ನಾನು ನೋಡಿದ್ದ ಒಂದು ಅದ್ಭುತ ತಾಳಮದ್ದಳೆ ನೆನಪಿಗೆ ಬಂತು. ಕೃಷ್ಣ ತಾನು ಸಂಧಾನಕ್ಕೆ ಹೋಗುವ ಮುನ್ನ ದ್ರೌಪದಿಯನ್ನು ಭೇಟಿ ಮಾಡುತ್ತಾನೆ. ತುಂಬಿದ ಸಭೆಯಲ್ಲಿ ತನಗೆ ಆದ ಅವಮಾನದ ಗತಿ ಏನು? ಬಿಚ್ಚಿದ ಮುಡಿಯ ಗತಿಯೇನು? ಈಗ ಆ ಗಂಡ ಧರ್ಮರಾಜ ನಿನ್ನನ್ನ ಸಂಧಾನಕ್ಕೆ ಕಳುಹಿಸುತ್ತಿದ್ದಾನೆ. ಯಾಕೆಂದರೆ ಅದು ಕೇವಲ ಹೆಣ್ಣಿಗಾದ ಅವಮಾನ ಅಲ್ಲವಾ ಕೃಷ್ಣ? ನೀನೂ ಆರಾಣೆ ಗಂಡಸಾಗಿಬಿಟ್ಟೆಯಾ? ಎಂದು ಚುಚ್ಚಿ ಕೇಳುತ್ತಾಳೆ. ಸುಮಾರು ಒಂದು ಗಂಟೆ ಅವರ ನಡುವೆ ಸಂವಾದ ನಡೆಯುತ್ತದೆ. ಅವರ ನಡುವಿನ ಆತ್ಮೀಯ ಸಲಿಗೆ, ಒಬ್ಬರಿಗೊಬ್ಬರು ಸ್ಪಂದಿಸುವ ರೀತಿ, ಚತುರ ಸಂಭಾಷಣೆಗಳನ್ನು ಬಿಟ್ಟ ಬಾಯಿ ಬಿಟ್ಟಂತೆಯೇ ನೋಡಿದ್ದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಐದನೆಯ ಬರಹ
‘ಮಹಿಳೆ’ಯರಿಗೆ ಎಂಬ ಸವಲತ್ತು ಕ್ಯೂನಲ್ಲೊ ಬಸ್ಸಿನಲ್ಲೊ ರೈಲಿನಲ್ಲೊ ಬಿಟ್ಟರೆ ಬೇರೆ ಕಡೆ ನಾನು ಸಲ್ಲಲಾರೆ ಅಂತ ನಂಗೆ ಗೊತ್ತು. ಹೀಗಾಗಿಯೇ ಆಧ್ಯಾತ್ಮಿಕ ಶಿಬಿರಕ್ಕೂ ಸಿಕ್ಕಿಕೊಂಡಿರಲಿಲ್ಲ. ನಿನ್ನೆ ಮಾತ್ರ ಅನಿವಾರ್ಯವೇ ಆಗಿತ್ತು. ಯಾರದೋ ಆಮಂತ್ರಣದಿಂದ ತಪ್ಪಿಸಿಕೊಳ್ಳುವುದಕ್ಕೆ ಹೋಗಿ ಸಹಿ ಹಾಕಿದ್ದಾಗಿತ್ತು.
ಹಾಗಂತ ಕುತೂಹಲ ಇರಲಿಲ್ಲ ಅಂತೇನೂ ಇಲ್ಲ. ಆದರೂ ಭಾನುವಾರದ ಸೋಮಾರಿ ಸವಲತ್ತುಗಳಿಂದ ವಂಚಿತಳಾಗಬೇಕಿತ್ತಲ್ಲ?
ಮೊದಲ ಅರ್ಧ ಗಂಟೆ ಭಜನೆ ಅಂತ ಇತ್ತು. ನನಗೆ ಭಜನೆ ಅಂದರೇ ಅಲರ್ಜಿ. ಅಲ್ಲಿ ಶಾಸ್ತ್ರೀಯ ಸಂಗೀತದ ಗುಣವಿದ್ದರೆ ಮಾತ್ರ ಭಕ್ತಿ ಇರಬಹುದು ಅಂತ ನನ್ನ ವೈಯುಕ್ತಿಕ ನಿಲುವು. ಚಿಕ್ಕಂದಿನಲ್ಲಿ ಸಿನಿಮಾ ಹಾಡಿನ ಧಾಟಿಯಲ್ಲಿ ದೇವರ ಹಾಡುಗಳನ್ನು ಹಾಡುತ್ತಿದ್ದ ಬಿಂಕದ ಸಿಂಗಾರಿ ಸಂಬಂಧಿಯ ಮೇಲಿನ ಮತ್ಸರಕ್ಕೊ ಏನೊ, ಅವು ಇಷ್ಟವಾಗುತ್ತಲೇ ಇರಲಿಲ್ಲ.
ವೆಲ್ಲಿಯಲ್ಲಿ ಹರೇ ಕೃಷ್ಣಗೆ ತಿನ್ನಲು ಹೋದಾಗೆಲ್ಲಾ ಗೊಂಯ್ ಅನ್ನುವ ಭಜನೆ ಹಾಕಿ ಸಾಯಿಸುತ್ತಿದ್ದರು. ನಾನು ಹರಿ ಸಾಕಷ್ಟು ರಿಸರ್ಚ್ ಮಾಡಿದ ಮೇಲೆ ಮಧ್ಯಾಹ್ನದ ಹೊತ್ತು ಹಾಕುವುದಿಲ್ಲ ಅಂತ ಗೊತ್ತಾಗಿ ಆ ನಂತರ ಹೋದರೆ ಮಧ್ಯಾಹ್ನವೇ.
