ಪುಸ್ತಕ ಕೆಳಗಿಡುವಾಗ ‘ನಾಗೇಶಿ’ ಒಬ್ಬ ಆಪ್ತ ಸಖನಾಗಿ ಎದೆಹೊಕ್ಕಿಬಿಡುತ್ತಾನೆ. ಲೌಕಿಕದ ಬದುಕು ತೋರುವ ವಿಭಿನ್ನ ಮುಖಗಳ ಕರಾಳತೆಯ ದರ್ಶನದೊಂದಿಗೆ ಹೇಗೆ ಅವನ್ನು ಮೆಟ್ಟಿ ನಿಂತು ಅಲೌಕಿಕದತ್ತ ಸಾಗಬೇಕೆಂಬ ಪರಾಮರ್ಶೆಯಿದೆ. ಒಣ ಉಪದೇಶ ಕೊಡುವ ಒಂದೂ ಸಾಲಿರದ, ಆದರೆ ನಮ್ಮೊಳಗೆ ನಾವೇ ಇಳಿದು ತಿದ್ದಿಕೊಳ್ಳಬಹುದಾದ ಒಂದು ಪ್ರಚೋದನೆ ಇಲ್ಲಿದೆ. ಕೊನೆಯಲ್ಲಿ ಬದುಕಿನ ಮಾದರಿ ಹೇಗಿರಬೇಕು ಎಂಬ ಸೂಕ್ಷ್ಮದರ್ಶನಗೈವ ಈ ಗಝಲ್ಲುಗಳು ಖಂಡಿತ ಖುಷಿ ಕೊಡುವ, ಎಲ್ಲ ಬೇಸರದ ಕ್ಷಣಗಳಿಗೂ ಜೊತೆಯಾಗಿ ಜೀವದ್ರವ್ಯ ಸಿಂಪಡಿಸುವ ಸಖರಂತೆ ನಮ್ಮೊಂದಿಗೆ ಉಳಿದುಕೊಳ್ಳುತ್ತವೆ.
ನಾಗೇಶ್ ನಾಯಕ ಅವರ “ಆತ್ಮ ಧ್ಯಾನದ ಬುತ್ತಿ” ಗಝಲ್‌ ಸಂಕಲನದ ಕುರಿತು ಕವಿತಾ ಹೆಗಡೆ ಬರಹ

 

ಬುತ್ತಿ ಎಂಬ ಪದ ಕನ್ನಡಿಗನ ಮನದಲ್ಲಿ ಮಧುರ ಕಂಪನವನ್ನು ಎಬ್ಬಿಸುವ ಅಪೂರ್ವ ಶಕ್ತಿಯುಳ್ಳದ್ದು. ಎಂದೋ ಸವಿದ ಬುತ್ತಿಯ ನೆನಹು ಇಂದೂ ಮೈಮನಗಳಲ್ಲಿ ಪುಳಕವನ್ನೆಬ್ಬಿಸಿದರೆ ಅದಕ್ಕೆ ಬರಿಯ ಬುತ್ತಿಯ ರುಚಿ ಮಾತ್ರ ಕಾರಣವಲ್ಲ, ಅದನ್ನು ಕಟ್ಟಿದವರು ತುಸು ಧಾರಾಳವಾಗಿಯೇ ಬೆರೆಸಿರಬಹುದಾದ ಪ್ರೇಮ, ದೂರ ಪಯಣದಲ್ಲೂ ಜೊತೆಗಿರುವ ಬಾಂಧವ್ಯ, ತನ್ನ ನೆಲದೂಟವನ್ನು ಉಂಡ ಸಂತೃಪ್ತಿ, ತನ್ನ ನಾಡಿನ ಅಸ್ಮಿತೆ ಹೀಗೆ ಎಷ್ಟೋ ಭಾವ ಬಂಧಗಳೊಂದಿಗಿನ ಆಪ್ತ ಸಲ್ಲಾಪವದು. ಹೀಗೆ ಉಂಡ ಬುತ್ತಿಯನ್ನು ನೆನೆದು ಹಸಿಯಾಗುವ ಮನಕ್ಕೆ ಹಾಗೂ ಕಣ್ಣಿಗೊಂದು ಅಕ್ಷರಬುತ್ತಿಯನಿತ್ತು ಸದ್ದಿಲ್ಲದೇ ನಿಂತು ನಸುನಗೆ ಬೀರುತ್ತ ನಿಲ್ಲುವವರು ಕವಿ ನಾಗೇಶ್ ನಾಯಕ. ಈಗಾಗಲೇ ಹಲವು ಅಂಕಣ ಬರಹಗಳು, ಕವನ ಸಂಕಲನ, ಗಜಲ್ ಸಂಕಲನಗಳಿಂದ ಸಾಕಷ್ಟು ಖ್ಯಾತಿ ಗಳಿಸಿರುವ ನಾಯಕ ಅವರ ವಿಶಿಷ್ಟ ಪುಸ್ತಕ ಈ “ಆತ್ಮ ಧ್ಯಾನದ ಬುತ್ತಿ”.

ಬಹುಶಃ ಬಹಳ ಚಿಂತನೆಗೀಡುಮಾಡುವ ಈ ಹೆಸರನ್ನು ಕವಿ ತುಂಬ ಜತನದಿಂದ ಆಯ್ದುಕೊಂಡಂತಿದೆ. ‘ಅಲೆಮಾರಿಯ ಅನುಭಾವದ ಈ ಗಜಲ್ಗಳು’ ಎಂಬ ಪುಟ್ಟ ಉಪಶೀರ್ಷಿಕೆಯ ಜೊತೆ ಕೈತುಂಬುತ್ತದೆ. ಖ್ಯಾತ ವಿನ್ಯಾಸಕಾರ ಟಿ ಎಫ್ ಹಾದಿಮನಿಯವರ ಅತ್ಯಾಕರ್ಷಕ ಮುಖಪುಟ ಥಟ್ಟನೆ ಗಮನ ಸೆಳೆಯುವಷ್ಟು ಸುಂದರ.

ಕವಿಯ ಪರಿಚಯದ ನಂತರ ಮತ್ತೆ ಮುಂದಿನ ಪುಟ ಪುಟಕ್ಕಿಟ್ಟ ಚಿನ್ನದಂತೆ. ಡಾ ಎಚ್ ಎಸ್ ಸತ್ಯನಾರಾಯಣ ಅವರ ಅತ್ಯಂತ ಶ್ರೇಷ್ಠ ಮೊದಲ ಮಾತನ್ನು ಹಲವು ಬಾರಿ ಓದಿ ಆನಂದಿಸಬಹುದಾಗಿದೆ. ಒಂದು ಅನನ್ಯವಾದ ಶಾಂತ, ಸಂಯಮಭರಿತ ಆದರೆ ಪರಿಣಾಮಕಾರಿಯಾದಂತಹ ತಮ್ಮದೇ ಆದ ಶೈಲಿಯಲ್ಲಿ, “ಆತ್ಮಧ್ಯಾನದ ಬುತ್ತಿಯ ರಚನೆಗಳು ತಮ್ಮ ಜೀವನೋತ್ಸಾಹದ ಗುಣದಿಂದಾಗಿ ಜೀವಸೆಲೆಯಂತೆ ಕಾಣಬಲ್ಲವು” ಎನ್ನುವ ಅವರ ಸಾಲುಗಳಲ್ಲಿ ಕವಿಯ ರಚನೆ ಸಂಪೂರ್ಣ ಸಾರ್ಥಕ್ಯವನ್ನು ಪಡೆದುಕೊಳ್ಳುವ ಪರಿಯನ್ನು ಓದಿಯೇ ಸವಿಯಬೇಕು.

