Advertisement
ಆರ್.‌ ವಿಜಯರಾಘವನ್‌ ಅನುವಾದಿಸಿದ ಸಿಲಪ್ಪದಿಕಾರಂನ ಒಂದು ಕಾವ್ಯಭಾಗ

ಆರ್.‌ ವಿಜಯರಾಘವನ್‌ ಅನುವಾದಿಸಿದ ಸಿಲಪ್ಪದಿಕಾರಂನ ಒಂದು ಕಾವ್ಯಭಾಗ

ಸಿಲಪ್ಪದಿಕಾರಂನ ಒಂದು ಕಾವ್ಯಭಾಗ

ಕೋವಲನು ಪ್ರಣಯದ ಆಮೋದದಿಂದ ಸಂತೃಪ್ತನಾದ.
ತನ್ನ ನವವಧುವಿನ ಬೆಳಗುವ ಮುಖವನ್ನು ಪ್ರೀತಿಯಿಂದ ನೋಡಿ ಮೃದುವಾಗಿ ನುಡಿದ:

“ಪ್ರಿಯಳೇ! ದೇವತೆಗಳ ಎದುರು ಅತಿಸುಂದರನಾಗಿ ಕಾಣಲು
ಶಿವನು ತನ್ನ ಹುಬ್ಬನ್ನು ಸುಂದರ ಅರ್ಧಚಂದ್ರನ ಆಕಾರದಿಂದ ಅಲಂಕರಿಸಿಕೊಂಡನು
ಆದರೆ ಆ ಚಂದಿರನೇ ನಿನ್ನ ಬಣ್ಣಗೆಟ್ಟ ನೊಸಲಾದಾಗ ಶಿವ ಆ ಕಿರೀಟವನ್ನು ಕಳೆದುಕೊಂಡನು

ಕೈಕಾಲುಗಳಿಲ್ಲದ ಪ್ರಣಯದ ದೇವನು
ಬಾಗಿದ ನಿನ್ನ ಕಪ್ಪುಹುಬ್ಬುಗಳನ್ನು
ಮಾಡಲು ತನ್ನ ಬಿಲ್ಲನ್ನು ತ್ಯಜಿಸಿದನು
ಏಕೆಂದರೆ ಅದು ಯುದ್ಧದ ನಿಯಮವಲ್ಲ
ವಿಜಯಿಯು ತನ್ನಿಂದ ಸೋತವರಿಂದ
ತನ್ನ ಆಯುಧವನ್ನು ತೆಗೆದುಕೊಳ್ಳುತ್ತಾನೆಯೇ?

ರಾಕ್ಷಸರ ಕರುಣಾಶ್ರಯಕ್ಕೆ ದೇವತೆಗಳನ್ನು ಬಿಟ್ಟು
ಅವರರಸ ಇಂದ್ರನು ತನ್ನ ವಜ್ರಾಯುಧವ ತ್ಯಜಿಸಿದನು
ನಿನ್ನ ಸೊಂಟವನ್ನು ಬಹುಶಃ ಅದರ ಉಕ್ಕಿನಿಂದ ಕಟೆಯಲಾಗಿದೆ
ನೀನು ಅಮರರ ಜೀವನಕ್ಕಿಂತಲೂ ಅಪರೂಪದ ನಿಧಿ

ಆ ಸುರಸುಂದರ ತರುಣ ಮುರುಗಕುಮಾರನು
ಆರುಮುಖಗಳ ಯುದ್ಧದಧಿದೇವನು, ಹುಟ್ಟುಗುಣಕ್ಕೆ ವಿರುದ್ಧವಾಗಿ
ತನ್ನ ಉರಿವಬಾಣಗಳನ್ನು ಬಿಟ್ಟುಕೊಟ್ಟನು; ನಿನ್ನಕಮಲದಳ ಕಣ್ಣುಗಳ
ರಕ್ತಗೆಂಪು ಕೋಡಿಗಳಿಂದ ಭಯಭೀತರಾಗಿಸಿ ಓಡಿಸಬಹುದು
ನಿನ್ನ ಕೂದಲಿನ ಕಪ್ಪುಮೋಡಗಳನ್ನು”

“ನಿನ್ನ ಮೈಬಣ್ಣಕೆ ನಾಚಿ ನವಿಲು ತನ್ನ ರನ್ನನಿಲುವಂಗಿಯನ್ನು
ಮರೆಮಾಚಲು ಕಾನನಕೆ ಓಡಿತು
ತೇಜಸ್ವಿಕನ್ಯೆ, ನಿನ್ನ ಕೊಂಕುನಡಿಗೆಯ ಕಂಡು
ಮದಹಂಸಕ್ಕೆನಾಚಿಕೆಯಾಯಿತು
ಅವಳೀಗ ಕೊಳದ ತಂಪುಕೆಂದಾವರೆಗಳ ನಡುವೆ ಮರೆಯಾಗಿದ್ದಾಳೆ

ನಿನ್ನ ದನಿ ಕೇಳಲು ಪುರಾತನ ಯಾಳವಾದ್ಯದಂತೆ ನವಿರು
ಮಕರಂದಕ್ಕಿಂತಲೂ ಸಿಹಿ, ಕೇಳಿ ಹಸಿರುಗಿಳಿ ಮೌನವಾಶ್ರಯಿಸುತ್ತದೆ.

ಉದಾತ್ತ ನಡಿಗೆಯ ಹೆಣ್ಣು, ಅವನು ಮೇಲೇರುತ್ತಾನೆ
ಕುಡಿದ ಉನ್ಮತ್ತ ಸಂತೋಷ, ನಿನ್ನ ಕೈಯ ಹೂವಿನ ಮೇಲೆ”

“ಸುಮಪರಿಮಳ ಭರಿತ ಕುಂತಳದ ಬಾಲೆಯೇ
ನಿನ್ನ ಆಭರಣಗಳ ವಜನು, ನಿನ್ನ ದಾಸಿಯರ ಕುಶಲಪ್ರಸಾಧನ ಕಲೆಗಳು
ನಿನ್ನ ಸೌಂದರ್ಯಕ್ಕೆ ಏನನ್ನೂ ಸೇರಿಸುವುದಿಲ್ಲ

ನಿನ್ನ ಕುರುಳಿನಲ್ಲಿರುವ ಕೆಲವೇಕೆಲವು ಹೂವುಗಳು ಸಾಕು
ಈ ಭಾರವಾದ ಹೂಮಾಲೆಗಳು ನಿನಗೆ ಏಕೆ ಬೇಕು?

ಈ ವಸ್ತ್ರಗಳಿಗೆ ಕಸ್ತೂರಿಪರಿಮಳದ ಅಭಿಷೇಕವೇಕೆ?
ಅವೇ ಮಧುರಗಂಧ ಪರಿಮಳವನ್ನು ಸುಳಿಸುಳಿವ ಗಾಳಿಯಲಿ ಹರಡುತ್ತಲಿವೆ
ಈ ಹಗ್ಗದೊಲಿರುವ ಮುತ್ತುಗಳ ಹಾರಗಳು ನಿನ್ನ ಎದೆಯ ಮೇಲೇಕಿವೆ?
ತೇಯ್ದಗಂಧದಲಿ ಮೈಮೇಲೆ ಚಿತ್ತಾರಗಳನೀಗಾಗಲೇ ಬರೆಯಲಾಗಿದೆ

ಮೂರ್ಖತನ ನಿನ್ನ ಮೇಲೆ ಆಭರಣಗಳ ಹೇರಿದೆ
ಅದು ನಿನ್ನ ದುರ್ಬಲ ಕಟಿಯ ಬಾಗಿಸಿ ಕಣ್ಣೀರ ತರುತ್ತಲಿದೆ
ನಿನ್ನ ಕೋಮಲ ಹುಬ್ಬಿನಮೇಲೆ ಕುಳಿತ ಬೆವರಮಣಿಗಳಂತೆ.”

“ನೀನೇ ಶುದ್ಧಚಿನ್ನದಲಿ ಬೆಸೆದ ಅಪ್ರತಿಮ ಆಭರಣ.
ನೀನು ಪರಿಶುದ್ಧ ಸುಗಂಧ, ರಸಭರಿತ ಸಿಹಿಕಬ್ಬು,
ಅರೆಪಾರದರ್ಶಕ ಜೇನು, ನಾನೊಲಿದು ಸವಿಯುವ ಮಧು.