ಭಜನೆ ಎಂದರೇ ಗೋಳು ಎಂಬ ನನ್ನ ಭಾವನೆ ಬದಲಾಗಿದ್ದು ಆಶ್ರಮದ ಸಂಧ್ಯಾರತಿಗೆ ಹೋದಾಗಲೇ. ಪ್ರಾರ್ಥನೆ ಕೇಳಿ ನನ್ನ ಕಣ್ಣಲ್ಲಿ ನೀರೂರುವುದು ಸಾಮಾನ್ಯವೆ?
ಇರಲಿ, ನಿನ್ನೆಯ ಹೆಂಗಸರ ಭಜನೆ ಹೇಗೋ ಇತ್ತು. ಕಣ್ಣು ಮುಚ್ಚಿಕೊಂಡು ನನ್ನದೇ ಲೋಕದಲ್ಲಿ ವಿಹರಿಸಲು ಸಾಧ್ಯವಿರಲಿಲ್ಲ. ಅಮೃತಶಿಲೆಯಲ್ಲಿ ಮೈದಳೆದಿದ್ದ ಗುರುವನ್ನು ಕಣ್ಣು ತುಂಬಿಕೊಳ್ಳಬೇಕಿತ್ತು. ಜೊತೆಗೆ ಗೋಡೆಯ ಮೇಲೆ ಸುತ್ತ ಹಾಕಿದ್ದ ಜಗತ್ತಿನ ಹಲವಾರು ಧರ್ಮಗಳ ಚಿಹ್ನೆಗಳು ನನ್ನ ಗಮನವನ್ನು ಸೆಳೆದು ಸರ್ವಧರ್ಮಸ್ವರೂಪದ ಆಶಯ ಹಿತವೆನ್ನಿಸಿತು.
‘ಮನುಷ್ಯತ್ವದ ವಿಕಾಸ’ದ ಬಗ್ಗೆ ಮಾತಾಡಿದ ಸ್ವಾಮೀಜಿಯವರ ಧಾಟಿ ಆತ್ಮೀಯವೆನ್ನಿಸಿತು. ಆಶ್ರಮದ ಸಮಯಪಾಲನೆಯ ಬಗ್ಗೆ ಎರಡು ಮಾತಿಲ್ಲ.
ನನಗೆ ಕುತೂಹಲವಿದ್ದದ್ದು ‘ಮಹಾಭಾರತದ ಮಹಿಳೆಯರ ಸಂದೇಶ’ ಎಂಬ ಉಪನ್ಯಾಸದ ಬಗ್ಗೆ. ಯಾವ ಮಹಿಳೆಯರನ್ನು ಹೇಗೆ ಅರ್ಥೈಸುತ್ತಾರೆ ಎನ್ನುವುದರ ಬಗ್ಗೆ.
ಮಾತಾಡಲಿದ್ದವರು ಮೊದಲು ಕನ್ನಡ ಪ್ರಾಧ್ಯಾಪಕರಾಗಿದ್ದವರು. ಪಾಂಡಿತ್ಯವಿತ್ತು. ಕೇಳುಗರನ್ನು ಹಿಡಿದಿಟ್ಟುಕೊಳ್ಳಬಲ್ಲ ಧ್ವನಿಯಿತ್ತು. ಮಾಹಿತಿಯಿತ್ತು. ಹಾಸ್ಯವಿತ್ತು. ಬರೆದುಕೊಳ್ಳಬಲ್ಲ ಒಳನೋಟಗಳೂ ಇದ್ದವು.
ಸಭಿಕರನ್ನು ‘ಮಾತೆಯರೆ’ ಎಂದು ಸಂಬೋಧಿಸುತ್ತಿದ್ದ ಪಂಡಿತರಿಗೆ ಹಿಂದೆ ಸಾಲಾಗಿ ಕುಳಿತಿದ್ದ ಹದಿ ಹರೆಯದ ಹುಡುಗಿಯರು ಕಣ್ಣಿಗೆ ಬಿದ್ದಿಲ್ಲವಾ ಎಂದು ಒಮ್ಮೆ ಹಿಂತಿರುಗಿ ನೋಡಿದೆ. ‘ಶ್ರೀಮತಿ’ ಎಂದರೆ ಪ್ರಖರವಾದ ಬುದ್ಧಿಶಕ್ತಿ ಉಳ್ಳವಳು ಎಂದು ಅರ್ಥ. ಆದರೆ ಅದನ್ನು ಮದುವೆಯ ಜೊತೆ ತಳುಕು ಹಾಕಿರುವುದರಿಂದ ‘ಶ್ರೀಮತಿಯರೆ’ ಅಂತಲೂ ಕರೆಯಲಾಗುವುದಿಲ್ಲವೆ!
