ಮನೆಯಲ್ಲಿ ಬೆಳೆದ ಭತ್ತದಲ್ಲಿ ಭಿಕ್ಷುಕರಿಗೆಂದೇ, ಭತ್ತ ಕೊಯ್ದು, ತುಳಿಸಿ, ತೂರಿ ಚೀಲದಲ್ಲಿ ತುಂಬಿಕೊಂಡು ಕೊನೆಯಲ್ಲಿ ಮಿಕ್ಕಿದ ಗುಡಿಸಿಟ್ಟುಕೊಂಡ ಭತ್ತವನ್ನು ಚೀಲದಲ್ಲಿ ತುಂಬಿಟ್ಟುಕೊಳ್ಳುತ್ತಿದ್ದರು. ಅದನ್ನು ಮನೆಗೆ ನೀಡಿಸಿಕೊಳ್ಳೋಕೆ ಬರುವ ಭಿಕ್ಷುಕರಿಗೆ ಹಾಕಲು ಇಟ್ಟುಕೊಳ್ಳುತ್ತಿದ್ದರು. ಸಣ್ಣ ಮಕ್ಕಳನ್ನು ಸೊಂಟಕ್ಕೆ ಕಟ್ಟಿಕೊಂಡು ಭಿಕ್ಷೆ ಬೇಡಿ ಬಂದೋರಿಗೆ ಭತ್ತ ಹಾಕಿದ ನಂತರ ‘ಏನಾದ್ರೂ ತಿನ್ನೋಕಿದ್ರೆ ಕೊಡಪ್ಪ’ ಅಂತಾ ಅವರು ಕೇಳಿದಾಗ ಕರುಳು ಚುರ್ ಎಂದು ಮನೆಯಲ್ಲಿ ಹಿಂದಿನ ದಿನ ಮಾಡಿಟ್ಟಿದ್ದ ಕಡುಕಲು ರೊಟ್ಟಿಯನ್ನು ಕೊಡುತ್ತಿದ್ದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐದನೆಯ ಕಂತು ನಿಮ್ಮ ಓದಿಗೆ
ಹಿಂದೆ ಫೇಲ್ ಮಾಡುವ ವ್ಯವಸ್ಥೆ ಇದ್ದುದರಿಂದ ಚಿಕ್ಕಂದಿನಿಂದಲೇ ಪರೀಕ್ಷೆಗಳೆಂದರೆ ನಮಗೆ ಭಯ ಇರುತ್ತಿತ್ತು. ಟೆಸ್ಟ್ ಹಾಗೂ ಪರೀಕ್ಷೆಗಳ ಪ್ರಶ್ನೆಗಳನ್ನು ಮೇಷ್ಟ್ರು ಬೋರ್ಡ್ ಮೇಲೆ ಬರೆಯುತ್ತಿದ್ದರು. ಬ್ಲ್ಯಾಕ್ ಬೋರ್ಡ್ ಅಳಿಸೋಕೆ ಬಟ್ಟೆಯಿಂದ ಹೊಲಿದ ಡಸ್ಟರ್ ಇರ್ತಾ ಇತ್ತು. ಅದನ್ನು ಟೈಲರ್ ಮನೆಯ ಹುಡುಗರು ಹೊಲಿಸಿಕೊಂಡು ಬರ್ತಾ ಇದ್ರು. ಡಸ್ಟರ್ ಅಳಿಸೋಕೆ ಮೇಷ್ಟ್ರು ಕರೆದ್ರೆ ಸಾಕು, ನಾವು ಸ್ಪರ್ಧೆಯಲ್ಲಿ ‘ನಾ ಮುಂದು ತಾ ಮುಂದು’ ಎಂದು ಓಡಿಹೋಗಿ ಅಳಿಸ್ತಾ ಇದ್ವಿ. ಬೋರ್ಡ್ ಬರೆದದ್ದು ಕಾಣದಂತಾಗಿ ಹಾಳಾಗಿದ್ದರೆ ಅದಕ್ಕೆ ತೊಂಡೇಸೊಪ್ಪು ಇದ್ದಿಲನ್ನು ಕುಟ್ಟಿದ ಮಿಶ್ರಣವನ್ನು ತಂದು ಬೋರ್ಡಿಗೆ ಬಳಿಯುತ್ತಾ ಇದ್ವಿ. ಮಾರನೇ ದಿನ ಬೋರ್ಡ್ ಕಡುಕಪ್ಪಾಗಿ ಸೀಮೆಸುಣ್ಣದಲ್ಲಿ ಬರೆದ ಅಕ್ಷರಗಳು ಎದ್ದು ಕಾಣುವಂತೆ ಆಗುತ್ತಿತ್ತು.
