ನಾವೇರುವ ಮಲೆ

ಆ ದಿನ ಬಂದಾಗ ನಮಗೆ ನಾವೇ ಕೇಳಿಕೊಳ್ಳುತ್ತೇವೆ
ಎಂದಿಗೂ ಹರಿಯದ ಈ ಕಾವಳದಲ್ಲಿ ನಾವೆಲ್ಲಿ ಬೆಳಕ ಕಾಣಬಹುದು?
ನಾವು ಹೊತ್ತೊಯ್ಯುವ ಲುಕ್ಸಾನಿನ ಮೊತ್ತ,
ನಾವು ನಾವೆಯಲಿ ಸಾಗಿ ದಾಟಬೇಕಾದ ಸಮುದ್ರ.
ನಾವು ಮೃಗದ ಹಸಿವನ್ನು ಎದುರಿಸುವ ಧೈರ್ಯಮಾಡಿದೆವು;
ಸ್ತಬ್ಧತೆಯೋ ಪ್ರಕ್ಷುಬ್ಧತೆಯಿಲ್ಲದಿರುವುದೋ ಯಾವಾಗಲೂ ಶಾಂತಿಯಾಗಿರುವುದಿಲ್ಲ
ಕೇವಲ ಸರಿ ಎಂಬುದರ ನಂಬಿಕೆಯೋ ಕಲ್ಪನೆಯೋ ಯಾವಾಗಲೂ ನ್ಯಾಯವಾಗಿರುವುದಿಲ್ಲ
ಎಂದು ತಿಳಿದುಕೊಂಡೆವು.
ಆದರೂ ನಾವು ತಿಳಿಯುವ ಮೊದಲೇ ಬೆಳಗು ನಮ್ಮದು.
ನಾವು ಅದನ್ನು ಹೇಗಾದರೂ ಆಗುಮಾಡುತ್ತೇವೆ;
ಹೇಗಾದರೂ ನಾವು ಕರಗಿದ್ದೇವೆ, ಕಂಡಿದ್ದೇವೆ:
ನಮ್ಮದು ವಿಭಜನೆಯಾಗದ, ಏಕತೆಯು ಸಾಧ್ಯವಾಗದ ರಾಷ್ಟ್ರ.
ಮೂಳೆಗಂಟಿದ ತೊಗಲ ಕಪ್ಪು ಹುಡುಗಿ ಗುಲಾಮರಿಂದ ಬಂದವಳು
ಒಂಟಿ ತಾಯಿಯ ಪೋಷಣೆಯಲ್ಲಿ ಬೆಳೆದವರು
ಅಧ್ಯಕ್ಷರಾಗುವ ಕನಸು ಕಾಣಬಹುದಾದ
ಒಂದು ದೇಶದ ಒಂದು ಕಾಲದ ಉತ್ತರಾಧಿಕಾರಿಗಳು ನಾವು
ಆದರೆ ಸಾಧ್ಯವಾಗುವುದು ಮತ್ತೊಬ್ಬರಿಗಾಗಿ ಪಠಿಸುವುದು ಮಾತ್ರ.
ಹೌದು ನಾವು ನಾಜೂಕುಗಳಿಂದ ದೂರ, ಶುದ್ಧವಾಗಿರುವುದರಿಂದಲೂ,
ಇದರರ್ಥ ನಾವು ಪರಿಪೂರ್ಣವಾದ ಒಕ್ಕೂಟವನ್ನು
ರಚಿಸಲು ಪ್ರಯತ್ನಿಸುತ್ತಿಲ್ಲ ಎಂದಲ್ಲ.
ನಾವು ಘನೋದ್ದೇಶದಿಂದಲೇ ಅದನ್ನು ರೂಪಿಸಲು ಪ್ರಯತ್ನಿಸುತ್ತಿದ್ದೇವೆ,
ಎಲ್ಲಾ ಸಂಸ್ಕೃತಿಗಳು, ವರ್ಣಗಳು, ಗುಣಗಳು, ಮಾನವ ಪರಿಸ್ಥಿತಿಗಳಿಗೆ
ಬದ್ಧವಾಗಿರುವ ದೇಶವನ್ನು ರಚಿಸುವುದದು.
ಆದ್ದರಿಂದಲೇ ನಾವು ನಮ್ಮ ಕತ್ತೆತ್ತಿ ನೋಡುವುದು ನಮ್ಮ ನಡುವೆ
ನಿಂತಿರುವುದನ್ನು ನೋಡುವುದಕ್ಕೆ ಅಲ್ಲ,
ನಮ್ಮ ಮುಂದೆ ಏನಿದೆ ಎನ್ನುವುದನ್ನು ಕಾಣಲು.
