ಪುರಂದರ ದಾಸರ ಸಾಲುಗಳು ನೆನಪಾಗುತ್ತವೆ – “ಇಷ್ಟು ದೊರಕಿದರೆ ಅಷ್ಟು ಬೇಕೆಂಬಾಸೆ, ಅಷ್ಟು ದೊರಕಿದರೆ ಮತ್ತಿಷ್ಟರಾಸೆ, ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ, ನಷ್ಟ ಜೀವನದಾಸೆ ಪುರಂದರ ವಿಠಲ”. ಮನುಷ್ಯನಿಗೆ ಸಾಕು ಎನ್ನುವುದು ಎಷ್ಟು ಕಷ್ಟ ಎಂಬ ವಿಷಯವು ನಮಗೆ ಇದರಿಂದ ಗೊತ್ತಾಗುತ್ತದೆ ಅಲ್ಲವೆ? ಎಷ್ಟಿದ್ದರೂ ನಮಗೆ ಇನ್ನೂ ಬೇಕು ಬೇಕು ಬೇಕು ಬೇಕು. ಒಬ್ಬೊಬ್ಬರು ಹೊಂದಿರುವ ಸಾವಿರ ಸೀರೆಗಳು, ಮುನ್ನೂರು ಚಪ್ಪಲಿಗಳು, ಚಿನ್ನದ ಶೌಚಾಲಯ ಘಟಕಗಳು, ನಲವತ್ತೆಂಟು ಕೈಗಡಿಯಾರಗಳು …. ಬಹಳ ಸಲ ಕೇಳಿದ್ದೇವೆ, ಓದಿದ್ದೇವೆ ಈ ಬಗ್ಗೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹದಿನೆಂಟನೆಯ ಬರಹ
ಬೀರು ಬಾಗಿಲು ತೆಗೆದರೆ ಸಾಕು ದುಬುದುಬುನೆ ಉರುಳುವ ಅಸ್ತವ್ಯಸ್ತ ಬಟ್ಟೆಗಳು, ವರ್ಷಕ್ಕೊಮ್ಮೆಯೂ ಬಳಸದಿರುವ ಚಪ್ಪಲಿಗಳಿಂದ ತುಂಬಿ ತುಳುಕುವ ಚಪ್ಪಲಿಗೂಡು, ಒಬ್ಬರಿಗಾಗಿ ಎರಡು ಮೂರು ಚಲನವಾಣಿ(ಮೊಬೈಲ್ ಫೋನ್)ಗಳು, ಮೂರು ನಾಲ್ಕು ಕುಟುಂಬ ಸದಸ್ಯರಷ್ಟೇ ಇರುವ ಮನೆಯಾದರೂ ಮನೆಯಲ್ಲಿ ಒಂದಕ್ಕಿಂತ ಹೆಚ್ಚಿದ್ದು ಒಳಗಿಡಲು ಜಾಗ ಇಲ್ಲದೆ ಬೀದಿಯಲ್ಲಿ ನಿಂತಿರುವ ದುಬಾರಿ ಕಾರುಗಳು, ಮನೆಯಲ್ಲಿ 3-4 ಟಿವಿಗಳು, ಇಷ್ಟ ಇಷ್ಟ ಅಂತ ಕಲಾಕೃತಿಗಳನ್ನು ಕೊಂಡು ತಂದು ಮನೆಯೇ ಒಂದು ವಸ್ತು ಸಂಗ್ರಹಾಲಯವೋ ಅಥವಾ ಗೋದಾಮೋ ಆಗುವ ಸಂದರ್ಭಗಳು…. ಬಹುಶಃ ಇಂದು ಭಾರತದ ಎಲ್ಲ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ಮನೆಗಳಲ್ಲಿ ಕಂಡು ಬರುವ ಸನ್ನಿವೇಶ ಇದು. ಹೌದು, ಇದು ಆಧಿಕ್ಯದ ಸಮಸ್ಯೆ.
ಹೋಟಲ್ಲಿಗೆ ಹೋದರೆ ಅವರ ಖಾದ್ಯಪಟ್ಟಿ(ಮೆನು)ಯಲ್ಲಿರುವ ಒಂದು ನೂರು ಆಯ್ಕೆಗಳು, ಗೃಹಪ್ರವೇಶ, ನಾಮಕರಣ ಮುಂತಾದ ಸಮಾರಂಭಗಳಲ್ಲಿ ಯಾವುದನ್ನು ತಿನ್ನಲಿ ಯಾವುದನ್ನು ಬಿಡಲಿ ಎಂದು ಗೊತ್ತಾಗದಷ್ಟು ಇರುವ ಉದ್ದದ ಖಾದ್ಯಸಾಲು, ಊಟವನ್ನು ಅರ್ಧರ್ಧ ಬಿಟ್ಟ ತಟ್ಟೆಗಳು, ಸಮಾರಂಭ ಭವನಗಳ ಹಿತ್ತಲಿನಲ್ಲಿ ಪ್ರತಿ ಸಮಾರಂಭದ ನಂತರವೂ ಬೀಳುವ ಬೆಟ್ಟದಂತಹ ಕಸದ ರಾಶಿ…. ಹೌದು ಮತ್ತದೇ ಆಧಿಕ್ಯದ ಸಮಸ್ಯೆ.
