ಹಳೆಗನ್ನಡದ ಪಠ್ಯಗಳನ್ನು ಓದಬೇಕು ಎಂಬ ಆಸೆಗೆ ಪೂರಕವಾಗಿ ದೊರೆತುದು ಎಚ್.ಎಸ್. ವೆಂಕಟೇಶ ಮೂರ್ತಿಯವರ ‘ಕುಮಾರವ್ಯಾಸ ಕಥಾಂತರ’. ಇದು ಕುಮಾರವ್ಯಾಸನ ಕಾವ್ಯಕ್ಕೆ ಹೊಸಬರಿಗೆ ಪ್ರವೇಶ ಮಾಡಲಿಕ್ಕೊಂದು ಸುಲಭದ ದಾರಿ ಅಂತ ಅನ್ನಿಸಿ ಆ ಕೃತಿಯನ್ನು ಓದಿದೆ.  ಓದಿನ ನಂತರ ನಿಜಕ್ಕೂ ನನಗೆ  ಕುಮಾರವ್ಯಾಸ ಹತ್ತಿರನಾದ. ತನ್ನ ಕಾವ್ಯದ ಗುಟ್ಟುಗಳನ್ನು ಅರ್ಥಗಳನ್ನು ನನಗೆ ಈಗ ಬಿಟ್ಟುಕೊಟ್ಟು ನನ್ನ ದಿನನಿತ್ಯದ ಗೆಳೆಯನೇ ಆಗಿದ್ದಾನೆ.
ಆರ್.ದಿಲೀಪ್ ಕುಮಾರ್ ಹೊಸ ಪುಸ್ತಕ ಪಚ್ಚೆಯ ಜಗುಲಿ ಕುರಿತು  ಬರೆದಿದ್ದಾರೆ ರವೀಂದ್ರನಾಯಕ್‌ ಸಣ್ಣಕ್ಕಿಬೆಟ್ಟು 

 

ಪಂಪ, ರನ್ನ, ಕುಮಾರವ್ಯಾಸರ ಕಾವ್ಯಗಳನ್ನು ಓದಿ ಅದರ ರಸಾನುಭೂತಿಯನ್ನು ಪಡೆಯಬೇಕೆನ್ನುವುದು ಬಹು ದಿನಗಳ ಹಂಬಲ. ಆದರೆ ಓದಲು ಕೂತಾಗ ಅಕಾಡೆಮಿಕ್ ಆಗಿ ಸಾಹಿತ್ಯ ಓದದ ನನ್ನ ಪಾಲಿಗೆ ಹಳೆಗನ್ನಡ ಕಬ್ಬಿಣದ ಕಡಲೆಯಾಗಿ ಒಂದು ಪದ್ಯಕ್ಕಿಂತ ಯಾವತ್ತೂ ಮುಂದೆ ಹೋದದ್ದಿಲ್ಲ. ಓದಿದ ಪದ್ಯಗಳೂ ನನಗೆ ಅರ್ಥವಾಗದೇ ಯಾರದೋ ಸಹಾಯದಿಂದ ಅದನ್ನು ಬಿಡಿಸಿ ಅರ್ಥ ಮಾಡಲೆತ್ನಿಸುವಾಗ ಒಂದು ಬಗೆಯ ಔದಾಸೀನ್ಯದಿಂದ ಆ ಪದ್ಯದ ರಸವೇ ನನಗೆ ದಕ್ಕದೇ ಹೋದದ್ದುಂಟು. ಆದರೂ ಆ ಕಾವ್ಯಗಳ ಮೋಹ ನನ್ನನ್ನು ಬಿಟ್ಟು ಹೋಗದೇ ಅದನ್ನು ತಲುಪಲು ಪರ್ಯಾಯ ಮಾರ್ಗಗಳನ್ನು ಹುಡುಕತೊಡಗಿದೆ.