ನಿನ್ನನುಗ್ರಹವೇ ಒಂದು ವ್ರತ, ನಿನ್ನ ತುಟಿಗಳು ಅಮೃತದ ಬುಗ್ಗೆ
ಉದಾತ್ತ ವ್ಯಾಪಾರಿಗಳ ಸಾಲಿನಲಿ ಜನ್ಮತಳೆದ ಉದಾತ್ತಕನ್ಯೆ

ನೀನು ಪರ್ವತದ ಗಣಿಯ ಕತ್ತಲನು
ಎಂದಿಗೂ ತಿಳಿದಿರದೊಂದು ಅಮೂಲ್ಯ ರತ್ನ

ನೀನು ಸಾಗರನ ಅಮೃತಹೃದಯದಿಂದ ಭಟ್ಟಿ ಇಳಿಸಿದ
ಅಮೃತಕೂ ಹೆಚ್ಚು ಪರಿಮಳಯುಕ್ತ

ನಿನ್ನದು ವೀಣೆಯತಂತಿ ಎಂದಿಗೂ ಹೊರಡಿಸಲಾರದ ಸಮರಸ ನಾದ
ನಿನ್ನ ಹಾರುವ ಕುರುಳು ರಾತ್ರಿಯ ಕಡುಗತ್ತಲಿಗಿಂತ ಗಾಢ

ಹರಿದ ಹೂಮಾಲೆಗಳಿಂದ ಆವೃತವಾದ ಪಲ್ಲಂಗದ ಮೇಲೆ,
ಪ್ರಣಯಿಗಳು ಆತ್ಮೀಯ ಆಲಿಂಗನದಲ್ಲಿ ಸವಿಸಂತಸದುಂಬಿದ
ದಿನಗಳ ಕಳೆಯುವರು.
ಆನಂದದಿಂದ ಉತ್ತೇಜಿಸಲ್ಪಟ್ಟ ಅವನೋ ಅವಳ ಕಿವಿಯಲ್ಲಿ
ಸೂಕ್ಷ್ಮಕಲೆಯಿಂದ ಪಿಸುನುಡಿವನು ಹೊಗಳುನುಡಿಗಳನ್ನು.

ಸಿಲಪ್ಪದಿಗಾರಂ- ತಮಿಳು-ಕವಿ – ಇಳಂಗೋ ಅಡಿಗಳ್-ಅಲನ್‌ ಡೇನಿಯಲೋ ಅವರಿಂದ ಇಂಗ್ಲೀಷಿಗೆ

About The Author

ಆರ್. ವಿಜಯರಾಘವನ್

ಕವಿ, ಕಥೆಗಾರ, ಕಾದಂಬರಿಗಾರ ಮತ್ತು ಅನುವಾದಕ. ಕವನ ಸಂಕಲನ ‘ಅನುಸಂಧಾನ’, ಕಾದಂಬರಿ ‘ಅಪರಿಮಿತದ ಕತ್ತಲೊಳಗೆ’ ” ಸಮಗ್ರ ಕವಿತೆಗಳ ಸಂಕಲನ ‘ಪ್ರೀತಿ ಬೇಡುವ ಮಾತು’ ಇವರ ಮುಖ್ಯ ಕೃತಿಗಳು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯವರು.

2 Comments

  1. ಮಂಜು ಹೆಗಡೆ

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸಾರ್, ಶುಭವಾಗಲಿ.ನಿಮ್ಮ ಸಾಹಿತ್ಯ ಸೇವೆ ಹೀಗೆ ನಿರಂತರವಾಗಿ ಸಾಗಲಿ

    Reply
  2. ಶ್ರೀಧರ ಬನವಾಸಿ

    ಸರ್ ಕವಿತೆ ಓದಿದೆ. ನಿಮ್ಮ ಅನುವಾದ ಹಾಗೂ ಕಾವ್ಯದ ಸೃಜನಶೀಲತೆ ಅದ್ಭುತವಾಗಿ ಮೂಡಿಬಂದಿದೆ. ವೈಯಕ್ತಿಕವಾಗಿ ತುಂಬಾ ಇಷ್ಟವಾಯಿತು. ಶಿವನ‌ ಅಧ್ಯಾತ್ಮ ಹೆಚ್ಚು ಆಪ್ತವೆನಿಸಿತು.
    – ಶ್ರೀಧರ ಬನವಾಸಿ

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