ಈ ೨೧ ನೇ ಶತಮಾನದಲ್ಲಿ ಕೂಡ ಆಸ್ಟ್ರೇಲಿಯನ್ ಸಮಾಜದಲ್ಲಿ ತಮ್ಮ ಜನರನ್ನು ಕಪ್ಪು ಜನರು ಎಂದು ಕೀಳಾಗಿ ನೋಡುವುದನ್ನು ಪ್ರಶ್ನಿಸುವುದು, ‘ನಿಮ್ಮ ಬ್ಲಾಕ್ ಬಣ್ಣ, ಬ್ಲಾಕ್ ರೇಸಿಸಮ್’ ನಮ್ಮ Blak ಅಸ್ಮಿತೆಗೆ ಭಂಗ ತರುವುದಿಲ್ಲ, ನಮ್ಮ ಕೆಂಪು ಮಣ್ಣು, ಉರಿಯುವ ಸೂರ್ಯ ಇರುವ ತನಕವೂ ನಾವು ಈ ನೆಲದ ಮಕ್ಕಳು ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪ್ರಿಯ ಓದುಗರೆ,
ಮೊನ್ನೆ ಜೂನ್ ೨೬ ರಂದು ಜೂಲಿಯನ್ ಅಸಾಂಜ್ (Julian Assange) ತವರಿಗೆ ಮರಳಿದ್ದಾರೆ. ಇದು ಈ ವಾರದ ಬಹು ದೊಡ್ಡ ಸುದ್ದಿ. ಆಸ್ಟ್ರೇಲಿಯಾ ಮಾತ್ರವಲ್ಲ, ಉತ್ತರ ಗೋಳದ ಅಮೇರಿಕ ಮತ್ತು ಬ್ರಿಟನ್‌ಗಳಲ್ಲಿ ಕೂಡ ವಿಕಿಲೀಕ್ಸ್ ಜನಕ ಜೂಲಿಯನ್ ಅಸಾಂಜ್ ಅವರ ಬಿಡುಗಡೆ ಕೆಲವರು ಆಹಾ, ಓಹೋ ಎಂದು ಉದ್ಗರಿಸುವಂತೆ ಮಾಡಿದೆ. ಸುಪ್ರಸಿದ್ಧ ಹ್ಯಾಕರ್, ಅಮೆರಿಕೆಯ ಮಿಲಿಟರಿ ರಹಸ್ಯಗಳನ್ನು ಜಗತ್ತಿಗೆಲ್ಲಾ ಹಂಚಿದ್ದು ಅಂತೆಲ್ಲಾ ಅಸಾಂಜ್ ಹೆಸರುವಾಸಿ. ೨೦೧೦ರಲ್ಲಿ ಸ್ವೀಡನ್ ದೇಶ ಲೈಂಗಿಕ ಅಪರಾಧದ ಕೇಸ್ ಹಾಕಿ ಅಸಾಂಜ್ ಬಂಧನವನ್ನು ಕೋರಿತ್ತು. ನಂತರ ಅಮೆರಿಕಾ ದೇಶ ಅವರ ಬಂಧನಕ್ಕೆ ಆಜ್ಞೆ ಮಾಡಿತ್ತು. ಮೊದಲು ಜಾಮೀನು ಪಡೆದು, ಜಾಮೀನನ್ನು ಉಲ್ಲಂಘಿಸಿ ಬಂಧನವನ್ನು ತಪ್ಪಿಸಿಕೊಳ್ಳಲು ವಿಮಾನನಿಲ್ದಾಣಗಳಲ್ಲಿ ವಾಸಿಸಿದ್ದ ಅಸಾಂಜ್ ತನ್ನ ನಡೆಗಳಿಂದ ಅನೇಕರ ಗಮನ ಸೆಳೆದಿದ್ದರು. ಆ ಒಂದು ದೇಶದ ಸಹಾಯಹಸ್ತ, ಈ ಇನ್ನೊಂದು ದೇಶದ ಅರೆಬರೆ ಗಮನ, ಅನುಕಂಪ, ಸಾವಿರಾರು ಜನರ ಬೆಂಬಲ ಎಂದೆಲ್ಲಾ ವಾರಕ್ಕೊಮ್ಮೆ ಹೊಸ ಸುದ್ದಿ ಹುಟ್ಟಿಸುತ್ತಿದ್ದ ಅಸಾಂಜ್ ಕಳೆದ ದಶಕದಲ್ಲಿ ರೋಚಕತೆ ಹುಟ್ಟಿಸುವ ಜನಪ್ರಿಯತೆ ಗಳಿಸಿದ್ದರು. ವಿಮಾನನಿಲ್ದಾಣಗಳಲ್ಲಿ ಜೀವನ ಮಾಡುತ್ತಾ, ಒಂದಷ್ಟು ಸಮಯ ಲಂಡನ್ನಿನ ಸೆರೆಮನೆ ವಾಸಿಯಾಗಿ ದೇಶಗಳ ನಡುವೆ ಸಂಚರಿಸುತ್ತಾ ಒಂಥರದ ‘ನಾರದ ಮುನಿ’ ಯಾಗಿದ್ದ ಅಸಾಂಜ್ ಅದ್ಯಾವ ಮಾಯದಲ್ಲೋ ಮತ್ತೊಂದು ಮದುವೆಯೂ ಆಗಿ ಮಕ್ಕಳು ಹುಟ್ಟಿದ್ದು ಇನ್ನೊಂದಷ್ಟು ಸುದ್ದಿಯಾಗಿತ್ತು.
ಆಸ್ಟ್ರೇಲಿಯಾಕ್ಕೆ ಕಾಲಿಟ್ಟರೆ ಬಂಧಿಸಿ ಅವರನ್ನು ಅಮೆರಿಕಕ್ಕೆ ಒಪ್ಪಿಸುವ ಪರಿಸ್ಥಿತಿ ಇದ್ದದ್ದರಿಂದ ನಿಜವಾಗಿಯೂ ಅವರು ಪರದೇಶಿಯಾಗಿದ್ದರು. ಅವರ ಸ್ವಾತಂತ್ರ್ಯಕ್ಕಾಗಿ, ಕೋರ್ಟ್ ಕೇಸುಗಳಿಗೆ ಬೇಕಾದ ಹಣವನ್ನು ಸಂಗ್ರಹಿಸುವ ಕೆಲಸ ಅನವರತವಾಗಿ ಸಾಗಿತ್ತು.
ಯಾರೇನೇ ಅನ್ನಲಿ, ಕೂಗಾಡಲಿ, ಆಕ್ಷೇಪಿಸಲಿ, ಜೂಲಿಯನ್ ಅಸಾಂಜ್ ಹೆಂಡತಿ, ಮಕ್ಕಳಿಗೆ ಖುಷಿಯಾಗಿದೆ. ತನ್ನ ಗಂಡನ ವನವಾಸ ಮುಗಿದು ಕಡೆಗೂ ಒಬ್ಬ ಸ್ವತಂತ್ರ ವ್ಯಕ್ತಿಯಾಗಿ ಆಸ್ಟ್ರೇಲಿಯಾಕ್ಕೆ ವಾಪಸ್ಸಾಗಿ ಇಲ್ಲಿ ಅವರನ್ನು ಬರಮಾಡಿಕೊಂಡಿರುವುದು ಆಪ್ಯಾಯಮಾನವಾಗಿದೆ ಎಂದು ಹೆಂಡತಿ ಸ್ಟೆಲ್ಲಾ ಮೊನ್ನೆ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು. ಮಾತನಾಡುತ್ತಾ ಒಂದಷ್ಟು ಕಣ್ಣೀರು ಹಾಕಿ ತಮ್ಮೆಲ್ಲರ ಮಾನಸಿಕ ಆರೋಗ್ಯ ಸುಧಾರಿಸಿದೆ ಎಂದರು.