ಆಗ ನನಗೆ ಮೊದಲಿಗೆ ಸಿಕ್ಕಿದ್ದು ಎಚ್ಚೆಸ್ವಿಯರ ಕುಮಾರವ್ಯಾಸ ಕಥಾಂತರ. ಇದು ಕುಮಾರವ್ಯಾಸನ ಕಾವ್ಯಕ್ಕೆ ಹೊಸಬರಿಗೆ ಪ್ರವೇಶ ಮಾಡಲಿಕ್ಕೊಂದು ಸುಲಭದ ದಾರಿ ಅಂತ ಅನ್ನಿಸಿ ಆ ಕೃತಿಯ ಓದಿನ ನಂತರ ನಿಜಕ್ಕೂ ನನಗೆ ಕುಮಾರವ್ಯಾಸ ಹತ್ತಿರನಾದ. ತನ್ನ ಕಾವ್ಯದ ಗುಟ್ಟುಗಳನ್ನು ಅರ್ಥಗಳನ್ನು ನನಗೆ ಈಗ ಬಿಟ್ಟುಕೊಟ್ಟು ನನ್ನ ದಿನನಿತ್ಯದ ಗೆಳೆಯನೇ ಆಗಿದ್ದಾನೆ.

(ಆರ್.ದಿಲೀಪ್ ಕುಮಾರ್)

ಕವಿಮಿತ್ರ ಟಿ.ಪಿ.ಉಮೇಶ್ ರನ್ನನ ಪದ್ಯಗಳನ್ನು ಬಿಡಿಸಿ ಅರ್ಥ ಸಹಿತವಾಗಿ ತನ್ನ ಫೇಸ್‌ಬುಕ್‌ ಗೋಡೆಯಲ್ಲಿ ಹಾಕಲು ಶುರು ಮಾಡಿದ ನಂತರ ನನಗೆ ರನ್ನನ ಕಾವ್ಯಕ್ಕೂ ಸುಲಭ ಪ್ರವೇಶ ಸಿಕ್ಕಿತು. ಹಾಗಾಗಿ ಗದಾಯುದ್ಧದ ಗತ್ತು ಗಾಂಭೀರ್ಯವನ್ನು ಅನುಭವಿಸಲು ಸಾಧ್ಯವಾಯಿತು. ಪಂಪನ ಕಾವ್ಯದ ಪ್ರವೇಶಕ್ಕಾಗಿ ಕಾಯುತ್ತಿದ್ದೆ. ಅದೇ ಸಮಯಕ್ಕೆ ಸರಿಯಾಗಿ ಸಿಕ್ಕಿದ್ದು ಆರ್ ದಿಲೀಪ್ ಕುಮಾರ್ ಅವರ ಈ “ಪಚ್ಚೆಯ ಜಗುಲಿ”.

ಕಳೆದ ಕೆಲವು ದಿನಗಳಿಂದ ಈ ಪುಸ್ತಕದ ಲೇಖನಗಳಲ್ಲಿಯೇ ಮುಳುಗಿ ಹೋಗಿದ್ದೇನೆ. ಓದುತ್ತಾ ಓದುತ್ತಾ ಅಚ್ಚರಿಗೊಂಡಿದ್ದೇನೆ. ಇನ್ನೂ ಇಪ್ಪತ್ತೊಂಬತ್ತರ ಹರೆಯದಲ್ಲಿಯೇ ಪಂಪನ ಕಾವ್ಯವನ್ನು ಈ ರೀತಿ ಆವಾಹಿಸಿಕೊಂಡಿರುವ ದೀಲೀಪ್ ನನ್ನ ಪಾಲಿಗೆ ಅದ್ಭುತವಾಗಿ ಕಾಣಿಸುತ್ತಾರೆ.