(ನಾಗೇಶ್ ನಾಯಕ)

ನಂತರದ ಪುಟಗಳು ನಾಗೇಶ್ ನಾಯಕ ಅವರ ಅಂತರಂಗದ ಮಿಡಿತ. “ನಿಮ್ಮ ಎಲ್ಲ ನೋವು- ನಲಿವು, ಏಕಾಂತ- ಒಬ್ಬಂಟಿತನ, ಬೇಸರ- ಬಳಲಿಕೆಗಳಲ್ಲಿ ಇಲ್ಲಿನ ಗಜಲ್ಗಳು ಆಸರೆಯಾಗುತ್ತವೆ” ಎಂಬ ಭರವಸೆ ನೀಡುತ್ತಾ, ಮುಂದಿನ ಓದಿಗೆ ನಮ್ಮನ್ನು ಸಜ್ಜುಗೊಳಿಸುತ್ತಾರೆ. ಪ್ರತಿ ಗಜಲ್ಲಿನ ಮಕ್ತಾದಲ್ಲಿ “ನಾಗೇಶಿ” ಎಂಬ ಕಾವ್ಯನಾಮವನ್ನೂ ಬಳಸಿದ್ದಾರೆ.

ಪ್ರೀತಿ, ಪ್ರೇಮ, ವಿರಹಗಳ ಚೌಕಟ್ಟು ದಾಟಿ ಆತ್ಮ ಧ್ಯಾನಕ್ಕೆ ಕುಳಿತ ಪರಿ ಹೇಗೆ ಗಜಲ್ ಎಂಬುದು ತನ್ನದೇ ಮಿತಿಗಳನ್ನು ಮೀರುತ್ತ ಇನ್ನಷ್ಟು ವಸ್ತು ವೈವಿಧ್ಯಗಳನ್ನು ಅಪ್ಪಿಕೊಂಡು ಬಲಿಷ್ಠವಾಗಬಲ್ಲ ಸಾಧ್ಯತೆಯನ್ನು ದರ್ಶಿಸುತ್ತಾರೆ.

“ಮನುಷ್ಯಪ್ರೀತಿ ಒಂದೇ ಮನಸು ಮನಸು ಒಂದುಗೂಡಿಸುವ ಶಕ್ತಿ ‘ನಾಗೇಶಿ’
ತನ್ನವರ ಓಲೈಕೆಯಲ್ಲೇ ಬದುಕ ಮುಗಿಸಿಕೊಂಡವ ಮನುಷ್ಯನಾಗಲಿಲ್ಲ” ಎಂಬ ಮೊದಲ ಗಜಲ್ಲಿನಲ್ಲೇ ಒಮ್ಮೆ ನಿಲ್ಲಿಸಿಬಿಡುತ್ತಾರೆ. ಜಾತಿಯ ಕತ್ತಿ ಮಸೆದು ಮತವನ್ನೇ ಉಸಿರಾಗಿಸಿಕೊಂಡವ ಹೇಗೆ ಪ್ರೀತಿಯಿಂದ ವಂಚಿತನಾದನೆಂದು ಮನುಷ್ಯನ ವರ್ತನೆಗೊಂದು ಕನ್ನಡಿ ಹಿಡಿಯುತ್ತಾರೆ.

“ಇರುವಷ್ಟು ದಿನ ಎಲ್ಲರೆದೆಯಲ್ಲೂ ನಗುವಿನ ಗಂಧವಾಗಿರಬೇಕು ‘ನಾಗೇಶಿ’
ಕರೆ ಬಂದ ಕ್ಷಣ ಮೌನವಾಗಿ ತೆರಳಿ ಕಣ್ಣಂಚಿನ ಹನಿಯಾಗೋಣ ಗೆಳೆಯ”
ಎಂಬ ಅರ್ಥವತ್ತಾದ ಸಾಲುಗಳಿಗೆ ಯಾವ ವ್ಯಾಖ್ಯಾನ ಬೇಕು? ಇಷ್ಟೇ ಅಲ್ಲವೆ ಬದುಕು? ಇದ್ದಾಗ ಹೇಗೆ ಮನುಷ್ಯ ಪರರ ಬದುಕಿನ ಸುಗಂಧವಾಗಿದ್ದನೆಂಬ ನೆನಪು ಮಾತ್ರ ಕೊನೆಗುಳಿವ ಸೂತ್ರ ಎಂಬುದು ಮನದಲ್ಲುಳಿದುಬಿಡುತ್ತದೆ.