ಆಸ್ಟ್ರೇಲಿಯಾದ ಪ್ರಧಾನಮಂತ್ರಿಗಳು ಅಸಾಂಜ್ ಬಿಡುಗಡೆಗಾಗಿ ಶ್ರಮಿಸಿದ್ದು, ದೇಶದ ರಾಜಧಾನಿ ಕ್ಯಾನ್ಬೆರ್ರಾ ನಗರದಲ್ಲಿ ಅಸಾಂಜ್ ರನ್ನು ಸ್ವಾಗತಿಸಿದ್ದು ವಿರೋಧಪಕ್ಷಗಳ ಹುಬ್ಬೇರಿಸಿದೆ. ಪ್ರಧಾನಮಂತ್ರಿಗಳು ಅಸಾಂಜ್ ಅವರಂತಹ ಒಬ್ಬ ಅಂತಾರಾಷ್ಟ್ರೀಯ ಅಪರಾಧಿಯನ್ನು ಹೀರೋ ಮಾಡಿದ್ದಾರೆ, ಆತನ ಬಿಡುಗಡೆಗಾಗಿ ಅಮೆರಿಕಕ್ಕೆ ಫೋನ್ ಮಾಡುವುದು, ಆಸ್ಟ್ರೇಲಿಯಾ ರಾಯಭಾರಿಗಳು ಅತಿಯಾದ ಉತ್ಸಾಹ ತೋರುವುದು ಅನಗತ್ಯವಾಗಿತ್ತು, ಎಂದು ಟೀಕಿಸಿದ್ದಾರೆ. ಅಸಾಂಜ್ ಅವರ ಅಭಿಮಾನಿಗಳು ಈ ಬಿಡುಗಡೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಸಿಕ್ಕ ಗೌರವ ಎಂದಿದ್ದಾರೆ.
ಅತ್ತ ಕೆಲವರಿಗೆ ‘ಆಸ್ಟ್ರೇಲಿಯನ್ ಮಣ್ಣಿನ ಮಗ’ ಜೂಲಿಯನ್ ಅಸಾಂಜ್ ಎಂಬ ಹೆಸರಿನಲ್ಲಿ ಕೆಚ್ಚು ಕಂಡರೆ ಇತ್ತ ನಿಜವಾಗಿಯೂ ‘Keep the fire burning! Blak, Loud and Proud’ ಅನ್ನುವ NAIDOC Week ಸಂದೇಶ ಮೊಳಗಿದೆ. ಆಸ್ಟ್ರೇಲಿಯಾದ ಮೂಲನಿವಾಸಿಗಳಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿಗಳ ಬಹು ಸಂಸ್ಕೃತಿಗಳನ್ನು ಆಚರಿಸುವ NAIDOC Week ಪ್ರತಿವರ್ಷವೂ ಜುಲೈ ತಿಂಗಳ ಮೊದಲ ಭಾನುವಾರದಿಂದ ಎರಡನೇ ಭಾನುವಾರದ ತನಕ ನಡೆಯುತ್ತದೆ. ಪ್ರತಿಬಾರಿಯೂ ಒಂದು ವಿಶೇಷ ಸಂದೇಶವಿರುತ್ತದೆ. ಈ ವರ್ಷದ ಸಂದೇಶ ನಮ್ಮೆಲ್ಲರ ಅಂತಃಸತ್ವದಲ್ಲಿರುವ ಅಗ್ನಿಯನ್ನು ಕಾಪಿಡುವುದು. ಅದು ಅಂತಃಚೇತನವೂ, ಆಂತರಿಕ ಶಕ್ತಿಯೂ, ಮನೋಸ್ಥೈರ್ಯವೂ ಆಗಿದೆ. ಈ ನೆಲದ, ಕೆಂಪು ಮಣ್ಣಿನ ಮಕ್ಕಳಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿಗಳ Blak ಕಪ್ಪು ಚೇತನವನ್ನು ಬೆಚ್ಚಗಿಡುವ ಸಂದೇಶವು ಸೊಗಸಾಗಿದೆ.
