ಕಣಿವೆಯಂಚಿನ ದಾರಿ
ಹೋಗಬೇಕೆನಿಸಿದ್ದು
ಅಲ್ಲೆ ಮೂರು ದಾರಿ ಸೇರುವ ಜಾಗಕೆ
ದಾರಿ ತುಂಬ ಮುಳ್ಳು ಮೆಟ್ಟು
ಮೆಟ್ಟಿ ನಡೆದದ್ದೇ ಬಂದಿದ್ದು
ಪರಂಧಾಮಕೆ ರಾಜಮಾರ್ಗ
ರಹದಾರಿ ಎಂದಿತ್ತು
ಕೈಮರ
ಸುತ್ತ ಗಿಡಗಂಟೆಗಳ ತರಿದು ತುರಿದು
ಮೂಗು ಮುಚ್ಚದೆ ಅಲೆದು ತಾಳಲಾರದೆ ಕೆರೆದು
ಕರೆಕರೆದು ಒರೆದೆ ಪ್ರೇಮಾಲಾಪದ ದನಿಯಲಿ
ಲೆಕ್ಕಿಸದೆ ಉಚ್ವಾಸ ನಿಶ್ವಾಸಗಳ
ತಿರುಗಿಯೂ ನೋಡದೆ ಆಡದೆ
ನಡೆದ ನಡಿಗೆ ಯಾವಾಗಲೂ ಇರಲಿ
ಹೀಗೆ ಹೀಗೆ
ಉಬ್ಬಸಕೆ ತಾಳ ತಾಳಲಾರದ ಭಾಜಾಭಜಂತ್ರಿ
ಹೊರಗೆಲ್ಲಾ ಮಾತಲೀಲೆ ಜೊತೆಗೆ
ಒಳಗೊಳಗೆ ಒಂದಿಷ್ಟು ನಾತಲೀಲೆ
ತೇಲಿಬರುತಿದೆ ಒಳಗೆಲ್ಲಾ ಹೊರಗಿನ ಮಿಂಚುಹುಳ
ಒಂಟಿತನ ಸಹಿಸಿ ಮಣಿಸದೆ ಮನವ ಕುಣಿವ ಪಾದ
ಅಪಾದಮಸ್ತಕ ಬಡಿವ ರೆಕ್ಕೆ ಸಿಕ್ಕ ಹಾಗೆ
ಗಾಳಿಯನೂ ಸೀಳುವ ತವಕ
ಬಾನಲ್ಲಿ ಮಳೆಬಿಲ್ಲು ಅಷ್ಟುದ್ದ ರಂಗು
ನೋಡಿದೆದೆಯಲಿ ಬರೀ ಅದದೇ ಅದೇ ಗುಂಗು
ವಾತ್ಸಾಯನನ ಮಾತುಗಳ ಮೇಲೆ ಲೀಲೆ
ಪ್ರಾಯೋಗಿಕಾ ಚತುರ ಮತ್ತೆ ಮತ್ತೆ ಕಾತರಿಕೆ
ಕಾಮನ ಬಿಲ್ಲಿನ ಕಡೆಗೆ ನೆಟ್ಟ ಮನ
ಕತ್ತಲೆಯಲಿ ಹೊಳೆವ ಬಲ್ಬು
ಮಿಣಮಿಣ
ಈಗೆಲ್ಲೆಲ್ಲಿದ್ದಾನೋ ಅಲ್ಲಲ್ಲೇ ಕಾರ್ಯ ಶುರು
ತರಿದಿಲ್ಲ ಹೆಜ್ಜೆ ಇಡುವಾಗ ಜಾಗ
ಗಿಡಗಂಟೆ ನಗುತಿದೆ ಗಳಗಳ
ಮುಂದಿನ ದಾರಿಯಲಿ ತಲ್ಲೀನತೆ
ಇಂದಿನಲಿ ಆಗಿಲ್ಲ ಲೀನ
ನಗದಿರಲಿ ಕೈಮರ
ದರಿ ಸೇರದಿರಲಿ
ಮುನ್ನಿನ ವ್ಯಾಯೋಗ
ಸಿಕ್ಕಲೊಂದು ಪಾದ ಇಡುವಷ್ಟು ಜಾಗ
ಮನವಾಗಲಿ ವಾಮನ
ಎರಡು ಕೊನೆ
ದೇವರ ಬಗೆಗೆ ಮಾತನಾಡುವಾಗಲೆಲ್ಲಾ
ತನ್ನ ಸಿಗರೇಟಿನ ಬಗೆಗೆ
ಅದರ ಸುಗಂಧದ ಬಗೆಗೆ
ಕುಡಿಯುವ ವೈನು
ಚಪಾತಿಯ ಗೋಳಾಕಾರ
ಅದಕ್ಕಂಟಿದ ಸಾಂಬಾರಿನ ಬಗೆಗೆ
ಗಡದ್ದಾಗಿ ಮಾತಾಡುತಿದ್ದ ನನಗೆ
ಅವನು ಸಿಕ್ಕಿದ್ದ
ಮೊನ್ನೆಯೂ ಸಿಕ್ಕಿದ್ದ
ಅದೇ ಪ್ರಶ್ನೇ ಹಾಗೆ ಎಸೆದೆ ನಗುತಲೇ
ಹೇಗಿದ್ದಾನೆ ನಿನ್ನ ದೇವರು?