ಈ ದಿನಮಾನದಲ್ಲಿ ಕಾಣುತ್ತಿರುವ ಇನ್ನೊಂದು ಆಧಿಕ್ಯದ ಚಹರೆ ಬಹಳವಾಗಿ ಕಾಡುತ್ತದೆ. ಅದು ಯಾವುದೆಂದರೆ ಕುವೆಂಪು ಹೇಳಿದ ಮಂತ್ರಮಾಂಗಲ್ಯ ವಿವಾಹ/ನೋಂದಣಿ ವಿವಾಹ/ ದೇವಸ್ಥಾನದ ಸರಳ ಮದುವೆ/ ಆರ್ಯ ಸಮಾಜದ ಸಾದಾಸೀದಾ ವಿವಾಹಗಳಿಗೆ ಸಂಪೂರ್ಣ ವಿರುದ್ಧವಾಗಿ ನಡೆಯುತ್ತಿರುವ ಅತಿದುಬಾರಿ `ತಂಗುದಾಣ(ರೆಸಾರ್ಟ್) ವಿವಾಹ’/`ಪ್ರವಾಸ ತಾಣ ವಿವಾಹಗಳು’(ಡೆಸ್ಟಿನೇಷನ್ ವೆಡ್ಡಿಂಗ್ಸ್. ಸಿನಿಮಾ ತಾರೆಯರು, ಅತಿ ಶ್ರೀಮಂತ ವರ್ಗದವರು ಮಾತ್ರವಲ್ಲದೆ ಮೇಲ್ಮಧ್ಯಮ ವರ್ಗದವರು ಸಹ ಈ ಹೊಸ ರೀತಿ ವಿವಾಹಗಳಿಗೆ ಮನಸೋಲುತ್ತಿದ್ದಾರೆ. ನಮ್ಮ ಮನೆಗೆ/ ಕೆಲಸದ ಸ್ಥಳಕ್ಕೆ ಈಗ ಬರುತ್ತಿರುವ ಮದುವೆ ಕರೆಯೋಲೆಗಳಲ್ಲಿ ಅರ್ಧದಷ್ಟು ಇಂತಹ ದುಬಾರಿ ವಿವಾಹಗಳ ಕರೆಯೋಲೆಗಳೇ ಆಗಿವೆ!
ವಿಶಾಲವಾದ ಮೃದು ಹುಲ್ಲುಹಾಸುಗಳು, ಸುಂದರವಾಗಿ ಬೆಳೆಸಿದ ಗಿಡಗಳು, ಅಭಿರುಚಿಯಿಂದ ಕಲಾತ್ಮಕವಾಗಿ ಜೋಡಿಸಿದ ವಿಗ್ರಹಗಳು, ಬೃಹತ್ ಗಾತ್ರದ ಹೂದಾನಿಗಳು, ಕಲಾಕೃತಿಗಳು, ಉದ್ಯಾನ ಕುರ್ಚಿಗಳು, ಉಯ್ಯಾಲೆಗಳು, ಕಮಲದ ಹೂವು, ಬಾತುಕೋಳಿಗಳು ಇರುವ ಕೊಳಗಳು, ತಲೆಬಾಗಿಲಿಂದ ಹಿಡಿದು ಮದುವೆ ಮಂಟಪದ ತನಕ ಹೂವಿನ ಬೆಟ್ಟವನ್ನೇ ಹೊತ್ತು ತಂದು ಭಾಗ ಭಾಗ ಮಾಡಿ ಅಲಂಕರಿಸಿದ್ದಾರೇನೊ ಎಂಬಂತೆ ಎಲ್ಲೆಲ್ಲಿ ನೋಡಿದರೂ ಸುರಿಯುತ್ತಿರುವ ಹೂರಾಶಿ, ಒಟ್ಟಿನಲ್ಲಿ `ನಂದನದ ತುಣುಕೊಂದು ಬಿದ್ದಿದೆʼ ಎಂದು ನಮ್ಮ ವರಕವಿ ಬೇಂದ್ರೆ ಹೇಳಿದ್ದು ಇದೇ ಇರಬೇಕು ಎಂಬ ಭಾಸ ಹುಟ್ಟಿಸುವ ವಾತಾವರಣವುಳ್ಳ `ತಂಗುದಾಣ ಮದುವೆ’ಯ ಸ್ಥಳಗಳು. ಇವುಗಳ ಮಾಲೀಕರು ಈ `ನಂದನ ನಿರ್ಮಾಣ’ಕ್ಕಾಗಿ ದಿನವೊಂದಕ್ಕೆ ಹತ್ತು ಹದಿನೈದು ಲಕ್ಷ ಬಾಡಿಗೆ ವಸೂಲು ಮಾಡುತ್ತಾರೆ. ಇನ್ನು ಮದುವೆ ಜವಳಿ, ಒಡವೆ, ಭೋಜನ, ಉಡುಗೊರೆ, ಛಾಯಾಚಿತ್ರ, ದೃಶ್ಯಚಿತ್ರ….. ಇವೆಲ್ಲ ಖರ್ಚುಗಳು ಸೇರಿದಾಗ ಎರಡು ದಿನದ ಮದುವೆ ಅಂದರೆ 40-50 ಲಕ್ಷ ಖರ್ಚಾಗುವುದು ಖಚಿತ. ಆಹ್ವಾನ ಪತ್ರಿಕೆಯಿಂದ ಹಿಡಿದು ಮರುಉಡುಗೊರೆ ತನಕ “ಪ್ರತಿಯೊಂದು ಸಂಗತಿಯೂ `ರಾಜ ಗಾತ್ರ’(ಕಿಂಗ್ ಸೈಝ್)ದಲ್ಲಿರಬೇಕು” ಎಂಬ ಹಂಬಲದಿಂದ ಸಾಲಸೋಲ ಮಾಡಿಯೋ, ಇರುವ ಉಳಿತಾಯದ ಹಣವನ್ನೆಲ್ಲ ಖರ್ಚು ಮಾಡಿಯೋ ಹೆಣ್ಣಿನ (ಮತ್ತು ಸ್ವಲ್ಪ ಮಟ್ಟಿಗೆ ಗಂಡಿನ) ತಾಯ್ತಂದೆಯರು ಹೆಣಗಾಡಿ ಒದ್ದಾಡಿ ಇಂತಹ ಮದುವೆಗಳನ್ನು ಮಾಡುವುದನ್ನು ನೋಡುತ್ತಿದ್ದೇವೆ. ಇದೊಂದು ಸಾಂಕ್ರಾಮಿಕ ಪಿಡುಗಿನಂತೆ ಹರಡುತ್ತಿದ್ದು ಒಬ್ಬರನ್ನು ನೋಡಿ ಇನ್ನೊಬ್ಬರು ಇದೇ ರೀತಿಯ ದುಬಾರಿ ಮದುವೆಯ ಶೈಲಿಯನ್ನು ಆಯ್ದುಕೊಳ್ಳುತ್ತಿದ್ದಾರೆ.
ಹೀಗೆ ಅಪಾರ ಖರ್ಚು ಮಾಡಿ ಮದುವೆ ಮಾಡುವ ಹೆತ್ತವರ ಸವಾಲು, ಒತ್ತಡಗಳದು ಒಂದು ಹದವಾದರೆ ಇಂತಹ ಮದುವೆಗಳಿಗೆ ಕರೆಯೋಲೆಯನ್ನು ಮನ್ನಿಸಿ ಅತಿಥಿಗಳಾಗಿ ಹೋಗುವವರ ಸವಾಲು, ಒತ್ತಡಗಳದು ಇನ್ನೊಂದೇ ಹದ. ಬೆಂಗಳೂರು, ಚೆನೈ(ಹಿಂದಿನ ಮದ್ರಾಸು), ಮುಂಬೈ, ದೆಹಲಿ ಮುಂತಾದ ಮಹಾನಗರಗಳ ವಾಹನ ದಟ್ಟಣೆಯೊಂದಿಗೆ ಹೋರಾಡುತ್ತಾ 25-35-45 ಕಿಲೋಮೀಟರ್ ದೂರ ಇರುವ ಈ `ತಂಗುದಾಣ ಮದುವೆಯ ಸ್ಥಳ’ಗಳಿಗೆ ಸ್ವಂತ ಗಾಡಿಯೋ, ಬಾಡಿಗೆಯ ಗಾಡಿಯೋ, ಮೆಟ್ರೊ, ಆಟೊರಿಕ್ಷಾ ಮುಂತಾದ ಸಾರ್ವಜನಿಕ ಸಾರಿಗೆಗಳಲ್ಲೊಂದರಲ್ಲೋ, ಅಥವಾ ದೂರವನ್ನು ಅವಲಂಬಿಸಿ ಇವುಗಳ ಬೇರೆ ಬೇರೆ ಸಂಯೋಜನೆಗಳಲ್ಲೋ ಗಂಟೆಗಟ್ಟಲೆ ಪ್ರಯಾಣ ಮಾಡಿ ಮದುವೆಯ ಜಾಗ ತಲುಪಬೇಕು ಅತಿಥಿಗಳು. ಹೋಗುತ್ತಿದ್ದಂತೆ ಎಕರೆಗಟ್ಟಲೆ ಜಾಗದಲ್ಲಿ ಹಾಸಿಕೊಂಡಿರುವ ಆ ತಂಗುದಾಣದ ದಿಕ್ಕುದೆಸೆಗಳ ಅಂದಾಜಾಗದೆ, ಗಾಡಿ ನಿಲ್ಲಿಸುವ ಜಾಗದಿಂದ ಹಿಡಿದು, ಸ್ವಾಗತ ಪೇಯದ ಪ್ರವೇಶ ದ್ವಾರ, ಧಾರೆ/ಆರತಕ್ಷತೆ ಮಂಟಪ ಇರುವ ಜಾಗದ ತನಕ ಎಲ್ಲ ಜಾಗಗಳನ್ನೂ `ಹುಡುಕಿಕೊಳ್ಳಬೇಕು’. ಅಲ್ಲಿ ಈಗಾಗಲೇ ತಯಾರಾಗಿ ನಿಂತಿರುವ ಶುಭಾಶಯ ಕೋರುವವರ ಹನುಮಂತನ ಬಾಲದಂತಹ ಸರತಿ ಸಾಲಿನಲ್ಲಿ ತಾವೂ ಸೇರಿ ನಿಂತು ಉಸ್ ಎಂದು ಉಸಿರು ಬಿಟ್ಟು ವಧು-ವರರಿಗೆ ಶುಭಾಶಯ ಕೋರಬೇಕು.
ಆಮೇಲೆ, ಪಾನಿಪೂರಿ-ಮಸಾಲಪುರಿ ಬಡಿಸುಕಟ್ಟೆ, ಹಣ್ಣು, ಹಸಿ ತರಕಾರಿ ಕೋಸಂಬರಿಗಳ ವಿಭಾಗ, ಮುಖ್ಯ ಖಾದ್ಯಗಳ ಸ್ಥಳ, ಸಿಹಿ ತಿಂಡಿಗಳು, ಐಸ್‌ಕ್ರೀಮು, ಚೈನೀಸ್ ಅಡುಗೆಗಳ ವಿಭಿನ್ನ ಸ್ಥಳ… ಒಂದೇ ಎರಡೇ.. ಅದೆಷ್ಟು ಹುಡುಕಾಟಗಳು! ಇದೆಲ್ಲ ಹುಡುಕಾಟ ಮುಗಿಸಿ `ಏನು ತಿನ್ನುವುದು, ಏನು ಬಿಡುವುದು, ಕಂಡು ಕೇಳರಿಯದ ಈ ಹೊಸ ತಿಂಡಿಯ ಹೆಸರೇನಪ್ಪಾ ದೇವರೇʼ .. ಎಂದೆಲ್ಲ ಚಿಂತಿಸಿ ಒಂದಿಷ್ಟು ಯಥಾಶಕ್ತಿ ತಿಂದು, ತಿನ್ನುತ್ತಿರುವಾಗಲೇ `ಇನ್ನು ಮನೆಗೆ ಹೋಗಲು ಎಷ್ಟು ಹೊತ್ತಾಗುತ್ತದೋ! ಗಾಡಿ ಸಿಗುತ್ತದೋ ಇಲ್ಲವೊ’ .. ಎಂದು ಚಿಂತಿಸುತ್ತಾ ತಾಂಬೂಲ ಕೊಡುವ ಸ್ಥಳವನ್ನು ತಲಾಶು ಮಾಡಿ, `ಕಾರ್ಯಕ್ರಮ ಪ್ರಬಂಧಕರು’(ಇವೆಂಟ್ ಮ್ಯಾನೇಜ್‌ಮೆಂಟ್ ಟೀಮ್)ಕೊಡುವ ತಾಂಬೂಲ ಅಥವಾ ಮರುಉಡುಗೊರೆಯನ್ನು ಪಡೆದುಕೊಂಡು ಮನೆಮುಖಿಯಾಗಬೇಕು ಆ ಅತಿಥಿಗಳು. ಅವರು ತಮ್ಮ ಮನೆ ತಲುಪಲು ಕಡಿಮೆ ಎಂದರೆ ಒಂದೂವರೆ ಗಂಟೆ ಸಮಯ ಬೇಕು. ವಾಹನ ದಟ್ಟಣೆ ಹೆಚ್ಚಿದ್ದರೆ ಒಂದೂವರೆ ಗಂಟೆಯು