ಅಂದ ಹಾಗೆ ಈ ದೇಶದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನರು Blak ಅನ್ನುವ ಶಬ್ದಾರ್ಥದ ಪ್ರಯೋಗವನ್ನು ಬಳಸುವುದು ಬರೀ ಕಪ್ಪು ಬಣ್ಣ ಅಥವಾ ಕಪ್ಪುಜನರು ಎಂಬ ಭೇದಭಾವದ ಹಿನ್ನೆಲೆಯಲ್ಲಿ ಅಲ್ಲ ಎನ್ನುವುದನ್ನು ಅವರು ಒತ್ತಿ ಹೇಳುತ್ತಾರೆ. Blak ಪದವು black ಪದದ ಸಮಾನಾಂತರವಲ್ಲ ಎನ್ನುವುದು ಇಲ್ಲಿ ಮುಖ್ಯ. Blak ಎನ್ನುವುದು ಅವರ ಅಸ್ಮಿತೆ. ಬ್ರಿಟಿಷ್ ವಸಾಹತುಶಾಹಿತನವು ಅವರ ಆಂಗ್ಲೋ-ಯುರೋಪಿಯನ್ ‘ಬಿಳಿ’ ಅಥವಾ whiteness ಶ್ರೇಷ್ಠತೆಯ ಹಿನ್ನೆಲೆಯಲ್ಲಿ ತಮ್ಮನ್ನು ಬ್ಲಾಕ್ – ಕಪ್ಪು ಜನರು, ಇವರು ಮನುಷ್ಯರೇ ಅಲ್ಲ ಎಂದು ಹಣೆಪಟ್ಟಿ ಹಚ್ಚಿ ಗುಲಾಮರನ್ನಾಗಿಸಿದ್ದನ್ನು ಪ್ರತಿಭಟಿಸಿ ತಾವು blak ಅಸ್ಮಿತೆಯನ್ನು ಅಪ್ಪಿಕೊಂಡಿದ್ದೀವಿ ಎನ್ನುತ್ತಾರೆ. ಈ Blak ತನದಲ್ಲಿ ಅವರ ಪ್ರತಿಭಟನೆ, ಆಕ್ರೋಶ, ಪ್ರತಿರೋಧ, ಆತ್ಮವಿಶ್ವಾಸ, ಸಹನೆ ಎಲ್ಲವೂ ಇದೆ.
ಈ ೨೧ ನೇ ಶತಮಾನದಲ್ಲಿ ಕೂಡ ಆಸ್ಟ್ರೇಲಿಯನ್ ಸಮಾಜದಲ್ಲಿ ತಮ್ಮ ಜನರನ್ನು ಕಪ್ಪು ಜನರು ಎಂದು ಕೀಳಾಗಿ ನೋಡುವುದನ್ನು ಪ್ರಶ್ನಿಸುವುದು, ‘ನಿಮ್ಮ ಬ್ಲಾಕ್ ಬಣ್ಣ, ಬ್ಲಾಕ್ ರೇಸಿಸಮ್’ ನಮ್ಮ Blak ಅಸ್ಮಿತೆಗೆ ಭಂಗ ತರುವುದಿಲ್ಲ, ನಮ್ಮ ಕೆಂಪು ಮಣ್ಣು, ಉರಿಯುವ ಸೂರ್ಯ ಇರುವ ತನಕವೂ ನಾವು ಈ ನೆಲದ ಮಕ್ಕಳು ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.