ಒಮ್ಮೆ ತುಂಬ ಬುದ್ಧಿವಂತೆಯಾದ ನನ್ನ ವಿದ್ಯಾರ್ಥಿನಿ ಒಬ್ಬಳು ಮದುವೆ ಮಾಡಿಕೊಂಡ ಮೇಲೆ ದಾರಿಯಲ್ಲಿ ಎಲ್ಲೊ ಸಿಕ್ಕಿದ್ದಳು. ‘ಮದುವೆಯಾದ ಮೇಲೆ ನಾವೆಲ್ಲಾ ಶ್ರೀಮತಿಯರಾಗ್ತೀವಾ? ನನ್ನ ಬುದ್ಧಿಶಕ್ತಿಯೆಲ್ಲ ಎಕ್ಹೊರಟೋಗಿದ್ದು ಮದುವೆ ಮಾಡಿಕೊಂಡ ಮೇಲೆಯೇ!’ ಎಂದು ಕಹಿಯಾಗಿ ಹೇಳಿದ್ದು ನೆನಪಾಯಿತು.
ಇರಲಿ ‘ಮಾತೆ’ ಎನ್ನುವುದು ಜೈವಿಕತೆಗೆ ಸಂಬಂಧಪಟ್ಟಿದ್ದಲ್ಲ. ಅದೊಂದು ಮನೋಭಾವ. ಶಾರದಾ ಮಾತೆ, ಮದರ್ ತೆರೇಸಾ ಏನು ಹೆತ್ತಿದ್ದರಾ ಎಂದುಕೊಂಡು ತೆಪ್ಪಗಾದೆ.
ಮಹಾಭಾರತದ ಮೊದಲ ಮಹಿಳೆ ಸತ್ಯವತಿ ಎಂದಾಗ ಮಾತ್ರ ನನ್ನ ತಲೆ ಟುಸ್ಸೆಂದಿತು. ಯಾರೋ ಕೇಳಿಯೇ ಕೇಳಿದರು, ‘ಮೊದಲ ಸ್ತ್ರೀ ಗಂಗೆ ಅಲ್ಲವಾ ಸರ್?’
ಪಂಡಿತರು ಪಾಪ ಏನೋ ಸಮಜಾಯಿಷಿ ಕೊಟ್ಟು ಮುಂದೆ ಹೋದರು. ಗಂಗೆ ಗ್ರೀಕ್ ನಾಟಕದ ಮೆಡಿಯಳಂತೆ. ಅಥವಾ ಅವಳು ಇವಳಂತೆ. ತಾನು ಏನು ಮಾಡಿದರೂ ತನ್ನನ್ನು ತಡೆಯಬಾರದು, ತಡೆದರೆ ತಾನು ಸೀದಾ ಸ್ವರ್ಗಕ್ಕೆ ವಾಪಸ್ ಎಂದು ಷರತ್ತು ಹಾಕಿ ತಾನೆ ಗಂಗೆ ಶಂತನು ರಾಜನ ಜೊತೆ ಇದ್ದದ್ದು? ತನ್ನ ಬಸಿರಲ್ಲಿ ಬೆಳೆದ ಮಗುವಿನ ಮೇಲಿನ ಹಕ್ಕು ತನ್ನದೇ. ಸಾಯಿಸುತ್ತೇನೊ, ಪಾಲಿಸುತ್ತೇನೊ ಅದು ತನ್ನ ಆಯ್ಕೆ. ಎಂಟನೆಯ ಮಗು ದೇವವ್ರತ (ಮುಂದೆ ಭೀಷ್ಮನಾದವ) ಹುಟ್ಟಿದಾಗಲೂ ಅದೇ ಅವಳ ನಿಲುವು. ತಡೆಯಲು ಯತ್ನಿಸಿ ‘ಯಾಕೆ’ ಎಂದು ಕೇಳಿದ ತಕ್ಷಣ ಮಗುವನ್ನು ಬಿಟ್ಟು ಸ್ವರ್ಗಕ್ಕೆ ನಡೆದ ಗಂಗೆ ಹೆಣ್ಣಿನ ಆಯ್ಕೆಯ ಹಕ್ಕಿಗೊಂದು ಪ್ರತಿಮೆಯೂ ಆಗಬಹುದು. ಮಹಾಭಾರತ ಅಲ್ಲಿಂದಲೇ ಪ್ರಾರಂಭವಾದರೂ ಗಂಗೆಯನ್ನು ಸ್ವರ್ಗಕ್ಕೆ ಕಳುಹಿಸಿದ ಮೇಲೆ ಗಂಡಸರು ತಮಗೆ ಬೇಕಾದ ಆದರ್ಶ ಮಹಿಳೆಯರನ್ನು ತಮಗೆ ಬೇಕಾದ ರೀತಿಯಲ್ಲಿ ಆಯ್ದುಕೊಳ್ಳುತ್ತಾರೆ — ಉಪದೇಶದ ಸಲುವಾಗಿ. ಸಾಮಾಜಿಕ ಯಥಾಸ್ಥಿತಿಯನ್ನು ಕಾಪಾಡುವ ಸಲುವಾಗಿ.
ಸರಿ, ಸತ್ಯವತಿ ಯಾಕೆ? ಶಂತನು ಮಹಾರಾಜ ತನ್ನನ್ನು ಮದುವೆಯಾಗೆಂದು ಕೇಳಿದಾಗ ಈ ಅಂಬಿಗ ಹೆಣ್ಣು ‘ನೀವು ಕೇಳುವದನು ಎಮ್ಮಯ ತಂದೆಯನು ಕೇಳಿರೇ’ ಅಂತ ಹೇಳಿತಂತೆ. ‘ಈಗಿನ ಕಾಲದ ಹೆಣ್ಣು ಮಕ್ಕಳಿಗೆ ನೋಡಿ ಸತ್ಯವತಿ ಎಂತಾ ಸಂದೇಶವನ್ನು ಕೊಟ್ಟಿದಾಳೆ!’