ಮುನ್ನುಡಿ ಬರೆದಿರುವ ಹಿರಿಯ ವಿಮರ್ಶಕರಾದ ಜೆ.ಎಚ್.ನಾಯಕರ ಮಾತುಗಳಲ್ಲಿ ಹೇಳುವುದಾದರೆ; ಸ್ವೋಪಜ್ಞ ಹೊಳಹು, ಒಳನೋಟ, ಸದಭಿರುಚಿ ಸಮನ್ವಿತವಾಗಿರುವ ಸಾಹಿತ್ಯ ವಿಮರ್ಶೆಯ ಕೃತಿಯೆಂದು ದಿಲೀಪರ ಪಚ್ಚೆಯ ಜಗುಲಿಯನ್ನು ಗುರುತಿಸಿದ್ದಾರೆ. “ಪರಿಣಾಮಕಾರಿಯಾದ ಕಾವ್ಯದ ಓದು ಲಯದಿಂದ ಪ್ರಾರಂಭಗೊಂಡು, ಆನಂತರ ಲಯದ ಹಾದಿಯಲ್ಲಿ ಬಿಡಿಸಿಕೊಳ್ಳುವ ಅರ್ಥಛಾಯೆಗಳಿಂದ ಉಂಟಾಗುತ್ತದೆ. ಪ್ರತಿಯೊಂದು ಕಾಲಘಟ್ಟಕ್ಕೂ, ಸಮಾಜಕ್ಕೂ ಅದರದೇ ಲಯವಿದೆ. ಆ ಲಯದಲ್ಲಿಯೇ ಅರ್ಥ ಛಾಯೆಗಳು ಬಿಡಿಸಿಕೊಳ್ಳುತ್ತಾ ಕಾಲ ದೇಶಗಳೊಡನೆ ಓದುಗ ಪ್ರಜ್ಞೆಯಲ್ಲಿ ಕಾವ್ಯ-ಭಾಷೆ ಸಮಕಾಲೀನಗೊಳ್ಳುತ್ತಾ ಸಾಗುತ್ತದೆ…”, ಆಯಾ ಕಾಲದ ಕಾವ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ದಿಲೀಪರ ಈ ವ್ಯಾಖ್ಯಾನ ಬಹಳ‌ ಮುಖ್ಯವಾದದ್ದು ಅಂತ ಈ ಕೃತಿಯ ಓದುವಿಕೆಯಲ್ಲಿ ನನಗನಿಸಿದೆ.

ಪಂಪನ ಕಾವ್ಯಗಳ ಅಧ್ಯಯನದ ಮೂಲಕ ಮನುಷ್ಯನ ಆಳ ಮನಸ್ಸಿನಲ್ಲಿನ ಮೂಲ ಪ್ರವೃತ್ತಿ ಯಾವುದು ಅನ್ನುವ ಮೂಲಭೂತವಾದ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ಈ ಕೃತಿಯ ಮೂಲಕ ಲೇಖಕರು ಪ್ರಯತ್ನಿಸಿದ್ದಾರೆ. “ಮನುಷ್ಯನ ಆಳ ಮನಸ್ಸಿನಲ್ಲಿರುವ ಮೂಲ ಪ್ರವೃತ್ತಿ ಯಾವುದು? ಪ್ರತಿಕ್ಷಣದ ವಿಚಿತ್ರ ವರ್ತನೆಗಳ ಹಿಂದಿನ ಕಾರಣಗಳೇನು? ಈ ಪ್ರಶ್ನೆಗಳಿಗೆ ಉತ್ತರಗಳು ದೈವಿಕ ನೆಲೆಯಿಂದ ಮೊದಲ್ಗೊಂಡು ಕಾಮ ಮೂಲಗುಣ ಎನ್ನುವವರೆಗಿನ ಚರ್ಚೆಯೇ ಬಹು ಕುತೂಹಲಕರವೂ ವಿಸ್ತಾರವಾದುದೂ ಆಗಿದೆ. ಕಾಮವೆನ್ನುವುದೇ ಬಹುಮುಖ್ಯ ಎನ್ನುವುದಾದರೆ, ಬದುಕನ್ನು ಪ್ರತಿಕ್ಷಣವೂ ಪ್ರೀತಿಸುವಂತೆ ಮಾಡುವ ಪ್ರತಿಯೊಂದು ಆಸೆಯೂ ಅದಕ್ಕೆ ಮೂಲವಾದ ಭಾವನೆಗಳೆಲ್ಲವೂ ಕಾಮವೇ ಸರಿ…” ಅಂತ ಮನುಷ್ಯನ ಬದುಕಿನ ಮೂಲ ಪ್ರವೃತ್ತಿಯ ಕುರಿತು ವಿಶ್ಲೇಷಿಸುತ್ತಾ ಪಂಪನ ಕಾವ್ಯವನ್ನು ಅವನ ಶೃಂಗಾರ ಪದ್ಯಗಳ ಮುಖಾಂತರ ನೋಡುವ ಒಂದು ಕ್ರಮವನ್ನು ಈ ಕೃತಿಯಲ್ಲಿ ಕೊಡುತ್ತಾರೆ. ಪ್ರತೀ ಲೇಖನಕ್ಕೂ ಪಂಪನ ಕಾವ್ಯಗಳಿಂದ ಆಯ್ದ ಒಂದು ಶೀರ್ಷಿಕೆಯನ್ನೇ ಕೊಟ್ಟು ಆ ಲೇಖನ ಓದುವ ಮೊದಲೇ ಕುತೂಹಲ‌ ಕೆರಳಿಸುತ್ತಾರೆ.

