ಚೇತನಾ ಹೆಗಡೆಯಂತಹ ಹೊಸ ವಿಮರ್ಶಕಿಯರು ಇವತ್ತು `ಹಿಂದಣ ಹಜ್ಜೆಯ’ ಚೈತನ್ಯವನ್ನು ಮೈಗೂಡಿಸಿಕೊಂಡು, ಆದರೆ, ಅಲ್ಲಿ ವಿರಮಿಸದೆ `ಮುಂದಣ ಹೆಜ್ಜೆ’ಯನ್ನು ಇಡಬೇಕಿದೆ, ಸ್ತ್ರೀ ಅಸ್ಮಿತೆಯ ಹೊಸ ದಿಕ್ಕುಗಳನ್ನು ಶೋಧಿಸಬೇಕಿದೆ. ನಮಗೆ ಹೊರನೋಟಕ್ಕೆ ತೋರುವ ಸ್ತ್ರೀಮಾದರಿಗಳು ಹೊಸಹೊಸದಾಗಿವೆ ಮಾತ್ರವಲ್ಲ, ಇಂದು `ಸ್ತ್ರೀ’ಎಂಬ ವ್ಯಕ್ತಿಯ ಅಸ್ಮಿತೆಯೇ ಬದಲಾಗುತ್ತಿದೆ. ಈಗ ಸ್ತ್ರೀ ಹಾಗೂ ಪುರುಷ ಎಂಬುದು ಅಚ್ಚುಕಟ್ಟಾಗಿ ಗೆರೆ ಕೊರೆದಂತೆ ಪ್ರತ್ಯೇಕಿಸಬಹುದಾದ ಎರಡು ಧ್ರುವಗಳಾಗಿ ಉಳಿದಿಲ್ಲ, ಅದೊಂದು ವರ್ಣಪಟಲ(ಸ್ಪೆಕ್ಟ್ರಮ್), ಅನೇಕ ಆಯ್ಕೆ ಮತ್ತು ಸಂಯೋಜನೆಗಳ ಒಂದು ವಿಸ್ತಾರ.
ಚೇತನಾ ಹೆಗಡೆ `ಅವಳ ಪಥ’ ಕೃತಿಯ ಕುರಿತು ಡಾ. ಎಲ್.ಜಿ. ಮೀರಾ ಬರಹ ನಿಮ್ಮ ಓದಿಗೆ
`ಅವಳ ಪಥ ’ – ಶ್ರೀಮತಿ ಚೇತನಾ ಹೆಗಡೆ ಅವರ ಮೊದಲ ವಿಮರ್ಶಾ ಕೃತಿ. ಈ ಕೃತಿಯಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿನ ಮಹಿಳೆಯ ಹೆಜ್ಜೆಗಳನ್ನು ದಾಖಲಿಸುವ ಪ್ರಯತ್ನವಿದೆ. ಇಲ್ಲಿ ಒಟ್ಟು ಹದಿನೈದು ಲೇಖನಗಳಿದ್ದು ಜನಪದ ಸಾಹಿತ್ಯದಿಂದ ಹಿಡಿದು ಸಮಕಾಲೀನ ಸಾಹಿತ್ಯದ ತನಕದ ಕಥಾಕ್ಷೇತ್ರದಲ್ಲಿನ ಸ್ತ್ರೀ ಅಭಿವ್ಯಕ್ತಿಯ ಕಡೆಗೆ ಪಕ್ಷಿನೋಟವನ್ನು ಬೀರಲಾಗಿದೆ.
