ಕೇರಳದ ಕೊಚ್ಚಿಯಿಂದ ವ್ಯಾಟಿಕನ್ ಸಿಟಿಯವರೆಗೆ ಪ್ರಯಾಣ ಮಾಡಿದ ಆನೆ, ‘ಹ್ಯಾನೋ’ ಪಾಲಿಗೆ ರಾಜಕೀಯ ಮನ್ನಣೆ, ಪ್ರತಿಷ್ಠೆ-ಗೌರವಗಳ ಸುರಿಮಳೆಯೇ ಆಯಿತು. ಸ್ವತಃ ಪೋಪ್ ಅವನ ಕಾಳಜಿ ಮಾಡುತ್ತಿದ್ದರು. ಆದರೆ ಅವನದ್ದು ಒಂಟಿಬಾಳು. ಬಂಧುಗಳ ನಡುವೆ ಸಹಜವಾಗಿ ಬೆಳೆಯುವ ಅವಕಾಶ ಸಿಗದೇ ಒಂಟಿಯಾಗಿ ತೀರಿಕೊಂಡ. ಆನೆಗಳ ಜೀವನ ವಿಧಾನ, ಅವುಗಳ ಯೋಚನೆ, ಆಕಾಂಕ್ಷೆಗಳು ಬಹಳ ಕುತೂಹಲಕಾರಿಯಾದವು. ಈ ಕುರಿತು ಶೇಷಾದ್ರಿ ಗಂಜೂರು ‘ಆನೆಗೆ ಬಂದ ಮಾನ’ ಎಂಬ ಹೊಸ ಸರಣಿ ಬರೆಯಲಿದ್ದಾರೆ. ಅವರ ಮೊದಲ ಬರಹ ಇಲ್ಲಿದೆ.
ವ್ಯಾಟಿಕನ್ ನಗರದ ಐತಿಹಾಸಿಕ ಕಟ್ಟಡಗಳಲ್ಲಿ, ಅಗಣಿತ ಸಂಖ್ಯೆಯ ಐತಿಹಾಸಿಕ ದಾಖಲೆಗಳು, ಅತ್ಯಂತ ಅದ್ಭುತವೆನಿಸುವ ಕಲಾಕೃತಿಗಳು, ಚಿತ್ರಕಲೆಗಳು ಇವೆ. ಡ ವಿಂಚಿ, ಮೈಕೆಲೇಂಜೆಲೋ, ರಾಫೇಲ್‌ರಂತಹ ಹಲವಾರು ಖ್ಯಾತನಾಮರ ಮಹಾನ್ ಸೃಷ್ಟಿಗಳು ಅಲ್ಲಿವೆ. ಇಂತಹ ಬೆಲೆ ಕಟ್ಟಲಾಗದ ದಾಖಲೆ, ಕಲೆಗಳು ಮಾಸಿಹೋಗದಂತೆ ರಕ್ಷಿಸಲು, ಅಲ್ಲಿರುವ ಹವಾ ನಿಯಂತ್ರಣ ವ್ಯವಸ್ಥೆಯನ್ನು ಆಗ್ಗಿಂದಾಗ್ಗೆ ಆಧುನೀಕರಣಗೊಳಿಸಲಾಗುತ್ತದೆ.
1962ರ ಫೆಬ್ರುವರಿಯ ಒಂದು ದಿನ, ಇಂತಹುದೇ ಒಂದು ಆಧುನಿಕರಣದ ಪ್ರಯತ್ನ ನಡೆಯುತ್ತಿತ್ತು. ವ್ಯಾಟಿಕನ್ ಅರಮನೆಯಲ್ಲಿ, ಬೆಲ್‌ವೆಡೆರ್ ಕೋರ್ಟ್‌ಯಾರ್ಡ್ ಎಂಬ ಸುಂದರವಾದ ಅಂಗಳವೊಂದಿದೆ. ಆ ದಿನ, ಕೆಲಸಗಾರರು, ಹೊಸ ಹವಾನಿಯಂತ್ರಣ ವ್ಯವಸ್ಥೆಗೆ ಬೇಕಾದ ಎಲೆಕ್ಟ್ರಿಕ್ ಕೇಬಲ್, ಪೈಪುಗಳನ್ನು ನೆಲದಲ್ಲಿ ಅಳವಡಿಸಲು ಆ ಅಂಗಳವನ್ನು ಅಗೆಯುತ್ತಿದ್ದರು. ಆಗ ಅವರಿಗೆ, ಅಸ್ತಿ ಪಂಜರವೊಂದರ ತುಣುಕುಗಳು ಸಿಕ್ಕವು. ಅದು ಯಾವುದೋ ಒಂದು ದೊಡ್ಡ ಪ್ರಾಣಿಯೊಂದರ ಅಸ್ತಿ ಪಂಜರವೆಂಬುದು ಮೇಲ್ನೋಟಕ್ಕೇ ಗೋಚರವಾಗುತ್ತಿತ್ತು; ದೊಡ್ಡ ದವಡೆ, ದೊಡ್ಡದಾದ ಹಲ್ಲುಗಳು ಇತ್ಯಾದಿ. ಅದು, ಒಂದು ಡೈನೋಸಾರ್‌ನ ಅಸ್ತಿಪಂಜರ ಇರಬಹುದೇ?!
ಅಂತಹ ಒಂದು ಕುತೂಹಲ ಮೊದಲಿಗೆ ಮೂಡಿತಾದರೂ, ಕೊಂಚ ಮಟ್ಟಿನ ವೈಜ್ಞಾನಿಕ ವಿಶ್ಲೇಷಣೆಯಿಂದಲೇ ಅದೊಂದು ಆನೆಯ ಅಸ್ತಿ ಪಂಜರವೆಂದು ತಿಳಿದು ಬಂತು.
ವ್ಯಾಟಿಕನ್ ಅಂಗಳದಲ್ಲಿ ಆನೆಯ ಅಸ್ತಿಯೇ? ಅದರ ಹಿನ್ನೆಲೆ ಏನು? ಇಂತಹ ಪ್ರಶ್ನೆಗಳ ಬಗೆಗೆ ಆ ಕಾಲದಲ್ಲಿ ಯಾರೂ ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ.
ಕಾಲ ಕಳೆದಂತೆ ಈ ಇಡೀ ವಿಷಯವೇ ಎಲ್ಲರಿಗೂ ಮರೆತೇ ಹೋಯಿತು. ದಶಕಗಳ ನಂತರ, ೧೯೯೦ರಲ್ಲಿ, ಅಮೆರಿಕದ ಸುಪ್ರಸಿದ್ಧ ಸ್ಮಿತ್‌ಸೋನಿಯನ್ ಸಂಸ್ಥೆಗಳ ಹಿರಿಯ ಇತಿಹಾಸಕಾರ ಸಿಲ್ವಿಯೋ ಬೆಡಿನಿ ಈ ಕುರಿತು, ವ್ಯಾಟಿಕನ್ ಲೈಬ್ರರಿ, ಆರ್ಕೈವ್ಸ್‌ಗಳಲ್ಲಿ ಅಡಗಿದ್ದ ದಾಖಲೆಗಳನ್ನು ತಡಕಾಡಲು ಪ್ರಾರಂಭಿಸಿದರು. ಅವರ ಸುದೀರ್ಘ ಅಧ್ಯಯನ ೧೯೯೭ರಲ್ಲಿ “ಪೋಪ್‌ರವರ ಆನೆ” ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು.
ಆ ಆನೆಯ ಹೆಸರು ಹ್ಯಾನೋ ಎಂದು. ಆ ಆನೆಯ ಒಡೆಯ ಹದಿನಾರನೆಯ ಶತಮಾನದಲ್ಲಿ ಪೋಪ್ ಆಗಿದ್ದ ಪೋಪ್ ಲಿಯೋ X.
******
ಲಿಯೋ X ಅವರು ಪೋಪ್ ಆಗಿ ಚುನಾಯಿತರಾಗಿದ್ದು ೧೫೧೩ರಲ್ಲಿ. ಆ ಸಮಯಕ್ಕಾಗಲೇ, ಪೋರ್ಚುಗೀಸ್ ನಾವಿಕ ವಾಸ್ಕೋ ಡ ಗಾಮಾ ಕೇರಳದ ಕಲ್ಲಿಕೋಟೆಯ ಸಮುದ್ರ ತಡಿಗೆ ತಲುಪಿ ಒಂದು ದಶಕಕ್ಕೂ ಮೇಲಾಗಿತ್ತು. ಹಡಗುಗಳಲ್ಲಿ, ಭಾರತದ ಸಾಂಬಾರ ಪದಾರ್ಥಗಳು ಪೋರ್ಚುಗಲ್ ಮೂಲಕ ಯೂರೋಪಿನ ಇತರ ರಾಷ್ಟ್ರಗಳಿಗೆ ಸರಬರಾಜಾಗುವುದೂ ಪ್ರಾರಂಭವಾಗಿತ್ತು. ಈ ವ್ಯಾಪಾರದಿಂದ ಪೋರ್ಚುಗಲ್‌ನ ವ್ಯಾಪಾರಿಗಳೂ, ದೊರೆಯೂ ಅಪಾರ ಲಾಭ ಪಡೆಯುತ್ತಿದ್ದರು.
ಪೋರ್ಚುಗೀಸ್ ನಾವಿಕರು ತಮ್ಮ ನಾವೆಗಳ ಮೂಲಕ ಭಾರತಕ್ಕೆ ಬರಲಾರಂಭಿಸುವ ಮುನ್ನ, ಯೂರೋಪಿನೊಂದಿಗಿನ ಸಾಂಬಾರ ಪದಾರ್ಥಗಳ ವಹಿವಾಟುಗಳು ಅರಬ್ ದೇಶಗಳ, ಅದರಲ್ಲೂ ಮುಖ್ಯವಾಗಿ ಈಜಿಪ್ಟಿನ ಮೂಲಕ ನಡೆಯುತ್ತಿತ್ತು. ಭಾರತದಿಂದ ಹಡಗುಗಳ ಮೂಲಕ ಸಾಂಬಾರ ಪದಾರ್ಥಗಳನ್ನು ಆಮದು ಮಾಡಿಕೊಂಡು ಅದನ್ನು ಯೂರೋಪಿಯನ್ ರಾಷ್ಟ್ರಗಳಿಗೆ ರಫ್ತು ಮಾಡುವ ಮೂಲಕ ಈಜಿಪ್ಟಿನ ವ್ಯಾಪಾರಿಗಳೂ ಮತ್ತು ಅಲ್ಲಿನ ಆಡಳಿತ ವರ್ಗದವರೂ ಅಪಾರ ಲಾಭ ಸಂಪಾದಿಸುತ್ತಿದ್ದರು.
ಪೋರ್ಚುಗೀಸರು ಮತ್ತು ಈಜಿಪ್ಟಿನ ನಡುವಿನ ಈ ವಾಣಿಜ್ಯದ ಪೈಪೋಟಿ, ಪೋಪ್ ಲಿಯೋ ಗೆ ಇರುಸುಮುರುಸಿನ ವಿಚಾರವಾಗಿತ್ತು. ಕ್ರೈಸ್ತ ಧರ್ಮದ ಪವಿತ್ರ ಸ್ಥಾನವಾದ ಜೆರುಸಲೆಮ್ ಮತ್ತು ಸುತ್ತಮುತ್ತಲ ಪ್ರದೇಶಗಳು, ಆ ಸಮಯದಲ್ಲಿ, ಈಜಿಪ್ಟಿನ ಆಡಳಿತಗಾರರ ಸುಪರ್ದಿನಲ್ಲೇ ಇದ್ದವು. ಹೀಗಾಗಿ, ಯುರೋಪಿನ ವ್ಯಾಟಿಕನ್‌ನಲ್ಲಿ ಕ್ಯಾಥಲಿಕ್ ಕ್ರಿಶ್ಚಿಯನ್ ಪೀಠಾಧಿಪತಿಗಳಾಗಿದ್ದ ಪೋಪ್‌ಗಳಿಗೂ ಈಜಿಪ್ಟಿನ ಆಡಳಿತಗಾರರಿಗೂ ಬಹಳ ದೀರ್ಘ ಕಾಲದ ಸಂಬಂಧ ಬೆಳೆದಿತ್ತು.
ಒಂದೆಡೆ, ವ್ಯಾಟಿಕನ್‌ಗೆ ಅಪಾರ ಮೊತ್ತದಲ್ಲಿ ದೇಣಿಗೆ ನೀಡುವ ಕ್ಯಾಥಲಿಕ್ ಕ್ರಿಶ್ಚಿಯನ್ ದೇಶವಾದ ಪೋರ್ಚುಗಲ್ ಇದ್ದರೆ, ಇನ್ನೊಂದೆಡೆ, ಏಸು ಕ್ರಿಸ್ತನ ಜನ್ಮ ಸ್ಥಾನವನ್ನೇ ತಮ್ಮ ಕೈವಶ ಮಾಡಿಕೊಂಡಿದ್ದ ಈಜಿಪ್ಟ್. ಪೋಪ್, ಇವರೀರ್ವರ ನಡುವೆ ಯಾರ ಪರ ಇರಬೇಕು?!
ಪ್ರಾಟೆಸ್ಟೆಂಟ್ ಕ್ರಿಶ್ಚಿಯನ್ನರು ಇನ್ನೂ ರೋಮನ್ ಕ್ಯಾಥಲಿಸಿಸಂನಿಂದ ಹೊರ ಬರದಿದ್ದ ಆ ಕಾಲದಲ್ಲಿ, ಪೋಪ್ ಲಿಯೋ ಕೇವಲ ಧಾರ್ಮಿಕವಾಗಷ್ಟೇ ಪ್ರಭಾವಶಾಲಿಯಾಗಿರಲಿಲ್ಲ, ರಾಜಕೀಯದಲ್ಲೂ ಪ್ರಾಬಲ್ಯ ಹೊಂದಿದ್ದರು. ಹೀಗಾಗಿಯೇ, ಯೂರೋಪಿಯನ್ ದೊರೆಗಳು, ವ್ಯಾಟಿಕನ್‌ಗೆ ಅಪಾರ ಮೊತ್ತದ ದೇಣಿಗೆ ನೀಡುವುದು ಸರ್ವೇ ಸಾಮಾನ್ಯವಾಗಿತ್ತು.
ಆಗ ಪೋರ್ಚುಗಲ್‌ನ ದೊರೆಯಾಗಿದ್ದವನು ಮೊದಲನೆಯ ಮ್ಯಾನುಯೆಲ್. ತನ್ನ ವ್ಯಾಪಾರ ವಹಿವಾಟುಗಳಿಂದ ಪೋಪ್‌ಗೆ ಇರುಸುಮುರುಸು ಆಗುತ್ತಿರುವುದು ಅವನಿಗೆ ಆತಂಕದ ವಿಷಯವಾಗಿತ್ತು. ಹೀಗಾಗಿ, ಅವನು, ವ್ಯಾಟಿಕನ್‌ಗೆ ನೀಡುತ್ತಿದ್ದ ಎಂದಿನ ದೇಣಿಗೆಯೂ ಅಲ್ಲದೇ, ಪೋಪ್ ಲಿಯೋ ಅವರನ್ನು ಮೆಚ್ಚಿಸಲು ಒಂದು ಉತ್ಕೃಷ್ಟ ಆತ್ಮೀಯ ಉಡುಗೊರೆಯೊಂದನ್ನೂ ನೀಡಲು ನಿರ್ಧರಿಸಿದ.
ಹದಿನೈದನೆಯ ಶತಮಾನದಲ್ಲಿ ಯೂರೋಪಿಯನ್ನರು ವಿಶ್ವದ ನಾನಾ ಮೂಲೆಗಳಿಗೆ ತಮ್ಮ ಪ್ರಯಾಣ ಮಾಡುವುದು ಬೆಳೆದಂತೆ, ಆ ಪ್ರದೇಶಗಳಿಂದ, ಯೂರೋಪಿಗೆ ಅಪರೂಪವೆನ್ನಿಸುವ ಜೀವಿಗಳನ್ನು ಕೊಂಡೊಯ್ಯುವುದು, ರಾಜರು, ಶ್ರೀಮಂತರು ಅವುಗಳನ್ನು ತಮ್ಮ ಅರಮನೆ-ಮಹಲುಗಳಲ್ಲಿ ಪ್ರದರ್ಶಿಸುವುದು, ಪ್ರಭಾವಶಾಲಿ ವ್ಯಕ್ತಿಗಳಿಗೆ ಅವುಗಳನ್ನು ಉಡುಗೊರೆಗಳಾಗಿ ನೀಡುವುದು ಸಾಮಾನ್ಯವಾಗಿತ್ತು.
