ಛೇದನೋಟ
ಅಸ್ತಿತ್ವದ ಕುರಿತ ಊಹಾಪೋಹಗಳಿಗೆ
ಕಿವಿಗೊಡದೆ
ನನ್ನನ್ನೇ ನಾನು ಅರಸುತಿದ್ದೆ
ಬಾಲ್ಯದ ರೆಕ್ಕೆಗಳು ಒಣಗುತಿದ್ದಂತೆ
ಭಿಕ್ಷಾಪಾತ್ರೆ ಥರಗುಟ್ಟಿತು
ಸೀಳಿದ ದನಿಯಲ್ಲಿ
ನತ್ತಿನ ನೆತ್ತರಲ್ಲಿ
ಉಸಿರುಗಟ್ಟಿದ ಬಾಗಿಲಲ್ಲಿ
ನನ್ನನ್ನೇ ನಾನು ಅರಸುತಿದ್ದೆ
ಮನುಷ್ಯತ್ವದ ಚರ್ಮವ ಸುಲಿದು
ಹೃದಯ ಕಂಪಿಸುವಾಗಲೂ
ಜಾತಿಯ ಅಮಲಿನಲ್ಲಿ
ಧರ್ಮದ ಅಫೀಮಿನಲ್ಲಿ
ನನ್ನನ್ನೇ ನಾನು ಅರಸುತಿದ್ದೆ
ನೆನಪುಗಳ ಒಲೆಯಲ್ಲಿ
ಶಿರವನಿಟ್ಟು
ಉರಿಸುತಿದ್ದೆ
ಉರುವಲಿನಂತೆ
ಸಂದಿಗೊಂದಿಗಳ ಕುರುಹಿನಲ್ಲಿ
ಅಂಗಳದ ಗೆರೆಗಳಲ್ಲಿ
ನನ್ನನ್ನೇ ನಾನು ಅರಸುತಿದ್ದೆ
ಅಸ್ತಿತ್ವ ಅಣಕಿಸುವಾಗಲೆಲ್ಲ
ವದಂತಿಗಳು ಹುಬ್ಬೇರಿಸುವಾಗಲೆಲ್ಲ
ಗಾಯಗಳು ಮತ್ತೊಮ್ಮೆ ಸಂಧಿಸುತ್ತವೆ
ನನ್ನನ್ನೇ ನಾನು ಅರಸುವಾಗಲೆಲ್ಲ
ಸುಟ್ಟ ನಾಣ್ಯದೊಂದು ಮುಖವು
ಅನಾವರಣಗೊಳ್ಳುತ್ತದೆ
ಮತ್ತದೇ ದುಗುಡ ಹೊತ್ತ
ಅದುರುತ್ತಿರುವ ದನಿಯಂತೆ
ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಭಾಷೆಯ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸೂಫಿ ಸಾಹಿತ್ಯ ಇವರಿಗೆ ಅಚ್ಚುಮೆಚ್ಚು.
‘ಒಂಟಿ ಹೊಸ್ತಿಲು’, ‘ಅನಾಮಧೇಯ ಹೂ’, “ಹರವಿದಷ್ಟು ರೆಕ್ಕೆಗಳು” ಪ್ರಕಟಿತ ಕವನ ಸಂಕಲನಗಳು
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
👌🏾👌🏾ಕವನ