Advertisement
ಆತಿಥ್ಯದ ಮುಖಗಳು: ಎಸ್. ನಾಗಶ್ರೀ ಅಜಯ್ ಅಂಕಣ

ಆತಿಥ್ಯದ ಮುಖಗಳು: ಎಸ್. ನಾಗಶ್ರೀ ಅಜಯ್ ಅಂಕಣ

ಮಾತಾಡಿದರೂ ಅಂತಸ್ತು ಪ್ರದರ್ಶಿಸುವ, ತಾವೆಷ್ಟು ಅನುಕೂಲಸ್ಥರು, ಬುದ್ಧಿವಂತರು, ಜಗದ ಎಲ್ಲ ಸಮಾಚಾರ ಬಲ್ಲವರು ಎಂಬ ಒಣಪ್ರತಿಷ್ಠೆ ತೋರ್ಪಡಿಸುವ ಪ್ರಚಾರತಂತ್ರದ ಗಿಮಿಕ್ಕು ಮಾತ್ರವೇ. ಗಂಡ-ಹೆಂಡತಿ ಮನೆಯಲ್ಲಿ ಕಾದಾಡುವ ಬದಲು ಅಲ್ಲಿ ಕಣ್ಣಲ್ಲೇ ಗುರಾಯಿಸ್ತಾ, ‘ನಿಂಗಿದು ಬೇಕಿತ್ತಾ ಮಗನೆ?’ ಎಂಬ ಸಂದೇಶ ರವಾನಿಸುತ್ತಾ ಕಾಲ ತಳ್ಳಬೇಕು. ಸದ್ಯ ಗಂಟೆಗೆ ಅರವತ್ತೇ ನಿಮಿಷ ಅನ್ನಿಸುವಾಗಲೇ ತರಬೇತುಗೊಂಡ ನಾಯಿಯಂತೆ ಊಟ, ತಿಂಡಿ, ಕಾಫಿ ವಾಸನೆ ಹಿಡಿದು ಊಟದ ಆಟ ಮುಗಿಸಿ, ತಾಂಬೂಲ ಪಡೆದು ‘ಬರ್ತೀವಿ’ ಎನ್ನಬೇಕು. ‌’ಸಂತೋಷ’ ಎನ್ನುವರು. ಅದು ಬಂದಿದ್ದಕ್ಕೋ ಹೊರಟಿದ್ದಕ್ಕೋ ಯೋಚಿಸದೆ ಮನೆಯ ದಾರಿ ಹಿಡಿಯಬೇಕು.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ ಬರಹ ನಿಮ್ಮ ಓದಿಗೆ