ನಮ್ಮ ಶಾಲೆಯಲ್ಲಿ ಆಗ ಪರೀಕ್ಷೆ ಬರೆಯೋಕೆ ಟಾನ್ ಹಾಳೆಗಳನ್ನು ನಾವೇ ತೆಗೆದುಕೊಂಡು ಹೋಗಬೇಕಾಗಿತ್ತು. ಅದನ್ನು ಪ್ಲೈವುಡ್ ಪ್ಯಾಡಿಗೆ ಹಾಕಿಕೊಂಡು ಹೋಗುತ್ತಿದ್ದೆವು. ಈಗಿನಂತಹ ಡಿಸೈನ್ ಡಿಸೈನ್ ಎಕ್ಸಾಮ್ ಪ್ಯಾಡುಗಳು ಆಗ ಇರಲಿಲ್ಲ. ಪ್ಲೇವುಡ್ ಶೀಟಿನಿಂದ ಮಾಡಲ್ಪಟ್ಟಿದ್ದುದು ಇರ್ತಾ ಇತ್ತು. ಇದನ್ನ ಹೇಗೆ ಮಾಡಿರ್ತಾರೆ ಅಂತಾ ನಮ್ ಕ್ಲಾಸಲ್ಲಿದ್ದ ಸಣ್ಣೀರ ಅನ್ನೋ ಹುಡ್ಗ ‘ಇದನ್ನ ಆನೆ ಲದ್ದೀಲಿ ಮಾಡ್ತಾರಂತೆ ಕಣೋ’ ಅಂತಾ ಹೇಳಿ ನಮಗೆ ನಂಬಿಸಿದ್ದ. ಅವನು ಹೇಳಿದ್ದನ್ನೇ ನಂಬಿದ ನಮಗೆ ರಟ್ಟು ಇಟ್ಕೊಂಡ ಸಮಯದಲ್ಲಿ ಆನೆ ನೆನಪಿಗೆ ಬರ್ತಾ ಇತ್ತು. ಎಷ್ಟೊಂದು ರಟ್ಟುಗಳಿದಾವೆ. ಆನೆ ಅದೆಷ್ಟು ಲದ್ದಿ ಹಾಕುತ್ತೋ? ಕಾಡಿನಿಂದ ಅದನ್ನು ಹೇಗೆ ತರ್ತಾರೋ? ಅದ್ಯಂಗೆ ಈ ರೀತಿ ಆಕಾರ ಕೊಡ್ತಾರೋ ಎಂಬ ನೂರಾರು ಪ್ರಶ್ನೆಗಳು ಮನದಲ್ಲಿ ಎದ್ದರೂ ಯಾರನ್ನು ಕೇಳೋದು ಅನ್ನೋ ಅನುಮಾನದಲ್ಲೇ ನಾನು ಸುಮ್ನಿರುತ್ತಿದ್ದೆ. ಇದಕ್ಕೆ ನಾವು ‘ರಟ್ಟು’ ಅಂತಾ ಹೇಳುತ್ತಿದ್ದೆವು. ಆಗ ನನ್ನ ಬಳಿ ಹೊಸ ರಟ್ಟು ಇರಲಿಲ್ಲ. ಆದರೆ ಮನೇಲಿ ಹಳೇ ರಟ್ಟಿತ್ತು. ನಮ್ ಮಾಮ ಬಳಸಿದ್ದ ರಟ್ಟು ಅದಾಗಿತ್ತು ಅಂತಾ ನಮ್ಮಜ್ಜಿ ಹೇಳ್ತಾ ಇದ್ರು. ಆಗೆಲ್ಲಾ ಯಾವುದೇ ವಸ್ತೂನ ತುಂಬಾ ಜತನದಿಂದ ಇಟ್ಕೊಳ್ತಾ ಇದ್ರು. ಬುಕ್ಸ್, ಬ್ಯಾಗ್, ಬಟ್ಟೆ ಹೀಗೆ ಯಾವುದೇ ಆಗಲಿ ಮನೆಯ ಹಿರಿಯ ಮಕ್ಕಳಿಗೆ ತಂದ್ರೆ ಅದನ್ನು ಅವರ ಮನೆಯಲ್ಲಿರೋ ಕಿರಿಯರು ಅದು ಹರಿದು ಸಂಪೂರ್ಣ ಹಾಳಾಗೋವರೆಗೂ ಬಳಸಿಕೊಳ್ಳುತ್ತಿದ್ದರು. ಮನೇಲಿದ್ದ ಹಳೇ ರಟ್ಟಿಗೆ ಕ್ಲಿಪ್ ಇರಲಿಲ್ಲ. ಇದಕ್ಕಾಗಿ ದಾರಕ್ಕೆ ಬಟ್ಟೆ ನೇತಾಕಿದ್ದಾಗ ಬೀಳಬಾರದೆಂದು ಹಾಕುವ ಪ್ಲಾಸ್ಟಿಕ್ ಕ್ಲಿಪ್ಪನ್ನೇ ಹಾಕಿಕೊಂಡು, ಅದಕ್ಕೆ ಹಾಳೆ ಸಿಕ್ಕಿಸಿಕೊಂಡು ನಾನು ಪರೀಕ್ಷೆಗೆ ಹೋಗುತ್ತಿದ್ದೆನು. ಒಮ್ಮೆ ಹಾಳೆ ತೆಗೆದುಕೊಳ್ಳದೇ ಹಾಗೆ ಹೋದಾಗ ನಮ್ಮ ಮೇಷ್ಟ್ರು ಟಾನ್ ಹಾಳೆ ತರಲೆಂದು ಮನೆಗೆ ವಾಪಸ್ಸು ಕಳಿಸಿದ್ದರು. ಆಗ ಮನೇಲಿ ಎಲ್ಲರೂ ಹೊಲಕ್ಕೆ ಹೋಗಿದ್ದರು. ಆಗ ಮನೇಲಿ ಗೋಣಿಚೀಲದಲ್ಲಿ ಇದ್ದ ಭತ್ತವನ್ನು ಅಂಗಡಿಗೆ ಹಾಕಿ ಸಿಕ್ಕ ದುಡ್ಡಲ್ಲಿ ಹಾಳೆ ತೆಗೆದುಕೊಂಡು ಉಳಿದ ದುಡ್ಡನ್ನು ಜೇಬಿಗಿರಿಸಿಕೊಂಡು ಪರೀಕ್ಷೆಗೆ ಹೋದೆ.
ಆಗ ಚಿಲ್ಲರೆ ಅಂಗಡಿಯಲ್ಲಿ ಭತ್ತವನ್ನು ಕೆಜಿಯ ಲೆಕ್ಕದಲ್ಲಿ ಹಾಕಿಸಿಕೊಂಡು ಅದಕ್ಕೆ ಆಗ ಕೆಜಿಗೆ 2 ರೂ.ನಂತೆ ದುಡ್ಡು ಕೊಡುತ್ತಿದ್ದರು. ಮನೆಯಲ್ಲಿ ಬೆಳೆದ ಭತ್ತದಲ್ಲಿ ಭಿಕ್ಷುಕರಿಗೆಂದೇ, ಭತ್ತ ಕೊಯ್ದು, ತುಳಿಸಿ, ತೂರಿ ಚೀಲದಲ್ಲಿ ತುಂಬಿಕೊಂಡು ಕೊನೆಯಲ್ಲಿ ಮಿಕ್ಕಿದ ಗುಡಿಸಿಟ್ಟುಕೊಂಡ ಭತ್ತವನ್ನು ಚೀಲದಲ್ಲಿ ತುಂಬಿಟ್ಟುಕೊಳ್ಳುತ್ತಿದ್ದರು. ಅದನ್ನು ಮನೆಗೆ ನೀಡಿಸಿಕೊಳ್ಳೋಕೆ ಬರುವ ಭಿಕ್ಷುಕರಿಗೆ ಹಾಕಲು ಇಟ್ಟುಕೊಳ್ಳುತ್ತಿದ್ದರು. ಬೇಡಿ ಬಂದ ಭಿಕ್ಷುಕರಿಗೆ ಬೊಗಸೆಯಷ್ಟು ಹಾಕುವ ವ್ಯವಸ್ಥೆಯು ಆಗ ಇತ್ತು. ಮನೆಗೆ ಯಾರಾದ್ರೂ ಭಿಕ್ಷುಕರು ಬರಲಿ ಆಗ ನಾನು ಓಡಿ ಹೋಗಿ ಭಿಕ್ಷೆ ಹಾಕುತ್ತಿದ್ದೆ. ಅದರಲ್ಲೇನೋ ಒಂಥರಾ ಖುಷಿ ಸಿಕ್ತಾ ಇತ್ತು. ಸಣ್ಣ ಮಕ್ಕಳನ್ನು ಸೊಂಟಕ್ಕೆ ಕಟ್ಟಿಕೊಂಡು ಭಿಕ್ಷೆ ಬೇಡಿ ಬಂದೋರಿಗೆ ಭತ್ತ ಹಾಕಿದ ನಂತರ ‘ಏನಾದ್ರೂ ತಿನ್ನೋಕಿದ್ರೆ ಕೊಡಪ್ಪ’ ಅಂತಾ ಅವರು ಕೇಳಿದಾಗ ಕರುಳು