ಹಕ್ಕಿ ಮತ್ತು ಹುಡುಗಿ…
ನನಗೆ ನೆನಪಾಗುತ್ತವೆ ಆ ದಿನಗಳು
ಚಂದಾಮಾಮ ಪುಸ್ತಕದ ಕಥೆಯಲ್ಲಿ
ಪಾತಾಳಕ್ಕೆ ಹೋದ ಪಾಪಚ್ಚಿಯ
ಕಲ್ಪಿಸಿಕೊಂಡು
ಬೆರಗು ಪಡುತ್ತೇವಲ್ಲ
ಹಾಗೆ ನನ್ನ ಕತೆಯ ನಾಯಕಿಯಾಗಿದ್ದೆ
ನಾನು
ಅಪ್ಪನ ತಲೆ ಮೇಲೆ ಕೂತಾಗ
ನಾನೇ ರಾಜಕುಮಾರಿ
ಹೆಗಲ ಕೂಸುಮರಿಯಾಗುವ ಧೈರ್ಯ
ನನಗಲ್ಲದೆ ಇನ್ಯಾರಿಗೆ…
ತೊಡುವ ಬಟ್ಟೆಯಿಂದ
ಆಡುವ ಆಟಿಕೆಯವರೆಗೂ
ನಾ ಹೇಳಿದ್ದೇ ನಡೆಯಬೇಕು
ಅಘೋಷಿತ ಅದೃಶ್ಯ ರಾಜದಂಡವೊಂದು
ನನ್ನಲ್ಲಿ ಇದ್ದಿತ್ತು ಬಹುಶಃ
ಅಪ್ಪನ ಹುಡುಗಿಯ ಸೊಕ್ಕೆಂದರೆ
ಸುಮ್ಮನೆ ಏನು?!
ಹೇಳಿದ್ದೇ ತಿಂಡಿ
ಕೇಳಿದ್ದೆಲ್ಲ ಬಂದು ಬೀಳಬೇಕು ಮುಂದೆ
ಆಗಾಗ ಮಧ್ಯ ಬಾಯಿ ಹಾಕಿ
ಏನನ್ನೋ ಹೇಳಲು ಬರುತ್ತಿದ್ದ
ಅಮ್ಮನ ಸೊಲ್ಲು ತುಂಡು ತುಂಡು
ನೋಡಿ ಆಗಲೇ ಹೇಳಿದೆನಲ್ಲ
ನಾನು ಮುದ್ದು ಮಗಳು ಎಂದು
ನೆನಪಲ್ಲಿಡಿ…
ಗೊತ್ತಾ
ಮುದ್ದು ಮಕ್ಕಳು
ಹಾಗೆಲ್ಲ ಮನೆಯಿಂದ
ಹೊರಹೋಗುವಂತಿಲ್ಲ
ದೂರದೂರಿನಲ್ಲಿ ಓದುವಂತಿಲ್ಲ
ಪಕ್ಕದ ಮನೆಗೆ ಹೋಗಲಿಕ್ಕೂ
ಅನುಮತಿ ಪಡೆಯಬೇಕು
ಸಂಜೆ ದಾಟುವ ಮುನ್ನ
ಮನೆ ಸೇರಬೇಕು
ಅಪ್ಪ ಅಮ್ಮನ ಪಹರೆಯಿಂದಾಚೆ
ಇರುವಂತೆಯೇ ಇಲ್ಲ
ಅವನ ಮುಂದೆ ಹೋಗುವಂತಿಲ್ಲ
ಇವನ ಎದುರು ನಗುವಂತಿಲ್ಲ
ಗೊತ್ತು ಗುರಿ ಇಲ್ಲದವರ ಜೊತೆ ಗೊತ್ತಿಲ್ಲದೇ
ಮಾತಾಡುವುದಕ್ಕೆ ಮುದ್ದುಮಗಳೆನ್ನುವ
ಮುಲಾಜೂ ಇರುವುದಿಲ್ಲ
ಬಹುಶಃ ಅಮ್ಮ ಹೆದರುತ್ತಿದ್ದದ್ದು