“ಆತ್ಮಧ್ಯಾನದ ಬುತ್ತಿಯ ರಚನೆಗಳು ತಮ್ಮ ಜೀವನೋತ್ಸಾಹದ ಗುಣದಿಂದಾಗಿ ಜೀವಸೆಲೆಯಂತೆ ಕಾಣಬಲ್ಲವು” ಎನ್ನುವ ಅವರ ಸಾಲುಗಳಲ್ಲಿ ಕವಿಯ ರಚನೆ ಸಂಪೂರ್ಣ ಸಾರ್ಥಕ್ಯವನ್ನು ಪಡೆದುಕೊಳ್ಳುವ ಪರಿಯನ್ನು ಓದಿಯೇ ಸವಿಯಬೇಕು.

“ದ್ವೇಷ ಕಾರುವ ಕಣ್ಣುಗಳಲ್ಲಿಯೂ ಒಲವ ಬಿತ್ತಬೇಕಿದೆ ಸಾಕಿ
ವಿಷ ಉಣಿಸುವ ಕೈಗಳಿಗೂ ಅಮೃತ ಹಂಚಬೇಕಿದೆ ಸಾಕಿ”
ಮಧು ಬಟ್ಟಲ ಸಾಕಿಯೊಂದಿಗಿನ ಈ ಸಲ್ಲಾಪ ಧನಾತ್ಮಕತೆಯೆಡೆಗೆ ಸಾಗುವ ಚಿಂತನೆ.

“ಪ್ರತಿ ಸೋಲು ಮಾತಾಡಬೇಕು ನಿನ್ನ ಗೆಲುವಿನ ಗಾಥೆ
ಪ್ರತಿ ಕಣ್ಣ ಹನಿ ನುಡಿಯಬೇಕು ನಿನ್ನ ನಗುವಿನ ಗಾಥೆ”
ಮತ್ತೇನಿದೆ ಹೇಳಲು? ಎದೆಗೆ ನಾಟಿತು ತಾನೆ?

“ಕೊಂದವರು ಯಾರೂ ಉಳಿದುಕೊಂಡಿಲ್ಲ ಈ ಜಗದೊಳಗೆ
ಜೀವ ಬದುಕಿಸಿ ನೋಡು ಒಮ್ಮೆ ಧನ್ಯತೆಯೊಳಗೆ ಸತ್ಯ ತಿಳಿಯುವುದು”
ಕೊಲುವ ಕೈಗಳನ್ನು ಸೋಲಿಸುವ ಶಕ್ತಿ ಬದುಕಿಸುವ ಕೈಗಳಿಗೆ ಮಾತ್ರ ಇರುವುದೆನ್ನುವ ಸಾಲುಗಳಿವು.

“ನಿನ್ನ ಬದುಕಿನ ಶಿಲುಬೆ ಅವುಡುಗಚ್ಚಿ ನೀನೊಬ್ಬನೇ ಹೊರಬೇಕು ‘ನಾಗೇಶಿ’
ಇನ್ನೊಬ್ಬರ ಹೆಗಲ ನಿರೀಕ್ಷೆ ಸಾಕೋ ಇಲ್ಲಿ ಭಾರ ಹೊರುವ ಹೆಗಲುಗಳು ಕಡಿಮೆ”
ನಮ್ಮ ಹೋರಾಟವನ್ನು ನಾವೇ ಮಾಡಬೇಕು ಅಷ್ಟೇ.