ಆಮೇಲೆ ಗಾಂಧಾರಿ! ಗಂಡ ಕುರುಡ ಅಂತ ತಿಳಿದದ್ದೇ ಕಣ್ಣುಪಟ್ಟಿ ಕಟ್ಟಿಕೊಂಡ ಮಹಾ ಪತಿವ್ರತೆ! ಮಗನಿಗೆ ಯುದ್ಧ ಮಾಡಬೇಡ ಅಂತ ಬುದ್ಧಿ ಹೇಳಿದ ಮಹಾಮಾತೆ! ಯುದ್ಧಕ್ಕೆ ಹೋಗುವ ಮುನ್ನ ಕಾಲಿಗೆರಗಿದ ಮಗನಿಗೆ ‘ನೀನು ಧರ್ಮವನ್ನು ಬಿತ್ತಲಿಲ್ಲ. ಜಯ ಹೇಗೆ ಸಿಗಲು ಸಾಧ್ಯ?’ ಎಂದು ನೇರವಾಗಿ ಹೇಳಲು ಹೆದರದ ತಾಯಿ.
ಮತ್ತೆ ಕುಂತಿ? ಸಣ್ಣ ವಯಸ್ಸಿನಲ್ಲೇ ಐದು ಪ್ರಚಂಡ ಮಂತ್ರಗಳನ್ನು ಪಡೆದು ಕುತೂಹಲದ ದೆಸೆಯಿಂದ ಸೂರ್ಯಮಂತ್ರವನ್ನು ಪಠಿಸಿ ಕರ್ಣನನ್ನು ಪಡೆದವಳು. Curiosity kills the cat! ಗೊತ್ತಾಯ್ತಾ ಹೆಮ್ಮಕ್ಕಳೇ!
ಆಮೇಲೆ ಮಂತ್ರಗಳ ಬಲದಿಂದ ಮೂರು ಮಕ್ಕಳನ್ನು ಪಡೆದು ಉಳಿದ ಎರಡು ಮಂತ್ರಗಳನ್ನು ಉದಾರವಾಗಿ ತನ್ನ ಸವತಿ ಮಾದ್ರಿಗೆ ಕೊಟ್ಟವಳು.
ಮಂತ್ರಬಲವಾ? ಗಂಡ ಪಾಂಡುಗೆ ಏನಾಗಿತ್ತು?
ಹುಶ್ …ಶ್…ಶ್…
ಅಷ್ಟೇ ಅಲ್ಲ, ಪಾಂಡು ಸತ್ತಾಗ ಮಾದ್ರಿ ಚಿತೆಯೇರಿದಳು. ಕುಂತಿ ಅವಳ ಮಕ್ಕಳನ್ನೂ ಒಂದಿಷ್ಟೂ ಭೇದಭಾವವಿಲ್ಲದೆ ತನ್ನದರಂತೆಯೇ ಬೆಳೆಸಿದ ಮಹಾಮಾತೆ! ಏನು ಔದಾರ್ಯ!
ಇನ್ನು ದ್ರೌಪದಿ! ಪಡಬಾರದ ಕಷ್ಟಪಟ್ಟಳು ಆ ಹೆಣ್ಣು! ಯುದ್ಧದ ಹದಿನೆಂಟನೆಯ ದಿನ ಅಶ್ವತ್ಥಾಮ ತನ್ನ ಮಕ್ಕಳನ್ನು ಪಾಂಡವರು ಅಂತ ಎಣಿಸಿ ಕೊಚ್ಚಿ ಹಾಕಿದಾಗ, ಪಾಂಡವರು ಅವನನ್ನು ಎಳೆದು ತಂದಾಗ, ‘ನನ್ನ ಮಕ್ಕಳು ಹಿಂದೆ ಬರುವರೆ? ಅಲ್ಲದೆ ಅಶ್ವತ್ಥಾಮ ಗುರುಪುತ್ರ. ಅವನ ಹತ್ಯೆ ಮಾಡಲಾಗದು,’ ಎಂದು ಕ್ಷಮಿಸಿದ ಭೂಮಿತಾಯಿ ದ್ರೌಪದಿ!
ಕೊನೆಗೆ ಇನ್ನೊಂದು ಅಪ್ರಧಾನ ಸ್ತ್ರೀಪಾತ್ರ. ಮಾದಲಸ. ಮಗ ಯುದ್ಧ ಮಾಡಲಾಗದೇ ಕುಸಿದಾಗ ಕಣ್ಣೆದುರಿಗೆ ಇಲ್ಲದಿದ್ದರೂ ತಾನಿತ್ತಿದ್ದ ಉಂಗುರದೊಳಗೆ ಬಚ್ಚಿಟ್ಟಿದ್ದ ಸಂಪುಟದ ಮೂಲಕ ಜೀವಶಕ್ತಿಯನ್ನು ತುಂಬಿದ ಮಹಾತಾಯಿ!
ಪಂಡಿತರಿಗೆ ಮಹಾಭಾರತದ ಸ್ತ್ರೀ ಪಾತ್ರಗಳ ಆಳಗಲಗಳು ತಿಳಿದಿಲ್ಲ ಅಂತೇನೂ ಅಲ್ಲ. ಆದರೆ ಈ ವೇದಿಕೆಗೆ ಅವೆಲ್ಲಾ ತಕ್ಕವಲ್ಲ!
