“ನಗರಗಳ ಅನೂಹ್ಯತೆ, ಅವು ಸೃಷ್ಟಿಸುವ ತಲ್ಲಣ ಮತ್ತು ಉಂಟುಮಾಡುವ ಪಲ್ಲಟ, ಅದರೊಳಗೆ ಹೂತಿರುವ ಆದರೆ ಚದುರಿ ಚೆಲ್ಲಾಪಿಲ್ಲಿಯಾಗಿರುವ ಲೋಕ, ನಗರದ ಅಸ್ತವ್ಯಸ್ತತೆಗಳು, ಇವುಗಳ ನಡುವೆಯೇ ಇರಬಹುದಾದ ಅರ್ಥವನ್ನು ಹೊರ ತೆಗೆಯುವ ಸೃಜನಶೀಲ ಹುಡುಕಾಟ ಈ ಕವಿತೆಗಳ ಮೂಲದ್ರವ್ಯವಾಗಿದೆ. ಆ ನಿಟ್ಟಿನಲ್ಲಿ ಆಕರ್ಷ ತನ್ನ ಅವಕಾಶ, ವ್ಯಾಪ್ತಿ ಮತ್ತು ಇಳಿದಾಣಗಳನ್ನು ಈಗಾಗಲೇ ಗುರುತಿಸಿಕೊಂಡಂತೆ ಕಾಣುತ್ತಿದ್ದಾನೆ. ತನ್ನ ಅಭಿವ್ಯಕ್ತಿಗೆ ಬೇಕಾದ ನುಡಿಗಟ್ಟು, ರೂಪಕ, ಪ್ರತಿಮಾಲೋಕಗಳನ್ನು ಅನುಭವ ಮತ್ತು ಭಾಷೆಗಳ ಟಂಕಸಾಲೆಯಲ್ಲಿ ನಿರ್ಮಿಸಿಕೊಳ್ಳುತ್ತಿದ್ದಾನೆ.”
ಆಕರ್ಷ ರಮೇಶ್ ಕಮಲ ಅವರ ಚೊಚ್ಚಲ ಕವನ ಸಂಕಲನ “ಗ್ರಾಫಿಟಿಯ ಹೂವು” ಪುಸ್ತಕಕ್ಕೆ ಕೇಶವ ಮಳಗಿ ಅವರ ಮುನ್ನುಡಿ
ನಿಜ ಜೀವನದ ಕೊನೆಮೊದಲಿಲ್ಲದ ಜಂಜಾಟಗಳ ಗೋಜಲಿನಲ್ಲಿ ಸಿಲುಕಿದ ತೀರ ಸಾಮಾನ್ಯ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ತನಗಷ್ಟೇ ಪ್ರಾಪ್ತವಾಗುವ ದತ್ತ ಸಂವೇದನೆಗೆ, ಪರವಶತೆಗೆ ಹೇಗೆ ಒಳಗಾಗುತ್ತಾನೆ? ಆ ಭಾವೋನ್ಮಾದದ ಸಾರವನ್ನು ಬೇರೊಬ್ಬರಿಗೆ ಅರ್ಥವಾಗುವ ಮಾಧ್ಯಮದಲ್ಲಿ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳಿಗೆ ಗೋಚರಿಸುವಂತೆ ತೆರೆದಿಡುವ ಸಾಮರ್ಥ್ಯವನ್ನು ಪಡೆಯುವ ಬಗೆಯಾದರೂ ಯಾವುದು ಎಂಬ ಪ್ರಶ್ನೆಗಳು ಪುರಾತನವಾದುವು.
ಅತಿ ಸಾಮಾನ್ಯನೊಬ್ಬ ಅಸಾಮಾನ್ಯನಾಗಿ ರೂಪಾಂತರಗೊಳ್ಳುವ ಈ ಸೃಷ್ಟಿಕ್ರಿಯೆಯ ವಿಸ್ಮಯವು ನೂರಾರು ವರ್ಷಗಳಿಂದ ಕಾಡುತ್ತಲೇ ಬಂದಿದೆ. ಈ ಪ್ರತಿಭಾ ವಿಲಾಸವನ್ನು ‘ಭೃಂಗದ ಬೆನ್ನೇರಿ’ ಬಂದ ಕಲ್ಪನೆಗೆ ಕವಿಯೊಬ್ಬ ಹೋಲಿಸಿದರೆ, ಇನ್ನೊಬ್ಬ ಕವಿ ‘ಸುಮಕೆ ಸೌರಭ ಬಂದ ಘಳಿಗೆ ಯಾವುದು ಹೇಳು?’ ಎಂದು ಚಕಿತನಾಗಿ ಕೇಳುತ್ತಾನೆ. ಮೊದಲ ಕವಿಗೆ ಈ ವಿಸ್ಮಯ ಗಳಿಗೆ ಯಾವ ರೂಪ, ಶಬ್ದ, ಗಂಧ, ರಸಗಳಲ್ಲಿ ಬರುತ್ತದೆಂದು ಮಾಗಿದ ಅನುಭವ ಕಲಿಸಿದ್ದರಿಂದಲೇ ಆತ ವರಕವಿಯಾಗಿದ್ದಾನೆ. ಎರಡನೆಯ ಕವಿಗೆ ಆ ಕುರಿತು ಕೊಂಚ ತುಂಟತನದ ಅನುಮಾನ ಕಾಡುತ್ತಿದೆ. ಇದ್ದರೂ, ಅದು ಬರುತ್ತಿರುವುದು ಅನುಭವ ಸಾಂದ್ರವಾಗಿ ‘ನೆಲದ ಮರೆಯ ನಿಧಾನ’ದಂತೆ ಕುಳಿತಿದೆ ಎಂದು ಗೊತ್ತು. ಆತನದು ಬಗೆದು ನೋಡುವ, ಸಂದೇಹದ ನವ್ಯ ವಿಧಾನವಷ್ಟೇ. ಮೇಲಿನಿಬ್ಬರು ಕವಿಗಳಿಗಿಂತ ಭಿನ್ನವಾಗಿ, ಆದರೆ ಅವರು ಹೇಳಿರುವುದನ್ನೆಲ್ಲ ಸಾಂದ್ರವಾಗಿ ಬೇರೊಂದು ರೀತಿಯಲ್ಲಿ ಅರುಹಿದ ಕವಿಯೂ ಇದ್ದಾರೆ. ಸಂವೇದನೆಯ ಗಳಿಗೆ ಮತ್ತು ಪರಿಣಾಮವನ್ನು ಅವರು ಹೇಳುವುದು ಹೀಗೆ:
ಬಂತು ಬಂತೆಲೆ ಬಂತು ಬಂತು ಘನಸಿರಿ ಬಂತು
ಬಂತೆಂದರೂ ಇದ್ದುದಿದ್ದೇ ಇತ್ತು
ಬಂತು ಬೆಳಗೆಂಬಂತೆ ಬಂತು ಹೊಳೆ ಬಂದಂತೆ
ಇದ್ದದ್ದೆ ತುಂಬಿ ತುಳುತುಳುಕುತ್ತಿತ್ತು
ಬೇಂದ್ರೆ, ರಾಮಚಂದ್ರ ಶರ್ಮ ಮತ್ತು ಮಧುರ ಚೆನ್ನ ಹಲಸಂಗಿಯವರನ್ನು ಸ್ವಲ್ಪ ಪಕ್ಕಕ್ಕಿಟ್ಟು ನಾನು ಅಪಾರವಾಗಿ ಮೆಚ್ಚುವ ಫ್ರೆಂಚ್ ಕವಿ, ತತ್ವಜ್ಞಾನಿ ಮತ್ತು ಸಾಹಿತ್ಯ ಮೀಮಾಂಸಕ ಪಾಲ್ ವಲೇರಿ ಈ ಪ್ರಕ್ರಿಯೆಯ ಕುರಿತು ಹೇಳಿರುವ ಮಾತುಗಳ ಕಡೆಗೆ ಹೊರಳುತ್ತೇನೆ. ನಮ್ಮೊಳಗೆ ಕಾವ್ಯ ರಚನೆಯನ್ನು ಸಾಧ್ಯವಾಗಿಸುವ, ಆಕಸ್ಮಿಕ ಆಘಾತವನ್ನುಂಟುಮಾಡುವ ಅನನ್ಯ ವಸ್ತು ಯಾವುದು ಎಂದು ಕೇಳಿಕೊಳ್ಳುವ ವಲೇರಿ, ಕಾವ್ಯವು ಭಾಷೆಯಲ್ಲಿ ರೂಪುಗೊಳ್ಳುವ ಕಲಾಕೃತಿಯಾಗಿದೆ ಎನ್ನುತ್ತಾನೆ. ಒಬ್ಬ ನಿರ್ದಿಷ್ಟ ಸಂವೇದನಾಶೀಲ ವ್ಯಕ್ತಿ ಉಂಟುಮಾಡುವ ಶಬ್ದಗಳ ಸಂಯೋಜನೆಯು, ಉಳಿದವರು ಸೃಷ್ಟಿಸಲಾರದ ಭಾವನೆಗಳನ್ನು ಹುಟ್ಟು ಹಾಕುತ್ತದೆ. ಅದೇ ‘ಕಾವ್ಯಾತ್ಮಕತೆ’ ಎನ್ನುತ್ತಾನೆ.