ಸಾಂಬಾರ ಪದಾರ್ಥಗಳನ್ನು ಕೊಳ್ಳಲು ಕೇರಳಕ್ಕೆ ಬಂದ ಪೋರ್ಚುಗೀಸ್ ವ್ಯಾಪಾರಿಗಳು, ಕೇರಳದಲ್ಲಿ ಸಾಮಾನ್ಯವಾಗಿದ್ದ ಆನೆಯೊಂದನ್ನು ಪೋರ್ಚುಗಲ್‌ಗೆ ತೆಗೆದುಕೊಂಡು ಹೋಗುವ ಆಲೋಚನೆ ಮಾಡಿದರು. ಆದರೆ, ಆನೆಯಂತಹ ದೈತ್ಯ ಪ್ರಾಣಿಯೊಂದನ್ನು, ತಿಂಗಳುಗಳ ಗಟ್ಟಲೆ ಸಮುದ್ರ ಯಾನ ಮಾಡಿಸಿ, ಸಾವಿರಾರು ಮೈಲಿ ಸಾಗಿಸುವುದಾದರೂ ಹೇಗೆ? ಅದೂ, ಆಗಿನ ಕಾಲದ ಹಾಯಿ ನೌಕೆಗಳಲ್ಲಿ? ಈ ಪ್ರಶ್ನೆಗಳಿಗೆ, ಕೊಂಚ ಸುಲಭವೆನ್ನಿಸುವ ಉತ್ತರವೊಂದಿತ್ತು: ದೈತ್ಯ ಗಾತ್ರದ ಆನೆಯ ಬದಲು, ಮರಿಯಾನೆಯೊಂದನ್ನು ಕೊಂಡೊಯ್ದರೆ ಆಯಿತು!
ಪೋರ್ಚುಗೀಸರು ಮಾಡಿದ್ದು ಅದನ್ನೇ. ಅವರು, ಭಾರತದಿಂದ ನಾಲ್ಕು ಆನೆಮರಿಗಳನ್ನು ಪೋರ್ಚುಗಲ್ಲಿಗೆ ಕರೆದೊಯ್ದರು. ಕೊಚ್ಚಿಯ ರಾಜ ಈ ಆನೆಗಳನ್ನು ಪೋರ್ಚುಗೀಸರಿಗೆ ಉಡುಗೊರೆಯಾಗಿ ನೀಡಿರಬಹುದೆಂದು ಒಂದು ಊಹೆ.
ಆನೆ, ಯೂರೋಪಿನ ಪ್ರಾಣಿ ಅಲ್ಲ. ಆನೆಗಳಂತಹ ಮ್ಯಾಮತ್‌ಗಳು ಯೂರೋಪ್ ಖಂಡದಲ್ಲಿ ಸುಮಾರು ಐದು ದಶಲಕ್ಷ ವರ್ಷಗಳಿಂದ ವಾಸವಾಗಿದ್ದವಾದರೂ, ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಅವುಗಳ ಅಂತ್ಯವಾಗಿತ್ತು. ಹೀಗಾಗಿ, ಹದಿನಾರನೆಯ ಶತಮಾನದ ವೇಳೆಗೆ, ಯೂರೋಪಿಯನ್ನರಿಗೆ “ಆನೆ” ಎನ್ನುವುದು ಒಂದು ಎಂದೂ ಕಂಡರಿಯದ ಪ್ರಾಣಿಯೇ ಆಗಿತ್ತು. ಜೀವಂತ ಆನೆಯೊಂದನ್ನು ನೋಡುವುದಿರಲಿ, ದಿನಪತ್ರಿಕೆ, ಮ್ಯಾಗಜ಼ೀನ್ ಇತ್ಯಾದಿ ಯಾವುದೂ ಪ್ರಚಲಿತವಿರದ ಆ ಕಾಲದಲ್ಲಿ, ಯೂರೋಪಿನ ಜನಸಾಮಾನ್ಯರು ಆನೆಯ ಚಿತ್ರಗಳನ್ನೂ ನೋಡಿರಲಿಲ್ಲ.
ಇಂತಹ ಸಂದರ್ಭದಲ್ಲಿ, ಭಾರತದ ಆನೆಗಳು ನೌಕಾಯಾನ ಮಾಡಿ ಬಂದಿಳಿಯುವುದು, ಅಲ್ಲಿನ ಜನರಿಗೆ ಅತೀವ ಆಸಕ್ತಿ ಮೂಡಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಎಂದೂ ಕಂಡರಿಯದ, ಕೇವಲ ಮಾತುಗಳಲ್ಲೇ ಕೇಳಿದ್ದ ದೈತ್ಯ ಜೀವಿಗಳು ತಮ್ಮ ನಾಡಿಗೆ ಬಂದಿದೆ ಎಂದರೆ ಅವನ್ನು ನೋಡ ಬಯಸದವರಾರು?!
ಕ್ರಿ.ಶ.೧೫೧೦ರಲ್ಲಿ ಈ ಆನೆ ಮರಿಗಳು ತಮ್ಮ ಮಾವುತರ ಜೊತೆಗೆ ಪೋರ್ಚುಗಲ್ಲಿಗೆ ಬಂದಿಳಿದಾಗ, ವ್ಯಾಟಿಕನ್‌ನಲ್ಲಿ ಲಿಯೋ-X ಇನ್ನೂ ತಮ್ಮ ಪೋಪ್ ಪದವಿಯನ್ನು ಅಲಂಕರಿಸಿರಲಿಲ್ಲ. (ಇಟಲಿಯ ಪ್ರಭಾವಶಾಲಿ ಮೆಡಿಚಿ ಕುಟುಂಬದವರಾದ ಅವರ ಮೂಲ ಹೆಸರು ಜಿಯೊವಾನಿ ಡಿ ಲೊರೆಂಜ಼ೋ. ಪೋಪ್ ಪದವಿ ಧಾರಣೆ ಮಾಡಿದ ಮೇಲೆ ಅವರು ಲಿಯೋ-X ಎಂದರೆ “ಹತ್ತನೆಯ ಲಿಯೋ” ಆದರು)
ಪೋರ್ಚುಗಲ್ ದೊರೆ ಮ್ಯಾನುಯೆಲ್, ಹಿಂದಿನ ಪೋಪ್‌ರಿಗೆ ಹಲವಾರು ಪಕ್ಷಿಗಳು, ಚಿರತೆ ಇತ್ಯಾದಿಗಳನ್ನು ಉಡುಗೊರೆಯಾಗಿ ನೀಡಿದ್ದನಾದರೂ, ಈ ಮರಿಯಾನೆಗಳನ್ನು ಆ ರೀತಿ ಉಡುಗೊರೆ ನೀಡುವ ಇರಾದೆ ಹೊಂದಿರಲಿಲ್ಲ. ತನ್ನ ಸಾಮ್ರಾಜ್ಯವಲ್ಲದೆ, ಇಡೀ ಯೂರೋಪಿನಲ್ಲೇ ವಿಸ್ಮಯ, ಕೌತುಕಗಳಿಗೆ ಕಾರಣವಾದ ಆನೆಗಳನ್ನು ಬೇರಾರಿಗೋ ಕೊಡುವುದು ಅವನ ಆಲೋಚನೆಯಲ್ಲಿರಲಿಲ್ಲ. ಹೀಗಾಗಿ, ಈ ಮರಿಯಾನೆಗಳು ಪೋರ್ಚುಗಲ್‌ನ ರಾಜಧಾನಿ ಲಿಸ್ಬನ್‌ನಲ್ಲಿಯೇ ಬೆಳೆದವು.