ನಾವು ಕಂದರಗಳ ಮುಚ್ಚುತ್ತೇವೆ, ನಮ್ಮ ಭವಿಷ್ಯವೇ ನಮ್ಮ
ಮೊದಲ ಆದ್ಯತೆಯೆಂದು ನಮಗೆ ತಿಳಿದಿದೆ,
ನಾವು ಮೊದಲು ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಡಬೇಕು.
ನಾವು ನಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಡುತ್ತೇವೆ
ಹಾಗೆ ಮಾಡಿ ನಾವು ಪರಸ್ಪರರ ತೋಳುಗಳನ್ನು ಮುಟ್ಟಬಹುದು.
ನಾವು ಯಾರಿಗೂ ಹಾನಿ ಬಯಸುವುದಿಲ್ಲ,
ಎಲ್ಲರೊಟ್ಟಿಗೂ ಸಾಮರಸ್ಯ ಬಯಸುತ್ತೇವೆ.
ಈ ಭೂಗೋಳವೇ, ಬೇರೇನೂ ಇಲ್ಲದಿದ್ದರೆ,
ಇದು ನಿಜ ಎಂದು ಹೇಳಲಿ:
ನಾವು ದುಃಖಿಸುತ್ತಲೇ ಬೆಳೆದಿದ್ದೇವೆ,
ನಾವು ನೊಂದರೂ ಆಶಾಭಾವದಿಂದಿದ್ದೇವೆ,
ನಾವು ದಣಿದಿದ್ದರೂ ಸಹ ಪ್ರಯತ್ನಿಸಿದ್ದೇವೆ,
ನಾವು ಎಂದೆಂದಿಗೂ ಒಟ್ಟಿಗೆ ಬಾಳಬೇಕು, ವಿಜಯಶಾಲಿಗಳಾಗಿ
ನಾವು ಮತ್ತೆ ಸೋಲನ್ನು ಅನುಭವಿಸುವುದಿಲ್ಲ ಎಂದಲ್ಲ
ಆದರೆ ನಾವು ಎಂದಿಗೂ ವಿಭಜನೆಯ ಬೀಜವನ್ನು ಬಿತ್ತುವುದಿಲ್ಲ.
ಧರ್ಮಗ್ರಂಥವು ಕಾಣ್ಕೆಯ ಕುರಿತು ಹೇಳುತ್ತದೆ
ಪ್ರತಿಯೊಬ್ಬರೂ ತಮ್ಮದೇ ಹಂದರ ತಮ್ಮದೇ
ಬೋಧಿವೃಕ್ಷದ ಕೆಳಗೆ ಕುಳಿತುಕೊಳ್ಳಬೇಕು,
ಯಾರೂ ಅವರನ್ನು ಭಯಪಡಿಸಬಾರದು.
ನಾವು ನಮ್ಮ ಕಾಲಕ್ಕೆ ತಕ್ಕಂತೆ ಬದುಕಬೇಕಾದರೆ,
ಗೆಲುವು ಅಲಗಿ‌ನಲ್ಲಿರುವುದಿಲ್ಲ, ಬದಲಿಗೆ ನಾವು ಕಟ್ಟಿದ
ಸೇತುವೆಗಳಲ್ಲಿರುತ್ತದೆ.
ಅದು ಭರವಸೆಯ ಹಾದಿ,
ನಾವು ಧೈರ್ಯ ಮಾಡಿದರೆ ಮಾತ್ರ ಬೆಟ್ಟವನ್ನು ಏರುವುದು ಸಾಧ್ಯ
ಏಕೆಂದರೆ ಅಮೆರಿಕನ್ನರಾಗಿರುವುದು
ವಂಶಾವಳಿಯ ಕುರಿತ ಹೆಮ್ಮೆಗಿಂತ ಮಿಗಿಲು,
ಇದು ನಾವು ಭೂತ ಕಾಲದೊಳಕ್ಕೆ ಹೆಜ್ಜೆ ಹಾಕುವ ಕೆಲಸ
ಅದನ್ನು ಹೇಗೆ ಸರಿಪಡಿಸುತ್ತೇವೆ ಎಂಬುದು ಫಲಶ್ರುತಿ.