ಸಾಮಾನ್ಯ ಜಗತ್ತಿನ ವಸ್ತು, ಅಂತರಂಗ-ಬಹಿರಂಗದ ಸಂಗತಿ, ಜೀವಿಗಳು, ಭಾವನೆ, ಕ್ರಿಯೆಗಳು, ತಮ್ಮ ನಿಜಸ್ಥಿತಿಯನ್ನು ಉಳಿಸಿಕೊಂಡೇ, ನಮ್ಮ ಸಾಮಾನ್ಯ ಭಾವನೆಯೊಂದಿಗೆ ಅದ್ಭುತವಾದ ಸಂಬಂಧವೊಂದನ್ನು ವಿವರಿಸಲಾಗದಷ್ಟು ಕ್ಷಿಪ್ರವಾಗಿ ಬೆಸೆದುಬಿಡುತ್ತವೆ. ಅಂದರೆ, ಈ ಚಿರಪರಿಚಿತ ವಸ್ತು, ಜೀವಿಗಳು ಅದೆಂತೋ, ಅವುಗಳ ಮೌಲ್ಯವನ್ನು ಬದಲಿಸಿಬಿಡುತ್ತವೆ. ಒಂದನ್ನೊಂದು ಆಕರ್ಷಿಸುತ್ತ ಸಾಮಾನ್ಯ ಸ್ಥಿತಿಗಿಂತ ಭಿನ್ನವಾಗಿರುವ ಇವು ನಾದ ತುಂಬಿ, ಭಾವ ತುಂಬಿ ಸಾವಯವ ಬೆಸುಗೆ ಸಾಧಿಸುತ್ತವೆ. ಇಂತಹ ಕಾವ್ಯಜಗತ್ತು ವಿಸ್ತೃತ ಕನಸಿನಲೋಕವೊಂದನ್ನು ಸಾದೃಶ್ಯಗೊಳಿಸುತ್ತದೆ.
ಆದರೆ ಇದೊಂದು ಸಾತತ್ಯವಿಲ್ಲದ, ಕ್ಷಣಭಂಗುರ ಸ್ಥಿತಿ. ನಾವದನ್ನು ಇದ್ದಕ್ಕಿದ್ದಂತೆ ಪಡೆದುಕೊಂಡಂತೆಯೇ ಕಳೆದುಕೊಂಡು ಸಾಮಾನ್ಯ ಮನುಷ್ಯರಾಗಿಬಿಡುತ್ತೇವೆ. ಸಂವೇದನಾಶೀಲನೊಬ್ಬ ಮತ್ತೆಮತ್ತೆ ಇಂಥ ಸ್ಥಿತಿಯನ್ನು ಸಾಧಿಸಲು; ನೆಲದ ಮರೆಯ ನಿಧಾನದಂತಿರುವ ಆ ನಿಧಿಯನ್ನು ಹುಡುಕಲು ಹೊಲದಲ್ಲಿ ಹೊಳೆವ ತೆನೆಗಳು, ಮಳೆಯಿಲ್ಲದೆ ಬಿರುಕು ಬಿಟ್ಟು ನಿಂತ ನೆಲ, ಮೃಷ್ಟಾನ್ನದ ರುಚಿ ಮತ್ತು ಹಸಿವಿನ ಚುರುಕು, ನೀರಿನ ದಾಹ, ನರಕದ ಕೂಪಗಳಂತಿರುವ ಕೊಳಗೇರಿಗಳು, ಪ್ರಖರವಾಗಿ ಸುಡುವ ಸೂರ್ಯನ ಬಿಸಿಲು ಸೃಷ್ಟಿಸುವ ಮರೀಚಿಕೆ ಮತ್ತು ಕಾಮನಬಿಲ್ಲುಗಳನ್ನು ಕಾಣುವ ಮನಸ್ಥಿತಿಯನ್ನು ಪಡೆದವನಾಗಿರಬೇಕಾಗಿರುತ್ತದೆ. ಪರವಶನಾಗಿ ಕನಸಿನ ಬೆನ್ನು ಹತ್ತಲು ಸಿದ್ಧನಾಗಿರಬೇಕಾಗುತ್ತದೆ. ಕವಿಯ ಕೆಲಸ ಕಾವ್ಯಾತ್ಮಕ ಸ್ಥಿತಿಯ ಅನುಭವ ಪಡೆಯುವುದಲ್ಲ. ಅದು ಆತನ ಖಾಸಗಿ ಸಂಗತಿ. ತಾನುಂಡ ಅನುಭವವನ್ನು ಭಾಷೆಯ ಮೂಲಕ ಇನ್ನೊಬ್ಬರಲ್ಲಿ ಸೃಷ್ಟಿಸಲು ಯಶಸ್ವಿಯಾದಾಗಲೇ ಆತ ನಿಜವಾದ ಅರ್ಥದಲ್ಲಿ ಕವಿಯಾಗುವುದು. ಕವಿ ಈ ಶಬ್ದಲೋಕದಲ್ಲಿ ಬಂದಿಯಾಗಿದ್ದಾನೆ. ಆತ ಶಬ್ದ ಮತ್ತು ಗ್ರಹಿಕೆಗಳನ್ನು ಒಟ್ಟಿಗೆ ಹಿಡಿದಿಡಬೇಕು. ಸಮರಸ ಸಾಧಿಸಿದಾಗಲೇ ಅರ್ಥಸಾರ್ಥಕತೆ. ಕವಿಯ ಈ ಸಂಕಷ್ಟವನ್ನು ವಲೇರಿ ‘ನಡಿಗೆ ಮತ್ತು ನಾಟ್ಯ’ಕ್ಕೆ ಹೋಲಿಸುತ್ತಾನೆ. ನಡಿಗೆ ಗದ್ಯದಂತಿದ್ದು, ನಿಶ್ಚಿತ ಗುರಿಯನ್ನು ಹೊಂದಿದೆ.