ನಾನು ನೋಡಿದ್ದ ಒಂದು ಅದ್ಭುತ ತಾಳಮದ್ದಳೆ ನೆನಪಿಗೆ ಬಂತು. ಕೃಷ್ಣ ತಾನು ಸಂಧಾನಕ್ಕೆ ಹೋಗುವ ಮುನ್ನ ದ್ರೌಪದಿಯನ್ನು ಭೇಟಿ ಮಾಡುತ್ತಾನೆ. ತುಂಬಿದ ಸಭೆಯಲ್ಲಿ ತನಗೆ ಆದ ಅವಮಾನದ ಗತಿ ಏನು? ಬಿಚ್ಚಿದ ಮುಡಿಯ ಗತಿಯೇನು? ಈಗ ಆ ಗಂಡ ಧರ್ಮರಾಜ ನಿನ್ನನ್ನ ಸಂಧಾನಕ್ಕೆ ಕಳುಹಿಸುತ್ತಿದ್ದಾನೆ. ಯಾಕೆಂದರೆ ಅದು ಕೇವಲ ಹೆಣ್ಣಿಗಾದ ಅವಮಾನ ಅಲ್ಲವಾ ಕೃಷ್ಣ? ನೀನೂ ಆರಾಣೆ ಗಂಡಸಾಗಿಬಿಟ್ಟೆಯಾ? ಎಂದು ಚುಚ್ಚಿ ಕೇಳುತ್ತಾಳೆ. ಸುಮಾರು ಒಂದು ಗಂಟೆ ಅವರ ನಡುವೆ ಸಂವಾದ ನಡೆಯುತ್ತದೆ. ಅವರ ನಡುವಿನ ಆತ್ಮೀಯ ಸಲಿಗೆ, ಒಬ್ಬರಿಗೊಬ್ಬರು ಸ್ಪಂದಿಸುವ ರೀತಿ, ಚತುರ ಸಂಭಾಷಣೆಗಳನ್ನು ಬಿಟ್ಟ ಬಾಯಿ ಬಿಟ್ಟಂತೆಯೇ ನೋಡಿದ್ದೆ. ಬದುಕಿನಲ್ಲಿ ಬಿಕ್ಕಟ್ಟು ಹಾಯುವಾಗ ಅನುಭವಿಸುವ ತಲ್ಲಣ ತಳಮಳಗಳನ್ನು ಸಶಕ್ತವಾಗಿ ಹಿಡಿಯುವುದೇ ಕಲೆಗಿರುವ ಶಕ್ತಿ.
‘ಮಾತೆಯರೆ’ ಅಂತ ಕರೆಯಲ್ಪಟ್ಟರೂ ಸಹ ಯಾಕೊ ಅಜ್ಜ ಬುದ್ಧಿ ಬೆಳೆಯದ ಮೊಮ್ಮಕ್ಕಳಿಗೆ ಕತೆ ಹೇಳಿದಂತೆ ಅನ್ನಿಸಿತ್ತು! ಇಷ್ಟೊಂದು ವೈಟ್ ವಾಶ್ ಬೇಕಾ?

ಸಾಂಸ್ಥಿಕತೆ ಮತ್ತು ಪತ್ರಿಕೆ
ಆಶ್ರಮದ ಸಾಂಸ್ಥಿಕತೆಯನ್ನು ಸಾರಾಸಗಟಾಗಿ ಒಪ್ಪಿಕೊಳ್ಳುವುದು ನನ್ನ ಮಟ್ಟಿಗೆ ದೂರದ ಮಾತೇ. ಅದರೊಳಗೆ ಇರುವವರು ಆ ದಾಕ್ಷಿಣ್ಯಕ್ಕೆ ಸಿಲುಕಿರಬಹುದು.
ನಾನು ಗ್ರಹಿಸಿದಂತೆ ಭಕ್ತಿ ಎನ್ನುವುದೇ ಸಾಮಾಜಿಕ ಯಥಾಸ್ಥಿತಿಯನ್ನು (ಅಂದರೆ ಜಾತಿ ವ್ಯವಸ್ಥೆಯನ್ನು ಮತ್ತು ವರ್ಗ-ಲಿಂಗ ತಾರತಮ್ಯವನ್ನು) ಇರುವಲ್ಲಿಯೇ ಇರುವಂತೆ ನೋಡಿಕೊಳ್ಳುವುದು. ನಾನು ಒಮ್ಮೆ ಹಾಜರಿದ್ದ ಮಹಿಳಾ ಅಧ್ಯಾತ್ಮಿಕ ಶಿಬಿರದ ನಿಲುವುಗಳನ್ನು ಸೂಕ್ಷ್ಮವಾಗಿ ಗ್ರಹಿಸಲು ಪ್ರಯತ್ನಿಸಿದಾಗ ಅದು ಹೊಳೆದಿತ್ತು. ಅದರ ಬಗ್ಗೆ ಈ ಹಿಂದೆ ಬರೆದಿದ್ದೇನೆ.