ಪಾಶ್ಚಾತ್ಯ ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯ ಚರಿತ್ರೆಯನ್ನು ಗಮನಿಸುವುದಾದರೆ 1960ರಲ್ಲಿ ಉಗಮವಾದ ಸ್ತ್ರೀವಾದದ ಎರಡನೆಯ ಅಲೆಯಲ್ಲಿ ಅದರಲ್ಲೂ ಅಮೆರಿಕಾದ ಸ್ತ್ರೀವಾದಿ ಚಿಂತನೆಯಲ್ಲಿ ಸ್ತ್ರೀವಿರಚಿತ ಸಾಹಿತ್ಯವನ್ನು ಗಮನಕೇಂದ್ರಕ್ಕೆ ತರಲಾಯಿತು. ವರ್ಜೀನಿಯಾ ವೂಲ್ಫ್, ಕೇಟ್ ಮಿಲ್ಲೆಟ್ ಮೊದಲಾದ ಮಾತೃಚಿಂತಕಿಯರ ವಿಚಾರಗಳನ್ನು ನಾವಿಲ್ಲಿ ನೆನೆಯಬೇಕು. ಪುರುಷ ಬರವಣಿಗೆಗೆ ಹೋಲಿಸಿದಾಗ ಸ್ತ್ರೀ ಅನುಭವದ ಮತ್ತು ಅಭಿವ್ಯಕ್ತಿಯ ವಿಶಿಷ್ಟತೆ, ಪ್ರಧಾನ ವಾಹಿನಿಯ ಸಾಹಿತ್ಯ ಚರಿತ್ರೆಯಲ್ಲಿ ಮಹಿಳೆಯರ ಅವಗಣನೆ-ಕಡೆಗಣನೆ, ಸ್ತ್ರೀಪಾತ್ರಗಳನ್ನು ಪುರುಷನ ದೃಷ್ಟಿಕೋನದಿಂದ(ಮೇಲ್ ಗೇಝ್‌ನಿಂದ) ಚಿತ್ರಿಸಿದಾಗ ಉಂಟಾಗುವ ತಿರುಚುವಿಕೆ ಇವುಗಳನ್ನು ಗುರುತಿಸಿದ ಈ ಚಿಂತಕಿಯರು, `ಲೈಂಗಿಕ ರಾಜಕಾರಣ’ ಎಂಬ ಹೊಸ ತತ್ವವನ್ನು ಆಧರಿಸಿದ ಸಾಹಿತ್ಯವಿಮರ್ಶೆಯ ರೀತಿಯನ್ನು ಸಾಹಿತ್ಯಲೋಕಕ್ಕೆ ಪರಿಚಯಿಸಿದರು. ಲೇಖಕರ ಆಶಯಕ್ಕೆ ವಿರುದ್ಧವಾಗಿ ಓದುವ ಕ್ರಮವನ್ನು (ರೀಡಿಂಗ್ ಎಗೇನ್ಸ್ಟ್ ದಿ ಗ್ರೇನ್) ಅಂದರೆ ಒಂದು ಹೊಸ ರೀತಿಯ ಓದನ್ನು ಪರಿಚಯಿಸಿದರು. ಸ್ತ್ರೀಯ ಜೀವನಾನುಭವವನ್ನು ಅಡುಗೆಮನೆ ಸಾಹಿತ್ಯವೆಂದು ಲೇವಡಿ ಮಾಡಿ ಕೀಳುಗಳೆಯುತ್ತಿದ್ದ ಹಾಗೂ ಮನುಷ್ಯ=ಪುರುಷ(ಅರ್ಥಾತ್ ಪುರುಷ ಮಾತ್ರ) ಎಂದು ವ್ಯಾಖ್ಯಾನಿಸಿ, ಸ್ತ್ರೀಯ ಅನುಭವವನ್ನು ಗಮನಿಕೆಯ ಪರಿಧಿಯಿಂದ ಹೊರಗಿಟ್ಟಿದ್ದ ಪ್ರಧಾನಧಾರೆಯ ವಿಮರ್ಶೆಗೆ ಮರ್ಮಾಘಾತವಾಗುವಂತಹ ಪ್ರಶ್ನೆಗಳನ್ನು ಕೇಳಿದರು. ಸಾಹಿತ್ಯದಲ್ಲಿ ಸ್ತ್ರೀಅನುಭವ ಪ್ರಾಮಾಣ್ಯಕ್ಕೆ ಘನತೆಯನ್ನು ತಂದುಕೊಟ್ಟರು. ಸ್ತ್ರೀವಾದಿ ವಿಮರ್ಶೆಯ ಉಗಮದ ನಂತರ ಈ ಲೋಕದ ಸಾಹಿತ್ಯ ವಿಮರ್ಶೆಯ ಭೂಪಟವು ಹಿಂದಿನಂತೆ ಉಳಿಯಲಿಲ್ಲ, ಶಾಶ್ವತವಾಗಿ ಬದಲಾಯಿತು.