ಎರಡೂವರೆ ಗಂಟೆ ಆಗಬಹುದು! ಮೂರೂವರೆ ಗಂಟೆಯೂ ಆಗಬಹುದು! ಇಂತಹ ಒಂದು ಮದುವೆಗೆ ಕರೆಯೋಲೆ ಪಡೆದ ನನ್ನ ಸಹೋದ್ಯೋಗಿಯೊಬ್ಬರು ತಮ್ಮ ಮನೆಯಿಂದ ಆ `ತಂಗುದಾಣ ಮದುವೆಯ ಸ್ಥಳ’ವು ನಲವತ್ತು ಕಿಲೋಮೀಟರ್ ದೂರ ಇರುವುದನ್ನು ಗಮನಿಸಿ ಹೌಹಾರಿ, ಜೊತೆಗೆ ಕಾರು ಬಾಡಿಗೆಯವನು 1600 ರೂಪಾಯಿ ಕೇಳಿದನೆಂದು ಗಾಬರಿಯಾಗಿ ಮದುವೆಗೆ ಹೋಗುವುದನ್ನೇ ರದ್ದು ಮಾಡಿದರಂತೆ! ಮಹಾನಗರಗಳಲ್ಲಿ ವಾಸಿಸುತ್ತಿರುವವರು ಅನುಭವಿಸುತ್ತಿರುವ ಈ ಸಮಸ್ಯೆಯನ್ನು ಏನೆನ್ನೋಣ! ಸರಳ ವಿವಾಹದ ರೀತಿಯಿಂದ ಸಂಕೀರ್ಣ ವಿವಾಹದ ರೀತಿಗೆ ಬದಲಾಗಿದ್ದರಿಂದ ಉಂಟಾದ ಆಧಿಕ್ಯದ ಸಮಸ್ಯೆ ಅನ್ನೋಣವೆ?
****
ಮೊನ್ನೆ ಖಾದಿ ಗ್ರಾಮೋದ್ಯೋಗ ಭಂಡಾರದಲ್ಲಿ ಒಂದು ಕುರ್ತಾಗೆ 480, ಮೂರು ಕುರ್ತಾಗಳಿಗೆ 1020 ಎಂಬ ಜಾಹೀರಾತು ನೋಡಿದೆ. ಪಕ್ಕದಲ್ಲಿ ಗಾಂಧೀಜಿಯ ಚಿತ್ರವಿತ್ತು. ಅಯ್ಯೋ ಅನ್ನಿಸಿತು. ಸರಳತೆಯ ಹರಿಕಾರನ ಹೆಸರಲ್ಲೇ ಲಾಭೋದ್ದೇಶದ ಚೌಕಾಸಿ ಮಾರಾಟ! ಕೊಳ್ಳುಬಾಕ ಸಂಸ್ಕೃತಿಯ ಗೆಲುವೋ ಇದು!? ಅಥವಾ ನಾವು ನಮ್ಮ ರಾಷ್ಟ್ರಪಿತ ಕಲಿಸಿದ ಪಾಠವನ್ನು ಮರೆತೆವು ಎಂಬುದಕ್ಕೆ ಸೂಚನೆಯೋ? ನಮ್ಮ ತಂದೆಯವರ ಯೌವನದ ಕಾಲದಲ್ಲಿ (1950-60 ರ ವರ್ಷಗಳು) ಭಾರತದ ವಿದ್ಯಾವಂತ ವರ್ಗದಲ್ಲಿ ಬಹಳ ಪ್ರಚುರವಾಗಿದ್ದ ಒಂದು ಜೀವನಮೌಲ್ಯ ನೆನಪಾಗುತ್ತೆ ನನಗೆ – `ಸಿಂಪಲ್ ಲಿವಿಂಗ್, ಹೈ ಥಿಂಕಿಂಗ್’. `ಸರಳ ಜೀವನ, ಉನ್ನತ ಚಿಂತನೆ’ ಎಂಬ ಮೌಲ್ಯ ಅದು. ಇಂದು ನಮ್ಮ `ಬೇಕು, ಬೇಕು, ಬೇಕು’ಗಳ ಭರಾಟೆಯಲ್ಲಿ ಇಂದಿನ ಬದುಕಿನ ಶೈಲಿಯು `ಸಂಕೀರ್ಣ ಜೀವನ, ಶೂನ್ಯ ಚಿಂತನೆ’ಯ ಕಡೆಗೆ ಒಲಿದಿದೆಯೇ?