ನಾಟ್ಯದ ಮಾತೇ ಬೇರೆ. ನಾಟ್ಯದ ಪ್ರತಿಯೊಂದು ಕ್ರಿಯೆಗಳಿಗೆ ನಿಯಮವಿದೆ. ವಸ್ತುವನ್ನು ಶೂನ್ಯದಿಂದ ಗ್ರಹಿಸುವ ಕಲಾವಿದ ಅದರೆಲ್ಲ ಸೊಬಗಿನೊಂದಿಗೆ ಅದನ್ನು ಅಲ್ಲಿಯೇ ಪ್ರಸ್ತುತಪಡಿಸುತ್ತಾನೆ. ಒಂದು ನಿಯಮಿತ ಚಲನೆ, ನಿಯಂತ್ರಿತ ನಾದಗಳ ಮೂಲಕ ಒಂದು ನಿಶ್ಚಿತ ಸ್ಥಿತಿಯನ್ನು ಸೃಷ್ಟಿಸಿ, ನಿರ್ವಹಿಸುತ್ತ ಅಲ್ಲಿಯೇ ಎಲ್ಲವನ್ನೂ ಪ್ರದರ್ಶಿಸುತ್ತಾನೆ. ನಡಿಗೆಯಿಂದ ನಾಟ್ಯವು ಎಷ್ಟೇ ಭಿನ್ನವಾಗಿದ್ದರೂ ಅದೇ ಅಂಗ, ಅದೇ ರಚನೆಗಳನ್ನು ಬಳಸುತ್ತಿದೆ. ಆದರೆ, ವಿಭಿನ್ನ ರೀತಿಯಲ್ಲಿ ಸಂಯೋಜಿಸುವ ಮೂಲಕ ವಿಶಿಷ್ಟ ಅನುಭವವನ್ನು ಸೃಷ್ಟಿಸುತ್ತದೆ.
ಕವಿ ಮತ್ತೆ ಮತ್ತೆ ಇಂಥ ಅನುಭವಗಳನ್ನು ಭಾಷೆಯ ಕಲಾಕೃತಿಯಲ್ಲಿ ಸೃಷ್ಟಿಸಲು ತ್ರಿಕಾಲಗಳಲ್ಲಿ ಸಂಚಾರಿಯಾಗಿರಬೇಕಿದೆ. ಹಳೆಯ ರೂಪಕಗಳನ್ನು ಹೆಕ್ಕಿ ತೆಗೆಯುವ, ಕಣ್ಣೆದುರು ಕಾಣುತ್ತಿರುವ ಪ್ರತಿಮೆಗಳನ್ನು ಸೋಸಿ ಶುದ್ಧಗೊಳಿಸುವ, ಮುಂದಿನದನ್ನು ಈಗಲೇ ಕಾಣುವ ಒಳಗಣ್ಣನ್ನು ಜತನದಿಂದ ಕಾಪಿಡಬೇಕಿದೆ. ಆತ ನೀರಿನಂತೆ ಆದ್ರವಾಗಿದ್ದರೆ, ಉಪ್ಪು, ಜೇನು, ಬೇವಿನ ರಸಗಳೆಲ್ಲವೂ ಕರಗಿ ನೀರಿಗೆ ಹೊಸರುಚಿ ಬರುವಂತೆ ಮಾಡಬಲ್ಲ.
ಕವಿ ಭೌತಿಕ ಅನುಭವಗಳನ್ನೇನೋ ನೇರವಾಗಿ ಪಡೆಯಬಲ್ಲ. ಅದಷ್ಟೇ ಸಾಕಾಗದು. ಬೌದ್ಧಿಕ ಅನುಭವ ಅಗತ್ಯ ಮತ್ತು ಅನಿವಾರ್ಯ. ಇಂಥ ಅನುಭವಗಳನ್ನು ವಿವಿಧ ಭಾಷೆಗಳು ಹಿಡಿದಿಡುತ್ತ ಬಂದು ಅದೆಷ್ಟು ಯುಗಗಳಾಗಿವೆಯೋ! ಕವಿ ಮಾಡಬೇಕಿರುವುದೆಂದರೆ, ಬೌದ್ಧಿಕ ಅನುಭವವನ್ನು ಸಾಕಾರಗೊಳಿಸಿಕೊಳ್ಳಲು ಅದರತ್ತ ನಡಿಗೆ ಬೆಳೆಸಬೇಕಿರುವುದು. ಸರಳವಾಗಿ ಹೇಳುವುದಾದರೆ, ಕವಿ ದತ್ತವಾಗಿ ಪಡೆದ ಭಾಷೆಯ ಪರಂಪರೆಯನ್ನು ಒಲಿಸಿಕೊಳ್ಳಬೇಕು, ಅರಿತುಕೊಳ್ಳಬೇಕು. ಅಲ್ಲಿ ಅಡಗಿರುವ ಲಯ, ನಾದ, ಯುಗಧರ್ಮ ಮತ್ತು ಶಬ್ದ ಸೃಷ್ಟಿಸುತ್ತಿರುವ ಅರ್ಥಗಳನ್ನು ತನ್ನ ಕಾಲಮಾನದ ನಿಕಷಕ್ಕೊಡ್ಡಿ ತಿಳಿಯಲು ಯತ್ನಿಸಬೇಕು.