ಭಾರತವು ತನ್ಮೂಲಕ ಕರ್ನಾಟಕದ ಭೂಪ್ರದೇಶವು ಬ್ರಿಟಿಷರ ವಸಾಹತುವಾಗಿದ್ದ ಸನ್ನಿವೇಶದಿಂದಾಗಿ ಜಾರಿಗೆ ಬಂದ ಇಂಗ್ಲಿಷ್ ವಿದ್ಯಾಭ್ಯಾಸವು ವಿದ್ಯಾವಂತರಿಗೆ ಇಂಗ್ಲಿಷ್‌ನಲ್ಲಿ ಬಂದ ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯನ್ನು ಪರಿಚಯಿಸಿತು. ಜೊತೆಗೆ 1975ನ್ನು ಅಂತಾರಾಷ್ಟ್ರೀಯ ಮಹಿಳಾ ವರ್ಷ ಎಂದು ಘೋಷಿಸಿದ್ದರಿಂದಾಗಿ ಮತ್ತು ಬಂಡಾಯ ಸಾಹಿತ್ಯದ ಉಗಮದಿಂದಾಗಿ, ಕನ್ನಡದಲ್ಲೂ ಸಹ 1975-80ರ ಹೊತ್ತಿನಲ್ಲಿ ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯು ನಿಧಾನಕ್ಕೆ ಪರಿಚಿತವಾಯಿತು. ಬೆಳೆಯುತ್ತಾ ಬೆಳೆಯುತ್ತಾ ಪ್ರಧಾನ ವಾಹಿನಿಯು ನಿರ್ಲಕ್ಷಿಸಲಾಗದ ಮಟ್ಟದಲ್ಲಿ ಪ್ರಚುರಗೊಂಡು ನಿಚ್ಚಳವಾಗಿ ನೆಲೆ ಪಡೆಯಿತು. ವಿಜಯಾ ದಬ್ಬೆ, ಬಿ.ಎನ್.ಸುಮಿತ್ರಾಬಾಯಿ, ಎನ್.ಗಾಯತ್ರಿ, ನೇಮಿಚಂದ್ರ, ಕೇಶವ ಶರ್ಮ, ಎಚ್.ಎಸ್.ಶ್ರೀಮತಿ ಮುಂತಾದವರ ಬರವಣಿಗೆಗಳು ಜೊತೆಗೆ ಕರ್ನಾಟಕ ಲೇಖಕಿಯರ ಸಂಘದ ಚಟುವಟಿಕೆಗಳು ಸಾಹಿತ್ಯದಲ್ಲಿ ಹೆಣ್ಣ ಕಣ್ಣಿನ ನೋಟವನ್ನು ಅಧಿಕೃತಗೊಳಿಸಲಾರಂಭಿಸಿದವು. ಮರೆತ ಲೇಖಕಿಯರ ಪುನರ್ಶೋಧ, ಹಳಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡ ಸಾಹಿತ್ಯದ ಸ್ತ್ರೀವಾದಿ ದೃಷ್ಟಿಕೋನದ ಮರು ಓದು, ಪಾಶ್ಚಾತ್ಯ ಸ್ತ್ರೀವಾದಿ ಚಿಂತನೆಯ ಕನ್ನಡಾನುವಾದ, ಮಹಿಳಾ ಸಾಹಿತ್ಯ ಚರಿತ್ರೆಯ ಪುನರ್ಲೇಖನ, ಅಡಿಗೆ ಮನೆ, ಕುಟುಂಬ ಹಾಗೂ ಕೈತೋಟದ ಅನುಭವ ಪ್ರಪಂಚವನ್ನೇ ಲೋಕ ಗ್ರಹಿಕೆಗೆ ಆತ್ಮವಿಶ್ವಾಸದಿಂದ ಬಳಸಿ ಗೆದ್ದ ವೈದೇಹಿ, ಸಾರಾ ಅಬುಬಕರ್, ಗೀತಾ ನಾಗಭೂಷಣ ಮೊದಲಾದ ಲೇಖಕಿಯರು, ಇವರಿಗೆ ಬೆಂಬಲ ಕೊಟ್ಟ ಲಂಕೇಶ್ ಪತ್ರಿಕೆ – ಇವು ಕನ್ನಡದಲ್ಲೂ ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯು ತನ್ನದೇ ಚಹರೆಗಳನ್ನು ಪಡೆಯಲು ಕಾರಣವಾದವು.
ಕರ್ನಾಟಕದ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿ.ಎಚ್.ಡಿ. ಹಂತದಲ್ಲಿ ಮಹಿಳಾ ಅಧ್ಯಯನವನ್ನು ವ್ಯಾಸಂಗ ಕ್ರಮದಲ್ಲಿ ಇಟ್ಟದ್ದು ಸ್ತ್ರೀವಾದಿ ವಿಮರ್ಶೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಯಿತು. ಈ ಎಲ್ಲ ಬೆಳವಣಿಗೆಗಳಿಂದಾಗಿ 2000ನೇ ಸಹಸ್ರಮಾನದಲ್ಲಿ ಕನ್ನಡ ಸ್ತ್ರೀವಾದಿ ವಿಮರ್ಶೆಯು ಸಶಕ್ತವಾಗಿ ಬೆಳೆದಿದೆ. ಕನ್ನಡ ವಿಮರ್ಶೆಯ ಪ್ರಧಾನ ವಾಹಿನಿಯು ತನ್ನನ್ನು ಲಕ್ಷಿಸಲಿ ಎಂದು ಕಾಯುವ ಹಂತದಿಂದ ಬಹು ಎತ್ತರ ಬೆಳೆದು ಪ್ರಧಾನ ವಾಹಿನಿಯ ಚಹರೆಯನ್ನೇ ಬದಲಾಯಿಸಿದೆ. ಈಗ ಕನ್ನಡ ಸಾಹಿತ್ಯ ವಿಮರ್ಶೆಗೆ ಒಂದು ಖಚಿತ ಸ್ತ್ರೀಗುಣ ಇದೆ. ಕಳೆದ 40-50 ವರ್ಷಗಳಲ್ಲಿ ಈ ದೃಷ್ಟಿಯಿಂದ ಅಂದರೆ ಸ್ತ್ರೀದೃಷ್ಟಿಯಿಂದ ಆಗಿರುವ ಸಾಧನೆ ಕಡಿಮೆಯಲ್ಲ.