ಆಧಿಕ್ಯದ ಸಮಸ್ಯೆಗೆ ಒಂದು ಮನಃಶಾಸ್ತ್ರೀಯ ಆಯಾಮವೂ ಇದೆಯಂತೆ. ಹೋರ್ಡಿಂಗ್ ಎಂಬ ಕಾಯಿಲೆಯನ್ನು ಮನೋವೈದ್ಯರು ಮನುಷ್ಯರಲ್ಲಿ ಗುರುತಿಸಿದ್ದಾರೆ. ಹೋರ್ಡಿಂಗ್ ಅಂದರೆ ಮಿತಿಮೀರಿದ ಸಂಗ್ರಹ ಬುದ್ಧಿ. ವಸ್ತುಗಳನ್ನು/ಮುದ್ದುಪ್ರಾಣಿಗಳನ್ನು ಅತಿಯಾಗಿ ಶೇಖರಿಸುವ ಮನುಷ್ಯ ಸ್ವಭಾವ ಇದು. ಮನೆತುಂಬ ಹಳೆಯ ಸುದ್ದಿಪತ್ರಿಕೆಗಳನ್ನು ರಾಶಿ ಹಾಕಿಕೊಂಡವರು, ನೂರು-ಇನ್ನೂರು ಬೆಕ್ಕುಗಳನ್ನು ಚಿಕ್ಕಮನೆಯಲ್ಲಿ ಇಟ್ಟುಕೊಂಡವರು, ಮೊಟ್ಟೆಚಿಪ್ಪುಗಳು, ಜೂಲುಜೂಲಾದ ಬಟ್ಟೆಗಳು, ಹಿಡಿಮುರಿದ ಚಹಾಕಪ್ಪು, ಬಿರುಕು ಬಿಟ್ಟ ಅಡಿತಟ್ಟೆ(ಸಾಸರ್)ಗಳು, ನೂರೆಂಟು ಪಾತ್ರೆಗಳು, ರಾಮರಾಮಾ… ಒಟ್ಟಿನಲ್ಲಿ ಒಂದೇ ಒಂದು ವಸ್ತುವನ್ನೂ ಎಸೆಯಲಾರದೆ ಎಲ್ಲವನ್ನೂ ಗುಡ್ಡೆ ಹಾಕಿಕೊಳ್ಳುವ ರೋಗಗ್ರಸ್ತ ಮನಃಸ್ಥಿತಿ ಇದು.
*****
ಇನ್ನು ಮಾಹಿತಿ ತಂತ್ರಜ್ಞಾನವು ನಮ್ಮ ಬದುಕಿನಲ್ಲಿ ತಂದಿರುವ ಆಧಿಕ್ಯ. ಇದರದ್ದೊಂದು ಬೇರೆಯೇ ಕಥೆ ಬಿಡಿ. ನಮ್ಮ ಮಿಂಚಂಚೆ ಮತ್ತು ಚಲನವಾಣಿಗಳಲ್ಲಿನ ಸಾಮಾಜಿಕ ಮಾಧ್ಯಮಗಳ ಒಳಬುಟ್ಟಿ(ಇನ್ ಬಾಕ್ಸ್)ಗಳಿಗೆ ಬಂದು ಬೀಳುವ ನೂರಾರು ಸುದ್ದಿಗಳ ಬಗ್ಗೆ ಏನು ಹೇಳುವುದು! ಯಾವುದನ್ನು ಓದುವುದು, ಯಾವುದನ್ನು ಬಿಡುವುದು! ನಿಜ ಸುದ್ದಿ, ಸುಳ್ಳು ಸುದ್ದಿ, ವಾಸ್ತವ ಸುದ್ದಿ, ಉತ್ಪ್ರೇಕ್ಷಿತ ಸುದ್ದಿ, ಬ್ರೇಕಿಂಗ್ ಸುದ್ದಿ, ಶಾಕಿಂಗ್ ಸುದ್ದಿ, ಮೂವತ್ತು ನಿಮಿಷಕ್ಕೆ ಮೂವತ್ತು ಸುದ್ದಿ, ಮೂವತ್ತು ನಿಮಿಷಕ್ಕೆ ಅರವತ್ತು ಸುದ್ದಿ….. ಈ ಸುದ್ದಿ `ಜಾಲ’ದಲ್ಲಿ ನಾವು ಕಳೆದೇಹೋಗುತ್ತೇವೆ! ಇದು ಸಾಲದೆಂಬಂತೆ ನೋಡುವ ಕಣ್ಣುಗಳಿಗೆ, ಕೇಳುವ ಕಿವಿಗಳಿಗೆ, ಪರದೆಯ ಮೇಲೆ ಜಾರಿಸುತ್ತಿರುವ ಬೆರಳುಗಳಿಗೆ ಬಿಡುವೇ ಇಲ್ಲದಂತೆ ಬರುವಂತಹ ಜಾಹಿರಾತುಗಳು, ಉತ್ಪನ್ನ ಪರಿಚಯಗಳು, ಆರೋಗ್ಯ ಸಲಹೆಗಳು, ಪ್ರವಾಸ ಮಾಹಿತಿ, ಸಂಭ್ರಮಾಚರಿತ ವ್ಯಕ್ತಿಗಳ ಉಡುಪು-ಒಡವೆ-ವ್ಯಾಯಾಮ ಅಭ್ಯಾಸಗಳು, ಓದಬೇಕಾದ ಪುಸ್ತಕಗಳು, ಮನೆಯನ್ನು ಒಪ್ಪಓರಣವಾಗಿಸಲು ಕೊಡುವಂತಹ ಸಲಹೆಸೂಚನೆಗಳು, ಗುರುಗಳ ಉಪದೇಶಗಳು, ರೀಲ್‌ಗಳು, `ಡಾನ್ಸ್ ಕವರ್’ಗಳು, ಲಿಪ್ ಸಿಂಕ್‌ಗಳು, ಹಾಸ್ಯಚಟಾಕಿ ಸರಣಿಗಳು…. ಭಗವಂತಾ ಒಂದೇ ಎರಡೇ ….. ನೋಡಲು ಕೇಳಲು ಎರಡಲ್ಲ ಎರಡು ಸಾವಿರ ಕಣ್ಣು ಕಿವಿಗಳಿದ್ದರೂ ಸಾಲುವುದಿಲ್ಲ! ಏನನ್ನೋ ನೋಡಲು ಹೊರಟವರು ತಾವು ಪ್ರಥಮತಃ ಇಟ್ಟುಕೊಂಡಿದ್ದ ಉದ್ದೇಶವನ್ನೇ ಮರೆತು ಸಿಕ್ಕಸಿಕ್ಕದ್ದನ್ನು ನೋಡಿ ನೋಡಿ ಯಾವಾಗಲೋ ಅರಿವು ಬಂದಾಗ `ಅಯ್ಯೋ ಇದೇನು ಮಾಡುತ್ತಿದ್ದೇನೆ!?’ ಎಂದು ಎಚ್ಚರಾಗುವ ಹೊತ್ತಿಗೆ ಅದೆಷ್ಟು ಸಮಯ ಹಾಳಾಗಿರುತ್ತದೋ ಕಾಲಪುರುಷನಿಗೇ ಗೊತ್ತು!
ಇದು ಸಾಲದೆಂಬಂತೆ ಇಂದಿನ ಹದಿಹರೆಯದ ಮಕ್ಕಳು ಮತ್ತು ಯುವಜನರಲ್ಲಿ ಫೋಮೊ ಎಂಬ ಹೊಸ ಮಾನಸಿಕ ಗೀಳು ಶುರುವಾಗಿದೆಯಂತೆ; ಫಿಯರ್ ಆಫ್ ಮಿಸ್ಸಿಂಗ್ ಔಟ್ ಎಂಬ ಭಯವಂತೆ ಇದು. `ನನ್ನ ಪರಿಚಿತರು ಮತ್ತು ಸ್ನೇಹಿತರು ನೋಡುತ್ತಿರುವ, ಮಾಡುತ್ತಿರುವ ಚಟುವಟಿಕೆಗಳನ್ನು ನಾನು ನೋಡುತ್ತಿರುವೆನೋ ಇಲ್ಲವೊ, ಮಾಡುತ್ತಿರುವೆನೊ ಇಲ್ಲವೊ, ಅಯ್ಯಯ್ಯೋ ನನಗೆ ಅವೆಲ್ಲ ತಪ್ಪಿ ಹೋಗುತ್ತಿವೆಯಲ್ಲ’ ಎಂಬ ಚಿಂತಾಗ್ರಸ್ತ ಸ್ಥಿತಿಯಂತೆ ಇದು! ಈಗ ಐವತ್ತು ವಯಸ್ಸು ಮೀರಿರುವ ಪೀಳಿಗೆಗೆ ಈ ಫೋಮೊ ದಿಗಿಲು ಅಷ್ಟಾಗಿ ಕಾಡುತ್ತೋ ಇಲ್ಲವೋ, ಆದರೆ ನಿಧಾನವಾಗಿ ಬೇಕಾದ್ದು ಬೇಡದ್ದು ಎಲ್ಲವೂ ನಮ್ಮ ಗಣಕಯಂತ್ರ/ಚಲನವಾಣಿಯಲ್ಲಿ ಬಂದು ಸೇರುತ್ತಿರುವುದಂತೂ ನಿಜ.
ಮನುಷ್ಯರು ಹೀಗ್ಯಾಕೆ ವರ್ತಿಸುತ್ತಾರೆ? ಭವಿಷ್ಯದ ಬಗ್ಗೆ ಅಭದ್ರತೆಯೇ? ಆಸೆಯೇ? ಏನು ಕಾರಣ ಇದಕ್ಕೆ?