ಭಾರತದೊಡನೆ ಪೋರ್ಚುಗೀಸ್ ವ್ಯಾಪಾರ ಬೆಳೆದಂತೆ, ಈಜಿಪ್ಟ್‌ನೊಂದಿಗಿನ ಪೈಪೋಟಿಯೂ ಹೆಚ್ಚಾಯಿತು. ಇದು, ವ್ಯಾಟಿಕನ್ ಪೀಠಾಧಿಪತಿಗಳಾದ ಪೋಪರಿಗೆ ತಲೆನೋವಿನ ವಿಚಾರವಾಯಿತು. ೧೫೧೩ರಲ್ಲಿ, ಲಿಯೋ-X ಪೋಪ್ ಪದವಿಗ್ರಹಣ ಮಾಡಿದ ನಂತರ, ಹೊಸದಾಗಿ ಚುನಾಯಿತರಾದ ಪೋಪ್‌ಗೆ, ಈ ಮುನ್ನವೇ ಹೇಳಿದಂತೆ, ಒಂದು ವಿಶಿಷ್ಟವಾದ ಉಡುಗೊರೆ ನೀಡಬೇಕೆಂಬ ಆಲೋಚನೆ ಪೋರ್ಚುಗೀಸ್ ದೊರೆ ಮ್ಯಾನುಯೆಲ್‌ಗೆ ಬಂತು. ತನ್ನ ಸ್ವಾಧೀನದಲ್ಲಿದ್ದ ನಾಲ್ಕು ಮರಿಯಾನೆಗಳಲ್ಲಿ ಒಂದನ್ನು ವ್ಯಾಟಿಕನ್‌ಗೆ ಕಳುಹಿಸುವುದೆಂದು ಅವನು ನಿರ್ಧರಿಸಿದ.
ಆ ಒಂದು ಮರಿಯಾನೆಯೇ “ಹ್ಯಾನೋ”. “ಹ್ಯಾನೋ” ಎನ್ನುವುದು “ಆನೋನ್” ಎಂಬ ಪೋರ್ಚುಗೀಸ್ ಹೆಸರಿನ ಇನ್ನೊಂದು ರೂಪ. “ಆನೋನ್” ಎನ್ನುವುದೂ “ಆನಾ” ಪದದ ಅಪಭ್ರಂಶವೂ ಇದ್ದೀತು; “ಆನಾ” ಎಂದರೆ ಮಲಯಾಳಂ ಭಾಷೆಯಲ್ಲಿ “ಆನೆ” ಎಂದು.
ಭಾರತದಿಂದ ೧೫೧೦ರಲ್ಲಿ ಪೋರ್ಚುಗಲ್‌ಗೆ ನೌಕಾಯಾನ ಮಾಡಿದ ಹ್ಯಾನೋ, ದೊರೆ ಮ್ಯಾನುಯೆಲ್‌ನ ನಿರ್ಧಾರದಿಂದಾಗಿ ನಾಲ್ಕು ವರ್ಷಗಳ ನಂತರ ಇನ್ನೊಂದು ನೌಕಾಯಾನ ಮಾಡಬೇಕಾಯಿತು. ಈ ಬಾರಿ, ಪೋರ್ಚುಗಲ್‌ನಿಂದ ಇಟಲಿಯ ಕಡೆಗೆ.
ಕ್ರಿ.ಶ.೧೫೧೪ರಲ್ಲಿ ಪೋರ್ಚುಗೀಸ್ ನೌಕೆ, ಇಟಲಿಯ ಪೋರ್ಟ್ ಆಫ್ ಹರ್ಕ್ಯುಲೆಸ್ ಬಂದರಿನಲ್ಲಿ ಬಂದಿಳಿಯಿತು. ಅಲ್ಲಿಂದ ವ್ಯಾಟಿಕನ್ ಇರುವ ರೋಮ್ ನಗರಕ್ಕೆ ಸುಮಾರು ನೂರು ಕಿ.ಮೀ.ಗೂ ಹೆಚ್ಚು ದೂರ. ಈ ದೂರವನ್ನು, ಹ್ಯಾನೋ ಕಾಲ್ನಡಿಗೆಯಲ್ಲೇ ಮಾಡಿದ. ಜಂಬೂವಿನ ಈ ಸವಾರಿ ಇಟಲಿಯ ಜನರನ್ನು ಆಕರ್ಷಿಸಿತು. ಎಲ್ಲೆಲ್ಲೂ ಜನ ಸಾಗರ. ದಾರಿಯುದ್ದಕ್ಕೂ, ಸುತ್ತಮುತ್ತಲಿನ ಹಳ್ಳಿ-ಪಟ್ಟಣಗಳಲ್ಲಿನ ಸಿರಿವಂತರು, ಗಣ್ಯರು ಈ ಗಜಯಾತ್ರೆ ತಮ್ಮ ಊರಿಗೂ ಬರಬೇಕೆಂದು ಒತ್ತಾಯ ಮಾಡತೊಡಗಿದರು. ಹ್ಯಾನೋ ರೋಮಿನತ್ತ ಸಾಗುತ್ತಿದ್ದಂತೆ, ಅವನೊಂದಿಗೆ ಬರುತ್ತಿದ್ದ ಮೆರವಣಿಗರ ಸಂಖ್ಯೆಯೂ ಬೆಳೆಯುತ್ತಲೇ ಹೋಯಿತು. ಬೆಳ್ಳಿಯ ಆಭರಣಗಳಿಂದ ಭೂಷಿತನಾದ ಆನೆ. ಅವನ ಜೊತೆಗೆ, ಯೂರೋಪಿಯನ್ನರಿಗೆ ಅರಿಯದ ವೇಷ-ಭೂಷಣ-ಭಾಷೆಯ ಮಾವುತರು. ಅವರ ಜೊತೆಗೆ, ಪೋರ್ಚುಗಲ್‌ನ ರಾಜ ಕಳುಹಿಸಿದ್ದ ರಾಯಭಾರಿಗಳು, ಅವರ ಹಿಂದೆ ಮೆರವಣಿಗೆಗೆ ಸೇರಿಕೊಂಡಿದ್ದ ಜನಸ್ತೋಮ. ಹದಿನಾರನೆಯ ಶತಮಾನದ ಈ ದೃಶ್ಯ ಅತ್ಯಂತ ವಿಸ್ಮಯಕರವೇ ಇದ್ದಿರಬೇಕು.
ಹೀಗೆ ವಿಜೃಂಭಿಸುತ್ತಾ ಬಂದ ಹ್ಯಾನೋ, ಕೊನೆಗೂ ರೋಮ್ ತಲುಪಿದ. ಪೋಪ್ ಲಿಯೋ-X ಅವನನ್ನು ಭೇಟಿ ಮಾಡಲು ಬಂದರು. ಅವರನ್ನು ಕಂಡೊಡನೆಯೇ, ಹ್ಯಾನೋ, ತನ್ನ ಮುಂದಿನ ಮೊಣಕಾಲುಗಳನ್ನೂರಿ, ತಲೆ ಬಾಗಿಸಿ ನಮಸ್ಕರಿಸಿದ. ನಂತರ ಎರಡು ಹೆಜ್ಜೆ ಹಿಂದಿಟ್ಟು, ತಲೆ-ಸೊಂಡಿಲನ್ನೆತ್ತಿ ಮೂರು ಬಾರಿ ಘೀಳಿಟ್ಟ. ಹತ್ತಿರದಲ್ಲಿದ್ದ ನೀರನ್ನು ತನ್ನ ಸೊಂಡಿಲಲ್ಲಿ ಸೆಳೆದು ಪೋಪ್‌ರವರ ಮೇಲೆ ಸಿಂಪಡಿಸಿದ.