ಡಾ.ಚೇತನಾ ಹೆಗಡೆ ಅವರ `ಅವಳ ಪಥ’ ಕೃತಿಯನ್ನು ನಾವು ಮೇಲೆ ಹೇಳಿದ ಹಿನ್ನೆಲೆಯಿಂದ ನೋಡಿದಾಗ ಇದು ಕನ್ನಡದ ಶೈಕ್ಷಣಿಕ ವಲಯದ ಸ್ತ್ರೀವಾದಿ ವಾಙ್ಮಯದ ಫಲಿತ ಎಂದು ನಮಗೆ ಅರ್ಥವಾಗುತ್ತದೆ. ತಮ್ಮ ಪಿ.ಎಚ್.ಡಿ. ಅಧ್ಯಯನಕ್ಕೆ ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯನ್ನೇ ಆರಿಸಿಕೊಂಡು ಅಧ್ಯಯನ ಮಾಡಿದವರು ಇವರು. ಸುಮಾರು ನಾಲ್ಕು ದಶಕಗಳ ಸ್ತ್ರೀವಾದಿ ದೃಷ್ಟಿಕೋನದ ಕನ್ನಡ ಕೃತಿಗಳು ಇವರ ಬೆಂಬಲಕ್ಕೆ ಇದ್ದವು.
ಸಂಶೋಧನೆಯನ್ನು ಪದವಿಗಾಗಿ ಮಾತ್ರ ಎಂದು ಭಾವಿಸದೆ ಅದನ್ನು ಬದುಕನ್ನು ಅನ್ವೇಷಿಸುವ ಒಂದು ದಾರಿ ಎಂದು ಭಾವಿಸಿ ಗಂಭೀರ ಅಧ್ಯಯನ ಮತ್ತು ಬರವಣಿಗೆಯಲ್ಲಿ ತೊಡಗಿಕೊಳ್ಳುವ ಯುವ ಮನಸ್ಸುಗಳು ಪ್ರಶಂಸನೀಯ. ಇದಕ್ಕಾಗಿ ಚೇತನಾ ಅಭಿನಂದನಾರ್ಹರು.
ಇದಿಷ್ಟು ಪೀಠಿಕೆಯೊಂದಿಗೆ `ಅವಳ ಪಥ’ ಕೃತಿಯನ್ನು ಗಮನಿಸುವುದಾದರೆ ಇಲ್ಲಿನ ಕೆಲವು ಲೇಖನಗಳು ಈಗಾಗಲೇ ಆಗಿರುವ ಚಿಂತನೆಗಳ ಪೃಥಕ್ಕರಣ ಮತ್ತು ಸಮೀಕ್ಷೆಗಳಾದರೆ ಇನ್ನು ಕೆಲವು ಲೇಖನಗಳು ತಮ್ಮ ಒಳನೋಟಗಳಿಂದ ಗಮನ ಸೆಳೆಯುತ್ತವೆ.
`ಜಾನಪದ ಕಥೆಗಳಲ್ಲಿ ಸ್ತ್ರೀ ಅಸ್ಮಿತೆ’ ಎಂಬ ಲೇಖನ ಗಮನಯೋಗ್ಯವಾಗಿದೆ. “ವ್ಯವಸ್ಥೆ ಒಪ್ಪಿತ ಸ್ತ್ರೀಮಾದರಿಗಳು ಮತ್ತು ವ್ಯವಸ್ಥೆ ವಿರುದ್ಧದ ಸ್ತ್ರೀಮಾದರಿಗಳು ಜನಪದ ಸಾಹಿತ್ಯದಲ್ಲಿ ಹೇರಳವಾಗಿ ಸಿಗುತ್ತವೆ” ಎಂಬ ಮುಖ್ಯವಾದ ಅಂಶವನ್ನು ಗುರುತಿಸಿಕೊಂಡಿರುವ ಲೇಖಕಿಯು ಇದಕ್ಕೆ ಕೊಟ್ಟಿರುವ ಸಾಹಿತ್ಯಕ ಉದಾಹರಣೆಗಳು ಸೂಕ್ತವಾಗಿವೆ. `ಸುಳ್ಳಿಗಿಂತ ರುಚಿಯಿಲ್ಲ’, `ಗುಲಗಂಜಮ್ಮ’, `ಅಣ್ಣ ಇಲ್ಲದ ತಂಗಿಯ ಕಥೆ’ ಮುಂತಾದ ಕಥೆಗಳಲ್ಲಿರುವಂತಹ, ತಮ್ಮ ಬುದ್ಧಿವಂತಿಕೆಯಿಂದ ಬದುಕಿನ ಸವಾಲುಗಳನ್ನು ಗೆದ್ದ ಸ್ತ್ರೀಪಾತ್ರಗಳನ್ನು ಪ್ರಸ್ತಾಪಿಸಿರುವುದು ಚೇತೋಹಾರಿಯಾಗಿದೆ.