ಚುರ್ ಎಂದು ಮನೆಯಲ್ಲಿ ಹಿಂದಿನ ದಿನ ಮಾಡಿಟ್ಟಿದ್ದ ಕಡುಕಲು ರೊಟ್ಟಿಯನ್ನು ಕೊಡುತ್ತಿದ್ದೆ. ಅದನ್ನು ತೆಗೆದುಕೊಂಡಾಗ ಅವರು ವ್ಯಕ್ತಪಡಿಸುತ್ತಿದ್ದ ಪ್ರೀತಿಯ ಆ ನೋಟ ನನಗೆ ಖುಷಿ ಕೊಡುತ್ತಿತ್ತು.
‘ಒಂದೊಮ್ಮೆ ಮನೆಗೆ ದಾಸಯ್ಯನವರು ಬಂದಾಗ ಅಕ್ಕಿ ನೀಡಬೇಕು’ ಎಂದು ಮನೆಯಲ್ಲಿ ಹೇಳಿದ್ದರು. ಈ ರೀತಿ ಬರುತ್ತಿದ್ದವರಲ್ಲಿ ನನಗೆ ದೇವರನ್ನಿಟ್ಟುಕೊಂಡು ಬರುತ್ತಿದ್ದವರನ್ನು ಕಂಡರೆ ನಾನು ದೇವರ ಮೇಲಿನ ಭಯಮಿಶ್ರಿತ ಭಕ್ತಿಭಾವದಿಂದ ಭಿಕ್ಷೆ ಹಾಕುತ್ತಿದ್ದೆ. ‘ಯಲ್ಲಮ್ಮ ನಿಂಗೆ ಉಧೋ ಉಧೋ’ ಎಂದು ಹೇಳ್ತಾ ಯಲ್ಲಮ್ಮ ದೇವಿಯ ಮೂರ್ತಿಯನ್ನು ಹೊತ್ತುಕೊಂಡವರು ಬಂದಾಗ ಅಕ್ಕಿ ಹಾಕ್ತಾ ಇದ್ದೆ. ಅವರು ತಮ್ಮ ಬಳಿಯಲ್ಲಿದ್ದ ಕುಂಕುಮವನ್ನು ಹಣೆಗೆ ಹಚ್ಚುತ್ತಿದ್ದರು. ಇದೇ ರೀತಿ ಬರುತ್ತಿದ್ದವರಲ್ಲಿ ಹಾವಿನ ಮೂರ್ತಿಯನ್ನಿಟ್ಟುಕೊಂಡು ಬಂದು ‘ಜುಂಜಪ್ಪನ ಕಾಣಿಕೆ’ ಎಂದು ಹೇಳುತ್ತಿದ್ದವರನ್ನು ಕಂಡು ನಾನು ಓಡಿ ಹೋಗಿ ಅಕ್ಕಿಯನ್ನು ಹಾಕುತ್ತಿದ್ದೆ. ಆಗ ಅವರು ಹಣೆಯ ಮೇಲೆ ಭಸ್ಮವನ್ನು (ನಾವು ಧೂಳ್ತ ಅನ್ತೀವಿ) ಹಚ್ಚುತ್ತಿದ್ದರು. ವರ್ಷದಲ್ಲಿ ಆಗಾಗ್ಗೆ ಎಂಬಂತೆ ಗೋರಪ್ಪನವರು ಎಂದೇ ಕರೆಸಿಕೊಳ್ಳುವ ಏಳುಕೋಟಿ ಮೈಲಾರಲಿಂಗ ದೇವರ ಭಕ್ತರು ತಲೆಗೆ ರುಮಾಲಿನ ರೀತಿ ಸುತ್ತಿದ ಪೇಟ ಧರಿಸಿ, ಕೈಲಿ ಢಮರುಗ, ಸಣ್ಣದೊಂದು ತ್ರಿಶೂಲ ಹಿಡಿದು ಬರುತ್ತಿದ್ದರು. ಅವರಿಗೂ ಸಹ ಅಕ್ಕಿ ನೀಡಿದಾಗ ಅವರು ಅರಿಶಿಣದ ಭಂಡಾರವನ್ನ ಅಕ್ಕಿ ನೀಡಿದವರ ಹಣೆಗೆ ಹಚ್ಚುತ್ತಿದ್ದರು. ನನಗೆ ಆಗ ದೇವರ ಕೃಪೆಗೆ ಪಾತ್ರನಾದೆ ಎಂಬ ಭಾವ ಬರುತ್ತಿತ್ತು.