ಹ್ಯಾನೋವಿನ ಈ ಪ್ರಥಮ ಭೇಟಿಯಲ್ಲೇ, ಪೋಪ್‌ರು ಅವನಿಗೆ ಪೂರ್ಣವಾಗಿ ಮಾರುಹೋದರು. ಹ್ಯಾನೋ, ಪೋಪ್ ಲಿಯೋರವರಿಗೆ ಅಚ್ಚುಮೆಚ್ಚಾಗಿಬಿಟ್ಟ. ಅವರು, ಇಂತಹದೊಂದು ಮಹಾ ವಿಸ್ಮಯಕಾರಿ ಕೊಡುಗೆಯನ್ನು ನೀಡಿದ್ದಕ್ಕೆ, ದೊರೆ ಮ್ಯಾನುಯೆಲ್‌ಗೆ ಕೃತಜ್ಞತೆ-ಧನ್ಯವಾದಗಳ ಪತ್ರವೊಂದನ್ನು ಬರೆದರು. ಹ್ಯಾನೋವನ್ನು ನೋಡುವಾಗಲೆಲ್ಲಾ, ಅಂತಹ ಮಹಾನ್ ಪ್ರಾಣಿಯ ರೂಪದ ವಿಗ್ರಹಗಳನ್ನು ಪೂಜಿಸುವ ವಿಗ್ರಹಾರಾಧಕರ ನಂಬಿಕೆಗಳೂ ಸರಿ ಇರಬಹುದೇನೋ ಎನ್ನಿಸುತ್ತದೆ ಎಂದೂ ಆ ಪತ್ರದಲ್ಲಿ ಒಕ್ಕಣೆ ಮಾಡಿದರು.
ಹ್ಯಾನೋವಿಗಾಗಿ, ಪೋಪ್‌ರ ಅಣತಿಯ ಮೇರೆಗೆ ವ್ಯಾಟಿಕನ್‌ನ ಬೆಲ್ವೆಡೆರ್ ಅಂಗಳದಲ್ಲೇ ಒಂದು ವಾಸಗೃಹವನ್ನೂ ಕಟ್ಟಲಾಯಿತು. ಸಮಯ ಸಿಕ್ಕಾಗಲೆಲ್ಲಾ ಪೋಪ್ ಲಿಯೋ ಅವನೊಂದಿಗೆ ಕಾಲ ಕಳೆಯುತ್ತಿದ್ದರು. ಭಾನುವಾರಗಳಂದು, ಗಣ್ಯ ವ್ಯಕ್ತಿಗಳೊಂದಿಗೆ ರೋಮ್ ನಗರದಲ್ಲಿ ಹ್ಯಾನೋ ಮೇಲೆ ಕುಳಿತು ಜಂಬೂ ಸವಾರಿ ಮಾಡುವುದೂ ಪ್ರಾರಂಭವಾಯಿತು. ಇಂತಹ ಸಂದರ್ಭಗಳಲ್ಲಿ, ಕೆಲವೊಮ್ಮೆ, ಹ್ಯಾನೋ ರೊಚ್ಚಿಗೆದ್ದದ್ದೂ ಇತ್ತು. ಒಮ್ಮೆ, ಮೆರವಣಿಗೆಯಲ್ಲಿನ ಕಹಳೆ, ತಮಟೆಗಳ ಸದ್ದಿಗೆ ಕೆರಳಿದ ಹ್ಯಾನೋ, ತನ್ನ ಮೇಲೆ ಕುಳಿತಿದ್ದ ಗಣ್ಯ ಕವಿಯೊಬ್ಬನನ್ನು ಕೆಳಗೆ ಬೀಳಿಸಿ ಓಡಿತಂತೆ. ಇನ್ನೊಮ್ಮೆ, ತೋಪಿನ ಸದ್ದಿಗೆ ಬೆದರಿದ ಹ್ಯಾನೋ, ಹಲವರನ್ನು ತುಳಿದು ಗಾಯಗೊಳಿಸಿದನಂತೆ. ಇಷ್ಟೆಲ್ಲಾ ಆದರೂ, ಪೋಪ್ ಲಿಯೋಗೆ, ಹ್ಯಾನೋ ಮೇಲಿದ್ದ ಮುದ್ದು ಮಾತ್ರ ಕಡಿಮೆಯಾಗಲಿಲ್ಲ.
ಪೋಪರ ಮುದ್ದಿಗೆ, ಹ್ಯಾನೋ ಪೈಪೋಟಿ ಎದುರಿಸಬೇಕಾದ ಒಂದು ಸಂದರ್ಭವೂ ಎದುರಾಯಿತು. ಆನೆಯ ಉಡುಗೊರೆ ಪೋಪ್ ಲಿಯೋಗೆ ಮುದ ನೀಡಿದ್ದನ್ನು ಮನಗಂಡ ದೊರೆ ಮ್ಯಾನುಯೆಲ್, ಆನೆಗಿಂತ ವಿಸ್ಮಯಕಾರಿಯಾದ ಪ್ರಾಣಿಯೊಂದನ್ನು ಅವರಿಗೆ ನೀಡುವ ಆಲೋಚನೆ ಮಾಡಿದ.
ಪೋರ್ಚುಗೀಸರು, ಭಾರತದಿಂದ ನಾಲ್ಕು ಆನೆಮರಿಗಳನ್ನು ಪೋರ್ಚುಗಲ್ಲಿಗೆ ಕರೆದೊಯ್ದರು. ಕೊಚ್ಚಿಯ ರಾಜ ಈ ಆನೆಗಳನ್ನು ಪೋರ್ಚುಗೀಸರಿಗೆ ಉಡುಗೊರೆಯಾಗಿ ನೀಡಿರಬಹುದೆಂದು ಒಂದು ಊಹೆ.
ಭಾರತದಿಂದ ತಂದಿದ್ದ ಘೇಂಡಾ ಮೃಗವೊಂದು, ಆ ವೇಳೆಗಾಗಲೇ ಲಿಸ್ಬನ್ ಪಟ್ಟಣದಲ್ಲಿತ್ತು. ಆನೆ ಮತ್ತು ಘೇಂಡಾ ನಡುವೆ ಜಟಾಪಟಿ ನಡೆದರೆ, ಯಾವುದು ಗೆಲ್ಲಬಹುದು? ಈ ಆಲೋಚನೆ, ಮ್ಯಾನುಯೆಲ್‌ನ ಆಸ್ಥಾನಿಕರಿಗೆ ಬಂದಿತಂತೆ. ಅವರು, ಅದಕ್ಕಾಗಿಯೇ ಅಖಾಡವೊಂದನ್ನು ನಿರ್ಮಿಸಿ, ಅವೆರಡನ್ನೂ ಮುಖಾಮುಖಿಯಾಗಿಸಿದರಂತೆ. ಘೇಂಡಾ ತನ್ನ ಕೊಂಬನ್ನು ಕೆಳಗೆ ಮಾಡಿಕೊಂಡು ಹೂಂಕರಿಸುತ್ತಾ, ಆನೆಗೆ ಢಿಚ್ಚಿ ಹೊಡೆದು ಕೆಡವಲು ಸಿದ್ಧವಾಯಿತಂತೆ. ಆದರೆ, ಆ ದೃಶ್ಯದಿಂದ ಬೆದರಿದ ಆನೆ, ಆ ಅಖಾಡದ ಕಬ್ಬಿಣದ ಗೇಟನ್ನೂ ಮುರಿದು ತನ್ನ ವಾಸಸ್ಥಾನಕ್ಕೆ ಓಡಿ ಹೋಯಿತಂತೆ!
ಆನೆಯನ್ನೇ ಹೆದರಿಸಿ ನಡುಗಿಸಿತೆನ್ನಲಾದ ಆ ಘೇಂಡಾವನ್ನು, ಹಡಗಿನ ಮೂಲಕ, ಇಟಲಿಗೆ ತಲುಪಿಸುವ ಯತ್ನ ಮಾಡಲಾಯಿತು. ಕ್ರಿ.ಶ.೧೫೧೫ರ ಡಿಸೆಂಬರಿನಲ್ಲಿ, ಲಿಸ್ಬನ್‌ನಿಂದ ರೋಮ್‌ಗೆ ಹೊರಡುತ್ತಿದ್ದ ನೌಕೆಯೊಂದರಲ್ಲಿ, ದೊರೆ ಮ್ಯಾನುಯೆಲ್‌ನ ರಾಯಭಾರಿಗಳು ಆ ಘೇಂಡಾದೊಂದಿಗೆ ಪ್ರಯಾಣ ಬೆಳೆಸಿದರು. ಆದರೆ, ಫ್ರೆಂಚ್ ಕರಾವಳಿ ತೀರದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಆ ಹಡುಗು ಸಮುದ್ರದ ಪಾಲಾಯಿತು.
ಘೇಂಡಾ ಮೃಗಗಳಿಗೆ ಈಜು ಬರುತ್ತದೆ. ದೃಷ್ಟಿ ಯುದ್ಧದಲ್ಲಿ ಆನೆಯನ್ನೇ ಸೋಲಿಸಿದ ಈ ಧೀರ ಘೇಂಡಾ ಈಜುತ್ತಾ ಫ್ರೆಂಚ್ ತೀರವನ್ನು ಸೇರುತ್ತಿತ್ತೋ ಏನೋ. ಆದರೆ, ಅದನ್ನು ಹಡಗಿನಲ್ಲಿ ಕಟ್ಟಿಹಾಕಲಾಗಿತ್ತು. ತೇಲುತ್ತಾ, ಫ್ರೆಂಚ್ ತೀರವನ್ನು ಕಡೆಗೂ ಸೇರಿದ್ದು ಅದರ ಕಳೇಬರ ಮಾತ್ರ.
ಪೋಪ್ ಲಿಯೋಗೆ ಉಡುಗೊರೆ ನೀಡಲೇ ಬೇಕೆಂಬ ಜಿದ್ದಿನಲ್ಲಿದ್ದ ದೊರೆ ಮ್ಯಾನುಯೆಲ್, ಸುಮ್ಮನಿರಲಿಲ್ಲ. ಆ ಕಳೇಬರದ ಮಾಂಸವೆಲ್ಲಾ ತೆಗೆದು, ಅದರ ಮೈದುಂಬಿಸಿ stuffed ಘೇಂಡಾವನ್ನೇ ಉಡುಗೊರೆಯಾಗಿ ನೀಡಿದ.
ಕಂಡೊಡನೆ, ತಲೆ ತಗ್ಗಿಸಿ ನಮಸ್ಕರಿಸಿ, ಘೀಳಿಟ್ಟು, ಹಿತವಾಗಿ ನೀರು ಸಿಂಪಡಿಸುವ ಆನೆಮರಿಯ ಮುಂದೆ, ಘೇಂಡಾದ ಕಳೇಬರ ಒಂದು ಲೆಕ್ಕವೇ?! ಪೋಪ್ ಲಿಯೋ, ಆ ಕಳೇಬರವನ್ನು ಮತ್ತಾರಿಗೋ ಕೊಡುಗೆಯಾಗಿ ನೀಡಿದರಂತೆ.
ಆದರೆ, ದುರದೃಷ್ಟವಶಾತ್, ಇಟಾಲಿಯ ಪೋಪ್ ಮತ್ತು ಭಾರತೀಯ ಹ್ಯಾನೋರ ಸಂಗಾತ ಹೆಚ್ಚು ಕಾಲ ನಡೆಯಲಿಲ್ಲ.
ಹ್ಯಾನೋ, ರೋಮ್‌ಗೆ ಬಂದ ಎರಡೇ ವರ್ಷಗಳಲ್ಲಿ, ಅವನಿಗೆ ಉಸಿರಾಟದ ತೊಂದರೆ, ಜ್ವರದ ಬಾಧೆ ಕಾಡಿಸಲು ತೊಡಗಿತು. ಅವನು ನೋವಿನಿಂದ ನರಳತೊಡಗಿದ. ಹದಿನಾರನೆಯ ಶತಮಾನದ ಇಟಲಿಯ ರಸ್ತೆಗಳು ಆನೆಯಂತಹ ಪ್ರಾಣಿಗಳ ಪಾದಗಳಿಗೆ ಹೇಳಿ ಮಾಡಿಸಿದಂತಹವಲ್ಲ. ಕೆಲವು, ವಿಶ್ಲೇಷಕರು ಹೇಳುವಂತೆ ಈ ಜ್ವರ ಬಂದದ್ದು, ಅವನ ಪಾದಗಳಿಗೆ ಆದ ಗಾಯಗಳಲ್ಲಿನ ಸೋಂಕಿನಿಂದ.
ಹ್ಯಾನೋವಿಗೆ ಚಿಕಿತ್ಸೆ ಮಾಡಲು ವೈದ್ಯರನ್ನು ಕರೆಸಲಾಯಿತು. ಅವರು, ಅವನಿಗೆ ಮಲಬದ್ಧತೆಯಾಗಿದೆ ಎಂದರು.
******
ನೀವೇನಾದರೂ ಮೈ-ಕೈ ನೋವೋ, ಜ್ವರವೋ ಅಥವಾ ಮತ್ತಿನ್ನಾವುದೋ ಬೇನೆಯಿಂದ, ಅದು ವಿಷಣ್ಣತೆಯಂತ
ಮನೋಸಂಬಂಧಿ ವಿಚಾರಗಳೇ ಆದರೂ, ಹದಿನೈದು-ಹದಿನಾರನೆಯ ಶತಮಾನದ ಯೂರೋಪಿನ ವೈದ್ಯನೊಬ್ಬನ ಬಳಿ ಹೋದರೆ, ಆತ – ಅದು “ಆತ”ನೇ. “ಆಕೆ”ಯೊಬ್ಬಳು ವೈದ್ಯೆಯಾಗಲೂ ಇನ್ನೆಷ್ಟೋ ಶತಮಾನಗಳಾಗಬೇಕಿತ್ತು – ಅವರು ಸೂಚಿಸುತ್ತಿದ್ದ ಔಷಧಿಗಳಲ್ಲಿ ಚಿನ್ನವೂ ಒಂದು.
ಚಿನ್ನಕ್ಕಿಂತ ದೋಷರಹಿತ ಪದಾರ್ಥವಿಲ್ಲವೆಂದೂ, ಅದಕ್ಕೆ ಔಷಧೀಯ ಗುಣಗಳಿವೆಯೆಂಬ ನಂಬಿಕೆ, ಮಧ್ಯಯುಗದ ಯೂರೋಪಿಯನ್ನರಿಗೆ ಮಾತ್ರವಲ್ಲ, ಅವರಿಗೂ ಹಿಂದಿನ ಅರಬ್ಬರಲ್ಲೂ ಇತ್ತು. ಹತ್ತನೆಯ ಶತಮಾನದ ಅರಬ್ ವೈದ್ಯ ಅಬು ಅಲ್-ಕಾಸಿಮ್ ಅಲ್-ಜಹ್ರಾವಿ, ಚಿನ್ನದ ವೈದ್ಯಕೀಯ ಗುಣಗಳನ್ನು ಸೂಚಿಸುವದಷ್ಟೇ ಅಲ್ಲ, ಔಷಧ ರೂಪದಲ್ಲಿ ಅದನ್ನು ಸೇವಿಸಲು ಸಾಧ್ಯವಾಗುವಂತೆ ಸಣ್ಣ ಕಣಗಳಾಗಿ ಮಾಡುವ ವಿಧಾನವನ್ನೂ ವಿವರಿಸುತ್ತಾನೆ.
ಅವನ ನಂತರ ಬಂದ ಇನ್ನೊಬ್ಬ ವೈದ್ಯ, ಹನ್ನೊಂದನೆಯ ಶತಮಾನದ ಕಾನ್‌ಸ್ಟಾಂಟೈನ್ (ಕಾನ್‌ಸ್ಟಾಂಟಿನಸ್ ಆಫ್ರಿಕಾನಸ್), ಹೃದಯದ ಬೇನೆ, ಜೀರ್ಣಾಂಗಗಳ ಸಮಸ್ಯೆಗಳಿಗೆ ಚಿನ್ನ ಉತ್ತಮ ಮದ್ದೆನ್ನುತ್ತಾನೆ.
ಪೋಪ್‌ರವರ ಮುದ್ದಿನ ಆನೆಗೆ ಮಲಬದ್ಧತೆಯಾದರೆ, ಚಿನ್ನದ ಔಷಧ ನೀಡಲಾಗದೇ ಇದ್ದೀತೇ?
ಚಿನ್ನದ ಅಂಶ ಹೆಚ್ಚಾಗಿದ್ದ ಔಷಧಿಯೊಂದನ್ನು, ಆ ಕಾಲದ ವೈದ್ಯಕೀಯ ಪದ್ಧತಿಯಂತೆ, ಗುದದ್ವಾರದ ಮೂಲಕ ಹ್ಯಾನೋವಿಗೆ ನೀಡಲಾಯಿತು. ಆ ಚಿಕಿತ್ಸೆಯ ನಂತರ ಹ್ಯಾನೋ ಮರಣವನ್ನಪ್ಪಿದ.