ಸಾಂಸ್ಥಿಕತೆಯ ಬೇರೆ ಬೇರೆ ಮಗ್ಗಲುಗಳನ್ನು ಸಹ ನೋಡಬೇಕು. ಆಶ್ರಮದ ಮಾಸಿಕ ಪತ್ರಿಕೆ ಅದರಲ್ಲಿ ಒಂದು. ನನ್ನ ಗ್ರಹಿಕೆಗೆ ದಕ್ಕಿದ ಪ್ರಕಾರ ಅಲ್ಲಿ ಭಕ್ತಿಪುರಾಣವೇ ಹೆಚ್ಚು. ನನ್ನ ಕಣ್ಣಿಗಂತೂ ಅದು ಅಮಲೇರಿಸುವ ಪ್ರಯತ್ನದಂತೆ ತೋರುತ್ತದೆ. ಅಲ್ಲಿ ಹೆಚ್ಚು ವಿವೇಕಾನಂದರಿಲ್ಲ. ‘ಭಕ್ತಿ-ತೀರ್ಥಯಾತ್ರೆ-ಕಾಲಿಗೆ ಬೀಳು’ ಸಂಸ್ಕೃತಿಯ ವೈಭವ!
ನಾನು ಪತ್ರಿಕೆಗೆ ಕಳುಹಿಸಿದ್ದ ಎರಡು ಲೇಖನಗಳ ಬಗ್ಗೆ ‘ಮಹಾಮೌನ’ ವಹಿಸಲಾಗಿತ್ತು. ಅದರಲ್ಲಿ ಒಂದು, ‘ಕನ್ನಡ ಆಧುನಿಕ ಸಾಹಿತ್ಯದಲ್ಲಿ ಪ್ರಾರ್ಥನೆ’.
ಸಂಪಾದಕರು ಪೂರ್ವಾಶ್ರಮದಲ್ಲಿ ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿದ್ದರೇನೋ ಸರಿಯೇ. ಆದರೆ ಸನ್ಯಾಸ ಮತ್ತು ಸಾಂಸ್ಥಿಕತೆ ಅವರನ್ನು ರೂಪಾಂತರಿಸಿರಬಹುದು. ಅಲ್ಲಿ, ಭಕ್ತಿ, ಸಂಸ್ಕೃತ, ವೇದ-ನಿಷ್ಠೆ ನಿಲುವುಗಳು ನಾನು ಗಮನಿಸಿದಂತೆ ಢಾಳಾಗಿ ಕಣ್ಣಿಗೆ ಹೊಡೆಯುತ್ತವೆ. ಅವರ ಪ್ರವಚನಗಳಲ್ಲಿಯೂ ಸಹ ಕನ್ನಡ ಸಾಹಿತ್ಯದ ಕಿಂಚಿತ್ ಉಲ್ಲೇಖವೂ ಇರಲಿಲ್ಲ.
ಒಮ್ಮೆ ಪ್ರಾಸಂಗಿಕವಾಗಿ- ‘ನನಗೆ ಆಧ್ಯಾತ್ಮ ರಾಮಾಯಣ’ ಇದೆ ಎನ್ನುವುದೇ ಗೊತ್ತಿರಲಿಲ್ಲ. ಕುವೆಂಪುರ ‘ರಾಮಾಯಣ ದರ್ಶನಂ’ ಆ ಮಹಾಗಾಥೆಯನ್ನು ಅಧ್ಯಾತ್ಮೀಕರಿಸಿದಷ್ಟು ಮತ್ತು ಮಾನವೀಕರಿಸಿದಷ್ಟು ಬೇರೆ ರಾಮಾಯಣಗಳು ಮಾಡಿದಂತೆ ಅನ್ನಿಸಲಿಲ್ಲ. ಜೊತೆಗೆ ನನಗೆ ನಾಗಚಂದ್ರನ ರಾಮಾಯಣವೂ ಇಷ್ಟವಾಗಿತ್ತು — ಎಂದು ಹೇಳಿದೆ.
ಎ.ಕೆ. ರಾಮಾನುಜಂ ಅವರ three hundred ramayanas ಲೇಖನ ಪಠ್ಯವಾಗಿದ್ದನ್ನು ವಿರೋಧಿಸಿ ಹಿಂದೂಕೋಮುವಾದಿಗಳು ಪ್ರತಿಭಟನೆ ನಡೆಸಿದ್ದು ನೆನಪಿನಲ್ಲಿತ್ತು. ಅಂದರೆ ಈ ಅದ್ಭುತ ವೈವಿಧ್ಯಮಯ ದೇಶದಲ್ಲಿ ವೈವಿಧ್ಯತೆಯ ಪರಿಕಲ್ಪನೆಯನ್ನೇ ಧಿಕ್ಕರಿಸಿ ಒಂದೇ ಒಂದು ಬಗೆಯ ಕತೆಯನ್ನು ಹೇರುವ ಹುನ್ನಾರ.
ಫಟ್ಟನೆ ಅವರಿಂದ ಪ್ರತಿಕ್ರಿಯೆ ಬಂದಿತ್ತು. ‘ನಾವು ಪ್ರತಿನಾಯಕ ಸಂಸ್ಕೃತಿಯನ್ನು ವೈಭವೀಕರಿಸುವ ಎಡಪಂಥೀಯರಲ್ಲ.’
ಹೌದಪ್ಪಾ! ನೀವು ‘ಬಲ’ವಾನರು!