`ಹಳಗನ್ನಡ ಸಾಹಿತ್ಯದಲ್ಲಿ ಮಹಿಳೆ’ ಹಾಗೂ `ಸ್ಥಾಪಿತ ಮೌಲ್ಯಗಳಿಗೆ ವಚನಕಾರ್ತಿಯರ ಪ್ರತಿಕ್ರಿಯೆ’ ಲೇಖನಗಳು ಈಗಾಗಲೇ ಕನ್ನಡದ ಸ್ತ್ರೀವಾದಿ ವಾಙ್ಮಯದಲ್ಲಿರುವ ಚಿಂತನೆಗಳನ್ನು ಮತ್ತೆ ನೆನಪಿಸುತ್ತವೆ.
“ರಾಜಪ್ರಭುತ್ವದ ಸಂಕೋಲೆಯಲ್ಲಿ ಸ್ತ್ರೀ ಸಂವೇದನೆ” ಎಂಬ ಲೇಖನದಲ್ಲಿ ಶೃಂಗಾರಮ್ಮ ಮತ್ತು ಚೆಲುವಾಂಬೆಯರ ಸಾಹಿತ್ಯ ವಿಮರ್ಶೆಯು ಹೊಸದೆನ್ನಿಸುವ ಹೊಳಹುಗಳನ್ನು ಕೊಡುತ್ತದೆ. ಶೃಂಗಾರಮ್ಮನ `ಪದ್ಮಿನಿ ಕಲ್ಯಾಣ’, ರಾಣಿ ಚೆಲುವಾಂಬೆಯ `ವರನಂದಿ ಕಲ್ಯಾಣ’ ಕೃತಿಗಳಲ್ಲಿನ ನಾವೀನ್ಯತೆಯ ಪ್ರಸ್ತಾಪವು ಗಮನ ಸೆಳೆಯುತ್ತದೆ.
`ಮಹಿಳೆ ಮತ್ತು ಭಕ್ತಿ ಪರಂಪರೆ’ ಲೇಖನದಲ್ಲಿ “ಮಹಿಳಾ ದಾಸರು ಸಂಪ್ರದಾಯದ ಔಕಟ್ಟನ್ನು ಒಪ್ಪಿ ಅದೇ ಮಾರ್ಗದಲ್ಲಿ ನಡೆದವರು. ಮಹಿಳಾ ಕೀರ್ತನದ ಬಹುಪಾಲು ಸಾಹಿತ್ಯದಲ್ಲಿ ಪ್ರತಿರೋಧದ ಎಳೆಗಳು, ಹೆಣ್ಣಿನ ಅಸ್ತಿತ್ವದ ಪ್ರಶ್ನೆಗಳು ಮೂಡಿಬಂದಿಲ್ಲ. ಭಕ್ತೆಯ ಆಂತರ‍್ಯದ ನಿವೇದನೆ ಹೊರಹೊಮ್ಮಿದೆ. ಮಹಿಳೆಯರು ಭಕ್ತಿ ಪರಂಪರೆಯನ್ನು ತಮ್ಮ ಪ್ರತಿನಿತ್ಯದ ಬದುಕಿಗೆ ಅಳವಡಿಸಿಕೊಂಡು ಕಾಯ್ದುಕೊಂಡಿದ್ದಾರೆ. ಹಬ್ಬಹರಿದಿನಗಳಲ್ಲಿ ಸಂಪ್ರದಾಯಸ್ಥರ ಮನೆಯಲ್ಲಿ ಕಂಡುಬರುವ ವ್ರತಪೂಜೆ, ಭಜನೆ, ದೇವಾಲಯಗಳಲ್ಲಿ ನಡೆಯುವ ಭಜನಾಮಂಡಳಿ(ಯ ಹಾಡಿನ ಕಾರ್ಯಕ್ರಮಗಳು), ಭಜನಾ ಸಪ್ತಾಹ, ದೇವಸ್ಥಾನದಲ್ಲಿ ಹಾಡುವ ಸಂಕೀರ್ತನ ಕಾರ್ಯಕ್ರಮ, ಮದುವೆ, ಮುಂಜಿ, ಲಾಲಿಪದಗಳಲ್ಲಿ ಜೀವಂತವಾಗಿದೆ” ಎಂಬ ಲೇಖಕಿಯ ಗಮನಿಕೆ ಸರಿಯಾಗಿದೆ. ಹೌದು, ಕನ್ನಡ ವಚನಕಾರ್ತಿಯರಲ್ಲಿ ಕಾಣುವ ದಿಟ್ಟತನ ಮತ್ತು ಪ್ರತಿರೋಧದ ಎಳೆಗಳು ಕನ್ನಡದ ಹರಿದಾಸಿಯರಲ್ಲಿ ಕಂಡುಬರುವುದಿಲ್ಲ.