ಇವೇ ದಿನಗಳಿಗಾಗಿ ಇರಬೇಕು
ಅವಳ ಆತಂಕವಷ್ಟೂ ಬರಿದಾಗಿ
ಮತಿಗೆ ಜೋಮು ಹಿಡಿದಿತ್ತು
ನನ್ನ ಪ್ರಶ್ನಾರ್ಥಕ ಕಣ್ಣುಗಳಿಗೆ
ಅವಳ ಬೆನ್ನೇ ಉತ್ತರ
ಮಗಳು ಆಕಾಶದಲ್ಲೇ ಹಾರಾಡಬೇಕು
ಎಂದು ಕನಸುತ್ತಿದ್ದ ಅಪ್ಪನಿಗೆ
ಬೇಟೆಗಾರನ ಭಯ
ಅಯ್ಯೋ ಅಪ್ಪ…
ಮೊದಲು ಅವಳ ಬೆನ್ನಿಗೆರಡು
ರೆಕ್ಕೆ ಹಚ್ಚಬೇಕು
ರೆಕ್ಕೆಗೊಂದಿಷ್ಟು ಕಸುವು ತುಂಬಬೇಕು
ಅಬೆಗಾಲಿಟ್ಟು ನಡೆಯುತ್ತಾ
ತೊಡರಿ ಬಿದ್ದರೆ ಮತ್ತೆ ಅವಳು ಏಳಬೇಕು
ಸದಾ ನಿನ್ನ ಹಾರಾಟದ ಸುತ್ತ
ನನ್ನ ಕಣ್ಣ ಪಹರೆ ಇರುತ್ತದೆ
ಎಂದು ನೀನು ಅನ್ನಬೇಕು
ಹುಸಿ ಆಪಾದನೆಗಳು ಯಾರಿಗೂ
ಉಪಕಾರವನ್ನಂತೂ ಮಾಡಲಾರವು
ಬೇಟೆಗಾರನ ಬಾಣಕ್ಕೆ ಹೆದರಿ
ಯಾವ ಹಕ್ಕಿಯೂ ಗೂಡಲ್ಲೇ
ಕೊಳೆತು ಸಾಯುವುದಿಲ್ಲವಲ್ಲ
ಒಂದು ದಿನ ಆ ಎಳೆ ಹಕ್ಕಿ
ಗೂಡನ್ನು ಧಿಕ್ಕರಿಸಿ ಗರಿಬಿಚ್ಚಿತು
ಮೇಲೆ ಮೇಲೆ ಹಾರಿತು
ಅದೆಷ್ಟು ವಿಶಾಲ ವಿಸ್ತಾರದ ಆಕಾಶ
ಅಸೀಮ ಅವಕಾಶ
ಹಕ್ಕಿ ಹಾರಾಟ ದಣಿಯಲಿಲ್ಲ
ದಿನದ ತುದಿಯಲ್ಲಿ ಮರಳಿದ್ದು
ಗೂಡಿಗೆ
ಬೇಟೆಗಾರರಿಗೆ ಅಸೀಮ ಹಕ್ಕಿ
ಶಕ್ತಿಯ ಅರಿವಿರುವುದಿಲ್ಲ
ಮತ್ತು ಹಕ್ಕಿಗಳ ಚಲನೆ
ಶರವೇಗವನ್ನೂ ಮೀರಿದ್ದು
ಬಾಣಗಳು ಕೆಲವೇ ಹುಟ್ಟಬಲ್ಲವು
ಕೊಲ್ಲಬಲ್ಲವು ಸೋತು ಮುರಿದು
ಮಣ್ಣಾಗಬಲ್ಲವು…
ಹಕ್ಕಿಗೆ ಹಾರುವುದಷ್ಟೇ ಗೊತ್ತು
(ಚಿತ್ರ ಕೃಪೆ: ಅಂತರ್ಜಾಲ)
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.”