ಈ Blak ಪದವನ್ನು ಹೆಸರಾಂತ ಕಲಾವಿದೆ ಡೆಸ್ಟಿನಿ ಡೀಕನ್ ಹುಟ್ಟುಹಾಕಿದ್ದು ಎಂದು ಕೆಲ ಮೂಲಗಳು ಹೇಳುತ್ತವೆ. ತನ್ನ ಬಾಲ್ಯದಲ್ಲಿ ಪದೇಪದೇ ‘ನೀವು ಕಪ್ಪುಜನರು, ಅಯೋಗ್ಯರು’ ಎನ್ನುವುದನ್ನು ಕೇಳಿ ಕೇಳಿ ಸಾಕಾಗಿ ತನ್ನ ಒಂದು ಚಿತ್ರ ಪ್ರದರ್ಶನದ ಹೆಸರಿನಲ್ಲಿ black ಪದದ ಬದಲು blak ಉಪಯೋಗಿಸಿದ್ದು, ನಂತರ ಆ ಪದವನ್ನು ಎಲ್ಲರೂ ಎಲ್ಲೆಡೆ ಬಳಸಿದ್ದನ್ನು, ಅದು ತಮ್ಮ ಜನರಲ್ಲಿ ಇರುವ ಅನೇಕ ಬಹು ಸಂಸ್ಕೃತಿಗಳ ಚಿಹ್ನೆಯೂ ಆಗಿರುವ ಕುರಿತು ಅವರು ಹೇಳಿದ್ದಾರೆ.
ಬಿಳಿ ಬಣ್ಣದ ಚರ್ಮವಿಲ್ಲದವರು ಎಲ್ಲರೂ Blak ಪದವನ್ನು ತಮ್ಮ ಅಸ್ಮಿತೆಯ ಗುರುತಾಗಿ ಬಳಸಲಾಗುವುದಿಲ್ಲ. ಕಪ್ಪುತನವನ್ನು ಬಳಸಿ ತಮ್ಮನ್ನು ತುಳಿದು ಶೋಷಣೆಗೆ ಒಳಪಡಿಸಿ ನಮ್ಮನ್ನು ಗುರುತಿಸಲು ಅದನ್ನೇ ಬಳಸುವುದನ್ನು ಪ್ರತಿರೋಧಿಸುವುದು ನಮ್ಮ ಬ್ಲಾಕ್-ತನ ಎಂದು ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನರು ಹೇಳುತ್ತಾರೆ. ಆಸ್ಟ್ರೇಲಿಯಾದಲ್ಲಿ ಇದೇ ರೀತಿಯ ಶೋಷಣೆಗೆ ಇತರರು ಒಳಗಾಗಿಲ್ಲ, ಅಥವಾ ದಬ್ಬಾಳಿಕೆಯಿಂದ ನಷ್ಟ ಅನುಭವಿಸಿಲ್ಲ ಎನ್ನುವುದನ್ನು ಹೇಳುತ್ತಾ ಮೂಲನಿವಾಸಿಗಳಲ್ಲದೇ ಬೇರೆಯವರು ಸರ್ವೇಸಾಧಾರಣವಾಗಿ ಅಥವಾ ಸಲೀಸಾಗಿ blak ಪದಪ್ರಯೋಗವನ್ನು ಮಾಡಬಾರದು ಎನ್ನುತ್ತಾರೆ.
ಈ ವರ್ಷದ NAIDOC Week ಸಂದೇಶ ‘Keep the fire burning! Blak, Loud and Proud’ ಎನ್ನುವುದು ತುಳಿತಕ್ಕೆ ಒಳಗಾಗುವ ಶೋಷಿತರೆಲ್ಲರ ದನಿಯು ಮತ್ತಷ್ಟು ಗಟ್ಟಿಯಾಗಿಸಿ ಅದು ಜ್ವಲಿಸುವಂತೆ ಹುರಿದುಂಬಿಸಲಿ. ಅಸಮಾನತೆ, ಅಸಹನೆ, ಗೋಡೆಕಂದರಗಳು, ಭೇದಭಾವಗಳೇ ತುಂಬಿತುಳುಕುತ್ತಿರುವ ಈ ಪ್ರಪಂಚದಲ್ಲಿ ಇಂತಹ ಬೆಂಕಿಕಿಡಿ ಸಂದೇಶಗಳು ಇನ್ನಷ್ಟು ಬರಲಿ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.