ಕನ್ನಡದ ಆದಿ ಕವಿ ಕನ್ನಡದ ಶ್ರೇಷ್ಠ ಕವಿಯೂ ಹೌದು. ತಾನು ಬರೆದ ಕಾವ್ಯವನ್ನು ತಾನೇ ಮೀರದೇ ಹೊಸದೇನನ್ನೂ ಸೃಷ್ಟಿಸಲು ಸಾಧ್ಯವಿಲ್ಲ. ಇಲ್ಲದಿದ್ದರೆ ಅಡಿಗರು ಕೂಪಮಂಡೂಕದಲ್ಲಿ ಹೇಳಿದ ಹಾಗೆ, “ನೆಲದಿಂದ ಕೆಳಕೊಳಕ್ಕೆ, ಮತ್ತೆ ಮೇಲು ನೆಲಕ್ಕೆ / ಎರಡಕ್ಕೂ ತೂಗುವುದು ನನ್ನ ಕೆಲಸ”… ಕವಿ ನಿಂತಲ್ಲಿಯೇ ನಿಂತುಬಿಡುತ್ತಾನೆ. ಪಂಪನನ್ನು ಈ ಮೀರುವಿಕೆಯೇ ಶ್ರೇಷ್ಠ ಕವಿಯನ್ನಾಗಿಸಿದೆ. ಅದನ್ನು ಈ ಕೃತಿಯಲ್ಲಿ ದಿಲೀಪರು ಸರಿಯಾಗಿಯೇ ಗುರುತಿಸಿದ್ದಾರೆ. “ಸಂಸಾರದಲ್ಲಿದ್ದೂ ಮೀರಿಕೊಳ್ಳುವ, ಸಾಮಾಜಿಕವಾಗಿದ್ದೂ ಮೀರಿಕೊಳ್ಳುವ, ರಾಜನ ಆಸ್ಥಾನದಲ್ಲಿದ್ದೂ ಮೀರಿಕೊಳ್ಳುವ ಹೀಗೆ ಪ್ರತಿಯೊಂದರಲ್ಲೂ ಒಂದು ಕ್ರಿಯಾಶೀಲ ಪಲ್ಲಟದ ಆಸೆ ಹೊತ್ತ ಚಲನೆಯನ್ನು ಹೊಂದಿದೆ. ಈ ಚಲನೆ, ಪಲ್ಲಟದ ಆಶಯಗಳೇ ಪಂಪನನ್ನು ಉನ್ನತವಾಗಿಟ್ಟಿವೆ…” ಅಂತ ಹೇಳುವುದರ ಮೂಲಕ ಪಂಪನನ್ನು ಹೊಸ ದೃಷ್ಟಿಕೋನದಿಂದ ನೋಡಿ ಕವಿಯ ಶ್ರೇಷ್ಠತೆಗೆ ಹೊಸ ವ್ಯಾಖ್ಯಾನ ನೀಡಿದ್ದಾರೆ.