ಇನ್ನೇನು ಬೇಸಿಗೆ ಶುರುವಾಯ್ತು. ಯುಗಾದಿ ಬಂತೆಂದರೆ ವಸಂತಮಾಸ ಬಂದಾಗ ಮದುವೆಯಾಗಲೇಬೇಕು. ಮಂಗಳವಾದ್ಯ ಮೊಳಗಲೇಬೇಕು ಎನ್ನುತ್ತಾ ಸಾಲು ಸಾಲು ಮದುವೆಗಳ ಆಮಂತ್ರಣ ಪತ್ರಿಕೆ ಮನೆ ಸೇರುತ್ತದೆ. ಇನ್ನೇನು ನಮ್ಮ ಬಂಧು-ಬಳಗದಲ್ಲಿ ಸದ್ಯಕ್ಕೆ ಯಾರ ಮದುವೆಯೂ ಇಲ್ಲ. ಐದಾರು ವರ್ಷ ಕಳೆದರೆ ಮುಂದಿನ ಸೀಸನ್ ಶುರು ಎಂದುಕೊಂಡಿರುತ್ತೇವೆ. ನೋಡಿದರೆ ಯಾರದ್ದೋ ಅರವತ್ತು ವರ್ಷದ ಶಾಂತಿ, ಮಗ ಫಾರಿನ್‌ನಿಂದ ಬಂದ ಔತಣಕೂಟ, ಮೊಮ್ಮಗುವಿನ ವರ್ಷದ ಹುಟ್ಟಿದಹಬ್ಬ, ಅಜ್ಜಿ ತಾತನಿಗೆ ಕನಕಾಭಿಷೇಕ ಎನ್ನುತ್ತಾ ಕ್ಯಾಲೆಂಡರ್ ಕಿಕ್ಕಿರಿಯುತ್ತದೆ. ಬೇಸಿಗೆ ಧಗೆಯಲ್ಲಿ ರೇಷ್ಮೆ ಸೀರೆಯುಡುವ, ಬಂಗಾರ ತೊಡುವ, ಹೊಟ್ಟೆತುಂಬ ತಿನ್ನುವ ಖುಷಿ ಯಾರಿಗಿರಲು ಸಾಧ್ಯ? ಹಾಗಂತ ನಮ್ಮವರು ತಮ್ಮವರ ಸಮಾರಂಭಕ್ಕೆ ಹೋಗದಿದ್ದರಾದೀತೆ? ನಾಳೆ ನಮ್ಮನೆಯ ಕಾರ್ಯಕ್ಕೆ ಅವರೂ ಬರಬೇಕಲ್ಲವೆ? ಈ ಬೆಂಗಳೂರು ಟ್ರಾಫಿಕ್ಕಿನ ಕಿರಿಕಿರಿಯಲ್ಲಿ ಯಾರ ಮನೆಗೂ ಹೋಗುವ ಮನಸಾಗುವುದಿಲ್ಲ. ಕಡೇಪಕ್ಷ ಇಂತಹ ಔತಣದಲ್ಲಾದರೂ ಸಿಕ್ಕರೆ ಸಿಕ್ಕಂತೆ. ಅದಕ್ಕಾದರೂ ಹೋಗಬೇಕು ಎನ್ನುವವರೇ ಹೆಚ್ಚು.