ನವೋದಯ, ಪ್ರಗತಿಶೀಲ, ನವ್ಯ, ಅಲಕ್ಷಿತ ಲೋಕ ಹಾಗೂ ಮುಸ್ಲಿಂ ಸಾಹಿತ್ಯದಲ್ಲಿನ ಸ್ತ್ರೀ ಅಸ್ಮಿತೆಯನ್ನು ಕುರಿತು ಇಲ್ಲಿ ಬರೆಯಲಾಗಿರುವ ಲೇಖನಗಳು ಈವರೆಗಿನ ಅಧ್ಯಯನಗಳ ಪುನರ್ಮನನವಾಗಿವೆ. `ಕನ್ನಡ ಸಾಹಿತ್ಯ ಮತ್ತು ಸ್ತ್ರೀಸಂವೇದನೆ’, ಕಥಾಸಾಹಿತ್ಯದಲ್ಲಿ ಮಹಿಳಾ ಹೆಜ್ಜೆಗಳು’ ಕೂಡ ಇಂಥದ್ದೇ ಲೇಖನಗಳಾಗಿವೆ.
`ಸಮಕಾಲೀನ ಕಥಾ ಸಾಹಿತ್ಯದಲ್ಲಿ ಸ್ತ್ರೀ’ ಎಂಬ ಲೇಖನದಲ್ಲಿ “ಕಥೆಯ ವಸ್ತು ಮತ್ತು ಭಾಷೆಗಳಲ್ಲಿ ವೈವಿಧ್ಯತೆಗಳು ಗೋಚರಿಸಿ, ಭಿನ್ನ ಸಾಧ್ಯತೆಗಳ ಹುಡುಕಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡ ಸ್ತ್ರೀಮಾದರಿಗಳು ಕಂಡುಬರುತ್ತಿವೆ” ಎಂಬ ಒಳನೋಟ ನೀಡುತ್ತಾ, ಲೇಖಕಿಯು ಉಮಾರಾವ್, ಮಿತ್ರಾ ವೆಂಕಟರಾಜ್, ವಿನಯಾ, ಸುನಂದಾ ಪ್ರಕಾಶ್ ಕಡಮೆ, ಸುಮಂಗಲಾ, ಶಾಂತಿ ಅಪ್ಪಣ್ಣ, ಗೀತಾ ವಸಂತ್ ಮುಂತಾದ ಕಥೆಗಾರ್ತಿಯರ ಕಥೆಗಳನ್ನು ವಿಮರ್ಶಿಸಿದ್ದಾರೆ. `ಅಸ್ಮಿತೆಯ ಅರಿವಿನ ಹೊಸ ಶಾಖೆಯಾಗಿ’ ಈ ಕಥಾಬರವಣಿಗೆಯನ್ನು ಗುರುತಿಸಿರುವುದು ಕುತೂಹಲಕರವಾಗಿದೆ. ಇದರೊಂದಿಗೆ `ಕಥಾಸಾಹಿತ್ಯದಲ್ಲಿ ಮಹಿಳಾ ಹೆಜ್ಜೆಗಳು’ ಎಂಬ ಈ ಕೃತಿಯ ಕೊನೆಯ ಲೇಖನದಲ್ಲಿ ಮಹಿಳಾ ಕಥಾಸಾಹಿತ್ಯದ ಇಂದಿನ ನೆಲೆಯನ್ನು `ಸ್ವಾಯತ್ತತೆಯ ಹುಡುಕಾಟದ ನೆಲೆ’ ಎಂದು ಗುರುತಿಸಿಕೊಳ್ಳಲಾಗಿದೆ. `ಸ್ವಾಯತ್ತ ನಲೆಯ ಶೋಧದ ಹುಡುಕಾಟವು ಆಧುನಿಕ ಸ್ತ್ರೀಯ ಅಗತ್ಯ’ ಎಂಬುದು ಇಲ್ಲಿ ಲೇಖಕಿಯ ಒಂದು ಮುಖ್ಯ ಚಿಂತನಾ ಫಲಶ್ರುತಿಯಾಗಿದೆ.