ಲೇಖಕರಿಗೆ ಪಂಪನ ಕೃತಿಗಳ ಕುರಿತು ಬಹಳಷ್ಟು ವಿದ್ವಾಂಸರು ಮಾಡಿರುವ ವ್ಯಾಖ್ಯಾನ, ವಿಶ್ಲೇಷಣೆಗಳನ್ನು ಮುಂದುವರೆಸುವ ಹಂಬಲವಿದೆ. ಹಾಗಾಗಿ ಮತ್ತೆ ನಮಗೆ ಸಮಗ್ರ ಪಂಪದರ್ಶನ ಲಭ್ಯವಾಗುವ ದಿನಗಳೂ ದೂರವಿಲ್ಲ. ಪಂಪನ ಅಧ್ಯಯನಕ್ಕೆ ನಮಗೆ ಈಗಾಗಲೇ ಲಭ್ಯವಿರುವ ಹಲವಾರು ಕೃತಿಗಳು ಸಿಗಬಹುದು. ಆದರೆ ನಮ್ಮ ಸಮಕಾಲೀನ ಬರಹಗಾರನೊಬ್ಬ ಸದ್ಯದ ಕಾಲಘಟ್ಟದಲ್ಲಿ ನಿಂತು ಸಾವಿರ ವರ್ಷಗಳ ಹಳೆಯ ಕೃತಿಗಳ ಕುರಿತಾಗಿ ಏನು ಬರೆಯಬಹುದೆನ್ನುವ ಕುತೂಹಲ ಈಗಾಗಲೇ ಬಂದ ಹಳೆಯ ಕೃತಿಗಳಿಂದ ತಣಿಯುವುದಿಲ್ಲ. ಮತ್ತು ಈ ಕಾಲದ ಪರಿಭಾಷೆಯಲ್ಲಿ ಪಂಪನನ್ನು ಅರಿಯುವ ಖುಷಿಯೂ. ಆದರೆ ಈಗಾಗಲೇ ತಂದಿರುವ ಪಚ್ಚೆಯ ಜಗುಲಿಯ ಬಗ್ಗೆ ಬರೆಯುತ್ತಾ, “ಆ ಹಂಬಲ ಯಶಸ್ವಿಯಾಗಿದೆಯೋ, ಮುಂದುವರೆದಿದೆಯೋ ಅಥವಾ ಸುತ್ತಿ ಸುಳಿದು ಕಾವ್ಯದ ಸತ್ವಕ್ಕೆ, ಅದರ ಕಲಾತ್ಮಕತೆಗೆ ಬೆರಗಾಗಿ ಮನಸೋತು ನೋಡುತ್ತಾ ನಿಂತಲ್ಲೇ ನಿಂತಿದೆಯೋ ಎಂಬುದನ್ನು ಓದುಗರೇ ಹೇಳಬೇಕು…” ಅನ್ನುತ್ತಾ ದಿಲೀಪರು ವಿನಮ್ರರಾಗುತ್ತಾರೆ.

ಪಂಪನನ್ನೂ ಮತ್ತು ಅದರೊಂದಿಗೆ ನಮ್ಮ ಕಾವ್ಯ ಪರಂಪರೆಯನ್ನೂ ಅರಿಯಬಯಸುವವರೆಲ್ಲರೂ ಓದಬೇಕಾದ ಕೃತಿಯಿದು. ಈ ಮೂಲಕ ಪಂಪನ ಕಾವ್ಯಗಳ ಪ್ರವೇಶಕ್ಕೆ ವೇದಿಕೆ ಮಾಡಿಕೊಟ್ಟ ಪಚ್ಚೆಯ ಜಗುಲಿಯ ಆರ್.ದಿಲೀಪ್ ಕುಮಾರ್ ರವರಿಗೆ ಈ ಲೇಖನದ ಮೂಲಕ ಧನ್ಯವಾದಗಳನ್ನು ಹೇಳುತಿದ್ದೇನೆ.

(ಕೃತಿ: ಪಚ್ಚೆಯ ಜಗುಲಿ (ವಿಮರ್ಶಾ ಸಂಕಲನ), ಲೇಖಕರು: ಆರ್.ದಿಲೀಪ್ ಕುಮಾರ್, ಪ್ರಕಾಶಕರು: ಕಾಚಕ್ಕಿ ಪ್ರಕಾಶನ, ಬೆಲೆ: 175/-)