ನಮ್ಮ ರಾಷ್ಟ್ರವನ್ನು ಹಂಚಿಕೊಳ್ಳುವ ಬದಲು ಹರಿದು ಚೂರು ಮಾಡುವ
ಕರಾಳ ಶಕ್ತಿಯನ್ನು ನಾವು ನೋಡಿದ್ದೇವೆ,
ಪ್ರಜಾಸತ್ತೆಯನ್ನು ವಿಳಂಬಗೊಳಿಸುವುದಾದರೆ
ಆ ಶಕ್ತಿ ನಮ್ಮ ದೇಶವನ್ನು ನಾಶಪಡಿಸುತ್ತದೆ.
ಈ ಪ್ರಯತ್ನವು ಬಹುತೇಕ ಯಶಸ್ವಿಯಾಗಿತ್ತು,
ಪ್ರಜಾಸತ್ತೆಯನ್ನು ಆಗೀಗ ವಿಳಂಬಗೊಳಿಸಬಹುದು, ಆದರೆ
ಅದನ್ನು ಎಂದಿಗೂ ಶಾಶ್ವತವಾಗಿ ಸೋಲಿಸಲು ಸಾಧ್ಯವಿಲ್ಲ.
ಈ ಸತ್ಯದಲ್ಲಿ, ಈ ಶ್ರದ್ಧೆಯಲ್ಲಿ ನಾವು ನಂಬಿಕೆಯಿಡುತ್ತೇವೆ,
ಭವಿಷ್ಯದ ಮೇಲೆ ನಾವು ದೃಷ್ಟಿಯಿಟ್ಟಿರುವಾಗ
ಇತಿಹಾಸವು ನಮ್ಮ ಮೇಲೆ ಕಣ್ಣಿಟ್ಟಿರುತ್ತದೆ.
ಇದು ನ್ಯಾಯವಾಗಿ ವಿಮೋಚನೆಯ ಕಾಲ.
ಅದರ ಪ್ರಾರಂಭದಲ್ಲಿ ನಾವು ಭಯಪಟ್ಟಿದ್ದೇವೆ.
ಅಂತಹ ಭಯಾನಕ ಕಾಲದ ಉತ್ತರಾಧಿಕಾರಿಗಳಾಗಲು
ನಾವು ಸಿದ್ಧರಾದಂತೆ ನಮಗನ್ನಿಸಿಲ್ಲ,
ಆದರೆ ಅದರೊಳಗೆ ನಾವು ಶಕ್ತಿಯನ್ನು ಕಂಡುಕೊಂಡಿದ್ದೇವೆ
ಹೊಸ ಅಧ್ಯಾಯವನ್ನು ಬರೆಯಲು,
ಭರವಸೆ ಮತ್ತು ನಗೆಯನ್ನು ನೀಡಲು,
ನಮಗೆ ಎಂದು ಅವಕಾಶಕ್ಕಾಗಿ. ಒಮ್ಮೆ ನಾವು ಕೇಳಿಕೊಂಡಿದ್ದೆವು:
ದುರಂತದ ಮೇಲೆ ನಾವು ಹೇಗೆ ಮೇಲುಗೈ ಸಾಧಿಸಬಹುದು?
ಈಗ ನಾವು ಕೇಳುತ್ತೇವೆ: ದುರಂತವು ನಮ್ಮ ಮೇಲೆ
ಹೇಗೆ ಮೇಲುಗೈ ಸಾಧಿಸಬಹುದು?
ನಾವು ಹಿಂದೆ ಇದ್ದದ್ದಕ್ಕೆ ಹಿಂತಿರುಗುವುದಿಲ್ಲ,
ಆದರೆ ಏನಾಗಬೇಕು ಎಂದಿದೆಯೋ ಅತ್ತ ಹೆಜ್ಜೆ ಹಾಕುತ್ತೇವೆ,
ಮೂಗೇಟಿಗೊಳಗಾಗಿದೆ ದೇಶ ಆದರೆ ಸಂಪೂರ್ಣವಾಗಿದೆ,
ಕರುಣೆಯಿದೆ ಆದರೆ ಸ್ಥೈರ್ಯವೂ ಇದೆ,
ಉಗ್ರವಾಗಿದೆ ಸ್ವತಂತ್ರವಾಗಿದೆ.
ನಾವು ಬೆದರಿಕೆಗೆ ಹೆದರಿ ಹಿಂದೆ ತಿರುಗುವುದಿಲ್ಲ,
ಅದು ನಮ್ಮನ್ನು ಅಡ್ಡಿಪಡಿಸಲಾರದು
ನಮ್ಮ ನಿಷ್ಕ್ರಿಯತೆ, ಜಡತ್ವಗಳು ಮುಂದಿನ ಪೀಳಿಗೆಗೆ
ಆನುವಂಶಿಕವಾಗಿರುತ್ತದೆ ಎಂದು ನಮಗೆ ತಿಳಿದಿದೆ.