ಈ ವಿಮರ್ಶಾ ಲೇಖನವನ್ನು ಕೊನೆಗೊಳಿಸುತ್ತಾ ತೀರ್ಮಾನರೂಪವಾಗಿ ಕೆಲವು ಮಾತುಗಳನ್ನು ಹೇಳುವುದಾದರೆ, ಚೇತನಾ ಹೆಗಡೆಯಂತಹ ಹೊಸ ವಿಮರ್ಶಕಿಯರು ಇವತ್ತು `ಹಿಂದಣ ಹಜ್ಜೆಯ’ ಚೈತನ್ಯವನ್ನು ಮೈಗೂಡಿಸಿಕೊಂಡು, ಆದರೆ, ಅಲ್ಲಿ ವಿರಮಿಸದೆ `ಮುಂದಣ ಹೆಜ್ಜೆ’ಯನ್ನು ಇಡಬೇಕಿದೆ, ಸ್ತ್ರೀ ಅಸ್ಮಿತೆಯ ಹೊಸ ದಿಕ್ಕುಗಳನ್ನು ಶೋಧಿಸಬೇಕಿದೆ. ನಮಗೆ ಹೊರನೋಟಕ್ಕೆ ತೋರುವ ಸ್ತ್ರೀಮಾದರಿಗಳು ಹೊಸಹೊಸದಾಗಿವೆ ಮಾತ್ರವಲ್ಲ, ಇಂದು `ಸ್ತ್ರೀ’ಎಂಬ ವ್ಯಕ್ತಿಯ ಅಸ್ಮಿತೆಯೇ ಬದಲಾಗುತ್ತಿದೆ. ಈಗ ಸ್ತ್ರೀ ಹಾಗೂ ಪುರುಷ ಎಂಬುದು ಅಚ್ಚುಕಟ್ಟಾಗಿ ಗೆರೆ ಕೊರೆದಂತೆ ಪ್ರತ್ಯೇಕಿಸಬಹುದಾದ ಎರಡು ಧ್ರುವಗಳಾಗಿ ಉಳಿದಿಲ್ಲ, ಅದೊಂದು ವರ್ಣಪಟಲ(ಸ್ಪೆಕ್ಟ್ರಮ್), ಅನೇಕ ಆಯ್ಕೆ ಮತ್ತು ಸಂಯೋಜನೆಗಳ ಒಂದು ವಿಸ್ತಾರ. ಸಾಮಾಜಿಕವಾಗಿ ಮೂರನೇ ಲಿಂಗದ ಅರಿವು ದೊಡ್ಡ ಮಟ್ಟದಲ್ಲಿ ಉದಯವಾಗಿರುವ ಈ ಕಾಲಮಾನದಲ್ಲಿ `ನಾನು ಅವನಲ್ಲ, ಅವಳು’, `ನಾನು ಅವಳಲ್ಲ, ಅವನು’ ಎನ್ನುವ ಜೀವಗಳ ದನಿಯನ್ನು ನಿರ್ಲಕ್ಷಿಸಲಾಗುವುದೇ? ಇದರೊಂದಿಗೆ ಈಗ ಮೂವತ್ತು-ಮೂವತ್ತೈದು ವರ್ಷಗಳ ಹಿಂದೆ ತಾಯಂದಿರಾದ ಕರ್ನಾಟಕದ ವಿದ್ಯಾವಂತ ಮಹಿಳೆಯರು, ಅದರಲ್ಲೂ ಪಟ್ಟಣ ಹಾಗೂ ನಗರ ಪ್ರದೇಶದವರು ತಮ್ಮ ಹೆಣ್ಣುಮಕ್ಕಳನ್ನು ಅಡಿಗೆ ಮನೆಗೆ ಸೀಮಿತರಾದವರು ಎಂದು ಬೆಳೆಸುತ್ತಿಲ್ಲ. ಉದ್ಯೋಗಸ್ಥ ಹೆಣ್ಣುಮಕ್ಕಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು `ಉದ್ಯೋಗಂ ಪುರುಷ ಲಕ್ಷಣಂ’ ಎಂಬ ಮಾತನ್ನು ಇಂದು `ಉದ್ಯೋಗಂ ಪುರುಷ ಲಕ್ಷಣಂ ಮತ್ತು ಸ್ತ್ರೀ ಲಕ್ಷಣಂ’ ಎಂದು ವಿಸ್ತರಿಸುವ ಮಟ್ಟಿಗೆ ಸಾಮಾಜಿಕ ಹಾಗೂ ಆರ್ಥಿಕ ಸನ್ನಿವೇಶ ಬದಲಾಗಿದೆ. ಹೀಗಾಗಿ ಮಹಾನಗರಗಳಲ್ಲಂತೂ ಅಡಿಗೆ ಮನೆಯ ಪರಿಚಯವಿಲ್ಲದ ಹೆಣ್ಣುಮಕ್ಕಳು ನಮಗೆ ನೋಡಲು ಸಿಗುತ್ತಾರೆ. ಜೊತೆಗೆ ಕುಡಿತ, ಧೂಮಪಾನ, ಮಾದಕದ್ರವ್ಯ ಸೇವನೆಯ ದುಶ್ಚಟಗಳಿಗೆ ತುತ್ತಾಗುತ್ತಿರುವ ಯುವತಿಯರ ಸಂಖ್ಯೆ ಹೆಚ್ಚುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಲ್ಲದಿದ್ದರೂ ಇಂದಿನ ಒಂದು ವಾಸ್ತವ.