*****
ಮುದ್ದಿನ ಆನೆ, ಹ್ಯಾನೋವಿನ ಮರಣ ಪೋಪ್ ಲಿಯೋ ಅವರನ್ನು ಅಪಾರವಾಗಿ ಕಾಡಿತು. ಅವರು, ಅವನ ಬಗೆಗೆ ಒಂದು ಶ್ರದ್ಧಾಂಜಲಿಯ ಕವನವನ್ನೇ ಬರೆದರು. ಹ್ಯಾನೋವನ್ನು, ಅವನ ವಾಸಸ್ಥಾನವಾದ ಬೆಲ್ವೆಡೆರ್ ಅಂಗಳದಲ್ಲೇ ಹೂಳಲಾಯಿತು. ಅವನ ಸ್ಮರಣಾರ್ಥವಾಗಿ, ಅವನ ಚಿತ್ರವೊಂದನ್ನು ರಚಿಸಬೇಕೆಂಬ ಹಂಬಲ ಪಟ್ಟರು. ಆ ಚಿತ್ರವನ್ನು, ಆ ಕಾಲದ ಮಹಾನ್ ಕಲಾವಿದರಲ್ಲಿ ಒಬ್ಬನಾದ ರಾಫೇಲ್ ಸ್ವತಃ ತಾನೇ ರಚಿಸಬೇಕೆಂದು ಅವರ ಇಚ್ಛೆಯಾಗಿತ್ತು. ಅದರಂತೆ, ರಾಫೇಲ್ ಹ್ಯಾನೋವಿನ ಚಿತ್ರವನ್ನು ರಚಿಸಿದ.
ಆಗಿನ್ನೂ, ಕ್ರೈಸ್ತ ಧರ್ಮ, ಕ್ಯಾಥಲಿಕ್-ಪ್ರಾಟೆಸ್ಟೆಂಟ್ ಎಂದು ವಿಭಜನೆ ಆಗಿರಲಿಲ್ಲ. ಪೋಪ್‌ರ ನಿಲುವುಗಳನ್ನು ಪ್ರತಿಭಟಿಸಿದ ಮಾರ್ಟಿನ್ ಲೂಥರ್ ತಮ್ಮ ಪ್ರಬಂಧಗಳನ್ನು ಪ್ರಕಟಿಸಲು ಇನ್ನೂ ಒಂದು ವರ್ಷವಿತ್ತು. ಆದರೆ, ಪೋಪ್ ಲಿಯೋ ಅವರ ಈ “ಆನೆ ಮುದ್ದು”, ಪೋಪ್ ವಿರೋಧಿಗಳಿಗೆ ಉತ್ತಮ ಸರಕಾಯಿತು.
ಪಿಯೆಟ್ರೋ ಅರೆಟಿನೋ ಎಂಬ ವಿಡಂಬನಕಾರ “The Last Will and Testament of the Elephant Hanno” ಎಂಬ ಕೃತಿಯೊಂದನ್ನು ರಚಿಸಿದ. ಪೋಪ್ ಲಿಯೋ ಅವರ ಆನೆ-ಪ್ರೇಮವನ್ನು, ಕಟುವಾಗಿ ವಿಮರ್ಶಿಸಿ ಹಾಸ್ಯಮಾಡಿದ ಈ ಕೃತಿಯಿಂದಾಗಿ, ಅರೆಟಿನೋಗೆ ಜನ ಮನ್ನಣೆಯೂ, ಧನ ಸಹಾಯವೂ ದೊರೆಯಿತು.
******
ಹ್ಯಾನೋ ಮರಣ ಹೊಂದಿದಾಗ, ಅವನಿಗಿನ್ನೂ ಏಳೇ ವರ್ಷ. ನಮ್ಮ ಜೀವನದಂತೆ, ಆನೆಯೊಂದರ ಜೀವನದಲ್ಲಿಯೂ, ಏಳೆನ್ನುವುದು, ಎಳೆತನವೇ. ಕಾಡಿನಲ್ಲಿ ಬೆಳೆಯುವ ಗಂಡು ಆನೆಗಳು, ಸುಮಾರು ಹತ್ತರಿಂದ ಹದಿನಾಲ್ಕು ವರ್ಷಗಳವರೆಗೆ ತಮ್ಮ ಅಮ್ಮ, ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರು, ಚಿಕ್ಕಮ್ಮ-ದೊಡ್ಡಮ್ಮಂದಿರು, ಅವರ ಮಕ್ಕಳು, ಅಜ್ಜಿ, ಇವರೊಂದಿಗೇ ಬೆಳೆಯುತ್ತದೆ.
ಆದರೆ, ಹ್ಯಾನೋ, ಅತಿ ಸಣ್ಣವನಿದ್ದಾಗಲೇ, ತನ್ನ ಇಡೀ ಕುಟುಂಬದಿಂದ ಬೇರಾಗಿ, ಸಾವಿರಾರು ಮೈಲಿ ಸಮುದ್ರ ಪ್ರಯಾಣ ಮಾಡಿ, ಜಾಗತಿಕ-ಧಾರ್ಮಿಕ-ಆರ್ಥಿಕ ರಾಜಕಾರಣದಲ್ಲಿ ಚದುರಂಗದ ಆನೆಯಾಗಿ, ಆ ಕಾಲದ ಯೂರೋಪಿನ ಶಕ್ತಿಕೇಂದ್ರಗಳಲ್ಲಿ ಪ್ರಭಾವಿವ್ಯಕ್ತಿಗಳೊಂದಿಗೆ ಅಡ್ಡಾಡಿದರೂ ಏಕಾಂಗಿಯಾಗಿ ಮೃತನಾದ.
*****
ಕಾಡೊಂದರಲ್ಲಿ ಆನೆ ಮರಿಯೊಂದರ ಹುಟ್ಟು ಅದ್ಭುತ ಎನ್ನಿಸುವಂತದ್ದು. ಮಗುವಿನ ತಾಯಿ ಹೊಸ ಜೀವದ ಸೃಷ್ಟಿಯ ಬೆರಗಿನಲ್ಲಿದ್ದರೆ, ತಾಯಿ-ಮಗುವಿನ ಸುತ್ತ ನೆರೆದು, ಘೀಳಿಡುತ್ತಾ ಸಂಭ್ರಮಿಸುವ ಅಜ್ಜಿಯರು, ಸಹೋದರ-ಸಹೋದರಿಯರು, ದೊಡ್ಡಮ್ಮ-ಚಿಕ್ಕಮ್ಮಂದಿರು, ಅವರ ಮಕ್ಕಳು. ಸುಮಾರು ಎರಡು ವರ್ಷ ತನ್ನ ತಾಯಿಯ ಗರ್ಭದಲ್ಲಿದ್ದು, ಹುಟ್ಟಿದ ಕೆಲ ಕ್ಷಣಗಳಲ್ಲೇ ತಡಕಾಡುತ್ತಾ ಎದ್ದು ನಿಲ್ಲುವ ಈ ಮಗುವಿಗೆ ಅವರೆಲ್ಲರೂ ಕುಟುಂಬವೇ.
ನೀರಾಟ ಹೇಗಾಡುವುದೆಂದು ತೋರಿಸುವ ಅಕ್ಕ, ಕೆಸರಲ್ಲಿ ಜಾರುತ್ತಿದ್ದರೆ ಹಿಂದಿನಿಂದ ಬಂದು ಮೇಲೆತ್ತುವ ಅತ್ತೆ, ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣಿಸುವಾಗ, ಎಲ್ಲೋ ನೋಡುತ್ತಾ ಹಿಂದುಳಿದರೆ ಬೇಗ ಬಾರೆಂದು ಕರೆಯುವ ಅಜ್ಜಿ, ಪ್ರತಿಕ್ಷಣವೂ ಕಣ್ಮಣಿಯಂತೆ ಕಾದು ತನ್ನ ಸೊಂಡಿಲಿನಿಂದ ನವಿರಾಗಿ ಸವರುವ ಅಮ್ಮ. ಆನೆಗಳು ಬೆಳೆಯುವುದು – ಬೆಳೆಯ ಬೇಕಿರುವುದು – ಹೀಗೆ. ಆ ಮರಿಯಾನೆ ಗಂಡಾದರೆ, ಮುಂದಿನ ಹನ್ನೆರಡು-ಹದಿನಾಲ್ಕು ವರ್ಷಗಳು ಅವನಿಗೆ ಇದೇ ಪ್ರಪಂಚ. ಅದು ಹೆಣ್ಣಾದರಂತೂ, ಅವಳ ಇಡೀ ಜೀವನ ಈ ಕುಟುಂಬದೊಡನೆಯೇ, ಮುಂದೆ ಅವಳೇ ಅಜ್ಜಿಯಾಗಿ ತನ್ನ ಮೊಮ್ಮಗುವಿನ ಲಾಲನೆ-ಪಾಲನೆ ಮಾಡುವಾಗಲೂ.