ಅರೆ! ನಾನೆಲ್ಲಿಗೆ ಬಂದು ಬಿದ್ದಿದ್ದೇನೆ? ವಿವೇಕಾನಂದ ಇಲ್ಲಿ ಇಲ್ಲವೇ? ಆಶ್ರಮ ಎಂಬ ಸಾಂಸ್ಥಿಕತೆ ಆರೆಸ್ಸೆಸ್ ಕೈಯಲ್ಲಿ ಸಿಕ್ಕಿಬಿದ್ದಿರುವ ಚಕ್ಕಳದ ಗೊಂಬೆಯೇ? ಮಹಿಳಾ ಆಧ್ಯಾತ್ಮಿಕ ಶಿಬಿರದಂತಹ ಕಾರ್ಯಕ್ರಮ ಒಂದು ತರದಲ್ಲಿ ಮಾಡುವುದನ್ನು ಪತ್ರಿಕೆ ಇನ್ನೊಂದು ರೀತಿಯಲ್ಲಿ ಮಾಡುತ್ತಿದೆಯೇ?
ಅಲ್ಲಿ ನ್ಯೂಯಾರ್ಕಿನಲ್ಲಿ, ಮತ್ತು ಕ್ಯಾಲಿಫೋರ್ನಿಯಾದಲ್ಲಿ ನಡೆಯುವ ಪ್ರವಚನಗಳಲ್ಲಿ ಕಾಣಬರುವ ವಿವೇಕಾನಂದೀಯ ಎನ್ನಬಹುದಾದ ಧೀಮಂತ ದೃಷ್ಟಿ ಇಲ್ಲಿ ಯಾಕೆ ಇಲ್ಲ?
(ಅದಕ್ಕೆ ಏನೋ, ಇಲ್ಲಿ ಸ್ವ-ವಿಮರ್ಶೆ ಹೋಗಲಿ, ಅಲ್ಲಿರುವ ನಗು, ಹಾಸ್ಯಗಳು ಇಲ್ಲಿ ಮಹಾ-ನಾಪತ್ತೆ!)
*****
ಭಕ್ತಿಚಳುವಳಿ ಹುಟ್ಟಿಸಿದ ಭಕ್ತೆ-ಕವಿಗಳ ಬಗ್ಗೆ ನಾನು ಬರೆದ ಲೇಖನ ಇನ್ನೊಂದು! ಅದು ವೇದ-ವಿರೋಧ, ಬೌದ್ಧ-ಪರ, ಹೆಣ್ಣು-ಪರ ಅಂತ ಸಂಪಾದಕರಿಗೆ ಅನ್ನಿಸಿತೋ ಏನೋ. ಹಾಗಾಗಿ ಅದು ಪತ್ರಿಕೆಯ ‘ವಿವೇಕ’ ಕ್ಕೆ ಹೊಂದಲಿಲ್ಲ ಎಂದುಕೊಂಡಿದ್ದೇನೆ.
ಅದರ ಎರಡು ಪ್ಯಾರಾಗಳು ಹೀಗಿವೆ:
ಭಕ್ತಿ ಚಳುವಳಿ ಹೆಣ್ಣು ಮತ್ತು ಧರ್ಮದ ನಡುವಿನ ಸಂಬಂಧವನ್ನು ಸೃಜನಶೀಲವಾಗಿ ಮರುರೂಪಿಸಿದ ಶಕ್ತಿ. ಹೆಣ್ಣನ್ನು ಆಚೆಗಿಟ್ಟಿದ್ದ ವೇದೀಯ ಆಚರಣೆಗಳ ಬದಲಾಗಿ ಭಕ್ತೆಯರು ತಮ್ಮದೇ ದೇವರನ್ನು ಸೃಷ್ಟಿಸಿಕೊಂಡರು. ಅವನನ್ನು ತಮ್ಮ ತಂದೆಯಾಗಿ, ಗಂಡನಾಗಿ ಇತ್ಯಾದಿ ಸಂಬಂಧಾತ್ಮಕ ನೆಲೆಯಲ್ಲೇ ಅವನೊಂದಿಗೆ ಸಂವಾದಿಸಿದರು. ಹೆಣ್ಣುಜನ್ಮಕ್ಕೆ ‘ಸಹಜ’ ಎಂದು ಪಿತೃಶಾಹಿ ವ್ಯವಸ್ಥೆ ಒಪ್ಪಿಕೊಂಡಿದ್ದ ಗೋಳೆಲ್ಲವೂ ಅಲ್ಲಿ ಹಾಡಾಗಿ ಹರಿಯಿತು. ‘ಸ್ತ್ರೀಸಹಜ ಲಜ್ಜೆ’ ಎಂಬ ಪರಿಕಲ್ಪನೆಯೇ ಮರು ಪರೀಕ್ಷೆಗೆ ಒಳಗಾಯಿತು. ಮೌಖಿಕ ಸಂಪ್ರದಾಯವನ್ನು ರೂಪಿಸಿದ, ಶಕ್ತಿಯನ್ನಿತ್ತ ನೂರಾರು ಕವಿಗಳು ಸಮಾಜದ ಅಂಚಿನ ಸಮುದಾಯಗಳಿಗೆ ಸೇರಿದ ಜನರು ಮತ್ತು ಹೆಂಗಸರು. ಅವರೆಲ್ಲರೂ ಶಿಷ್ಟ ಸಾಹಿತ್ಯದಲ್ಲಿ ಕಾಣಸಿಗುವುದೇ ಇಲ್ಲ.
