತಾಳೆ. ಪಥ್ಯಪಾಲಿಸುವ ಅಡುಗೆ ಕೋಣೆಯಲ್ಲಿ ಸಾಸಿವೆ ಚಟಪಟನೆ ಸಿಡಿಯುತ್ತದೆ.
ಬದುಕ ಸಾಗಿಸುತ್ತಾಳೆ ನಿರಂತರೆ.
ತಾಳ್ಮೆ ಕಲಿಸಿದವರ್ಯಾರು ಜನ್ಮತಾ ಸಹನಾ ಮೂರ್ತಿ ಅವಳು. ಕಸೂತಿ ಹಾಕುವಷ್ಟೆ ಸೂಕ್ಷ್ಮವಾಗಿ ನಿಭಾಯಿಸುವ ಕಲೆಯನ್ನು ಕರಗತ ಮಾಡಿಕೊಂಡವಳು. ಅವಳೆಂದರೆ ಸಹಾನುಭೂತಿ, ಪ್ರೇಮವ ಧಾರಾಳವಾಗಿ ಎರೆಯುವಳು, ಎಲ್ಲವನ್ನ ಸರಿದೂಗಿಸುವಳು, ದೊಡ್ಡ ಬೆಂಬಲಿಗಲಾಗುವಳು, ಅವಳೆಂದರೆ ಭಾರೀ ಒತ್ತಾಸೆ, ಸೂಕ್ಷ್ಮಮತಿ ಅವಳು, ಥಟ್ಟನೆ ಮುಖವನೋದುವಳು. ಕೆಮ್ಮು ಶೀತಕ್ಕೆ ಚಿಟಿಕೆ ಅರಿಶಿನ ಶುಂಠಿಯ ಕಷಾಯ ಕಾಯಿಸಿ ಕುದುಸಿ ಕುಡಿಸಿ ಶಮನಿಸುವ ಆರೈಕೆಯ ವೈದ್ಯ ಪ್ರದೀಪಿಕೆ. ಅವಳು ಅಮೃತಬಳ್ಳಿ. ಮುಪ್ಪಿನಲ್ಲಿ ಮುಂದಿನ ಪೀಳಿಗೆಗೆ ದಿನವೂ ಪ್ರಾರ್ಥಿಸುತ್ತಾಳೆ. ಯೌವನಕ್ಕೆ, ಹೆಣ್ತನಕ್ಕೆ, ಸ್ತ್ರೀತನಕ್ಕೆ, ತಾಯ್ತನಕ್ಕೆ, ಹಿರಿತನಕ್ಕೆ ಅವಳು ಸಾಮಾನ್ಯಳು. ಎಲ್ಲಾ ಋತುಗಳಲ್ಲೂ ಬೆರೆವಂಥ ನಮ್ಮೊಳಗಿನ ಸಾರ, ಮೂಲಾಧಾರ. ಅಷ್ಟೇ ಅಸಾಮಾನ್ಯಳೂ ಕೂಡ.
ಎಲ್ಲವನ್ನು ಕಂಡವಳಿಗೆ ಎಲ್ಲವನ್ನು ಬಿಡುವುದು ದೂರದ ಮಾತಲ್ಲ. ಸುತ್ತಲೂ ಹೆಣೆದುಕೊಂಡ ಗಂಟುಗಳ ಬಿಡಿಸಿಕೊಳ್ಳುವುದು ಕಷ್ಟವಲ್ಲ ಆದರೂ ಕಟ್ಟಿಕೊಂಡೇ ಇರುತ್ತಾಳೆ ಗಂಡ, ಮಕ್ಕಳು, ಮನೆ, ನೆತ್ತಿಯ ಮೇಲಿನ ಸೆರಗು, ಬೀಸುವ ಕಲ್ಲು, ಒನಕೆ, ಹಿಟ್ಟಿನ ತಪ್ಪಲಿ, ಹತ್ತದ ಒಲೆ, ಹೆಪ್ಪಾದ ಮೊಸರು, ಕಡೆಗೋಲು, ಮಜ್ಜಿಗೆ, ಎತ್ತು, ಎಮ್ಮೆ, ಆಡು, ಕುರಿ, ಹಣೆಯ ಕುಂಕುಮ, ಗಲ್ಲದ ಅರಿಶಿನ, ಹಿತ್ತಲಿನ ಮಲ್ಲಿಗೆ ಸೇವಂತಿಗೆ, ನುಗ್ಗೆ, ಹೊನಗೊನೆ, ದೊಡ್ಡಪತ್ರೆ, ಶತಾವರಿ, ಒಂದೆಲಗ, ಹೊನಗೊನೆ, ಅಡುಗೆ ಕೋಣೆಯ ಮೆಣಸು, ಜೀರಿಗೆ, ಚಕ್ಕೆ, ಲವಂಗದ ಡಬ್ಬಿಗಳು, ಹೊಲ, ಗದ್ದೆ, ಕಣ, ಭತ್ತ, ರಾಗಿ, ಜೋಳ, ಬಾಳೆ, ಬೆಳೆವ ಬೆಳೆ, ಸುರಿವ ಮಳೆ ಎಲ್ಲವನ್ನೂ ಕಟ್ಟಿಕೊಂಡೇ ಇರುತ್ತಾಳೆ. ಎಲ್ಲರನ್ನೂ ಒಡಲ ಮಗುವಂತೆ ಪಾಲಿಸುತ್ತಾಳೆ. ಭೂಗರ್ಭ ಸಂಜಾತೆ.
“ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ ?
ಸ್ತ್ರೀ ಅಂದರೆ ಅಷ್ಟೇ ಸಾಕೆ ? “
~ ಜಿ. ಎಸ್. ಎಸ್.
ಅವಳಿಗೂ ಬುದ್ಧನಾಗುವ ಆಸೆ. ವೃಷ್ಟಿ ಅವಳು ಸಮಷ್ಟಿ, ಸೃಷ್ಟಿ ಉತ್ಪತ್ತಿಯ ಕಾರಣಕರ್ತೆ ಬುದ್ಧನಾದರೆ ಜಗವ ಪೋಷಿಸುವವರ್ಯಾರು? ತ್ಯಜಿಸಿ ಹೊರಟರೆ ಅಮ್ಮನಾಗಿ ಪಾಲಿಸುವವರ್ಯಾರು? ಒತ್ತಾಸೆಯಾಗುವ ಅವಳು ಹೊರಟುಬಿಟ್ಟರೆ ಭೂಮಿ ಬಂಜರಲ್ಲವೇ?
ಹತ್ತದ ಒಲೆಯ ಊದಿ ಊದಿ ಹೆಂಚಿನ ಸಂದಿನಲ್ಲಿ ಬರುವ ಸಣ್ಣ ಸೂರ್ಯ ಕಿರಣ ಅಲ್ಲಿದೆ ಅವಳ ಚೈತನ್ಯ. ಒಡ್ಡಿಕೊಳ್ಳುವಳು……
ಎಲ್ಲರೊಳಗಿನ ಹಣತೆ, ಜೀವದ್ರವ್ಯ…
“ಅವಳು ಕೇವಲ ಅಸ್ತಿತ್ವವಲ್ಲ, ಬದುಕಿನ ಶಕ್ತಿ”