ಇಂದು ಜಗತ್ತಿನಲ್ಲಿ, ಸುಮಾರು 400,000 ಆಫ್ರಿಕನ್ ಆನೆಗಳಿವೆ. ಏಷಿಯನ್ ಆನೆಗಳ ಸಂಖ್ಯೆ ಸುಮಾರು 40,000. ಇವುಗಳಲ್ಲಿ ಸುಮಾರು 5000 ಆನೆಗಳು ಮನುಷ್ಯರ ಕೈ-ವಶದಲ್ಲಿವೆ. ಅವುಗಳಲ್ಲಿ ಎಷ್ಟೋ ಸಾವಿರ ಆನೆಗಳು, ತಮ್ಮ ಕುಟುಂಬವಿರಲಿ, ಇನ್ನೊಂದು ಆನೆಯ ಸಹವಾಸವೂ ಇಲ್ಲದೆ, ಒಬ್ಬಂಟಿ ಜೀವನ ನಡೆಸುತ್ತಿವೆ.
******
ಸುಮಾರು ಎರಡು ದಶಕಗಳ ಹಿಂದೆ, ನನ್ನ ಮಗಳು ಇನ್ನೂ ಸಣ್ಣವಳಿದ್ದಾಗ, ಅವಳಿಗೆ “Babar the Elephant” ಎನ್ನುವ ಮಕ್ಕಳ ಪುಸ್ತಕ ಹೆಚ್ಚು ಪ್ರಿಯವಾಗಿತ್ತು. ಅದನ್ನು ಬರೆದವನು, ಜ಼ಾನ್ ಬ್ರೂನ್‌ಹಾಫ್ ಎಂಬ ಫ್ರೆಂಚ್ ಲೇಖಕ. ಅದೊಂದು “ಕಾಮಿಕ್ಸ್” ಪುಸ್ತಕವಲ್ಲವಾದರೂ, ಬಹು ಮಟ್ಟಿಗೆ ಚಿತ್ರಗಳಿಂದಲೇ ಕಥನವನ್ನು ಹೇಳುವಂತಹ ಪುಸ್ತಕ. ಆಗಿನ್ನೂ ಓದಲು ಬರದಿದ್ದ ನನ್ನ ಮಗಳು, “ಯಾವ ಪುಸ್ತಕ ಓದೋಣ?” ಎಂದಾಗಲೆಲ್ಲಾ, “ಬಾಬರ್” ಎನ್ನುತ್ತಿದ್ದಳು.
ಆ ಕತೆಯಲ್ಲಿ, ಬಾಬರ್ ಎನ್ನುವುದು ಒಂದು ಆನೆ. ಅದು ಸಣ್ಣದಿದ್ದಾಗ ಅದರ ಅಮ್ಮನನ್ನು ಒಬ್ಬ ಬೇಟೆಗಾರ ಕೊಲ್ಲುತ್ತಾನೆ. ಅವನಿಂದ ತಪ್ಪಿಸಿಕೊಂಡು ಓಡುವ ಬಾಬರ್, ಪಟ್ಟಣ ಸೇರುತ್ತದೆ. ಅಲ್ಲಿ ಒಬ್ಬಳು, “ಓಲ್ದ್ ಲೇಡಿ” ಅವನಿಗೆ ಸೂಟು-ಬೂಟು ಕೊಡಿಸಿ, ಓದು-ಬರಹ ಕಲಿಸಿ, ಪಟ್ಟಣದ ನಡಾವಳಿಗಳಬಗೆಗೆ ಶಿಕ್ಷಣ ನೀಡಿ, ಅವನನ್ನು “ನಾಗರೀಕ”ನನ್ನಾಗಿ ಮಾಡುತ್ತಾಳೆ. ಮುಂದೆ, ಈ ಬಾಬರ್, ತಾನು ಹುಟ್ಟಿದ ಅರಣ್ಯಕ್ಕೆ ವಾಪಸಾಗುತ್ತಾನೆ. ಆನೆಗಳ ರಾಜನೂ ಆಗುತ್ತಾನೆ. ಬಾಬರ್‌ನ ಆ ಕತೆ, “ಕಲೋನಿಯಲಿಸಂ” ಅನ್ನು ಪ್ರತಿಪಾದಿಸತ್ತದೆ ಎಂಬ ಆಪಾದನೆಯಿಂದಾಗಿ ಅದು ಕೆಲವೊಂದು ಕಾಂಟ್ರವರ್ಸಿಗಳಿಗೆ ಕಾರಣವೂ ಆಗಿದೆ.
ನಾನು ಬಾಬರ್‌ನ ಕತೆಯನ್ನು ಮತ್ತೆ-ಮತ್ತೆ ಓದುತ್ತಿರುವ ಸಮಯದಲ್ಲೇ ಸಿಲ್ವಿಯೋ ಬೆಡಿನಿಯವರ “The Pope’s Elephant” ಪುಸ್ತಕವೂ ನನಗೆ ದೊರಕಿತು. ಬಾಬರ್ ಮತ್ತು ಹ್ಯಾನೋ ಕತೆಗಳು ಬೇರೆ-ಬೇರೆಯವೇ ಆದರೂ, ನನ್ನ ಮನಸ್ಸಿನಲ್ಲಿ ಅವೆರಡರ ಕತೆಗಳು ಒಗ್ಗೂಡಿದವು. ಇತ್ತೀಚೆಗೆ, ಸಿಲ್ವಿಯೋ ಬೆಡಿನಿಯವರ ಪುಸ್ತಕಕ್ಕಾಗಿ ಇಂಟರ್‌ನೆಟ್ ನಲ್ಲಿ ತಡಕಾಡುತ್ತಿದ್ದಾಗ, ಸಾರಾ ಲಾಸ್ಕೋ ಎಂಬ ಲೇಖಕಿ ಬರೆದ ಈ ಲೇಖನ ಕಣ್ಣಿಗೆ ಬಿತ್ತು. ಹ್ಯಾನೋವಿನ ಕುರಿತಾದ ನನ್ನ ಲೇಖನ, ಸಾರಾ ಲಾಸ್ಕೋರವರ ಲೇಖನದ ಅನುವಾದವೇ ಎನ್ನಬಹುದು, ಅಂತಹ ಅನುವಾದ ನನ್ನ ಗುರಿಯಲ್ಲದಿದ್ದರೂ.
(ಮುಂದುವರೆಯುವುದು)
ಶೇಷಾದ್ರಿ ಗಂಜೂರು ಕೆಲ ವರ್ಷಗಳ ಕಾಲ ಬಿಹಾರದ ಕಲ್ಲಿದ್ದಲು ಗಣಿಗಳಲ್ಲಿ ಕೆಲಸಮಾಡಿ, ನಂತರ ದಶಕಗಳ ಕಾಲ ಅಮೆರಿಕದಲ್ಲಿ ನೆಲೆಸಿ, ಈಗ ಸದ್ಯಕ್ಕೆ ಕೆನಡಾದಲ್ಲಿ ಕಾಗ್ನಿಟಿವ್ ಕಾಂಪ್ಯೂಟಿಂಗ್ ವಿಷಯದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ನ್ಯೂರೋಸೈನ್ಸಿನಲ್ಲಿ ಆಸಕ್ತಿಯುಳ್ಳ ವಿಜ್ಞಾನಿ.
Very interesting Sheshadri
Gud narration
It’s a very new subject.
Thank you ?