ಇನ್ನೂ ಸ್ಥಿತಿವಂತರಾದವರೂ ಸಹ ಕೆಲವರು ದೇವರ ಹರಕೆಯ ಹೆಸರಿನಲ್ಲಿ ಶನಿವಾರ ‘ದಾಸಯ್ಯ’ ಎಂದು ಕರೆಸಿಕೊಳ್ಳುವ ವ್ಯಕ್ತಿಗಳು ಬರುತ್ತಿದ್ದರು. ಇವರಿಗೆ ಭಕ್ತಿ ಭಾವದಿಂದ ಅಕ್ಕಿ ನೀಡುತ್ತಿದ್ದೆ. ಇನ್ನೂ ಕೆಲವರು ‘ಊರಿ ಮಾರಮ್ಮೋರು’ ಎಂದು ಕರೆಸಿಕೊಳ್ಳುವ ಭಿಕ್ಷುಕರು, ಒಂದು ಬಿದಿರ ಕೋಲಿನಲ್ಲಿ ಒಂದು ಕಡೆ ದೇವರು ಮತ್ತೊಂದೆಡೆ ಅಕ್ಕಿ ನೀಡಿಸಿಕೊಳ್ಳುವ ಬುಟ್ಟಿ ಇಟ್ಕೊಂಡು ಬರುತ್ತಿದ್ದರು. ಇವರು ಕೈಲಿ ಚಾಟಿ ಹಿಡಿದುಕೊಂಡು, ಊರ ಮಧ್ಯದಲ್ಲಿ ದೇವರನ್ನಿಟ್ಟುಕೊಂಡು ತಮ್ಮ ಮೈಮೇಲೆ ತಾವು ಬಾರಿಸಿಕೊಳ್ಳುತ್ತಿದ್ದರು. ಇವರ ಜೊತೆಯಲ್ಲಿ ಇದ್ದ ಒಬ್ಬ ಹೆಂಗಸು ತಬಲದ ರೀತಿಯಲ್ಲಿ ಇರುವ ವಾದ್ಯವನ್ನು ಬಡಿಯುತ್ತಿದ್ದರು. ಈ ತಾಳಕ್ಕೆ ತಕ್ಕಂತೆ ಚಾಟಿ ಇಟ್ಟುಕೊಂಡವರು ಬಾರಿಸಿಕೊಳ್ಳುವುದನ್ನು ನೋಡಿ ಮೈ ಜುಂ ಎನ್ನುತ್ತಿತ್ತು. ಕೆಲವೊಮ್ಮೆ ‘ಬುಡುಬುಡು’ ಶಬ್ದ ಮಾಡುತ್ತಾ ಬರುತ್ತಿದ್ದ ಬುಡುಬುಡುಕೆಯವರು ಹೇಳುತ್ತಿದ್ದ ರಾಗಬದ್ಧ ವೇಗದ ಮಾತುಗಳು ಕೇಳೋಕೆ ಒಂಥರಾ ಖುಷಿ ಕೊಡುತ್ತಿತ್ತು. ಅವರು ನನ್ನ ಮುಂದೆ ನಿಂತಿದ್ದಾಗ ‘ನಿನಗೆ ಸರ್ಕಾರಿ ಅನ್ನ ತಿನ್ನೋ ಯೋಗ ಐತೆ’ ಅಂತಿದ್ರು. ನನಗೆ ಆಗ ಅವರು ಹೇಳಿದ್ದು ಏನೂ ಅರ್ಥವಾಗದೇ ಹೋದ್ರು ಖುಷಿಯಿಂದ ಭತ್ತ ನೀಡೋ ಬದಲು ಅಕ್ಕಿ ನೀಡುತ್ತಿದ್ದೆ. ಹಾಗೆ ನೀಡಲು ಹೋದಾಗ ಅವರು ‘ಹಳೆ ಬಟ್ಟೆ ಇದ್ದರೆ ಕೊಡಪ್ಪ’ ಎಂದಾಗ ಎಷ್ಟೋ ಸಲ ಅಜ್ಜಿ ‘ಇಲ್ಲ’ ಎಂದು ಕಳಿಸಿದ್ದಿದೆ. ಇವರು ತಾವು ಕೈಗೆ ಕಟ್ಟಿಕೊಂಡ ವಸ್ತುವಿನ ಬಗ್ಗೆ ‘ನೀವು ಕಟ್ಟಿಕೊಂಡಿರುವುದೇನು?’ ಎಂದು ಕೇಳಿದಾಗ ಅವರು ‘ಇದು ಬಾಣಂತಿ ಕೈ, ಇದನ್ನು ಕಟ್ಟಿಕೊಂಡಿದ್ದಕ್ಕಾಗಿಯೇ ನಮಗೆ ಬೇರೆಯವರ ಬಗ್ಗೆ ತಿಳಿಯುತ್ತದೆ’ ಎಂದು ಹೇಳುತ್ತಿದ್ದುದನ್ನು ಕೇಳಿ ಅವರ ಬಗ್ಗೆ ಭಯಪಡುತ್ತಿದ್ದುದೂ ಉಂಟು.
ಇನ್ನೂ ಕೆಲವೊಮ್ಮೆ ಮುಚ್ಚಬಹುದಾಗಿರುವ ಬಿದಿರ ಬುಟ್ಟಿಯಲ್ಲಿ ನಾಗರಹಾವನ್ನಿಟ್ಟುಕೊಂಡು ಹಾವಾಡಿಗರು ಮನೆ ಬಾಗಿಲಿಗೆ ಭಿಕ್ಷೆ ಬೇಡಲು ಬರುತ್ತಿದ್ದರು. ಇವರು ಕೈಲಿ ಪುಂಗಿಯನ್ನಿಟ್ಟುಕೊಂಡು ಅದನ್ನು ಊದುತ್ತಾ ಹಾವನ್ನಾಡಿಸುತ್ತಿದ್ದ ಪರಿಯನ್ನು ನೋಡಿ ಬೆಕ್ಕಸ ಬೆರಗಾಗಿ ಅಕ್ಕಿ ನೀಡಿ ಜೊತೆಗೆ ಅವರ ಊಟಕ್ಕೆ ಮಿಕ್ಕಿದ ಆಹಾರವನ್ನು ಕೊಟ್ಟಿದ್ದಿದೆ. ಮಂಗನನ್ನು ಆಡಿಸೋ ಭಿಕ್ಷುಕರು, ಕರಡಿ ಜೊತೆಗೆ ಬರುತ್ತಿದ್ದ ಭಿಕ್ಷುಕರ ನೆನಪು ಇನ್ನೂ ನನ್ನ ನೆನಪಿನ ಭಾವಕೋಶದಲ್ಲಿ ಹಾಗೇ ಇದೆ.