ಈಗ ಎಲ್ಲಿದ್ದಾನಂತೆ?
ಸಿಕ್ಕುವನೋ?
ಹೀಗೆ ಕುಶಲ ಮಾತಾಯಿತು
ಇಲ್ಲಿದ್ದಾನೆ ನೋಡು
ನನ್ನ ಬಳಿ ಖುರ್ಚಿಯ ಪಕ್ಕದಲೇ
ಕೈ ತಿರುಗಿದರೆ ತಿರುಗುವ ನನ್ನ ಬಳಿ
ಮೈ ಮುರಿದರೆ ಆತನೂ ಹಾಗೇ ಮಾಡುವ
ನಿನಗೆ ಕಣ್ಣಿಲ್ಲ ಕುರುಡು
ಮಾತೆಲ್ಲಾ ಬರೀ ತವುಡು
ಕುಟ್ಟು ಕುಟ್ಟು ಎನ್ನುತಲೇ
ಎದ್ದು ಹೋದ
ಮತ್ತೆ ಅವನಿಗಾಗಿ ಹುಡುಕಿದ್ದೇ ಬಂತು
ವರ್ಷಗಳು ಉರುಳಿತು
ಬಾರದ ಕನಸುಗಳು ಬಂದವು
ಒಂದಷ್ಟು ಅರಳಿಮರದ ಎಲೆ
ಇನ್ನೊಂದಿಷ್ಟು ಆಲದ ಎಲೆ
ಆಯ್ದದ್ದೇ ಬಂದಷ್ಟು ಲಾಭ
ಗಟ್ಟ ಬಿಡದೆಯೇ ಇದ್ದ ನನಗೂ ಗಡ್ಡ ಬಂತು
ತಲೆತುಂಬಾ ಬಿಳಿಗೂದಲು
ಮಂಜಾದ ಕಣ್ಣು ಮಂದ ಕಿವಿ
ಹೊತ್ತು ತಿರುಗಿದೆ ಅವನಿಗಾಗಿ
ಕೊನೆಗೊಮ್ಮೆ ಅಚಾನಕ್ಕಾಗಿ ಸಿಕ್ಕ
ಮೈ ಮುರಿಯದೆ ದೇವರು ಮಾತಾಡದೆ
ಕೈ ಕಾಲ ಆಡಿಸದೆ ಆರಾಮಾಗಿದ್ದ
ನಾನೂ ತಾಳಲಾರದೆ ಕೇಳಿದೆ
ಮತ್ತದೇ ಒಳಗುಳಿದ ಕೆಂಡದ ಪ್ರಶ್ನೆ
ಎಲ್ಲಿದ್ದಾನೆ?
ಹೇಗಿದ್ದಾನೆ?
ಏನ ಮಾಡುತ್ತಿದ್ದಾನೆ?
ನಿನ್ನ ದೇವರು
ನೋಡಿ ನಕ್ಕು ಹೇಳಿದ
ಗಡ್ಡ ಬಿಟ್ಟಿದ್ದಾನೆ ಬಿಳಿ ಕೂದಲ ಹೊತ್ತಿದ್ದಾನೆ
ಮಂಜಾದ ಕಣ್ಣು ಅದರ ಮೇಲೊಂದು ಬೂತಗನ್ನಡಿ
ಮಂದ ಕಿವಿ ಹೊತ್ತು
ನನ್ನ ಮುಂದೆ ನಿಂತಿದ್ದಾನೆ
ಈ ಕ್ಷಣ ಮುಂದೆಯೇ ನಿಂತಿದ್ದಾನೆ
ಬೇಕಾದರೆ ಹುಡುಕಿಕೋ ಎಂದು
ಬೆನ್ನು ತೋರಿಸಿ ಹಾಗೆ ನಡೆದ
ಆರ್ . ದಿಲೀಪ್ ಕುಮಾರ್ , ಮೂಲತಃ ಚಾಮರಾಜನಗರದವರು .
ಸದ್ಯ ಗುಂಡ್ಲುಪೇಟೆ ಪಟ್ಟಣದ ಸರಕಾರಿ ಡಿ ಬಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಮರ್ಶೆ, ಸಂಶೋಧನೆ , ಕಾವ್ಯರಚನೆ ಮತ್ತು ಭಾಷಾಂತರದಲ್ಲಿ ತೊಡಗಿದ್ದಾರೆ.
(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