ಸಾಮಾನ್ಯ ಜಗತ್ತಿನ ವಸ್ತು, ಅಂತರಂಗ-ಬಹಿರಂಗದ ಸಂಗತಿ, ಜೀವಿಗಳು, ಭಾವನೆ, ಕ್ರಿಯೆಗಳು, ತಮ್ಮ ನಿಜಸ್ಥಿತಿಯನ್ನು ಉಳಿಸಿಕೊಂಡೇ, ನಮ್ಮ ಸಾಮಾನ್ಯ ಭಾವನೆಯೊಂದಿಗೆ ಅದ್ಭುತವಾದ ಸಂಬಂಧವೊಂದನ್ನು ವಿವರಿಸಲಾಗದಷ್ಟು ಕ್ಷಿಪ್ರವಾಗಿ ಬೆಸೆದುಬಿಡುತ್ತವೆ. ಅಂದರೆ, ಈ ಚಿರಪರಿಚಿತ ವಸ್ತು, ಜೀವಿಗಳು ಅದೆಂತೋ, ಅವುಗಳ ಮೌಲ್ಯವನ್ನು ಬದಲಿಸಿಬಿಡುತ್ತವೆ.
ಇನ್ನೂ ಸರಳವಾಗಿ, ಆಧುನಿಕ ಕನ್ನಡ ಭಾಷೆಗೆ ಸೀಮಿತಗೊಳಿಸಿ ಹೇಳುವುದಾದರೆ, ವಚನಗಳು, ಬೇಂದ್ರೆ, ಕುವೆಂಪು, ಎಕ್ಕುಂಡಿ, ಕೆ ಎಸ್ ನ, ಪುತಿನ, ಗಂಗಾಧರ ಚಿತ್ತಾಲ, ಅಡಿಗ, ಶಿವಪ್ರಕಾಶ, ತಿರುಮಲೇಶ, ಇಲ್ಲಿ ಹೆಸರಿಸದ ಇಂಥ ಅನೇಕ ಕವಿಗಳು ಸವೆಸಿದ ಜಾಡನ್ನು ಅಭ್ಯಸಿಸಬೇಕು. ಒತ್ತು ಕೊಟ್ಟು ಹೇಳುವುದಾದರೆ, ತಮ್ಮ ಆಳವಿಸ್ತಾರಗಳ ಅಧ್ಯಯನ ಮತ್ತು ಸತತ ಪರಿಶ್ರಮದಿಂದ ಕೆ.ವಿ. ತಿರುಮಲೇಶ ಮತ್ತು ಎಚ್.ಎಸ್. ಶಿವಪ್ರಕಾಶರು ರೂಪಿಸಿಕೊಂಡ ಕಾವ್ಯಪ್ರಯೋಗಶೀಲತೆಗಳು ಹೊಸ ತಲೆಮಾರಿನ ಕವಿಗಳಿಗೆ ಉಪಯುಕ್ತ ಪಾಠಗಳನ್ನು ಹೇಳಿಕೊಡಬಲ್ಲವು. ಹೊಸ ಕವಿಯೊಬ್ಬ ಕೈಗೊಳ್ಳಬಹುದಾದ ಪಯಣದ ಹಾದಿಗೆ ದಿಕ್ಕನ್ನು ಸೂಚಿಸಬಲ್ಲವು.
*
ಮಗುವಾಗಿದ್ದಾಗಿನಿಂದ ನಾನು ಬಲ್ಲ ಆಕರ್ಷ ಇದೀಗ ಅಂಥ ಹೊಸ ಹಾದಿಯ ಪಯಣದ ಮೊದಲ ಹೆಜ್ಜೆಯನ್ನಿಡುತ್ತಿರುವ ಕವಿಯಾಗಿದ್ದಾನೆ. ಆತನ ಅಂಬೆಗಾಲು, ಮೊದಲ ನಡಿಗೆ, ಓಟಗಳನ್ನು; ತೊದಲು ನುಡಿ, ಮೊದಲು ಬಾಯಿಪಾಠ ಮಾಡಿದ ಪದ್ಯ, ಬರೆದ ಮೊದಲ ಕವಿತೆ, ವಾದವಾಗ್ವಾದಗಳನ್ನು ನಾನು ಅಕ್ಷರಶಃ ಬಲ್ಲೆ. ಹೀಗಾಗಿಯೇ, ಆತನನ್ನು ಹೊಸ ಕವಿಯೆಂದು ಮಾತ್ರ ಸ್ವೀಕರಿಸಿ ಮೇಲಿನ ಸುದೀರ್ಘ ಮಾತುಗಳನ್ನು ಬರೆಯಬೇಕಾಯಿತು. ಈ ಮಾತುಗಳು ಇಂದಿನ ತಲೆಮಾರಿನ ಎಲ್ಲ ಕವಿಗಳಿಗೆ.