ಈಗ ಬಿಡಿ. ಮನೆ ಬಾಗಿಲಿಗೆ ಬಂದು ಬೇಡುವ ಭಿಕ್ಷುಕರ ಸಂಖ್ಯೆ ಕಡಿಮೆಯಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಫ್ರೆಂಡ್ಸ್ ಹೆಸರಿನಲ್ಲಿ ಸಾಲದ ರೀತಿಯಲ್ಲಿ ಹಣ ಕೇಳುವ, ಆನ್ ಲೈನಿನಲ್ಲಿ ಬ್ಯಾಂಕಿನವರೆಂದು ಹೇಳಿಕೊಂಡು ಓಟಿಪಿ ಪಡೆದು ಹಣ ದೋಚುವ ಭಿಕ್ಷುಕರ ಸಂಖ್ಯೆ ಹೆಚ್ಚುತ್ತಿದೆ. ಅವರ ಮಾತು ನಂಬಿ ಅವರು ಹೇಳಿದಂತೆ ಕೇಳಿದ್ರೆ ನಿಮ್ ಕಥೆ ಢಮಾರ್!! ನಿಮ್ಮ ಅಕೌಂಟಿನಲ್ಲಿರುವ ಹಣವನ್ನೆಲ್ಲಾ ಗುಡಿಸಿ ಗುಂಡಾಂತರ ಮಾಡಿಬಿಡ್ತಾರೆ!! ಭತ್ತ, ಅಕ್ಕಿ ನೀಡಿಸಿಕೊಳ್ಳುವ ಭಿಕ್ಷುಕರ ಸಂಖ್ಯೆ ಕಡಿಮೆಯಾಗ್ತಿದೆ. ಈಗೀಗ ಹಳ್ಳಿಗಳ ಬದಿ ಭಿಕ್ಷುಕರು ಮೊದಲಿನಷ್ಟು ಕಂಡುಬರದಿದ್ರೂ ಪಟ್ಟಣದಲ್ಲಿ ಭಿಕ್ಷೆ ಬೇಡುವವರ ಸಂಖ್ಯೆ ಹೆಚ್ಚುತ್ತಿದೆ. ವಯಸ್ಸಾದವರು, ಅಂಗವೈಕಲ್ಯಕ್ಕೆ ತುತ್ತಾದವರು ಬೇಡಿದ್ರೆ ಕೊಡಬಹುದು. ಎಲ್ಲ ಚೆನ್ನಾಗಿದ್ದು, ದುಡಿದು ತಿನ್ನಲಾರದೆ ಬೇಡುವವರ ನೋಡಿದ್ರೆ ಸಿಟ್ಟು ಬರುತ್ತೆ. ಅದರಲ್ಲೂ ಅವರು ಹಣವನ್ನೇ ಕೇಳೋದು. ಈಗೇನಿದ್ರೂ ಕರೆನ್ಸಿ ಕಾಲ. ಅದೂ ಚಿಲ್ಲರೆ ಅಲ್ಲ, ನೋಟೇ ಆಗಬೇಕು. ಇನ್ನು ಮುಂದೆ ಸ್ಕ್ಯಾನರ್ ಇಟ್ಕೊಂಡು ಭಿಕ್ಷೆ ಬೇಡುವ ಭಿಕ್ಷುಕರೂ ಮುಂದೆ ಬರಬಹುದು! ಏನೇ ಆಗಲಿ ಅದೂ ಇದೂ ಕಥೆ ಹೇಳಿ ಅನ್ ಲೈನಿನಲ್ಲಿ ದುಡ್ಡು ಕೇಳುವ ಭಿಕ್ಷುಕರ ಜಾಲಕ್ಕೆ ಬೀಳದಿರಿ ಎಂಬುದೇ ನನ್ನ ಬಿನ್ನಹ.
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
Wel Penned down sir
ನಮ್ಮ ಬಾಲ್ಯದ ನೆನಪು ಗಳನ್ನು ಮತ್ತೆ ಮರುಕಳಿಸುವಂತೆ ಮಾಡಿದ ಲೇಖನ ನೈಜ ಹಾಗೂ ಸ್ವಾರಸ್ಯಕರ ವಾಗಿದೆ. ಇಂದಿನ ಆನ್ಲೈನ್ ಭಿಕ್ಷುಕ ರ ಬಗ್ಗೆ ಜಾಗರೂಕತೆಯಿಂದ ಇರುವಂತೆ ತಿಳಿಸಿರುವುದು ಔಚಿತ್ಯ ಪೂರ್ಣ ವಾಗಿದೆ. ಶುಭವಾಗಲಿ💐👍
ನಮ್ಮದೇ ಕಥೆ… ಮತ್ತೆ ನೆನಪಿಗೆ ಬಂದಂತಿದೆ…. ತುಂಬಾ ಸೊಗಸಾಗಿ ಚಿತ್ರಣ ಮೂಡಿಬಂದಿದೆ……