“ನಗುವನ್ನು ಕಲಿಸಿದವಳು ನೀನು ಈಗ ಅಳು ಎಂದರೆ ಹೇಗೆ ಹೇಳು
ಗೆಲುವಿನ ರುಚಿ ತೋರಿಸಿದವಳು ನೀನು ಈಗ ಸೋಲೆಂದರೆ ಹೇಗೆ ಹೇಳು”
ಈ ಸಾಲುಗಳು ಪ್ರಿಯವಾಗದಿರಲು ಹೇಗೆ ಸಾಧ್ಯ?

“ಅವನು ದ್ವೇಷಿಸುವುದನ್ನು ಕಲಿತ ನಾನು ಪ್ರೀತಿಸುತ್ತ ಸಾಗಿದೆ ಇಷ್ಟೇ ವ್ಯತ್ಯಾಸ
ಅವನು ಬೆಂಕಿ ಹಚ್ಚುವದ ಕಲಿತ ನಾನು ದೀಪ ಬೆಳಗಿಸಿದೆ ಇಷ್ಟೇ ವ್ಯತ್ಯಾಸ”
ಬಹುಶಃ ವಿರೋಧಾಭಾಸಗಳೇ ತುಂಬಿದ ಬದುಕನ್ನು ಪ್ರೀತಿಯಿಂದ ಗೆಲ್ಲಬಹುದಲ್ಲದೆ ಭೀತಿಯಿಂದಲ್ಲ ಎಂಬ ಸಾಲುಗಳಿಗೆ ಸೋಲದೆ ಇರಲಾಗದು.

ಪುಸ್ತಕ ಕೆಳಗಿಡುವಾಗ ‘ನಾಗೇಶಿ’ ಒಬ್ಬ ಆಪ್ತ ಸಖನಾಗಿ ಎದೆಹೊಕ್ಕಿಬಿಡುತ್ತಾನೆ. ಲೌಕಿಕದ ಬದುಕು ತೋರುವ ವಿಭಿನ್ನ ಮುಖಗಳ ಕರಾಳತೆಯ ದರ್ಶನದೊಂದಿಗೆ ಹೇಗೆ ಅವನ್ನು ಮೆಟ್ಟಿ ನಿಂತು ಅಲೌಕಿಕದತ್ತ ಸಾಗಬೇಕೆಂಬ ಪರಾಮರ್ಶೆಯಿದೆ. ಒಣ ಉಪದೇಶ ಕೊಡುವ ಒಂದೂ ಸಾಲಿರದ, ಆದರೆ ನಮ್ಮೊಳಗೆ ನಾವೇ ಇಳಿದು ತಿದ್ದಿಕೊಳ್ಳಬಹುದಾದ ಒಂದು ಪ್ರಚೋದನೆ ಇಲ್ಲಿದೆ. ಕೊನೆಯಲ್ಲಿ ಬದುಕಿನ ಮಾದರಿ ಹೇಗಿರಬೇಕು ಎಂಬ ಸೂಕ್ಷ್ಮದರ್ಶನಗೈವ ಈ ಗಜಲ್ಲುಗಳು ಖಂಡಿತ ಖುಷಿ ಕೊಡುವ, ಎಲ್ಲ ಬೇಸರದ ಕ್ಷಣಗಳಿಗೂ ಜೊತೆಯಾಗಿ ಜೀವದ್ರವ್ಯ ಸಿಂಪಡಿಸುವ ಸಖರಂತೆ ನಮ್ಮೊಂದಿಗೆ ಉಳಿದುಕೊಳ್ಳುತ್ತವೆ.

(ಕೃತಿ: ಆತ್ಮ ಧ್ಯಾನವೇ ಬುತ್ತಿಯಾದ ಕ್ಷಣ (ಗಝಲ್‌ ಸಂಕಲನ), ಲೇಖಕರು: ನಾಗೇಶ ನಾಯಕ್‌, ಪ್ರಕಾಶಕರು: ಸಮೀರ ಪ್ರಕಾಶನ, ಪುಟಗಳು: 88, ಬೆಲೆ: 100/-)