ಆದರೆ ಈ ಕಹಾನಿಯಲ್ಲೊಂದು ಸಣ್ಣ ಟ್ವಿಸ್ಟ್ ಇದೆ. ಕರೆಯುವ ಕಡೆಯವರ ಮನಃಸ್ಥಿತಿ ಮತ್ತು ಆತಿಥ್ಯದ ವೈಖರಿ ಹಿತವೆನಿಸಿದರೆ ಹತ್ತಿಸೀರೆಯುಟ್ಟು, ಕೂದಲು ಗಂಟುಕಟ್ಟಿ, ಅರ್ಧ ಮೊಳ ಮಲ್ಲಿಗೆ ಸುತ್ತಿಯಾದರೂ ಹೋಗಿಬರುವ ನಾವು ಕರೆದವರು ಅಹಂಕಾರಿಗಳಾದರೆ ಹೋಗದಿರಲು ನೆಪ ಸಿದ್ಧವಿಟ್ಟಿರುತ್ತೇವೆ. “ಅಯ್ಯೋ ಇನ್ನೇನು ಹೊರಟಿದ್ವಿ ಅಷ್ಟರಲ್ಲಿ ಮನೆಗೆ ನಮ್ ಸೋದರತ್ತೆ ಬಂದುಬಿಟ್ಟರು. ವಯಸ್ಸಾಗಿದೆ ಪಾಪ. ವರ್ಷಕ್ಕೊಮ್ಮೆ ಅವರ ಮಗ ರಾಮೋತ್ಸವ ಮಾಡ್ತಾನೆ ಅಂತ ಊರಿಂದ ಒಬ್ಬರೇ ಬಸ್ಸು ಹತ್ತಿ ಬರ್ತಾರೆ. ಬಂದವರೇ ನಮ್ಮನೆಯಲ್ಲಿ ಎರಡು ದಿನ ಸುಧಾರಿಸ್ಕೊಂಡು ಹೊರಟುಬಿಡ್ತಾರೆ. ಅವರೆಂದರೆ ಚಿಕ್ಕವನಿಗೆ ಪಂಚಪ್ರಾಣ.‌ ತುಂಬ ತಮಾಷೆ ಮಾಡ್ತಾರೆ ಅಂತ ಪಟ್ಟಾಗಿ ಅವರ ಹತ್ತಿರವೇ ಕೂರುತ್ತಾನೆ. ಇನ್ನೊಂದಿನ ನಿಮ್ಮನೆಗೆ ಮಿಸ್ ಮಾಡದೆ ಬರ್ತೀವಿ” ಅಂತ ಸಮಯಕ್ಕೊಂದು ಸುಳ್ಳು ಹೊಂಚಿ ಸತ್ಯದ ತಲೆ ಮೇಲೆ ಹೊಡೆದಂಗೆ ನಿಭಾಯಿಸಿಬಿಡ್ತೀವಿ.‌ “ಹುಷಾರೇ ಇರಲಿಲ್ಲ, ಅಯ್ಯೋ ಅವತ್ತೇ ನಾನು ಹೊರಗಾಗಿದ್ದೆ, ಆಫೀಸಲ್ಲಿ ಕ್ಲೈಂಟ್ ವಿಸಿಟ್ ಇತ್ತು ಬಿಲ್ಕುಲ್ ರಜಾ ಕೇಳಂಗಿಲ್ಲ ಅಂದ್ಬಿಟ್ರು, ನಮ್ ಮನೆಯವರು ಡೇಟ್ ತಪ್ಪುತಪ್ಪು ಹೇಳಿ ದಿಕ್ಕುತಪ್ಸಿದ್ರು, ಅರೆ ಹೌದಲ್ಲ ನೀವು ಕರೆದಿದ್ರಿ ಈ ಆಫೀಸ್ ಗಡಿಬಿಡಿಯಲ್ಲಿ ಮರತೇಹೋಯ್ತು ಕ್ಷಮಿಸಿ, ಇದೊಂದ್ಸಲ ಬರಲಿಲ್ಲ ಅಂದ್ರೇನಾಯ್ತು ನಿಮ್ಮನೆ ನಮಗೇನು ಹೊಸತೆ? ಬರ್ತೀವಿ ಬಿಡಿ..” ಹೀಗೆ ಒಂದು ಸಾಲಿನ ಉತ್ತರಗಳನ್ನು ನಾಲಿಗೆ ಕಚ್ಚದೆ ಪಲುಕಲು ತರಬೇತಿಯಾಗಿರುತ್ತದೆ. ತುಂಬ ಸುಳ್ಳು ಹೇಳ್ತೀವಿ ಅಂತಲ್ಲ. ಪರಿಸ್ಥಿತಿ ಹಾಗಾಡಿಸುತ್ತೆ.