ಅಪಾರ ಭರವಸೆ ಹುಟ್ಟಿಸುವ ಆತನ ಸಮಕಾಲೀನ ಕೆಲವು ಕವಿಗಳಂತೆ ಆಕರ್ಷನ ಕವಿತೆಗಳು ಕೂಡ ತಾವು ಸೂಸುವ ಭಿನ್ನ ರುಚಿಯಿಂದಾಗಿ ಪ್ರತ್ಯೇಕವಾಗಿ ನಿಲ್ಲುತ್ತವೆ. ಗ್ರಾಮೀಣ ಹಿನ್ನೆಲೆಯುಳ್ಳ ನಗರವಾಸಿ ತಂದೆತಾಯಿಗಳನ್ನು ಪಡೆದ, ನಗರದಲ್ಲಿಯೇ ಹುಟ್ಟಿ, ದೊಡ್ಡವರಾದ ತಲೆಮಾರಿಗೆ ಸೇರಿದ ಈ ಕವಿ ತನ್ನ ಕವಿತೆಗಳಲ್ಲಿ ಅಂಥ ಸಂವೇದನೆಗಳನ್ನೇ ನಿರ್ಮಿಸಲು ಪ್ರಯತ್ನಿಸುತ್ತಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ನಗರ ಸಂವೇದನೆಗಳಿಲ್ಲ ಎಂದು ಅಳ್ಳಕವಾದ, ಅರೆಪಕ್ವ ಮಾತನ್ನು ನಾವು ಆಗೀಗ ಕೇಳುತ್ತಿರುತ್ತೇವೆ. ಅಂಥವರು ಆಕರ್ಷ ಮತ್ತು ಆತನ ಸಮಕಾಲೀನ ಕವಿಗಳು, ಗದ್ಯಲೇಖಕರು ಬರೆದುದನ್ನು ಓದುತ್ತಿಲ್ಲವೆಂಬುದು ಸ್ಪಷ್ಟವಿದೆ.
ಈ ತಲೆಮಾರಿನ ಅನುಭವದ ಇನ್ನೊಂದು ವಿಶಿಷ್ಟ ಅಂಶವೆಂದರೆ, ಇವರೆಲ್ಲ ಶಿಕ್ಷಣದಲ್ಲಿ ಮಾನವಿಕ ವಿಷಯಗಳನ್ನು ಆಯ್ದುಕೊಳ್ಳದೆ ವೃತ್ತಿಪರ ವಿಷಯಗಳಲ್ಲಿ ಪರಿಣಿತರಾಗಿ, ವೃತ್ತಿಯ ನಿಮಿತ್ತ ನಮ್ಮ ಸಮಾಜಕ್ಕೆ ತೀರ ಭಿನ್ನವಾದ ವೃತ್ತಿಪರಿಸರ, ದೇಶವಿದೇಶಗಳಲ್ಲಿ ಉದ್ಯೋಗ ಮಾಡುವ ಅವಕಾಶವನ್ನು ಪಡೆದಿರುವುದು. ಮತ್ತು ಅಂಥ ಸಂವೇದನೆಗಳನ್ನು ಭಾಷೆಯ ಮೂಲಕ ಅಭಿವ್ಯಕ್ತಿಸುತ್ತಿರುವುದು. ಆದಾಗ್ಯೂ, ವಿಶಿಷ್ಟ ಹಿನ್ನೆಲೆಯ ಕಾರಣವಾಗಿಯೇ ಇಂಥವರನ್ನು ಸಾಹಿತ್ಯದಲ್ಲಿ ವಿನಾಕಾರಣ ಮೆರೆಸುತ್ತಿರುವುದನ್ನೂ ನಾವು ಕಾಣುತ್ತಿದ್ದೇವೆ. ಇಲ್ಲಿ ಅಭಿವ್ಯಕ್ತಿಗಿಂತ ಅಬ್ಬರವೇ ಹೆಚ್ಚಾಗಿದೆ ಅನ್ನಿಸುವಂತಿದೆ. ಅದೇನೇ ಇರಲಿ, ಸ್ವಭಾವತಃ ಸಂಕೋಚದವನಾದ ಮತ್ತು ಆದ್ರ ಯುವಕನಾದ ಆಕರ್ಷನ ವಿನಯವಂತಿಕೆಯು ಆತನ ಕವಿತೆಗಳಲ್ಲೂ ಪ್ರತಿಫಲನಗೊಳ್ಳುತ್ತಿದೆ. ಈ ಗುಣವೇ ಆತ ವಿಶಿಷ್ಟ ಹಿನ್ನೆಲೆಯ ವ್ಯಕ್ತಿಯಾಗಿಯೂ ಪ್ರತ್ಯೇಕವಾಗಿ ಕಾಣುವಂತೆ ಮಾಡಿದೆ.