ನಮ್ಮ ಪ್ರಮಾದಗಳು ಅವರ ಹೊರೆಯಾಗುತ್ತವೆ
ಆದರೆ ಒಂದು ವಿಷಯ ನಿಶ್ಚಿತ:
ನಾವು ಕರುಣೆಯನ್ನು ಬಲದಿಂದ, ಬಲವನ್ನು ಒಪ್ಪಿನಿಂದ ಒಟ್ಟುಗೂಡಿಸಿದರೆ,
ಆಗ ಪ್ರೀತಿ ನಮ್ಮ ಪರಂಪರೆಯಾಗುತ್ತದೆ
ನಮ್ಮ ಮಕ್ಕಳ ಜನ್ಮಸಿದ್ಧ ಹಕ್ಕನ್ನು ಬದಲಾಯಿಸುತ್ತದೆ.
ಆದ್ದರಿಂದ ನಾವು ನಮಗೆ ದೊರೆತಿರುವ ದೇಶಕ್ಕಿಂತ
ಉತ್ತಮವಾದುದನ್ನು ಬಿಟ್ಟು ಹೋಗೋಣ.
ನನ್ನ ಕಂಚು ಬಡಿದ ಎದೆಯ ಪ್ರತಿ ಉಸಿರಿನೊಂದಿಗೆ,
ಈ ಗಾಯಗೊಂಡ ಜಗತ್ತನ್ನು ಅದ್ಭುತವಾಗಿ ಬೆಳೆಸುತ್ತೇವೆ.
ನಾವು ಪಶ್ಚಿಮದ ಚಿನ್ನದ ಬೆಟ್ಟಗಳಿಂದ ಮೇಲೇಳುತ್ತೇವೆ.
ನಮ್ಮ ಪೂರ್ವಜರು ಮೊದಲು ಕ್ರಾಂತಿಯನ್ನು ಅರಿತುಕೊಂಡ
ಈಶಾನ್ಯದಿಂದ ಎದ್ದು ಬರುತ್ತೇವೆ.
ನಾವು ಮಧ್ಯಪಶ್ಚಿಮ ರಾಜ್ಯಗಳ ಸರೋವರ ಪ್ರದೇಶಗಳಿಂದ ಏಳುತ್ತೇವೆ.
ನಾವು ಬಿಸಿಲು ಸುಡುವ ದಕ್ಷಿಣದಿಂದ ಏಳುತ್ತೇವೆ.
ನಾವು ಪುನರ್ನಿರ್ಮಿಸುತ್ತೇವೆ, ರಾಜಿ ಮಾಡಿಕೊಳ್ಳುತ್ತೇವೆ,
ಚೇತರಿಸಿಕೊಳ್ಳುತ್ತೇವೆ
ನಮ್ಮ ರಾಷ್ಟ್ರದ ಬಲ್ಲ ಮೂಲೆಮೂಲೆಗಳಲ್ಲಿ,
ನಮ್ಮ ದೇಶ ಎಂದು ಕರೆವ ಮೂಲೆಮೂಲೆಯಲ್ಲೂ,
ನಮ್ಮ ಜನರು, ವೈವಿಧ್ಯಮಯ, ಸುಂದರ,
ಜರ್ಜರಿತರಾದವರು ಚೆಲುವಿಂದ ಎದ್ದೇಳುತ್ತಾರೆ.
ಆ ದಿನ ಬಂದಾಗ ನಾವು ಕಾವಳದಿಂದ ಹೊರಬರುತ್ತೇವೆ,
ಉರಿಯುತ್ತ ನಿರ್ಭೀತರಾಗಿ.
ನಾವು ಅದನ್ನು ಮುಕ್ತಗೊಳಿಸಿದಾಗ ಹೊಸ ಮುಂಜಾನೆ ಅರಳುತ್ತದೆ.
ನಾವು ಅದನ್ನು ನೋಡಲು ಸಾಕಷ್ಟು ಧೈರ್ಯಶಾಲಿಗಳಾಗಿದ್ದರೆ
ಯಾವಾಗಲೂ ಬೆಳಕು ಇದ್ದೇ ಇರುತ್ತದೆ,
ನಾವು ಹಾಗಾಗಲು ಧೈರ್ಯಶಾಲಿಗಳಾಗಿದ್ದರೆ ಮಾತ್ರ.

(ಜೋ ಬಿಡೆನ್ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅಮಾಂಡಾ ಶ್ವೇತಭವನದಲ್ಲಿ ವಾಚಿಸಿದ ಕವಿತೆ)