ಕೆಲವೊಂದು ಮನೆಯ ಔತಣಕೂಟಗಳು ಅಕ್ಷರಶಃ ಶೋಕಾಚರಣೆ ಸಭೆಯಂತೆ, ಇನ್ನೊಮ್ಮೆ ಕಾರ್ಪೊರೇಟ್ ಮೀಟಿಂಗ್‌ನಂತೆ ಭಾಸವಾಗುತ್ತವೆ. ಮದುವೆ, ಮುಂಜಿ, ನಾಮಕರಣ, ವಾರ್ಷಿಕೋತ್ಸವ, ಷಷ್ಠಿಪೂರ್ತಿ, ಕಲ್ಯಾಣೋತ್ಸವ… ಹೆಸರು ಬೇರೆ. ಕಳೆ ಒಂದೇ. ವೈಭವೋಪೇತ ಛತ್ರಗಳು, ಝಗಮಗಿಸುವ ಅಲಂಕಾರ, ಶಾಸ್ತ್ರೋಕ್ತ ವಿಧಿವಿಧಾನ, ರುಚಿಕಟ್ಟಾದ ಊಟ, ಸಮಯ ಪರಿಪಾಲನೆ, ಶಿಸ್ತು… ಎಲ್ಲವೂ ಇದೆ. ಆದರೆ ಬಂದವರನ್ನು ಆದರಿಸುವ, ನಗುಮೊಗದಿಂದ ಬರಮಾಡಿಕೊಳ್ಳುವ, ಪ್ರೀತಿಯ ಅಪ್ಪುಗೆ, ಒಂದು ಮೆಚ್ಚುಗೆ, ನೀವು ನಮ್ಮವರೆಂಬ ವಿಶ್ವಾಸ ಭಾವ ಕೊಡುವ ಹೃದಯವೇ ಇರುವುದಿಲ್ಲ. ಮಣೆಯ ಮೇಲೆ ಕೂತವರು ಸಕಲೆಂಟು ಶಾಸ್ತ್ರಗಳಲ್ಲಿ ನಿರತರು ಸರಿಯೇ. ಆದರೆ ಅಣ್ಣತಮ್ಮಂದಿರು, ಅಕ್ಕತಂಗಿಯರು, ಅವರ ಮಕ್ಕಳಾದಿಯಾಗಿ ಎಲ್ಲರದ್ದೂ ಒಂದೇ ಬಗೆಯ ಠೀವಿ. ಹಣ, ಆಸ್ತಿ, ಅಧಿಕಾರ, ಅಷ್ಟಿಷ್ಟು ಸ್ಥಾನಮಾನ ತಂದುಕೊಟ್ಟ ದರ್ಪ. ಹೋದ ತಪ್ಪಿಗೆ ನಾವಾಗಿಯೇ ಕಿರುನಕ್ಕು ಔಪಚಾರಿಕವಾಗಿ ‘ಚೆನ್ನಾಗಿದ್ದೀರ?’ ಎಂಬ ಪ್ರಶ್ನೆಯೆಸೆದು ಕುಳಿತರೆ ಮುಗಿಯಿತು. ಎರಡು- ಮೂರು ಗಂಟೆಗಳ ಕಾಲ ‘ನೀನಾ?’ ಎಂದು ಕೇಳುವ ಒಂದು ಜೀವವೂ ಎದುರಾಗುವುದಿಲ್ಲ.

ಮಾತಾಡಿದರೂ ಅಂತಸ್ತು ಪ್ರದರ್ಶಿಸುವ, ತಾವೆಷ್ಟು ಅನುಕೂಲಸ್ಥರು, ಬುದ್ಧಿವಂತರು, ಜಗದ ಎಲ್ಲ ಸಮಾಚಾರ ಬಲ್ಲವರು ಎಂಬ ಒಣಪ್ರತಿಷ್ಠೆ ತೋರ್ಪಡಿಸುವ ಪ್ರಚಾರತಂತ್ರದ ಗಿಮಿಕ್ಕು ಮಾತ್ರವೇ. ಗಂಡ-ಹೆಂಡತಿ ಮನೆಯಲ್ಲಿ ಕಾದಾಡುವ ಬದಲು ಅಲ್ಲಿ ಕಣ್ಣಲ್ಲೇ ಗುರಾಯಿಸ್ತಾ, ‘ನಿಂಗಿದು ಬೇಕಿತ್ತಾ ಮಗನೆ?’ ಎಂಬ ಸಂದೇಶ ರವಾನಿಸುತ್ತಾ ಕಾಲ ತಳ್ಳಬೇಕು. ಸದ್ಯ ಗಂಟೆಗೆ ಅರವತ್ತೇ ನಿಮಿಷ ಅನ್ನಿಸುವಾಗಲೇ ತರಬೇತುಗೊಂಡ ನಾಯಿಯಂತೆ ಊಟ, ತಿಂಡಿ, ಕಾಫಿ ವಾಸನೆ ಹಿಡಿದು ಊಟದ ಆಟ ಮುಗಿಸಿ, ತಾಂಬೂಲ ಪಡೆದು ‘ಬರ್ತೀವಿ’ ಎನ್ನಬೇಕು. ‌’ಸಂತೋಷ’ ಎನ್ನುವರು. ಅದು ಬಂದಿದ್ದಕ್ಕೋ ಹೊರಟಿದ್ದಕ್ಕೋ ಯೋಚಿಸದೆ ಮನೆಯ ದಾರಿ ಹಿಡಿಯಬೇಕು. ಹೋಗಿ ಬರುವ ಖರ್ಚು, ಓದಿಸಿದ ಹಣ, ಅಲ್ಲಿನ ವಿಕ್ಷಿಪ್ತ ಮೌನ ಹಾಗೂ ಕಿವಿಗೆ ಬಿದ್ದ ಕೊಂಕು ಮಾತುಗಳು ನಮ್ಮ ದಿನವೊಂದರ ಸುಖ, ನೆಮ್ಮದಿ, ಸೊಗಸನ್ನು ಹಾಳುಮಾಡಿರುತ್ತವೆ. ಇನ್ಯಾವತ್ತೂ ಇಂತವರ ಮನೆಗೆ ಕಾಲಿಡಬಾರದು ಎನಿಸಿದರೂ ಸಂಬಂಧಿಕರೆಂದ ಮೇಲೆ ಸಹಿಸಲೇಬೇಕಾಗುತ್ತದೆ.

