Advertisement
ಆಶಾ ಜಗದೀಶ್ ಬರೆದ ಈ ದಿನದ ಕವಿತೆ

ಆಶಾ ಜಗದೀಶ್ ಬರೆದ ಈ ದಿನದ ಕವಿತೆ

ಕಾಳ ರಾತ್ರಿಯೊಂದರ ಜಪ…

ಈ ನಿಶ್ಚಿಂತ ರಾತ್ರಿಗಳ ಮೇಲೆ
ಕೋಪ ಬರುತ್ತದೆ ನನಗೆ
ಅದೆಷ್ಟು ನಿಶ್ಚಿಂತೆ ಇವಕ್ಕೆ…
ಹೊದ್ದ ಚಾದರದ ಚಿತ್ತಾರ ಸೂಸುತ್ತಿದೆ
ಎಂಥದೋ ಹಸಿ ವಾಸನೆ
ನರಳುತ್ತಿವೆ ಕನಸ ಬೀಜಗಳು
ಸುನೀಲ ಆಗಸ ಅತ್ತಂತೆ
ಹೊಳೆದ ಕಾಮನ ಬಿಲ್ಲು ಮುರಿದು ಬಿದ್ದಂತೆ
ಹಗಲಿಗೆ ಹಗಲೇ ಕಪ್ಪಾದಂತೆ

ವಿಶ್ವವೇ ಕತ್ತಲೆಯ ಕಪಿ ಮುಷ್ಟಿಯಲ್ಲಿ
ಮುದುರಿ ಮಲಗಿದೆ
ಹಿಡಿ ಬೆಳಕಿನ ಕಂದೀಲಿನ ಕೆಳಗೆ
ನಮ್ಮ ಬದುಕು ಲೆಕ್ಕ ಹಾಕುತ್ತಾ ಬದುಕಿದೆ
ಹುಟ್ಟು ಹಬ್ಬದ ಕೇಕಿನ ಮೇಲೆ
ನಿಲ್ಲಲಾಗದೆ ಮುರಿದು ಬಿದ್ದ
ಕ್ಯಾಂಡೆಲ್ಲುಗಳೆಲ್ಲ ಹುಟ್ಟು-ಹಬ್ಬಗಳ
ಸಾಲನ್ನು ಜರೂರು ಸೇರಬಯಸುತ್ತಿವೆ

ಹಗಲಿಗೆ ಬಾಯಿ ತೆರೆದು ಕೂತಿರುವ
ಕರಿಗತ್ತಲ ಕಾಳ ರಾತ್ರಿಯೊಂದರ ಜಪಕ್ಕೆ
ಸೋಲುವ ಮನಸಾಗುವುದೇ ಸಾಕ್ಷಾತ್ಕಾರ
ಜಪಮಣಿಗಳು ಸ್ಪಟಿಕಶುದ್ಧವಾಗಿ ಹೊಳೆಯುತ್ತಿವೆ
ಸುಲಲಿತವಾಗಿ ಜಾರುತ್ತಿವೆ ಲೆಕ್ಕ ತಪ್ಪದೆ
ಒಂದು ಸ್ನಿಗ್ಧ ಮೂರ್ತಿಯಂಥಾ ಹೊಳಪಿನ
ಚೂರೊಂದು ಕತ್ತಲ ನೆತ್ತಿಯ ನೇವರಿಸಿ
ಮಮತೆಯಿಂದ ಮಲಗಿಸುತ್ತಿದೆ

ಚಿನ್ನಾರಿಯೊಬ್ಬಳ ಗೆಜ್ಜೆಯ ಕಿಂಕಿಣಿಯಂತಹಾ
ನಾದ ಈ ಇರುಳ ಬೆನ್ನಿಗಂಟಿರಬೇಕು
ಸದಾ ಆ ಸದ್ದನ್ನು ನಾನು ಹಿಂಬಾಲಿಸುತ್ತಿರುತ್ತೇನೆ
ನನ್ನೆಲ್ಲ ಕನಸುಗಳ ಪವರ್ ಆಫ್ ಅಟಾರ್ನಿಯನ್ನು
ಅದಕ್ಕೆ ಬರೆದುಬಿಟ್ಟಿದ್ದೇನೆ
ನನ್ನದೆಂದು ಹೇಳಿಕೊಳ್ಳಲಿಕ್ಕಾದರೂ
ಒಂದನ್ನು ಉಳಿಸಿಟ್ಟುಕೊಳ್ಳದೆ
ಕತ್ತಲೆಗೆ ಕನಸುಗಳ ಜೀತಕ್ಕಿಟ್ಟು
ಹಂಗಿನ ಬೆಳಕನ್ನು ತೋಮ ಕಟ್ಟುತ್ತಿದ್ದೇನೆ

About The Author

ಆಶಾ ಜಗದೀಶ್

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ "ಮೌನ ತಂಬೂರಿ."

3 Comments

  1. ಗಿರಿಧರ್ ವೈ ಜಿ

    ಕನಸಿನ ಲೋಕದಲ್ಲಿ ವಿಹಾರ…. ಉತ್ತಮ ಸಾಲುಗಳು…

    Reply
  2. ನಾಗರಾಜ್ ಹರಪನಹಳ್ಳಿ

    ಹಗಲಿಗೆ ಬಾಯಿ ತೆರೆದು ಕೂತಿರುವ
    ಕರಿಗತ್ತಲ ಕಾಳ ರಾತ್ರಿಯೊಂದರ ಜಪಕ್ಕೆ
    ಸೋಲುವ ಮನಸಾಗುವುದೇ ಸಾಕ್ಷಾತ್ಕಾರ

    ಚಿನ್ನಾರಿಯೊಬ್ಬಳ ಗೆಜ್ಜೆಯ ಕಿಂಕಿಣಿಯಂತಹಾ
    ನಾದ ಈ ಇರುಳ ಬೆನ್ನಿಗಂಟಿರಬೇಕು
    ಸದಾ ಆ ಸದ್ದನ್ನು ನಾನು ಹಿಂಬಾಲಿಸುತ್ತಿರುತ್ತೇನೆ
    ನನ್ನೆಲ್ಲ ಕನಸುಗಳ ಪವರ್ ಆಫ್ ಅಟಾರ್ನಿಯನ್ನು
    ಅದಕ್ಕೆ ಬರೆದುಬಿಟ್ಟಿದ್ದೇನೆ

    ಅದ್ಭುತ ಸಾಲುಗಳು. ಕವಿತೆ ಗೆಲುವು ಈ ನುಡಿಗಳಲ್ಲಿದೆ. ಸಶಕ್ತ ಕವಿತೆ. ಬಹಳ ದಿನಗಳ ನಂತರ ಒಂದೊಳ್ಳೆ ಕವಿತೆ ಓದಿದಂತಾಯಿತು…

    ಕವಯಿತ್ರಿ ಹಾಗೂ ಕೆಂಡ ಸಂಪಿಗೆಗೆ ಧನ್ಯವಾದಗಳು. ಕವಿತೆಗೆ ಬರೆದ ಚಿತ್ರ ತುಂಬಾ ಸೊಗಸು ಹಾಗೂ ಅರ್ಥಪೂರ್ಣ ವಾಗಿದೆ.

    Reply
  3. ಸಂಗೀತ ರವಿರಾಜ್

    ಚೆನ್ನಾಗಿದೆ ಆಶಾ

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