ನಮ್ಮ ಕೆಲವು ಗ್ರಾಮ, ಕುಗ್ರಾಮಗಳಲ್ಲಿ ಈಗಲೂ ಚಾಲ್ತಿಯಲ್ಲಿರುವ ಸ್ತ್ರೀಭ್ರೂಣ ಹತ್ಯೆ, ಲಿಂಗ ತಾರತಮ್ಯ, ಹೆಣ್ಣು ಮಕ್ಕಳಿಗೆ ವಿದ್ಯೆ ಮತ್ತು ಉದ್ಯೋಗಾವಕಾಶಗಳ ನಿರಾಕರಣೆ, ಬಾಲ್ಯವಿವಾಹದ ಅನಿಷ್ಟ ಪದ್ಧತಿ ಎಷ್ಟು ಸತ್ಯವೋ, ಮೇಲೆ ವಿವರಿಸಿದಂತೆ, ನಗರ ಪ್ರದೇಶಗಳಲ್ಲಿ ಬದಲಾಗಿರುವ ಮಧ್ಯಮವರ್ಗ ಮತ್ತು ಮೇಲ್ಮಧ್ಯಮ ವರ್ಗಗಳ ಹೆಣ್ಣುಮಕ್ಕಳ ಸನ್ನಿವೇಶವು ಸಹ ಅಷ್ಟೇ ಸತ್ಯ. ಕನ್ನಡದ ಸಮಕಾಲೀನ ಕವಿತೆಗಳಲ್ಲಿ ಈ ಬದಲಾದ ಜೀವನ ವಿನ್ಯಾಸಗಳನ್ನು ಗುರುತಿಸಲು ಸಾಧ್ಯವಿದೆ. ಸಣ್ಣಕಥೆ, ಕಾದಂಬರಿಗಳಲ್ಲೂ ಬದಲಾಗುತ್ತಿರುವ ಸ್ತ್ರೀಬದುಕಿನ ಗತಿಬಿಂಬವನ್ನು ಗುರುತಿಸಲು ನಮ್ಮ ಕಣ್ಣುಗಳಿಗೆ ತರಬೇತಿ ಬೇಕಿದೆ.
ಇಂದಿನ ಸಂದರ್ಭ, ದಿನಮಾನ, ಬದುಕಿನ ಕ್ರಮಗಳ ಹಿನ್ನೆಲೆಯಲ್ಲಿ ಚೇತನಾ ಹೆಗಡೆಯವರಂತಹ ಲೇಖಕಿಯರು ಹಾಗೂ ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯ ಕ್ಷೇತ್ರಗಳಲ್ಲಿ ಬೆಳೆಯುವ ಆಕಾಂಕ್ಷೆ ಹೊಂದಿರುವವರು ಹೊಸ ವಿಮರ್ಶಾ ನುಡಿಗಟ್ಟುಗಳನ್ನು ಬಳಸಬೇಕಿದೆ. ಏಕೆಂದರೆ ಕನ್ನಡದ ಧೀಮಂತ ವಿಮರ್ಶಕ ಡಾ.ಡಿ.ಆರ್.ನಾಗರಾಜ್ ಅವರು ಹೇಳಿರುವಂತೆ ತಮ್ಮ `ಶಕ್ತಿ ಶಾರದೆಯ ಮೇಳ’ದಲ್ಲಿ ಹೇಳಿದಂತೆ, `ಸಾಹಿತ್ಯ ವಿಮರ್ಶೆ ಎಂಬುದು ಅಂತಿಮವಾಗಿ ಲೋಕವಿಮರ್ಶೆಯೇ’ ಅಲ್ಲವೇ?
(ಕೃತಿ: ಅವಳ ಪಥ, ಲೇಖಕರು : ಡಾ.ಚೇತನಾ ಹೆಗಡೆ, ಪ್ರಕಾಶಕರು: ಅವ್ಯಕ್ತ ಪ್ರಕಾಶನ, ಬೆಂಗಳೂರು, ಪುಟಗಳು: 226+2, ಬೆಲೆ: 225/-)
ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.