ಆದರೆ ಇನ್ನು ಕೆಲವೆಡೆಯ ಕಾರ್ಯಕ್ರಮಕ್ಕೆ ನಾವು ಊರಿಗೆ ಮುಂಚೆ ಸಿದ್ಧವಾಗಿ ಕಾಯುತ್ತಿರುತ್ತೇವೆ. ಅಲ್ಲಿನ ಸಂಬಂಧಿಕರು, ಒಡನಾಡಿಗಳೊಂದಿಗೆ ಆತ್ಮೀಯ ಬಂಧವಿರುತ್ತದೆ. ಎಷ್ಟು ದಿನವಾಯ್ತಲ್ಲ ನೋಡಿ ಎಂಬ ಕಾತರವಿರುತ್ತದೆ. ತಿಂಡಿ ಲೇಟಾದರೂ, ಕಾಫಿ ಬಿಸಿ ಕಡಿಮೆಯಾದರೂ, ಊಟದ ಕಡೆ ಪಂಕ್ತಿಗೆ ಸ್ವೀಟು ಬರಲಿಲ್ಲವೆಂದರೂ ಬೇಸರವಾಗುವುದಿಲ್ಲ. “ಪಾಪ ಅಂದಾಜು ತಪ್ಪಿ ಜನ ಹೆಚ್ಚಿಗೆ ಬಂದರೆ ಅವರೇನು ಮಾಡುವ ಹಾಗಿದ್ದಾರೆ? /ಅಡುಗೆಯಾತನಿಗೆ ಎಂಭತ್ತರ ಪ್ರಾಯ. ಅಷ್ಟಾದರೂ ಟೀಂ ಕಟ್ಟಿಕೊಂಡು ನಿಭಾಯಿಸಿದ್ದಾರಲ್ಲ!/ ಇನ್ನೊಂಚೂರು ಬೇಗ ಹೋಗಿದ್ದರೆ ಪೂರ್ತಿ ಮಾತನಾಡಿದ ಹಾಗಾಗುತ್ತಿತ್ತು?!/ ಈ ಸಲ ಅಣ್ಣ-ಅತ್ತಿಗೆ ಟೂರಲ್ಲಿದ್ದರಂತೆ. ಮಿಸ್ ಮಾಡ್ಕೊಂಡ್ವಿ./ ಮುಂದಿನ ಕಾರ್ಯಕ್ರಮ ಯಾವಾಗ?” ಎಂಬ ಸಣ್ಣಸಣ್ಣ ವಾಕ್ಯಗಳಲ್ಲಿ ಸಡಗರ, ಸಂಭ್ರಮ ವ್ಯಕ್ತವಾಗುತ್ತಿರುತ್ತದೆ. ಯಾರೋ ತಪ್ಪು ತಿಳಿಯುತ್ತಾರೆ, ಇನ್ಯಾರೋ ಹಂಗಿಸಿ ನೋಯಿಸುತ್ತಾರೆ, ಇಲ್ಲದ ಬುರುಡೆ ಬಿಡ್ತಾರೆ ಎಂಬ ನಂಜಿಗೆ ಅಲ್ಲಿ ಆಸ್ಪದವಿಲ್ಲ. ಸರಳ, ಸಹಜ ಕುಟುಂಬ ಮಿಲನವದು. ಪರಸ್ಪರ ಪ್ರೀತಿ, ವಿಶ್ವಾಸವಿರುವುದರಿಂದ ಎಲ್ಲವೂ ಸಹ್ಯ. ಸುಂದರ.