ಪುರಂದರ ದಾಸರ ಸಾಲುಗಳು ನೆನಪಾಗುತ್ತವೆ – “ಇಷ್ಟು ದೊರಕಿದರೆ ಅಷ್ಟು ಬೇಕೆಂಬಾಸೆ, ಅಷ್ಟು ದೊರಕಿದರೆ ಮತ್ತಿಷ್ಟರಾಸೆ, ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ, ನಷ್ಟ ಜೀವನದಾಸೆ ಪುರಂದರ ವಿಠಲ”. ಮನುಷ್ಯನಿಗೆ ಸಾಕು ಎನ್ನುವುದು ಎಷ್ಟು ಕಷ್ಟ ಎಂಬ ವಿಷಯವು ನಮಗೆ ಇದರಿಂದ ಗೊತ್ತಾಗುತ್ತದೆ ಅಲ್ಲವೆ? ಎಷ್ಟಿದ್ದರೂ ನಮಗೆ ಇನ್ನೂ ಬೇಕು ಬೇಕು ಬೇಕು ಬೇಕು. ಒಬ್ಬೊಬ್ಬರು ಹೊಂದಿರುವ ಸಾವಿರ ಸೀರೆಗಳು, ಮುನ್ನೂರು ಚಪ್ಪಲಿಗಳು, ಚಿನ್ನದ ಶೌಚಾಲಯ ಘಟಕಗಳು, ನಲವತ್ತೆಂಟು ಕೈಗಡಿಯಾರಗಳು …. ಬಹಳ ಸಲ ಕೇಳಿದ್ದೇವೆ, ಓದಿದ್ದೇವೆ ಈ ಬಗ್ಗೆ.
******
ಪ್ರಾಚೀನ ಹಿಂದೂ ತತ್ವಜ್ಞಾನದಲ್ಲಿ ಅರಿಷಡ್ವರ್ಗ ಎಂಬ ಪರಿಕಲ್ಪನೆ ಇದೆ. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳೆಂಬ ಆರು ಸೆಳೆತಗಳು ಮನುಷ್ಯನನ್ನು ವಿನಾಶದ ಕಡೆಗೆ ಎಳೆಯುತ್ತವೆ, ಇವನು ಅವನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕು ಎಂಬುದು ಶಾಸ್ತ್ರಗಳು ಹೇಳುವ ಸಂಗತಿ. ಹರಿದಾಸರ ಪದಗಳಲ್ಲಿಯೂ ಇವುಗಳನ್ನು ಆರು ಶತ್ರುಗಳೆಂದು ಕರೆಯಲಾಗಿದೆ. ಇವುಗಳಲ್ಲಿ ಲೋಭ ಎನ್ನುವುದು `ಇನ್ನೂ ಬೇಕು, ಇನ್ನೂ ಬೇಕು’ ಎಂಬ ಭಾವವನ್ನುಂಟು ಮಾಡುವ ಸೆಳೆತ. ಹಾಗಾದರೆ ಇಂದು ನಮ್ಮ ಸುತ್ತಮುತ್ತ ಕಾಣುತ್ತಿರುವ ಈ ಆಧಿಕ್ಯದ ಸಮಸ್ಯೆ ಅರಿಷಡ್ವರ್ಗದಲ್ಲಿ ಲೋಭ ಎಂದು ಕರೆಯಲಾಗುವ ಸೆಳೆತವೇ ತಾನೆ? ಇದರ ಅರ್ಥವೇನೆಂದರೆ ಮನುಷ್ಯನಲ್ಲಿನ ಈ ಸೆಳೆತ ಇಂದು ನಿನ್ನೆಯದಲ್ಲ, ಮನುಕುಲದ ಜನ್ಮವಾದಾಗಿನಿಂದಲೂ ಇದೆ.
ಬೌದ್ಧದರ್ಮದಲ್ಲಿ ಭಿಕ್ಷುಗಳಿಗಿರಬೇಕಾದ ಅಪರಿಗ್ರಹ, ಅಸಂಗ್ರಹ ಎಂಬ ನಿಯಮವು ಆಧಿಕ್ಯ ಮನೋಭಾವಕ್ಕೆ ವಿರುದ್ಧವಾದದ್ದು. ಇದರ ಪರಿಚಯವನ್ನು ನಾವು ಮಾಡಿಕೊಳ್ಳಬೇಕು ಅನ್ನಿಸುತ್ತದೆ.
ಆಧಿಕ್ಯದಿಂದ ಅಸಂಗ್ರಹ ಮನಃಸ್ಥಿತಿಗೆ ಸಾಗುವ ವಿವೇಕವು ಮನುಷ್ಯರಿಗೆ ಯಾವಾಗ ಬರಬಹುದು?

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.
Very well written about ಆಧಿಕ್ಯ