ಆತನ ಬರವಣಿಗೆಯ ಆರಂಭಕಾಲದಿಂದಲೂ ಆಕರ್ಷನ ಬಹುಪಾಲು ಕವಿತೆಗಳನ್ನು ಓದಿರುವ ನಾನು ಆತನಲ್ಲಿ ತಟ್ಟನೆ ಗಮನಿಸಿದ ಅಂಶವೆಂದರೆ, ನಗರಪ್ರಜ್ಞೆಯನ್ನು ವಿಶಿಷ್ಟವಾಗಿ ಕಟ್ಟಿಕೊಡಲು ನಡೆಸಿರುವ ಸೃಜನಶೀಲ ಹುಡುಕಾಟ. ಹಾಗೆ ಮಾಡುವಾಗ ಈಗಾಗಲೇ ಅಭಿವ್ಯಕ್ತಿಗೊಂಡ ರೂಪಕಗಳನ್ನು ಬಿಟ್ಟು ತನ್ನದೇ ಪ್ರತಿಮಾಲೋಕ ಸೃಷ್ಟಿಸಲು ಆತ ಬಳಸುತ್ತಿರುವ ವಿಧಾನಗಳು ಕೂಡ ನನಗೆ ಮೆಚ್ಚುಗೆಯಾಗಿವೆ.
‘ಮರುಭೂಮಿಯಲ್ಲಿ ಕಳೆದು ಹೋಗಿದ್ದ
ನಗರವನ್ನು ಕಂಡುಹಿಡಿದಿದ್ದಾರೆ’
ಸುದ್ದಿಪತ್ರಿಕೆ ನೋಡುತ್ತಿದ್ದ ಅಪ್ಪ ಹೇಳಿದ.
ಆ ಕೊನೆಯ ರಾತ್ರಿ
ನಗರದ ಗೋಡೆಗಳ ಒಳಗೆ
ಒಂಟಿಯಾಗಿ ಅಲೆದು
ಮುಂಜಾವಿನಲ್ಲಿ ನಗರವನ್ನು
ಸಮಾಧಿಯಾಗಿ ಮಾಡಿ ಹೊರನಡೆದ
ಆ ಕೊನೆಯ ಮನುಷ್ಯನನ್ನು ನೆನೆದೆ
ಆದರೆ ನಾನು ಅವನನ್ನೂ ನೆನೆಯಬೇಕಿತ್ತು
ಇಲ್ಲಿ ನೆಲೆಸಿದ ಮೊದಲನೇ ದಿನವೇ
ಮುಂಜಾವಿನಲ್ಲಿ ಮರುಭೂಮಿಯನ್ನು
ನಗರವಾಗಿಸಬೇಕೆಂಬ ಕನಸು
ಹೊತ್ತು ನನಸಾಗಿಸಿದ ಆ ಅವನನ್ನು
ಕೂಡ ನಾನು ನೆನೆಯಬೇಕಿತ್ತು
ಈ ಕವಿತೆಯ ಅಮೂರ್ತತೆ ಮತ್ತು ಅಸಂಗತತೆ ಬೆರಗು ಮೂಡಿಸುವಂತಿದೆ. ಕವಿತೆಯ ಕೊನೆಯ ಸಾಲುಗಳು ಸೃಷ್ಟಿಸುತ್ತಿರುವ ಹೊಸ ಅರ್ಥ, ಅದರೊಂದಿಗೆ ಬೆರೆತ ತೀವ್ರ ವಿಷಾದ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ.
ನನ್ನ ನಿದ್ರೆಯಲ್ಲಿ, ಯಾವುದೋ ನಕ್ಷೆಯಲ್ಲಿ,
ಯಾರಿಗೂ ಗೊತ್ತಿರದ ನಗರಗಳನ್ನು ಹುಡುಕುತ್ತೇನೆ.
ಎನ್ನುವ ಕವಿತೆ ಸೃಷ್ಟಿಸುತ್ತಿರುವ ವಿಸ್ಮಯ, ವಿಸಂಗತತೆಗಳು ಅಪರೂಪದ್ದವು.
ಗಾಜಾಗಿರುವುದು, ಕನ್ನಡಿ, ಕವಿತೆಗಳ ರೂಪಕ, ‘ಅವನನ್ನು ಕಂಡುಕೊಳ್ಳುವ ಸ್ವಾತಂತ್ರ್ಯ’ ಎನ್ನುವ ಗಪದ್ಯದಲ್ಲಿ ಕಿಕ್ಕಿರಿದ ಪ್ರತಿಮೆಗಳು, ಮುದುಕಿಯ ಸಾರ್ಥಕತೆಯನ್ನು ಹುಡುಕುವ ಕವಿತೆಗಳು ಕಟ್ಟಿಕೊಡುವ ಅನುಭವ ಮತ್ತು ಅರ್ಥಲೋಕ ಕನ್ನಡಕ್ಕೆ ಬರುತ್ತಿರುವ ಹೊಸ ಸಂವೇದನೆಗಳು.