ಇದು ಎಲ್ಲರ ಅನುಭವ. ಯುಗಾದಿಯೇ ಹೇಳಿಕೊಡುವ ಪಾಠದಂತೆ ಸಿಹಿ ಹಂಚುವವರು, ಕಹಿ ಉಗುಳುವವರು ಇದ್ದೇ ಇರುತ್ತಾರೆ. ಒಂದು ಭೇಟಿ ಹಾಯೆನಿಸುತ್ತದೆ. ಮತ್ತೊಂದು ಸಮಾರಂಭ ಸರಾಗವಾಗಿ ನಡೆಯುತ್ತಿದ್ದ ಸಂಸಾರದಲ್ಲಿ ಬಿರುಗಾಳಿಯನ್ನು ಬೀಸಿ ಪರಸ್ಪರ ದೋಷಾರೋಪಗಳಿಗೆ ಕಾರಣವಾಗುತ್ತದೆ. ಮದುವೆಯಾಗಿ ಬಂದು ಎಷ್ಟು ಕಾಲವಾದರೂ ಇಲ್ಲಿನವರ ಕಣ್ಣಲ್ಲಿ ಪರಕೀಯಳಾಗಿ ಉಳಿದೆ ಎಂದು ಕೊರಗುವ ಹೆಣ್ಣು, ಹೆತ್ತವರು ಹಾಗೂ ಸಂಗಾತಿಯ ಭಿನ್ನ ಆಲೋಚನೆಗಳ ನಡುವೆ ಸಿಕ್ಕು ತೊಳಲುವ ಗಂಡು, ಹಿರಿಯರ ಮನಸ್ತಾಪದ ಬಿಸಿಗೆ ಬಳಲುವ ಮಕ್ಕಳು ಈ ವಿಷವರ್ತುಲದಾಚೆ ಬರಲು ಸ್ವಲ್ಪ ಕಾಲ ಬೇಕು. ಮರೆವು ವರವೆನ್ನಿಸುವುದು ಆಗಲೇ. ಕ್ಷಮಿಸುವುದು ಕಷ್ಟವಾದರೂ ಮರೆಯುವ ಮಾರ್ಗವಾದರೂ ಹುಡುಕೋಣ. ಏನಾದರೂ ಶುದ್ಧ ಹೃದಯ, ಮುಕ್ತ ನಗು ಮತ್ತು ಸ್ನೇಹಮಯ ವ್ಯಕ್ತಿತ್ವವನ್ನು ಉಳಿಸಿಕೊಳ್ಳೋಣ. ನಮ್ಮ ಸಂಪರ್ಕಕ್ಕೆ ಬಂದವರ ಮನಸ್ಸಿಗಿಷ್ಟು ತಂಪನ್ನೀಯಲು ಸಾಧ್ಯವಾದರೆ ಬದುಕು ಸಾರ್ಥಕ. ಏನಂತೀರಿ?

About The Author

ಎಸ್. ನಾಗಶ್ರೀ ಅಜಯ್

ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಯ ಕ್ಷೇತ್ರಗಳು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