ಭಕ್ತಿ ಚಳುವಳಿಯ ಆದಿಮ ರೂಪವನ್ನು ಕ್ರಿಸ್ತಪೂರ್ವದ ಆರನೆಯ ಶತಮಾನದ ಬೌದ್ಧಧರ್ಮದಲ್ಲಿ ಗುರುತಿಸಲಾಗಿದೆ. ಬುದ್ಧನ ಕಾಲದಲ್ಲಿ ಬದುಕಿದ್ದ ಬೌದ್ಧಿನಿಯರು ಅಥವಾ ತೇರಿಯರು ಬೌದ್ಧಸಂಘ ಹೇಗೆ ತಮ್ಮ ಜೀವನವನ್ನೇ ಬದಲಾಯಿಸಿತು ಎಂದು ಹಾಡಿದ್ದಾರೆ. ಕ್ರಿಸ್ತಶಕ ಸುಮಾರು ಎಂಭತ್ತರಲ್ಲಿ ಅದು ಬರವಣಿಗೆಯ ರೂಪಕ್ಕೆ ಬಂದು ತೇರಿಗಥ ಎಂದು ಕರೆಯಲ್ಪಟ್ಟಿತು. ಅದರಲ್ಲಿ ೫೨೨ ಚರಣಗಳಿದ್ದು ಹೆಣ್ಣಿನ ದಿನನಿತ್ಯದ ಬದುಕಿನ ಅಗಾಧ ದುಃಖವನ್ನು ಹಾಗೂ ಬೌದ್ಧಸಂಘ ಅವರಿಗೆ ಆಶ್ರಯ ನೀಡಿದ ರೀತಿಯನ್ನು ಅದರಲ್ಲಿ ದಾಖಲಿಸಲಾಗಿದೆ. ಸಮಾಜದ ಎಲ್ಲ ಸ್ತರಗಳ ಹೆಂಗಸರು ಬೌದ್ಧಧರ್ಮದಲ್ಲಿದ್ದ ಸಮಾನತೆಯ ಆಶಯದತ್ತ ಆಕರ್ಷಿತರಾಗಿದ್ದರು ಎನ್ನುವುದು ಚಾರಿತ್ರಿಕವಾಗಿ ದಾಖಲೆಯಾಗಿದೆ.

ಕೆಲವು ದಿನಗಳ ಹಿಂದೆ ಕಾನ್ಫರೆನ್ಸ್ ಒಂದರಲ್ಲಿ ‘ಸಾಂಸ್ಥಿಕ ಬ್ರಾಹ್ಮಣೀಯತೆ’ ಬಗ್ಗೆ ಯಾರೋ ಕೇಳಿದ್ದರು. ಸಾಂಸ್ಥಿಕತೆಯ ಸ್ಥೂಲ ರೂಪ ಬೇರೆ. ಅಲ್ಲಿ ಸರ್ವಧರ್ಮ ಇತ್ಯಾದಿಗಳ ಬಗ್ಗೆ ಆಗಾಗ್ಗೆ ಅಲ್ಲಿ ಇಲ್ಲಿ ಹೆಸರುಗಳನ್ನು ಉದುರಿಸಬಹುದು. ಕಬೀರನನ್ನು ಹಾಡಬಹುದು. ನಜರುಲ್ ಇಸ್ಲಾಂ ಸಹ ಅಲ್ಲಿ ಕಾಣಿಸಿಕೊಳ್ಳಬಹುದು.
ಆದರೆ ಸೂಕ್ಷ್ಮರೂಪವನ್ನು ಗಮನಿಸುವ ಕೆಟ್ಟಬುದ್ಧಿ ನನ್ನಂತಹ ‘ಎಡಪಂಥೀಯ’ರಿಗೆ ಇದೆಯಲ್ಲ?

ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ, ಲೇಖಕಿ, ಮತ್ತು ಭಾಷಾಂತರಕಾರ್ತಿ. ವೈದೇಹಿ (An Afternoon with Shakuntala and Other Stories) ಮತ್ತು ಅಗ್ರಹಾರ ಕೃಷ್ಣಮೂರ್ತಿಯವರ ಕೃತಿಗಳು (Love and Water Flow Together) [(ಕುವೆಂಪು ಭಾಷಾಭಾರತಿ ಪ್ರಶಸ್ತಿ (2023) ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಅನುವಾದಿತ ಪುಸ್ತಕ ಪ್ರಶಸ್ತಿ (2023)] ಇಂಗ್ಲೀಷಿಗೆ ಅನುವಾದಿಸಲ್ಪಟ್ಟ ಕೃತಿಗಳು. ‘ಹೇಳುತೇನೆ ಕೇಳು: ಮಹಿಳೆಯರ ಆತ್ಮಕಥೆಗಳು’; ‘ಕಥೆ ಹೇಳುವೆ’; ‘ಬರ್ತಿಯಾ?… ಎಷ್ಟು?…: ಭಾರತೀಯ ಸೂಳೆಲೋಕದ ಕಥೆಗಳು’; ನಯನತಾರ ಸೆಹಗಲ್ ಅವರ ‘ಚಿಟ್ಟೆಗಳ ಪಾಡು’ ಇತ್ಯಾದಿ ಅವರ ಕನ್ನಡ ಭಾಷಾಂತರ ಕೃತಿಗಳು. ರೂಮಿಕಾವ್ಯದ ಭಾಷಾಂತರ ಕೃತಿ ‘ದಿವ್ಯದಲ್ಲಿ ಹಿಸ್ಸೆಯಿಲ್ಲ: ಕಡುಪ್ರೇಮಿಯ ಎದೆಯ ಹಾಡು’ ಬಿಡುಗಡೆಗೆ ಸಿದ್ಧವಿದೆ.