ಪ್ರತಿ ಕವಿತೆಯನ್ನೂ ಒಡೆದು ಅವುಗಳ ಅರ್ಥವಂತಿಕೆಯನ್ನು ಓದುಗರಿಗೆ ಹೇಳುವುದು ಇಲ್ಲಿನ ಉದ್ದೇಶವಲ್ಲ. ಅದೇನಿದ್ದರೂ ಪ್ರತಿ ಓದುಗನ ಮನಸ್ಸಿನಲ್ಲಿ ನಡೆಯಬೇಕಿರುವ ಕೆಲಸ. ಹೊಸ ತಲೆಮಾರಿನ, ನಗರವನ್ನೇ ಬದುಕಾಗಿಸಿಕೊಂಡ ಕವಿಯೊಬ್ಬನ ಮೂರ್ತಾಮೂರ್ತ ವಸ್ತುಲೋಕ ಸೃಷ್ಟಿಸುತ್ತಿರುವ ಕವಿತೆಗಳ ಕಡೆಗೆ ಗಮನ ಸೆಳೆಯುವುದಷ್ಟೇ ನನ್ನ ಉದ್ದೇಶ.
ನಗರಗಳ ಅನೂಹ್ಯತೆ, ಅವು ಸೃಷ್ಟಿಸುವ ತಲ್ಲಣ ಮತ್ತು ಉಂಟುಮಾಡುವ ಪಲ್ಲಟ, ಅದರೊಳಗೆ ಹೂತಿರುವ ಆದರೆ ಚದುರಿ ಚೆಲ್ಲಾಪಿಲ್ಲಿಯಾಗಿರುವ ಲೋಕ, ನಗರದ ಅಸ್ತವ್ಯಸ್ತತೆಗಳು, ಇವುಗಳ ನಡುವೆಯೇ ಇರಬಹುದಾದ ಅರ್ಥವನ್ನು ಹೊರ ತೆಗೆಯುವ ಸೃಜನಶೀಲ ಹುಡುಕಾಟ ಈ ಕವಿತೆಗಳ ಮೂಲದ್ರವ್ಯವಾಗಿದೆ. ಆ ನಿಟ್ಟಿನಲ್ಲಿ ಆಕರ್ಷ ತನ್ನ ಅವಕಾಶ, ವ್ಯಾಪ್ತಿ ಮತ್ತು ಇಳಿದಾಣಗಳನ್ನು ಈಗಾಗಲೇ ಗುರುತಿಸಿಕೊಂಡಂತೆ ಕಾಣುತ್ತಿದ್ದಾನೆ. ತನ್ನ ಅಭಿವ್ಯಕ್ತಿಗೆ ಬೇಕಾದ ನುಡಿಗಟ್ಟು, ರೂಪಕ, ಪ್ರತಿಮಾಲೋಕಗಳನ್ನು ಅನುಭವ ಮತ್ತು ಭಾಷೆಗಳ ಟಂಕಸಾಲೆಯಲ್ಲಿ ನಿರ್ಮಿಸಿಕೊಳ್ಳುತ್ತಿದ್ದಾನೆ. ಕವಿಯಾಗಲು ಒಬ್ಬನಿಗೆ ಇದಕ್ಕಿಂತ ಹೆಚ್ಚಿನ ಪರಿಕರಗಳು ಇನ್ನೇನು ಬೇಕು? ಇಂಥದ್ದೇ ಹೊಸ ಲೋಕವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಇತ್ತೀಚೆಗಷ್ಟೇ ತಮ್ಮ ಮೊದಲ ಸಂಕಲನಗಳನ್ನು ಪ್ರಕಟಿಸಿಕೊಂಡ ಭುವನ ಹಿರೇಮಠ ಮತ್ತು ವಿನ್ಸೆಂಟ್ ಕಟೀಲ್ ನೆನಪಾಗುತ್ತಿದ್ದಾರೆ.
ಹೊಸ ಲೇಖಕನೊಬ್ಬನನ್ನು ಸಾಹಿತ್ಯಲೋಕಕ್ಕೆ ಸ್ವಾಗತ ಕೋರುವ ಕೆಲಸಕ್ಕಿಂತ ಹರ್ಷದಾಯಕವಾದ ಕೆಲಸ ಬೇರೊಂದು ಇರಲು ಸಾಧ್ಯವಿಲ್ಲ. ಆಕರ್ಷನೂ ತನ್ನ ಮೊದಲ ಸಂಕಲನ ಪ್ರಕಟಿಸುವ ಮೂಲಕ ಪ್ರವೇಶ ಮಾತ್ರವಿರುವ ಆದರೆ ನಿರ್ಗಮನದ ದಾರಿಗಳಿಲ್ಲದ ಅಂಥ ಅನೂಹ್ಯಲೋಕಕ್ಕೆ ಕಾಲಿಡುತ್ತಿದ್ದಾನೆ. ಆತನಿಗೆ ಸ್ವಾಗತ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